ಪದ್ಯ ೪೨: ದೂರ್ವಾಸ ಮುನಿಗಳು ದಿವ್ಯದೃಷ್ಟಿಯಿಂದ ಯಾರನ್ನು ನೋಡಿದರು?

ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಲಿಯ ತೇಗುವ ಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯಾ
ಸರಸಿಜಾಕ್ಷನ ಬರವ ಕಂಡನು ದಿವ್ಯ ದೃಷ್ಟಿಯಲಿ (ಅರಣ್ಯ ಪರ್ವ, ೧೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಈ ಕಡೆಗೆ ದೂರ್ವಾಸರಿಗೂ ಅವರ ಪರಿವಾರದವರಿಗೂ ಮನಸ್ಸು ಪ್ರಫುಲ್ಲವಾಗಿ ರೋಮಾಂಚನವಾಯಿತು. ತೃಪ್ತಿಯುಂಟಾಯಿತು. ಬಳ್ಳಿ ತೇಗುಗಳು ಬಂದವು. ಹೊಟ್ಟೆಗಳು ಕತ್ತಿನವರೆಗೂ ಅಡರಿದವು. ಆಗ ದೂರ್ವಾಸನು ಇದೇನೆಂದು ಚಕಿತನಾಗಿ ದಿವ್ಯದೃಷ್ಟಿಯಿಂದ ಶ್ರೀಕೃಷ್ಣನು ಬಂದುದನ್ನು ತಿಳಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಈಚೆ: ಈ ಬದಿ; ಮನ: ಮನಸ್ಸು; ಉಬ್ಬರ: ಅಧಿಕ; ತನು: ದೇಹ; ತಳಿತ: ಚಿಗುರಿದ; ರೋಮ: ಕೂದಲು; ಭರ: ಭಾರ, ಹೊರೆ; ತುಷ್ಟಿ: ತೃಪ್ತಿ, ಆನಂದ; ಬಲಿ: ಗಟ್ಟಿ, ದೃಢ; ತೇಗು: ತಿಂದು ಮುಗಿಸು; ಹಿಗ್ಗು: ಸಂತೋಷ, ಆನಂದ; ಕೊರಳು: ಕತ್ತು; ಅಡರು: ಆಸರೆ; ಹೊಟ್ಟೆ: ಉದರ; ಋಷಿ: ಮುನಿ; ಸಹ: ಜೊತೆ; ಸರಸಿಜಾಕ್ಷ: ಕಮಲದಂತ ಕಣ್ಣು; ಬರವ: ಆಗಮನ; ಕಂಡು: ನೋಡು; ದಿವ್ಯ: ಶ್ರೇಷ್ಠ; ದೃಷ್ಟಿ: ನೋಟ;

ಪದವಿಂಗಡಣೆ:
ಅರಸ +ಕೇಳ್+ಈಚೆಯಲಿ +ಮನದ್
ಉಬ್ಬರದ +ತನುವಿನ +ತಳಿತ +ರೋಮದ
ಭರದ+ ತುಷ್ಟಿಯ +ಬಲಿಯ +ತೇಗುವ +ಹಿಗ್ಗು+ವಳ್ಳೆಗಳ
ಕೊರಳಿಗ್+ಅಡರುವ +ಹೊಟ್ಟೆಗಳ +ಋಷಿ
ವರರು +ಸಹ +ದೂರ್ವಾಸ +ಮುನಿಯಾ
ಸರಸಿಜಾಕ್ಷನ+ ಬರವ+ ಕಂಡನು +ದಿವ್ಯ +ದೃಷ್ಟಿಯಲಿ

ಅಚ್ಚರಿ:
(೧) ಕೃಷ್ಣನನ್ನು ಸರಸಿಜಾಕ್ಷ ಎಂದು ಕರೆದಿರುವುದು
(೨) ಹೊಟ್ಟೆ ತುಂಬಿರುವುದನ್ನು ತಿಳಿಸುವ ಪರಿ – ಮನದುಬ್ಬರದ ತನುವಿನ ತಳಿತ ರೋಮದ
ಭರದ ತುಷ್ಟಿಯ ಬಲಿಯ ತೇಗುವ ಹಿಗ್ಗುವಳ್ಳೆಗಳ ಕೊರಳಿಗಡರುವ ಹೊಟ್ಟೆಗಳ

ಪದ್ಯ ೪೧: ಕೃಷ್ಣನು ತನ್ನ ಹಸಿವನ್ನು ಹೇಗೆ ನೀಗಿಸಿಕೊಂಡನು?

