ಪದ್ಯ ೫೨: ಕೃಷ್ಣನು ಎಲ್ಲಿಗೆ ತೆರಳಿದನು?

ಎಂದು ಹರಿಯನು ಹೊಗಳಿ ನಾನಾ
ಚಂದದಲಿ ಪಾಂಡವರ ತಿಳುಹಿ ಮು
ನೀಂದ್ರ ತನ್ನಾಶ್ರಮಕೆ ಸರಿದನು ತಾಪಸರುಸಹಿತ
ಅಂದು ಕುಂತೀ ನಂದನರಿಗಾ
ನಂದ ಸುಖವನು ಕರೆದು ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದೋರಕಾಪುರಿಯ (ಅರಣ್ಯ ಪರ್ವ, ೧೭ ಸಂಧಿ, ೫೨ ಪದ್ಯ)

ತಾತ್ಪರ್ಯ:
ದೂರ್ವಾಸನು ಶ್ರೀಕೃಷ್ಣನನ್ನು ಹೀಗೆ ಹೊಗಳಿ, ಪಾಂಡವರಿಗೆ ತಿಳುವಳಿಕೆಯ ಮಾತುಗಳನ್ನು ಹೇಳಿ ಮುನಿಗಳೊಡನೆ ತನ್ನ ಆಶ್ರಮಕ್ಕೆ ಹೋದನು. ಪಾಂಡವರ ಕಷ್ಟವನ್ನು ಪರಿಹರಿಸಿ ಆನಂದವನ್ನುಂಟುಮಾಡಿ ಶ್ರೀಕೃಷ್ಣನು ದ್ವಾರಕೆಗೆ ತೆರಳಿದನು.

ಅರ್ಥ:
ಹರಿ: ಕೃಷ್ಣ; ಹೊಗಳು: ಪ್ರಶಂಶಿಸು; ನಾನಾ: ಹಲವಾರು; ಚಂದ: ಸುಂದರ ತಿಳುಹಿ: ತಿಳುವಳಿಕೆಯ ಮಾತು; ಮುನೀಂದ್ರ: ಋಷಿ; ಆಶ್ರಮ: ಕುಟೀರ; ಸರಿ: ತೆರಳು; ತಾಪಸ: ಋಷಿಮುನಿ; ಸಹಿತ: ಜೊತೆ; ನಂದನ: ಮಕ್ಕಳು; ಆನಂದ ಸಂತಸ; ಸುಖ: ನೆಮ್ಮದಿ; ಕರೆ:ನೀಡು; ದೇವ: ಭಗವಂತ; ಬಿಜಯಂಗೈ: ತೆರಳು; ಹೊಕ್ಕು: ಸೇರು; ಪುರಿ: ಊರು;

ಪದವಿಂಗಡಣೆ:
ಎಂದು+ ಹರಿಯನು +ಹೊಗಳಿ +ನಾನಾ
ಚಂದದಲಿ +ಪಾಂಡವರ +ತಿಳುಹಿ +ಮು
ನೀಂದ್ರ +ತನ್ನಾಶ್ರಮಕೆ +ಸರಿದನು +ತಾಪಸರು+ಸಹಿತ
ಅಂದು +ಕುಂತೀ +ನಂದನರಿಗ್
ಆನಂದ +ಸುಖವನು +ಕರೆದು +ದೇವ +ಮು
ಕುಂದ +ಬಿಜಯಂಗೈದು +ಹೊಕ್ಕನು +ದೋರಕಾಪುರಿಯ

ಅಚ್ಚರಿ:
(೧) ಹರಿ, ಮುಕುಂದ – ಕೃಷ್ಣನನ್ನು ಕರೆದ ಪರಿ
(೨) ಸರಿದನು, ಹೊಕ್ಕನು – ಪದಗಳ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