ಪದ್ಯ ೬೨: ದುರ್ಯೋಧನನು ಊರಿನ ಜನರಿಗೆ ಏನು ಹೇಳಿದನು?

ಪರಿಜನದೊಳವರವರ ಮುಖ್ಯರ
ಕರೆಸಿದನು ದುಶ್ಯಾಸನನು ನಿಮ
ಗರಸು ನೃಪನೀತಿಯಲಿ ಪಾಲಿಸುವನು ಮಹೀತಳವ
ಧರೆಯನಾತಂಗಿತ್ತೆವೆಮಗೀ
ಸುರನದೀ ತೀರದಲಿ ಕಾಶೀ
ಶ್ವರನ ಸನ್ನಿಧಿಯಿರವು ಘಟಿಸಿದುದೆಂದನಾ ಭೂಪ (ಅರಣ್ಯ ಪರ್ವ, ೨೨ ಸಂಧಿ, ೬೨ ಪದ್ಯ)

ತಾತ್ಪರ್ಯ:
ತನ್ನ ಬಳಿಗೆ ಬಂದ ಜನ ಸಮುದಾಯದ ಮುಖ್ಯಸ್ಥರನ್ನು ದುರ್ಯೋಧನನು ಕರೆಸಿಕೊಂಡು, ಇನ್ನು ಮುಂದೆ ದುಶ್ಯಾಸನನೇ ನಿಮ್ಮ ದೊರೆ, ನಾವು ರಾಜ್ಯವನ್ನು ಅವನಿಗೆ ಕೊಟ್ಟಿದ್ದೇವೆ, ಅವನು ರಾಜನೀತಿಗನುಸಾರವಾಗಿ ಭೂಮಿಯನ್ನು ಪಾಲಿಸುತ್ತಾನೆ, ನಾವು ಈ ಗಂಗಾತೀರದಲ್ಲಿ ಶಂಕರನ ಸನ್ನಿಧಿಯಲ್ಲಿರುತ್ತೇವೆ ಎಂದು ಹೇಳಿದನು.

ಅರ್ಥ:
ಪರಿಜನ: ಪರಿವಾರ; ಮುಖ್ಯ: ಶ್ರೇಷ್ಠ; ಕರೆಸು: ಬರೆಮಾಡು; ಅರಸು: ರಾಜ; ನೃಪ: ರಾಜ; ನೀತಿ: ಮಾರ್ಗ ದರ್ಶನ; ಪಾಲಿಸು: ರಕ್ಷಿಸು, ಕಾಪಾಡು; ಮಹೀತಳ: ಭೂಮಿ; ಧರೆ: ಭೂಮಿ; ಸುರನದಿ: ಗಂಗೆ; ತೀರ: ತಟ; ಕಾಶೀಶ್ವರ: ಶಂಕರ; ಸನ್ನಿಧಿ: ಹತ್ತಿರ; ಘಟಿಸು: ಏರ್ಪಡಿಸು; ಭೂಪ: ರಾಜ;

ಪದವಿಂಗಡಣೆ:
ಪರಿಜನದೊಳ್+ಅವರವರ+ ಮುಖ್ಯರ
ಕರೆಸಿದನು +ದುಶ್ಯಾಸನನು+ ನಿಮಗ್
ಅರಸು +ನೃಪನೀತಿಯಲಿ+ ಪಾಲಿಸುವನು +ಮಹೀತಳವ
ಧರೆಯನ್+ಆತಂಗ್+ ಇತ್ತೆವ್+ಎಮಗ್+ಈ
ಸುರನದೀ +ತೀರದಲಿ +ಕಾಶೀ
ಶ್ವರನ +ಸನ್ನಿಧಿಯಿರವು+ ಘಟಿಸಿದುದೆಂದನಾ +ಭೂಪ

ಅಚ್ಚರಿ:
(೧) ಭೂಪ, ಅರಸು, ನೃಪ; ಮಹೀತಳ, ಧರೆ – ಸಮನಾರ್ಥಕ ಪದಗಳು

ಪದ್ಯ ೬೧: ಪುರಜನರು ದುರ್ಯೋಧನನಿಗೆ ಏನು ಹೇಳಿದರು?

