ಪದ್ಯ ೫೦: ಯಮನು ಯಾವುದಕ್ಕೆ ಸಿದ್ಧನಾಗಲು ತಿಳಿಸಿದ?

ಎನಲು ಮೆಚ್ಚಿದನುಳಿದ ಭೀಮಾ
ರ್ಜುನರ ಹರಣವನಿತ್ತು ನಿಜ ನಂ
ದನನನಪ್ಪಿದನೊಲವಿನಲಿ ಯಮರಾಜನೈತಂದು
ತನುಜಸಾಕಿನ್ನಾಯ್ತು ನಿಮಗೀ
ವನನಿವಾಸವು ಬೀಳುಕೊಡು ಮುನಿ
ಜನವನಿನ್ನಜ್ಞಾತವಾಸಕೆ ಮನವ ಮಾಡೆಂದ (ಅರಣ್ಯ ಪರ್ವ, ೨೬ ಸಂಧಿ, ೫೦ ಪದ್ಯ)

ತಾತ್ಪರ್ಯ:
ಯಕ್ಷನು ಮೆಚ್ಚಿ ಭೀಮಾರ್ಜುನರಿಗೂ ಪ್ರಾಣವನ್ನು ಕೊಟ್ಟು, ಯಮನಾಗಿ ಬಂದು ತನ್ನ ಮಗನನ್ನು ಆಲಂಗಿಸಿಕೊಂಡು, ಮಗನೇ ನಿಮ್ಮ ವನವಾಸದ ಅವಧಿ ಮುಗಿಯಿತು. ನಿನ್ನೊಡನಿರುವ ಮುನಿಜನರನ್ನು ಕಳಿಸಿಕೊಟ್ಟು, ಅಜ್ಞಾತವಾಸಕ್ಕೆ ಅನುವಾಗು ಎಂದು ಹೇಳಿದನು.

ಅರ್ಥ:
ಮೆಚ್ಚು: ಹೊಗಳು; ಉಳಿದ: ಮಿಕ್ಕ; ಹರಣ: ಪ್ರಾಣ; ನಿಜ: ತನ್ನ; ನಂದನ: ಮಗ; ಅಪ್ಪು: ಆಲಂಗಿಸು; ಒಲವು: ಪ್ರೀತಿ; ಐತರು: ಬಂದು ಸೇರು; ತನುಜ: ಮಗ; ಸಾಕು: ನಿಲ್ಲಿಸು; ವನ: ಕಾಡು; ನಿವಾಸ: ಆಲಯ, ಮನೆ; ಬೀಳುಕೊಡು: ತೆರಳು; ಮುನಿ: ಋಷಿ; ಅಜ್ಞಾತ: ಯಾರಿಗೂ ಗೊತ್ತಾಗದ ಸ್ಥಿತಿ; ಮನ: ಮನಸ್ಸು;

ಪದವಿಂಗಡಣೆ:
ಎನಲು +ಮೆಚ್ಚಿದನ್+ಉಳಿದ +ಭೀಮಾ
ರ್ಜುನರ +ಹರಣವನಿತ್ತು +ನಿಜ+ ನಂ
ದನನನ್+ಅಪ್ಪಿದನ್+ಒಲವಿನಲಿ +ಯಮರಾಜನ್+ಐತಂದು
ತನುಜ+ಸಾಕಿನ್+ಆಯ್ತು +ನಿಮಗೀ
ವನ+ನಿವಾಸವು +ಬೀಳುಕೊಡು+ ಮುನಿ
ಜನವನ್+ಇನ್+ಅಜ್ಞಾತವಾಸಕೆ +ಮನವ +ಮಾಡೆಂದ

ಅಚ್ಚರಿ:
(೧) ಯಮನ ಪುತ್ರ ಪ್ರೇಮವನ್ನು ಹೇಳುವ ಪರಿ – ನಿಜ ನಂದನನನಪ್ಪಿದನೊಲವಿನಲಿ ಯಮರಾಜನೈತಂದು

ಪದ್ಯ ೪೯: ಧರ್ಮಜನು ಯಕ್ಷನಿಗೆ ಏನುತ್ತರವನ್ನಿತ್ತನು?

