ಪದ್ಯ ೬: ಕರ್ಣನು ಗಂಧರ್ವರ ಜೊತೆ ಹೇಗೆ ಯುದ್ಧ ಮಾಡಿದನು?

ಹೊಯ್ಯಲಾದುದು ಚಿತ್ರಸೇನನ
ಬಯ್ಯಲೇತಕೆ ಬೇರೆಗಾಯದ
ಮೈಯಬಿಸುಟಾಯುಧದ ಬೆನ್ನಲಿ ಬಿಟ್ಟಮಂಡೆಗಳ
ಸುಯ್ಯ ಬಹಳದ ಭಟರು ತೊದಳಿಸು
ತೊಯ್ಯನೆಂದರು ಜೀಯ ಕರ್ಣನ
ಕೈಯಲಮರರ ಜೀವವಿದೆ ಜಾರುವುದು ಹಿತ ನಿಮಗೆ (ಅರಣ್ಯ ಪರ್ವ, ೨೦ ಸಂಧಿ, ೬ ಪದ್ಯ)

ತಾತ್ಪರ್ಯ:
ಶತ್ರುಗಳು ನಮ್ಮನ್ನು ಗೆದ್ದರು. ಇದಕ್ಕೆ ನಮ್ಮನ್ನು ವನದ ಕಾವಲಿಗೆ ನೇಮಿಸಿದ ಚಿತ್ರಸೇನನನ್ನೇಕೆ ಬೈಯಬೇಕು ಎನ್ನುತ್ತಾ ಗಾಯಗೊಂಡ ಮೈ, ಬಿಸುಟ ಆಯುಧ ಬೆನ್ನ ಮೇಲೆ ಜೋಲುವ ತಲೆಗೂದಲು, ಮತ್ತೆ ಮತ್ತೆ ಬಿಡುವ ನಿಟ್ಟುಸಿರುಗಳಿಂದ ಗಂಧರ್ವರು ತೊದಲುತ್ತಾ ದೇವೇಂದ್ರನ ಬಳಿ ದೂರಿದರು. ಜೀಯಾ ಗಂಧರ್ವರ ಜೀವ ಕರ್ಣನ ಕೈಲಿದೆ. ನಿಮಿಷ ಮಾತ್ರದಲ್ಲಿ ಜಾರಿ ಹೋಗುತ್ತದೆ, ಇದು ನಿಮಗೆ ಹಿತವೇ ಎಂದು ಕೇಳಿದರು.

ಅರ್ಥ:
ಹೊಯ್ಯು: ಹೊಡೆ; ಬಯ್ಯು: ಜರೆ; ಬೇರೆ: ಅನ್ಯ; ಗಾಯ: ಪೆಟ್ಟು; ಮೈ: ತನು; ಬಿಸುಟು: ಹೊರಹಾಕು; ಆಯುಧ: ಶಸ್ತ್ರ; ಬೆನ್ನು: ಹಿಂಭಾಗ; ಮಂಡೆ: ತಲೆ; ಸುಯ್ಯು: ನಿಟ್ಟುಸಿರು; ಬಹಳ: ಹೆಚ್ಚು; ಭಟ: ಸೈನಿಕ; ತೊದಲು: ತಡವರಿಸುತ್ತ ಮಾತನಾಡುವಿಕೆ; ಜೀಯ: ಒಡೆಯ; ಕೈ: ಹಸ್ತ; ಅಮರ: ದೇವತೆ; ಜೀವ: ಉಸಿರು; ಜಾರು: ಕಳಚಿಕೊಳ್ಳು; ಹಿತ: ಒಳ್ಳೆಯದು;

ಪದವಿಂಗಡಣೆ:
ಹೊಯ್ಯಲಾದುದು+ ಚಿತ್ರಸೇನನ
ಬಯ್ಯಲೇತಕೆ +ಬೇರೆ+ಗಾಯದ
ಮೈಯ+ಬಿಸುಟ+ಆಯುಧದ +ಬೆನ್ನಲಿ +ಬಿಟ್ಟ+ಮಂಡೆಗಳ
ಸುಯ್ಯ +ಬಹಳದ +ಭಟರು +ತೊದಳಿಸುತ್
ಒಯ್ಯನೆಂದರು+ ಜೀಯ+ ಕರ್ಣನ
ಕೈಯಲ್+ಅಮರರ+ ಜೀವವಿದೆ +ಜಾರುವುದು +ಹಿತ +ನಿಮಗೆ

ಪದ್ಯ ೫: ಕೌರವರು ಮತ್ತು ಗಂಧರ್ವರ ಯುದ್ಧ ಹೇಗಿತ್ತು?

