ಪದ್ಯ ೩೦: ಯಾರಿಗೆ ಪಟ್ಟವನ್ನು ಕಟ್ಟಲು ದುರ್ಯೋಧನನು ಹೇಳಿದನು?

ಉಸುರು ಬೀಯದ ಮುನ್ನ ರಾಜ್ಯವ
ನೊಸೆದು ಕೊಟ್ಟೆನು ಪಟ್ಟಬಂಧನ
ದೊಸಗೆಯಲಿ ಕೌತುಕವನೀ ಕಿವಿಯಾರೆ ಕೇಳುವೆನು
ಅಸುವನಳುಕದೆ ಬಿಡುವೆನೌ ಶಂ
ಕಿಸದೆ ದುಶ್ಯಾಸನಗೆ ಪಟ್ಟವ
ನೆಸಗಿ ನಡೆಯೌ ತಾಯೆ ಬಿಜಯಂಗೈಯಿ ನೀವೆಂದ (ಅರಣ್ಯ ಪರ್ವ, ೨೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ನನ್ನ ಉಸುರು ನಿಲ್ಲುವ ಮೊದಲೇ ನಾನು ನನ್ನ ರಾಜ್ಯವನ್ನು ಪ್ರೀತಿಯಿಂದ ಕೊಟ್ಟಿದ್ದೇನೆ, ಪಟ್ಟಾಭಿಷೇಕದ ಸುದ್ದಿಯನ್ನು ಕಿವಿಯಾರೆ ಆಸಕ್ತಿಯಿಂದ ಕೇಳುತ್ತೇನೆ, ಅಳುಕಿಲ್ಲದೆ ದೇಹತ್ಯಾಗ ಮಾಡುತ್ತೇನೆ, ದುಶ್ಯಾಸನನಿಗೆ ಪಟ್ಟವನ್ನು ಕಟ್ಟಿರಿ, ನೀವು ದಯಮಾಡಿಸಿ ಎಂದು ದುರ್ಯೋಧನನು ಗಾಂಧಾರಿಗೆ ತಿಳಿಸಿದನು.

ಅರ್ಥ:
ಉಸುರು: ಜೀವ; ಬೀಯು: ಕೊನೆಗೊಳ್ಳು; ಮುನ್ನ: ಮೊದಲು; ಒಸೆ: ಪ್ರೀತಿಸು, ಮೆಚ್ಚು; ಕೊಡು: ನೀಡು; ಪಟ್ಟ: ಸ್ಥಾನ, ಪದವಿ; ಒಸಗೆ: ಶುಭ, ಮಂಗಳಕಾರ್ಯ; ಕೌತುಕ: ಕುತೂಹಲ; ಕಿವಿ: ಕರ್ಣ; ಕೇಳು: ಆಲಿಸು; ಅಸು: ಪ್ರಾಣ; ಅಳುಕು: ಹೆದರು; ಬಿಡು: ತೊರೆ; ಶಂಕ: ಅನುಮಾನ; ಎಸಗು: ಉಂಟುಮಾಡು, ಆಚರಿಸು; ನಡೆ: ತೆರಳು ತಾಯೆ: ಅಮ್ಮ, ಮಾತೆ; ಬಿಜಯಂಗೈ: ದಯಮಾಡಿಸು;

ಪದವಿಂಗಡಣೆ:
ಉಸುರು +ಬೀಯದ +ಮುನ್ನ +ರಾಜ್ಯವನ್
ಒಸೆದು +ಕೊಟ್ಟೆನು +ಪಟ್ಟ+ಬಂಧನದ್
ಒಸಗೆಯಲಿ +ಕೌತುಕವನ್+ಈ+ ಕಿವಿಯಾರೆ +ಕೇಳುವೆನು
ಅಸುವನ್+ಅಳುಕದೆ +ಬಿಡುವೆನೌ +ಶಂ
ಕಿಸದೆ+ ದುಶ್ಯಾಸನಗೆ+ ಪಟ್ಟವನ್
ಎಸಗಿ +ನಡೆಯೌ +ತಾಯೆ +ಬಿಜಯಂಗೈಯಿ +ನೀವೆಂದ

ಅಚ್ಚರಿ:
(೧) ದುರ್ಯೋಧನನ ನಿರ್ಧಾರ – ಶಂಕಿಸದೆ ದುಶ್ಯಾಸನಗೆ ಪಟ್ಟವನೆಸಗಿ ನಡೆಯೌ ತಾಯೆ

ಪದ್ಯ ೨೯: ದುರ್ಯೋಧನನನ್ನು ಭೂಮಿಯ ಜನರು ಹೇಗೆ ನೋಡುತ್ತಾರೆ?

