ಪದ್ಯ ೩೪: ಕೃಷ್ಣನು ದ್ರೌಪದಿಯನ್ನು ಏನು ಕೇಳಿದ?

ಧ್ಯಾನಗೋಚರನಾಗಿ ವನಿತೆಯ
ಮಾನಸದಲಿಹ ಪರಮಹಂಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯರಚನೆಯಲಿ
ಮಾನಿನಿಯ ಮೈದಡಹಿ ಚಿಂತೆಯ
ದೇನು ತಂಗಿ ಲತಾಂಗಿ ಹೇಳೌ
ಮೌನ ಮುದ್ರೆಯದೇನೆನಲು ಕಂದೆರೆದಳಿಂದುಮುಖಿ (ಅರಣ್ಯ ಪರ್ವ, ೧೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ದ್ರೌಪದಿಯ ಧ್ಯಾನ ಕಾಲದಲ್ಲಿ ಅವಳ ಮನಸ್ಸಿನಲ್ಲಿ ಕಾಣುತ್ತಿದ್ದ ಪರಮಹಂಸನು ಹೊರಗಡೆ ಮಾನವನ ರೂಪದಲ್ಲಿ ಅವಳ ಬಳಿ ಬಂದನು. ಅವಳ ಮೈದಡವಿ, ತಂಗಿ ನಿನಗೇನು ಚಿಂತೆ? ಹೇಳು, ಏಕೆ ಮೌನದಿಂದಿರುವೆ ಎಂದು ಕೇಳಿದನು.

ಅರ್ಥ:
ಧ್ಯಾನ: ಏಕಾಗ್ರತೆ; ಗೋಚರ: ಕಾಣಿಸು; ವನಿತೆ: ಹೆಣ್ಣು; ಮಾನಸ: ಮನಸ್ಸು; ಪರಮಹಂಸ: ಯತಿ, ಶ್ರೇಷ್ಠವರ್ಗದ ಸನ್ಯಾಸಿ; ಮಾನುಷ: ಮಾನವ; ಆಕೃತಿ: ರೂಪ; ತೋರು: ಗೋಚರಿಸು; ಬಾಹ್ಯ: ಹೊರ; ರಚನೆ: ನಿರ್ಮಾಣ, ಸೃಷ್ಟಿ; ಮಾನಿನಿ: ಹೆಣ್ಣು; ಮೈದಡಹು: ದೇಹವನ್ನು ತಟ್ಟು; ಚಿಂತೆ: ಯೋಚನೆ; ಹೇಳು: ತಿಳಿಸು; ಮೌನ: ಮಾತನಾಡದಿರುವಿಕೆ; ಮುದ್ರೆ: ಚಿಹ್ನೆ; ಕಂದೆರೆ: ಕಣ್ಣ ಬಿಡು; ಇಂದುಮುಖಿ: ಚಂದ್ರನಂತ ಕಣ್ಣುಳ್ಳವಳು;

ಪದವಿಂಗಡಣೆ:
ಧ್ಯಾನ+ಗೋಚರನಾಗಿ +ವನಿತೆಯ
ಮಾನಸದಲಿಹ +ಪರಮಹಂಸನು
ಮಾನುಷಾಕೃತಿಯಾಗಿ +ತೋರಿದ +ಬಾಹ್ಯ+ರಚನೆಯಲಿ
ಮಾನಿನಿಯ+ ಮೈದಡಹಿ+ ಚಿಂತೆಯ
ದೇನು+ ತಂಗಿ+ ಲತಾಂಗಿ+ ಹೇಳೌ
ಮೌನ +ಮುದ್ರೆಯದೇನ್+ಎನಲು+ ಕಂದೆರೆದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯನ್ನು ಕರೆದ ಪರಿ – ವನಿತೆ, ಮಾನಿನಿ, ತಂಗಿ, ಲತಾಂಗಿ, ಇಂದುಮುಖಿ

ಪದ್ಯ ೩೩: ಕೃಷ್ಣನನ್ನು ಪಾಂಡವರು ಹೇಗೆ ಬರೆಮಾಡಿದರು?