ಮತ್ತೆ ಮುರಿದುದು ದೇವಬಲ ಬೆಂ
ಬತ್ತಿ ತಿವಿದರು ಕೌರವನ ಭಟ
ರೆತ್ತಿ ಹಾಯ್ಕಿದರದಟ ಗಂಧರ್ವರ ಭಟ ವ್ರಜವ
ತೆತ್ತಿಸಿದ ಸರಳೇರಿ ಸುರಿಗರು
ಳೊತ್ತುಗೈಗಳ ತಾಳಿಗೆಯ ತಲೆ
ಹೊತ್ತು ರಕ್ತದ ರಹಿಯಲೋಡಿತು ಸೇನೆ ಸುರಪುರಕೆ (ಅರಣ್ಯ ಪರ್ವ, ೨೦ ಸಂಧಿ, ೫ ಪದ್ಯ)

ತಾತ್ಪರ್ಯ:
ಗಂಧರ್ವರ ಸೈನ್ಯ ಭಂಗಗೊಂಡಿತು. ಕೌರವ ಸೈನ್ಯದ ವೀರರು ಗಂಧರ್ವ ಸೈನ್ಯವನ್ನು ಕೆಳಬೀಳಿಸಿದರು. ಬಾಣಗಳು ನಟ್ಟು, ಕರುಳುಗಳು ಸುರಿಯುತ್ತಿರಲು, ಕತ್ತು ತಲೆಗಳನ್ನು ಮಾತ್ರ ಉಳಿಸಿಕೊಂಡು, ರಕ್ತಸಿಕ್ತವಾದ ದೇಹಗಲೊಡನೆ ಗಂಧರ್ವರು ಅಮರಾವತಿಗೆ ಓಡಿದರು.

ಅರ್ಥ:
ಮುರಿ: ಸೀಳು; ದೇವ: ಸುರರು; ಬಲ: ಸೈನ್ಯ; ಬೆಂಬತ್ತು: ಹಿಂದೆ ಬೀಳು; ತಿವಿ: ಚುಚ್ಚು; ಭಟ: ಸೈನ್ಯ; ಹಾಯ್ಕು: ಹೊಡೆ; ಅದಟ: ಶೂರ, ಪರಾಕ್ರಮಿ; ಗಂಧರ್ವ: ದೇವತೆಗಳ ಒಂದು ವರ್ಗ; ಭಟ: ಸೈನಿಕ; ವ್ರಜ: ಗುಂಪು; ತೆತ್ತಿಸು: ಜೋಡಿಸು, ಕೂಡಿಸು; ಸರಳ: ಬಾನ; ಏರು: ಮೇಲೇರು; ಸುರಿ: ಮೇಲಿನಿಂದ ಬೀಳು; ಕರುಳು: ಪಚನಾಂಗ; ಒತ್ತು: ರಾಶಿ; ಕೈ: ಹಸ್ತ; ತಲೆ: ಶಿರ; ರಕ್ತ: ನೆತ್ತರು; ರಹಿ: ರೀತಿ, ಪ್ರಕಾರ; ಓಡು: ಧಾವಿಸು; ಸೇನೆ: ಸೈನ್ಯ; ಸುರಪುರ: ಅಮರಾವತಿ;

ಪದವಿಂಗಡಣೆ:
ಮತ್ತೆ +ಮುರಿದುದು +ದೇವ+ಬಲ+ ಬೆಂ
ಬತ್ತಿ +ತಿವಿದರು +ಕೌರವನ +ಭಟರ್
ಎತ್ತಿ+ ಹಾಯ್ಕಿದರ್+ಅದಟ +ಗಂಧರ್ವರ +ಭಟ +ವ್ರಜವ
ತೆತ್ತಿಸಿದ+ ಸರಳೇರಿ+ ಸುರಿ+ಕರುಳ್
ಒತ್ತು+ಕೈಗಳ +ತಾಳಿಗೆಯ+ ತಲೆ
ಹೊತ್ತು +ರಕ್ತದ +ರಹಿಯಲ್+ಓಡಿತು +ಸೇನೆ +ಸುರಪುರಕೆ

ಅಚ್ಚರಿ:
(೧) ಹೊತ್ತು, ಒತ್ತು; ಎತ್ತಿ, ತೆತ್ತಿ – ಪ್ರಾಸ ಪದಗಳು
(೨) ಒಂದೇ ಅಕ್ಷರದ ಜೋಡಿ ಪದಗಳು – ರಕ್ತದ ರಹಿಯಲೋಡಿತು; ಸೇನೆ ಸುರಪುರಕೆ; ಸರಳೇರಿ ಸುರಿಗರುಳೊತ್ತುಗೈಗಳ

ಪದ್ಯ ೪: ಕೌರವರು ಗಂಧರ್ವರ ಜೊತೆ ಹೇಗೆ ಯುದ್ಧ ಮಾಡಿದರು?

