ಪದ್ಯ ೧೪: ದೂರ್ವಾಸರು ಧರ್ಮಜನನ್ನು ಏನು ಕೇಳಿದರು?

ಧಾರುಣೀಪತಿ ಹೇಳಬಹುದು ಪ
ಚಾರವೇಕಿದು ರಾಜ್ಯಪದ ವಿ
ಸ್ತಾರವಾವುದು ರಾಜಋಷಿ ನಿನಗಾರು ಸರಿಯುಂಟು
ಸಾರೆಯಾಯ್ತ ಸಮಯವೆಮ್ಮ ಕ್ಷು
ಧಾರಪಣವ್ರಣ ವಿವಿಧ ಪೀಡಾ
ಕಾರಕೇನು ಚಿಕಿತ್ಸೆಯೆಂದನು ಮುನಿಪ ಭೂಪನಿಗೆ (ಅರಣ್ಯ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ದೂರ್ವಾಸನು, ರಾಜ, ಈ ಉಪಚಾರದ ಮಾತೇಕೆ? ನಿನ್ನ ರಾಜ್ಯ ವಿಸ್ತಾರಕ್ಕೆ ಯಾವುದು ಸರಿ, ರಾಜರ್ಷಿಯಾದ ನಿನಗೆ ಯಾರು ಸರಿ? ಕಾಲ ಕಳೆಯುತ್ತಾ ಬಂತು, ನಮ್ಮ ಹಸಿವಿನ ಪೀಡೆಗೆ ನಿನ್ನಲ್ಲಿ ಚಿಕಿತ್ಸೆಯುಂಟೆ ಎಂದು ಕೇಳಿದನು.

ಅರ್ಥ:
ಧಾರುಣೀಪತಿ: ರಾಜ; ಪಚಾರ: ಮೂದಲಿಕೆ; ಪದ: ಪದವಿ; ವಿಸ್ತಾರ: ಹರಹು; ಋಷಿ: ಮುನಿ; ಸರಿಯುಂಟು: ಸಮಾನರಾದವರು; ಸಾರೆ: ಹತ್ತಿರ, ಸಮೀಪ; ಸಮಯ: ಕಾಲ; ಕ್ಷುಧೆ: ಹಸಿವು; ವಿವಿಧ: ಹಲವಾರು; ಪೀಡ: ತೊಂದರೆ; ಚಿಕಿತ್ಸೆ: ಪರಿಹಾರ, ಮದ್ದು; ಮುನಿಪ: ಋಷಿ; ಭೂಪ: ರಾಜ;

ಪದವಿಂಗಡಣೆ:
ಧಾರುಣೀಪತಿ+ ಹೇಳಬಹುದು +ಪ
ಚಾರವೇಕಿದು +ರಾಜ್ಯಪದ +ವಿ
ಸ್ತಾರವಾವುದು+ ರಾಜಋಷಿ +ನಿನಗಾರು +ಸರಿಯುಂಟು
ಸಾರೆಯಾಯ್ತ+ ಸಮಯವೆಮ್ಮ +ಕ್ಷು
ಧಾರಪಣವ್ರಣ+ ವಿವಿಧ+ ಪೀಡಾ
ಕಾರಕೇನು +ಚಿಕಿತ್ಸೆ+ಯೆಂದನು +ಮುನಿಪ +ಭೂಪನಿಗೆ

ಅಚ್ಚರಿ:
(೧) ಹಸಿವಾಗಿದೆ ಎಂದು ಹೇಳುವ ಪರಿ – ಸಾರೆಯಾಯ್ತ ಸಮಯವೆಮ್ಮ ಕ್ಷುಧಾರಪಣವ್ರಣ ವಿವಿಧ ಪೀಡಾಕಾರಕೇನು ಚಿಕಿತ್ಸೆ

ಪದ್ಯ ೧೩: ಧರ್ಮಜನು ತನ್ನ ಸ್ಥಿತಿಯನ್ನು ಹೇಗೆ ವಿವರಿಸಿದನು?

ದೇಶಕಾನನ ವಸನ ವಲ್ಕಲ
ಭೂಸುರವ್ರಜವಾತ್ಮಜನವು ಪ
ಲಾಶ ಪರ್ಣವೆ ಪಾತ್ರ ಭೋಜನ ಕಂದಮೂಲಫಲ
ಈ ಸರಿತ್ಪಾನೀಯ ಮಜ್ಜನ
ವಾಸವೀಗೃಹ ಭುವನ ರಾಜ್ಯ ವಿ
ಲಾಸವೆಮ್ಮದು ಜೀಯ ಚಿತ್ತವಿಸೆಂದನಾ ಭೂಪ (ಅರಣ್ಯ ಪರ್ವ, ೧೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮುನಿಶ್ರೇಷ್ಠರೇ, ನಮಗೆ ಕಾಡೇ ದೇಶ, ನಾರುಮುಡಿಯೇ ಬಟ್ಟೆ, ಬ್ರಾಹ್ಮಣರೇ ನಮ್ಮವರು, ಮುತ್ತುಗದೆಲೆಯೇ ಪಾತ್ರೆ, ಗೆಡ್ಡೆ, ಬೇರು, ಹಣ್ಣುಗಳೇ ಭೋಜನ, ಈ ತೊರೆಯ ನೀರೇ ನಮಗೆ ಪಾನೀಯ ಮತ್ತು ಸ್ನಾನದ ಆಸರೆ, ಈ ಕುಟೀರದಲ್ಲಿಯೇ ನಮ್ಮ ವಾಸ, ಇದೇ ನಮ್ಮ ಪಾಲಿನ ಪ್ರಪಂಚ, ಇದೇ ರಾಜ್ಯ ವೈಭವ ಕೇಳಿ ಎಂದು ಯುಧಿಷ್ಠಿರನು ದೂರ್ವಾಸ ಮುನಿಗಳಿಗೆ ತಿಳಿಸಿದನು.