ಸಾವು ಬೊಪ್ಪಂಗಾಗೆ ಮಾದ್ರೀ
ದೇವಿ ತನ್ನನು ಕರೆದು ಶಿಶುಗಳ
ನೋವು ಕೇಡಿದು ನಿನ್ನದಾರೈದಿವರ ಸಲಹುವುದು
ಭಾವ ಭೇದವನಣುವ ಬಗೆಯದೆ
ಕಾವುದೆಲೆ ಮಗನೆಂದು ಬೆಸಸಿದ
ಳಾವಪರಿಯಲಿ ಮರೆವೆನೈ ನಾ ಮಾದ್ರಿದೇವಿಯರ (ಅರಣ್ಯ ಪರ್ವ, ೨೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಧರ್ಮಜನು ಯಕ್ಷನ ಪ್ರಶ್ನೆಗೆ ಉತ್ತರಿಸುತ್ತಾ, ಯಕ್ಷನೇ ಕೇಳು, ಹಿಂದೆ ನಮ್ಮ ತಂದೆಯು ಮರಣಹೊಂದಿದನು. ಸಹಗಮನಕ್ಕೆ ಸಿದ್ಧಳಾದ ಮಾದ್ರೀದೇವಿಯು ನನ್ನನ್ನು ಕರೆದು ನಕುಲ ಸಹದೇವರನ್ನೊಪ್ಪಿಸಿ, ಧರ್ಮಜ ನನ್ನ ಮಕ್ಕಳ ನೋವು ಕೇಡುಗಳು ನಿನ್ನವು, ಅಣುಮಾತ್ರವೂ ಭೇದವನ್ನು ಬಗೆಯದೆ ಇವರನ್ನು ಕಾಪಾಡು ಎಂದು ಅಪ್ಪಣೆ ಕೊಟ್ಟಳು. ಅವಳನ್ನು ಹೇಗೆ ಮರೆಯಲಿ ಎಂದು ಕೇಳಿದನು.

ಅರ್ಥ:
ಸಾವು: ಮರಣ; ಬೊಪ್ಪ: ತಂದೆ; ಕರೆ: ಬರೆಮಾದು; ಶಿಶು: ಮಕ್ಕಳು; ನೋವು: ಬೇನೆ, ಶೂಲೆ; ಕೇಡು: ಆಪತ್ತು, ಕೆಡಕು; ಸಲಹು: ರಕ್ಷಿಸು; ಭೇದ: ವ್ಯತ್ಯಾಸ; ಅಣು: ಸ್ವಲ್ಪ, ಅತಿ ಚಿಕ್ಕ; ಬಗೆ: ರೀತಿ; ಕಾವುದು: ರಕ್ಷಿಸು; ಮಗ: ಪುತ್ರ; ಬೆಸ: ಅಪ್ಪಣೆ, ಆದೇಶ, ಕೇಳು; ಪರಿ: ರೀತಿ; ಮರೆ: ನೆನಪಿನಿಂದ ದೂರಮಾಡು;

ಪದವಿಂಗಡಣೆ:
ಸಾವು+ ಬೊಪ್ಪಂಗ್+ಆಗೆ +ಮಾದ್ರೀ
ದೇವಿ +ತನ್ನನು +ಕರೆದು +ಶಿಶುಗಳ
ನೋವು +ಕೇಡಿದು+ ನಿನ್ನದಾರೈದ್+ಇವರ +ಸಲಹುವುದು
ಭಾವ +ಭೇದವನ್+ಅಣುವ+ ಬಗೆಯದೆ
ಕಾವುದೆಲೆ +ಮಗನೆಂದು +ಬೆಸಸಿದಳ್
ಆವ+ಪರಿಯಲಿ +ಮರೆವೆನೈ+ ನಾ +ಮಾದ್ರಿ+ದೇವಿಯರ

ಅಚ್ಚರಿ:
(೧) ಮಾದ್ರಿಯ ಅಪ್ಪಣೆ – ಭಾವ ಭೇದವನಣುವ ಬಗೆಯದೆ ಕಾವುದೆಲೆ

ಪದ್ಯ ೪೮: ಯಕ್ಷನೇಕೆ ಆಶ್ಚರ್ಯಗೊಂಡನು?

ಜನಪ ನಿನ್ನಾಳಾಪವೆನ್ನಯ
ಮನಕೆ ವಿಸ್ಮಯವಾಯ್ತು ಭೀಮಾ
ರ್ಜುನರು ನಿನ್ನೊಡಹುಟ್ಟಿದರು ನೀನವರಿಗತಿಹಿತನು
ಅನುಜರವರಿರಲೇಕೆ ಮಾದ್ರೀ
ತನುಜರೆಂಬರ ಬಯಸಿದೈ ಹೇ
ಳೆನಲು ನಸುನಗೆ ಮೊಳೆಯೆ ನುಡಿದನು ಧರ್ಮನಂದನನು (ಅರಣ್ಯ ಪರ್ವ, ೨೬ ಸಂಧಿ, ೪೮ ಪದ್ಯ)

ತಾತ್ಪರ್ಯ:
ಯಕ್ಷನು ಧರ್ಮಜನ ಮಾತನ್ನು ಕೇಳಿ, ಎಲೈ ರಾಜ ನಿನ್ನ ಮಾತು ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಭೀಮಾರ್ಜುನರು ನಿನ್ನ ಒಡಹುಟ್ಟಿದ ಸಹೋದರರು. ನಿನಗೆ ಅತ್ಯಂತ ಪ್ರೀತಿಪಾತ್ರರು. ಅವರಿರಲು ನೀನು ಮಾದ್ರಿಯ ಮಕ್ಕಳನ್ನು ಬದುಕಿಸಲು ವರವನ್ನು ಬೇಡಿದೆ, ಇದರ ಮರ್ಮವೇನು ಎಂದು ಯಕ್ಷನು ಕೇಳಲು ಧರ್ಮಜನು ನಗುತ್ತಾ ಹೇಳಿದನು.

