ಪದ್ಯ ೧೯: ಕರ್ಣ ಶಕುನಿಗಳ ಉಪಾಯವೇನು?

ಹೋಗಲಾ ಪಾಂಡವರ ಚಿಂತೆಯ
ನೀಗಿದೆನು ನೀವಿನ್ನು ನೆನೆವು
ದ್ಯೋಗವೇನೆನೆ ನಗುತ ನುಡಿದರು ಕರ್ಣ ಶಕುನಿಗಳು
ಈಗಳೀ ವಿಭವದ ವಿಲಾಸದ
ಭೋಗದಗ್ಗಳಿಕೆಗಳ ಭುಜದ
ರ್ಪಾಗಮವನವರಿದ್ದ ವನದಲಿ ತೋರಬೇಕೆಂದ (ಅರಣ್ಯ ಪರ್ವ, ೧೮ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳಿಗೆ ಮರುಳಾದ ಧೃತರಾಷ್ಟ್ರನು, ಪಾಂಡವರ ಚಿಂತೆಯನ್ನು ನಾನೀಗ ಬಿಟ್ಟೆ, ನೀವೀಗ ಏನು ಮಾಡಬೇಕೆಂದಿರುವಿರಿ ಎಂದು ಕೇಳಲು, ನಮ್ಮ ವೈಭವ, ಸಂಭ್ರಮ, ಭೋಗಗಳನ್ನು ನಮ್ಮ ಬಾಹುಬಲದ ದರ್ಪದೊಂದಿಗೆ ಪಾಂಡವರಿರುವ ವನಕ್ಕೇ ಹೋಗಿ ತೋರಿಸಬೇಕು ಎಂದು ಕರ್ಣ ಶುಕುನಿಗಳು ಉತ್ತರಿಸಿದರು.

ಅರ್ಥ:
ಹೋಗು: ತೆರಳು; ಚಿಂತೆ: ಯೋಚನೆ; ನೀಗು: ನಿವಾರಿಸು; ನೆನೆ: ಸ್ಮರಿಸು; ಉದ್ಯೋಗ: ಕೆಲಸ; ನಗು: ಸಂತಸ; ನುಡಿ: ಮಾತಾಡು; ವಿಭವ: ಸಿರಿ, ಸಂಪತ್ತು; ವಿಲಾಸ: ಕ್ರೀಡೆ, ವಿಹಾರ; ಭೋಗ: ಸುಖವನ್ನು ಅನುಭವಿಸುವುದು; ಅಗ್ಗಳಿಕೆ: ಸಾಮರ್ಥ್ಯ; ಭುಜ: ತೋಳು, ಬಾಹು; ದರ್ಪ: ಠೀವಿ, ಗತ್ತು; ವನ: ಕಾಡು; ತೋರು: ಪ್ರದರ್ಶಿಸು;

ಪದವಿಂಗಡಣೆ:
ಹೋಗಲ್+ಆ+ ಪಾಂಡವರ+ ಚಿಂತೆಯ
ನೀಗಿದೆನು +ನೀವಿನ್ನು +ನೆನೆವ್
ಉದ್ಯೋಗವೇನ್+ಎನೆ+ ನಗುತ+ ನುಡಿದರು +ಕರ್ಣ +ಶಕುನಿಗಳು
ಈಗಳ್+ಈ+ ವಿಭವದ +ವಿಲಾಸದ
ಭೋಗದ್+ಅಗ್ಗಳಿಕೆಗಳ+ ಭುಜ+ದ
ರ್ಪಾಗಮವನ್+ಅವರಿದ್ದ +ವನದಲಿ +ತೋರಬೇಕೆಂದ

ಅಚ್ಚರಿ:
(೧) ನ ಕಾರದ ಸಾಲು ಪದ – ನೀಗಿದೆನು ನೀವಿನ್ನು ನೆನೆವುದ್ಯೋಗವೇನೆನೆ ನಗುತ ನುಡಿದರು

ಪದ್ಯ ೧೮: ಧೃತರಾಷ್ಟ್ರನ ಮನಸ್ಸು ಹೇಗೆ ಬದಲಾಯಿತು?