ಅರ್ಥ:
ದೇಶ: ರಾಷ್ಟ್ರ; ಕಾನನ: ಕಾಡು; ವಸನ: ಬಟ್ಟೆ, ವಸ್ತ್ರ; ವಲ್ಕಲ: ನಾರುಬಟ್ಟೆ, ನಾರುಮಡಿ; ಭೂಸುರ: ಬ್ರಾಹ್ಮಣ; ವ್ರಜ: ಗುಂಪು; ಆತ್ಮಜ: ಒಡಹುಡ್ಡಿದ; ಪಲಾಶ: ಮುತ್ತುಗ; ಪರ್ಣ: ಎಲೆ; ಪಾತ್ರ: ಪಾತ್ರೆ,ಬಟ್ಟಲು; ಭೋಜನ: ಊಟ; ಕಂದ: ಗೆಡ್ಡೆಗಳು; ಮೂಲ: ಬೇರು; ಫಲ: ಹಣ್ಣು; ಸರಿತ್ಪಾನೀಯ: ತೊರೆಯ ಕುಡಿಯುವ ನೀರು; ಮಜ್ಜನ: ಸ್ನಾನ; ವಾಸ: ಮನೆ, ವಾಸಸ್ಥಳ; ಗೃಹ: ಮನೆ; ಭುವನ: ಜಗತ್ತು, ಪ್ರಪಂಚ; ರಾಜ್ಯ: ದೇಶ; ವಿಲಾಸ: ವಿಹಾರ, ಕ್ರೀಡೆ; ಜೀಯ: ಒಡೆಯ; ಚಿತ್ತವಿಸು: ಗಮನವಿಟ್ಟು ಕೇಳು; ಭೂಪ: ರಾಜ;

ಪದವಿಂಗಡಣೆ:
ದೇಶ+ಕಾನನ+ ವಸನ +ವಲ್ಕಲ
ಭೂಸುರ+ವ್ರಜವ್+ಆತ್ಮಜನವು +ಪ
ಲಾಶ +ಪರ್ಣವೆ +ಪಾತ್ರ +ಭೋಜನ +ಕಂದ+ಮೂಲ+ಫಲ
ಈ +ಸರಿತ್ಪಾನೀಯ +ಮಜ್ಜನ
ವಾಸವೀ+ಗೃಹ+ ಭುವನ +ರಾಜ್ಯ +ವಿ
ಲಾಸವೆಮ್ಮದು +ಜೀಯ +ಚಿತ್ತವಿಸೆಂದನಾ +ಭೂಪ

ಅಚ್ಚರಿ:
(೧) ಕಾಡಿನ ಸ್ಥಿತಿಯನ್ನು ವಿವರಿಸುವ ಪರಿ – ಪಲಾಶ ಪರ್ಣವೆ ಪಾತ್ರ ಭೋಜನ ಕಂದಮೂಲಫಲ

ಪದ್ಯ ೧೨: ಧರ್ಮಜನು ದುರ್ವಾಸ ಮುನಿಯನ್ನು ಹೇಗೆ ಸ್ವಾಗತಿಸಿದನು?

ಕುಶಲವೇ ನಿಮಗೆನುತಲೈವರ
ನೊಸಲ ಹಿಡಿದೆತ್ತಿದನು ಕರದಿಂ
ದೊಸೆದು ದೌಮ್ಯಾದಿಗಳ ಭೂಸುರ ಜನವ ಮನ್ನಿಸಿದ
ಹೊಸ ಕುಶೆಯ ಪೀಠದಲಿ ಮುನಿ ಮಂ
ಡಿಸಿದನರ್ಘ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಾದಿ ಪೂಜೆಯ ಮಾಡಿ ನೃಪ ನುಡಿದ (ಅರಣ್ಯ ಪರ್ವ, ೧೭ ಸಂಧಿ, ೧೨ ಪದ್ಯ)

ತಾತ್ಪರ್ಯ:
ನೀವು ಕುಶಲದಿಂದಿರುವಿರಾ ಎಂದು ಕೇಳುತ್ತಾ ದುರ್ವಾಸನು ಪಾಂಡವರನ್ನೆತ್ತಿ ಕುಶಲ ಪ್ರಶ್ನೆ ಮಾಡಿದನು. ಧೌಮ್ಯನೇ ಮೊದಲಾದವರನ್ನು ಮನ್ನಿಸಿದನು. ಆಗ ತಾನೇ ತಂದ ದರ್ಭೆಯ ಆಸನದಲ್ಲಿ ದೂರ್ವಾಸನು ಕುಳಿತನು. ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕಾದಿ ಉಪಾಅರಗಳನ್ನು ಮಾಡಿ ಧರ್ಮಜನು ಹೀಗೆ ನುಡಿದನು.