ನೂಕಿದರು ಮುಂಗುಡಿಯವರು ಬನ
ದಾಕೆಯಲಿ ಹೊಯ್ದರು ವಿರೋಧಿ ದಿ
ವೌಕಸರನಿಕ್ಕಿದರು ಸಿಕ್ಕಿದರುರುವ ಸಬಳದಲಿ
ಆಕೆವಾಳರು ಕರ್ಣ ಶಕುನಿಗ
ಳೇಕೆ ನಿಲುವರು ಬಿರಿದು ಪಾಡಿನ
ನೇಕ ಭಟರೊಳಹೊಕ್ಕು ತಿವಿದರು ಬೆರಸಿ ಸುರಬಲವ (ಅರಣ್ಯ ಪರ್ವ, ೨೦ ಸಂಧಿ, ೪ ಪದ್ಯ)

ತಾತ್ಪರ್ಯ:
ಅಗ್ರಭಾಗದಲ್ಲಿದ್ದ ಯೋಧರು ಕಾಡಿನ ಎದುರಿನಲ್ಲಿದ್ದ ಗಂಧರ್ವರನ್ನು ಹೊಡೆದರು. ಶತ್ರುಗಳಾದ ದೇವತೆಗಳನ್ನು ಕೊಂದು ಅವರ ಈಟಿಗಳ ಹೊಡೆತವನ್ನು ತಿಂದರು. ವೀರರಾದ ಕರ್ಣ, ಶಕುನಿಗಳು ಸುಮ್ಮನಿರುವವರೇ? ಅವರೂ ಸಹ ಆಕ್ರಮಣ ಮಾಡಿದರು, ಅನೇಕ ಬಿರುದಾವಳಿಗಳನ್ನೊಳಗೊಂಡ ವೀರ ಸೈನಿಕರು ಶತ್ರು ಸೈನ್ಯದೊಳಕ್ಕೆ ಹೊಕ್ಕು ಗಂಧರ್ವ ಸೈನ್ಯವನ್ನು ತಿವಿದರು.

ಅರ್ಥ:
ನೂಕು: ತಳ್ಳು; ಮುಂಗುಡಿ: ಮುಂಭಾಗ; ಬನ: ಕಾದು; ಹೊಯ್ದು: ಹೊಡೆ; ವಿರೋಧಿ: ಶತ್ರು; ದಿವೌಕಸ: ದೇವತೆ; ಇಕ್ಕು: ಇರಿಸು, ಇಡು; ಸಿಕ್ಕ: ಎದುರು ಬಮ್ದ; ಉರು: ಶ್ರೇಷ್ಠ; ಸಬಳ: ಈಟಿ, ಭರ್ಜಿ; ಆಕೆವಾಳ: ವೀರ, ಪರಾಕ್ರಮಿ; ನಿಲು: ತಡೆ; ಬಿರಿ: ಬಿರುಕು, ಸೀಳು; ಪಾಡು: ಸ್ಥಿತಿ; ಅನೇಕ: ಬಹಳ; ಭಟ: ಸೈನಿಕ; ಹೊಕ್ಕು: ಸೇರು; ತಿವಿ: ಚುಚ್ಚು; ಬೆರಸು: ಮಿಶ್ರಮಾಡು, ಕೂಡಿಸು; ಸುರ: ದೇವತೆ; ಬಲ: ಸೈನ್ಯ;

ಪದವಿಂಗಡಣೆ:
ನೂಕಿದರು +ಮುಂಗುಡಿಯವರು+ ಬನ
ದಾಕೆಯಲಿ +ಹೊಯ್ದರು +ವಿರೋಧಿ +ದಿ
ವೌಕಸರನ್+ಇಕ್ಕಿದರು +ಸಿಕ್ಕಿದರ್+ಉರುವ +ಸಬಳದಲಿ
ಆಕೆವಾಳರು +ಕರ್ಣ +ಶಕುನಿಗಳ್
ಏಕೆ +ನಿಲುವರು +ಬಿರಿದು +ಪಾಡಿನ್
ಅನೇಕ+ ಭಟರ್+ಒಳಹೊಕ್ಕು +ತಿವಿದರು +ಬೆರಸಿ +ಸುರಬಲವ

ಅಚ್ಚರಿ:
(೧) ನೂಕಿದರು, ಇಕ್ಕಿದರು, ಹೊಯ್ದರು, ತಿವಿದರು – ಪದಗಳ ಬಳಕೆ
(೨) ದೇವತೆಗಳನ್ನು ದಿವೌಕಸರ ಎಂದು ಕರೆದಿರುವುದು
(೩) ಸಬಳ, ಸುರಬಲ – ಪದಗಳ ಬಳಕೆ

ಪದ್ಯ ೩: ಯುದ್ಧಕ್ಕೆ ಯಾರು ಸಿದ್ಧರಾದರು?