ಧರಣಿಪತಿ ಕೇಳ್ ಬಳಿಕ ಹಸ್ತಿನ
ಪುರದ ನಿಖಿಳಶ್ರೇಣಿಕುಲ ನಾ
ಗರಿಕ ಜನ ಪರಿವಾರ ಪಾಡಿ ಪಸಾಯ್ತ ಪೌರಜನ
ಅರಸ ಬಿಜಯಂಗೈದು ನಮ್ಮನು
ಹೊರೆವುದಲ್ಲದೊಡಾ ವನಾಂತರ
ವರಕೆ ನೇಮವ ಕೊಡುವುದೆಂದೊರಲಿದರು ತಮತಮಗೆ (ಅರಣ್ಯ ಪರ್ವ, ೨೨ ಸಂಧಿ, ೬೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಆ ನಂತರ ಹಸ್ತಿನಾಪುರದ ನಾನಾ ಜನಶ್ರೇಣಿಗಳು, ನಾಗರಿಕರು, ಪರಿವಾರದವರು, ಹಳ್ಳಿಗರು, ಯೋಧರು, ಆಪ್ತರು ದುರ್ಯೋಧನನ ಬಳಿಗೆ ಬಂದು, ದೊರೆಯೇ ನೀನು ಬಂದು ಆಳು, ಇಲ್ಲದಿದ್ದರೆ ನಾವು ಕಾಡು ಸೇರುವುದಕ್ಕೆ ಅಪ್ಪಣೆ ನೀಡು ಎಂದು ಗೋಳಿಟ್ಟರು.

ಅರ್ಥ:
ಧರಣಿಪತಿ: ರಾಜ; ಬಳಿಕ: ನಂತರ; ಪುರ: ಊರು; ನಿಖಿಳ: ಎಲ್ಲಾ; ಶ್ರೇಣಿ: ಪಂಕ್ತಿ, ಸಾಲು, ಗುಂಪು; ಕುಲ: ವಂಶ; ನಾಗರಿಕ: ಪಟ್ಟಣಿಗ, ಸಭ್ಯ; ಪರಿವಾರ: ಪರಿಜನ; ಪಾಡಿ: ಹಳ್ಳಿ, ಗ್ರಾಮ; ಪಸಾಯ್ತ: ಸಾಮಂತರಾಜ; ಪೌರಜನ: ಪುರಜನ, ಊರಿನ ಜನ; ಅರಸ: ರಾಜ; ಬಿಜಯಂಗೈ: ದಯಮಾಡು; ಹೊರೆ: ಭಾರ; ವನಾಂತರ: ಕಾಡಿನ ಒಳಗೆ; ನೇಮ: ಅಪ್ಪಣೆ; ಕೊಡು: ನೀದು; ಒರಲು: ಕೂಗು;

ಪದವಿಂಗಡಣೆ:
ಧರಣಿಪತಿ +ಕೇಳ್ +ಬಳಿಕ +ಹಸ್ತಿನ
ಪುರದ +ನಿಖಿಳ+ಶ್ರೇಣಿಕುಲ+ ನಾ
ಗರಿಕ +ಜನ +ಪರಿವಾರ +ಪಾಡಿ +ಪಸಾಯ್ತ +ಪೌರಜನ
ಅರಸ +ಬಿಜಯಂಗೈದು +ನಮ್ಮನು
ಹೊರೆವುದಲ್ಲದೊಡಾ+ ವನಾಂತರ
ವರಕೆ+ ನೇಮವ +ಕೊಡುವುದೆಂದ್+ಒರಲಿದರು+ ತಮತಮಗೆ

ಅಚ್ಚರಿ:
(೧) ಧರಣಿಪತಿ, ಅರಸ – ಸಮನಾರ್ಥಕ ಪದ
(೨) ಪ ಕಾರದ ಸಾಲು ಪದ – ಪರಿವಾರ ಪಾಡಿ ಪಸಾಯ್ತ ಪೌರಜನ

ಪದ್ಯ ೬೦: ದುಶ್ಯಾಸನು ಏನು ಹೇಳಿ ಹೊರಟನು?