ಅರ್ಥ:
ಕುಶಲ: ಕ್ಷೇಮ; ನೊಸಲು: ಹಣೆ, ಲಲಾಟ; ಹಿಡಿದು: ಗ್ರಹಿಸು; ಕರ: ಹಸ್ತ, ಕೈ; ಒಸೆ:ಪ್ರೀತಿಸು; ಆದಿ: ಮುಂತಾದ; ಭೂಸುರ: ಬ್ರಾಹ್ಮಣ; ಜನ: ಗುಂಪು; ಮನ್ನಿಸು: ಗೌರವಿಸು; ಹೊಸ: ನವೀನ; ಕುಶೆ: ದರ್ಭೆ; ಪೀಠ: ಆಸನ; ಮುನಿ: ಋಷಿ; ಮಂಡಿಸು: ಕುಳಿತುಕೊಳ್ಳು, ಕೂಡು; ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಆಚಮನ: ವೈದಿಕಕರ್ಮಗಳನ್ನು ಮಾಡುವಾಗ ಶುದ್ಧಿಗಾಗಿ ಅಂಗೈಯಲ್ಲಿ ನೀರನ್ನು ಹಾಕಿಕೊಂಡು ಕುಡಿಯುವುದು; ಪಾದ್ಯ: ಕಾಲು ತೊಳೆಯುವ ನೀರು; ಪ್ರಸರ: ವಿಸ್ತಾರ, ಹರಹು; ಮಧುಪರ್ಕ:ಮೊಸರು, ತುಪ್ಪ, ಹಾಲು, ಜೇನು ತುಪ್ಪ, ಸಕ್ಕರೆ – ಈ ಐದರ ಮಿಶ್ರಣ; ಪೂಜೆ: ಆರಾಧನೆ; ನೃಪ: ರಾಜ; ನುಡಿ: ಮಾತಾಡು;

ಪದವಿಂಗಡಣೆ:
ಕುಶಲವೇ +ನಿಮಗ್+ಎನುತಲ್+ಐವರ
ನೊಸಲ+ ಹಿಡಿದ್+ಎತ್ತಿದನು +ಕರದಿಂದ್
ಒಸೆದು +ದೌಮ್ಯಾದಿಗಳ +ಭೂಸುರ +ಜನವ +ಮನ್ನಿಸಿದ
ಹೊಸ +ಕುಶೆಯ +ಪೀಠದಲಿ +ಮುನಿ +ಮಂ
ಡಿಸಿದನ್+ಅರ್ಘ್ಯ+ಆಚಮನ +ಪಾದ್ಯ
ಪ್ರಸರ +ಮಧುಪರ್ಕಾದಿ +ಪೂಜೆಯ +ಮಾಡಿ +ನೃಪ +ನುಡಿದ

ಅಚ್ಚರಿ:
(೧) ದುರ್ವಾಸರನ್ನು ಗೌರವಿಸಿದ ಪರಿ – ಹೊಸ ಕುಶೆಯ ಪೀಠದಲಿ ಮುನಿ ಮಂ
ಡಿಸಿದನರ್ಘ್ಯಾಚಮನ ಪಾದ್ಯ ಪ್ರಸರ ಮಧುಪರ್ಕಾದಿ ಪೂಜೆಯ ಮಾಡಿ

ಪದ್ಯ ೧೧: ಧರ್ಮಜನು ದುರ್ವಾಸರನ್ನು ಹೇಗೆ ಬರೆಮಾಡಿದನು?

ಮರುದಿವಸ ಸತಿಯುಂಡ ಸಮಯವ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲನೆ ಯುಧಿಷ್ಠಿರನೆದ್ದು ಮುನಿಸಹಿತ
ಕಿರಿದೆಡೆಯಲಿದಿರ್ಗೊಂಡು ಭಕ್ತಿಯ
ಹೊರೆಯೊಳಗೆ ಕುಸಿದಂತೆ ನಡೆತಂ
ದೆರಗಿದನು ಮುನಿಪದಕೆ ತನ್ನನುಜಾತರೊಡಗೂಡಿ (ಅರಣ್ಯ ಪರ್ವ, ೧೭ ಸಂಧಿ, ೧೧ ಪದ್ಯ)

ತಾತ್ಪರ್ಯ:
ಮರುದಿವಸ ದ್ರೌಪದಿಯ ಊಟವಾದುದನ್ನು ತಿಳಿದು, ದೂರ್ವಾಸರು ಯುಧಿಷ್ಠಿರನ ಕುಟೀರಕ್ಕೆ ಬರಲು, ಕಪಟದ ವಾಸನೆಯನ್ನೇ ಅರಿಯದ ಯುಧಿಷ್ಠಿರನು, ತನ್ನ ತಮ್ಮಂದಿರು ಮತ್ತು ಧೌಮ್ಯನೊಡನೆ ಎದ್ದು ಬಂದು ತನ್ನ ಕುಟೀರಕ್ಕೆ ಸ್ವಲ್ಪದೂರದಲ್ಲೇ ಅವರನ್ನೆದುರುಗೊಂಡು, ಭಕ್ತಿಯ ಭಾರದಿಂದ ಕುಸಿಯುತ್ತಿರುವನೋ ಎಂಬಂತೆ ನಮಸ್ಕರಿಸಿದನು.

