ಪದ್ಯ ೧೨: ಶಕುನಿಯು ಪಾಂಡವರ ಬಗ್ಗೆ ಏನು ನುಡಿದನು?

ಅವರು ಕುಹಕೋಪಾಯದಲಿ ಕೌ
ರವರ ಕೆಡಿಸದೆ ಮಾಣರರ್ಜುನ
ಪವನಜರ ಭಾಷೆಗಳ ಮರೆದಿರೆ ಜೂಜು ಸಭೆಯೊಳಗೆ
ಅವರು ಸುಜನರು ನಿಮ್ಮವರು ಖಳ
ರವರು ಸದಮಲ ಸಾಧುಗಳು ಕೌ
ರವರಸಾಧುಗಳೆಂದು ತೋರಿತೆ ನಿಮ್ಮ ಚಿತ್ತದಲಿ (ಅರಣ್ಯ ಪರ್ವ, ೧೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಎಲೈ ರಾಜ, ಪಾಂಡವರು ಮೋಸದಿಂದ ಕೌರವರನ್ನು ಹಾಳು ಮಾಡದೆ ಬಿಡುವುದಿಲ್ಲ. ಜೂಜಿನ ಸಭೆಯಲ್ಲಿ ಅವರು ಮಾಡಿದ ಪ್ರತಿಜ್ಞೆಯನ್ನು ಮರೆತಿರಾ? ಅವರು ಸಜ್ಜನರು, ಸಾಧುಗಳು, ನಿಮ್ಮ ಮಕ್ಕಳು ದುಷ್ಟರು, ಅಸಾಧುಗಳೆಂದು ನಿಮ್ಮ ಮನಸ್ಸಿನಲ್ಲಿ ತೋರಿತೇ ಎಂದು ಶಕುನಿಯು ಧೃತರಾಷ್ಟ್ರನನ್ನು ಕೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ಉಪಾಯ: ಯುಕ್ತಿ, ಹಂಚಿಕೆ; ಕೆಡಿಸು: ಹಾಳುಮಾಡು; ಮಾಣು: ನಿಲ್ಲು; ಪವನಜ: ಭೀಮ; ಭಾಷೆ: ಮಾತು, ನುಡಿ; ಮರೆ: ನೆನಪಿನಿಂದ ದೂರತಳ್ಳು; ಜೂಜು: ಜುಗಾರಿ, ಸಟ್ಟ; ಸಭೆ: ದರ್ಬಾರು; ಸುಜನ: ಒಳ್ಳೆಯ ಜನ; ಖಳ: ದುಷ್ಟ; ಅಮಲ: ನಿರ್ಮಲ; ಸಾಧು: ಒಳ್ಳೆಯ ಜನ; ಅಸಾಧು: ಕೆಟ್ಟಜನ; ತೋರು: ಗೋಚರಿಸು; ಚಿತ್ತ: ಮನಸ್ಸು;

ಪದವಿಂಗಡಣೆ:
ಅವರು +ಕುಹಕ+ಉಪಾಯದಲಿ +ಕೌ
ರವರ +ಕೆಡಿಸದೆ +ಮಾಣರ್+ಅರ್ಜುನ
ಪವನಜರ +ಭಾಷೆಗಳ +ಮರೆದಿರೆ+ ಜೂಜು +ಸಭೆಯೊಳಗೆ
ಅವರು +ಸುಜನರು +ನಿಮ್ಮವರು +ಖಳರ್
ಅವರು +ಸದಮಲ+ ಸಾಧುಗಳು+ ಕೌ
ರವರ್+ಅಸಾಧುಗಳೆಂದು +ತೋರಿತೆ +ನಿಮ್ಮ +ಚಿತ್ತದಲಿ

ಅಚ್ಚರಿ:
(೧) ಸಾಧು, ಅಸಾಧು; ಸುಜನ, ಖಳ – ವಿರುದ್ಧ ಪದಗಳು

ನಿಮ್ಮ ಟಿಪ್ಪಣಿ ಬರೆಯಿರಿ