ಸೊಗಸು ತಳಿತುದು ತರಳಮನ ತಳ
ಮಗುಚಿದಂತಾಯ್ತವರೊಲವು ಕಾ
ಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
ಮುಗುಳುಗಂಗಳ ಬಾಷ್ಪ ಬಿಂದುವ
ನುಗುರು ಕೊನೆಯಲಿ ಮಿಡಿದು ಕರ್ಣನ
ಹೊಗಳಿದನು ಬಳಿಕೇನು ಸಿಂಗಿಯಲುಂಟೆ ಸವಿಯೆಂದ (ಅರಣ್ಯ ಪರ್ವ, ೧೮ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿ ಕರ್ಣರ ಮಾತುಗಳನ್ನು ಕೇಳಿ ಧೃತರಾಶ್ಟ್ರನ ಮನಸ್ಸಿನಲ್ಲಿದ್ದ ಕರುಣೆಯು ಪಾತ್ರೆಯನ್ನು ಬೋರಲು ಹಾಕಿದಾಗ ಎಲ್ಲವೂ ಹೊರಚೆಲ್ಲುವಂತೆ, ಅವನ ಒಲವು, ಪ್ರೀತಿಯು ಬಿದ್ದು ಹೋಯಿತು. ಪಾಂಡವರ ಮೇಲಿನ ಪ್ರೀತಿ ಕಾಡಿಗೆಯಲ್ಲಿ ಕಲಸಿದ ನೀಲಿಯ ನೂಲಿನಂತೆ ಕಪ್ಪಾಯಿತು. ಅರೆ ತೆರೆದ ಕಣ್ಣುಗಳಲ್ಲಿದ್ದ ಕಣ್ಣೀರನ್ನು ಬೆರಳ ತುದಿಯಿಂದ ಒರೆಸಿ, ಕರ್ಣನನ್ನು ನೀನು ಹೇಳುವುದೇ ಸರಿ. ಭಯಂಕರವಾದ ವಿಷವು ರುಚಿಯಾಗಬಹುದೇ ಎಂದು ಹೊಗಳಿದನು.

ಅರ್ಥ:
ಸೊಗಸು: ಅಂದ; ತಳಿತ: ಚಿಗುರಿದ; ತರಳ: ಚಂಚಲವಾದ; ತಳ: ಕೆಳಭಾಗ, ನೆಲ; ಮಗುಚು: ಅಡಿಮೇಲು ಮಾಡು; ಒಲವು: ಪ್ರೀತಿ; ಕಾಡಿಗೆ: ಅಂಜನ, ಕಪ್ಪು; ಕೆಸರು: ರಾಡಿ, ಪಂಕ; ಅದ್ದು: ಮುಳುಗಿಸು; ಸರಿಗೆ: ನೂಲು; ನೀಳ: ವಿಸ್ತಾರ, ಹರಹು; ಸರಿ: ಸಮಾನ; ಮುಗುಳು: ಮೊಗ್ಗು, ಚಿಗುರು; ಕಂಗಳು: ನಯನ; ಬಾಷ್ಪ: ನೀರು; ಬಿಂದು: ಹನಿ, ತೊಟ್ಟು; ಉಗುರು: ನಖ; ಕೊನೆ: ತುದಿ; ಮಿಡಿ: ತವಕಿಸು; ಹೊಗಳು: ಪ್ರಶಂಶಿಸು; ಬಳಿಕ: ನಂತರ; ಸಿಂಗಿ: ಒಂದು ಬಗೆಯ ಘೋರ ವಿಷ; ಸವಿ: ರುಚಿ, ಸ್ವಾದ;

ಪದವಿಂಗಡಣೆ:
ಸೊಗಸು +ತಳಿತುದು +ತರಳಮನ+ ತಳ
ಮಗುಚಿದಂತಾಯ್ತ್+ಅವರ್+ಒಲವು +ಕಾ
ಡಿಗೆಯ +ಕೆಸರೊಳಗ್+ಅದ್ದ+ ನೀಲದ +ಸರಿಗೆ+ ಸರಿಯಾಯ್ತು
ಮುಗುಳು+ಕಂಗಳ +ಬಾಷ್ಪ +ಬಿಂದುವನ್
ಉಗುರು +ಕೊನೆಯಲಿ +ಮಿಡಿದು +ಕರ್ಣನ
ಹೊಗಳಿದನು +ಬಳಿಕೇನು+ ಸಿಂಗಿಯಲುಂಟೆ +ಸವಿಯೆಂದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಿಂಗಿಯಲುಂಟೆ ಸವಿ; ತರಳಮನ ತಳ
ಮಗುಚಿದಂತಾಯ್ತವರೊಲವು; ಕಾಡಿಗೆಯ ಕೆಸರೊಳಗದ್ದ ನೀಲದ ಸರಿಗೆ ಸರಿಯಾಯ್ತು
(೨) ಪಾಂಡವರ ಮೇಲಿನ ಪ್ರೀತಿ ಎಳ್ಳಷ್ಟು ಇಲ್ಲವೆಂದು ತೋರಿಸುವ ಪರಿ – ಮುಗುಳುಗಂಗಳ ಬಾಷ್ಪ ಬಿಂದುವ ನುಗುರು ಕೊನೆಯಲಿ ಮಿಡಿದು
(೩) ತ ಕಾರದ ತ್ರಿವಳಿ ಪದ – ತಳಿತುದು ತರಳಮನ ತಳಮಗುಚಿದಂತಾಯ್ತ
(೪) ಅಲಂಕಾರಗಳಿಂದ ತುಂಬಿರುವ ಸೊಗಸಾದ ರಚನೆ