ಮಾಡಿದೆನು ಸಂಕಲ್ಪವಿದರೊಳು
ಗೂಡ ಕಳಚುವೆನೊಮ್ಮೆ ನೀವೇ
ನೋಡಿ ಸಂತಸಪಡುವುದಾದುಶ್ಯಾಸನಾದಿಗಳ
ಕೇಡಿಗನು ಕುರುವಂಶಕೆಂದಿಳೆ
ಯಾಡುವುದು ತನ್ನೊಬ್ಬನನು ನಾ
ಮೂಡಿದನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ (ಅರಣ್ಯ ಪರ್ವ, ೨೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಾಯೆ, ನಾನು ಸಂಕಲ್ಪ ಮಾಡಿದ್ದೇನೆ, ಅದರಂತೆ ಈ ದೇಹದ ಗೂಡನ್ನು ಒಗೆದು ಬಿಡುತ್ತೇನೆ, ದುಶ್ಯಾಸನನೇ ಮೊದಲಾದವರು ಇರುತ್ತಾರೆ. ಅವರನ್ನು ನೋಡಿ ಸಂತೋಷಪಡಿ, ಕುರುವಂಶಕ್ಕೆ ಇವನೊಬ್ಬ ಕೇಡಿಗ ಎಂದು ಭೂಮಿಯಲ್ಲಿ ಜನರು ನನ್ನ ಬಗ್ಗೆ ಮಾತಾಡುತ್ತಾರೆ, ನಾನು ಹುಟ್ಟಿದೆ ಸತಾರೆ ನಮ್ಮ ಕುಲಕ್ಕೇ ಒಳ್ಳೆಯದು.

ಅರ್ಥ:
ಸಂಕಲ್ಪ: ನಿರ್ಧಾರ, ನಿರ್ಣಯ; ಗೂಡು: ನೆಲೆ, ದೇಹ; ಕಳಚು: ತೊರೆ; ನೋಡು: ವೀಕ್ಷಿಸು; ಸಂತಸ: ಸಂತೋಷ; ಕೇಡು: ಆಪತ್ತು, ಕೆಡಕು; ವಂಶ: ಕುಲ; ಇಳೆ: ಭೂಮಿ; ಮೂಡು: ಹುಟ್ಟು; ನೆರೆ: ಆಧಾರ, ಕಟ್ಟು, ಗುಂಪು; ಮುಳುಗು: ಮರೆಯಾಗು; ಲೇಸು: ಒಳಿತು;

ಪದವಿಂಗಡಣೆ:
ಮಾಡಿದೆನು +ಸಂಕಲ್ಪವ್+ಇದರೊಳು
ಗೂಡ +ಕಳಚುವೆನ್+ಒಮ್ಮೆ+ ನೀವೇ
ನೋಡಿ +ಸಂತಸಪಡುವುದ್+ಆ+ದುಶ್ಯಾಸನಾದಿಗಳ
ಕೇಡಿಗನು +ಕುರುವಂಶಕೆಂದ್+ಇಳೆ
ಯಾಡುವುದು +ತನ್ನೊಬ್ಬನನು +ನಾ
ಮೂಡಿದನು+ ನೆರೆ+ ಮುಳುಗಿದೊಡೆ +ಕುಲಕೆಲ್ಲ+ ಲೇಸೆಂದ

ಅಚ್ಚರಿ:
(೧) ಭೂಮಿಯು ದುರ್ಯೊಧನನನ್ನು ಹೇಗೆ ನೋಡುತ್ತದೆ – ಕೇಡಿಗನು ಕುರುವಂಶಕೆಂದಿಳೆ
ಯಾಡುವುದು
(೨) ವಂಶ, ಕುಲ – ಸಮನಾರ್ಥಕ ಪದ

ಪದ್ಯ ೨೮: ಕೌರವನು ಗಾಂಧಾರಿಗೆ ಏನು ಹೇಳಿದ?

