ಪದ್ಯ ೩೭: ಕೃಷ್ಣನು ದ್ರೌಪದಿಗೆ ಏನು ಹೇಳಿದನು?

ಸ್ತೋತ್ರಕೀಗಳು ಸಮಯವೇ ಹೆ
ಳೇತಕೀ ಸ್ತುತಿ ತಂಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ
ಬೀತತರು ಶುಕನಿಕರಕೀವುದೆ
ಔತಣವ ಸಲೆ ತುಷ್ಟಿ ಬಡಿಸುವ
ರೀತಿಯನು ನೀ ಬಲ್ಲೆಯೆಂದಳು ಕಮಲಮುಖಿ ನಗುತ (ಅರಣ್ಯ ಪರ್ವ, ೧೭ ಸಂಧಿ, ೩೭ ಪದ್ಯ)

ತಾತ್ಪರ್ಯ:
ಸ್ತುತಿಸಲು ಇದು ಕಾಲವಲ್ಲ. ಅಷ್ಟು ಆತುರದಿಂದ ನನ್ನನ್ನು ಏಕೆ ಆಹ್ವಾನಿಸಿದೆ ಹೇಳು, ಎಂದು ಕೃಷ್ಣನು ಕೇಳಿದನು. ದ್ರೌಪದಿಯು ಹಣ್ಣುಗಳೆಲ್ಲವೂ ತೀರಿದ ಮೇಲೆ ಮರವು ಗಿಳಿಗಳಿಗೆ ಔತಣವನ್ನು ಹೇಗೆ ಕೊಡಲು ಸಾಧ್ಯ? ತೃಪ್ತಿ ಪಡಿಸುವ ರೀತಿಯನ್ನು ನೀನು ಬಲ್ಲೆ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಸ್ತ್ರೋತ್ರ: ದೇವತಾ ಸ್ತುತಿ; ಸಮಯ: ಕಾಲ; ಸ್ತುತಿ: ಹೊಗಳಿಕೆ; ತಂಗಿ: ಅನುಜೆ; ಚಿತ್ತ: ಮನಸ್ಸು; ಆತುರ: ವೇಗ; ಹಿಡಿ: ಬಿಗಿ; ಎತ್ತು: ಮೇಲೇಳಿಸು; ಮಸ್ತಕ: ತಲೆ, ಶಿರ; ಬೀತ: ತೀರಿದ, ಮುಗಿದ; ತರು: ಮರ; ಶುಕ: ಗಿಳಿ; ನಿಕರ: ಗುಂಪು; ಈವು: ನೀಡು; ಔತಣ: ಊಟ; ಸಲೆ: ಸದಾ, ಸರಿಯಾಗಿ; ತುಷ್ಟಿ: ತೃಪ್ತಿ, ಆನಂದ; ಬಡಿಸು: ನೀಡು; ರೀತಿ: ವಿಧಾನ; ಬಲ್ಲೆ: ತಿಳಿದಿರುವೆ; ಕಮಲಮುಖಿ: ಕಮಲದಂತ ಮುಖವುಳ್ಳವಳು; ನಗು: ಹರ್ಷಿಸು;

ಪದವಿಂಗಡಣೆ:
ಸ್ತೋತ್ರಕ್+ಈಗಳು +ಸಮಯವೇ +ಹೆಳ್
ಏತಕೀ +ಸ್ತುತಿ +ತಂಗಿ +ಚಿತ್ತದೊಳ್
ಆತುರವಿದೇನ್+ಎನುತ +ಹಿಡಿದೆತ್ತಿದನು +ಮಸ್ತಕವ
ಬೀತ+ತರು +ಶುಕ+ನಿಕರಕ್+ಈವುದೆ
ಔತಣವ +ಸಲೆ +ತುಷ್ಟಿ +ಬಡಿಸುವ
ರೀತಿಯನು +ನೀ +ಬಲ್ಲೆಯೆಂದಳು +ಕಮಲಮುಖಿ +ನಗುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೀತತರು ಶುಕನಿಕರಕೀವುದೆ ಔತಣವ

ಪದ್ಯ ೩೬: ದ್ರೌಪದಿಯು ಕೃಷ್ಣನ ಚರಣವನ್ನು ಹೇಗೆ ಹೊಗಳಿದಳು?