ಅರ್ಥ:
ಜನಪ: ರಾಜ; ಆಳಾಪ: ಮಾತು; ಮನ: ಮನಸ್ಸು; ವಿಸ್ಮಯ: ಆಶ್ಚರ್ಯ; ಒಡಹುಟ್ಟು: ಜೊತೆಯಲ್ಲಿ ಜನಿಸಿದವ; ಹಿತ: ಪ್ರಿಯ; ಅತಿ: ತುಂಬಾ; ಅನುಜ: ತಮ್ಮ; ತನುಜ: ಮಕ್ಕಳು; ಬಯಸು: ಇಷ್ಟ ಪಡು; ಹೇಳು: ತಿಳಿಸು; ನಸುನಗೆ: ಸಂತಸ; ಮೊಳೆ: ಮೂಡು, ಚಿಗುರು, ಅಂಕುರಿಸು; ನುಡಿ: ಮಾತಾದು; ನಂದನ: ಮಗ;

ಪದವಿಂಗಡಣೆ:
ಜನಪ +ನಿನ್ನ್+ಆಳಾಪವ್+ಎನ್ನಯ
ಮನಕೆ+ ವಿಸ್ಮಯವಾಯ್ತು +ಭೀಮಾ
ರ್ಜುನರು +ನಿನ್ನೊಡಹುಟ್ಟಿದರು +ನೀನ್+ಅವರಿಗ್+ಅತಿ+ಹಿತನು
ಅನುಜರ್+ಅವರಿರಲ್+ಏಕೆ +ಮಾದ್ರೀ
ತನುಜರ್+ಎಂಬರ +ಬಯಸಿದೈ +ಹೇಳ್
ಎನಲು +ನಸುನಗೆ +ಮೊಳೆಯೆ +ನುಡಿದನು +ಧರ್ಮ+ನಂದನನು

ಅಚ್ಚರಿ:
(೧) ಅನುಜ, ತನುಜ – ಪ್ರಾಸ ಪದಗಳು

ಪದ್ಯ ೪೭: ಧರ್ಮಜನು ಮತ್ತೆ ಯಾರ ಜೀವವನ್ನು ಉಳಿಸಲು ಬೇಡಿದನು?

ಅಸುವನಿತ್ತೈ ಖಚರಪತಿ ಜೀ
ವಿಸಲಿ ನಕುಲನು ಧನ್ಯನಾನೆನೆ
ನಸುನಗುತ ಚೇತರಿಸಿ ಮೈಮುರಿದೆದ್ದನಾ ನಕುಲ
ನಿಶಿತಮತಿ ಮೆಚ್ಚಿದೆನು ಬೇಡಿ
ನ್ನಸುವನೊಬ್ಬಂಗಿತ್ತೆನೆನೆ ಜೀ
ವಿಸಲಿ ಸಹದೇವಾಂಕನೆಂದನು ಧರ್ಮನಂದನನು (ಅರಣ್ಯ ಪರ್ವ, ೨೬ ಸಂಧಿ, ೪೭ ಪದ್ಯ)

ತಾತ್ಪರ್ಯ:
ಧರ್ಮಜನು ಯಕ್ಷನು ನೀಡಿದ ವರಕ್ಕೆ ಸ್ಪಂದಿಸುತ್ತಾ, ಹೇ ಯಕ್ಷರಾಜನೇ, ಒಬ್ಬ ತಮ್ಮನಿಗೆ ಜೀವದಾನ ಮಾಡಿವೆಯಾದರೆ, ನಕುಲನು ಬದುಕಲಿ ಎಂದು ಬೇಡಿದನು. ನಕುಲನು ಮೈಮುರಿದೆದ್ದು ನಸುನಕ್ಕನು. ಎಲೈ ಸೂಕ್ಷ್ಮ ಮತಿಯೇ ನಿನಗೆ ನಾನು ಮೆಚ್ಚಿದೆ, ಇನ್ನೊಬ್ಬ ತಮ್ಮನಿಗೆ ಪ್ರಾಣವನ್ನು ಕೊಡುತ್ತೇನೆ ಬೇಡಿಕೋ ಎಂದು ಯಕ್ಷನು ಕೇಳಲು ಸಹದೇವನು ಜೀವಿಸಲಿ ಎಂದು ಧರ್ಮಜನು ಕೇಳಿದನು.