ಭ್ರಾಂತಿಯೇಕೆ ಭವತ್ಪರೋಕ್ಷದೊ
ಳಂತಕನ ಪುರವಲ್ಲದುರ್ವೀ
ಕಾಂತೆಗಲುಪಿದೆನಾದರೊಡಹುಟ್ಟಿದನೆ ನಿಮ್ಮಡಿಯ
ಸಂತವಿಡುವೀಮಾತು ಸಾಕಿ
ನ್ನಂತಿರಲಿ ನಿಮಗೇನು ಹದನಾ
ಯ್ತಂತರದೊಳಾ ಹದನನೀಕ್ಷಿಪೆನೆನುತ ಹೊರವಂಟ (ಅರಣ್ಯ ಪರ್ವ, ೨೨ ಸಂಧಿ, ೬೦ ಪದ್ಯ)

ತಾತ್ಪರ್ಯ:
ಅಣ್ಣಾ ನೀನು ಭ್ರಾಂತಿಯನ್ನು ಬಿಡು, ನೀನಿಲ್ಲದಿದ್ದರೆ ಯಮಪುರಕ್ಕೆ ಹೋಗುತ್ತೇನೆ ಹೊರತು ಭೂದೇವಿಯನ್ನು ಕಾಮಿಸಿದರೆ ನಾನು ನಿನ್ನ ತಮ್ಮನೇ ಅಲ್ಲ. ನೀನು ನನ್ನನ್ನು ಸಂತೈಸುವ ಮಾತು ಸಾಕು. ನಿಮಗೇನಾಗುವುದೋ ಅದನ್ನು ಆಗ ನೋಡುತ್ತೇನೆ ಎಮ್ದು ಹೇಳಿ ದುಶ್ಯಾಸನು ಹೊರಟನು.

ಅರ್ಥ:
ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಪರೋಕ್ಷ: ಕಣ್ಣಿಗೆ ಕಾಣದಿರುವುದು; ಅಂತಕ:ಯಮ, ಮೃತ್ಯುದೇವತೆ; ಪುರ: ಊರು; ಉರ್ವಿ: ನೆಲ, ಭೂಮಿ; ಕಾಂತೆ: ಹೆಣ್ಣು; ಅಲುಪು: ಅಲ್ಲಾಡು; ಒಡಹುಟ್ಟು: ಜೊತೆಯಲ್ಲಿ ಹುಟ್ಟಿದವ, ಅಣ್ಣ ತಮ್ಮ; ಅಡಿ: ಪಾದ; ಸಂತವಿಡು: ಸಮ್ತೈಸು; ಸಾಕು: ನಿಲ್ಲು; ಹದ: ಸ್ಥಿತಿ; ಈಕ್ಷಿಸು: ನೋಡು; ಹೊರವಂಟ: ತೆರಳು;

ಪದವಿಂಗಡಣೆ:
ಭ್ರಾಂತಿ+ಏಕೆ+ ಭವತ್+ಪರೋಕ್ಷದೊಳ್
ಅಂತಕನ +ಪುರವಲ್ಲದ್+ಉರ್ವೀ
ಕಾಂತೆಗ್+ಅಲುಪಿದೆನಾದರ್+ಒಡಹುಟ್ಟಿದನೆ +ನಿಮ್ಮಡಿಯ
ಸಂತವಿಡುವ್+ಈ+ಮಾತು +ಸಾಕಿನ್
ಅಂತಿರಲಿ +ನಿಮಗೇನು +ಹದನ್
ಆಯ್ತ್+ಅಂತರದೊಳ್+ಆ+ ಹದನನ್+ಈಕ್ಷಿಪೆನೆನುತ+ ಹೊರವಂಟ

ಅಚ್ಚರಿ:
(೧) ದುಶ್ಯಾಸನ ಅಚಲ ನಿರ್ಧಾರ – ಭವತ್ಪರೋಕ್ಷದೊಳಂತಕನ ಪುರವಲ್ಲದುರ್ವೀ
ಕಾಂತೆಗಲುಪಿದೆನಾದರೊಡಹುಟ್ಟಿದನೆ ನಿಮ್ಮಡಿಯ

ಪದ್ಯ ೫೯: ದುಶ್ಯಾಸನ ಮೇಲಿನ ಪ್ರೇಮವು ಹೇಗಿತ್ತು?