ಪದ್ಯ ೧೭: ಕರ್ಣನು ಧೃತರಾಷ್ಟ್ರನಿಗೆ ಏನು ಹೇಳಿದ?

ಈ ಸುಖದ ಸುಗ್ಗಿಯಲಿ ನಿನ್ನವ
ರೇಸು ಹೆಚ್ಚುಗೆಯಾಗಿ ಬದುಕಿದ
ರೈಸುವನು ನೆರೆನೋಡಿ ಹಿಗ್ಗದೆ ಪಾಂಡುನಂದನರು
ಘಾಸಿಯಾದರು ಘಟ್ಟಬೆಟ್ಟದ
ಪೈಸರದಲೆಂದಳಲಿ ಮರುಗುತ
ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ (ಅರಣ್ಯ ಪರ್ವ, ೧೮ ಸಂಧಿ ೧೭ ಪದ್ಯ)

ತಾತ್ಪರ್ಯ:
ನಿನ್ನ ಮಕ್ಕಳಿಗೆ ಈಗ ಸುಖದ ಸುಗ್ಗಿ, ಈಗ ನಿನ್ನ ಮಕ್ಕಳು ಎಷ್ಟು ಹೆಚ್ಚಿನ ಸುಖದಿಂದ ಬದುಕುತ್ತಿರ್ವರೋ ಎಂದು ನೋಡಿ ಹಿಗ್ಗದೆ, ಪಾಂಡವರು ಬೆಟ್ಟ ಗುಡ್ಡಗಳ ಸಾಲಿನಲ್ಲಿ ಎಷ್ಟು ನಲುಗುತ್ತಿರುವರೋ ಎಂದು ಮರುಗುತ್ತಾ ಅಲಂಕಾರದ ಮಾತುಗಳನ್ನು ಹೇಳುತ್ತಿರುವೆ ಎಂದು ಕರ್ಣನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಸುಖ: ನೆಮ್ಮದಿ, ಸಂತಸ; ಸುಗ್ಗಿ: ಹಬ್ಬ, ಪರ್ವ, ಹೆಚ್ಚಳ; ಹೆಚ್ಚು: ಅಧಿಕ; ಬದುಕು: ಜೀವಿಸು; ನೆರೆ: ಸಮೀಪ, ಹತ್ತಿರ; ನೋಡು: ವೀಕ್ಷಿಸು; ಹಿಗ್ಗು: ಆನಂದ; ನಂದನ: ಮಕ್ಕಳು; ಘಾಸಿ: ಆಯಾಸ, ದಣಿವು; ಘಟ್ಟ: ಬೆಟ್ಟಗಳ ಸಾಲು; ಬೆಟ್ಟ: ಗಿರಿ; ಪೈಸರ: ಇಳಿಜಾರಾದ ಪ್ರದೇಶ; ಅಳಲು: ಕೊರಗು; ಮರುಗು: ತಳಮಳ, ಸಂಕಟ; ಸೂಸು: ಎರಚುವಿಕೆ, ಚಲ್ಲುವಿಕೆ; ಸಾಹಿತ್ಯ: ಸಂಬಂಧ, ಸೃಜನಾತ್ಮಕ ಬರವಣಿಗೆ; ಭಾಷೆ: ಮಾತು, ನುಡಿ;

