ಪದ್ಯ ೨೩: ದುರ್ಯೋಧನನು ಧೃತರಾಷ್ಟ್ರನನ್ನು ಹೇಗೆ ಒಪ್ಪಿಸಿದರು?

ಹೂಣೆ ಹೊಗೆವವರೊಡನೆ ಸೆಣಸಿನ
ಸಾಣೆಯಿಕ್ಕೆವು ಮಸೆವ ಕದನವ
ಕಾಣೆವೆಮ್ಮರಿಕೆಯಲಿ ಸಲುಗೆಯ ಸಾಧು ಸಾಮದಲಿ
ರಾಣಿಯರ ರಹಿಯಿಂದ ರಂಜಿಸಿ
ಜಾಣಿನಲಿ ಬಹೆವರಸ ನಿಮ್ಮಡಿ
ಯಾಣೆಯೆಂದೊಡಬಡಿಸಿದರು ನೃಪ ಕರ್ಣ ಶಕುನಿಗಳು (ಅರಣ್ಯ ಪರ್ವ, ೧೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾವು ಅವರೊಡನೆ ಶಪಥ, ಕೋಪವನ್ನು ತಾಳುವುದಿಲ್ಲ. ಯುದ್ಧಕ್ಕೆ ಸಾಣೆ ಹಿಡಿಯುವುದಿಲ್ಲ. ಯುದ್ಧವು ನಮ್ಮ ಮನಸ್ಸಿನಲ್ಲೇ ಇಲ್ಲ. ಸ್ತ್ರೀಯರ ಸಂಗೀತಾದಿಗಳಿಂದ ಅವರ ಮನಸ್ಸನ್ನು ರಂಜಿಸಿ ಬರುತ್ತೇವೆ, ನಿಮ್ಮಾಣೆ ಎಂದು ದುರ್ಯೋಧನ, ಕರ್ಣ, ಶಕುನಿಗಳು ಧೃತರಾಷ್ಟ್ರನನ್ನು ಒಪ್ಪಿಸಿದರು.

ಅರ್ಥ:
ಹೂಣೆ: ಪ್ರತಿಜ್ಞೆ; ಹೊಗೆ: ಸಿಟ್ಟಿಗೇಳು; ಸೆಣಸು: ಹೋರಾಡು; ಸಾಣೆ: ಪರೀಕ್ಷಿಸುವ ಕಲ್ಲು; ಮಸೆ: ಉದ್ರೇಕ, ಆವೇಶ; ಕದನ: ಯುದ್ಧ; ಕಾಣೆ: ತೋರು; ಅರಿಕೆ: ವಿಜ್ಞಾಪನೆ; ಸಲುಗೆ: ಸದರ, ಪ್ರೀತಿಯ ನಡವಳಿಕೆ; ಸಾಧು: ಒಳ್ಳೆಯದು, ಸೌಮ್ಯವಾದುದು; ಸಾಮ: ಶಾಂತಗೊಳಿಸುವಿಕೆ; ರಾಣಿ: ಅರಸಿ; ರಹಿ: ಸಡಗರ, ಸಂಭ್ರಮ; ರಂಜಿಸು: ಸಂತೋಷಗೊಳಿಸು; ಜಾಣು: ಬುದ್ಧಿವಂತಿಕೆ; ಬಹೆ: ಬರುವೆವು, ಹಿಂದಿರುಗು; ಅರಸ: ರಾಜ; ನಿಮ್ಮಡಿ: ನಿಮ್ಮ ಚರಣ; ಆಣೆ: ಪ್ರಮಾಣ; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ಹೂಣೆ +ಹೊಗೆವ್+ಅವರೊಡನೆ +ಸೆಣಸಿನ
ಸಾಣೆಯಿಕ್ಕೆವು+ ಮಸೆವ +ಕದನವ
ಕಾಣೆವ್+ಎಮ್ಮರಿಕೆಯಲಿ+ ಸಲುಗೆಯ+ ಸಾಧು +ಸಾಮದಲಿ
ರಾಣಿಯರ +ರಹಿಯಿಂದ +ರಂಜಿಸಿ
ಜಾಣಿನಲಿ +ಬಹೆವ್+ಅರಸ +ನಿಮ್ಮಡಿ
ಆಣೆಯೆಂದ್+ಒಡಬಡಿಸಿದರು +ನೃಪ +ಕರ್ಣ +ಶಕುನಿಗಳು

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಲುಗೆಯ ಸಾಧು ಸಾಮದಲಿ
(೨) ರ ಕಾರದ ತ್ರಿವಳಿ ಪದ – ರಾಣಿಯರ ರಹಿಯಿಂದ ರಂಜಿಸಿ