ನೇಮವಾಯಿತು ಸುಭಟರೊಳಗೆ ಸ
ನಾಮರೆದ್ದರು ಕರ್ಣ ಸೌಬಲ
ಭೂಮಿಪತಿಯನುಜಾತ ಬಾಹ್ಲಿಕ ಶಲ್ಯನಂದನರು
ಸೋಮದತ್ತನ ಮಗ ಕಳಿಂಗ ಸು
ಧಾಮ ಚಿತ್ರ ಮಹಾರಥಾದಿಮ
ಹಾಮಹಿಮರನುವಾಯ್ತು ಗಜಹಯರಥನಿಕಾಯದಲಿ (ಅರಣ್ಯ ಪರ್ವ, ೨೦ ಸಂಧಿ, ೩ ಪದ್ಯ)

ತಾತ್ಪರ್ಯ:
ಕೌರವನು ಅಪ್ಪಣೆ ಕೊಟ್ಟೊಡನೆ ಕರ್ಣ, ಶಕುನಿ, ದುಶ್ಯಾಸನ, ಬಾಹ್ಲಿಕ ಶಲ್ಯನ ಮಗ, ಸೋಮದತ್ತನ ಮಗ ಕಳಿಂಗ ಸುಧಾಮ ಚಿತ್ರ ಮೊದಲಾದ ಮಹಾರಥರು ಯುದ್ಧಕ್ಕೆ ಸಿದ್ಧರಾದರು. ಅವರ ಚತುರಂಗ ಸೈನ್ಯವೂ ಹೊರಟಿತು.

ಅರ್ಥ:
ನೇಮ: ವ್ರತ, ನಿಯಮ; ಭಟ: ಸೈನ್ಯ; ಸನಾಮ: ಪ್ರಸಿದ್ಧ; ಸೌಬಲ: ಶಕುನಿ; ಭೂಮಿಪತಿ: ರಾಜ; ಅನುಜಾತ: ತಮ್ಮ; ನಂದನ: ಮಗ; ಮಹಾರಥಿ: ಶೂರ, ಪರಾಕ್ರಮಿ; ಮಹಾಮಹಿಮ: ಶ್ರೇಷ್ಠ; ಅನುವು: ಸೊಗಸು; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ನಿಕಾಯ: ಗುಂಪು;

ಪದವಿಂಗಡಣೆ:
ನೇಮವಾಯಿತು+ ಸುಭಟರೊಳಗೆ +ಸ
ನಾಮರೆದ್ದರು +ಕರ್ಣ +ಸೌಬಲ
ಭೂಮಿಪತಿ+ಅನುಜಾತ +ಬಾಹ್ಲಿಕ +ಶಲ್ಯ+ನಂದನರು
ಸೋಮದತ್ತನ+ ಮಗ +ಕಳಿಂಗ +ಸು
ಧಾಮ +ಚಿತ್ರ +ಮಹಾರಥಾದಿ+ಮ
ಹಾಮಹಿಮರ್+ಅನುವಾಯ್ತು +ಗಜ+ಹಯ+ರಥ+ನಿಕಾಯದಲಿ

ಅಚ್ಚರಿ:
(೧) ಮಹಾರಥರ ಹೆಸರು – ಕರ್ಣ, ಸೌಬಲ, ದುಶ್ಯಾಸನ, ಬಾಹ್ಲಿಕ, ಶಲ್ಯನಂದನ, ಕಳಿಂಗ, ಸುಧಾಮ, ಚಿತ್ರ,
(೨) ದುಶ್ಯಾಸನನನ್ನು ಭೂಮಿಪತಿಯನುಜಾತ ಎಂದು ಕರೆದ ಪರಿ

ಪದ್ಯ ೨: ಕರ್ಣನು ದುರ್ಯೋಧನನಿಗೆ ಏನು ಹೇಳಿದ?

ಜೀಯ ದುಗುಡವಿದೇಕೆ ದಿವಿಜರ
ರಾಯ ಶಿಖಿ ಯಮ ನಿರುತಿ ಜಲಧಿಪ
ವಾಯು ಧನದ ಶಿವಾದಿಗಳ ಸಾಹಸಕೆ ಮೂವಡಿಯ
ರಾಯ ಭಟರಿದೆ ನೇಮಿಸಾ ಸುರ
ರಾಯನೂರಿನ ಹಾಡುಗರ ಹುಲು
ನಾಯಕರಿಗಿನಿತೇಕೆ ಖತಿ ಬೆಸಸೆಂದನಾ ಕರ್ಣ (ಅರಣ್ಯ ಪರ್ವ, ೧೯ ಸಂಧಿ, ೨ ಪದ್ಯ)