ರಥವಿಳಿದನಸುರಾರಿ ಸುಮನೋ
ರಥವಿಳಿದು ಬಪ್ಪಂತೆ ಕುಂತೀ
ಸುತರ ನಿಜಭುಜವಾರೆತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸಂ
ಸ್ತುತಿಗೆ ತಲೆವಾಗುತ್ತ ಮಿಗೆ ದ್ರೌ
ಪತಿಯ ಹೊರೆಗೈದಿದನುಘೇಯೆಂದುದು ಸುರಸ್ತೋಮ (ಅರಣ್ಯ ಪರ್ವ, ೧೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಪಾಂಡವರ ಮನೋರಥವು ಇಳಿದು ಬಂದಿತೋ ಎಂಬಂತೆ ಶ್ರೀಕೃಷ್ಣನು ರಥವಿಳಿದು ಬಂದು ಸಮ್ತಸದಿಂದ ಪಾಂಡವರನ್ನು ತನ್ನು ಭುಜಗಳಿಂದ ಆಲಿಂಗಿಸಿದನು. ಬ್ರಾಹ್ಮಣರ ಆಶೀರ್ವಚನೆಗೆ ತಲೆಬಾಗಿ, ದ್ರೌಪದಿಯ ಬಳಿ ಬಂದನು. ದೇವತೆಗಳು ಉಘೇ ಎಂದು ಸಂತಸದಿಂದ ಉದ್ಗರಿಸಿದರು.

ಅರ್ಥ:
ರಥ: ಬಂಡಿ; ಇಳಿ: ಕೆಳಕ್ಕೆ ಬಂದು; ಅಸುರಾರಿ: ರಾಕ್ಷಸರ ವೈರಿ; ಮನೋರಥ: ಆಸೆ, ಬಯಕೆ; ಬಪ್ಪಂತೆ: ಬರುವಂತೆ; ಸುತ: ಮಕ್ಕಳು; ಭುಜ: ತೋಳು; ಐಸು: ಅಷ್ಟು; ಹರುಷ: ಸಂತಸ; ಕ್ಷಿತಿ: ಭೂಮಿ; ಕ್ಷಿತಿಯಮರರು: ಬ್ರಾಹ್ಮಣ; ಆಶೀರ್ವಚನ: ಶುಭನುಡಿ; ಸಂಸ್ತುತಿ: ಭಕ್ತಿಯಿಂದಾಚರಿಸಿದ ಸ್ತವನ, ಸ್ತೋತ್ರ; ತಲೆ: ಶಿರ; ಬಾಗು: ತಗ್ಗಿಸು; ಮಿಗೆ: ಮತ್ತು; ಹೊರೆ: ಹತ್ತಿರ, ಸಮೀಪ; ಉಘೇ: ಜಯಘೋಷ; ಸುರ: ದೇವತೆ; ಸ್ತೋಮ: ಗುಂಪು;

ಪದವಿಂಗಡಣೆ:
ರಥವಿಳಿದನ್+ಅಸುರಾರಿ +ಸುಮನೋ
ರಥವಿಳಿದು +ಬಪ್ಪಂತೆ+ ಕುಂತೀ
ಸುತರ+ ನಿಜ+ಭುಜವಾರೆತಕ್ಕೈಸಿದನು+ ಹರುಷದಲಿ
ಕ್ಷಿತಿ+ಅಮರರ+ಆಶೀರ್ವಚನ+ ಸಂ
ಸ್ತುತಿಗೆ +ತಲೆವಾಗುತ್ತ+ ಮಿಗೆ +ದ್ರೌ
ಪತಿಯ +ಹೊರೆಗ್+ಐದಿದನ್+ಉಘೇ+ಎಂದುದು +ಸುರ+ಸ್ತೋಮ

ಅಚ್ಚರಿ:
(೧) ಪಾಂಡವರ ಹರ್ಷವನ್ನು ಹೇಳುವ ಪರಿ – ರಥವಿಳಿದನಸುರಾರಿ ಸುಮನೋರಥವಿಳಿದು ಬಪ್ಪಂತೆ

ಪದ್ಯ ೩೨: ಕೃಷ್ಣನನ್ನು ಕಂಡು ಪಾಂಡವರು ಏನು ಮಾಡಿದರು?

ಮುಗುಳು ನಗೆಗಳ ಹೊಂಗುವಂಗದ
ನಗೆ ಮೊಗದೊಳಾನಂದ ಬಿಂದುಗ
ಳೊಗುವ ಕಂಗಳ ಹೊತ್ತ ಹರುಷಸ್ಪಂದ ಸಂಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡಗೊಂಡಮಳ ಜನ್ಮದ
ಮುಗುದ ಪಾಂಡವರೆರಗಿದರು ಧೌಮ್ಯಾದಿಗಳು ಸಹಿತ (ಅರಣ್ಯ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಪಾಂಡವರ ಮುಖಗಳು ಮ್ಗುಳು ನಗೆಯಿಂದ ಅರಳಿದವು, ದೇಹವು ಉತ್ಸಾಹ ಭರಿತವಾದವು, ಕಣ್ಣುಗಳಲ್ಲಿ ಆನಂದಬಾಷ್ಪಗಳು ಉದುರಿದವು. ಹರ್ಷವು ಮೈದುಂಬಿತು. ಭಕ್ತಿ ಪರವಶರಾದರು, ಅವರು ಮುಗ್ಧಭಾವದಿಂದ ಧೌಮ್ಯನೇ ಮೊದಲಾದವರೊಡನೆ ಶ್ರೀಕೃಷ್ಣನಿಗೆ ನಮಿಸಿದರು.

