ಪದ್ಯ ೧೪: ಗಣಿಕೆಯರ ಪ್ರಾಬಲ್ಯವೇನು?

ಬಲುಮೊಲೆಯ ಸೋಂಕಿನಲಿ ಶಾಂತರ
ತಲೆಕೆಳಗ ಮಾಡುವೆವು ಕಡೆಗ
ಣ್ಣಲಗಿನಲಿ ಕೊಯ್ದೆತ್ತುವೆವು ವಿಜಿತೇಂದ್ರಿಯರ ಮನವ
ಎಳೆನಗೆಗಳಲಿ ವೇದ ಪಾಠರ
ಕಲಕಿ ಮಿಗೆ ವೇದಾಂತ ನಿಷ್ಠರ
ಹೊಳಸಿ ದುವ್ವಾಳಿಸುವೆವೆಮಗಿದಿರಾರು ಲೋಕದಲಿ (ಅರಣ್ಯ ಪರ್ವ, ೧೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಿರಿದಾದ ಮೊಲೆಗಳನ್ನು ಸೋಕಿಸಿ ಶಾಂತರಾದವರನ್ನು ತಲೆಕೆಳಗೆ ಮಾಡುತ್ತೇವೆ, ಜಿತೇಂದ್ರಿಯರ ಮನಸ್ಸನ್ನು ಕಡೆಗಣ್ಣಿನ ನೋಟದ ಕತ್ತಿಯಿಂದ ಕೊಯ್ದು ಎತ್ತುತ್ತೇವೆ, ಎಳೆನಗೆಗಳಿಂದ ವೇದಾಧ್ಯಯನ ಮಾದುವವರ ಮನಸ್ಸನ್ನು ಕಲಕುತ್ತೇವೆ. ವೇದಾಂತ ನಿಷ್ಠರನ್ನು ಚಲಿಸುವಂತೆ ಮಾಡಿ ಅವರ ನಿಷ್ಠೆಯನ್ನು ಓಡಿಸುತ್ತೇವೆ, ಈ ಲೋಕದಲ್ಲಿ ನಮ್ಮೆದುರು ನಿಲ್ಲುವವರಾರು ಎಂದು ತರುಣಿಯರು ಹೇಳಿದರು.

ಅರ್ಥ:
ಬಲು: ದೊಡ್ಡ; ಮೊಲೆ: ಸ್ತನ; ಸೋಂಕು: ತಾಗು, ಮುಟ್ಟು; ಶಾಂತ: ಪಂಚೇಂದ್ರಿಯಗಳನ್ನು ಗೆದ್ದವನು; ತಲೆಕೆಳಗೆ: ಉಲ್ಟ, ಮೇಲು ಕೀಳಾಗಿಸು; ಕಡೆಗಣ್ಣು: ಓರೆನೋಟ; ಅಲಗು: ಕತ್ತಿ; ಕೋಯ್ದು: ಸೀಳು; ಎತ್ತು: ಮೇಲೆ ತರು; ವಿಜಿತೇಂದ್ರಿಯ: ಇಂದ್ರಿಯವನ್ನು ಗೆದ್ದವನು; ಮನ: ಮನಸ್ಸು; ಎಳೆನಗೆ: ಮಂದಸ್ಮಿತ; ವೇದ: ಶೃತಿ; ಪಾಠ: ವಾಚನ; ಕಲಕು: ಅಲುಗಾಡಿಸು; ಮಿಗೆ: ಅಧಿಕ; ವೇದಾಂತ: ಉಪನಿಷತ್ತು; ನಿಷ್ಠ: ಶ್ರದ್ಧೆಯುಳ್ಳವನು; ಹೊಳಸು: ಅತ್ತಿತ್ತ ಓಡಾಡಿಸು; ದುವ್ವಾಳಿ: ತೀವ್ರಗತಿ, ವೇಗವಾದ ನಡೆ; ಇದಿರು: ಎದುರು ಬರುವವ; ಲೋಕ: ಜಗತ್ತು;

