ಪದ್ಯ ೪೨: ದೂರ್ವಾಸ ಮುನಿಗಳು ದಿವ್ಯದೃಷ್ಟಿಯಿಂದ ಯಾರನ್ನು ನೋಡಿದರು?

ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಲಿಯ ತೇಗುವ ಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯಾ
ಸರಸಿಜಾಕ್ಷನ ಬರವ ಕಂಡನು ದಿವ್ಯ ದೃಷ್ಟಿಯಲಿ (ಅರಣ್ಯ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಈ ಕಡೆಗೆ ದೂರ್ವಾಸರಿಗೂ ಅವರ ಪರಿವಾರದವರಿಗೂ ಮನಸ್ಸು ಪ್ರಫುಲ್ಲವಾಗಿ ರೋಮಾಂಚನವಾಯಿತು. ತೃಪ್ತಿಯುಂಟಾಯಿತು. ಬಳ್ಳಿ ತೇಗುಗಳು ಬಂದವು. ಹೊಟ್ಟೆಗಳು ಕತ್ತಿನವರೆಗೂ ಅಡರಿದವು. ಆಗ ದೂರ್ವಾಸನು ಇದೇನೆಂದು ಚಕಿತನಾಗಿ ದಿವ್ಯದೃಷ್ಟಿಯಿಂದ ಶ್ರೀಕೃಷ್ಣನು ಬಂದುದನ್ನು ತಿಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಈಚೆ: ಈ ಬದಿ; ಮನ: ಮನಸ್ಸು; ಉಬ್ಬರ: ಅಧಿಕ; ತನು: ದೇಹ; ತಳಿತ: ಚಿಗುರಿದ; ರೋಮ: ಕೂದಲು; ಭರ: ಭಾರ, ಹೊರೆ; ತುಷ್ಟಿ: ತೃಪ್ತಿ, ಆನಂದ; ಬಲಿ: ಗಟ್ಟಿ, ದೃಢ; ತೇಗು: ತಿಂದು ಮುಗಿಸು; ಹಿಗ್ಗು: ಸಂತೋಷ, ಆನಂದ; ಕೊರಳು: ಕತ್ತು; ಅಡರು: ಆಸರೆ; ಹೊಟ್ಟೆ: ಉದರ; ಋಷಿ: ಮುನಿ; ಸಹ: ಜೊತೆ; ಸರಸಿಜಾಕ್ಷ: ಕಮಲದಂತ ಕಣ್ಣು; ಬರವ: ಆಗಮನ; ಕಂಡು: ನೋಡು; ದಿವ್ಯ: ಶ್ರೇಷ್ಠ; ದೃಷ್ಟಿ: ನೋಟ;

ಪದವಿಂಗಡಣೆ:
ಅರಸ +ಕೇಳ್+ಈಚೆಯಲಿ +ಮನದ್
ಉಬ್ಬರದ +ತನುವಿನ +ತಳಿತ +ರೋಮದ
ಭರದ+ ತುಷ್ಟಿಯ +ಬಲಿಯ +ತೇಗುವ +ಹಿಗ್ಗು+ವಳ್ಳೆಗಳ
ಕೊರಳಿಗ್+ಅಡರುವ +ಹೊಟ್ಟೆಗಳ +ಋಷಿ
ವರರು +ಸಹ +ದೂರ್ವಾಸ +ಮುನಿಯಾ
ಸರಸಿಜಾಕ್ಷನ+ ಬರವ+ ಕಂಡನು +ದಿವ್ಯ +ದೃಷ್ಟಿಯಲಿ

ಅಚ್ಚರಿ:
(೧) ಕೃಷ್ಣನನ್ನು ಸರಸಿಜಾಕ್ಷ ಎಂದು ಕರೆದಿರುವುದು
(೨) ಹೊಟ್ಟೆ ತುಂಬಿರುವುದನ್ನು ತಿಳಿಸುವ ಪರಿ – ಮನದುಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಲಿಯ ತೇಗುವ ಹಿಗ್ಗುವಳ್ಳೆಗಳ ಕೊರಳಿಗಡರುವ ಹೊಟ್ಟೆಗಳ

ನಿಮ್ಮ ಟಿಪ್ಪಣಿ ಬರೆಯಿರಿ