ಅರ್ಥ:
ಮುಗುಳು ನಗೆ: ಮಂದಸ್ಮಿತ; ಹೊಂಗು: ಉತ್ಸಾಹ, ಹುರುಪು; ಅಂಗ: ಅವಯವ; ನಗೆ: ಸಂತಸ; ಮೊಗ: ಮುಖ; ಆನಂದ: ಹರ್ಷ; ಬಿಂದು: ಹನಿ, ತೊಟ್ಟು; ಒಗು: ಹೊರಹೊಮ್ಮುವಿಕೆ; ಕಂಗಳು: ನಯನ; ಹರುಷ: ಆನಂದ; ಸ್ಪಂದ: ಮಿಡಿಯುವಿಕೆ; ಸಂಪುಟ: ಭರಣಿ, ಕರಂಡಕ; ಬಗೆ: ಆಲೋಚನೆ, ಯೋಚನೆ; ಬೆರಸು: ಕೂಡಿರುವಿಕೆ; ಪರವಶ: ಬೇರೆಯವರಿಗೆ ಅಧೀನವಾಗಿರುವಿಕೆ; ಎಡೆಗೊಳ್ಳು: ಅವಕಾಶಮಾಡಿಕೊಡು; ಅಮಳ: ನಿರ್ಮಲ; ಜನ್ಮ: ಹುಟ್ಟು; ಮುಗುದ: ಕಪಟವನ್ನು ತಿಳಿಯದವನು; ಎರಗು: ನಮಸ್ಕರಿಸು; ಆದಿ: ಮುಂತಾದ; ಸಹಿತ: ಜೊತೆ;

ಪದವಿಂಗಡಣೆ:
ಮುಗುಳು +ನಗೆಗಳ +ಹೊಂಗುವ್+ಅಂಗದ
ನಗೆ +ಮೊಗದೊಳ್+ಆನಂದ +ಬಿಂದುಗಳ್
ಒಗುವ +ಕಂಗಳ +ಹೊತ್ತ +ಹರುಷಸ್ಪಂದ +ಸಂಪುಟದ
ಬಗೆಯ+ ಬೆರಸದ+ ಪರವಶದೊಳ್+ಆ
ನಗೆಯೊಳ್+ಎಡಗೊಂಡ್+ಅಮಳ +ಜನ್ಮದ
ಮುಗುದ +ಪಾಂಡವರ್+ಎರಗಿದರು +ಧೌಮ್ಯಾದಿಗಳು +ಸಹಿತ

ಅಚ್ಚರಿ:
(೧) ನಗೆಗಳ ವಿವರಣೆ – ಮುಗುಳು ನಗೆ, ಹೊಂಗುವಂಗದ ನಗೆ, ಮೊಗದೊಳಾನಂದ, ಹೊತ್ತ ಹರುಷಸ್ಪಂದ

ಪದ್ಯ ೩೧: ಪಾಂಡವರು ಯಾರನ್ನು ಕಂಡರು?

ಅವನಿಪತಿ ಕೇಳಖಿಳ ನಿಗಮ
ಸ್ತವಕೆ ತಾನೆಡೆಗುಡದ ಮಹಿಮಾ
ರ್ಣವನನೇಸು ಭವಂಗಳಲಿ ಭಜಿಸಿದರೊ ಪಾಂಡವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾಂ
ಡವರು ಕಂಡರು ದೂರದಲಿ ಖಗರಾಜ ಕೇತನವ (ಅರಣ್ಯ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ವೇದಸ್ತುತಿಗೆ ಕಾಣಿಸಿಕೊಳ್ಳದ ಮಹಿಮಾಮೃತನಾದ ಶೀರ್ಕೃಷ್ಣನನ್ನು ಎಷ್ಟು ಜನ್ಮಗಳಲ್ಲಿ ಪಾಂಡವರು ಭಜಿಸಿದ್ದರೋ ಏನೋ, ದ್ರೌಪದಿಯ ಪ್ರಲಾಪವನ್ನು ಸಹಿಸಲಾರದೆ ಶ್ರೀಕೃಷ್ಣನು ಅಲ್ಲಿ ಸುಳಿದನು. ಶ್ರೀಕೃಷ್ಣ ಗರುಡ ಧ್ವಜವನ್ನು ಪಾಂಡವರು ದೂರದಲ್ಲಿ ನೋಡಿದರು.

