ಪದ್ಯ ೨೪: ಭೀಷ್ಮಾದಿಗಳು ಕುರುಪತಿಗೆ ಏನು ಸಲಹೆ ನೀಡಿದರು?

ಪರಿಮಿತದಲೀ ವಾರ್ತೆ ನೆಗಳಿದು
ದರಮನೆಯಲಿದನೈದೆ ಕೇಳಿದು
ಗುರುವಿದುರ ಗಾಂಗೇಯ ಕೃಪರಳಲಿದರು ತಮ್ಮೊಳಗೆ
ಕರೆಸಿ ನುಡಿದರು ಕರ್ಣ ಸೌಬಲ
ಕುರುಪತಿಗಳಿಗೆ ಘೋಷಯಾತ್ರಾ
ಭರವನರಿದೆವು ಹೋಹುದನುಚಿತವೆಂದರನಿಬರಿಗೆ (ಅರಣ್ಯ ಪರ್ವ, ೧೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕುರುಪತಿಯು ಘೋಷಯಾತ್ರೆಗೆ ತೆರಳುವ ಸುದ್ಧಿಯು ಅರಮನೆಯಲ್ಲಿ ಮೆಲ್ಲ ಮೆಲ್ಲನೆ ಹರಡಿತು. ಈ ವಾರ್ತೆಯನ್ನು ಕೇಳಿ ದ್ರೋಣ, ವಿದುರ, ಭೀಷ್ಮ, ಕೃಪರು ಚಿಂತೆ ಮಾಡಿದರು. ಕರ್ಣ, ಶಕುನಿ ದುರ್ಯೋಧನನನ್ನು ಕರೆಸಿ, ನೀವು ಗೊಲ್ಲರಹಟ್ಟಿಗೆ ಹೋಗುವ ಭರದಲ್ಲಿರುವಿರೆಂದು ತಿಳಿಯಿತು. ನೀವು ಘೋಷಯಾತ್ರೆಗೆ ಹೋಗುವುದು ಸರಿಯಲ್ಲ ಎಂದು ಅವರು ತಿಳಿಸಿದರು.

ಅರ್ಥ:
ಪರಿಮಿತ: ಮಿತ, ಸ್ವಲ್ಪ; ವಾರ್ತೆ: ವಿಚಾರ; ನೆಗಳು: ಪ್ರಸಿದ್ಧಿಗೊಳಿಸು; ಅರಮನೆ: ರಾಜರ ಆಲಯ; ಐದು: ಬಂದು ಸೇರು; ಕೇಳು: ಆಲಿಸು; ಗುರು: ಆಚಾರ್ಯ; ಅಳಲು: ದುಃಖಿಸು, ಕಷ್ಟ; ಕರೆಸು: ಬರೆಮಾಡು; ನುಡಿ: ಮಾತಾಡು; ಘೋಷ: ಗಟ್ಟಿಯಾದ ಶಬ್ದ; ಯಾತ್ರೆ: ಪ್ರಯಾಣ; ಭರ: ವೇಗ; ಅರಿ: ತಿಳಿ; ಹೋಹುದು: ತೆರಳು; ಅನುಚಿತ: ಸರಿಯಲ್ಲದ; ಅನಿಬರು: ಅಷ್ಟುಜನ;

ಪದವಿಂಗಡಣೆ:
ಪರಿಮಿತದಲ್+ಈ+ ವಾರ್ತೆ +ನೆಗಳಿದುದ್
ಅರಮನೆಯಲ್+ಇದನೈದೆ+ ಕೇಳಿದು
ಗುರು+ವಿದುರ+ ಗಾಂಗೇಯ +ಕೃಪರ್+ಅಳಲಿದರು +ತಮ್ಮೊಳಗೆ
ಕರೆಸಿ+ ನುಡಿದರು +ಕರ್ಣ +ಸೌಬಲ
ಕುರುಪತಿಗಳಿಗೆ +ಘೋಷ+ಯಾತ್ರಾ
ಭರವನ್+ಅರಿದೆವು+ ಹೋಹುದ್+ಅನುಚಿತವ್+ಎಂದರ್+ಅನಿಬರಿಗೆ

ಅಚ್ಚರಿ:
(೧) ೪ ಜನರ ಹೆಸರನ್ನು ಒಮ್ಮೆಲೆ ಬಳಸಿರುವ ಪರಿ – ಗುರುವಿದುರ ಗಾಂಗೇಯ ಕೃಪರ

ನಿಮ್ಮ ಟಿಪ್ಪಣಿ ಬರೆಯಿರಿ