ಅರ್ಥ:
ಅಸು: ಪ್ರಾಣ; ಖಚರ: ಯಕ್ಷ, ಗಂಧರ್ವ; ಪತಿ: ಒಡೆಯ; ಜೀವಿಸು: ಬದುಕು; ಧನ್ಯ: ಪುಣ್ಯವಂತ, ಕೃತಾರ್ಥ; ನಸುನಗು: ಹರ್ಷಿಸು; ಚೇತರಿಸು: ಎದ್ದೇಳು; ಮೈ: ತನು; ಎದ್ದು: ಮೇಲೇಳು; ನಿಶಿತ: ಹರಿತ; ಮತಿ: ಬುದ್ಧಿ; ಮೆಚ್ಚು: ಹೊಗಳು; ಬೇಡು: ಕೇಳು; ನಂದನ: ಮಗ;

ಪದವಿಂಗಡಣೆ:
ಅಸುವನ್+ಇತ್ತೈ +ಖಚರಪತಿ+ ಜೀ
ವಿಸಲಿ +ನಕುಲನು +ಧನ್ಯನಾನ್+ಎನೆ
ನಸುನಗುತ +ಚೇತರಿಸಿ +ಮೈಮುರಿದ್+ಎದ್ದನಾ +ನಕುಲ
ನಿಶಿತ+ಮತಿ +ಮೆಚ್ಚಿದೆನು +ಬೇಡ್
ಇನ್ನಸುವನ್+ಒಬ್ಬಂಗಿತ್ತೆನ್+ಎನೆ+ ಜೀ
ವಿಸಲಿ +ಸಹದೇವಾಂಕನ್+ಎಂದನು +ಧರ್ಮ+ನಂದನನು

ಅಚ್ಚರಿ:
(೧) ಧರ್ಮಜನನ್ನು – ನಿಶಿತಮತಿ, ಧರ್ಮನಂದನ ಎಂದು ಕರೆದಿರುವುದು

ಪದ್ಯ ೪೬: ಧರ್ಮಜನಿಗೆ ಯಾವ ವರವನ್ನು ಯಕ್ಷನು ನೀಡಿದನು?

ಒಲಿದನೊಡಲನು ಧರ್ಮ ಸಂಗತಿ
ಗಲ ಸುಸಂವಾದದಲಿ ನಿಜತನು
ಪುಳಕವುಬ್ಬರಿಸಿದುದು ಗಬ್ಬರಿಸಿದುದು ದುಷ್ಕೃತವ
ಎಲೆ ಮಹೀಪತಿ ಮೆಚ್ಚಿದೆನು ಬೇ
ಡಳಿದ ತಮ್ಮಂದಿರಲಿವೊಬ್ಬನ
ತಲೆಯ ಬದುಕಿಸಿಕೊಡುವೆನೆನೆ ಯಮತನುಜನಿಂತೆಂದ (ಅರಣ್ಯ ಪರ್ವ, ೨೬ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನು ಬಾಯಾರಿಕೆಯಿಂದ ಬಳಲಿದವನಾದರೂ ಧರ್ಮಸಂವಾದ ಮಾಡುತ್ತಾ ಹರ್ಷಿತನಾದನು. ಅವನು ರೋಮಾಂಚನಗೊಂಡನು. ಪಾಪಗಳೆಲ್ಲವೂ ಕಳೆದುಹೋದವು. ಆಗ ಯಕ್ಷನು ರಾಜ ನಿನ್ನ ಅರಿವಿಗೆ ಮೆಚ್ಚಿದ್ದೇನೆ, ಸತ್ತುಹೋಗಿರುವ ನಿನ್ನ ತಮ್ಮಂದಿರಲ್ಲಿ ಒಬ್ಬನಿಗೆ ಜೀವವನ್ನು ಕೊಡುತ್ತೇನೆ ಕೇಳು ಎಂದು ವರಪ್ರದಾನ ಮಾಡಿದನು. ಆಗ ಧರ್ಮಜನು ಹೀಗೆ ಉತ್ತರಿಸಿದನು.

ಅರ್ಥ:
ಒಲಿ: ಪ್ರೀತಿ; ಒಡಲು: ದೇಹ; ಸಂಗತಿ: ವಿಚಾರ; ಸಂವಾದ: ವಿಚಾರ; ನಿಜ: ತನ್ನ; ತನು: ದೇಹ; ಪುಳಕ: ಮೈನವಿರೇಳುವಿಕೆ, ರೋಮಾಂಚನ; ಉಬ್ಬರ: ಹೆಚ್ಚಳ; ಗಬ್ಬರಿಸು: ಬಗಿ, ಆವರಿಸು; ದುಷ್ಕೃತ: ಕೆಟ್ಟ ಕೆಲಸ; ಮಹೀಪತಿ: ರಾಜ; ಮೆಚ್ಚು: ಇಷ್ಟವಾಗು; ಅಳಿ: ಸಾವು; ತಲೆ: ಶಿರ; ಬದುಕಿಸು: ಜೀವಿಸು; ತನುಜ: ಮಗ;

ಪದವಿಂಗಡಣೆ:
ಒಲಿದನ್+ಒಡಲನು+ ಧರ್ಮ +ಸಂಗತಿ
ಗಳ +ಸುಸಂವಾದದಲಿ+ ನಿಜತನು
ಪುಳಕವ್+ಉಬ್ಬರಿಸಿದುದು +ಗಬ್ಬರಿಸಿದುದು +ದುಷ್ಕೃತವ
ಎಲೆ +ಮಹೀಪತಿ +ಮೆಚ್ಚಿದೆನು +ಬೇಡ್
ಅಳಿದ +ತಮ್ಮಂದಿರಲಿ+ಒಬ್ಬನ
ತಲೆಯ +ಬದುಕಿಸಿಕೊಡುವೆನ್+ಎನೆ +ಯಮತನುಜನ್+ಇಂತೆಂದ

ಅಚ್ಚರಿ:
(೧) ಉಬ್ಬರಿಸಿದುದು, ಗಬ್ಬರಿಸಿದುದು – ಪ್ರಾಸ ಪದಗಳು;
(೨) ಯಮತನುಜ, ಮಹೀಪತಿ – ಧರ್ಮಜನನ್ನು ಕರೆದ ಪರಿ

ಪದ್ಯ ೪೫: ಕೃತ್ಯೆಯು ಯಾವ ಊರಿಗೆ ಹೋಯಿತು?