ಪದವಿಂಗಡಣೆ:
ಬಲು+ಮೊಲೆಯ +ಸೋಂಕಿನಲಿ +ಶಾಂತರ
ತಲೆಕೆಳಗ +ಮಾಡುವೆವು +ಕಡೆಗ
ಣ್ಣ+ಅಲಗಿನಲಿ +ಕೊಯ್ದ್+ಎತ್ತುವೆವು+ ವಿಜಿತೇಂದ್ರಿಯರ+ ಮನವ
ಎಳೆ+ನಗೆಗಳಲಿ +ವೇದ +ಪಾಠರ
ಕಲಕಿ +ಮಿಗೆ +ವೇದಾಂತ +ನಿಷ್ಠರ
ಹೊಳಸಿ +ದುವ್ವಾಳಿಸುವೆವ್+ಎಮಗಿದಿರಾರು +ಲೋಕದಲಿ

ಅಚ್ಚರಿ:
(೧) ಗಣಿಕೆಯರ ಆಯುಧಗಳು – ಬಲುಮೊಲೆ, ಕಡೆಗಣ್ಣ, ಎಳೆನಗೆ

ಪದ್ಯ ೧೩: ಗಣಿಕೆಯರು ಹೇಗೆ ಜಂಬದ ಮಾತನ್ನು ಆಡಿದರು?

ಒದೆದು ಪದದಲಿ ಕೆಂದಳಿರ ತೋ
ರಿದೆವಶೋಕೆಗೆ ಮದ್ಯಗಂಡೂ
ಷದಲಿ ಬಕುಳದ ಮರನ ಭುಲ್ಲವಿಸಿದೆವು ಕುರುವಕಕೆ
ತುದಿಮೊಲೆಯ ಸೋಂಕಿನಲಿ ಹೂದೋ
ರಿದೆವು ಕಣ್ಣೋರೆಯಲಿ ತಿಲಕವ
ಕದುಕಿದೆವು ನೀವಾವ ಘನಪದವೆಂದರಬಲೆಯರು (ಅರಣ್ಯ ಪರ್ವ, ೧೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅಶೋಕ ವೃಕ್ಷವನ್ನು ಕಾಲಲ್ಲೊದೆದು ಕೆಂದಳಿರು ಬರುವಂತೆ ಮಾಡಿದೆವು. ಮದ್ಯವನ್ನು ಕುಡಿದು ಮುಕ್ಕುಳಿಸಿ ಉಗುಳಿ ಬಕುಳ ವೃಕ್ಷವನ್ನು ಮೋಹಗೊಳಿಸಿದೆವು, ಮದರಂಗಿಗೆ ಮೊಲೆಯ ತುದಿಯನ್ನು ಸೋಕಿಸಿ ಹೂಬಿಡುವಂತೆ ಮಾಡಿದೆವು, ಓರೆನೋಟದಿಂದ ತಿಲಕ ವೃಕ್ಷವನ್ನು ಕಡೆದೆವು, ಇನ್ನು ನೀವು ಯಾವ ಘನ ಎಂದು ತಮ್ಮ ಬಗ್ಗೆ ಜಂಬದ ಮಾತುಗಳನ್ನು ಗಣಿಕೆಯರು ನುಡಿದರು.

ಅರ್ಥ:
ಒದೆ: ಕಾಲಿಂದ ತಳ್ಳು; ಪದ: ಚರಣ, ಕಾಲು; ಕೆಂದಳಿರ: ಕೆಂಪಾದ ಚಿಗುರು; ತೋರು: ಕಾಣಿಸು; ಮದ್ಯ: ಮಾದಕ ಪಾನೀಯ; ಗಂಡೂಷ: ಬಾಯಿ ಮುಕ್ಕುಳಿಸುವುದು; ಮರ: ತರು; ಭುಲ್ಲವಿಸು: ಅತಿಶಯಿಸು; ಕುರುವಕ: ಮದರಂಗಿ ಗಿಡ; ತುದಿ: ಅಗ್ರಭಾಗ; ಮೊಲೆ: ಸ್ತನ; ಸೋಂಕು: ತಾಗು, ಮುಟ್ಟು; ಹೂ: ಪುಷ್ಪ; ಕಣ್ಣು: ನಯನ; ಓರೆ: ವಕ್ರ, ಡೊಂಕು; ತಿಲಕ: ಮರದ ಹೆಸರು; ಘನ: ಶ್ರೇಷ್ಠ; ಅಬಲೆ: ಹೆಣ್ಣು;