ಅರ್ಥ:
ಮರು: ಮುಂದಿನ, ಮಾರನೆಯ; ದಿವಸ: ದಿನ, ವಾರ; ಸತಿ: ಹೆಂಡತಿ; ಉಂಡು: ತಿನ್ನು; ಸಮಯ: ಕಾಲ; ಅರಿ: ತಿಳಿ; ಮುನಿಪತಿ: ಋಷಿ; ಬರಲು: ಆಗಮಿಸು; ಕಪಟ: ಮೋಸ; ನಿರಿಗೆ: ಸುಕ್ಕು; ಬಲ್ಲನೆ: ತಿಳಿ; ಎದ್ದು: ಮೇಲೇಳು; ಮುನಿ: ಋಷಿ; ಸಹಿತ: ಜೊತೆ; ಕಿರಿ, ಎಡೆ: ಹತ್ತಿರ; ಇದಿರ್ಗೊಂಡು: ಎದುರುಬಂದು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಹೊರೆ: ಭಾರ; ಕುಸಿ: ಕೆಳಕ್ಕೆ ಬೀಳು; ಎರಗು: ನಮಸ್ಕರಿಸು; ಪದ: ಪಾದ, ಚರಣ; ಅನುಜ: ತಮ್ಮ; ಒಡಗೂಡು: ಜೊತೆ;

ಪದವಿಂಗಡಣೆ:
ಮರು+ದಿವಸ +ಸತಿಯುಂಡ +ಸಮಯವನ್
ಅರಿದು +ಮುನಿಪತಿ+ ಬರಲು +ಕಪಟದ
ನಿರಿಗೆಯನು +ಬಲ್ಲನೆ +ಯುಧಿಷ್ಠಿರನ್+ಎದ್ದು+ ಮುನಿ+ಸಹಿತ
ಕಿರಿದೆಡೆಯಲ್+ಇದಿರ್ಗೊಂಡು+ ಭಕ್ತಿಯ
ಹೊರೆಯೊಳಗೆ+ ಕುಸಿದಂತೆ +ನಡೆತಂದ್
ಎರಗಿದನು +ಮುನಿ+ಪದಕೆ+ ತನ್+ಅನುಜಾತರ್+ಒಡಗೂಡಿ

ಅಚ್ಚರಿ:
(೧) ನಮಸ್ಕರಿಸಿದ ಪರಿ – ಭಕ್ತಿಯಹೊರೆಯೊಳಗೆ ಕುಸಿದಂತೆ ನಡೆತಂದೆರಗಿದನು ಮುನಿಪದಕೆ

ಪದ್ಯ ೧೦: ದುರ್ಯೋಧನನ ಭಾವವನ್ನು ದುರ್ವಾಸರು ಹೇಗೆ ವಿವರಿಸಿದರು?

ಇತ್ತಲಾ ದುರ್ವಾಸ ಮುನಿ ಯೆಂ
ಭತ್ತಯೆಂಟು ಸಹಸ್ರರೊಗ್ಗಿನ
ಲುತ್ತಮರ ವನಕಾಗಿ ಬಂದನು ನಗುತ ಕೌರವನ
ಮತ್ತೆ ಮುನಿಗಳು ಕಂಡಿರೇ ದು
ರ್ವೃತ್ತಿಯನು ಶಿವಯೆನುತ ತಲೆದೂ
ಗುತ್ತ ಸಾಹಂಕಾರನಲಿ ಕಾಠಿಣ್ಯಭಾವದಲಿ (ಅರಣ್ಯ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇತ್ತ ದುರ್ವಾಸನು ಎಂಬತ್ತೆಂಟು ಸಹಸ್ರ ಋಷಿಗಳೊಡನೆ ಶ್ರೇಷ್ಠವಾದ ಪಾಂಡವರಿದ್ದ ವನಕ್ಕೆ ಬಂದನು. ದುರ್ವಾಸರು ಅವರ ಬಳಿಯಿದ್ದ ಮುನಿಗಳಿಗೆ, ಶಿವ ಶಿವಾ, ಕೌರವನ ದುರ್ವೃತ್ತಿಯನ್ನು ಕಂಡಿರಾ ಎಂದು ಅಹಂಕಾರಿಯಾದ ದುರ್ಯೋಧನನ ಬಗೆಗೆ ಕಠಿಣ ಭಾವವನ್ನು ತಳೆದು ನಕ್ಕನು.

ಅರ್ಥ:
ಮುನಿ: ಋಷಿ; ಸಹಸ್ರ: ಸಾವಿರ; ಒಗ್ಗು: ಗುಂಪು; ಉತ್ತಮ: ಶ್ರೇಷ್ಠ; ವನ: ಕಾಡು; ಬಂದು: ಆಗಮಿಸು; ನಗು: ಸಂತಸ; ಕಂಡು: ನೋಡು; ದುರ್ವೃತ್ತಿ: ಕೆಟ್ಟ ಬುದ್ಧಿ; ಅಹಂಕಾರ: ದರ್ಪ, ಗರ್ವ; ಕಾಠಿಣ್ಯ: ಬಿರುಸು; ಭಾವ: ಮನೋಧರ್ಮ;

ಪದವಿಂಗಡಣೆ:
ಇತ್ತಲಾ +ದುರ್ವಾಸ +ಮುನಿ +ಯೆಂ
ಭತ್ತಯೆಂಟು+ ಸಹಸ್ರರ್+ಒಗ್ಗಿನಲ್
ಉತ್ತಮರ+ ವನಕಾಗಿ+ ಬಂದನು +ನಗುತ+ ಕೌರವನ
ಮತ್ತೆ +ಮುನಿಗಳು +ಕಂಡಿರೇ +ದು
ರ್ವೃತ್ತಿಯನು +ಶಿವಯೆನುತ+ ತಲೆದೂ
ಗುತ್ತ +ಸಾಹಂಕಾರನಲಿ+ ಕಾಠಿಣ್ಯಭಾವದಲಿ