ಅರ್ಥ:
ಅವನಿಪತಿ: ರಾಜ; ಅವನಿ: ಭೂಮಿ; ಕೇಳು: ಆಲಿಸು; ಅಖಿಳ: ಎಲ್ಲಾ; ನಿಗಮ: ವೇದ; ಸ್ತವ: ಕೊಂಡಾಡುವುದು; ಎಡೆಗೊಡು: ಅವಕಾಶಕೊಡು; ಮಹಿಮಾರ್ಣವ: ಮಹಾಮಹಿಮ, ಶ್ರೇಷ್ಠ; ಭವ:ಸಂಸಾರ, ಪ್ರಾಪಂಚಿಕ ವ್ಯವಹಾರ; ಭಜಿಸು: ಪೂಜಿಸು; ಯುವತಿ: ಹೆಣ್ಣು; ಅಕ್ಕೆ: ಅಳುವಿಕೆ, ಪ್ರಳಾಪ; ಸೈರಿಸು: ತಾಳು, ಸಹಿಸು; ಶಿರೋಮಣಿ: ತಿಲಕ, ಶ್ರೇಷ್ಠ; ಸುಳಿ: ಆವರಿಸು, ಮುತ್ತು; ಕಂಡು: ನೋಡು; ದೂರ: ಅಂತರ; ಖಗರಾಜ: ಗರುಡ; ಕೇತನ: ಬಾವುಟ;

ಪದವಿಂಗಡಣೆ:
ಅವನಿಪತಿ+ ಕೇಳ್+ಅಖಿಳ +ನಿಗಮ
ಸ್ತವಕೆ+ ತಾನ್+ಎಡೆಗುಡದ +ಮಹಿಮಾ
ರ್ಣವನನ್+ಏಸು +ಭವಂಗಳಲಿ +ಭಜಿಸಿದರೊ +ಪಾಂಡವರು
ಯುವತಿ+ಅಕ್ಕೆಯ +ಸೈರಿಸದೆ +ಯಾ
ದವ +ಶಿರೋಮಣಿ +ಸುಳಿದನಾ+ ಪಾಂ
ಡವರು +ಕಂಡರು+ ದೂರದಲಿ+ ಖಗರಾಜ+ ಕೇತನವ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಯಾದವ ಶಿರೋಮಣಿ; ಮಹಿಮಾರ್ಣವ, ಖಗರಾಜ ಕೇತನ

ಪದ್ಯ ೩೦: ದ್ರೌಪದಿಯು ಯಾರನ್ನು ಕರೆದಳು?

ಅಗಿದು ಬೆಂಬತ್ತಿದಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಮೈಯಿಕ್ಕಿ ಶ್ರುತಿಶೀರ್ಷೋಕ್ತ ರೀತಿಯಲಿ
ಹೊಗಳಿದೊಡೆ ಹಿಂಗಿದವಲಾ ಸುರ
ರುಗಳುಘೇಯೆನಲಂಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸುದರ್ಶನ ಚಕ್ರವು ಬೆನ್ನು ಹತ್ತಲು ದೂರ್ವಾಸನು ಮೂರು ಲೋಕಗಳನ್ನು ಸುತ್ತಿ ತಪ್ಪಿಸಿಕೊಳ್ಳಲಾರದೆ ವೇದ ಶೀರ್ಷೋಕ್ತ (ಉಪನಿಷತ್ತುಗಳು) ರೀತಿಯಲ್ಲಿ ನಿನ್ನನ್ನು ಹೊಗಳಿದನು. ಆಗ ಚಕ್ರವು ಹಿಂದೆಗೆದು ಹೋಯಿತು. ಅಂಬರೀಷನೂ ಭಯಮುಕ್ತನಾದನು. ಅಂಬರೀಷನ ಭಯವನ್ನು ಬಿಡಿಸಿದ ಕೃಷ್ಣನೇ, ಇಲ್ಲಿಗೆ ಬಾ ಎಂದು ದ್ರೌಪದಿಯು ಪ್ರಾರ್ಥಿಸಿದಳು.