ಕಂಡು ಕಿಂಚಿತ್ಪಾಕಶೇಷವ
ಪುಂಡರಿಕಾಂಬಕನದನು ಕೈ
ಕೊಂಡು ತಾನದನದನುಂಡು ತಲೆದೂಗಿದನು ತೇಗಿದನು
ಪಾಂಡವರ ಪತಿಕರಿಸಿ ನಲಿವುತ
ಜಾಂಡ ನುಡಿದನು ಹೃದಯ ಕ್ಷುಧೆಯನು
ಖಂಡಿಸಿದೆಲಾಯೆನುತ ಕೊಂಡಾಡಿದನು ದ್ರೌಪದಿಯ (ಅರಣ್ಯ ಪರ್ವ, ೧೭ ಸಂಧಿ, ೪೧ ಪದ್ಯ)

ತಾತ್ಪರ್ಯ:
ದ್ರೌಪದಿ ಕೊಟ್ಟ ಅಕ್ಷಯ ಪಾತ್ರೆಯಲ್ಲಿ ಸ್ವಲ್ಪ ಪಾಕಶೇಷವನ್ನು ಶ್ರೀಕೃಷ್ಣನು ಕಂಡನು. ಅದನ್ನು ತೆಗೆದುಕೊಂಡು, ಊಟ ಮಾಡಿ, ತಲೆದೂಗಿ ತೇಗಿದನು. ಹೀಗೆ ಪಾಂಡವರನ್ನು ರಕ್ಷಿಸಿ ಸಂತೋಷದಿಂದ ದ್ರೌಪದಿಯ ಕಡೆಗೆ ತಿರುಗಿ ನನ್ನ ಹೃದಯದ ಹಸಿವನ್ನು ಹೋಗಲಾಡಿಸಿದೆ ಎಂದು ಹೊಗಳಿದನು.

ಅರ್ಥ:
ಕಂಡು: ನೋಡಿ; ಕಿಂಚಿತ್: ಸ್ವಲ್ಪ; ಪಾಕ: ಬೇಯಿಸುವುದು; ಶೇಷ: ಉಳಿದ; ಪುಂಡರೀಕ: ಬಿಳಿಯ ತಾವರೆ; ಅಂಬಕ: ಕಣ್ಣು; ಕೈಕೊಂಡು: ತೆಗೆದು; ಉಂಡು: ಸೇವಿಸು; ತಲೆದೂಗು: ಪ್ರಶಂಶಿಸು, ಒಪ್ಪು; ತೇಗು: ಢರಕೆ, ತಿಂದು ಮುಗಿಸು; ಪತಿಕರಿಸು: ದಯೆತೋರು, ಅನುಗ್ರಹಿಸು; ನಲಿ: ಹರ್ಷಿಸು; ಅಜಾಂಡ: ಬ್ರಹ್ಮಾಂಡ; ನುಡಿ: ಮಾತು; ಹೃದಯ: ಎದೆ, ವಕ್ಷಸ್ಥಳ; ಕ್ಷುಧೆ: ಹಸಿವು; ಖಂಡಿಸು: ನಿಂದಿಸು, ಬಯ್ಯು; ಕೊಂಡಾಡು: ಹೊಗಳು;

ಪದವಿಂಗಡಣೆ:
ಕಂಡು+ ಕಿಂಚಿತ್+ಪಾಕಶೇಷವ
ಪುಂಡರಿಕ+ಅಂಬಕನ್+ಅದನು+ ಕೈ
ಕೊಂಡು+ ತಾನ್+ಅದನದನ್+ಉಂಡು +ತಲೆದೂಗಿದನು +ತೇಗಿದನು
ಪಾಂಡವರ+ ಪತಿಕರಿಸಿ+ ನಲಿವುತ್
ಅಜಾಂಡ +ನುಡಿದನು +ಹೃದಯ +ಕ್ಷುಧೆಯನು
ಖಂಡಿಸಿದೆಲಾ+ಎನುತ +ಕೊಂಡಾಡಿದನು +ದ್ರೌಪದಿಯ

ಅಚ್ಚರಿ:
(೧) ಕೃಷ್ಣನನ್ನು ಪುಂಡರಿಕಾಂಬಕ, ಅಜಾಂಡ ಎಂದು ಕರೆದಿರುವುದು

ಪದ್ಯ ೪೦: ದ್ರೌಪದಿಯು ಕೃಷ್ಣನಿಗೆ ಏನನ್ನು ನೀಡಿದಳು?