ಅಚ್ಚರಿ:
(೧) ದುರ್ಯೋಧನನ ಭಾವವನ್ನು ವಿವರಿಸುವ ಪರಿ – ಕಂಡಿರೇ ದುರ್ವೃತ್ತಿಯನು ಶಿವಯೆನುತ ತಲೆದೂಗುತ್ತ ಸಾಹಂಕಾರನಲಿ ಕಾಠಿಣ್ಯಭಾವದಲಿ

ಪದ್ಯ ೯: ಭೀಷ್ಮ ದ್ರೋಣರೇಕೆ ದುಃಖ ಪಟ್ಟರು?

ಅಗಡು ಕೌರವನೊಡ್ಡಿದನಲಾ
ವಿಗಡವನು ಮುನಿಯುಗ್ರರೋಷದ
ಸೆಗಳಿಕೆಗೆ ಪಾಂಡವರು ಸವಿದುತ್ತಾದರಕಟೆನುತ
ದುಗುಡದಲಿ ಗಾಂಗೇಯ ವಿದುರಾ
ದಿಗಳು ಮನೆಹೊಗಲಿತ್ತ ಕೌರವ
ನಗುತ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ (ಅರಣ್ಯ ಪರ್ವ, ೧೭ ಸಂಧಿ, ೯ ಪದ್ಯ)

ತಾತ್ಪರ್ಯ:
ಉದ್ದಟನಾದ ಕೌರವನು ಪಾಂಡವರಿಗೆ ಆಪತ್ತನ್ನು ಒಡ್ಡಿದನಲಾ, ಇದರಿಂದ ಪಾಂಡವರು ದೂರ್ವಾಸನ ಉಗ್ರಕೋಪದ ಬಿಸಿಗೆ ತುತ್ತಾಗುತ್ತಾರೆ ಎಂದು ಚಿಂತಿಸುತ್ತಾ ಭೀಷ್ಮ, ದ್ರೋಣ, ವಿದುರರು ತಮ್ಮ ಮನೆಗಳಿಗೆ ದುಃಖತಪ್ತರಾಗಿ ತೆರಳಿದರು. ಕೌರವನು ತನ್ನ ಉಪಾಯದಿಂದ ಪಾಂಡಾವರು ಸುಲಭವಾಗಿ ನಾಶವಾಗುವರೆಂದು ನಗುತ್ತಾ ಕರ್ಣನೇ ಮೊದಲಾದವರೊಡನೆ ಅರಮನೆಯನ್ನು ಹೊಕ್ಕನು.

ಅರ್ಥ:
ಅಗಡು: ತುಂಟತನ; ಒಡ್ಡು: ಈಡುಮಾಡು; ವಿಗಡ: ಶೌರ್ಯ, ಪರಾಕ್ರಮ; ಮುನಿ: ಋಷಿ; ಉಗ್ರ: ಕೋಪಿಷ್ಠ; ರೋಷ: ಕೋಪ; ಸೆಗಳಿಕೆ: ಕಾವು, ಬಿಸಿ; ಸವಿ: ರುಚಿ, ಸ್ವಾದ; ಆದರ: ಆಸಕ್ತಿ, ವಿಶ್ವಾಸ; ಅಕಟ: ಅಯ್ಯೋ; ದುಗುಡ: ದುಃಖ; ಆದಿ: ಮುಂತಾದ; ಮನೆ: ಆಲ್ಯ; ನಗು: ಸಂತಸ; ಗಡಣ: ಗುಂಪು; ಹೊಕ್ಕು: ಸೇರು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಅಗಡು +ಕೌರವನ್+ಒಡ್ಡಿದನಲಾ
ವಿಗಡವನು +ಮುನಿ+ಉಗ್ರ+ರೋಷದ
ಸೆಗಳಿಕೆಗೆ +ಪಾಂಡವರು+ ಸವಿದುತ್ತಾದರ್+ಅಕಟೆನುತ
ದುಗುಡದಲಿ+ ಗಾಂಗೇಯ +ವಿದುರಾ
ದಿಗಳು +ಮನೆಹೊಗಲ್+ಇತ್ತ +ಕೌರವ
ನಗುತ +ಕರ್ಣಾದಿಗಳ +ಗಡಣದಿ +ಹೊಕ್ಕನ್+ಅರಮನೆಯ

ಅಚ್ಚರಿ:
(೧) ಭೀಷ್ಮರ ದುಃಖದ ಕಾರಣ – ಮುನಿಯುಗ್ರರೋಷದ ಸೆಗಳಿಕೆಗೆ ಪಾಂಡವರು ಸವಿದುತ್ತಾದರಕಟೆನುತ
(೨) ದುರ್ಯೋಧನನನ್ನು – ಅಗಡು ಕೌರವ ಎಂದು ಕರೆದಿರುವುದು

ಪದ್ಯ ೮: ದೂರ್ವಾಸರು ಏನೆಂದು ಹೇಳಿದರು?