ಪದವಿಂಗಡಣೆ:
ಈ+ ಸುಖದ +ಸುಗ್ಗಿಯಲಿ +ನಿನ್ನವರ್
ಏಸು +ಹೆಚ್ಚುಗೆಯಾಗಿ +ಬದುಕಿದರ್
ಐಸುವನು +ನೆರೆನೋಡಿ +ಹಿಗ್ಗದೆ +ಪಾಂಡು+ನಂದನರು
ಘಾಸಿಯಾದರು +ಘಟ್ಟ+ಬೆಟ್ಟದ
ಪೈಸರದಲೆಂದ್+ಅಳಲಿ +ಮರುಗುತ
ಸೂಸಿದೈ +ಸಾಹಿತ್ಯ +ಭಾಷೆಯನೆಂದನಾ +ಕರ್ಣ

ಅಚ್ಚರಿ:
(೧) ಧೃತರಾಷ್ಟ್ರನ ಕೊರಗನ್ನು ಅಲ್ಲಗಳೆಯುವ ಪರಿ – ಮರುಗುತ ಸೂಸಿದೈ ಸಾಹಿತ್ಯ ಭಾಷೆಯನೆಂದನಾ ಕರ್ಣ

ಪದ್ಯ ೧೬: ಕರ್ಣನು ಪಾಂಡವರ ಬಗ್ಗೆ ಏನು ಹೇಳಿದನು?

ಆಹ ಶಕುನಿಯ ಮಾತಿನಲಿ ಸಂ
ದೇಹವೇ ಪಾಂಡವರು ಬಂಧು
ದ್ರೋಹಿಗಳು ತಮ್ಮವಧಿ ತುಂಬಲು ಕೇಡತಹರೆಂಬ
ಈ ಹದನು ತಪ್ಪುವುದೆ ನೀವತಿ
ಮೋಹದಲಿ ಬಿಡೆಬಿಸಿದು ಬಿದ್ದರೆ
ಕಾಹುರರು ಕುರುಪತಿಯ ಕೆಡಿಸುವರೆಂದನಾ ಕರ್ಣ (ಅರಣ್ಯ ಪರ್ವ, ೧೮ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶಕುನಿಯ ಮಾತಿನಲ್ಲಿ ಸಂದೇಹವೇ ಇಲ್ಲ. ಪಾಂಡವರು ಬಂಧು ದ್ರೋಹಿಗಳು. ತಾವು ನುಡಿದ ಅವಧಿ ಮುಗಿದ ಮೇಲೆ ಕೇಡು ತರುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ನೀವು ವೃಥಾ ಮೋಹದಿಂದ ಮನಸ್ಸಿನಲ್ಲಿ ಮರುಗಿ ಅವರಿಗೆ ಅನುಕೂಲ ಮಾಡಿದರೆ ಕೋಪಿಷ್ಠರಾದ ಪಾಂಡವರು ದುರ್ಯೋಧನನನ್ನು ಹಾಳುಮಾಡುತ್ತಾರೆ ಎಂದು ಕರ್ಣನು ಹೇಳಿದನು.

ಅರ್ಥ:
ಮಾತು: ನುಡಿ; ಸಂದೇಹ: ಸಂಶಯ; ಬಂಧು: ಸಂಬಂಧಿಕರು; ದ್ರೋಹಿ: ವಂಚಕ; ಅವಧಿ: ಕಾಲ, ಸಮಯ; ತುಂಬು: ಭರ್ತಿಯಾಗು; ಕೇಡು: ಆಪತ್ತು, ಕೆಡಕು; ಹದ: ಸ್ಥಿತಿ; ಮೋಹ: ಭ್ರಾಂತಿ, ಭ್ರಮೆ; ಬಿಡೆ: ಖಂಡಿತವಾಗಿ; ಬೀಳು: ಜಾರು; ಕಾಹುರ: ಸೊಕ್ಕು, ಕೋಪ; ಕೆಡಿಸು: ಹಾಳುಮಾದು; ತಹ: ಒಪ್ಪಂದ;

ಪದವಿಂಗಡಣೆ:
ಆಹ +ಶಕುನಿಯ +ಮಾತಿನಲಿ +ಸಂ
ದೇಹವೇ +ಪಾಂಡವರು +ಬಂಧು
ದ್ರೋಹಿಗಳು+ ತಮ್ಮ್+ಅವಧಿ+ ತುಂಬಲು +ಕೇಡತಹರೆಂಬ
ಈ +ಹದನು +ತಪ್ಪುವುದೆ +ನೀವತಿ
ಮೋಹದಲಿ +ಬಿಡೆಬಿಸಿದು +ಬಿದ್ದರೆ
ಕಾಹುರರು+ ಕುರುಪತಿಯ +ಕೆಡಿಸುವರೆಂದನಾ +ಕರ್ಣ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕಾಹುರರು ಕುರುಪತಿಯ ಕೆಡಿಸುವರೆಂದನಾ ಕರ್ಣ

ಪದ್ಯ ೧೫: ಯಾರು ಯಾರಿಗೆ ಸಾಕ್ಷಿಯಾದರು?