ತಾಯೆ ಹೇಳುವುದೇನು ಪಾಂಡವ
ರಾಯರುಳುಹಿದವೊಡಲನಿದನಿದ
ರಾಯಸವ ನಾ ಹೇಳಲರಿಯೆನು ಹೊರಗೆ ಕೇಳುವುದು
ನೋಯಲೇತಕೆ ನಿಮಗೆ ಮಕ್ಕಳು
ತಾಯೆ ನೂರುಂಟನಿಬರಲಿ ಕುಂ
ದಾಯಿತೊಂದೈಸಲೆ ಮನೋವ್ಯಥೆಯೇಕೆ ನಿಮಗೆಂದ (ಅರಣ್ಯ ಪರ್ವ, ೨೨ ಸಂಧಿ, ೨೮ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಾಯಿಯನ್ನುದ್ದೇಶಿಸಿ, ತಾಯೇ ನಾನೇನು ಹೇಳಲಿ, ಇದು ಪಾಂಡವರು ಉಳಿಸಿದ ದೇಹ, ಇದರ ವ್ಯಥೆಯನ್ನು ಹೇಳಿದರೆ ಹೊರಗಿರುವವರಿಗೆ ಕೇಳುತ್ತದೆ. ನಿಮಗೆ ನೂರು ಮಕ್ಕಳಿದ್ದಾರೆ ಅವರಲ್ಲಿ ಒಂದು ಕಡೆಮೆಯಾಯಿತು ಎಂದು ತಿಳಿಯಿರಿ, ಇದರಲ್ಲೇಕೆ ವ್ಯಥೆ ಪಡುವಿರಿ ಎಂದು ಹೇಳಿದನು.

ಅರ್ಥ:
ತಾಯಿ: ಮಾತೆ; ಹೇಳು: ತಿಳಿಸು; ರಾಯ: ರಾಜ; ಉಳುಹು: ಕಾಪಾಡು, ಸಂರಕ್ಷಿಸು; ಒಡಲು: ದೇಹ; ಆಯಸ: ಬಳಲಿಕೆ; ಅರಿ: ತಿಳಿ; ಹೊರಗೆ: ಆಚೆ; ನೋವು: ತೊಂದರೆ; ನೂರು: ಶತ; ಅನಿಬರು: ಅವರು, ಅಷ್ಟುಜನ; ಕುಂದು: ಕೊರತೆ, ನೂನ್ಯತೆ; ಐಸಲೆ: ಅಲ್ಲವೇ; ಮನೋವ್ಯಥೆ: ಮನಸ್ಸಿನ ನೋವು, ವ್ಯಥೆ;

ಪದವಿಂಗಡಣೆ:
ತಾಯೆ +ಹೇಳುವುದೇನು +ಪಾಂಡವ
ರಾಯರ್+ಉಳುಹಿದವ್+ಒಡಲನಿದನ್+ಇದರ್
ಆಯಸವ+ ನಾ +ಹೇಳಲ್+ಅರಿಯೆನು +ಹೊರಗೆ +ಕೇಳುವುದು
ನೋಯಲೇತಕೆ+ ನಿಮಗೆ +ಮಕ್ಕಳು
ತಾಯೆ +ನೂರುಂಟ್+ಅನಿಬರಲಿ +ಕುಂ
ದಾಯಿತೊಂದ್+ಐಸಲೆ+ ಮನೋವ್ಯಥೆ+ಏಕೆ +ನಿಮಗೆಂದ

ಅಚ್ಚರಿ:
(೧) ತಾಯೆ – ೧, ೫ ಸಾಲಿನ ಮೊದಲ ಪದ

ಪದ್ಯ ೨೭: ಗಾಂಧಾರಿಯು ಕೌರವನಿಗೆ ಏನು ಹೇಳಿದಳು?