ಭೂಪ ಕೇಳೆರಡುಂಟೆ ನಿನ್ನಾ
ಳಾಪವನು ಕೈಕೊಂಡೆವೆನುತ ಮ
ಹಾಪರಾಕ್ರಮಿಯೇಳ ಲೊಡನೆದ್ದುದು ನೃಪಸ್ತೋಮ
ತಾಪಸರು ಬಳಿವಿಡಿದು ಬರೆ ಬಳಿ
ಕಾಪುರವ ಹೊರವಂಟು ಭವ ನಿ
ರ್ಲೇಪ ಭೀಷ್ಮದ್ರೋಣರನು ಕಳುಹಿದನು ಮನೆಗಳಿಗೆ (ಅರಣ್ಯ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ದೂರ್ವಾಸನು ದುರ್ಯೋಧನನ ಮಾತನ್ನು ಕೇಳಿ, ರಾಜ ನೀನು ಹೇಳಿದುದನ್ನು ಎರಡನೆಯ ಮಾತಿಲ್ಲದೆ ಒಪ್ಪಿಕೊಂಡಿದ್ದೇನೆ, ಎಂದು ಹೇಳಿ ಪೀಠದಿದಂದ ಮೇಳಕ್ಕೇಳಲು, ರಾಜರೆಲ್ಲರೂ ಎದ್ದು ನಿಂತರು. ತಪಸ್ವಿಗಳೊಡನೆ ಹಸ್ತಿನಾವತಿಯನ್ನು ಬಿಟ್ಟು ಸಂಸಾರದ ಲೇಪವಿಲ್ಲದ ಜ್ಞಾನಿಗಳಾದ ಭೀಷ್ಮ, ದ್ರೋಣರನ್ನು ಹಿಂದಕ್ಕೆ ಅವರ ಮನೆಗೆ ಕಳುಹಿಸಿದನು.

ಅರ್ಥ:
ಭೂಪ: ರಾಜ; ಕೇಳು: ಆಲಿಸು; ಆಲಾಪ: ವಿಸ್ತಾರ; ಕೈಕೊಳ್ಳು: ತೆಗೆದುಕೊ, ವಹಿಸಿಕೊ; ಮಹಾ: ಶ್ರೇಷ್ಠ; ಪರಾಕ್ರಮಿ: ಶೂರ; ನೃಪ: ರಾಜ; ಸ್ತೋಮ: ಗುಂಪು; ತಾಪಸ: ಋಷಿ; ಬಳಿ: ಹತ್ತಿರ; ಬರೆ: ಆಗಮಿಸು; ಬಳಿಕ: ನಂತರ; ಪುರ: ಊರು; ಹೊರವಂಟು: ತೆರಳು; ಭವ: ಇರುವಿಕೆ, ಅಸ್ತಿತ್ವ; ನಿರ್ಲೇಪ: ಅಂಟದ, ಲೇಪವಿಲ್ಲದ; ಕಳುಹಿಸು: ತೆರಳು; ಮನೆ: ಆಲಯ;

ಪದವಿಂಗಡಣೆ:
ಭೂಪ +ಕೇಳ್+ಎರಡುಂಟೆ +ನಿನ್
ಆಳಾಪವನು +ಕೈಕೊಂಡೆವ್+ಎನುತ +ಮ
ಹಾ+ಪರಾಕ್ರಮಿ+ ಏಳಲೊಡನ್+ಎದ್ದುದು +ನೃಪ+ಸ್ತೋಮ
ತಾಪಸರು +ಬಳಿವಿಡಿದು +ಬರೆ +ಬಳಿಕ್
ಆ+ಪುರವ +ಹೊರವಂಟು +ಭವ +ನಿ
ರ್ಲೇಪ +ಭೀಷ್ಮ+ದ್ರೋಣರನು +ಕಳುಹಿದನು +ಮನೆಗಳಿಗೆ

ಅಚ್ಚರಿ:
(೧) ಭೂಪ, ನೃಪ – ಸಮನಾರ್ಥಕ ಪದ
(೨) ದೂರ್ವಾಸರನ್ನು ತಾಪಸರು, ಮಹಾಪರಾಕ್ರಮಿ ಎಂದು ಕರೆದಿರುವುದು

ಪದ್ಯ ೭: ದುರ್ಯೋಧನನು ಯಾವ ವರವನ್ನು ಬೇಡಿದನು?

ಅರಸ ಕೇಳೈ ಹಸ್ತದಲ್ಲಿಹ
ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ
ಕುರುಕುಲಾಗ್ರಣಿ ನುಡಿದನಿನಿಬರು
ವೆರಸಿ ಪಾಂಡವರರಸಿಯುಣಲೊಡ
ನಿರದೆ ಗ್ರಾಸವ ಬೇಡಿ ನೀವ್ ನಮಗಿತ್ತ ವರವೆಂದ (ಅರಣ್ಯ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಕೈಯಲ್ಲಿರುವ ಸ್ಪರ್ಶಮಣಿಯನ್ನು ಕಲ್ಲೆಂದು ತಿರಸ್ಕರಿಸಿ, ಗಾಜಿನ ಹರಳನ್ನು ಕಂಡು ಸಂತೋಷಪಡುವ ಮೂಢರಂತೆ ಕೌರವನು, ನಿಮ್ಮ ಪರಿವಾರದಲ್ಲಿರುವ ಎಲ್ಲರೊಡನೆ ಹೋಗಿ ದ್ರೌಪದಿಯ ಊಟವಾದ ಮೇಲೆ ಭೋಜನವನ್ನು ಬೇಡಿರಿ ಎಂದು ಕೌರವನು ಬೇಡಿದನು.