ಅರ್ಥ:
ಅಗಿ: ಹೆದರು, ಆವರಿಸು; ಬೆಂಬತ್ತು: ಹಿಂದೆ ಬೀಳು; ಮುನಿ: ಋಷಿ; ಮೂಜಗ: ಮೂರು ಲೋಕ; ತೊಳಲು: ಬವಣೆ, ಸಂಕಟ; ಭಕುತಿ: ದೇವರಲ್ಲಿ ತೋರುವ ನಿಷ್ಠೆ; ಬಿಗುಹು: ಬಿಗಿ; ಮೈ: ತನು; ಮೈಯಿಕ್ಕು: ಬಾಗು, ನಮಸ್ಕರಿಸು; ಶ್ರುತಿ: ವೇದ; ಶೀರ್ಷ: ತಲೆ, ಅಗ್ರ; ಉಕ್ತಿ: ನುಡಿ; ಶ್ರುತಿಶೀರ್ಷೋಕ್ತ: ಉಪನಿಷತ್ತು; ರೀತಿ: ಶೈಲಿ; ಹೊಗಳು: ಪ್ರಶಂಶಿಸು; ಹಿಂಗಿದ: ಹಿಂತಿರುಗು; ಸುರರು: ದೇವತೆಗಳು; ಉಘೇ: ಜಯಘೋಷ; ಬೆಗಡು: ಆಶ್ಚರ್ಯ, ಬೆರಗು; ಬಿಡಿಸು: ಹೋಗಲಾಡಿಸು; ಮೈದೋರು: ಗೋಚರಿಸು; ಇಂದುಮುಖಿ: ಚಂದ್ರನಮ್ತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಅಗಿದು +ಬೆಂಬತ್ತಿದಡೆ +ಮುನಿ +ಮೂ
ಜಗವನೆಲ್ಲವ +ತೊಳಲಿ +ಭಕುತಿಯ
ಬಿಗುಹಿನಲಿ +ಮೈಯಿಕ್ಕಿ +ಶ್ರುತಿ+ಶೀರ್ಷ+ ಉಕ್ತ +ರೀತಿಯಲಿ
ಹೊಗಳಿದೊಡೆ +ಹಿಂಗಿದವಲಾ +ಸುರ
ರುಗಳ್+ಉಘೇ+ಎನಲ್+ಅಂಬರೀಷನ
ಬೆಗಡ+ ಬಿಡಿಸಿದ +ಕೃಷ್ಣ +ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ದೂರ್ವಾಸನು ಸುದರ್ಶನ ಚಕ್ರದಿಂದ ತಪ್ಪಿಸಿಕೊಂಡ ಬಗೆ – ಮೂಜಗವನೆಲ್ಲವ ತೊಳಲಿ ಭಕುತಿಯ ಬಿಗುಹಿನಲಿ ಮೈಯಿಕ್ಕಿ ಶ್ರುತಿಶೀರ್ಷೋಕ್ತ ರೀತಿಯಲಿ ಹೊಗಳಿದೊಡೆ ಹಿಂಗಿದವಲಾ
(೨) ಹೊಗಳು, ಉಘೇ – ಸಾಮ್ಯಾರ್ಥ ಪದ

ಪದ್ಯ ೨೯: ದೂರ್ವಾಸ ಮುನಿಗಳೇಕೆ ಚಂದ್ರನಂತಾದರು?

ಬಳಿಕ ನಿನ್ನಯ ವರ ಸುದರ್ಶನ
ಸುಳಿವುದೋರಲು ಕೋಟಿಸೂರ್ಯರ
ಬೆಳಗು ಬೀರಲು ಹೊತ್ತಿವುರಿವುರಿ ಲೋಕಮೂರರಲಿ
ಬಲುಬಿಸಿಲು ಬಾಯ್ಗಾಂತ ಚಂದ್ರಿಕೆ
ವೆಳಗೆನಲು ಘನರೋಷವಹ್ನಿಯ
ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ (ಅರಣ್ಯ ಪರ್ವ, ೧೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ನಂತರ ಶ್ರೀಕೃಷ್ಣನು ತನ್ನ ಭಕ್ತ ಅಂಬರೀಷನನ್ನು ರಕ್ಷಿಸಲು ಸುದರ್ಶನ ಚಕ್ರವನ್ನು ಕಳಿಸಿದೆ. ಅದು ಕೋಟಿ ಸೂರ್ಯ ಪ್ರಕಾಶದಿಮ್ದ ಬರಲು ಮೂರು ಲೋಕಗಳಲ್ಲೂ ಉರಿ ಹತ್ತಿ ಶಾಖವಾಗಲು, ದೂರ್ವಾಸನ ಶಾಪದ ಬೆಂಕಿಯ ಬೆಳಕು ಆರಿಹೋಯಿತು. ದೂರ್ವಾಸನು ವಿಸ್ಮಯಗೊಂಡು ಚಂದ್ರನಂತಾದನು.

ಅರ್ಥ:
ಬಳಿಕ: ನಂತರ; ವರ: ಶ್ರೇಷ್ಠ; ಸುಳಿವು: ಗುರುತು, ಕುರುಹು; ತೋರು: ಗೋಚರಿಸು; ಕೋಟಿ: ಲೆಕ್ಕವಿಲ್ಲದಷ್ಟು; ಸೂರ್ಯ: ರವಿ; ಬೆಳಗು: ಪ್ರಕಾಶ; ಬೀರು: ಹೊರಹಾಕು; ಹೊತ್ತು: ಸೀದು ಹೋದುದು, ಕರಿಕು; ಲೋಕ: ಜಗತ್ತು; ಬಲು: ತುಂಬ; ಬಿಸಿಲು: ಪ್ರಕಾಶ, ತಾಪ; ಚಂದ್ರಿಕೆ: ಬೆಳದಿಂಗಳು; ಬೆಳಗು: ಪ್ರಕಾಶ; ಘನ: ದೊಡ್ಡ; ರೋಷ: ಕೋಪ; ವಹ್ನಿ: ಬೆಂಕಿ; ಬೀತು: ಬತ್ತುಹೋಗು, ಆರಿಹೋಗು; ಚಕಿತ: ಆಶ್ಚರ್ಯ; ಚಂದ್ರ: ಶಶಿ;

