ಪದ್ಯ ೫: ಭಾನುಮತಿಯು ಯುಧಿಷ್ಠಿರನ ಬಳಿ ಏಕೆ ಬಂದಳು?

ಅರಸಿಯರು ಸಖಿಯರು ಕುಮಾರಿಯ
ರರಸನನುಜನ ಹೆಂಡಿರನಿಬರು
ವೆರಸಿ ಬಂದಳು ಭಾನುಮತಿ ಯಮತನುಜನಾಶ್ರಮಕೆ
ಕರುಣಿ ರಕ್ಷಿಸು ಸೋಮವಂಶೋ
ದ್ಧರಣ ರಕ್ಷಿಸು ಸತ್ಯಧರ್ಮದ
ಸಿರಿಯೆ ರಕ್ಷಿಸೆನುತ್ತ ಧೊಪ್ಪನೆ ಕೆಡೆದಳಂಘ್ರಿಯಲಿ (ಅರಣ್ಯ ಪರ್ವ, ೨೧ ಸಂಧಿ, ೫ ಪದ್ಯ)

ತಾತ್ಪರ್ಯ:
ರಾಣಿಯರು, ಅವಳ ಸಖಿಯರು, ಕೌರವನ ತಮ್ಮಂದಿರ ಹೆಂಡತಿಯರು ಕೂಡಿ ಭಾನುಮತಿಯು ಧರ್ಮಜನ ಆಶ್ರಮಕ್ಕೆ ಬಂದಳು, ಎಲೈ ಕರುಣಾಶಾಲಿಯೇ, ಚಂದ್ರವಂಶೋದ್ಧಾರಕನೇ, ಸತ್ಯಧರ್ಮಗಳ ಐಶ್ವರನೇ ನಮ್ಮನ್ನು ರಕ್ಷಿಸು ಎಂದು ಬೇಡಿ ತಕ್ಷಣವೇ ಧರ್ಮಜನ ಪಾದಗಳಿಗೆ ಎರಗಿದಳು.

ಅರ್ಥ:
ಅರಸಿ: ರಾಣಿ, ಸಖಿ: ಸ್ನೀಹಿತೆ; ಕುಮಾರಿ: ಬಾಲೆ; ಅರಸ: ರಾಜ; ಅನುಜ; ತಮ್ಮ; ಹೆಂಡಿರು: ಹೆಂಡತಿ, ಭಾರ್ಯ; ಅನಿಬರು: ಅಷ್ಟುಜನ; ಬಂದು: ಆಗಮಿಸು; ತನುಜ: ಮಗ; ಆಶ್ರಮ: ಕುಟೀರ; ಕರುಣಿ: ದಯಾಮಯಿ; ರಕ್ಷಿಸು: ಕಾಪಾಡು; ಸೋಮ: ಚಂದ್ರ; ವಂಶ: ಕುಲ; ಉದ್ಧರಣ: ಮೇಲಕ್ಕೆ ಎತ್ತುವುದು; ಸತ್ಯ: ನಿಜ; ಧರ್ಮ: ಧಾರಣೆ ಮಾಡುವುದು; ಸಿರಿ: ಐಶ್ವರ್ಯ; ಧೊಪ್ಪನೆ: ಕೂಡಲೆ; ಕೆಡೆ: ಬೀಳು; ಅಂಘ್ರಿ: ಪಾದ;

ಪದವಿಂಗಡಣೆ:
ಅರಸಿಯರು +ಸಖಿಯರು +ಕುಮಾರಿಯರ್
ಅರಸನ್+ಅನುಜನ +ಹೆಂಡಿರ್+ಅನಿಬರು
ವೆರಸಿ+ ಬಂದಳು+ ಭಾನುಮತಿ+ ಯಮ+ತನುಜನ್+ಆಶ್ರಮಕೆ
ಕರುಣಿ +ರಕ್ಷಿಸು +ಸೋಮ+ವಂಶೋ
ದ್ಧರಣ+ ರಕ್ಷಿಸು+ ಸತ್ಯ+ಧರ್ಮದ
ಸಿರಿಯೆ +ರಕ್ಷಿಸೆನುತ್ತ+ ಧೊಪ್ಪನೆ +ಕೆಡೆದಳ್+ಅಂಘ್ರಿಯಲಿ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಕರುಣಿ, ಸೋಮವಂಶೋದ್ಧರಣ, ಸತ್ಯಧರ್ಮದಸಿರಿಯೆ
(೨) ಅ ಕಾರದ ಪದಗಳು – ಅರಸಿ, ಅರಸ, ಅನಿಬರು, ಆಶ್ರಮ, ಅಂಘ್ರಿ

ಪದ್ಯ ೪: ಭಾನುಮತಿಯ ಏನೆಂದು ಒರಲಿದಳು?

