ಪದ್ಯ ೨೩: ಭಾನುಮತಿ ಏನು ಹೇಳಿದಳು?

ನುಡಿದವಧಿ ಹದಿಮೂರು ವರುಷದ
ಹೆಡತಲೆಯನೊದೆದೆದ್ದು ನಮ್ಮೀ
ಪೊಡವಿಯರ್ಧಕೆ ಬಲೆಯ ಬೀಸದೆ ಬಿಡುವರೇ ಬಳಿಕ
ನುಡಿಯ ಸಲಿಸದ ಮುನ್ನನೀ ಕೊ
ಟ್ಟೊಡೆ ಕೃತಘ್ನತೆ ತಪ್ಪುವುದು ಮಿಗೆ
ನುಡಿಯಲಮ್ಮೆನು ರಾಜಕಾರ್ಯವನೆಂದಳಿಂದುಮುಖಿ (ಅರಣ್ಯ ಪರ್ವ, ೨೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೌರವನ ಮಾತಿಗೆ ಉತ್ತರಿಸುತ್ತಾ, ಮಾತು ಕೊಟ್ಟಂತೆ ಪಾಂಡವರು ಹದಿಮೂರು ವರ್ಷಗಳನ್ನು ಕಳೆದು ನಮ್ಮ ರಾಜ್ಯದ ಅರ್ಧಕ್ಕೆ ಅವರು ಬಲೆ ಬೀಸದೆ ಬಿಡುವುದಿಲ್ಲ. ಅವಧಿ ಮುಗಿಯುವ ಮುನ್ನವೇ ಅವರನ್ನು ಕರೆಸಿ ರಾಜ್ಯವನ್ನು ಕೊಟ್ಟರೆ ಕೃತಘ್ನತೆ ತಪ್ಪುವುದಿಲ್ಲವೇ? ರಾಜ ಕಾರ್ಯದ ವಿಷಯದಲ್ಲಿ ಹೆಚ್ಚು ಮಾತನಾಡಲಾರೆ ಎಂದು ಭಾನುಮತಿ ನುಡಿದಳು.

ಅರ್ಥ:
ನುಡಿ: ಮಾತು; ಅವಧಿ: ಕಾಲ; ವರ್ಷ: ಸಂವತ್ಸರ; ಹೆಡತಲೆ: ತಲೆಯ ಹಿಂಭಾಗ; ಎದ್ದು: ಮೇಲೇಳು; ಪೊಡವಿ: ಪೃಥ್ವಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಬಲೆ: ಜಾಲ; ಬೀಸು: ಹರಡು; ಬಿಡು: ತೊರೆ; ಬಳಿಕ: ನಂತರ; ಸಲಿಸು: ದೊರಕಿಸಿ ಕೊಡು; ಮುನ್ನ: ಮೊದಲು; ಕೊಡು: ನೀಡು; ಕೃತಘ್ನತೆ: ಉಪಕಾರವನ್ನು ಮರೆಯುವವನು; ತಪ್ಪು: ಸುಳ್ಳಾಗು; ಮಿಗೆ: ಮತ್ತು; ರಾಜಕಾರ್ಯ: ರಾಜಕಾರಣ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಭಾನುಮತಿ);

ಪದವಿಂಗಡಣೆ:
ನುಡಿದ್+ಅವಧಿ +ಹದಿಮೂರು +ವರುಷದ
ಹೆಡತಲೆಯನ್+ಒದೆದ್+ಎದ್ದು +ನಮ್ಮೀ
ಪೊಡವಿ+ಅರ್ಧಕೆ +ಬಲೆಯ +ಬೀಸದೆ +ಬಿಡುವರೇ +ಬಳಿಕ
ನುಡಿಯ +ಸಲಿಸದ +ಮುನ್ನ+ನೀ +ಕೊ
ಟ್ಟೊಡೆ +ಕೃತಘ್ನತೆ +ತಪ್ಪುವುದು +ಮಿಗೆ
ನುಡಿಯಲ್+ಎಮ್ಮೆನು +ರಾಜಕಾರ್ಯವನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಬ ಕಾರದ ಸಾಲು ಪದ – ಬಲೆಯ ಬೀಸದೆ ಬಿಡುವರೇ ಬಳಿಕ

ಪದ್ಯ ೨೨: ಪಾಂಡವರೇಕೆ ಬರುವುದಿಲ್ಲವೆಂದು ಕೌರವನು ಹೇಳಿದನು?

