ಪದ್ಯ ೨೦: ಧೌಮ್ಯರು ಪುನಃ ಯಾರನ್ನು ಭಜಿಸಲು ಹೇಳಿದರು?

ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗಂಜನು ಸುರೇಶ್ವರ
ಸತ್ಯಕೆಡುವೊಡೆ ಸಾರೆಯಿದೆಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆಂದನಾ ಧೌಮ್ಯ (ಅರಣ್ಯ ಪರ್ವ, ೧೭ ಸಂಧಿ, ೨೦ ಪದ್ಯ)

ತಾತ್ಪರ್ಯ:
ಇಂದ್ರನು ನಿಮ್ಮ ಕ್ಷಾತ್ರ ತೇಜಸ್ಸಿಗೆ ಹೆದರುವವನಲ್ಲ. ಸತ್ಯವನ್ನು ಮೀರಬೇಕೆಂದರೆ ಹತ್ತಿರದಲ್ಲೇ ಕೌರವನ ರಾಜಧಾನಿಯಿದೆ ಅಲ್ಲಿಗೇ ನೀನು ನುಗ್ಗಬಹುದು, ಕಾಮಧೇನುವನ್ನು ಪಡೆಯಲೆಳಸಿದ ಸತ್ಯಹೀನನಾದ ಕಾರ್ತಿವೀರ್ಯಾರ್ಜುನನ ಕಥೆಯನ್ನು ಆಮೇಲೆ ಹೇಳುತ್ತೇನೆ. ಈಗ ಶ್ರೀಕೃಷ್ಣನನ್ನು ಭಜಿಸಿರಿ ಎಂದು ಧೌಮ್ಯನು ಬುದ್ಧಿವಾದವನ್ನು ಹೇಳಿದನು.

ಅರ್ಥ:
ಕ್ಷತ್ರ: ಕ್ಷತ್ರಿಯ; ತೇಜ: ತೇಜಸ್ಸು; ತೀವ್ರ: ಬಹಳ; ಪಾತ: ಪತನ; ನಿಮಿತ್ತ: ನೆಪ, ಕಾರಣ; ಅಂಜು: ಹೆದರು; ಸುರೇಶ್ವರ: ಇಂದ್ರ; ಸತ್ಯ: ದಿಟ, ನಿಜ; ಎಡುವು: ಬೀಳು; ಸಾರೆ: ಪ್ರಕಟಿಸು; ನಗರ: ಊರು; ಸತ್ಯ: ನಿಜ; ಮಾರಿ: ಕೇಡು, ಹಾನಿ; ಸುರಭಿ: ಕಾಮಧೇನುವಿನ ಮಗಳು; ಅಳುಪು: ಭಂಗತರು, ಬಯಸು; ಕಥೆ: ವಿವರಣೆ; ಮತ್ತೆ: ಆಮೇಲೆ; ಹೇಳು: ತಿಳಿಸು; ಭಜಿಸು: ಪ್ರಾರ್ಥಿಸು;

ಪದವಿಂಗಡಣೆ:
ಕ್ಷತ್ರ +ತೇಜದ +ತೀವ್ರ+ಪಾತ +ನಿ
ಮಿತ್ತ +ನಿಮಗ್+ಅಂಜನು +ಸುರೇಶ್ವರ
ಸತ್ಯಕ್+ಎಡುವೊಡೆ +ಸಾರೆಯಿದೆಲಾ+ ಕೌರವನ+ ನಗರ
ಸತ್ಯಮಾರಿಯ +ಸುರಭಿಗ್+ಅಳುಪಿದ
ಕಾರ್ತವೀರ್ಯಾರ್ಜುನನ+ ಕಥೆಯನು
ಮತ್ತೆ+ ಹೇಳುವೆ +ಭಜಿಸು +ಕೃಷ್ಣನನ್+ಎಂದನಾ +ಧೌಮ್ಯ

ಅಚ್ಚರಿ:
(೧) ಸತ್ಯಹೀನ ಎಂದು ಹೇಳಲು – ಸತ್ಯಮಾರಿ ಪದದ ಬಳಕೆ

ನಿಮ್ಮ ಟಿಪ್ಪಣಿ ಬರೆಯಿರಿ