ಕೊಳದ ಮಧ್ಯದಿ ಧರ್ಮನಂದನ
ತಿಳುಹುತಿದ್ದನು ಧರ್ಮತತ್ವವ
ಬಳಲಿದನು ಬಿರುತಡಿಯಲೇ ಕೌರವನ ಕೃತ್ರಿಮದ
ಬಲುಬಿರಿವ ಘನಭೂತ ಬಂದುದು
ನೆಲೆಯ ಧರ್ಮಜನನ್ನು ಕಮ್ಡುದು
ಎಲೆ ಮಹಾದೇವೆನುತ ಮುರಿದುದು ಹಸ್ತಿನಾಪುರಿಗೆ (ಅರಣ್ಯ ಪರ್ವ, ೨೬ ಸಂಧಿ, ೪೫ ಪದ್ಯ)

ತಾತ್ಪರ್ಯ:
ಧರ್ಮಜನು ಕೊಳದ ಮಧ್ಯದಲ್ಲಿ ನಿಂತು ಧರ್ಮತತ್ವವನ್ನು ಹೇಳುತ್ತಾ ಬಾಯಾರಿಕೆಯಿಂದ ಬಳಲಿದನು. ಸರೋವರದ ದಡಕ್ಕೆ ಧರ್ಮಜನು ನಿಂತ ಜಾಗಕ್ಕೆ ಕೌರವನು ಕಳಿಸಿದ್ದ ಕೃತ್ರಿಮ ಕೃತ್ಯೆಯು ಬಂದಿಗು. ಧರ್ಮಜನು ವಿಷದ ಕೊಳದಲ್ಲಿ ನಿಂತು ಧರ್ಮಸಂಗತಿಯಲ್ಲಿರುವುದನ್ನೂ, ಉಳಿದ ನಾಲ್ವರು ಪ್ರಾಣಬಿಟ್ಟಿರುವುದನ್ನು ಕಂಡು ಭೂತವು, ಶಿವ ಶಿವಾ ಎಂದು ಹೇಳುತ್ತಾ ಹಸ್ತಿನಾಪುರಕ್ಕೆ ಹಿಂದಿರುಗಿತು.

ಅರ್ಥ:
ಕೊಳ: ಸರೋವರ; ಮಧ್ಯ: ನಡುವೆ; ನಂದನ: ಮಗ; ತಿಳುಹು: ಹೇಳು; ತತ್ವ: ಸಿದ್ಧಾಂತ, ನಿಯಮ; ಬಳಲು: ಆಯಾಸಗೊಳ್ಳು; ಬಿರು: ವೇಗ; ತಡಿ: ದಡ; ಕೃತ್ರಿಮ: ಮೋಸ; ಬಿರಿ: ಕಠಿಣ; ಘನ: ಮಹತ್ವ, ಭಾರ; ಭೂತ: ಪಿಶಾಚಿ; ಬಂದು: ಆಗಮಿಸು; ನೆಲೆ: ಭೂಮಿ, ಸ್ಥಾನ; ಕಂಡು: ನೋಡು; ಮುರಿ: ತಿರುವು;

ಪದವಿಂಗಡಣೆ:
ಕೊಳದ +ಮಧ್ಯದಿ+ ಧರ್ಮನಂದನ
ತಿಳುಹುತಿದ್ದನು +ಧರ್ಮ+ತತ್ವವ
ಬಳಲಿದನು +ಬಿರು+ತಡಿಯಲೇ +ಕೌರವನ+ ಕೃತ್ರಿಮದ
ಬಲು+ಬಿರಿವ+ ಘನ+ಭೂತ +ಬಂದುದು
ನೆಲೆಯ +ಧರ್ಮಜನನ್ನು +ಕಂಡುದು
ಎಲೆ +ಮಹಾದೇವ+ಎನುತ +ಮುರಿದುದು +ಹಸ್ತಿನಾಪುರಿಗೆ

ಅಚ್ಚರಿ:
(೧) ಕೃತ್ಯೆಯ ಆಗಮನವನ್ನು ವಿವರಿಸುವ ಪರಿ – ಕೌರವನ ಕೃತ್ರಿಮದ ಬಲುಬಿರಿವ ಘನಭೂತ ಬಂದುದು