ಕುರುಪತಿಯ ದುಶ್ಯಾಸನಾದಿಗ
ಳರಸಿಯರು ಚೌಪಟದಲೊದರಿದ
ರರಸನುಪಹತಿಗೊಪ್ಪುತೊಟ್ಟರೆ ಕರ್ಣಶಕುನಿಗಳು
ಗುರುನದೀಸುತರಿದ್ದರೀ ಪರಿ
ಪರಿಭವಕೆ ಪಾಡಹುದೆ ಪಾಂಡವ
ರರಸನಿಹ ವನವಾವುದೆಂದೊರಲಿದಳು ಭಾನುಮತಿ (ಅರಣ್ಯ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನನ ತಮ್ಮನಾದ ದುಶ್ಯಾಸನ ಮತ್ತು ಇತರರ ಪತ್ನಿಯರು, ಕೌರವನಿಗೆ ಇಂತಹ ಪರಿಸ್ಥಿತಿ ಒದಗಿದಾಗ ಶಕುನಿ, ಕರ್ಣ ಮುಂತಾದ ವೀರರು ಎಲ್ಲಿದ್ದರು, ಅವರೆಲ್ಲ ಸುಮ್ಮನಿದ್ದರೆ ಎಂದು ಕೂಗಿದರು, ಭೀಷ್ಮ ದ್ರೋಣರಿದ್ದರೆ ಇಂತಹ ಸೋಲು ಬರುತ್ತಿತ್ತೇ, ಯುಧಿಷ್ಠಿರನಿರುವ ಕಾಡು ಯಾವುದು ಎಂದು ಭಾನುಮತಿಯು ಕಣ್ಣೀರಿಟ್ಟಳು.

ಅರ್ಥ:
ಆದಿ: ಮುಂತಾದ; ಅರಸಿ: ರಾಣಿ; ಚೌಪಟ: ನಾಲ್ಕು ಕಡೆ; ಒದರು: ಕಿರುಚು; ಅರಸ: ರಾಜ; ಉಪಹತಿ: ಹೊಡೆತ; ಒಪ್ಪು: ಸಮ್ಮತಿಸು; ಗುರು: ಆಚಾರ್ಯ; ನದೀಸುತ: ಭೀಷ್ಮ; ಪರಿ: ರೀತಿ; ಪರಿಭವ: ಸೋಲು; ಪಾಡ: ರೀತಿ, ಬಗೆ, ಸ್ಥಿತಿ; ವನ: ಕಾಡು; ಒರಲು: ಗೋಳಿಡು;

ಪದವಿಂಗಡಣೆ:
ಕುರುಪತಿಯ+ ದುಶ್ಯಾಸನ+ಆದಿಗಳ್
ಅರಸಿಯರು +ಚೌಪಟದಲ್+ಒದರಿದರ್
ಅರಸನ್+ಉಪಹತಿಗ್+ಒಪ್ಪುತೊಟ್ಟರೆ+ ಕರ್ಣ+ಶಕುನಿಗಳು
ಗುರು+ನದೀಸುತರ್+ಇದ್ದರೀ +ಪರಿ
ಪರಿಭವಕೆ+ ಪಾಡಹುದೆ +ಪಾಂಡವರ್
ಅರಸನಿಹ +ವನವಾವುದ್+ಎಂದ್+ಒರಲಿದಳು +ಭಾನುಮತಿ

ಅಚ್ಚರಿ:
(೧) ಪ ಕಾರದ ಸಾಲು ಪದ – ಪರಿ ಪರಿಭವಕೆ ಪಾಡಹುದೆ ಪಾಂಡವರರಸನಿಹ
(೨) ನಾಲ್ಕು ಕಡೆ ಎಂದು ಹೇಳಲು – ಚೌಪಟ ಪದದ ಬಳಕೆ
(೩) ಪರಿ ಪರಿಭವ – ಪದಗಳ ಬಳಕೆ

ಪದ್ಯ ೩: ಕೌರವನ ಸ್ತ್ರೀಯರ ಪರಿಸ್ಥಿತಿ ಹೇಗಿತ್ತು?

ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ ದಡ್ಡಿಯ
ಮೇಲುಬೀಯಗದಂಗರಕ್ಷೆಯ ಕಂಚುಕಿ ವ್ರಜದ
ಮೇಳವವದೇನಾಯ್ತೊ ಬೀದಿಯ
ಗಾಳುಮಂದಿಯ ನಡುವೆ ಕುರುಭೂ
ಪಾಲನರಸಿಯರಳುತ ಹರಿದರು ಬಿಟ್ಟಮಂಡೆಯಲಿ (ಅರಣ್ಯ ಪರ್ವ, ೨೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವರ ರಾಣೀವಾಸವನ್ನು ಗಾಳಿಯೇ ಕಾಣದು, ಎಂದ ಮೇಲೆ ಸೂರ್ಯಕಿರಣಗಳ ಸೋಂಕೆಲ್ಲಿ? ಅವರು ಓಡಾಡುವ ಕಿರುಬಾಗಿಲ ಬೀಗ, ಅವರ ಅಂಗರಕ್ಷಕರು, ಕಂಚುಕಿಗಳು ಎಲ್ಲಿ? ಬೀದಿಯ ಜನಜಾಲದ ನಡುವೆ ಕೌರವರ ಅರಸಿಯರು ತಲೆಗೆದರಿಕೊಂಡು ಅಳುತ್ತಾ ಬಂದರು.

ಅರ್ಥ:
ಗಾಳಿ: ವಾಯು; ಅರಿ: ತಿಳಿ; ರವಿ: ಭಾನು; ಕಿರಣ: ಪ್ರಕಾಶ; ಬಾಲೆ: ಹೆಂಗಸು, ಸ್ತ್ರೀ; ಗೋಚರ: ತೋರು; ದಡ್ಡಿ: ಪಂಜರ; ಅಂಗರಕ್ಷೆ: ಕಾವಲುಗಾರ; ಕಂಚುಕಿ: ಅಂತಃಪುರದ ಅಧಿಕಾರಿ; ವ್ರಜ: ಗುಂಪು; ಮೇಳ: ಗುಂಪು; ಬೀದಿ: ಕೇರಿ; ಆಳು: ಸೇವಕ; ಮಂದಿ: ಜನ; ನಡುವೆ: ಮಧ್ಯೆ; ಭೂಪಾಲ: ರಾಜ; ಅರಸಿ: ರಾಣಿ; ಅಳು: ಆಕ್ರಂದನ; ಹರಿ: ಚಲಿಸು; ಬಿಟ್ಟ: ತೊರೆ; ಮಂಡೆ: ಶಿರ;

ಪದವಿಂಗಡಣೆ:
ಗಾಳಿ+ಅರಿಯದು +ರವಿಯ +ಕಿರಣಕೆ
ಬಾಲೆಯರು +ಗೋಚರವೆ+ ದಡ್ಡಿಯ
ಮೇಲುಬೀಯಗದ್+ಅಂಗರಕ್ಷೆಯ +ಕಂಚುಕಿ +ವ್ರಜದ
ಮೇಳವವದ್+ಏನಾಯ್ತೊ +ಬೀದಿಯಗ್
ಆಳುಮಂದಿಯ+ ನಡುವೆ +ಕುರು+ಭೂ
ಪಾಲನ್+ಅರಸಿಯರ್+ಅಳುತ +ಹರಿದರು +ಬಿಟ್ಟ+ಮಂಡೆಯಲಿ

ಅಚ್ಚರಿ:
(೧) ತಲೆಗೆದರಿಕೊಂಡು ಎಂದು ಹೇಳುವ ಪರಿ – ಬಿಟ್ಟಮಂಡೆಯಲಿ
(೨) ಅಂತಃಪುರದ ರಕ್ಷಣೆಯನ್ನು ವಿವರಿಸುವ ಪರಿ – ಗಾಳಿಯರಿಯದು ರವಿಯ ಕಿರಣಕೆ
ಬಾಲೆಯರು ಗೋಚರವೆ

ಪದ್ಯ ೨: ಪಾಳೆಯಲ್ಲಿ ಯಾವ ಸ್ಥಿತಿ ನಿರ್ಮಾಣಗೊಂಡಿತು?