ಪದವಿಂಗಡಣೆ:
ಒದೆದು +ಪದದಲಿ +ಕೆಂದಳಿರ+ ತೋ
ರಿದೆವ್+ಅಶೋಕೆಗೆ +ಮದ್ಯ+ಗಂಡೂ
ಷದಲಿ+ ಬಕುಳದ +ಮರನ +ಭುಲ್ಲವಿಸಿದೆವು +ಕುರುವಕಕೆ
ತುದಿ+ಮೊಲೆಯ +ಸೋಂಕಿನಲಿ+ ಹೂದೋ
ರಿದೆವು +ಕಣ್ಣೋರೆಯಲಿ+ ತಿಲಕವ
ಕದುಕಿದೆವು +ನೀವಾವ +ಘನಪದವೆಂದರ್+ಅಬಲೆಯರು

ಅಚ್ಚರಿ:
(೧) ಉಪಮಾನದ ಪ್ರಯೋಗಕ್ಕ್ ಬಳಸಿದ ಮರಗಳು – ಅಶೋಕ, ಬಕುಳ, ಕುರುವಕ, ತಿಲಕ

ಪದ್ಯ ೧೨: ಆಶ್ರಮವಾಸಿಗಳು ಗಣಿಕೆಯರನ್ನು ಏಕೆ ಬಯ್ದರು?

ಶಾಂತರುರೆ ವಿಜಿತೇಂದ್ರಿಯರು ವೇ
ದಾಂತ ನಿಷ್ಠರು ಸುವ್ರತಿಗಳ
ಶ್ರಾಂತವೇದಾಧ್ಯಯನ ಯಾಜ್ಞಿಕ ಕರ್ಮ ಕೋವಿದರು
ಸಂತತಾನುಷ್ಠಾನ ಪರರನ
ದೆಂತು ನೀವಾಕ್ರಮಿಸುವಿರಿ ವಿ
ಭ್ರಾಂತರೌ ನೀವೆನುತ ಜರೆದರು ಕಾಮಿನೀಜನವ (ಅರಣ್ಯ ಪರ್ವ, ೧೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶಾಮ್ತರು, ಜಿತೇಂದ್ರಿಯರು, ವೇದಾಮ್ತ ನಿಷ್ಠರು, ಒಳ್ಳೆಯ ವ್ರತಗಳಲ್ಲಿ ತತ್ಪರರು, ಬಿಡುವಿಲ್ಲದೆ ವೇದಾಧ್ಯಯನ ಮಾಡುವವರು, ಇಂತಹವರನ್ನು ನೀವು ಹೇಗೆ ಕೆಡಿಸುವಿರಿ, ನಿಮಿಗೆಲ್ಲೋ ಹುಚ್ಚು ಎಂದು ಆಶ್ರಮವಾಸಿಗಳು ಗಣಿಕೆಯರನ್ನು ಬಯ್ದರು.