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನನೊಡಹುಟ್ಟಿದರು ಬಲು
ಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯೆಯಿದು
ಜಗದ ಪರಿವಿಡಿಯೆಮ್ಮೊಳಲ್ಲದೆ
ಸೊಗಸಿ ರಾಜ್ಯವನಿತ್ತೆ ನೀನಿದ
ಮಗುಚಿದೊಡೆ ಯೆನ್ನಾಣೆಯೆನುತಪ್ಪಿದನು ಸಹಭವನ (ಅರಣ್ಯ ಪರ್ವ, ೨೨ ಸಂಧಿ, ೫೯ ಪದ್ಯ)

ತಾತ್ಪರ್ಯ:
ದುಶ್ಯಾಸನನೊಂದಿಗೆ ತನ್ನ ಮಾತನ್ನು ಮುಂದುವರೆಸುತ್ತಾ, ಲೋಕದಲ್ಲಿ ರಾಜರೆನ್ನಿಸಿಕೊಂಡವರಲ್ಲಿ ತಂದೆಯು ಮಗನ ಮೇಲೆ ಕೋಪಗೊಳ್ಳುತ್ತಾನೆ, ಮಗನು ತಂದೆಯ ಮೇಲೆ ಸಿಡಿದೇಳುತ್ತಾನೆ, ಅಣ್ಣ ತಮ್ಮಂದಿರು ವಿನ್ನಿಸಿಕೊಂಡವರು ಒಬ್ಬರಿಗೊಬ್ಬರೇ ವೈರಿಗಳು, ಆದರೆ ಇದಕ್ಕೆ ವಿರುದ್ಧವಾಗಿ ನಾನು ಸಂತೋಷದಿಂದ ನಿನಗೆ ರಾಜ್ಯವನ್ನು ಕೊಟ್ಟಿದ್ದೇನೆ, ಇದನ್ನು ನನ್ನಾಣೆ ಬೇಡವೆನ್ನಬೇಡ, ಎಂದು ದುರ್ಯೋಧನನು ತಮ್ಮನನ್ನು ಅಪ್ಪಿಕೊಂಡನು.

ಅರ್ಥ:
ಮಗ: ಸುತ; ಮುನಿಸು: ಕೋಪಗೊಳ್ಳು; ತಂದೆ: ಪಿತ; ಒಡಹುಟ್ಟು: ಅಣ್ಣ ತಮ್ಮ; ಭೂಪ: ರಾಜ; ಖುಲ್ಲ: ಕ್ಷುದ್ರವಾದ; ಜಗ: ಪ್ರಪಂಚ; ಪರಿವಿಡಿ: ವಸ್ಥಿತವಾದ ಕ್ರಮ; ಸೊಗಸು: ಅಂದ; ರಾಜ್ಯ: ರಾಷ್ಟ್ರ; ಮಗುಚು: ಹಿಂದಿರುಗಿಸು; ಆಣೆ: ಪ್ರಮಾಣ; ಅಪ್ಪು: ಆಲಂಗಿಸು; ಸಹಭವ: ಒಡಹುಟ್ಟಿದ;

ಪದವಿಂಗಡಣೆ:
ಮಗಗೆ +ಮುನಿವನು +ತಂದೆ +ತಂದೆಗೆ
ಮಗ +ಮುನಿವನನ್+ಒಡಹುಟ್ಟಿದರು +ಬಲು
ಪಗೆ +ಕಣಾ +ತಮ್ಮೊಳಗೆ+ ಭೂಪರ+ ಖುಲ್ಲ +ವಿದ್ಯೆಯಿದು
ಜಗದ +ಪರಿವಿಡಿ+ಎಮ್ಮೊಳಲ್ಲದೆ
ಸೊಗಸಿ+ ರಾಜ್ಯವನಿತ್ತೆ +ನೀನಿದ
ಮಗುಚಿದೊಡೆ +ಯೆನ್ನಾಣೆ+ಎನುತ್+ಅಪ್ಪಿದನು +ಸಹಭವನ

ಅಚ್ಚರಿ:
(೧) ಲೋಕದ ಖುಲ್ಲ ವಿದ್ಯೆ – ಮಗಗೆ ಮುನಿವನು ತಂದೆ ತಂದೆಗೆ ಮಗ ಮುನಿವನನೊಡಹುಟ್ಟಿದರು ಬಲುಪಗೆ ಕಣಾ ತಮ್ಮೊಳಗೆ ಭೂಪರ ಖುಲ್ಲ ವಿದ್ಯೆಯಿದು

ಪದ್ಯ ೫೮: ಯಾವುದು ಕ್ಷಾತ್ರಧರ್ಮವಲ್ಲ ಎಂದು ದುರ್ಯೋಧನನು ಹೇಳಿದನು?