ಕರೆಸಿದರೆ ದಿಟ ಬಾರರವರಾ
ಧರಣಿಯನು ಕೈಕೊಂಡು ನಿಲುವರು
ವರುಷ ಹದಿಮೂರಾದಡಲ್ಲದೆ ಮೆಟ್ಟರೀ ನೆಲವ
ಅರಿಗಳುಪಟಲದಿಂದ ತಪ್ಪಿಸಿ
ಮರಳಿಚಿದ ಜೀವೋಪಕಾರಕೆ
ಕುರುಕುಲಾಗ್ರಣಿ ಲೇಸುಮಾಡಿದನೆಂಬುದೀ ಲೋಕ (ಅರಣ್ಯ ಪರ್ವ, ೨೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭಾನುಮತಿಯ ಮಾತಿಗೆ ಉತ್ತರಿಸುತ್ತಾ, ನಾನು ಪಾಂಡವರನ್ನು ಕರೆಸಿದರೆ ಅವರು ಬರುವುದಿಲ್ಲ, ಆ ಕಾಡಿನಲ್ಲೇ ಇರುತ್ತಾರೆ, ಹದಿಮೂರು ವರ್ಷಗಳಾಗದೆ ಅವರು ನಗರವನ್ನು ಪ್ರವೇಶಿಸುವುದಿಲ್ಲ. ಶತ್ರುಗಳನ್ನು ಸೋಲಿಸಿ ಜೀವವುಳಿಸಿದ ಉಪಕಾರಕ್ಕಾಗಿ ಕೌರವನು ಅವರನ್ನು ಕರೆಸಿ ರಾಜ್ಯವನ್ನು ಕೊಟ್ಟನೆಂದು ಜಗವು ಆಡಿಕೊಳ್ಳುತ್ತದೆ ಎಂದನು.

ಅರ್ಥ:
ಕರೆಸು: ಬರೆಮಾಡು; ದಿಟ: ಸತ್ಯ; ಬಾ: ಆಗಮಿಸು; ಧರಣಿ: ಭೂಮಿ; ಕೈಕೊಂಡು: ತೆಗೆದುಕೋ; ನಿಲು: ನಿಲ್ಲು; ವರುಷ: ಸಂವತ್ಸರ; ಮೆಟ್ಟು: ನಿಲ್ಲು; ನೆಲ: ಭೂಮಿ; ಅರಿ: ವೈರಿ; ಉಪಟಳ: ಪರಾಭವ; ತಪ್ಪು: ದ್ರೋಹ; ಮರಳಿಸು: ಹಿಂದಿರುಗು; ಜೀವ: ಪ್ರಾಣ; ಉಪಕಾರ: ಸಹಾಯ; ಕುಲಾಗ್ರಣಿ: ವಂಶದ ಶ್ರೇಷ್ಠ ವ್ಯಕ್ತಿ; ಲೇಸು: ಒಳಿತು; ಲೋಕ: ಜಗತ್ತು;

ಪದವಿಂಗಡಣೆ:
ಕರೆಸಿದರೆ+ ದಿಟ+ ಬಾರರ್+ ಅವರ್
ಆ+ಧರಣಿಯನು +ಕೈಕೊಂಡು +ನಿಲುವರು
ವರುಷ +ಹದಿಮೂರಾದಡ್+ಅಲ್ಲದೆ +ಮೆಟ್ಟರೀ+ ನೆಲವ
ಅರಿಗಳ್+ಉಪಟಲದಿಂದ +ತಪ್ಪಿಸಿ
ಮರಳಿಚಿದ +ಜೀವ್+ಉಪಕಾರಕೆ
ಕುರುಕುಲಾಗ್ರಣಿ +ಲೇಸುಮಾಡಿದನ್+ಎಂಬುದೀ +ಲೋಕ

ಅಚ್ಚರಿ:
(೧) ಕೌರವನನ್ನು ಕುರುಕುಲಾಗ್ರಣಿ ಎಂದು ಕರೆದಿರುವುದು

ಪದ್ಯ ೨೧: ಭಾನುಮತಿಯ ಸಲಹೆ ಏನು?