ಏನು ದರ್ಭಾಸ್ತರಣ ಶಯನ ವಿ
ದೇನು ಕಾರಣ ನಿರಶನ ವ್ರತ
ವೇನು ಸಾಧಿಸಲಾದುದೀ ಪ್ರಾಯೋಪವೇಶದಲಿ
ಏನು ಸಿದ್ಧಿಯಿದಕ್ಕೆ ಮೋಹಿದ
ಮೌನ ಮುದ್ರೆಯ ಬಿಸುಟು ಹೇಳೆ
ನ್ನಾಣೆಯೆನುತವೆ ಹಣೆಯ ಹಣೆಯಲಿ ಚಾಚಿದಳು ಮಗನ (ಅರಣ್ಯ ಪರ್ವ, ೨೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಮಗನ ಪಕ್ಕದಲ್ಲಿ ಕುಳಿತು ಗಾಂಧಾರಿಯು ಮಾತಾಡುತ್ತಾ, ದರ್ಭೆಗಳನ್ನು ಹಾಸಿ ಅದರ ಮೇಲೇಕೆ ಮಲಗಿರುವೆ? ನಿರಶನ ವ್ರತವನ್ನು ಕೈಗೊಳ್ಳಲು ಕಾರಣವೇನು? ಪ್ರಾಯೋಪವೇಶದಿಂದ ಏನನ್ನು ಸಾಧಿಸುತ್ತಿರುವೇ? ಇದರಿಂದ ಏನು ಸಿದ್ಧಿಸುತ್ತಿರುವೆ

ಅರ್ಥ:
ದರ್ಭಾಸ್ತರಣ: ದರ್ಭೆಯ ಹಾಸಿಗೆ; ಶಯನ: ಮಲಗು; ಕಾರಣ: ಉದ್ದೇಶ; ನಿರಶನ: ಆಹಾರ ವಿಲ್ಲದಿರುವಿಕೆ; ವ್ರತ: ನಿಯಮ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಪ್ರಾಯೋಪವೇಶ:ಅನ್ನ ನೀರುಗಳನ್ನು ತೊರೆದು ಪ್ರಾಣ ಬಿಡುವುದು; ಸಿದ್ಧಿ: ಸಾಧನೆ, ಗುರಿಮುಟ್ಟುವಿಕೆ; ಮೋಹ: ಆಕರ್ಷಣೆ, ಸೆಳೆತ; ಮೌನ: ಮಾತನ್ನಾಡದೆ ಇರುವಿಕೆ; ಮುದ್ರೆ: ಮೊಹರು; ಬಿಸುಟು: ಹೊರಹಾಕು; ಆಣೆ: ಪ್ರಮಾಣ; ಹಣೆ: ಲಲಾಟ; ಚಾಚು: ಹರಡು; ಮಗ: ಪುತ್ರ;

ಪದವಿಂಗಡಣೆ:
ಏನು +ದರ್ಭಾಸ್ತರಣ +ಶಯನ +ವಿ
ದೇನು +ಕಾರಣ +ನಿರಶನ+ ವ್ರತ
ವೇನು +ಸಾಧಿಸಲಾದುದ್+ಈ+ ಪ್ರಾಯೋಪವೇಶದಲಿ
ಏನು+ ಸಿದ್ಧಿಯಿದಕ್ಕೆ+ ಮೋಹಿದ
ಮೌನ+ ಮುದ್ರೆಯ +ಬಿಸುಟು +ಹೇಳೆನ್
ಆಣೆ+ಎನುತವೆ +ಹಣೆಯ +ಹಣೆಯಲಿ +ಚಾಚಿದಳು +ಮಗನ

ಅಚ್ಚರಿ:
(೧) ಮಾತನಾಡು ಎಂದು ಹೇಳುವ ಪರಿ – ಮೋಹಿದ ಮೌನ ಮುದ್ರೆಯ ಬಿಸುಟು
(೨) ಮಗನ ಹತ್ತಿರ ಬಂದಳು ಎಂದು ಹೇಳುವ ಪರಿ – ಹಣೆಯ ಹಣೆಯಲಿ ಚಾಚಿದಳು ಮಗನ

ಪದ್ಯ ೨೬: ಗಾಂಧಾರಿ ಕೌರವನಿಗೆ ಏನು ಹೇಳಿದಳು?

