ಪದ್ಯ ೨೦: ಕೌರವರು ಯಾವ ಉಪಾಯವನ್ನು ಮಾಡಿದರು?

ನಾಡೊಳಗೆ ತುರು ಹಟ್ಟಿಯಲಿ ಹೊಲ
ನಾಡಿ ಹೆಚ್ಚಿನ ಗೋಕದಂಬವ
ನೋಡುವುದು ನೆವೆ ಕುರುಪತಿಯ ಗಾಢದ ಸಗಾಢಿಕೆಯ
ನೋಡಿ ನಸಿಯಲಿ ಪಾಂಡುಸುತರವ
ರಾಡುಗಾಡಿನ ಹೊಲನ ಹೊರೆಯಲಿ
ಕೂಡೆ ತನು ಪರಿಮಳದಲರಮನೆಯಂಗನಾ ನಿವಹ (ಅರಣ್ಯ ಪರ್ವ, ೧೮ ಸಂಧಿ, ೨೦ ಪದ್ಯ)

ತಾತ್ಪರ್ಯ:
ಗೋಪಾಲಕರ ಹಟ್ತಿಯಲ್ಲಿ ಚೆನ್ನಾಗಿ ಮೇದು ಬೆಳೆದ ಗೋವುಗಳನ್ನು ನೋಡುವ ನೆವದಿಂದ ಪಾಂಡವರಿರುವ ಕಾಡಿನ ಅಕ್ಕ ಪಕ್ಕಕ್ಕೆ ಹೋಗೋಣ. ದುರ್ಯೋಧನನ ಭುಜ ಬಲ ಪರಾಕ್ರಮ ವೈಭವಗಳನ್ನು ನೋಡಿ ಪಾಂಡವರ ಹೊಟ್ಟೆ ಉರಿಯಲಿ. ಅರಮನೆಯ ಸ್ತ್ರೀಯರ ಅಂಗ ಪರಿಮಳ ಅಲ್ಲಿ ಹರಡಲಿ.

ಅರ್ಥ:
ನಾಡು: ದೇಶ, ಪ್ರದೇಶ; ತುರು: ದನ, ಗೋವು; ಹಟ್ಟಿ: ಕೊಟ್ಟಿಗೆ; ಹೊಲ: ಬೆಳೆ ಬೆಳೆಯುವ ಭೂಮಿ, ಜಮೀನು; ಹೆಚ್ಚು: ಅಧಿಕ; ಗೋ: ಗೋವು; ಕದಂಬ: ಗುಂಪು; ನೋಡು: ವೀಕ್ಷಿಸು; ನೆವ: ನೆಪ; ಗಾಢ: ಹೆಚ್ಚಳ, ಅತಿಶಯ; ಸಗಾಢ: ಆಡಂಬರ, ವೈಭವ; ನೋಡು: ವೀಕ್ಷಿಸು; ನಸಿ:ಸೊರಗು, ಬವಳಿಬೀಳು; ಸುತ: ಮಕ್ಕಳು; ಹೊರೆ: ತೂಕ, ಭಾರ; ಕೂಡು: ಜೊತೆ; ತನು: ದೇಹ; ಪರಿಮಳ: ಸುಗಂಧ; ಅರಮನೆ: ರಾಜರ ಆಲಯ; ಅಂಗನಾ: ಹೆಣ್ಣು; ನಿವಹ: ಗುಂಪು;

ಪದವಿಂಗಡಣೆ:
ನಾಡೊಳಗೆ +ತುರು +ಹಟ್ಟಿಯಲಿ+ ಹೊಲ
ನಾಡಿ +ಹೆಚ್ಚಿನ +ಗೋ+ಕದಂಬವ
ನೋಡುವುದು +ನೆವೆ+ ಕುರುಪತಿಯ +ಗಾಢದ +ಸಗಾಢಿಕೆಯ
ನೋಡಿ +ನಸಿಯಲಿ +ಪಾಂಡು+ಸುತರ್+ಅವರ್
ಆಡುಗಾಡಿನ+ ಹೊಲನ +ಹೊರೆಯಲಿ
ಕೂಡೆ+ ತನು +ಪರಿಮಳದಲ್+ಅರಮನೆ+ಅಂಗನಾ+ ನಿವಹ

ಅಚ್ಚರಿ:
(೧) ತುರು, ಗೋ – ಸಮನಾರ್ಥಕ ಪದ
(೨) ಗಾಢದ ಸಗಾಢಿ – ಗಾಢ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