ಪದ್ಯ ೪೪: ಯಕ್ಷ ಧರ್ಮಜನ ಸಂವಾದ – ೮

ಎನೆ ಕೃತಘ್ನನೆ ನರಕಿ ವಿದ್ಯಾ
ಧನ ಮದಾಂಧನೆ ಬಾಹಿರನು ಹೊ
ಕ್ಕನುವರವ ಹಿಂಗುವ ಮಹೀಪತಿ ಜೀವವಿರೆ ಮೃತನು
ವಿನುತ ಗುರುವರಿಯದನೆ ಮರುಳಂ
ಗನೆಯರಲಿ ವಿಶ್ವಾಸಪರನೇ
ಜನವರಿಯಲಭಿಮಾನಹೀನನು ಯಕ್ಷ ಕೇಳೆಂದ (ಅರಣ್ಯ ಪರ್ವ, ೨೬ ಸಂಧಿ, ೪೪ ಪದ್ಯ)

ತಾತ್ಪರ್ಯ:
ಧರ್ಮಜನು ಯಕ್ಷನ ಪ್ರಶ್ನೆಗೆ ಉತ್ತರಿಸುತ್ತಾ, ಕೃತಘ್ನನೇ ನರಕಿ, ವಿದ್ಯಾಧನದಿಂದ ಮದಾಂಧನಾದವನು ಬಾಹಿರ, ಯುದ್ಧಕ್ಕೆ ಹೊರಟು ಬೆದರಿ ಹಿಂದಕ್ಕೆ ಬರುವ ರಾಜನು ಬದುಕಿದ್ದರೂ ಸತ್ತಂತೆ, ಗುರುವನ್ನರಿಯದವನೇ ಮರುಳ, ಸ್ತ್ರೀಯರಲ್ಲಿ ವಿಶ್ವಾಸಪರನಾದವನೇ ಅಭಿಮಾನಹೀನನು ಎಂದು ಉತ್ತರಿಸಿದನು.

ಅರ್ಥ:
ಕೃತಘ್ನ: ಉಪಕಾರವನ್ನು ಮರೆಯುವವನು; ನರಕಿ: ನರಕವಾಸಿ; ವಿದ್ಯೆ: ಜ್ಞಾನ; ಧನ: ಐಶ್ವರ್ಯ; ಮದ: ಅಹಂಕಾರ; ಬಾಹಿರ: ಹೊರಗಿನವ; ಹೊಕ್ಕು: ಸೇರು; ಅನುವರ: ಯುದ್ಧ; ಹಿಂಗು: ಕಡಮೆಯಾಗು; ಮಹೀಪತಿ: ರಾಜ; ಜೀವ: ಪ್ರಾಣ; ಮೃತ: ಸಾವು; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಗುರು: ಆಚಾರ್ಯ; ಮರುಳು: ಹುಚ್ಚು, ಬುದ್ಧಿಭ್ರಮೆ; ಅಂಗನೆ: ಹೆಣ್ಣು; ವಿಶ್ವಾಸ: ನಂಬಿಕೆ, ಭರವಸೆ; ಜನ: ಮನುಷ್ಯ; ಅರಿ: ತಿಳಿ; ಅಭಿಮಾನ: ಹೆಮ್ಮೆ, ಅಹಂಕಾರ; ಹೀನ:ಕೀಳಾದ; ಯಕ್ಷ: ಖಚರ; ಕೇಳು: ಆಲಿಸು;

ಪದವಿಂಗಡಣೆ:
ಎನೆ+ ಕೃತಘ್ನನೆ+ ನರಕಿ+ ವಿದ್ಯಾ
ಧನ +ಮದಾಂಧನೆ +ಬಾಹಿರನು +ಹೊಕ್ಕ್
ಅನುವರವ +ಹಿಂಗುವ +ಮಹೀಪತಿ +ಜೀವವ್+ಇರೆ+ ಮೃತನು
ವಿನುತ+ ಗುರುವ್+ಅರಿಯದನೆ +ಮರುಳ್
ಅಂಗನೆಯರಲಿ +ವಿಶ್ವಾಸಪರನೇ
ಜನವರಿಯಲ್+ಅಭಿಮಾನ+ಹೀನನು +ಯಕ್ಷ +ಕೇಳೆಂದ

ಅಚ್ಚರಿ:
(೧) ಯುದ್ಧಕ್ಕೆ ಅನುವರ ಪದದ ಬಳಕೆ

ಪದ್ಯ ೪೩: ಯಕ್ಷ ಧರ್ಮಜನ ಸಂವಾದ – ೭

ನರಕಿಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಯಕ್ಷನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಯಾರು ನರಕಕ್ಕೆ ಹೋಗುತ್ತಾನೆ, ಸಜ್ಜನರಲ್ಲಿ ಯಾರು ಬಾಹಿರರು? ಜೀವವಿದ್ದರೂ ಯಾವ ರಾಜನು ಸತ್ತವನಾಗುತ್ತಾನೆ? ಯಾರು ಮರುಳ? ಯಾರು ಅಭಿಮಾನವನ್ನು ಕಳೆದುಕೊಂಡವನು? ಉತ್ತರವನ್ನು ಹೇಳಿ ಆನಂತರ ನೀರನ್ನು ಕುಡಿ ಎಂದು ಯಕ್ಷನು ಹೇಳಿದನು.