ತಮ್ಮ ನೆರೆವೊಟ್ಟೈಸಿ ರಣದಲಿ
ನಮ್ಮ ಬಿಡಿಸಿದರವರು ನೀವಿ
ನ್ನೆಮ್ಮ ಹಿಂದಣ ಗುಣವ ನೋಡದಿರೆಂದು ಯಮಸುತನ
ನಮ್ಮ ನಗರಿಗೆ ಕರೆಸಿ ಧರೆಯನು
ನಮ್ಮ ಪಟ್ಟಣ ಸಹಿತ ಕೊಟ್ಟರೆ
ನಿಮ್ಮನೀಗಲು ಲೋಕ ಮೆಚ್ಚುವುದೆಂದಳಿಂದುಮುಖಿ (ಅರಣ್ಯ ಪರ್ವ, ೨೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ನಾವು ಸೆರೆಸಿಕ್ಕಿರುವಾಗ ಪಾಂಡವರು ತಾವೇ ಯುದ್ಧಕ್ಕೆ ಬಂದು ನಮ್ಮನ್ನು ಬಿಡಿಸಿದರು. ನೀವೀಗ ಧರ್ಮಜನಿಗೆ ನಾವು ಹಿಂದೆ ನಡೆದುಕೊಂಡ ರೀತಿ ಮಾಡಿದ ಅಪಕಾರವನ್ನು ಮರೆತುಬಿಡಿ ಎಂದು ಹೇಳಿಕಳಿಸಿ, ಅವರನ್ನು ಹಸ್ತಿನಾವತಿಗೆ ಕರೆದು ನಮ್ಮ ಭೂಮಿ ಸಮೇತ ಅವರಿಗೆ ಸೇರಬೇಕಾದ ರಾಜ್ಯವನ್ನು ನೀಡಿದರೆ ನಿಮ್ಮನ್ನು ಈಗಲೂ ಜಗತ್ತು ಮೆಚ್ಚುತ್ತದೆ ಎಂದು ಭಾನುಮತಿ ತನ್ನ ಕೋರಿಕೆಯನ್ನು ಬೇಡಿಕೊಂಡಳು.

ಅರ್ಥ:
ಐಸು: ಅಷ್ಟು; ನೆರೆ: ನೆರೆಹೊರೆ, ಸಂಬಂಧ; ರಣ: ಯುದ್ಧ; ಬಿಡಿಸು: ಬಿಡುಗಡೆ ಮಾಡು; ಹಿಂದಣ: ಹಿಂದೆ ನಡೆದ; ಗುಣ: ನಡತೆ; ನೋಡು: ವೀಕ್ಷಿಸು; ಸುತ: ಮಗ; ನಗರಿ: ಊರು; ಕರೆಸು: ಬರೆಮಾಡು; ಧರೆ: ಭೂಮಿ; ಪಟ್ಟಣ: ಊರು; ಸಹಿತ: ಜೊತೆ; ಕೊಡು: ನೀಡು; ಲೋಕ: ಜಗತ್ತು; ಮೆಚ್ಚು: ಹೊಗಳು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ಭಾನುಮತಿ);

ಪದವಿಂಗಡಣೆ:
ತಮ್ಮ +ನೆರೆವೊಟ್ಟೈಸಿ +ರಣದಲಿ
ನಮ್ಮ +ಬಿಡಿಸಿದರ್+ಅವರು +ನೀವಿನ್
ಎಮ್ಮ +ಹಿಂದಣ +ಗುಣವ +ನೋಡದಿರೆಂದು +ಯಮಸುತನ
ನಮ್ಮ +ನಗರಿಗೆ +ಕರೆಸಿ +ಧರೆಯನು
ನಮ್ಮ +ಪಟ್ಟಣ +ಸಹಿತ +ಕೊಟ್ಟರೆ
ನಿಮ್ಮನ್+ಈಗಲು +ಲೋಕ +ಮೆಚ್ಚುವುದೆಂದಳ್+ಇಂದುಮುಖಿ

ಅಚ್ಚರಿ:
(೧) ನಗರ, ಪಟ್ಟಣ – ಸಮನಾರ್ಥಕ ಪದ

ಪದ್ಯ ೨೦: ಪ್ರಾಯೋಪವೇಶವು ಏಕೆ ಪ್ರಯೋಜನವಿಲ್ಲವೆಂದಳು?

