ಪದ್ಯ ೬: ಧರ್ಮಜನು ಏನನ್ನು ಯೋಚಿಸುತ್ತಾ ಹೊರಟನು?

ಸೂಚಿಸಿದವೇ ಶಕುನ ಪುನರಪಿ
ಗೋಚರಿಸಿತೇ ಗರುವನಿಧಿ ನಾ
ವಾಚರಿಸಿತೇನೋ ಶಿವಾ ಭವಭವ ಸಹಸ್ರದಲಿ
ನಾಚಿದವು ನಿಗಮಂಗಳಾವನ
ಸೂಚಿಸಲು ತಮ್ಮೊಳಗೆ ಕೃಪೆಯಲ
ರೋಚಕವನಾದೈವ ಮಾಡದೆನುತ್ತ ಹೊರವಂಟ (ಅರಣ್ಯ ಪರ್ವ, ೧೫ ಸಂಧಿ, ೬ ಪದ್ಯ)

ತಾತ್ಪರ್ಯ:
ಶಕುನವು ಶ್ರೀ ಕೃಷ್ಣನ ಆಗಮನವನ್ನು ಸೂಚಿಸಿದವು. ಆ ಹಿರಿಯನು ಮತ್ತೆ ಕಾಣಿಸಿಕೊಂಡನು. ಸಹಸ್ರಾರು ಜನ್ಮಗಳಲ್ಲಿ ನಾವು ಮಾಡಿದ ಪುಣ್ಯವೇನಿರಬಹುದು! ಯಾರನ್ನು ಸೂಚಿಸಲು ವೇದಗಳು ಕೈಲಾಗದೇ ನಾಚಿದವೋ, ಆ ದೈವವು ನಮ್ಮಲ್ಲಿ ಕೃಪೆದೋರಲು ಎಂದಿಗೂ ಬೇಸರ ಪಡುವುದಿಲ್ಲ ಎನ್ನುತ್ತಾ ಧರ್ಮಜನು ಹೊರಟನು.

ಅರ್ಥ:
ಸೂಚಿಸು: ತೋರಿಸು, ಹೇಳು; ಶಕುನ: ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಪುನರಪಿ: ಪುನಃ; ಗೋಚರಿಸು: ತೋರು; ಗರುವ: ಶ್ರೇಷ್ಠ; ನಿಧಿ: ಸಂಪತ್ತು, ಐಶ್ವರ್ಯ; ಆಚರಿಸು: ಮಾಡಿದ; ಭವ: ಜನ್ಮ; ಸಹಸ್ರ: ಸಾವಿರ; ನಾಚು: ಅವಮಾನ ಹೊಂದು; ನಿಗಮ: ವೇದ; ಕೃಪೆ: ದಯೆ; ರೋಚಕ: ತೇಜಸ್ಸುಳ್ಳ; ದೈವ: ಭಗವಂತ; ಹೊರವಂಟ: ನಡೆದ;

ಪದವಿಂಗಡಣೆ:
ಸೂಚಿಸಿದವೇ +ಶಕುನ +ಪುನರಪಿ
ಗೋಚರಿಸಿತೇ +ಗರುವನಿಧಿ+ ನಾವ್
ಆಚರಿಸಿತ್+ಏನೋ +ಶಿವಾ +ಭವಭವ+ ಸಹಸ್ರದಲಿ
ನಾಚಿದವು+ ನಿಗಮಂಗಳ್+ಆವನ
ಸೂಚಿಸಲು+ ತಮ್ಮೊಳಗೆ +ಕೃಪೆಯಲ
ರೋಚಕವನ್+ಆ+ದೈವ +ಮಾಡದೆನುತ್ತ+ ಹೊರವಂಟ

ಅಚ್ಚರಿ:
(೧) ಸೂಚಿಸು, ಗೋಚರಿಸು – ಸಾಮ್ಯಾರ್ಥ ಪದಗಳು
(೨) ಕೃಷ್ಣನ ಮಹಿಮೆ – ನಾಚಿದವು ನಿಗಮಂಗಳಾವನ ಸೂಚಿಸಲು

ನಿಮ್ಮ ಟಿಪ್ಪಣಿ ಬರೆಯಿರಿ