ಕುದುರೆ ಹಾಯ್ದವು ಕಂಡ ಕಡೆಯಲಿ
ಮದಗಜಾವಳಿಯೋಡಿದವು ವರ
ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ
ಕದಡಿದುದು ಜನಜಲಧಿ ಝಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ (ಅರಣ್ಯ ಪರ್ವ, ೨೧ ಸಂಧಿ, ೨ ಪದ್ಯ)

ತಾತ್ಪರ್ಯ:
ಆನೆ ಕುದುರೆಗಳೂ ದಿಕ್ಕುಗೆಟ್ಟು ಓಡಿದವು. ಸ್ತ್ರೀಯರು ತಲೆ ಕೆದರಿಕೊಂಡು ಕೂಗುತ್ತಾ ಓಡಿದರು. ಪಾಳೆಯದ ಕೇರಿಗಳಲ್ಲಿದ್ದ ಜನರು ಬೆದರಿ ಗದ್ದಲ ಮಾಡಿದರು. ಕೌರವನಿಗೆ ಏನಾಯಿತು, ರಾಜನು ಎಲ್ಲಿ ಹೋಗಿದ್ದಾನೆ, ಹೇಗಿದ್ದಾನೆ ಎಂದು ವ್ಯಾಪಾರಿಗಳು ಬೀದಿಯ ಉದ್ದಗಲದಲ್ಲಿ ಓಡಾಡಿದರು.

ಅರ್ಥ:
ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಕಂಡಕಡೆ: ತೋರಿದ ದಿಕ್ಕಿಗೆ; ಮದ: ಮತ್ತು, ಅಮಲು; ಗಜಾವಳಿ: ಆನೆಗಳ ಗುಂಪು; ಓಡು: ಧಾವಿಸು; ಸುದತಿ: ಹೆಣ್ಣು; ಹರಿ: ಸೀಳು; ಮಂಡೆ: ತಲೆ; ಕದಡು: ಕಲಕಿದ ದ್ರವ; ಜಲಧಿ: ಸಾಗರ; ಝಾಡಿಸು: ಜೋರು; ಬೆದರು: ಹೆದರು, ಅಂಜಿಕೆ; ಕೇರಿ: ಬೀದಿ; ರಾಯ: ಒಡೆಯ; ಹದ: ಸ್ಥಿತಿ; ಹರಿ: ಪ್ರವಹಿಸು; ಹರದ: ವ್ಯಾಪಾರ; ಅಗಲ: ವಿಸ್ತಾರ;

ಪದವಿಂಗಡಣೆ:
ಕುದುರೆ +ಹಾಯ್ದವು +ಕಂಡ +ಕಡೆಯಲಿ
ಮದಗಜಾವಳಿ+ಓಡಿದವು +ವರ
ಸುದತಿಯರು +ಬಾಯ್ವಿಡುತ+ ಹರಿದರು+ ಬಿಟ್ಟ+ಮಂಡೆಯಲಿ
ಕದಡಿದುದು +ಜನಜಲಧಿ+ ಝಾಡಿಸಿ
ಬೆದರಿದವು +ಕೇರಿಗಳು +ರಾಯನ
ಹದನದೇನೇನ್+ಎನುತ +ಹರಿದರು +ಹರದರ್+ಅಗಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹದನದೇನೇನೆನುತ ಹರಿದರು ಹರದರಗಲದಲಿ
(೨) ತಲೆಗೆದರಿಕೊಂಡು ಎಂದು ಹೇಳಲು – ವರ ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ

ನುಡಿಮುತ್ತುಗಳು: ಅರಣ್ಯ ಪರ್ವ ೨೧ ಸಂಧಿ

  • ವರ ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ – ಪದ್ಯ
  • ಗಾಳಿಯರಿಯದು ರವಿಯ ಕಿರಣಕೆ ಬಾಲೆಯರು ಗೋಚರವೆ – ಪದ್ಯ
  • ನಾದಿದಳು ನೃಪನಂಘ್ರಿಯನು ನಯನೋದಕದ ಧಾರೆಯಲಿ – ಪದ್ಯ
  • ಭಾಳವ ತೇದು ತಿಲಕದ ಗಂಧದಲಿ ಬೈತಲೆಯ ಮುತ್ತಿನಲಿ ಆದರಿಸಿ – ಪದ್ಯ
  • ನವ ಕುಸುಮದಲಿ ಘನರೋದನದ ಮಂತ್ರದಲಿ ನೃಪ ಪಾದಪೂಜೆಯ ರಚಿಸುವವೊಲೊಪ್ಪಿದಳು ಭಾನುಮತಿ – ಪದ್ಯ
  • ಹುಳಿಗೆ ಹಾಲಳುಕಿದರೆ ಹಾಲಿನಜಲಧಿ ಕೆಡುವುದೆ – ಪದ್ಯ
  • ನೋಯಿಸಲು ಶ್ರೀಗಂಧ ನಿಜಗುಣದಾಯತವ ಬಿಡದಂತೆ – ಪದ್ಯ
  • ಚುಂಬಿಸಿತು ಕಡುಶೋಕ, ಮಿಡಿದನು ಕಂಬನಿಯನುಗುರಿನಲಿ – ಪದ್ಯ
  • ಕುರುರಾಜ ಕುಲ ಚೂಡಾಮಣಿಯ, ಕದನೋದ್ದಾಮ ದರ್ಪನ, ನಿಜಾನ್ವಯ ಕುಮುದ ಚಂದ್ರಮನ – ಪದ್ಯ ೧೦
  • ಅಪಚಾರಿ ಜನದಲಿನೆನೆವುದು ಪಕಾರವನು ಗುಣ ಹೀನನಲಿ ಗುಣವನು ತೋರುವುದು ಗರುವರಿಗೆ ಕೊಡಿಗೆಯಿದು – ಪದ್ಯ ೧೩
  • ಬೇಡಿದಂಗೊಲಿದೀವುದೇ, ಹಗೆ ಕೆಳೆಯಾವನಾಗಲಿ ಸೆಣಸಿದಡೆ ಕಾದುವುದೆ, ಆವನಾಗಲಿ ಶರಣುವೊಕ್ಕರೆ ಕಾವುದೇ ಕ್ಷತ್ರಿಯರ ಮತ – ಪದ್ಯ ೧೫
  • ಪರರಭ್ಯುದಯವನು ಬಯಸುವದು ಪರರಿಗೆ ಮುದವನಾಚರಿಸುವುದು ಧರ್ಮಜ್ಞರಿಗೆ ಗುಣವೆಂದ – ಪದ್ಯ ೧೭
  • ನಭ ಸರಳಮಯ ದಿಗುಜಾಲವಂಬಿನ ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾಪಾರ್ಥ – ಪದ್ಯ ೨೧
  • ಗಜದ ಪದಘಟ್ಟಣೆಯ ಬಹಳಂಬುಜದವೊಲು – ಪದ್ಯ ೨೫
  • ತುಳುಕಿದನು ಕೆಂಗೋಲನಿನ ಮಂಡಲಕೆ ದಿಗ್ಭ್ರಮೆಯಾಯ್ತು – ಪದ್ಯ ೨೯
  • ಹುಲಿಯ ಮುರಿದೊತ್ತಿದೊಡೆ ಪಶುಸಂಕುಲಕೆ ಸಂಕಟವೇನು ವಾಯಸಕುಲವ ಕೈಮಾಡಿದರೆ ಕೋಟಲೆಯೇನು ಕೋಗಿಲೆಗೆ – ಪದ್ಯ ೩೧
  • ಹೋದ ಮಾರಿಯ ಕರೆದು ಮನೆಯೊಳ ಗಾದರಿಸಿದವರುಂಟೆ – ಪದ್ಯ ೩೨
  • ನೀರಲಿ ನಾದ ಕೆಂಡವನುರುಹಿ ಮುಡಿದಾರುಂಟೆ ಮಂಡೆಯಲಿ – ಪದ್ಯ ೩೨
  • ಕೈದು ಮುರಿದೊಡೆ ಹಗೆಗೆ ತನ್ನಯ ಕೈದು ಕೊಟ್ಟವರುಂಟೆ – ಪದ್ಯ ೩೨
  • ಪುದುಮನೆಯ ಹಾವನು ಹದ್ದು ಹಿಡಿದರೆ ಮನಕತವ ಮಾಡುವರೆ –ಪದ್ಯ ೩೩
  • ನಿನ್ನುಸುರಿಗುಬ್ಬಸ ಮಾಡೆನಂಘ್ರಿಗಳಾಣೆ ಧರ್ಮಜನ – ಪದ್ಯ ೩೬
  • ಕಾಲಕೂಟದಕಡಲು ಕವಿವಂದದಲಿ ಕವಿದವು ಪಾರ್ಥನಂಬುಗಳು – ಪದ್ಯ ೩೯
  • ಬಿಡಿಸುವೆನು ನಿನ್ನುಸುರ ಸೆರ್ಯನು ನಿನ್ನ ದೇಹದಲಿ – ಪದ್ಯ ೩೯
  • ಕೆಂಡವ ಮಡಿಲೊಳಿಕ್ಕುವುದರ್ತಿಯೇ – ಪದ್ಯ ೪೦