ಅರ್ಥ:
ಶಾಂತ: ತಳಮಳವಿಲ್ಲದ; ಉರೆ: ಅತಿಶಯವಾಗಿ; ವಿಜಿತ: ಗೆದ್ದ; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ವೇದಾಂತ: ಉಪನಿಷತ್ತುಗಳು; ನಿಷ್ಠ:ಶ್ರದ್ಧೆಯುಳ್ಳವನು; ಸುವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು, ಯೋಗಿ; ಶ್ರಾಂತ: ದಣಿದುದು, ಆಯಾಸಗೊಂಡುದು; ವೇದ: ಶೃತಿ; ಅಧ್ಯಯನ: ಓದು; ಯಾಜ್ಞಿಕ: ಯಜ್ಞ ಮಾಡುವವ; ಕರ್ಮ: ಕಾರ್ಯ, ಕೆಲಸ; ಕೋವಿದ: ಪಂಡಿತ; ಸಂತತ: ನಿರಂತರವಾದುದು; ಅನುಷ್ಠಾನ: ಆಚರಣೆ; ಪರರ: ಬೇರೆ; ಆಕ್ರಮಿಸು: ದಾಳಿ ನಡೆಸುವುದು; ವಿಭ್ರಾಂತ: ಮರುಳ; ಜರೆ: ಬಯ್ಯುವುದು; ಕಾಮಿನಿ: ಹೆಣ್ಣು;

ಪದವಿಂಗಡಣೆ:
ಶಾಂತರ್+ಉರೆ +ವಿಜಿತ+ ಇಂದ್ರಿಯರು+ ವೇ
ದಾಂತ +ನಿಷ್ಠರು +ಸುವ್ರತಿಗಳ
ಶ್ರಾಂತ+ವೇದಾಧ್ಯಯನ +ಯಾಜ್ಞಿಕ +ಕರ್ಮ +ಕೋವಿದರು
ಸಂತತ+ಅನುಷ್ಠಾನ +ಪರರನ
ದೆಂತು +ನೀವ್+ಆಕ್ರಮಿಸುವಿರಿ +ವಿ
ಭ್ರಾಂತರೌ +ನೀವೆನುತ+ ಜರೆದರು+ ಕಾಮಿನೀ+ಜನವ

ಅಚ್ಚರಿ:
(೧) ಯಾರನ್ನು ಆಕ್ರಮಿಸಲು ಕಷ್ಟ: ಶಾಂತರು, ವಿಜಿತೇಂದ್ರಿಯರು, ವೇದಾಂತ ನಿಷ್ಠರು ಸುವ್ರತಿಗಳ,ಶ್ರಾಂತವೇದಾಧ್ಯಯನ ಯಾಜ್ಞಿಕ ಕರ್ಮ ಕೋವಿದರು

ಪದ್ಯ ೧೧: ಗಣಿಕೆಯರು ಹೇಗೆ ವಾದಿಸಿದರು?

ಹೇಳಿದರೆ ಕುಂತೀಕುಮಾರರು
ಕೇಳಿ ಮಾಡುವುದಾವುದೋ ವನ
ಪಾಲಕರು ತಾವಿಂದು ಪೃಥ್ವೀಪಾಲ ನಮ್ಮೊಡೆಯ
ಹೇಳಿ ಬಳಿಕರ್ಜುನನ ಭೀಮನ
ದಾಳಿಯನು ತರಲಹಿರೆನುತ ಘಾ
ತಾಳಿಯರು ಮುನಿಜನವ ಬೈದರು ಬಹುವಿಕಾರದಲಿ (ಅರಣ್ಯ ಪರ್ವ, ೧೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಋಷಿಮುನಿಗಳ ಮಾತನ್ನು ಕೇಳಿ ಆ ಗಣಿಕೆಯರು, ನೀವು ಹೇಳಿದರೆ ಏನು ಮಾಡಿದ ಹಾಗಾಯಿತು? ನಮ್ಮ ಒಡೆಯನೇ ರಾಜ. ಆದುದರಿಂದ ಈ ವನಕ್ಕೆ ನಾವೇ ಒಡೆಯರು ನೀವು ದೂರು ಕೊಟ್ಟು ಭೀಮಾರ್ಜುನರ ದಾಳಿಯನ್ನು ತರುತ್ತೀರೋ ತನ್ನಿ, ಎಂದು ಆ ಗಟ್ಟಿಗಿತ್ತಿಯರು ವಾದಿಸಿದರು.