ಬಂದಳಾ ಗಾಂಧಾರಿ ಸೊಸೆಯರ
ವೃಂದಸಹಿತುರವಣಿಸಿ ಹೊಕ್ಕಳು
ನಿಂದು ನೋಡಿದಳಾತನಿರವನು ಕುಶೆಯ ಹಕ್ಕೆಯಲಿ
ಕಂದಿದಳು ಕಡುಶೋಕ ಶಿಖಿಯಲಿ
ಬೆಂದಳೇನೈ ಮಗನೆ ಹಾಸಿಕೆ
ಯಂದ ಲೇಸಾಯ್ತೆನುತ ಕುಳ್ಳಿರ್ದಳು ಸಮೀಪದಲಿ (ಅರಣ್ಯ ಪರ್ವ, ೨೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಗಾಂಧಾರಿಯು ಸೊಸೆಯರೊಡನೆ ಬಂದು ಕೌರವನ ಕುಟೀರವನ್ನು ಹೊಕ್ಕು ದರ್ಭೆಯ ಮೇಲೆ ಮಲಗಿದ್ದ ಮಗನನ್ನು ನೋಡಿದಳು. ಅತೀವ ದುಃಖವು ಅವಳನ್ನು ಆವರಿಸಿ ಆ ದುಃಖದ ಜ್ವಾಲೆಯಲ್ಲಿ ಬೆಂದು ಹೋದಳು. ಮಗನೇ ನೀನು ಮಲಗಿರುವ ಹಾಸಿಗೆ ತುಂಬ ಸೊಗಸಾಗಿದೆ ಎಂದು ಹೇಳುತ್ತಾ ಅವನ ಪಕ್ಕದಲ್ಲಿ ಕುಳಿತಳು.

ಅರ್ಥ:
ಬಂದಳು: ಆಗಮಿಸು; ಸೊಸೆ: ಮಗನ ಹೆಂಡತಿ; ವೃಂದ: ಗುಂಪು; ಸಹಿತ: ಜೊತೆ; ಉರವಣೆ: ಆತುರ, ಅವಸರ; ಹೊಕ್ಕು: ಸೇರು; ನೋಡು: ವೀಕ್ಷಿಸು; ಇರವು: ಸ್ಥಿತಿ; ಕುಶೆ: ದರ್ಭೆ; ಹಕ್ಕೆ: ಹಾಸುಗೆ; ಕಂದು: ಮಸಕಾಗು; ಕಡುಶೋಕ: ಅತೀವ ದುಃಖ; ಶಿಖಿ: ಬೆಂಕಿ; ಬೆಂದು: ಸುಡು; ಮಗನೇ: ಪುತ್ರನೇ; ಹಾಸಿಕೆ: ಶಯ್ಯೆ; ಅಂದ: ಸೊಗಸು; ಲೇಸು: ಒಳಿತು; ಕುಳ್ಳಿರ್ದು: ಅಸೀನನಾಗು; ಸಮೀಪ: ಹತ್ತಿರ;

ಪದವಿಂಗಡಣೆ:
ಬಂದಳಾ +ಗಾಂಧಾರಿ +ಸೊಸೆಯರ
ವೃಂದ+ಸಹಿತ್+ಉರವಣಿಸಿ +ಹೊಕ್ಕಳು
ನಿಂದು+ ನೋಡಿದಳ್+ಆತನ್+ಇರವನು +ಕುಶೆಯ +ಹಕ್ಕೆಯಲಿ
ಕಂದಿದಳು +ಕಡುಶೋಕ +ಶಿಖಿಯಲಿ
ಬೆಂದಳ್+ಏನೈ +ಮಗನೆ +ಹಾಸಿಕೆ
ಅಂದ +ಲೇಸಾಯ್ತೆನುತ+ ಕುಳ್ಳಿರ್ದಳು +ಸಮೀಪದಲಿ

ಅಚ್ಚರಿ:
(೧) ಅತೀವ ದುಃಖವನ್ನು ಹೇಳುವ ಪರಿ – ಕಂದಿದಳು ಕಡುಶೋಕ ಶಿಖಿಯಲಿ ಬೆಂದಳ್

ಪದ್ಯ ೨೫: ಭಾನುಮತಿ ಏಕೆ ಸುಮ್ಮನಿದ್ದಳು?