ತಾತ್ಪರ್ಯ:
ದುರ್ಯೋಧನನ ಸ್ಥಿತಿಯನ್ನು ನೋಡಿ, ಒಡೆಯಾ, ಇದಕ್ಕೇಕೆ ದುಃಖ, ದೇವೇಂದ್ರ, ಅಗ್ನಿ, ಯಮ, ನಿರುಋತಿ, ವರುಣ, ವಾಯು, ಕುಬೇರ, ಈಶಾನರ ಸಾಹಸಕ್ಕೆ ಮುರು ಪಟ್ತು ಹೆಚ್ಚಿನ ಸಾಹಸಿಗರು ನಿನ್ನ ಸೈನ್ಯದಲ್ಲಿದ್ದಾರೆ. ಅವರಿಗೆ ಅಪ್ಪಣೆ ಕೊಡು, ಅಮರಾವತಿಯ ಹಾಡುಗರ ಸಾಹಸಕ್ಕೆ ಇಷ್ಟೇಕೆ ಚಿಂತೆ ಎಂದು ಕೌರವನಿಗೆ ಹೇಳಿದನು.

ಅರ್ಥ:
ಜೀಯ: ಒಡೆಯ; ದುಗುಡ: ದುಃಖ; ದಿವಿಜ: ಸುರರು; ರಾಯ: ರಾಜ; ಶಿಖಿ: ಅಗ್ನಿ; ಯಮ: ಧರ್ಮದೇವತೆ; ನಿರುತಿ: ನೈಋತ್ಯದಿಕ್ಕಿನ ಒಡೆಯ; ರಾಕ್ಷಸ; ಜಲಧಿಪ: ವರುಣ; ಜಲಧಿ: ಸಾಗರ; ಧನದ: ಕುಬೇರ; ಧನ: ಐಶ್ವರ್ಯ; ಸಾಹಸ: ಪರಾಕ್ರಮ; ಮೂವಡಿ: ಮೂರು ಪಟ್ಟು; ಭಟ: ಸೈನಿಕ; ನೇಮಿ: ನಿಯಮವನ್ನು ಹೊಂದಿರುವವನು; ಸುರರಾಯ: ಇಂದ್ರ; ಊರು: ಪಟ್ಟಣ; ಹಾಡುಗರು: ಗಂಧರ್ವರು; ಹುಲು:ಕ್ಷುಲ್ಲ; ನಾಯಕ: ಒಡೆಯ; ಖತಿ: ಕೋಪ, ದುಃಖ; ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ದುಗುಡವಿದೇಕೆ +ದಿವಿಜರ
ರಾಯ +ಶಿಖಿ +ಯಮ +ನಿರುತಿ+ ಜಲಧಿಪ
ವಾಯು +ಧನದ+ ಶಿವಾದಿಗಳ+ ಸಾಹಸಕೆ +ಮೂವಡಿಯ
ರಾಯ +ಭಟರಿದೆ +ನೇಮಿಸ್+ಆ+ ಸುರ
ರಾಯನ್+ಊರಿನ +ಹಾಡುಗರ +ಹುಲು
ನಾಯಕರಿಗಿನಿತ್+ಏಕೆ+ ಖತಿ+ ಬೆಸಸೆಂದನಾ +ಕರ್ಣ

ಅಚ್ಚರಿ:
(೧) ಅಗ್ನಿ, ವರುಣ, ಕುಬೇರನನ್ನು ಕರೆದ ಪರಿ – ಶಿಖಿ, ಜಲಧಿಪ, ಧನದ
(೨) ಅಮರಾವತಿ ಎಂದು ಕರೆಯಲು – ಸುರರಾಯನೂರು
(೩) ಗಂಧರ್ವರೆಂದು ಹೇಳಲು – ಹಾಡುಗರು ಪದದ ಬಳಕೆ

ಪದ್ಯ ೧: ದುರ್ಯೋಧನನು ಯಾವ ಸ್ಥಿತಿಯಲ್ಲಿದ್ದನು?