ಪದವಿಂಗಡಣೆ:
ಬಳಿಕ +ನಿನ್ನಯ +ವರ +ಸುದರ್ಶನ
ಸುಳಿವು+ತೋರಲು +ಕೋಟಿ+ಸೂರ್ಯರ
ಬೆಳಗು +ಬೀರಲು +ಹೊತ್ತಿ+ವುರಿ+ವುರಿ+ ಲೋಕ+ಮೂರರಲಿ
ಬಲುಬಿಸಿಲು +ಬಾಯ್ಗ್+ಅಂತ+ ಚಂದ್ರಿಕೆ
ವೆಳಗೆನಲು +ಘನ+ರೋಷ+ವಹ್ನಿಯ
ಬೆಳಗು +ಬೀತುದು +ಚಕಿತ +ಚಂದ್ರಮನಾದ +ದೂರ್ವಾಸ

ಅಚ್ಚರಿ:
(೧) ಸುದರ್ಶನದ ಪ್ರಖರ: ಕೋಟಿಸೂರ್ಯರ ಬೆಳಗು ಬೀರಲು ಹೊತ್ತಿವುರಿವುರಿ ಲೋಕಮೂರರಲಿ
(೨) ದೂರ್ವಾಸನ ಕೋಪ ಆರಿದ ಪರಿ – ಬಲುಬಿಸಿಲು ಬಾಯ್ಗಾಂತ ಚಂದ್ರಿಕೆವೆಳಗೆನಲು ಘನರೋಷವಹ್ನಿಯ ಬೆಳಗು ಬೀತುದು ಚಕಿತ ಚಂದ್ರಮನಾದ ದೂರ್ವಾಸ

ಪದ್ಯ ೨೮: ಅಂಬರೀಷನು ಕೃಷ್ಣನನ್ನು ಹೇಗೆ ಬೇಡಿದನು?

ಮುನ್ನವೇ ಮುನಿದಂಬರೀಷನ
ಬೆನ್ನಹತ್ತಲು ಹರನ ನೇತ್ರದ
ವಹ್ನಿಯೊಳಗುದಯಿಸಿದ ಕೆಂಗಿಡಿ ಸುಡಲು ಕಂಗೆಡುತ
ಉನ್ನತೋನ್ನತ ಕೃಷ್ಣರಕ್ಷಿಸು
ಪನ್ನಗಾರಿಧ್ವಜನೆ ರಕ್ಷಿಸು
ಅನ್ಯಗತಿಯಾರೆನುತ ಹಲುಬಿದನಂದು ಭೂಪಾಲ (ಅರಣ್ಯ ಪರ್ವ, ೧೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ಹಿಂದೆ ಮಹಾರಾಜ ಅಂಬರೀಷನ ಮೇಲೆ ಕೋಪಗೊಂಡ ದೂರ್ವಾಸನು ಅವನನ್ನು ಶಪಿಸಿ, ಆ ಕೋಪದ ಕೆಂಗಿಡಿಯು ಅಂಬರೀಷನನ್ನು ಸುಡಲು ಹೋಯಿತು. ಆಗ ಅವನು ಪರಾತ್ಪರನಾದ ಕೃಷ್ಣನೇ ರಕ್ಷಿಸು, ಗರುಡಧ್ವಜನೇ ರಕ್ಷಿಸು, ನೀನಲ್ಲದೆ ನನಗಿನ್ನಾರು ಗತಿ ಎಂದು ಬೇಡಿದನು.

ಅರ್ಥ:
ಮುನ್ನ: ಹಿಂದೆ; ಮುನಿ: ಋಷಿ; ಬೆನ್ನಹತ್ತು: ಹಿಂಬಾಲಿಸು; ಹರ: ಈಶ್ವರ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಉದಯಿಸು: ಹುಟ್ಟು; ಕೆಂಗಿಡಿ: ಬೆಂಕಿಯ ಕಿಡಿ; ಸುಡು: ದಹಿಸು; ಕಂಗೆಡು: ದಿಕ್ಕುಕಾಣದಾಗು, ಗಾಬರಿಯಾಗು; ಉನ್ನತ: ಹೆಚ್ಚಿನ; ರಕ್ಷಿಸು: ಕಾಪಾಡು; ಪನ್ನಗ: ಹಾವು; ಅರಿ: ವೈರಿ; ಧ್ವಜ: ಬಾವುಟ; ಅನ್ಯ: ಬೇರೆ; ಗತಿ: ದಾರಿ, ದಿಕ್ಕು; ಹಲುಬು: ಬೇಡು; ಭೂಪಾಲ: ರಾಜ;