ಸಾಕು ಸಾಕೀ ಮಾತಿನಲಿ ಜಗ
ದೇಕ ರಾಜ್ಯದ ಪಟ್ಟವಾಯ್ತವಿ
ವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ
ಮೂಕಭಾವದ ದೀಕ್ಷೆ ತನಗೆಂ
ದಾ ಕಮಲಮುಖಿಯಿದ್ದಳಿತ್ತಲು
ನೂಕಿದವು ದಂಡಿಗೆಗಳರಮನೆಯಿಂದ ಸಂದಣಿಸಿ (ಅರಣ್ಯ ಪರ್ವ, ೨೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ, ಸಾಕು ಸಾಕು ನೀವಾಡಿದ ಮಾತಿನಿಂದ ನನಗೆ ಏಕಚಕ್ರಾಧಿಪತ್ಯ ದೊರೆತಂತಾಯಿತು, ಅವಿವೇಕಿಗಳಿಗೆ ಅಧಿದೈವತೆಯಾದ ನನಗೆ ಇದೇನು ಹೆಚ್ಚಿನದಲ್ಲ. ಇನ್ನು ನಾನು ಮೂಕತನದ ಪಟ್ಟ ಕಟ್ಟಿಕೊಂಡಿರುತ್ತೇನೆ, ಎಂದು ಚಿಂತಿಸಿ ಭಾನುಮತಿಯು ಸುಮ್ಮನಿದ್ದಳು. ಇತ್ತ ಅರಮನೆಯಿಂದ ಕೌರವನಿದ್ದ ಬಳಿಗೆ ಪಲ್ಲಕ್ಕಿಗಳು ಬಂದವು.

ಅರ್ಥ:
ಸಾಕು: ನಿಲ್ಲಿಸು, ತಡೆ; ಮಾತು: ನುಡಿ; ಜಗ: ಪ್ರಪಂಚ; ರಾಜ್ಯ: ರಾಷ್ಟ್ರ; ಪಟ್ಟ: ಸಿಂಹಾಸನ ಗದ್ದುಗೆ, ಕಿರೀಟ; ಅವಿವೇಕ: ಒಳಿತನ್ನು ತಿಳಿಯಲಾರದವ; ಅಧಿದೈವ: ಮೂಲ ದೈವ; ಈಸು: ಇಷ್ಟು; ಹಿರಿದು: ಹೆಚ್ಚಿನದು; ಮೂಕ: ಮಾತನಾಡದ ಸ್ಥಿತಿ; ದೀಕ್ಷೆ: ನಿಯಮ; ಕಮಲಮುಖಿ: ಸುಂದರಿ, ಕಮಲದಂತ ಮುಖವುಳ್ಳವಳು (ದ್ರೌಪದಿ); ನೂಕು: ತಳ್ಳು; ದಂಡಿಗೆ: ಪಲ್ಲಕ್ಕಿ; ಅರಮನೆ: ರಾಜರ ವಾಸಸ್ಥಾನ; ಸಂದಣಿ: ಗುಂಪು;

ಪದವಿಂಗಡಣೆ:
ಸಾಕು +ಸಾಕ್+ಈ +ಮಾತಿನಲಿ +ಜಗ
ದೇಕ +ರಾಜ್ಯದ +ಪಟ್ಟವಾಯ್ತ್+ಅವಿ
ವೇಕಿಗಳಿಗ್+ಅಧಿದೈವ +ತಾನ್+ಎನಗ್+ಈಸು +ಹಿರಿದಲ್ಲ
ಮೂಕಭಾವದ +ದೀಕ್ಷೆ +ತನಗೆಂದ್
ಆ+ ಕಮಲಮುಖಿ+ಇದ್ದಳ್+ಇತ್ತಲು
ನೂಕಿದವು +ದಂಡಿಗೆಗಳ್+ಅರಮನೆಯಿಂದ +ಸಂದಣಿಸಿ

ಅಚ್ಚರಿ:
(೧) ಭಾನುಮತಿ ತನ್ನನ್ನ ಹಂಗಿಸಿದ ಪರಿ – ಅವಿವೇಕಿಗಳಿಗಧಿದೈವ ತಾನೆನಗೀಸು ಹಿರಿದಲ್ಲ

ಪದ್ಯ ೨೪: ಕೌರವನು ಭಾನುಮತಿಗೆ ಏನು ಹೇಳಿದ?