ಮರುಳು ತಮ್ಮ ವೃಥಾ ಖಳಾಡಂ
ಬರವಿದಲ್ಲದೆ ಪಾಂಡುಪುತ್ರರ
ಪರಿಭವಿಸಲೊಡಬಡುವರೇ ವಿದುರಾದಿ ಬಾಹಿರರು
ಅರಮನೆಗೆ ನೀ ಹೋಗು ಹಸ್ತಿನ
ಪುರಕೆ ನೀನರಸಾಗು ಮೋಹದ
ಮರುಳುತನವೀ ಕ್ಷತ್ರಧರ್ಮದೊಳಿಲ್ಲ ಕೇಳೆಂದ (ಅರಣ್ಯ ಪರ್ವ, ೨೨ ಸಂಧಿ, ೫೮ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ದುಶ್ಯಾಸನ, ಇದು ರಾಕ್ಷಸೀ ಆಡಂಬರವೇ ಹೊರತು ಇನ್ನೇನೂ ಅಲ್ಲ. ವಿದುರನೇ ಮೊದಲಾದ ಬಾಹಿರರು ಪಾಂಡವರೊಡನೆ ಯುದ್ಧಕ್ಕೆ ಹೋಗುವುದನ್ನು ಒಪ್ಪುವುದಿಲ್ಲ. ನೀನು ಅರಮನೆಗೆ ಹಿಂದಿರುಗಿ ಹಸ್ತಿನಾಪುರಕ್ಕೆ ಅರಸನಾಗು. ಕ್ಷತ್ರಿಯನು ಮೋಹಕ್ಕೊಳಗಾಗುವುದು ಧರ್ಮವಲ್ಲ

ಅರ್ಥ:
ಮರುಳು: ಬುದ್ಧಿಭ್ರಮೆ, ಹುಚ್ಚು; ವೃಥ: ಸುಮ್ಮನೆ; ಖಳ: ದುಷ್ಟ; ಆಡಂಬರ: ತೋರಿಕೆ, ಢಂಭ; ಪುತ್ರ: ಮಕ್ಕಳು, ಮಗ; ಪರಿಭವ: ಅಪಮಾನ, ಸೋಲು; ಬಾಹಿರ: ಹೊರಗಿನವ; ಅರಮನೆ: ರಾಜರ ಆಲಯ; ಹೋಗು: ತೆರಳು; ಅರಸು: ರಾಜ; ಮೋಹ: ಆಸೆ; ಕ್ಷತ್ರ: ಕ್ಷತ್ರಿಯ; ಧರ್ಮ: ಧಾರಣೆ ಮಾಡಿದುದು; ಕೇಳು: ಆಲಿಸು;

ಪದವಿಂಗಡಣೆ:
ಮರುಳು +ತಮ್ಮ +ವೃಥಾ +ಖಳ+ಆಡಂ
ಬರವಿದಲ್ಲದೆ +ಪಾಂಡುಪುತ್ರರ
ಪರಿಭವಿಸಲ್+ಒಡಬಡುವರೇ +ವಿದುರಾದಿ+ ಬಾಹಿರರು
ಅರಮನೆಗೆ+ ನೀ +ಹೋಗು +ಹಸ್ತಿನ
ಪುರಕೆ +ನೀನ್+ಅರಸಾಗು+ ಮೋಹದ
ಮರುಳುತನವೀ+ ಕ್ಷತ್ರ+ಧರ್ಮದೊಳಿಲ್ಲ+ ಕೇಳೆಂದ

ಅಚ್ಚರಿ:
(೧) ಕ್ಷತ್ರಧರ್ಮದ ಸೂಕ್ಷ್ಮತೆ – ಮೋಹದ ಮರುಳುತನವೀ ಕ್ಷತ್ರಧರ್ಮದೊಳಿಲ್ಲ