ಪದವಿಂಗಡಣೆ:
ಮುನ್ನವೇ +ಮುನಿದ್+ಅಂಬರೀಷನ
ಬೆನ್ನಹತ್ತಲು +ಹರನ+ ನೇತ್ರದ
ವಹ್ನಿಯೊಳಗ್+ಉದಯಿಸಿದ +ಕೆಂಗಿಡಿ +ಸುಡಲು +ಕಂಗೆಡುತ
ಉನ್ನತೋನ್ನತ +ಕೃಷ್ಣ+ರಕ್ಷಿಸು
ಪನ್ನಗ+ಅರಿ+ಧ್ವಜನೆ +ರಕ್ಷಿಸು
ಅನ್ಯಗತಿ+ಆರೆನುತ +ಹಲುಬಿದನ್+ಅಂದು +ಭೂಪಾಲ

ಅಚ್ಚರಿ:
(೧) ಗರುಡ ಎಂದು ಹೇಳಲು ಪನ್ನಗಾರಿ ಪದದ ಬಳಕೆ
(೨) ಕೃಷ್ಣ, ಪನ್ನಗಾರಿಧ್ವಜನೆ – ಕೃಷ್ಣನನ್ನು ಕರೆದ ಪರಿ

ಪದ್ಯ ೨೭: ದ್ರೌಪದಿಯು ಕೃಷ್ಣನಲ್ಲಿ ಹೇಗೆ ಮೊರೆಯಿಟ್ಟಳು?

ಅರಸುವೆನೆ ಪರಿಪೂರ್ಣ ಕೇಳೆಂ
ದರುಹುವೆನೆ ಸರ್ವಜ್ಞ ಸಾಕಿ
ನ್ನರಸಿ ಮಾಡುವುದೇನು ತಾಯ್ ನೀನಾವು ಶಿಶುಗಳಲೆ
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯೈ ಭಕ್ತರಾರ್ತಿಯ
ಹೊರೆವ ಹೊಂಪುಳ್ಳದಟರಾರೆಂದಳು ಸರೋಜಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೀನೆಲ್ಲಿರುವೆಯೆಂದು ಹುಡುಕಲಿ? ನೀನು ಎಲ್ಲದರಲ್ಲೂ ವ್ಯಾಪಿಸಿರುವೆ. ನನ್ನ ಮೊರೆಯನ್ನು ಕೇಳೆಂದು ಪ್ರಾರ್ಥಿಸಲೇ? ನೀನು ಎಲ್ಲವನ್ನೂ ತಿಳಿದಿರುವೆ, ನಿನ್ನನ್ನು ಹುಡುಕಿ ಮಾಡುವುದಾದರೂ ಏನು? ನೀನು ತಾಯಿ ನಾವು ಮಕ್ಕಳು. ಕೃಷ್ಣಾ ನಿನ್ನ ಗುರುತನ್ನು ತೋರಿಸು. ಕರುಣೆಯ ಮಳೆಗರೆದು ಭಕ್ತರ ಕಷ್ಟಗಳನ್ನು ಪರಿಹರಿಸು. ನಮ್ಮನ್ನು ರಕ್ಷಿಸುವ ಸಮರ್ಥನು ನೀನಲ್ಲದೆ ಇನ್ನಾರಿದ್ದಾರೆ ಎಂದು ದ್ರೌಪದಿಯು ಮೊರೆಯಿಟ್ಟಳು.

ಅರ್ಥ:
ಅರಸು: ಹುಡುಕು; ಪರಿಪೂರ್ಣ: ತುಂಬ, ಪೂರ್ತಿಯಾದ; ಕೇಳು: ಆಲಿಸು; ಅರುಹು: ತಿಳಿಸು, ಹೇಳು; ಸರ್ವಜ್ಞ: ಎಲ್ಲಾ ತಿಳಿದವ; ತಾಯಿ: ಮಾತೆ; ಶಿಶು: ಮಕ್ಕಳು; ಕುರುಹು: ಚಿಹ್ನೆ, ಗುರುತು; ತೋರು: ಗೋಚರಿಸು; ಕರುಣ: ದಯೆ; ಕರೆ: ಬರೆಮಾಡು; ಕಳೆ: ಬೀಡು, ತೊರೆ; ಭಕ್ತ: ಆರಾಧಕ; ಆರ್ತಿ: ವ್ಯಥೆ, ಚಿಂತೆ; ಹೊರೆ: ಭಾರ; ಹೊಂಪು: ಹೆಚ್ಚಳ, ಮೇಲ್ಮೆ; ಸರೋಜಮುಖಿ: ಕಮಲದಂತ ಮುಖವುಳ್ಳವಳು (ದ್ರೌಪದಿ)