ಈ ನಿರಾಹಾರವು ನಿರರ್ಥಕ
ವೇನನೆಂಬೆನು ಜೀಯ ಮುರಿದಭಿ
ಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ
ಆ ನದೀಸುತ ವಿದುರರೆಂದುದ
ನೀನುಪೇಕ್ಷಿಸಿ ಕಳೆವೆ ಹೆಂಗಸು
ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ (ಅರಣ್ಯ ಪರ್ವ, ೨೨ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭಾನುಮತಿಯು ದುರ್ಯೋಧನನ ಮಾತಿಗೆ ಉತ್ತರಿಸುತ್ತಾ, ಪ್ರಾಯೋಪವೇಶದ ನಿರಾಹಾರವು ಅರ್ಥವಿಲದ್ದು. ನಾನೇನು ಹೇಳುತ್ತೇನೆಂದರೆ ಮುರಿದುಹೋಗಿರುವ ಸ್ವಾಭಿಮಾನವು ಮತ್ತೆ ಹಿಂದಿರುಗುತ್ತದೆಯೇ? ಬಂದಿರುವ ಅಪಕೀರ್ತಿಯ ಬಣ್ಣವು ಮಾಸಿಹೋಗುತ್ತದೆಯೇ? ಭೀಷ್ಮ, ದ್ರೋಣರ ಮಾತನ್ನೇ ಉಪೇಕ್ಷೆ ಮಾಡುವವನು ನೀನು, ಹೆಣ್ಣಾದ ನಿನಗೇನು ಗೊತ್ತು ಎನ್ನಬೇಡ, ನನ್ನ ಒಂದು ಬಿನ್ನಹವನ್ನು ಮನಸ್ಸಿಟ್ಟು ಕೇಳು ಎಂದು ಬೇಡಿದಳು.

ಅರ್ಥ:
ನಿರಾಹಾರ: ಆಹಾರ ವಿಲ್ಲದ ಸ್ಥಿತಿ; ನಿರರ್ಥಕ: ಪ್ರಯೋಜನವಿಲ್ಲ; ಜೀಯ: ಒಡೆಯ; ಮುರಿ: ಸೀಳು; ಅಭಿಮಾನ: ಗೌರವ; ಬೆಸುವು: ಒಂದಾಗು; ಬಣ್ಣ: ವರ್ಣ, ರಂಗು; ಅಳಿ: ನಾಶವಾಗು; ಬಂದ: ಆಗಮನ; ದುರಿಯಶ: ಅಪಯಶಸ್ಸು; ನದೀಸುತ: ಗಂಗಾಪುತ್ರ (ಭೀಷ್ಮ); ಉಪೇಕ್ಷೆ: ಅಲಕ್ಷ್ಯ; ಕಳೆವೆ:ತೊರೆ; ಅರಿ: ತಿಳಿ; ಚಿತ್ತೈಸು: ಗಮನವಿಟ್ಟು ಕೇಳು; ಬಿನ್ನಪ: ಪ್ರಾರ್ಥನೆ, ಮನವಿ;

ಪದವಿಂಗಡಣೆ:
ಈ +ನಿರಾಹಾರವು +ನಿರರ್ಥಕವ್
ಏನನೆಂಬೆನು+ ಜೀಯ +ಮುರಿದ್+ಅಭಿ
ಮಾನ +ಬೆಸುವುದೆ +ಬಣ್ಣವ್+ಅಳಿವುದೆ +ಬಂದ +ದುರಿಯಶದ
ಆ +ನದೀಸುತ +ವಿದುರರೆಂದುದ
ನೀನ್+ಉಪೇಕ್ಷಿಸಿ +ಕಳೆವೆ +ಹೆಂಗಸು
ನೀನ್+ಅರಿಯೆ+ಎನಬೇಡ +ಚಿತ್ತೈಸೊಂದು+ ಬಿನ್ನಪವ

ಅಚ್ಚರಿ:
(೧) ನಿರಶನವೇಕೆ ಪ್ರಯೋಜನವಿಲ್ಲ – ಮುರಿದಭಿಮಾನ ಬೆಸುವುದೆ ಬಣ್ಣವಳಿವುದೆ ಬಂದ ದುರಿಯಶದ
(೨) ನನಗೇನು ತಿಳಿಯೋದಿಲ್ಲ ಎಂದು ಹೇಳಬೇಡೆ ಎನ್ನುವ ಪರಿ – ಹೆಂಗಸು
ನೀನರಿಯೆಯೆನಬೇಡ ಚಿತ್ತೈಸೊಂದು ಬಿನ್ನಪವ

ಪದ್ಯ ೧೯: ಪಾವನವಾದ ಪ್ರಾಯೋಪವೇಶವಾವುದು?