ಕೇಳು ಜನಮೇಜಯ ಧರಿತ್ರೀ
ಪಾಲ ವನಪಾಲಕರ ಜಗಳದೊ
ಳಾಳು ನೊಂದುದು ಧರೆಗೆ ಬಿದ್ದುದು ತೋಟಿ ತೋಹಿನಲಿ
ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸುಯ್ಲುದುಗುಡದ
ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ (ಅರಣ್ಯ ಪರ್ವ, ೨೦ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಕೌರವರ ಸೈನ್ಯ ಮತ್ತು ಗಂಧರ್ವರ ಸೈನ್ಯದೊಡನೆ ಯುದ್ಧವಾಗಿ ಕೌರವರ ಸೈನ್ಯದವರು ಬಹಳ ನೊಂದರು, ಧರೆಗೆ ಉರುಳಿ ಗತಪ್ರಾಣರಾಗಿ ಒರಗಿದರು. ಈ ಸುದ್ದಿಯು ಕೌರವನ ಕಿವಿಗೆ ಬೀಳಲು, ಆತನು ಕಣ್ಣನ್ನು ಕೆಳನೋಟದಲ್ಲಿರಿಸಿ, ದುಃಖ ಜಾಲಕ್ಕೋಳಗಾಗಿ ನಿಟ್ಟುಸಿರು ಬಿಟ್ಟು ಸ್ತಬ್ಧಮನದಿಂದ ಕುಳಿತಿದ್ದನು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ವನ: ಕಾಡು; ಪಾಲಕ: ಒಡೆಯ; ಜಗಳ: ಕಾದಾಟ; ಆಳು: ಭಟರು; ನೊಂದು: ಕೊರಗು, ಪೆಟ್ಟುತಿಂದು; ಧರೆ: ಭೂಮಿ; ಬಿದ್ದು: ಬೀಳು, ಕುಸಿ; ತೋಟಿ: ಕಲಹ, ಜಗಳ; ತೋಹು: ತೋಪು; ಆಲಿ: ಕಣ್ಣು; ಕೀಳ್ನೋಟ: ಕೆಳಕ್ಕೆ ನೋಡು; ಮೌಳಿ: ಶಿರ; ಉಬ್ಬೆ: ಉದ್ವೇಗ, ಸಂಕಟ; ಸುಯ್ಲು: ನಿಟ್ಟುಸಿರು; ದುಗುಡ: ದುಃಖ; ಜಾಳಿ: ಜಾಲ, ಬಲೆ; ಜಡ: ಅಚೇತನವಾದುದು; ಮನ: ಮನಸ್ಸು; ರಾಯ: ರಾಜ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ವನಪಾಲಕರ+ ಜಗಳದೊಳ್
ಆಳು +ನೊಂದುದು +ಧರೆಗೆ +ಬಿದ್ದುದು +ತೋಟಿ +ತೋಹಿನಲಿ
ಆಲಿಗಳ+ ಕೀಳ್ನೋಟದ್+ಒಲಹಿನ
ಮೌಳಿ+ಉಬ್ಬೆಯ +ಸುಯ್ಲು+ದುಗುಡದ
ಜಾಳಿಗೆಯ +ಜಡಮನದಲ್+ಇದ್ದನು +ಕೌರವರ+ ರಾಯ

ಅಚ್ಚರಿ:
(೧) ಕೌರವನ ಸ್ಥಿತಿಯನ್ನು ಹೇಳುವ ಪರಿ – ಆಲಿಗಳ ಕೀಳ್ನೋಟದೊಲಹಿನ
ಮೌಳಿಯುಬ್ಬೆಯ ಸುಯ್ಲುದುಗುಡದ ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ

ನುಡಿಮುತ್ತುಗಳು: ಅರಣ್ಯ ಪರ್ವ ೨೦ ಸಂಧಿ

  • ಆಲಿಗಳ ಕೀಳ್ನೋಟದೊಲಹಿನ ಮೌಳಿಯುಬ್ಬೆಯ ಸುಯ್ಲುದುಗುಡದ ಜಾಳಿಗೆಯ ಜಡಮನದಲಿದ್ದನು ಕೌರವರ ರಾಯ – ಪದ್ಯ ೨
  • ಛತ್ರ ಚಮರವಿತಾನದಲಿ ನಭವಿಲ್ಲ; ಮೈನುಸುಳ ಕಾಣೆನು ಸಮೀರನ; ಭಾನು ಕಿರಣದ ಸುಳಿವನೀಶ್ವರತಾನೆ ಬಲ್ಲನು – ಪದ್ಯ ೯
  • ತಿನ್ನಡಗ ಕೊಯ್ನೆಣನ ಮನುಜರಬೆನ್ನಲುಗಿ ತನಿಗರುಳನ್ – ಪದ್ಯ ೧೦
  • ಉಬ್ಬೆದ್ದು ಗಗನವನಡರ್ವ ತೇರುಗಳ – ಪದ್ಯ ೧೨
  • ಸುರಿಯಲರುಣಾಂಬುಗಳ ನದಿಹೊರಮರಿಯೆ – ಪದ್ಯ ೧೩
  • ದಿವಿಜಾನೀಕದಲಿ ಧಕ್ಕಡರು ದೂವಾಳಿಸಿತು ಯಮಪುರಕೆ – ಪದ್ಯ ೧೪
  • ತೋಕಿದವು ನಾರಾಚ ದಶದಿಶೆ ಯೋಕರಿಸಿದವೊ ಸರಳನೆನೆ – ಪದ್ಯ ೧೪
  • ಕುರುಹಿನವರಪ್ಪಿದರು ಖಚರೀಜನದ ಕುಚಯುಗವ – ಪದ್ಯ ೧೫
  • ದನುಜರಿಪುಗಳ ದೆಸೆಗಳಳಿದವೆ – ಪದ್ಯ ೧೬
  • ನೆರೆ ತೋಕಿದನು ಗಂಧರ್ವ ಬಲಜಲಧಿಯನು ನಿಮಿಷದಲಿ – ಪದ್ಯ ೧೭
  • ಹುಲುಭಟರ ಹುರಿದೀ ಪ್ರತಾಪಾನಳನ ಸೆಗಳಿನಲಿ ಅಳುಕುವುದೆ ಖಚರೇಂದ್ರ ಜಲಧರ – ಪದ್ಯ ೧೯
  • ವಾಚಾಳತನಕೇನೊರೆವೆ ನಟರಿಗೆ ಮುಖ್ಯವಿದ್ಯೆಯಲ – ಪದ್ಯ ೨೦
  • ಪೂತು ಮಝ ಮರ್ತ್ಯರಲಿ ಬಿಲ್ವಿದ್ಯಾತಿಶಯ ಕಿರಿದುಂಟಲಾ – ಪದ್ಯ ೨೧
  • ದಿಗುಜಾತವಂಬಿನಲಡಗೆರಿಪುಶರಜಾತವನು ಹರೆಗಡಿದು – ಪದ್ಯ ೨೧
  • ಹೊಸ ಚಾಪದಲಿ ಕಲಿ ಚಿಮ್ಮಿದನು ಚಾಮೀಕರ ಸುರೇಖಾವಳಿ ಶಿಲೀಮುಖವ – ಪದ್ಯ ೨೨
  • ಸರಿಗಮಪದನಿಗಳ ಸರವಲ್ಲಲಾ – ಪದ್ಯ ೨೨
  • ನೊರಜಿನೆರಕೆಯ ಗಾಳಿಯಲಿ ಹೆಮ್ಮರದ ಮೊದಲಳುಕುವುದೆ – ಪದ್ಯ ೨೫
  • ಶರನಿಧಿಗೆ ಬಡಬಾಗ್ನಿ ಮುನಿವವೊಲುರವಣಿಪ ಹೆಬ್ಬಲವ- ಪದ್ಯ ೨೫
  • ಎರಡು ಬಲದುಬ್ಬರದ ಬೊಬ್ಬೆಗೆ ಬಿರಿದುದವನಿತಳ – ಪದ್ಯ ೨೮
  • ಬಗಿವ ಸಬಳದ ಲೋಟಿಸುವ ಲೌಡಿಗಳ ಚಿಮ್ಮುವ ಸುರಗಿಗಳ ಕಾಳಗದ ರೌದ್ರಾಟೋಪವಂಜಿಸಿತಮರರಾಲಿಗಳ – ಪದ್ಯ ೨೯
  • ಓಡಿದರೆ ಹಾವಿಂಗೆ ಹದ್ದಿನ ಕೂಡೆ ಮರುಕವೆ – ಪದ್ಯ ೩೨
  • ಗಿಳಿಯ ಹಿಂಡಿನ ಮೇಲೆ ಗಿಡುಗನ ಬಳಗ ಕವಿವಂದದಲಿ – ಪದ್ಯ ೩೩
  • ಕೆತ್ತಿದನು ಕೂರಲಗಿನಲಿ ಮುಳುಮುತ್ತ ಹೂತಂದದಲಿ – ಪದ್ಯ ೩೯
  • ನೊಂದದುಬ್ಬಿತು ದರ್ಪಶಿಖಿ ಖತಿಯಿಂದ ಮನದುಬ್ಬಿನಲಿ ಘಾತದ ಕಂದುಕದವೋಲ್ ಕುಣಿದುದಂತಃಖೇದ ಕೊಬ್ಬಿನಲಿ – ಪದ್ಯ ೪೦
  • ಎರಡನೊಂದಂಬಿನಲಿ ಕಡಿದನು ಜಡಿದನಿನಸುತನ – ಪದ್ಯ ೪೨
  • ಬಿಡುರಥದ ಧಟ್ಟಣೆಯ ಧಾಳಿಯಕಡುಗುದುರೆಗಳ ನೆತ್ತಿಯಂಕುಶದೆಡೆಯಘಟೆಯಾನೆಗಳ ದಳ ಸಂದಣಿಸಿತೊಗ್ಗಿನಲಿ – ಪದ್ಯ ೪೯
  • ದಾಟಿತರಸನ ಧೈರ್ಯ ಕೈದುಗಳಾಟ ನಿಂದುದು ಕರದ ಹೊಯ್ಲಲಿ – ಪದ್ಯ ೫೧
  • ಕೆಟ್ಟುದೀ ಕುರುಪತಿಯ ದಳ ಜಗಜಟ್ಟಿಗಳು ಕರ್ಣಾದಿಗಳು ಮುಸುಕಿಟ್ಟು ಜಾರಿತು ಕಂಡದೆಸೆಗ್ – ಪದ್ಯ ೫೭
  • ಚಿತ್ತದ ಚಾವಡಿಯಲೋಲೈಸಿಕೊಂಡರು – ಪದ್ಯ ೫೯

ಪದ್ಯ ೪೪: ದುರ್ಯೋಧನನೇಕೆ ಆಶ್ಚರ್ಯಗೊಂಡ?