ಮಾತುಗಳು ಸೊಗಸುವುವೆ ಹಸಿವಿಂ
ದಾತುರರಿಗೆಲೆ ತಂಇತರೌ
ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು
ಏತಕೀ ಜಂಜಡವೆನಲು ಜಲ
ಜಾತಮುಖಿ ಕಂಪಿಸುತ ಕುಮುದಾ
ರಾತಿಕೊಟ್ಟಾ ಸ್ಥಾಲಿಯನು ತಂದಿತ್ತಳಿದೆಯೆನುತ (ಅರಣ್ಯ ಪರ್ವ, ೧೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದ್ರೌಪದಿಯನ್ನುದ್ದೇಶಿಸಿ, ತಂಗಿ, ಹಸಿವಿನಿಂದ ಪೀಡಿತರಿಗೆ ಮಾತುಗಳು ತೃಪ್ತಿಯುಂಟು ಮಾದುವುದಿಲ್ಲ. ದ್ರೌಪದಿ ಕೇಳು, ಪ್ರೇಮದ ಬಗೆಯನ್ನು ಬಲ್ಲವರು, ಲಿದು ಕೊಟ್ಟುದೇ ಹಸಿವಿಗೆ ಅಮೃತದಂತೆ ತೃಪ್ತಿಯನ್ನುಂಟು ಮಾಡುತ್ತದೆ. ಬರೀ ಈ ತೊಡಕಿನ ಮಾತು ಬೇಡೆ ಎನಲು, ದ್ರೌಪದಿಯು ನಡುಗುತ್ತಾ ಸೂರ್ಯನಿತ್ತ ಅಕ್ಷಯ ಪಾತ್ರೆಯನ್ನು ತಂದು ಕೃಷ್ಣನಿಗೆ ಇದೋ ತೆಗೆದುಕೋ ಎಂದು ನೀಡಿದಳು.

ಅರ್ಥ:
ಮಾತು: ವಾಣಿ; ಸೊಗಸು: ಚೆಂದ; ಹಸಿ: ಆಹಾರವನ್ನು ಬಯಸು, ಹಸಿವಾಗು; ಆತುರ: ಬೇಗ; ತಂಗಿ: ಅನುಜೆ; ತಾರೌ: ತೆಗೆದುಕೊಂಡು ಬಾ; ಪ್ರೀತಿ: ಒಲವು; ಕ್ಷುಧೆ: ಹಸಿವು; ಅಮೃತ: ಸುಧೆ; ಪುಂಜ: ಸಮೂಹ; ಜಂಜಡ: ತೊಂದರೆ, ಕ್ಲೇಶ; ಜಲಜಾತಮುಖಿ: ಕಮಲದಂತ ಮುಖವುಳ್ಳವಳು; ಕಂಪಿಸು: ನಡುಗು; ಕುಮುದ: ನೈದಿಲೆ; ಅರಾತಿ: ವೈರಿ; ಕುಮುದಾರಾತಿ: ಸೂರ್ಯ; ಕೊಟ್ಟ: ನೀಡಿದ; ಸ್ಥಾಲಿ: ಸಣ್ಣಪಾತ್ರೆ; ಇತ್ತಳು: ನೀಡು;

ಪದವಿಂಗಡಣೆ:
ಮಾತುಗಳು+ ಸೊಗಸುವುವೆ +ಹಸಿವಿಂದ್
ಆತುರರಿಗ್+ಎಲೆ+ ತಂಗಿ+ತರೌ
ಪ್ರೀತಿವಿದರ್+ಒಲಿದ್+ಇತ್ತುದೇ +ಕ್ಷುಧೆಗ್+ಅಮೃತ +ಪುಂಜವದು
ಏತಕೀ +ಜಂಜಡವೆನಲು +ಜಲ
ಜಾತಮುಖಿ +ಕಂಪಿಸುತ +ಕುಮುದಾ
ರಾತಿ+ಕೊಟ್ಟ+ಆ+ಸ್ಥಾಲಿಯನು+ ತಂದಿತ್ತಳ್+ಇದೆಯೆನುತ

ಅಚ್ಚರಿ:
(೧) ಸೂರ್ಯನನ್ನು ಕುಮುದಾರಾತಿ, ದ್ರೌಪದಿಯನ್ನು ಜಲಜಾತಮುಖಿ ಎಂದು ಕರೆದಿರುವುದು
(೨) ಯಾವುದು ಅಮೃತ – ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು

ಪದ್ಯ ೩೯: ದ್ರೌಪದಿಯು ಕೃಷ್ಣನಿಗೆ ಏನು ಹೇಳಿದಳು?