ಅರ್ಥ:
ಹೇಳು: ತಿಳಿಸು; ಕೇಳು: ಆಲಿಸು; ವನ: ಕಾಡು; ಪಾಲಕ: ಒಡೆಯ; ಪೃಥ್ವೀಪಾಲ: ರಾಜ; ಪೃಥ್ವಿ: ಭೂಮಿ; ಒಡೆಯ: ನಾಯಕ; ದಾಳಿ: ಆಕ್ರಮಣ; ತರಲು: ಬರೆಮಾಡು; ಘಾತಾಳಿ: ಗಟ್ಟಿಗಿತ್ತಿ; ಮುನಿ: ಋಷಿ; ಬೈದು: ಜರೆದು; ವಿಕಾರ: ಮನಸ್ಸಿನ ವಿಕೃತಿ;

ಪದವಿಂಗಡಣೆ:
ಹೇಳಿದರೆ +ಕುಂತೀಕುಮಾರರು
ಕೇಳಿ +ಮಾಡುವುದಾವುದೋ +ವನ
ಪಾಲಕರು+ ತಾವಿಂದು +ಪೃಥ್ವೀಪಾಲ+ ನಮ್ಮೊಡೆಯ
ಹೇಳಿ +ಬಳಿಕ್+ಅರ್ಜುನನ +ಭೀಮನ
ದಾಳಿಯನು +ತರಲಹಿರೆನುತ+ ಘಾ
ತಾಳಿಯರು +ಮುನಿಜನವ+ ಬೈದರು +ಬಹು+ವಿಕಾರದಲಿ

ಅಚ್ಚರಿ:
(೧) ಗಣಿಕೆಯರನು ಕರೆದ ಪರಿ – ಘಾತಾಳಿಯರು ಮುನಿಜನವ ಬೈದರು ಬಹುವಿಕಾರದಲಿ
(೨) ಪಾಲಕ, ಒಡೆಯ, ಪಾಲ – ಸಾಮ್ಯಾರ್ಥ ಪದಗಳು

ಪದ್ಯ ೧೦: ದ್ವಿಜರು ಯಾರಿಗೆ ದೂರು ನೀಡಲು ಯೋಚಿಸಿದರು?

ಕೆದರಿದರು ಗಡ್ಡವನುಪಾಧ್ಯರು
ಬೆದರಿನಿಂದರಿದೇನು ನೀವ್ ಮಾ
ಡಿದ ವಿಟಾಳವ ಹೇಳುವೆವು ಕುಂತೀಕುಮಾರರಿಗೆ
ಇದು ಮಹಾಮುನಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿ
ಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು (ಅರಣ್ಯ ಪರ್ವ, ೧೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಗಣಿಕೆಯರ ವರ್ತನೆಗಳನ್ನು ಕಂಡು, ಉಪಾಧ್ಯಾಯರು ತಮ್ಮ ಗಡ್ಡವನ್ನು ಕೆದರಿ, ಭಯಗೊಂಡು ನಿಂತು, ಇದೇನು, ನಿಮ್ಮ ದುಷ್ಕೃತ್ಯವನ್ನು ಕುಂತೀ ಕುಮಾರರಿಗೆ ಹೇಳುತ್ತೇವೆ. ಇದು ಮಹರ್ಷಿಗಳಿರುವ ಆಶ್ರಮ, ಇದರ ಶಿಷ್ಟಾಚಾರವನ್ನು ಕೆಡಿಸಿದವರೇ ನಾಶವಾಗುತ್ತಾರೆ, ಶಿವ ಶಿವಾ ಎಂದರು.