ಪದ್ಯ ೧: ಯಾರ ಹಣವು ಲೂಟಿಯಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ಸಿಕ್ಕಿದನತ್ತ ಕುರು ಭೂ
ಪಾಲನದನೇಹೇಳುವೆನು ಪಾಳೆಯದ ಗಜಬಜವ
ಆಳು ಹಾಯ್ದುದು ಕಂಡ ಮುಖದಲಿ
ಕೀಳು ಮೇಲೊಂದಾಯ್ತು ಧನಿಕರ
ಪೀಳಿಗೆಯ ಧನ ಸೂರೆಯೋದುದು ಕೇರಿಕೇರಿಯಲಿ (ಅರಣ್ಯ ಪರ್ವ, ೨೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವನು ಸೆರೆಸಿಕ್ಕು ಹೋಗಲು, ಕೌರವನ ಪಾಳೆಯದಲ್ಲಿ ಗಲಭೆಯಾಯಿತು, ಪುಂಡರು ದಿಕ್ಕುದಿಕ್ಕಿಗೆ ನುಗ್ಗಿ ಕೀಳು ಮೇಳೆಂದು ಲೆಕ್ಕಿಸದೆ ಕೇರಿಕೇರಿಗಳಲ್ಲಿದ್ದ ಧನಿಕರ ಹಣವನ್ನು ಕೊಳ್ಳೆ ಹೊಡೆದರು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಸಿಕ್ಕು: ಪಡೆ; ಭೂಪಾಲ: ರಾಜ; ಪಾಳೆಯ: ಬೀಡು, ಶಿಬಿರ; ಗಜಬಜ: ಗಲಾಟೆ, ಕೋಲಾಹಲ; ಆಳು: ದಾಸ, ಸೇವಕ; ಹಾಯಿ: ಮೇಲೆಬೀಳು; ಕಂಡು: ನೋಡು; ಮುಖ: ಆನನ; ಕೀಳು: ಕಳಪೆಯಾದ; ಧನಿಕ: ಶ್ರೀಮಂತ; ಪೀಳಿಗೆ: ವಂಶ; ಧನ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ಕೇರಿ: ಬೀದಿ, ಓಣಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಿಕ್ಕಿದನತ್ತ +ಕುರು +ಭೂ
ಪಾಲನದನೇ+ಹೇಳುವೆನು +ಪಾಳೆಯದ +ಗಜಬಜವ
ಆಳು +ಹಾಯ್ದುದು +ಕಂಡ +ಮುಖದಲಿ
ಕೀಳು +ಮೇಲೊಂದಾಯ್ತು +ಧನಿಕರ
ಪೀಳಿಗೆಯ+ ಧನ +ಸೂರೆಯೋದುದು +ಕೇರಿಕೇರಿಯಲಿ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮನಾರ್ಥಕ ಪದ

ಪದ್ಯ ೬೦: ಧರ್ಮಜನೇಕೆ ಚಿಂತಾಸಕ್ತನಾದನು?