ತರುಣಿ ನೀ ಹೆಸರಿಸಿದವಿವು ದು
ರ್ಮರಣ ಸಾಧನವಮಲ ದರ್ಭಾ
ಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ
ಪರಿಹರಿಸುವೆನು ದೇಹವನು ಸುಡ
ಲರಸುತನವನು ಪಾಂಡುಪುತ್ರರ
ಕರುಣ ಕಲುಷಿತ ಕಾಯವಿದನಾ ಧರಿಸುವೆನೆಯೆಂದ (ಅರಣ್ಯ ಪರ್ವ, ೨೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಭಾನುಮತಿಯ ಮಾತನ್ನು ಕೇಳಿದ ದುರ್ಯೋಧನನು, ಎಲೈ ಭಾನುಮತಿ, ನೀನು ಹೇಳಿದ ಮರಣದ ಮಾರ್ಗಗಳು ದುರ್ಮರಣಕ್ಕೆ ಸಾಧನಗಳು, ಪವಿತ್ರವಾದ ದರ್ಭೆಯ ಹಾಸಿನ ಮೇಲೆ ಮಲಗಿ ಪ್ರಾಯೋಪವೇಶದಿಂದ ಈ ದೇಹವನ್ನು ಕಳೆದುಕೊಳ್ಳುತ್ತೇನೆ, ಅರಸುತನಕ್ಕೆ ಬೆಂಕಿ ಬೀಳಲಿ, ಪಾಂಡುಪುತ್ರರ ಕರುಣೆಯಿಂದ ಉಳಿದಿರುವ ಈ ದೇಹದಲ್ಲಿ ನಾನು ಇರಬಲ್ಲೆನೆ? ಎಂದು ಕೇಳಿದನು.

ಅರ್ಥ:
ತರುಣಿ: ಹೆಣ್ಣು; ಹೆಸರಿಸು: ಹೇಳು; ದುರ್ಮರಣ: ಅಸ್ವಾಭಾವಿಕವಾದ ಸಾವು; ಸಾಧನ: ಕಾರಣ, ಹೇತು, ನಿಮಿತ್ತ; ಅಮಲ: ನಿರ್ಮಲ; ದರ್ಭೆ:ಕುಶ, ಹುಲ್ಲು; ದರ್ಭಾಸ್ತರಣ: ದರ್ಭೆಯಿಂದ ಮಾಡಿದ ಚಾಪೆ; ಪಾವನ: ನಿರ್ಮಲ; ಪ್ರಾಯೋಪವೇಶ: ಆಹಾರವಿಲ್ಲದೆ ದೇಹವನ್ನು ಬಿಡುವುದು; ಪರಿಹರ: ನಿವಾರಣೆ, ಪರಿಹಾರ; ದೇಹ: ಕಾಯ; ಸುಡು: ದಹಿಸು; ಅರಸು: ರಾಜ; ಕರುಣ: ದಯೆ; ಕಲುಷ: ಕಳಂಕ; ಕಾಯ: ದೇಹ; ಧರಿಸು: ಉಡು,ಹೊರು;

ಪದವಿಂಗಡಣೆ:
ತರುಣಿ +ನೀ +ಹೆಸರಿಸಿದವಿವು +ದು
ರ್ಮರಣ+ ಸಾಧನವ್+ಅಮಲ +ದರ್ಭಾ
ಸ್ತರಣವಿದು +ಪಾವನವಲಾ +ಪ್ರಾಯೋಪವೇಶದಲಿ
ಪರಿಹರಿಸುವೆನು+ ದೇಹವನು +ಸುಡಲ್
ಅರಸುತನವನು +ಪಾಂಡುಪುತ್ರರ
ಕರುಣ +ಕಲುಷಿತ +ಕಾಯವಿದನಾ +ಧರಿಸುವೆನೆಯೆಂದ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕರುಣ ಕಲುಷಿತ ಕಾಯವಿದನಾ
(೨) ಪಾವನವಾದ ಮರಣ ಪದ್ದತಿ – ಅಮಲ ದರ್ಭಾಸ್ತರಣವಿದು ಪಾವನವಲಾ ಪ್ರಾಯೋಪವೇಶದಲಿ

ಪದ್ಯ ೧೮: ಭಾನುಮತಿಯು ದುರ್ಯೋಧನನಿಗೆ ಏನು ಹೇಳಿದಳು?