ಅರ್ಥ:
ಕೆದರು: ಹರಡು; ಗಡ್ಡ: ಗದ್ದದ ಮೇಲಿನ ಕೂದಲು, ದಾಡಿ; ಉಪಾಧ್ಯರು: ಆಚಾರ್ಯ; ಬೆದರು: ಹೆದರು; ವಿಟಾಳ: ಅಪವಿತ್ರತೆ, ಮಾಲಿನ್ಯ; ಹೇಳು: ತಿಳಿಸು; ಕುಮಾರ: ಮಕ್ಕಳು; ಮಹಾಮುನಿ: ಶ್ರೇಷ್ಠವಾದ ಋಷಿ; ಸೇವೆ: ಶುಶ್ರೂಷೆ, ಉಪಚಾರ; ಆಶ್ರಮ: ಕುಟೀರ; ಶಿಷ್ಟಾಚಾರ: ಒಳ್ಳೆಯ ನಡವಳಿಕೆ, ಸಂಪ್ರದಾಯ; ಕೆಡಿಸು: ಹಾಳುಮಾಡು; ಕ್ಷಯ: ನಾಶ, ಹಾಳಾಗುವಿಕೆ; ದ್ವಿಜ: ಬ್ರಾಹ್ಮಣ;

ಪದವಿಂಗಡಣೆ:
ಕೆದರಿದರು+ ಗಡ್ಡವನ್+ಉಪಾಧ್ಯರು
ಬೆದರಿ+ನಿಂದರ್+ಇದೇನು +ನೀವ್ +ಮಾ
ಡಿದ +ವಿಟಾಳವ +ಹೇಳುವೆವು +ಕುಂತೀ+ಕುಮಾರರಿಗೆ
ಇದು +ಮಹಾಮುನಿ +ಸೇವಿತ+ಆಶ್ರಮವ್
ಇದರ +ಶಿಷ್ಟಾಚಾರವನು+ ಕೆಡಿ
ಸಿದವರೇ +ಕ್ಷಯವಹರು+ ಶಿವಶಿವ+ಎಂದರಾ +ದ್ವಿಜರು

ಅಚ್ಚರಿ:
(೧) ತೊಂದರೆಗೆ ಒಳಗಾಗುವವರು ಎಂದು ಹೇಳುವ ಪರಿ – ಇದು ಮಹಾಮುನಿ ಸೇವಿತಾಶ್ರಮ
ವಿದರ ಶಿಷ್ಟಾಚಾರವನು ಕೆಡಿಸಿದವರೇ ಕ್ಷಯವಹರು ಶಿವಶಿವಯೆಂದರಾ ದ್ವಿಜರು

ಪದ್ಯ ೯: ವಟುಗಳೇಕೆ ಓಡಿದರು?

ರಾಯರೆಂಬುವರಿಲ್ಲಲಾ ಸ್ವಾ
ಧ್ಯಾಯ ಕೆಟ್ಟುದು ಮುಟ್ಟಿದರು ಪಾ
ಧ್ಯಾಯರನು ಶೂದ್ರೆಯರು ಸೆಳೆದರು ಮೌಂಜಿಮೇಖಲೆಯ
ಹಾಯಿದರು ಯಜ್ಞೋಪವೀತಕೆ
ಬಾಯಲೆಂಜಲಗಿಡಿಯ ಬಗೆದರ
ಲಾಯೆನುತ ಬಿಟ್ಟೋಡಿದರು ಸುಬ್ರಹ್ಮಚಾರಿಗಳು (ಅರಣ್ಯ ಪರ್ವ, ೧೯ ಸಂಧಿ, ೯ ಪದ್ಯ)

ತಾತ್ಪರ್ಯ:
ರಾಜರೆಂಬುವರು ಇಲ್ಲವಾದರು, ನಮ್ಮ ಸ್ವಾಧ್ಯಾಯ ಕೆಟ್ಟು ಹೋಯಿತು. ಶೂದ್ರಿಯರು ನಮ್ಮ ಉಪಾಧ್ಯಾಯರನ್ನು ಮುಟ್ಟಿದರು. ಉಡಿದಾರವನ್ನೆಳೆದರು. ಬಾಯಲ್ಲಿ ಎಂಜಲನ್ನು ಹಾಕಲು ಯತ್ನಿಸಿದರು ಎಂದು ಒರಲುತ್ತಾ ಬ್ರಹ್ಮಚಾರಿಗಳು ಓಡಿ ಹೋದರು.