ಕೇಳಿದನು ಯಮಸೂನು ದುಗುಡವ
ತಾಳಿದನು ನಳನಹುಷ ಭರತ ನೃ
ಪಾಲ ಪಾರಂಪರೆಯಲುದಿಸಿದ ಸೋಮವಂಶದಲಿ
ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲೆನುತ ಚಿಂತಾ
ಲೋಲನಿದ್ದನು ವೀರ ನಾರಾಯಣನ ನೆನೆಯುತ್ತ (ಅರಣ್ಯ ಪರ್ವ, ೨೦ ಸಂಧಿ, ೬೦ ಪದ್ಯ)

ತಾತ್ಪರ್ಯ:
ಧರ್ಮಜನು ಕೌರವರ ಸೋಲಿನ ಸ್ಥಿತಿಯನ್ನು ಕೇಳಿದನು, ನಳ ನಹುಷ, ಭರತರಂತಹ ಚಕ್ರವರ್ತಿಗಳ ಪರಂಪರೆಯುಳ್ಳ ಚಂದ್ರವಂಶದ ಕೀರ್ತಿಯು ಹಾಳಾಯಿತೇ, ನಾವು ಬದುಕಿದ್ದೇನು ಪ್ರಯೋಜನ, ನಮ್ಮ ಬಾಳಿಕೆ ಸುಡಲಿ ಎಂದು ಯೋಚಿಸುತ್ತಾ ಚಿಂತೆಯಲ್ಲಿ ಮುಳುಗಿ ಶ್ರೀಕೃಷ್ಣನನ್ನು ಸ್ಮರಿಸಿದನು.

ಅರ್ಥ:
ಕೇಳು: ಆಲಿಸು; ಸೂನು: ಮಗ; ದುಗುಡ: ದುಃಖ; ತಾಳು: ಹೊಂದು, ಪಡೆ; ನೃಪಾಲ: ರಾಜ; ಪಾರಂಪರೆ: ವಂಶ, ಪೀಳಿಗೆ; ಉದಿಸು: ಹುಟ್ತು; ಸೋಮ: ಚಂದ್ರ; ವಂಶ: ಕುಲ; ಕೋಳು: ಪೆಟ್ಟು; ಕೀರ್ತಿ: ಯಶಸ್ಸು; ಬಾಳಿಕೆ: ಬದುಕು; ಸುಡು: ದಹಿಸು; ಚಿಂತೆ: ಯೋಚನೆ; ಲೋಲ: ಆಸಕ್ತ; ನೆನೆ: ಜ್ಞಾಪಿಸಿಕೋ;

ಪದವಿಂಗಡಣೆ:
ಕೇಳಿದನು +ಯಮಸೂನು +ದುಗುಡವ
ತಾಳಿದನು +ನಳ+ನಹುಷ +ಭರತ+ ನೃ
ಪಾಲ +ಪಾರಂಪರೆಯಲ್+ಉದಿಸಿದ +ಸೋಮ+ವಂಶದಲಿ
ಕೋಳುವೋದುದೆ +ಕೀರ್ತಿ+ಎಮ್ಮೀ
ಬಾಳಿಕೆಯ +ಸುಡಲ್+ಎನುತ +ಚಿಂತಾ
ಲೋಲನಿದ್ದನು +ವೀರ +ನಾರಾಯಣನ +ನೆನೆಯುತ್ತ

ಅಚ್ಚರಿ:
(೧) ಚಿಂತಿತನಾದನು ಎಂದು ಹೇಳಲು – ಚಿಂತಾಲೋಲನಿದ್ದನು
(೨) ಚಂದ್ರವಂಶದ ಕಾಳಜಿಯನ್ನು ತೋರುವ ಪರಿ – ಕೋಳುವೋದುದೆ ಕೀರ್ತಿಯೆಮ್ಮೀ
ಬಾಳಿಕೆಯ ಸುಡಲ್

ಪದ್ಯ ೫೯: ದ್ರೌಪದಿಯು ಹೇಗೆ ಕುಳಿತುಕೊಂಡಳು?