ಏನು ದಿಟ ಸಂಕಲ್ಪವಿನಿತಕೆ
ನಾನು ಹೊರಗೇ ಹೊಗುವೆವೇಳು ಕೃ
ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ
ಮಾನನಿಧಿಯೇ ವಿವಿಧ ಗರಳ ವಿ
ತಾನವನು ತರಿಸುವೆನು ನಿಶ್ಚಯ
ವೇನು ನಿರಶನ ಮರಣವೇಕೆಂದಳು ಸರೋಜಮುಖಿ (ಅರಣ್ಯ ಪರ್ವ, ೨೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭಾನುಮತಿಯು ದುರ್ಯೋಧನನ ಬಳಿ ಬಂದು, ಎಲೈ ಮಾನನಿಧಿಯೇ, ಏನಿದು ನಿನ್ನ ದಿಟ್ಟ ನಿರ್ಧಾರ? ಇಷ್ಟಕ್ಕೇ ಏನು ಸಂಕಲ್ಪ ಮಾಡಿರುವೆ? ನನ್ನನ್ನು ಹೊರಗೆ ಇಟ್ಟಿರುವುದೇಕೆ? ಏಳು ಇಬ್ಬರೂ ಬೆಂಕಿಗೆ ಹಾರೋಣ, ಗಂಗಾನದಿಯ ಮಡುವಿನಲ್ಲಿ ಮುಳುಗೋಣ, ಅನೇಕ ವಿಷಗಳನ್ನು ತರಿಸುತ್ತೇನೆ, ಅದನ್ನು ಇಬ್ಬರೂ ಕುಡಿಯೋಣ, ನೀನೇಕೆ ನಿರಶನ ಮರಣದ ಸಂಕಲ್ಪ ಮಾಡಿರುವೆ ಎಂದು ಕೇಳಿದಳು.

ಅರ್ಥ:
ದಿಟ: ಸತ್ಯ; ದಿಟ್ಟ: ಧೈರ್ಯದಿಂದ ಕೂಡಿದ; ಸಂಕಲ್ಪ: ನಿರ್ಧಾರ; ಇನಿತಕೆ: ಇಷ್ಟಕ್ಕೆ; ಹೊರಗೆ: ಆಚೀ; ಕೃಶಾನು: ಅಗ್ನಿ, ಬೆಂಕಿ; ಬೀಳು: ಕುಸಿ; ನಡೆ: ಚಲಿಸು; ಭಾಗೀರಥೀ: ಗಂಗೆ; ಮಡುವು: ಆಳವಾದ ನೀರಿರುವ ಪ್ರದೇಶ; ಮಾನ: ಮರ್ಯಾದೆ, ಗೌರವ; ನಿಧಿ: ಐಶ್ವರ್ಯ; ಮಾನನಿಧಿ: ಮರ್ಯಾದೆಯನ್ನೇ ಐಶ್ವರ್ಯವಾಗಿಟ್ಟುಕೊಂಡಿರುವವನು; ವಿವಿಧ: ಹಲವಾರು; ಗರಳ: ವಿಷ; ವಿತಾನ: ವಿಸ್ತಾರ, ಅಧಿಕ್ಯ; ತರಿಸು: ಬರೆಮಾಡು; ನಿಶ್ಚಯ: ನಿರ್ಧಾರ; ನಿರಶನ: ಊಟವಿಲ್ಲದ ಸ್ಥಿತಿ; ಮರಣ: ಸಾವು; ಸರೋಜಮುಖಿ: ಕಮಲದಂತ ಮುಖವುಳ್ಳವಳು (ಭಾನುಮತಿ);

ಪದವಿಂಗಡಣೆ:
ಏನು+ ದಿಟ+ ಸಂಕಲ್ಪವ್+ಇನಿತಕೆ
ನಾನು +ಹೊರಗೇ +ಹೊಗುವೆವ್+ಏಳು+ ಕೃ
ಶಾನುವನು +ಬೀಳುವೆವು+ ನಡೆ +ಭಾಗೀರಥೀ +ಮಡುವ
ಮಾನನಿಧಿಯೇ +ವಿವಿಧ +ಗರಳ +ವಿ
ತಾನವನು +ತರಿಸುವೆನು +ನಿಶ್ಚಯ
ವೇನು +ನಿರಶನ+ ಮರಣವೇಕೆಂದಳು +ಸರೋಜಮುಖಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಮಾನನಿಧಿ
(೨) ಹಸಿವಿನಿಂದ ಸಾವು ಕಷ್ಟಕರ ಎಂದು ಹೇಳುವ ಪರಿ – ನಿರಶನ ಮರಣವೇಕೆಂದಳು ಸರೋಜಮುಖಿ