ಧರಣಿಯನು ಬಿಡದಳೆದು ಹೆಚ್ಚಿದ
ಚರಣವಿದು ಕಾಳಿಂಗ ಮರ್ದನ
ಚರಣವಿದು ಕಲ್ಲಾದಹಲ್ಯೆಯ ಶಾಪನಿರುಹರಣ
ಚರಣವಿದು ಸುರನದಿಯ ಸೃಜಿಸಿದ
ಚರಣವಿದು ಶಕಟ ಪ್ರಭಂಜನ
ಚರಣವಿದೆಲಾಯೆನುತ ಕೊಂಡಾಡಿದಳು ಹರಿಪದವ (ಅರಣ್ಯ ಪರ್ವ, ೧೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಭೂಮಿಯನ್ನು ಅಳ್ದು ಇನ್ನೂ ಉಳಿದ ಪಾದವಿದು. ಕಾಳಿಂಗನನ್ನು ಮರ್ದಿಸಿದ ಪಾದವಿದು. ಕಲ್ಲಾಗಿದ್ದ ಅಹಲ್ಯೆಯ ಶಾಪವಿಮೋಚನೆ ಮಾಡಿದ ಪಾದವಿದು. ದೇವಗಂಗೆಯನ್ನು ತಂದ ಚರಣವಿದು, ಶಕಟಾಸುರನನ್ನು ಮರ್ದಿಸಿದ ಪಾದವಿದು ಎಂದು ದ್ರೌಪದಿಯು ಶ್ರೀಕೃಷ್ಣನ ಚಾಣಗಳನ್ನು ಹೊಗಳಿದಳು.

ಅರ್ಥ:
ಧರಣಿ: ಭೂಮಿ; ಅಳೆ: ಅಳತೆ ಮಾಡು; ಬಿಡು: ತೊರೆ; ಹೆಚ್ಚು: ಅಧಿಕ; ಕಾಳಿಂಗ: ಸರ್ಪ; ಮರ್ದನ: ಸಾವು; ಚರಣ: ಪಾದ; ಕಲ್ಲು: ಶಿಲೆ; ಶಾಪ: ನಿಷ್ಠುರದ ನುಡಿ; ಹರಣ: ನಾಶಗೊಳಿಸು; ಸುರನದಿ: ದೇವಗಂಗೆ; ಸೃಜಿಸು: ನಿರ್ಮಿಸು; ಪ್ರಭಂಜನ: ಚೂರು ಮಾಡುವುದು; ಕೊಂಡಾಡು: ಹೊಗಳು; ಪದ: ಪಾದ, ಚರಣ;

ಪದವಿಂಗಡಣೆ:
ಧರಣಿಯನು +ಬಿಡದ್+ಅಳೆದು+ ಹೆಚ್ಚಿದ
ಚರಣವಿದು +ಕಾಳಿಂಗ +ಮರ್ದನ
ಚರಣವಿದು+ ಕಲ್ಲಾದ್+ಅಹಲ್ಯೆಯ +ಶಾಪನಿರುಹರಣ
ಚರಣವಿದು +ಸುರನದಿಯ+ ಸೃಜಿಸಿದ
ಚರಣವಿದು +ಶಕಟ +ಪ್ರಭಂಜನ
ಚರಣವಿದೆಲಾ+ಎನುತ +ಕೊಂಡಾಡಿದಳು +ಹರಿ+ಪದವ

ಅಚ್ಚರಿ:
(೧) ಚರಣವಿದು – ೫ ಸಾಲಿನ ಮೊದಲ ಪದ
(೨) ಚರಣ, ಪದ – ಸಮನಾರ್ಥಕ ಪದ

ಪದ್ಯ ೩೫: ದ್ರೌಪದಿಯು ಹೇಗೆ ಆನಂದಿಸಿದಳು?

ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕವಾರಿಯೊ
ಳೊಬ್ಬುಳಿಯೊಳೊಡೆ ಹಾಯ್ದು ನಿಂದವು ನಯನವಾರಿಗಳು
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ (ಅರಣ್ಯ ಪರ್ವ, ೧೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಕಾಡುತ್ತಿದ್ದ ದುಃಖದ ಕೊಬ್ಬು ಮುರಿಯಿತು. ಅವಳು ಸಂತಸದಿಮ್ದ ಉಬ್ಬಿದಳು. ರೋಮಾಂಚನದ ಎಲ್ಲೆ ಮೀರಿ ಹೊಡೆದು ಕಣ್ಣುಗಳಲ್ಲಿ ಆನಂದಭಾಷ್ಮವಾಗಿ ನಿಮ್ದವು. ಸಭ್ಯತೆಯ ಬಳ್ಳಿ ಹೂ ಬಿಟ್ಟು, ಹರಡಿ ಹಣ್ಣಾದಂತೆ ತನ್ನ ದೇಹವನ್ನು ಶ್ರೀಕೃಷ್ಣನ ಪಾದಕಮಲಗಳಲ್ಲಿ ಈಡಾಡಿದಳು.

ಅರ್ಥ:
ಉಬ್ಬು: ಹಿಗ್ಗು; ಹರುಷ: ಸಂತಸ; ದುಗುಡ: ದುಃಖ; ಕೊಬ್ಬು: ಸೊಕ್ಕು, ಹಿಗ್ಗು; ಮುರಿ: ಸೀಳು; ಪುಳುಕ: ಮೈನವಿರೇಳುವಿಕೆ, ರೋಮಾಂಚನ; ಉಬ್ಬುಳಿ: ಹೆಚ್ಚು; ಉಳಿ: ಅವಿತುಕೊ; ಒಡೆ: ಸೀಳು, ಬಿರಿ; ಹಾಯಿ: ಮೇಲೆಬೀಳು, ಚಾಚು; ನಿಂದವು: ನಿಲ್ಲು; ನಯನ: ಕಣ್ಣು; ವಾರಿ: ನೀರು; ಸಭ್ಯತೆ: ಶಿಷ್ಟಾಚಾರ; ಲತೆ: ಬಳ್ಳಿ; ಹೂತ: ಹೂಬಿಟ್ಟ; ಹಸರು: ವ್ಯಾಪಿಸು, ಹಬ್ಬಿಸು; ಹಬ್ಬು: ಹರಡು, ವ್ಯಾಪಿಸು; ಫಲ: ಪ್ರಯೋಜನ, ಫಲಿತಾಂಶ; ಕಾಯ: ದೇಹ; ಈಡಾಡು: ಒಗೆ, ಚೆಲ್ಲು; ಹರಿ: ಕೃಷ್ಣ; ಪದ: ಪಾದ, ಚರಣ; ಪಯೋಜ: ಕಮಲ;

ಪದವಿಂಗಡಣೆ:
ಉಬ್ಬಿದಳು +ಹರುಷದಲಿ +ದುಗುಡದಕ್
ಉಬ್ಬು +ಮುರಿದುದು +ಪುಳಕ+ವಾರಿಯೊಳ್
ಉಬ್ಬ್+ಉಳಿಯೊಳ್+ಒಡೆ +ಹಾಯ್ದು +ನಿಂದವು +ನಯನ+ವಾರಿಗಳು
ಸಭ್ಯತಾಲತೆ +ಹೂತು +ಹಸರಿಸಿ
ಹಬ್ಬಿ +ಫಲವಾದಂತೆ +ಕಾಯವನ್
ಇಬ್ಬರದಲ್+ಈಡಾಡಿದಳು +ಹರಿ+ಪದ+ಪಯೋಜದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಸಭ್ಯತಾಲತೆ ಹೂತು ಹಸರಿಸಿ ಹಬ್ಬಿ ಫಲವಾದಂತೆ ಕಾಯವ
ನಿಬ್ಬರದಲೀಡಾಡಿದಳು ಹರಿಪದಪಯೋಜದಲಿ
(೨) ಪುಳಕವಾರಿ, ನಯನವಾರಿ – ಪದಗಳ ಬಳಕೆ