ನಾವು ಹಸಿದೈತಂದರೀ ಪರಿ
ದೇವಿ ನಾನಾದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈಮುಗಿದು
ದೇವ ನಿಮ್ಮಯ ಹಸಿವ ಕಳೆವೊಡೆ
ಭಾವಶುದ್ಧಿಯ ಭಕುತಿ ಬೇಹುದು
ನಾವು ಚಂಚಲ ಚಿತ್ತರೆಂದಳು ಕಮಲಮುಖಿ ನಗುತ (ಅರಣ್ಯ ಪರ್ವ, ೧೭ ಸಂಧಿ, ೩೯ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣ ನಾವು ಹಸಿದು ಬಂದಿದ್ದೇವೆ, ನೀನಾದರೋ ಏನೇನೋ ಸುದ್ದಿಯನ್ನು ಹೇಳುತ್ತಿರುವೆ. ಇದು ಉಚಿತವೇ ಎಂದು ಶ್ರೀಕೃಷ್ಣನು ಹೇಳಲು, ದ್ರೌಪದಿಯು ನಡುಗಿ, ಕೈಮುಗಿದು, ದೇವಾ, ನಿನ್ನ ಹಸಿವನ್ನು ಹೋಗಲಾಡಿಸಲು ಭಾವಶುದ್ಧಿಯ ಭಕ್ತಿ ಬೇಕು, ಆದರೆ ನಮ್ಮ ಚಿತ್ತಗಳು ಚಮ್ಚಲವಾಗಿವೆ ಎಂದು ನಗುತ್ತಾ ಹೇಳಿದಳು.

ಅರ್ಥ:
ಹಸಿವು: ಆಹಾರವನ್ನು ಬಯಸು; ಪರಿ: ವಿಧವಾಗಿ; ನಾನಾ: ಹಲವಾರು; ದೂರ: ಅಂತರ; ಉಚಿತ: ಸರಿಯಾದ; ನಡುಗು: ಕಂಪಿಸು; ಕೈಮುಗಿ: ನಮಸ್ಕರಿಸು; ದೇವ: ಭಗವಂತ; ಕಳೆ: ಅಂತ್ಯಗೊಳ್ಳು; ಭಾವ: ಮನೋಧರ್ಮ, ಭಾವನೆ; ಶುದ್ಧ: ನಿರ್ಮಲ; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬೇಹುದು: ಬೇಕು; ಚಂಚಲ: ಚೆಲ್ಲಾಟ; ಚಿತ್ತ: ಮನಸ್ಸು; ಕಮಲಮುಖಿ: ಕಮಲದಂತ ಮುಖವುಳ್ಳವಳು; ನಗು: ಸಂತಸ;

ಪದವಿಂಗಡಣೆ:
ನಾವು+ ಹಸಿದ್+ಐತಂದರ್+ಈ+ ಪರಿ
ದೇವಿ +ನಾನಾ+ದೂರ +ದೂರುವುದ್
ಆವುದ್+ಉಚಿತವು +ಹೇಳ್+ಎನಲು+ ನಡನಡುಗಿ +ಕೈಮುಗಿದು
ದೇವ +ನಿಮ್ಮಯ +ಹಸಿವ +ಕಳೆವೊಡೆ
ಭಾವಶುದ್ಧಿಯ +ಭಕುತಿ+ ಬೇಹುದು
ನಾವು +ಚಂಚಲ +ಚಿತ್ತರೆಂದಳು +ಕಮಲಮುಖಿ +ನಗುತ

ಅಚ್ಚರಿ:
(೧) ಕೃಷ್ಣನಿಗೆ ಹಸಿವು ನೀಗಿಸುವ ಪರಿ – ದೇವ ನಿಮ್ಮಯ ಹಸಿವ ಕಳೆವೊಡೆ ಭಾವಶುದ್ಧಿಯ ಭಕುತಿ ಬೇಹುದು

ಪದ್ಯ ೩೮: ದ್ರೌಪದಿಯು ಕೃಷ್ಣನಿಗೆ ಏನು ಹೇಳಿದಳು?