ಅರ್ಥ:
ನರಕಿ: ನರಕವಾಸಿ; ನರಕ: ಅಧೋ ಲೋಕ; ಸುಜನ: ಸಜ್ಜನ; ಬಾಹಿರ: ಹೊರಗಿನವ; ಲೋಕ: ಜಗತ್ತು; ಅರಿ: ತಿಳಿ; ಹರಣ: ಜೀವ, ಪ್ರಾಣ; ಭೂಮಿಪಾಲ; ರಾಜ; ಮರುಳ: ತಿಳಿಗೇಡಿ, ದಡ್ಡ; ಭಂಗ: ನಾಶ; ಮಾನ: ಗೌರವ, ಮರ್ಯಾದೆ; ಭರಿತ: ಕೂಡಿದ; ಹೇಳು: ತಿಳಿಸು; ಸರಸಿ: ಸರೋವರ; ಬಳಿಕ: ನಂತರ; ಉದಕ: ನೀರು; ಕುಡಿ: ಪಾನಮಾಡು; ಖಚರ: ಗಂಧರ್ವ, ಯಕ್ಷ;

ಪದವಿಂಗಡಣೆ:
ನರಕಿ+ಆವನು +ಸುಜನರಲಿ +ಬಾ
ಹಿರನದ್+ಆವನು +ಲೋಕವ್+ಅರಿಯಲು
ಹರಣವಿರೆ+ ಹೊಂದಿದನದ್+ಆವನು+ ಭೂಮಿಪಾಲರಲಿ
ಮರುಳದ್+ಆವನು+ ಮಾನ+ಭಂಗದಿ
ಭರಿತನ್+ಆವನು +ಹೇಳು +ಧರ್ಮಜ
ಸರಸಿಯಲಿ +ಬಳಿಕ್+ಉದಕವನು +ಕುಡಿ+ಎಂದನಾ +ಖಚರ

ಅಚ್ಚರಿ:
(೧) ಆವನು – ೫ ಬಾರಿ ಪ್ರಯೋಗ

ಪದ್ಯ ೪೨: ಯಕ್ಷ ಧರ್ಮಜನ ಸಂವಾದ – ೬

ಕೇಳು ಪರನಿಂದಕನೆ ನಿಂದ್ಯನು
ಹೇಳಲೇಂ ಪರಹಿತನೆ ವಂದ್ಯನು
ಹೇಳಿದಿಚ್ಚೆಗೆ ನಡೆವ ನೃಪನಿಂದಳಿವುದಾ ದೇಶ
ಕೇಳು ನಡೆವೆಣನೇ ದರಿದ್ರನು
ಸಾಲದೆಣಿಸಿದ ದಕ್ಷಿಣೆಯ ಯ
ಜ್ಞಾಳಿ ನಿಷ್ಫಲವೆಂದು ನುಡಿದನು ಯಾರಕೌಂತೇಯ (ಅರಣ್ಯ ಪರ್ವ, ೨೬ ಸಂಧಿ, ೪೨ ಪದ್ಯ)

ತಾತ್ಪರ್ಯ:
ಪರರನ್ನು ನಿಂದಿಸುವವನು ನೀಮ್ದೆಗೆ ಅರ್ಹ, ಪರರಿಗೆ ಹಿತವನ್ನು ಮಾಡುವವನು ಅಭಿವಂದನೆಗೆ ಅರ್ಹ, ತನ್ನ ಮನಸ್ಸಿಗೆ ಬಂದಂತೆ ನಡೆಯುವ ರಾಜನಿಂದ ದೇಶ ಹಾಳಾಗುತ್ತದೆ. ದರಿದ್ರನೇ ನಡೆಯುವ ಹೆಣ. ಕೊಡ ಬೇಕಾದಷ್ಟು ದಕ್ಷಿಣೆಯನ್ನು ಕೊಡದಿದ್ದರೆ ಯಜ್ಞವು ನಿಷ್ಫಲವಾಗುತ್ತದೆ ಎಂದು ಧರ್ಮಜನು ಹೇಳಿದನು.

ಅರ್ಥ:
ಪರ: ಬೇರೆಯವರು; ನಿಂದಕ: ಬಯ್ಯುವ; ನಿಂದೆ: ದೂಷಣೆ; ಹೇಳು: ತಿಳಿಸು; ಹಿತ: ಪ್ರಿಯಕರವಾದುದು; ವಂದ್ಯ: ಹೊಗಳಲು ಅರ್ಹವಾದ; ಇಚ್ಛೆ: ಆಸೆ; ನಡೆವ: ಚಲಿಸು; ನೃಪ: ರಾಜ; ಅಳಿ: ನಾಶ; ದೇಶ: ರಾಷ್ಟ್ರ; ನಡೆ: ಚಲಿಸುವ; ಹೆಣ: ಜೀವವಿಲ್ಲದ ಶರೀರ; ದರಿದ್ರ: ಬಡವ, ಧನಹೀನ; ಸಾಲ: ಎರವು; ಎಣಿಸು: ಲೆಕ್ಕ ಹಾಕು; ದಕ್ಷಿಣೆ: ಸಂಭಾವನೆ; ಯಜ್ಞ: ಕ್ರತು, ಯಾಗ; ನಿಷ್ಫಲ: ಪ್ರಯೋಜನವಿಲ್ಲದ; ನುಡಿ: ಹೇಳು; ರಾಯ: ರಾಜ;