ಅರ್ಥ:
ಅರಸ: ರಾಜ; ಕೇಳ್: ಆಲಿಸು; ಹಸ್ತ: ಕೈ; ಪರುಷ: ಸ್ಪರ್ಷಮಣಿ; ಕಲ್ಲು: ಶಿಲೆ; ಟೆಕ್ಕೆ: ಬಾವುಟ, ಧ್ವಜ; ಹರಳು: ಕಲ್ಲಿನ ಚೂರು, ನೊರಜು; ಟೆಕ್ಕೆಯಹರಳು: ಗಾಜಿನ ಮಣಿ; ಹರುಷ: ಸಂತಸ; ಮೂಢ: ತಿಳಿಗೇಡಿ, ಮೂರ್ಖ; ಮನುಷ್ಯ: ಮಾನವ; ಕುಲ: ವಂಶ; ಅಗ್ರಣಿ: ಶ್ರೇಷ್ಠ; ನುಡಿ: ಮಾತಾಡು; ಇನಿಬರು: ಇಷ್ಟುಜನ;
ಅರಸಿ: ರಾಣಿ; ಉಣು: ಊಟ; ಗ್ರಾಸ: ತುತ್ತು, ಕಬಳ; ಬೇಡಿ: ಕೇಳಿ; ವರ: ಆಶೀರ್ವಾದ;

ಪದವಿಂಗಡಣೆ:
ಅರಸ +ಕೇಳೈ +ಹಸ್ತದಲ್ಲಿಹ
ಪರುಷವನು +ಕಲ್ಲೆಂದು +ಟೆಕ್ಕೆಯ
ಹರಳಿನಲಿ +ಹರುಷಿಸುವ +ಮೂಢ +ಮನುಷ್ಯರಂದದಲಿ
ಕುರುಕುಲಾಗ್ರಣಿ+ ನುಡಿದನ್+ಇನಿಬರು
ವೆರಸಿ+ ಪಾಂಡವರ್+ಅರಸಿ+ಉಣಲೊಡ
ನಿರದೆ +ಗ್ರಾಸವ +ಬೇಡಿ +ನೀವ್ +ನಮಗಿತ್ತ +ವರವೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಸ್ತದಲ್ಲಿಹ ಪರುಷವನು ಕಲ್ಲೆಂದು ಟೆಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ

ನುಡಿಮುತ್ತುಗಳು: ಅರಣ್ಯ ಪರ್ವ ೧೭ ಸಂಧಿ

  • ಹಸ್ತದಲ್ಲಿಹ ಪರುಷವನು ಕಲ್ಲೆಂದು ಟೆಕ್ಕೆಯ ಹರಳಿನಲಿ ಹರುಷಿಸುವ ಮೂಢ ಮನುಷ್ಯರಂದದಲಿ – ಪದ್ಯ ೫
  • ಭಕ್ತಿಯಹೊರೆಯೊಳಗೆ ಕುಸಿದಂತೆ ನಡೆತಂದೆರಗಿದನು ಮುನಿಪದಕೆ – ಪದ್ಯ ೧೧
  • ಸಾರೆಯಾಯ್ತ ಸಮಯವೆಮ್ಮ ಕ್ಷುಧಾರಪಣವ್ರಣ ವಿವಿಧ ಪೀಡಾಕಾರಕೇನು ಚಿಕಿತ್ಸೆ – ಪದ್ಯ ೧೪
  • ಅಂತಃಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ – ಪದ್ಯ ೧೬
  • ಉರಿಹೊಡೆದ ಕೆಂದಾವರೆಯ ವೊಲ್ಕರುಕುವರಿಯಲು ಮುಖ – ಪದ್ಯ ೧೬
  • ರೋಷವ ಹಿಡಿದೊಡೀಗಲೆ ಸುಟ್ಟು ಬೊಟ್ಟಿಡುವನು ಜಗತ್ರಯವ – ಪದ್ಯ ೧೭
  • ಅರಿಯಿರೇ ಸೆಳೆ ಸೀರೆಯಲಿ ಸತಿಯೊರಲಲಕ್ಷಯವಿತ್ತು ತನ್ನನು ಮೆರೆದ ಮಹಿಮಾರ್ಣವನ ಭಜಿಸುವುದೆಂದನಾ ಧೌಮ್ಯ – ಪದ್ಯ ೧೯
  • ಹಿಮ್ಮಡಿಗೊಗುವ ಕೇಶದ ಬಾಲೆ – ಪದ್ಯ ೨೩
  • ನೀಲಕಂಠನ ನೇತ್ರವಹ್ನಿಜ್ವಾಲೆಗಾಹುತಿಯಾಗಿ ಮುಗ್ಗಿದಕಾಲ ಕಾಮನ ಪಥವ ಪಡೆವರು ಪಾಂಡುನಂದನರು – ಪದ್ಯ ೨೫
  • ಬಲುಬಿಸಿಲು ಬಾಯ್ಗಾಂತ ಚಂದ್ರಿಕೆವೆಳಗೆನಲು ಘನರೋಷವಹ್ನಿಯ ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ – ಪದ್ಯ ೨೯
  • ರಥವಿಳಿದನಸುರಾರಿ ಸುಮನೋರಥವಿಳಿದು ಬಪ್ಪಂತೆ – ಪದ್ಯ ೩೩
  • ಸಭ್ಯತಾಲತೆ ಹೂತು ಹಸರಿಸಿ ಹಬ್ಬಿ ಫಲವಾದಂತೆ ಕಾಯವನಿಬ್ಬರದಲೀಡಾಡಿದಳು ಹರಿಪದಪಯೋಜದಲಿ – ಪದ್ಯ ೩೫
  • ಬೀತತರು ಶುಕನಿಕರಕೀವುದೆ ಔತಣವ – ಪದ್ಯ ೩೭
  • ದೇವ ನಿಮ್ಮಯ ಹಸಿವ ಕಳೆವೊಡೆ ಭಾವಶುದ್ಧಿಯ ಭಕುತಿ ಬೇಹುದು – ಪದ್ಯ ೩೯
  • ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು – ಪದ್ಯ ೪೦
  • ನಳಿನಸಖನಪರಾಂಬುರಾಶಿಯನಿಲುಕುತೈದನೆ – ಪದ್ಯ ೪೯
  • ಬೇರು ನೀರುಂಡಾಗ ದಣಿಯವೆ ಭೂರುಹದ ಶಾಖೋಪಶಾಖೆಗಳೋರಣೆಯ – ಪದ್ಯ ೫೦
  • ಹರಿಪದನಿಷ್ಠರನು ನಿಲುಕುವನೆ ದುರ್ಜನ – ಪದ್ಯ ೫೧