ಶೌರಿ ಕೇಳ್ ಸಾಕ್ಶಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈ ತಂದೊಡಭ್ಯಾಗತೆಯ ನೃಪನಿತ್ತ
ತೀರಿತಕ್ಷಯದನ್ನವಿಂದು ಮ
ಹಾಋಷಿಯ ಘನಘೋರ ವಹ್ನಿಗು
ಪಾರ ನಿನ್ನಯ ಮೈದುನರು ಕೇಳೆಂದಳಿಂದುಮುಖಿ (ಅರಣ್ಯ ಪರ್ವ, ೧೭ ಸಂಧಿ, ೩೮ ಪದ್ಯ)

ತಾತ್ಪರ್ಯ:
ಹೇ ಶ್ರೀಕೃಷ್ಣ ಕೇಳು, ಶ್ವಿಅನ ಅವತಾರವೇ ಆದ ದೂರ್ವಾಸ ಮುನಿಯು ಪರಿವಾರದೊಡನೆ ಬರಲು, ಧರ್ಮಜನು ಅನಿರೀಕ್ಷಿತವಾಗಿ ಬಂದ ಅತಿಥಿಗಳನ್ನು ಭೋಜನಕ್ಕೆ ಬನ್ನಿರೆಂದು ಕರೆದಿದ್ದಾನೆ. ಇಂದು ಅಕ್ಷಯಪಾತ್ರೆ ಬರಿದಾಗಿದೆ. ಈಗ ದೂರ್ವಾಸನ ಮಹಾಭಯಂಕರವಾದ ಕೋಪದ ಬೆಂಕಿಗೆ ನಿನ್ನ ಮೈದುನಋಎ ಉಪಹಾರವಾಗುತ್ತಾರೆ ಎಂದನು.

ಅರ್ಥ:
ಶೌರಿ: ಕೃಷ್ಣ; ಕೇಳು: ಆಲಿಸು; ಸಾಕ್ಷಾತ್: ಸ್ವಯಂ; ಶಿವ: ಶಂಕರ; ಅವತಾರ: ದೇವತೆಗಳು ಭೂಮಿಯ ಮೇಲೆ ಹುಟ್ಟುವುದು; ಮುನಿ: ಋಷಿ; ಪರಿವಾರ: ಸುತ್ತಲಿನವರು, ಪರಿಜನ; ಸಹಿತ: ಜೊತೆ; ಅಭ್ಯಾಗತ: ಅನಿರೀಕ್ಷಿತವಾಗಿ ಬಂದ ಅತಿಥಿ; ನೃಪ: ರಾಜ; ತೀರಿತು: ಮುಗಿಯಿತು; ಅಕ್ಷಯ: ಕ್ಷಯವಿಲ್ಲದ್ದು; ಅನ್ನ: ಊಟ; ಮಹಾ: ಶ್ರೇಷ್ಠ; ಘನಘೋರ: ಭಯಂಕರ; ವಹ್ನಿ: ಬೆಂಕಿ; ಉಪಾರ: ಉಪಹಾರ, ಊಟ; ಮೈದುನ: ತಂಗಿಯ ಗಂಡ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ)

ಪದವಿಂಗಡಣೆ:
ಶೌರಿ +ಕೇಳ್+ ಸಾಕ್ಶಾತು +ಶಿವನ್+ಅವ
ತಾರವಹ+ ದೂರ್ವಾಸ+ಮುನಿ +ಪರಿ
ವಾರ +ಸಹಿತೈ +ತಂದೊಡ್+ಅಭ್ಯಾಗತೆಯ +ನೃಪನಿತ್ತ
ತೀರಿತ್+ಅಕ್ಷಯದ್+ಅನ್ನವ್+ಇಂದು+ ಮ
ಹಾ+ಋಷಿಯ +ಘನಘೋರ +ವಹ್ನಿಗ್
ಉಪಾರ +ನಿನ್ನಯ +ಮೈದುನರು +ಕೇಳೆಂದಳ್+ಇಂದುಮುಖಿ

ಅಚ್ಚರಿ:
(೧) ದೂರ್ವಾಸಮುನಿ, ಮಹಾಋಷಿ – ದೂರ್ವಾಸರನ್ನು ಕರೆದ ಪರಿ
(೨) ದೂರ್ವಾಸನ ಕೋಪವನ್ನು ಹೇಳುವ ಪರಿ – ಮಹಾಋಷಿಯ ಘನಘೋರ ವಹ್ನಿಗು
ಪಾರ ನಿನ್ನಯ ಮೈದುನರು