ಪದ್ಯ ೩೭: ಕೃಷ್ಣನು ದ್ರೌಪದಿಗೆ ಏನು ಹೇಳಿದನು?

ಸ್ತೋತ್ರಕೀಗಳು ಸಮಯವೇ ಹೆ
ಳೇತಕೀ ಸ್ತುತಿ ತಂಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ
ಬೀತತರು ಶುಕನಿಕರಕೀವುದೆ
ಔತಣವ ಸಲೆ ತುಷ್ಟಿ ಬಡಿಸುವ
ರೀತಿಯನು ನೀ ಬಲ್ಲೆಯೆಂದಳು ಕಮಲಮುಖಿ ನಗುತ (ಅರಣ್ಯ ಪರ್ವ, ೧೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸ್ತುತಿಸಲು ಇದು ಕಾಲವಲ್ಲ. ಅಷ್ಟು ಆತುರದಿಂದ ನನ್ನನ್ನು ಏಕೆ ಆಹ್ವಾನಿಸಿದೆ ಹೇಳು, ಎಂದು ಕೃಷ್ಣನು ಕೇಳಿದನು. ದ್ರೌಪದಿಯು ಹಣ್ಣುಗಳೆಲ್ಲವೂ ತೀರಿದ ಮೇಲೆ ಮರವು ಗಿಳಿಗಳಿಗೆ ಔತಣವನ್ನು ಹೇಗೆ ಕೊಡಲು ಸಾಧ್ಯ? ತೃಪ್ತಿ ಪಡಿಸುವ ರೀತಿಯನ್ನು ನೀನು ಬಲ್ಲೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಸ್ತ್ರೋತ್ರ: ದೇವತಾ ಸ್ತುತಿ; ಸಮಯ: ಕಾಲ; ಸ್ತುತಿ: ಹೊಗಳಿಕೆ; ತಂಗಿ: ಅನುಜೆ; ಚಿತ್ತ: ಮನಸ್ಸು; ಆತುರ: ವೇಗ; ಹಿಡಿ: ಬಿಗಿ; ಎತ್ತು: ಮೇಲೇಳಿಸು; ಮಸ್ತಕ: ತಲೆ, ಶಿರ; ಬೀತ: ತೀರಿದ, ಮುಗಿದ; ತರು: ಮರ; ಶುಕ: ಗಿಳಿ; ನಿಕರ: ಗುಂಪು; ಈವು: ನೀಡು; ಔತಣ: ಊಟ; ಸಲೆ: ಸದಾ, ಸರಿಯಾಗಿ; ತುಷ್ಟಿ: ತೃಪ್ತಿ, ಆನಂದ; ಬಡಿಸು: ನೀಡು; ರೀತಿ: ವಿಧಾನ; ಬಲ್ಲೆ: ತಿಳಿದಿರುವೆ; ಕಮಲಮುಖಿ: ಕಮಲದಂತ ಮುಖವುಳ್ಳವಳು; ನಗು: ಹರ್ಷಿಸು;

ಪದವಿಂಗಡಣೆ:
ಸ್ತೋತ್ರಕ್+ಈಗಳು +ಸಮಯವೇ +ಹೆಳ್
ಏತಕೀ +ಸ್ತುತಿ +ತಂಗಿ +ಚಿತ್ತದೊಳ್
ಆತುರವಿದೇನ್+ಎನುತ +ಹಿಡಿದೆತ್ತಿದನು +ಮಸ್ತಕವ
ಬೀತ+ತರು +ಶುಕ+ನಿಕರಕ್+ಈವುದೆ
ಔತಣವ +ಸಲೆ +ತುಷ್ಟಿ +ಬಡಿಸುವ
ರೀತಿಯನು +ನೀ +ಬಲ್ಲೆಯೆಂದಳು +ಕಮಲಮುಖಿ +ನಗುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೀತತರು ಶುಕನಿಕರಕೀವುದೆ ಔತಣವ

ನಿಮ್ಮ ಟಿಪ್ಪಣಿ ಬರೆಯಿರಿ