ಅರ್ಥ:
ರಾಯ: ರಾಜ; ಸ್ವಾಧ್ಯಾಯ: ಸ್ವಂತ ಓದುವಿಕೆ; ಕೆಟ್ಟು: ಹಾಳು; ಮುಟ್ಟು: ತಗುಲು; ಉಪಾಧ್ಯಾಯ: ಗುರು; ಶೂದ್ರೆ: ಗಣಿಕೆ; ಸೆಳೆ: ಆಕರ್ಷಿಸು; ಮೌಂಜಿ: ಮುಂಜೆ ಹುಲ್ಲಿನಿಂದ ಮಾಡಿದ ಉಡಿದಾರ, ಕಟಿಸೂತ್ರ; ಮೇಖಲೆ: ಮಂಜೆಹುಲ್ಲಿನ ಉಡಿದಾರ, ನಡುಕಟ್ಟು; ಹಾಯಿ: ಮೇಲೆಬೀಳು, ಚಾಚು; ಯಜ್ಞೋಪವೀತ: ಜನಿವಾರ; ಎಂಜಲು: ಬಾಯಿಂದ ಹೊರಬರುವ ರಸ; ಬಗೆ:ಕ್ರಮ, ಉಪಾಯ; ಓಡು: ಧಾವಿಸು; ಬ್ರಹ್ಮಚಾರಿ: ವಟು;

ಪದವಿಂಗಡಣೆ:
ರಾಯರೆಂಬುವರ್+ಇಲ್ಲಲಾ +ಸ್ವಾ
ಧ್ಯಾಯ +ಕೆಟ್ಟುದು +ಮುಟ್ಟಿದರ್+ಉಪಾ
ಧ್ಯಾಯರನು +ಶೂದ್ರೆಯರು +ಸೆಳೆದರು +ಮೌಂಜಿ+ಮೇಖಲೆಯ
ಹಾಯಿದರು +ಯಜ್ಞೋಪವೀತಕೆ
ಬಾಯಲ್+ಎಂಜಲ+ಕಿಡಿಯ +ಬಗೆದರ
ಲಾ+ಎನುತ +ಬಿಟ್ಟೋಡಿದರು +ಸುಬ್ರಹ್ಮಚಾರಿಗಳು

ಅಚ್ಚರಿ:
(೧) ಮುತ್ತು ನೀಡಿದರು ಎಂದು ಹೇಳುವ ಪರಿ – ಬಾಯಲೆಂಜಲಗಿಡಿಯ ಬಗೆದರಲಾ

ಪದ್ಯ ೮: ಗಣಿಕೆಯರು ಮುನಿ ಮತ್ತು ವಟುಗಳಿಗೆ ಏನು ಮಾಡಿದರು?

ಸೃಕ್ ಸೃವವ ಮುಟ್ಟಿದರು ಧೌತಾಂ
ಶುಕದೊಳಗೆ ತಂಬುಲವ ಕಟ್ಟಿದ
ರಕಟುಪಾಧ್ಯರ ಮೋರೆಯನು ತೇಡಿಸುವ ಬೆರಳಿನಲಿ
ಚಕಿತ ಧೃತಿಯರು ದೀಕ್ಷಿತರ ಚಂ
ಡಿಕೆಗಳನು ತುಡುಕಿದರು ಮುನಿವಟು
ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ (ಅರಣ್ಯ ಪರ್ವ, ೧೯ ಸಂಧಿ, ೮ ಪದ್ಯ)

