ಪದ್ಯ ೧೦: ದ್ವಿಜರು ಯಾರಿಗೆ ದೂರು ನೀಡಲು ಯೋಚಿಸಿದರು?

ಕೆದರಿದರು ಗಡ್ಡವನುಪಾಧ್ಯರು
ಬೆದರಿನಿಂದರಿದೇನು ನೀವ್ ಮಾ
ಡಿದ ವಿಟಾಳವ ಹೇಳುವೆವು ಕುಂತೀಕುಮಾರರಿಗೆ
ಇದು ಮಹಾಮುನಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿ
ಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು (ಅರಣ್ಯ ಪರ್ವ, ೧೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಗಣಿಕೆಯರ ವರ್ತನೆಗಳನ್ನು ಕಂಡು, ಉಪಾಧ್ಯಾಯರು ತಮ್ಮ ಗಡ್ಡವನ್ನು ಕೆದರಿ, ಭಯಗೊಂಡು ನಿಂತು, ಇದೇನು, ನಿಮ್ಮ ದುಷ್ಕೃತ್ಯವನ್ನು ಕುಂತೀ ಕುಮಾರರಿಗೆ ಹೇಳುತ್ತೇವೆ. ಇದು ಮಹರ್ಷಿಗಳಿರುವ ಆಶ್ರಮ, ಇದರ ಶಿಷ್ಟಾಚಾರವನ್ನು ಕೆಡಿಸಿದವರೇ ನಾಶವಾಗುತ್ತಾರೆ, ಶಿವ ಶಿವಾ ಎಂದರು.

ಅರ್ಥ:
ಕೆದರು: ಹರಡು; ಗಡ್ಡ: ಗದ್ದದ ಮೇಲಿನ ಕೂದಲು, ದಾಡಿ; ಉಪಾಧ್ಯರು: ಆಚಾರ್ಯ; ಬೆದರು: ಹೆದರು; ವಿಟಾಳ: ಅಪವಿತ್ರತೆ, ಮಾಲಿನ್ಯ; ಹೇಳು: ತಿಳಿಸು; ಕುಮಾರ: ಮಕ್ಕಳು; ಮಹಾಮುನಿ: ಶ್ರೇಷ್ಠವಾದ ಋಷಿ; ಸೇವೆ: ಶುಶ್ರೂಷೆ, ಉಪಚಾರ; ಆಶ್ರಮ: ಕುಟೀರ; ಶಿಷ್ಟಾಚಾರ: ಒಳ್ಳೆಯ ನಡವಳಿಕೆ, ಸಂಪ್ರದಾಯ; ಕೆಡಿಸು: ಹಾಳುಮಾಡು; ಕ್ಷಯ: ನಾಶ, ಹಾಳಾಗುವಿಕೆ; ದ್ವಿಜ: ಬ್ರಾಹ್ಮಣ;

ಪದವಿಂಗಡಣೆ:
ಕೆದರಿದರು+ ಗಡ್ಡವನ್+ಉಪಾಧ್ಯರು
ಬೆದರಿ+ನಿಂದರ್+ಇದೇನು +ನೀವ್ +ಮಾ
ಡಿದ +ವಿಟಾಳವ +ಹೇಳುವೆವು +ಕುಂತೀ+ಕುಮಾರರಿಗೆ
ಇದು +ಮಹಾಮುನಿ +ಸೇವಿತ+ಆಶ್ರಮವ್
ಇದರ +ಶಿಷ್ಟಾಚಾರವನು+ ಕೆಡಿ
ಸಿದವರೇ +ಕ್ಷಯವಹರು+ ಶಿವಶಿವ+ಎಂದರಾ +ದ್ವಿಜರು

ಅಚ್ಚರಿ:
(೧) ತೊಂದರೆಗೆ ಒಳಗಾಗುವವರು ಎಂದು ಹೇಳುವ ಪರಿ – ಇದು ಮಹಾಮುನಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು

ನಿಮ್ಮ ಟಿಪ್ಪಣಿ ಬರೆಯಿರಿ