ಭಾವನವರರ್ತಿಯಲಿ ಜಲಕೇ
ಳೀವಿನೋದಕೆ ಬಂದು ಗಂಧ
ರ್ವಾವಳಿಯ ಕೇಳಿಯಲಿ ಚಿತ್ತೈಸಿದರಲಾಯೆನುತ
ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು
ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ (ಅರಣ್ಯ ಪರ್ವ, ೨೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಕೌರವರ ಪರಾಭವವನ್ನು ಕೇಳಿದ ದ್ರೌಪದಿಯು, ಭಾವನವರು ಜಲಕ್ರೀಡೆಯ ವಿನೋದವನ್ನು ಸವೆಯಲು ಬಂದು, ಇಲ್ಲಿ ಗಂಧರ್ವರ ಕ್ರೀಡೆಯಲ್ಲಿ ದಯಮಾಡಿಸಿದರು ಎಂದು ನಸುನಕ್ಕು ಮನದ ಓಲಗದಲ್ಲಿ ಏಕಚಕ್ರಾಧಿಪತ್ಯದ ಪದವಿಯಲ್ಲಿ ಕುಳಿತುಕೊಂಡಳು.

ಅರ್ಥ:
ಭಾವ: ಗಂಡನ ಅಣ್ಣ; ಅರ್ತಿ: ಸಂತೋಷ; ಜಲಕೇಳಿ: ಜಲಕ್ರೀಡೆ; ವಿನೋದ: ವಿಹಾರ, ಸಂತಸ; ಆವಳಿ: ಸಾಲು, ಗುಂಪು; ಕೇಳಿ: ವಿನೋದ, ಕ್ರೀಡೆ; ಚಿತ್ತೈಸು: ಬೇಡಿಕೊಳ್ಳು; ದೇವಿ: ಸ್ತ್ರಿ: ನಗು: ಸಂತಸ; ಚಿತ್ತ: ಮನಸ್ಸು; ಚಾವಡಿ: ಸಭಾಸ್ಥಾನ; ಓಲೈಸು: ಸೇವೆಮಾಡು, ಉಪಚರಿಸು; ಭೂವಳಯ: ಜಗತ್ತು, ಭೂಮಂಡಲ; ಏಕಾಧಿಪತ್ಯ: ಒಬ್ಬನ ಆಳ್ವಿಕೆ; ಸೌಖ್ಯ: ಸುಖ, ನೆಮ್ಮದಿ; ಸಂಪದ: ಐಶ್ವರ್ಯ, ಸಂಪತ್ತು;

ಪದವಿಂಗಡಣೆ:
ಭಾವನವರ್+ಅರ್ತಿಯಲಿ +ಜಲಕೇ
ಳೀ+ವಿನೋದಕೆ+ ಬಂದು +ಗಂಧರ್ವ
ಆವಳಿಯ+ ಕೇಳಿಯಲಿ+ ಚಿತ್ತೈಸಿದರಲಾ+ಎನುತ
ದೇವಿಯರು +ನಸುನಗುತ +ಚಿತ್ತದ
ಚಾವಡಿಯಲ್+ಓಲೈಸಿಕೊಂಡರು
ಭೂವಳಯದ್+ಏಕಾಧಿಪತ್ಯದ+ ಸೌಖ್ಯ +ಸಂಪದವ

ಅಚ್ಚರಿ:
(೧) ಮನಸ್ಸಿನಲ್ಲಿ ಸಂತೋಷಪಟ್ಟಲು ಎಂದು ಹೇಳುವ ಪರಿ – ದೇವಿಯರು ನಸುನಗುತ ಚಿತ್ತದ
ಚಾವಡಿಯಲೋಲೈಸಿಕೊಂಡರು ಭೂವಳಯದೇಕಾಧಿಪತ್ಯದ ಸೌಖ್ಯ ಸಂಪದವ