ಮುರಿದು ಬರುತಿದೆ ಜೀಯ ನಾಯಕ
ರುರಿವವರ ಬಲುಗಾಯದಲಿ ಕು
ಕ್ಕುರಿಸಿದರು ಗಂಧರ್ವರಿಗೆ ಕಡೆವನದ ಕಾಹಿನಲಿ
ಮರಳಿ ಪಾಳೆಯ ಬಿಡಲಿ ಮೇಣ್ ಹಗೆ
ಯಿರಿತಕಂಗೈಸುವರು ಬಿಡು ಕೈ
ಮರೆಯಬೇಡೆನೆ ಬೆರಳ ಮೂಗಿನಲರಸ ಬೆರಗಾದ (ಅರಣ್ಯ ಪರ್ವ, ೧೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ದೂತರು, ಜೀಯ ನಮ್ಮವರು ಸೋತು ಹಿಮ್ಮೆಟ್ಟಿ ಬರುತ್ತಿದ್ದಾರೆ. ಗಂಧರ್ವರು ವನದ ಅಂಚಿನಲ್ಲಿ ಸಜ್ಜಾಗಿ ನಿಂತಿದ್ದಾರೆ. ನಮ್ಮವರು ಹೊಡೆತ ತಿಂದು ಕುಕ್ಕುರಿಸಿದ್ದಾರೆ. ಪಾಳೆಯ ಮರಳಲಿ ಅಥವಾ
ಶತ್ರುಗಳ ಹೊಡೆತವನ್ನು ಸೈರಿಸಿ ಗೆಲ್ಲಬಲ್ಲವರನ್ನು ಕಳಿಸು ಎಂದು ಭಟರು ಹೇಳಲು ಆಶ್ಚರ್ಯಚಕಿತನಾದ ದುರ್ಯೋಧನನು ತನ್ನ ಮೂಗಿನ ಮೇಲೆ ಬೆರಳಿಟ್ಟು ಕೊಂಡನು.

ಅರ್ಥ:
ಮುರಿ: ಸೀಳು; ಬರುತಿದೆ: ಆಗಮನ; ಜೀಯ: ಒಡೆಯ, ನಾಯಕ; ಬಲು: ತುಂಬ; ಗಾಯ: ಪೆಟ್ಟು; ಕುಕ್ಕುರಿಸು: ಬೀಳು, ಕೂತುಕೋ; ಕಡೆ: ಕೊನೆ; ವನ: ಕಾಡು; ಕಾಹಿ: ಕಾಯುವವ; ಮರಳಿ: ಪುನಃ; ಪಾಳೆ: ಪಾಳೆಯ, ಸೀಮೆ; ಬಿಡು: ತೊರೆ; ಮೇಣ್: ಅಥವಾ; ಹಗೆ: ವೈರತ್ವ; ತಿವಿ: ಚುಚ್ಚು; ಅಂಗೈಸು: ಸ್ವೀಕರಿಸು; ಬಿಡು: ತೊರೆ; ಕೈಮರೆ: ಕೈ ಅಡ್ಡವಾಗಿಡು; ಬೆರಳು: ಅಂಗುಲಿ; ಮೂಗು: ನಾಸಿಕ; ಅರಸ: ರಾಜ; ಬೆರಗು: ವಿಸ್ಮಯ, ಸೋಜಿಗ;

ಪದವಿಂಗಡಣೆ:
ಮುರಿದು +ಬರುತಿದೆ +ಜೀಯ +ನಾಯಕ
ರುರಿವವರ +ಬಲು+ಗಾಯದಲಿ+ ಕು
ಕ್ಕುರಿಸಿದರು+ ಗಂಧರ್ವರಿಗೆ +ಕಡೆ+ವನದ +ಕಾಹಿನಲಿ
ಮರಳಿ +ಪಾಳೆಯ +ಬಿಡಲಿ+ ಮೇಣ್ +ಹಗೆ
ಯಿರಿತಕ್+ ಅಂಗೈಸುವರು +ಬಿಡು +ಕೈ
ಮರೆಯಬೇಡ್+ಎನೆ +ಬೆರಳ+ ಮೂಗಿನಲ್+ಅರಸ +ಬೆರಗಾದ

ಅಚ್ಚರಿ:
(೧) ಆಶ್ಚರ್ಯವನ್ನು ಚಿತ್ರಿಸುವ ಪರಿ – ಬೆರಳ ಮೂಗಿನಲರಸ ಬೆರಗಾದ