ಬೇವು ತಾ ಪರಿಪಕ್ವವಾದರೆ
ಹಾವು ಮೆಕ್ಕೆಗೆ ಸಾಕ್ಷಿಗಡ ಧ
ರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ
ಆ ವಿಡಂಬದ ಶಕುನಿ ಕರ್ಣರು
ಜೀವ ಸಖರೈ ತಮ್ಮೊಳಗೆ ದು
ರ್ಭಾವ ಭೀಕರ ಹೃದಯ ನುಡಿದನು ಕರ್ಣನರಸಂಗೆ (ಅರಣ್ಯ ಪರ್ವ, ೧೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಬೇವಿನ ಹಣ್ಣು ಮಾಗಿದರೆ ಹಾವುಮೆಕ್ಕೆಗೆ ಸಾಕ್ಷಿಯಂತೆ, ಧರ್ಮವನ್ನು ವಿರೋಧಿಸುವವನಿಗೆ ಕಾಮಾದಿಗಳ ಸಹಯ. ಆ ವಂಚಕರಾದ ಕರ್ಣ, ಶಕುನಿಗಳು ಪ್ರಾಣ ಸ್ನೇಹಿತರು ದುರ್ಭಾವದಿಂದ ಭೀಕರವಾದ ಮನಸ್ಸನ್ನುಳ್ಳ, ಕರ್ಣನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು.

ಅರ್ಥ:
ಪರಿಪಕ್ವ: ಹಣ್ಣಾಗು; ಹಾವು ಮೆಕ್ಕೆ: ಒಂದು ಜಾತಿಯ ಗಿಡ; ಸಾಕ್ಷಿ:ಪುರಾವೆ; ಗಡ: ಅಲ್ಲವೆ; ಧರ್ಮ: ಧಾರಣೆ ಮಾಡಿದುದುದ್; ಅವಮಾನ: ಅಗೌರವ; ಕವಿ: ಸಾಹಿತಿ; ಕಾಮ: ವಿಷಯಾಭಿಲಾಷೆ; ಆದಿ: ಮುಂತಾದ; ನೆರವಿ: ಗುಂಪು, ಸಮೂಹ; ವಿಡಂಬ: ಸೋಗು, ವೇಷ; ಜೀವ: ಉಸಿರು; ಸಖ: ಸ್ನೇಹಿತ; ದುರ್ಭಾವ: ಕೆಟ್ಟ ಯೋಚನೆ; ಭೀಕರ: ಭಯಾನಕ; ಹೃದಯ: ಎದೆ; ನುಡಿ: ಮಾತಾಡು; ಅರಸ: ರಾಜ;

ಪದವಿಂಗಡಣೆ:
ಬೇವು+ ತಾ +ಪರಿಪಕ್ವವಾದರೆ
ಹಾವುಮೆಕ್ಕೆಗೆ +ಸಾಕ್ಷಿ+ಗಡ +ಧರ್ಮ
ಅವಮಾನದ +ಕವಿಗೆ +ಕಾಮಾದಿಗಳ +ನೆರವಿ+ ಗಡ
ಆ +ವಿಡಂಬದ +ಶಕುನಿ+ ಕರ್ಣರು
ಜೀವ +ಸಖರೈ +ತಮ್ಮೊಳಗೆ +ದು
ರ್ಭಾವ +ಭೀಕರ +ಹೃದಯ +ನುಡಿದನು+ ಕರ್ಣನರಸಂಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಧರ್ಮಾವಮಾನದ ಕವಿಗೆ ಕಾಮಾದಿಗಳ ನೆರವಿ ಗಡ; ಬೇವು ತಾ ಪರಿಪಕ್ವವಾದರೆ ಹಾವುಮೆಕ್ಕೆಗೆ ಸಾಕ್ಷಿಗಡ