ಪದ್ಯ ೬: ದೂರ್ವಾಸನು ದುರ್ಯೋಧನನಿಗೆ ಏನು ಹೇಳಿದ?

ಷಡುರಸಾನ್ನದಲಾದರಣೆಯಿಂ
ದುಡುಗೆಯಿಂದವೆ ತುಷ್ಟಿಬಡಿಸಿದ
ಪೊಡವಿಪಾಲಕ ಮುನಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ (ಅರಣ್ಯ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಷಡ್ರಸಗಳಿಂದ ಕೂಡಿದ ರುಚಿಯಾದ ಊಟವನ್ನು ಮಾಡಿ, ಉತ್ತಮ ಉಡುಗೆಗಳನ್ನು ದುರ್ಯೋಧನನು ನೀಡಿ, ಎಂಬತ್ತೆಂಟು ಸಾವಿರ ಮುನಿಗಳನ್ನು ದುರ್ಯೋಧನನು ತೃಪ್ತಿ ಪಡಿಸಿದನು. ಸಂನ್ಯಾಸಿಯ ವೇಷ ಧರಿಸಿದ ಆನಂದಘನ ಶಿವನು ಸಂತೋಷಿಸಿ, ಕೌರವನ ಮೈದಡವಿ ಮಗನೆ, ನಿನಗೆ ಏನು ಬೇಕೋ ಕೇಳು ಎಂದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಅನ್ನ: ಊಟ, ಭೋಜನ; ಆದರಣೆ: ಗೌರವ; ಉಡುಗೆ: ವಸ್ತ್ರ, ಬಟ್ಟೆ; ತುಷ್ಟಿ: ಸಂತಸ; ಪೊಡವಿ: ಪೃಥ್ವಿ, ಭೂಮಿ; ಪಾಲಕ: ಒಡೆಯ; ಪೊಡವಿಪಾಲಕ: ರಾಜ; ಮುನಿ: ಋಷಿ; ಸಾವಿರ: ಸಹಸ್ರ; ಕಡು:ತುಂಬ; ಸುಖ: ನೆಮ್ಮದಿ; ಸಂನ್ಯಾಸಿ: ಋಷಿ; ವೇಷ: ಉಡುಗೆ ತೊಡುಗೆ; ಮೃಡ: ಶಿವ; ಮುದ: ಸಂತಸ; ಮೈದಡವಿ: ಮೈಯನ್ನು ಸವರಿ; ಮೈ: ತನು; ಮೆಚ್ಚಿ: ಪ್ರಶಂಶಿಸಿ; ಮಗ: ಪುತ್ರ; ಬೇಡು: ಕೇಳು; ಒಲಿದು: ಒಪ್ಪು, ಬಯಸು;

ಪದವಿಂಗಡಣೆ:
ಷಡುರಸಾನ್ನದಲ್+ಆದರಣೆಯಿಂದ್
ಉಡುಗೆಯಿಂದವೆ+ ತುಷ್ಟಿ+ಬಡಿಸಿದ
ಪೊಡವಿಪಾಲಕ+ ಮುನಿಗಳ್+ಅಷ್ಟಾಶೀತಿ +ಸಾವಿರವ
ಕಡು+ಸುಖದ +ಸಂನ್ಯಾಸಿ +ವೇಷದ
ಮೃಡನು +ಮುದದಲಿ +ಕೌರವನ +ಮೈ
ದಡವಿ +ಮೆಚ್ಚಿದೆ +ಮಗನೆ +ಬೇಡ್+ಒಲಿದುದನು+ ನೀನೆಂದ

ಅಚ್ಚರಿ:
(೧) ದೂರ್ವಾಸನನ್ನು ವಿವರಿಸುವ ಪರಿ – ಕಡುಸುಖದ ಸಂನ್ಯಾಸಿ ವೇಷದ ಮೃಡನು ಮುದದಲಿ ಕೌರವನ ಮೈದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