ತಾತ್ಪರ್ಯ:
ಸೃಕ್ ಸೃವ ಮುಂತಾದ ಹೋಮ ಸಾಧನಗಳನ್ನು ಮುಟ್ಟಿದರು. ಒಗೆದ ಮಡಿ ಬಟ್ಟೆಗಳಲ್ಲಿ ತಂಬುಲವನ್ನು ಕಟ್ಟಿದರು. ಉಪಾಧ್ಯಾಯರ ಮುಖಗಳನ್ನು ಬೆರಳಿನಿಂದ ಚಿವುಟಿದರು. ವಿಸ್ಮಯಕರ ಮನಸ್ಸುಳ್ಳ ಅವರು ಯಜ್ಞ ದೀಕ್ಷಿತರ ಚಂಡಿಕೆಗಳನ್ನು ತುಡುಕಿದರು. ಮುನಿವಟುಗಳ ತಲೆಯ ಮೇಲೆ ತಮ್ಮ ನೀಚವಾದ ಬೆರಳುಗಳನ್ನು ಕುಣಿಸಿದರು.

ಅರ್ಥ:
ಸೃಕ್: ಹೂವು; ಹೋಮಾದಿಗಳಲ್ಲಿ ಆಹುತಿ ಹಾಕಲು ಉಪಯೋಗಿಸುವ ಮರದ ಸೌಟು; ಸೃವ: ಹೋಮ ಸಾಧನಗಳು; ಮುಟ್ಟು: ತಗಲು; ಧೌತ: ಬಿಳಿ, ಶುಭ್ರ; ಅಂಶು: ಉಡುಪು; ತಂಬುಲ: ಎಲೆ ಅಡಿಕೆ; ಕಟ್ಟು: ಹೂಡು, ಬಂಧಿಸು; ಉಪಾಧ್ಯಾಯ: ಗುರು, ಆಚಾರ್ಯ; ಮೋರೆ: ಮುಖ; ತೇಡಿಸು: ತಿಕ್ಕು, ಉಜ್ಜು; ಬೆರಳು: ಅಂಗುಲಿ; ಚಕಿತ: ಬೆರಗುಗೊಂಡ; ಧೃತಿ:ಧೈರ್ಯ, ಧೀರತನ, ಕೆಚ್ಚು; ದೀಕ್ಷಿತ: ದೀಕ್ಷೆಯನ್ನು ಪಡೆದವ್; ಚಂಡಿಕೆ: ಜುಟ್ಟು, ಶಿಖೆ; ತುಡುಕು: ಹೋರಾಡು, ಸೆಣಸು; ಮುನಿ: ಋಷಿ; ವಟು: ಬಾಲಕ, ಹುಡುಗ; ನಿಕರ: ಗುಂಪು; ಶಿರ: ತಲೆ; ಕುಣಿಸು: ನೆಗೆದಾಡು; ಕುಂಚಿತ: ಬಾಗಿದ; ಕರಾಂಗುಲಿ: ಹಸ್ತದ ಬೆರಳುಗಳು;

ಪದವಿಂಗಡಣೆ:
ಸೃಕ್+ ಸೃವವ+ ಮುಟ್ಟಿದರು +ಧೌತಾಂ
ಶುಕದೊಳಗೆ +ತಂಬುಲವ +ಕಟ್ಟಿದರ್
ಅಕಟ+ಉಪಾಧ್ಯರ+ ಮೋರೆಯನು +ತೇಡಿಸುವ+ ಬೆರಳಿನಲಿ
ಚಕಿತ +ಧೃತಿಯರು +ದೀಕ್ಷಿತರ +ಚಂ
ಡಿಕೆಗಳನು +ತುಡುಕಿದರು +ಮುನಿ+ವಟು
ನಿಕರ+ ಶಿರದಲಿ +ಕುಣಿಸಿದರು+ ಕುಂಚಿತ +ಕರಾಂಗುಲಿಯ

ಅಚ್ಚರಿ:
(೧) ಗಣಿಕೆಯರ ಚೆಲ್ಲಾಟದ ಚಿತ್ರಣ – ಚಕಿತ ಧೃತಿಯರು ದೀಕ್ಷಿತರ ಚಂಡಿಕೆಗಳನು ತುಡುಕಿದರು; ಮುನಿವಟು ನಿಕರ ಶಿರದಲಿ ಕುಣಿಸಿದರು ಕುಂಚಿತ ಕರಾಂಗುಲಿಯ