ಪದ್ಯ ೩೪: ಗಂಧರ್ವರು ಕೌರವರನ್ನು ಯಾವ ಕ್ರೀಡೆಗೆ ಆಹ್ವಾನಿಸಿದರು?

ಬಂದ ಬಲ ಹೇರಾಳ ತೆಗೆತೆಗೆ
ಯೆಂದು ತೋಪಿನ ಕಡೆಗೆ ಹಾಯಿದು
ನಿಂದು ನೆರಹಿದರಕಟ ಗಂಧರ್ವರು ಭಟವ್ರಜವ
ಬಂದದು ನಡುವನಕೆ ಕೌರವ
ವೃಂದವನು ಕರೆದರು ವಿನೋದಕೆ
ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ (ಅರಣ್ಯ ಪರ್ವ, ೧೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ಬಹಳ ದೊಡ್ಡ ಸೈನ್ಯ ಬಂದಿದೆ ತೆಗೆಯಿರಿ, ಎಂದು ಗಂಧರ್ವರು ವನದ ನಡುವಿಗೆ ಹೋಗಿ ಗಂಧರ್ವರ ಸೈನ್ಯವನ್ನು ಒಟ್ಟುಗೂಡಿಸಿದರು. ಅವರು ವನದ ಮಧ್ಯ ಭಾಗಕ್ಕೆ ಬಂದು ಕೌರವರನ್ನು ವಿನೋದ ವಿಹಾರಕ್ಕೆ ಬಂದಿರಲ್ಲವೇ? ಇದೋ ಬಾಣಜಲದ ಕ್ರೀಡೆ ಎಂದು ಯುದ್ಧಕ್ಕೆ ಕರೆದರು.

ಅರ್ಥ:
ಬಂದು: ಆಗಮಿಸು; ಬಲ: ಸೈನ್ಯ; ಹೇರಾಳ: ದೊಡ್ಡ; ತೆಗೆ: ಹೊರತರು; ತೋಪು: ಗುಂಪು; ಕಡೆ: ಪಕ್ಕಕ್ಕೆ; ಹಾಯಿ: ಮೇಲೆಬೀಳು, ಚಾಚು; ನಿಂದು: ನಿಲ್ಲು; ನೆರೆಹಿಸು: ಒಟ್ಟುಗೂಡಿಸು; ಗಂಧರ್ವ: ದೇವತೆಗಳ ಒಂದು ಪಂಗಡ; ಭಟ: ಸೈನ್ಯ; ವ್ರಜ: ಗುಂಪು; ನಡು: ಮಧ್ಯ; ವನ: ಕಾಡು; ವೃಂದ: ಗುಂಪು; ಕರೆ: ಬರೆಮಾಡು; ವಿನೋದ: ಸಂತಸ; ನಾರಾಚ: ಬಾಣ, ಸರಳು; ಸಲಿಲ: ನೀರು; ಕ್ರೀಡೆ: ಆಟ;

ಪದವಿಂಗಡಣೆ:
ಬಂದ +ಬಲ +ಹೇರಾಳ +ತೆಗೆತೆಗೆ
ಎಂದು+ ತೋಪಿನ +ಕಡೆಗೆ +ಹಾಯಿದು
ನಿಂದು +ನೆರಹಿದರ್+ಅಕಟ +ಗಂಧರ್ವರು +ಭಟ+ವ್ರಜವ
ಬಂದದು +ನಡು+ವನಕೆ+ ಕೌರವ
ವೃಂದವನು +ಕರೆದರು +ವಿನೋದಕೆ
ಬಂದಿರೈ +ನಾರಾಚ+ಸಲಿಲ+ ಕ್ರೀಡೆಯಿದೆ+ಎನುತ

ಅಚ್ಚರಿ:
(೧) ಕ್ರೀಡೆಯ ಬಗ್ಗೆ ಹೇಳುವ ಪರಿ – ಕೌರವವೃಂದವನು ಕರೆದರು ವಿನೋದಕೆ
ಬಂದಿರೈ ನಾರಾಚಸಲಿಲ ಕ್ರೀಡೆಯಿದೆಯೆನುತ

ನಿಮ್ಮ ಟಿಪ್ಪಣಿ ಬರೆಯಿರಿ