ಪದವಿಂಗಡಣೆ:
ಕೇಳು +ಪರ+ನಿಂದಕನೆ+ ನಿಂದ್ಯನು
ಹೇಳಲೇಂ +ಪರಹಿತನೆ+ ವಂದ್ಯನು
ಹೇಳಿದ್+ಇಚ್ಚೆಗೆ +ನಡೆವ +ನೃಪನಿಂದ್+ಅಳಿವುದಾ+ ದೇಶ
ಕೇಳು +ನಡೆ+ಹೆಣನೇ+ ದರಿದ್ರನು
ಸಾಲದ್+ಎಣಿಸಿದ +ದಕ್ಷಿಣೆಯ +ಯ
ಜ್ಞಾಳಿ +ನಿಷ್ಫಲವೆಂದು +ನುಡಿದನು +ರಾಯ+ಕೌಂತೇಯ

ಅಚ್ಚರಿ:
(೧) ನಿಂದ್ಯ, ವಂದ್ಯ – ಪ್ರಾಸ ಪದಗಳು

ಪದ್ಯ ೪೧: ಯಕ್ಷ ಧರ್ಮಜನ ಸಂವಾದ – ೫

ನಿಂದ್ಯನಾವನು ಲೋಕದೊಳಗಭಿ
ವಂದ್ಯನಾವನು ಜೀವವಿರೆ ಮೃತ
ನೆಂದಡಾವನು ದೇಶಕಳಿವಹುದಾರ ದೆಸೆಯಿಂದ
ಸಂದ ಯಜ್ಞವದೆಂತು ಕೆಡುವುದು
ತಂದೆ ಹೇಳೈ ತನಗೆನಲು ಸಾ
ನಂದದಿಂದವೆ ಕಾಣಿಸಿದನಾ ಖಚರಗುತ್ತರವ (ಅರಣ್ಯ ಪರ್ವ, ೨೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಲೋಕದಲ್ಲಿ ನೀಂದೆಗೆ ಅರ್ಹನಾದವನು ಯಾರು? ವಂದನೆಗೆ ಪಾತ್ರನಾದವನು ಯಾರು? ಜೀವವಿದ್ದರೂ ಸತ್ತವನಾರು? ದೇಶವು ಯಾರಿಂದ ಅಳಿದು ಹೋಗುತ್ತದೆ? ಯಜ್ಞವು ಹೇಗೆ ನಿಷ್ಫಲವಾಗುತ್ತದೆ? ತಂದೆ ಉತ್ತರವನ್ನು ನೀಡು ಎಂದು ಯಕ್ಷ ಕೇಳಲು, ಧರ್ಮಜನು ಆನಂದದಿಂದ ಹೀಗೆ ಉತ್ತರಿಸಿದನು.

ಅರ್ಥ:
ನಿಂದನೆ: ಬಯ್ಗಳು, ದೂಷಣೆ; ಲೋಕ: ಜಗತ್ತು; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ಜೀವ: ಪ್ರಾಣ; ಮೃತ: ಸಾವು; ದೇಶ: ರಾಷ್ಟ್ರ; ಅಳಿ: ಸಾವು; ದೆಸೆ: ಕಾರಣ; ಸಂದ: ಕಳೆದ, ಹಿಂದಿನ; ಯಜ್ಞ: ಯಾಗ, ಯಜನ; ಕೆಡು: ಹಾಳು; ಸಾನಂದ: ಸಂತಸ; ಕಾಣಿಸು: ತೋರು; ಖಚರ: ಗಂಧರ್ವ; ತಂದೆ: ತಾತ;

ಪದವಿಂಗಡಣೆ:
ನಿಂದ್ಯನ್+ಆವನು+ ಲೋಕದೊಳಗ್+ಅಭಿ
ವಂದ್ಯನಾವನು +ಜೀವವಿರೆ +ಮೃತ
ನೆಂದಡ್+ಆವನು +ದೇಶಕ್+ಅಳಿವಹುದಾರ+ ದೆಸೆಯಿಂದ
ಸಂದ +ಯಜ್ಞವದೆಂತು +ಕೆಡುವುದು
ತಂದೆ +ಹೇಳೈ +ತನಗೆನಲು+ ಸಾ
ನಂದದಿಂದವೆ +ಕಾಣಿಸಿದನಾ+ ಖಚರಗ್+ಉತ್ತರವ

ಅಚ್ಚರಿ:
(೧) ನಿಂದ್ಯ, ಅಭಿವಂದ್ಯ – ಪ್ರಾಸ ಪದ