ಮರೆವ ಹಗೆಯೇ ನಾವು ಮಾಡಿದ
ನರಿಯೆಲಾ ಮೂದಲಿಸಿ ಧರ್ಮಜ
ನಿರಿವ ಕತ್ತಿ ಕಣಾ ಸದಾ ಪಾಂಚಾಲಿ ಪವನಜರು
ಮರುಗಲೇತಕೆ ಭಾನುಮತಿನಿ
ನ್ನುರುವ ಮಗನಲಿ ರಾಜ್ಯಭಾರವ
ಹೊರಿಸಿ ಬದುಕುವುದೆನ್ನ ಕಾಡದೆ ಹೋಗು ನೀನೆಂದ (ಅರಣ್ಯ ಪರ್ವ, ೨೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ನಮ್ಮ ವೈರತ್ವವು ಮರೆಯುವಂತಹುದೇ? ನಾವು ಅವರಿಗೆ ಮಾಡಿದುದೆಲ್ಲವನ್ನು ನೀನು ತಿಳಿಯೆಯೇ? ದ್ರೌಪದಿ ಮತ್ತು ಭೀಮರು ಧರ್ಮಜನು ನಮ್ಮನ್ನು ಹಂಗಿಸಿ ಇರಿವ ಕತ್ತಿಗಳು, ಭಾನುಮತಿ ನೀನು ದುಃಖಿಸಬೇಡ, ನಿನ್ನ ಹಿರಿಯ ಮಗನಿಗೆ ರಾಜ್ಯಪಟ್ಟವನ್ನು ಕಟ್ಟಿ ನೀವು ಬಾಳಿರಿ, ನೀನು ನನ್ನನ್ನು ಕಾಡದೆ ಹೊರಟು ಹೋಗು ಎಂದು ಕೌರವನು ನುಡಿದನು.

ಅರ್ಥ:
ಮರೆ: ನೆನಪಿನಿಂದ ದೂರ ಮಾಡು; ಹಗೆ: ವೈರತ್ವ; ಅರಿ: ತಿಳಿ; ಮೂದಲಿಸು: ಹಂಗಿಸು; ಇರಿ: ಚುಚ್ಚು; ಕತ್ತಿ: ಖಡ್ಗ, ಕರವಾಳು; ಪವನಜ: ಭೀಮ; ಮರುಗು: ತಳಮಳ, ಸಂಕಟ; ಉರುವ:ಶ್ರೇಷ್ಠ; ಮಗ: ಸುತ; ರಾಜ್ಯಭಾರ: ರಾಜ್ಯದ ಆಡಳಿತ; ಹೊರಿಸು: ಹೇರು; ಬದುಕು: ಜೀವಿಸು; ಕಾಡು: ಹಿಂಸಿಸು, ಪೀಡಿಸು; ಹೋಗು: ತೆರಳು;

ಪದವಿಂಗಡಣೆ:
ಮರೆವ +ಹಗೆಯೇ +ನಾವು +ಮಾಡಿದನ್
ಅರಿಯೆಲಾ +ಮೂದಲಿಸಿ +ಧರ್ಮಜನ್
ಇರಿವ +ಕತ್ತಿ +ಕಣಾ +ಸದಾ +ಪಾಂಚಾಲಿ +ಪವನಜರು
ಮರುಗಲೇತಕೆ+ ಭಾನುಮತಿ+ನಿನ್
ಉರುವ +ಮಗನಲಿ +ರಾಜ್ಯಭಾರವ
ಹೊರಿಸಿ +ಬದುಕುವುದ್+ಎನ್ನ +ಕಾಡದೆ +ಹೋಗು +ನೀನೆಂದ

ಅಚ್ಚರಿ:
(೧) ಧರ್ಮಜನ ಅಸ್ತ್ರ – ಮೂದಲಿಸಿ ಧರ್ಮಜನಿರಿವ ಕತ್ತಿ ಕಣಾ ಸದಾ ಪಾಂಚಾಲಿ ಪವನಜರು