ಪದವಿಂಗಡಣೆ:
ಅರಸುವೆನೆ+ ಪರಿಪೂರ್ಣ +ಕೇಳೆಂದ್
ಅರುಹುವೆನೆ+ ಸರ್ವಜ್ಞ+ ಸಾಕಿ
ನ್ನರಸಿ +ಮಾಡುವುದೇನು +ತಾಯ್ +ನೀನ್+ಆವು +ಶಿಶುಗಳಲೆ
ಕುರುಹುದೋರೈ +ಕೃಷ್ಣ +ಕರುಣವ
ಕರೆದು+ ಕಳೆಯೈ +ಭಕ್ತರಾರ್ತಿಯ
ಹೊರೆವ +ಹೊಂಪುಳ್ಳದಟರಾರ್+ಎಂದಳು +ಸರೋಜಮುಖಿ

ಅಚ್ಚರಿ:
(೧) ಅರಸುವೆನೆ, ಅರುಹುವೆನೆ – ಪದಗಳ ಬಳಕೆ
(೨) ಕ ಕಾರದ ಸಾಲು ಪದ – ಕುರುಹುದೋರೈ ಕೃಷ್ಣ ಕರುಣವ ಕರೆದು ಕಳೆಯೈ

ಪದ್ಯ ೨೬: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ಹಿಂದೆ ನಾನಾಪಾಯದಿರುಬಿನ
ಬಂಧನವ ಬಿಡಿಸಿದೆಯೆಲೈ ಗೋ
ವಿಂದ ಶರಣಾನಂದಕಂದ ಮುಕುಂದ ಗುಣವೃಂದ
ಇಂದು ರುದ್ರನು ತಪ್ಪ ಸಾಧಿಸ
ಬಂದರೆಮ್ಮನು ಕಾವರಾರೆಲೆ
ತಂದೆ ನೀನೇ ಗತಿಯೆನುತ ಹಲುಬಿದಳು ಲಲಿತಾಂಗಿ (ಅರಣ್ಯ ಪರ್ವ, ೧೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಹಿಂದೆ ಅನೇಕ ಅಪಾಯಗಳಿಗೆ ಸಿಕ್ಕಾಗ ಅಪಾಯದ ಕಟ್ಟನ್ನು ಬಿಡಿಸಿದೆ. ಓ ಗೋವಿಂದ, ಭಕ್ತರ ಆನಂದ ಮೂಲ, ಮುಕುಂದ, ಸಕಲ ಕಲ್ಯಾಣಗುಣ ಪರಿಪೂರ್ಣ, ಈಗ ರುದ್ರಾವತಾರನಾದ ದ್ರೂರ್ವಾಸನು ತಪ್ಪನ್ನು ಸಾಧಿಸಲು ಬಂದರೆ ನಮ್ಮನ್ನು ಕಾಪಾಡುವವರಾರು? ತಂದೆ ಶ್ರೀಕೃಷ್ಣಾ ನೀನೇ ಗತಿ ಎಂದು ದ್ರೌಪದಿಯು ಬೇಡಿದಳು.

ಅರ್ಥ:
ಹಿಂದೆ: ಪೂರ್ವ;ದಲ್ಲಿ; ನಾನಾ: ಹಲವಾರು; ಅಪಾಯ: ತೊಂದರೆ; ಇರುಬು: ಇಕ್ಕಟ್ಟು; ಬಂಧನ: ಪಾಶ; ಬಿಡಿಸು: ಸಡಿಲಗೊಳಿಸು; ಶರಣ: ಭಕ್ತ; ಗುಣ: ಸ್ವಭಾವ; ವೃಂದ: ಗುಂಪು; ರುದ್ರ: ಶಿವನ ಗಣ, ದೂರ್ವಾಸ; ತಪ್ಪು: ಸರಿಯಲ್ಲದ; ಸಾಧಿಸು: ಪಡೆ, ದೊರ ಕಿಸಿಕೊಳ್ಳು; ಬಂದು: ಆಗಮಿಸು; ಕಾವ: ರಕ್ಷಿಸು; ಗತಿ: ಮಾರ್ಗ, ಅವಸ್ಥೆ; ಹಲುಬು: ಬೇಡು; ಲಲಿತಾಂಗಿ: ಬಳ್ಳಿಯಂತೆ ದೇಹವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಹಿಂದೆ +ನಾನ+ಅಪಾಯದ್+ಇರುಬಿನ
ಬಂಧನವ+ ಬಿಡಿಸಿದೆ+ಎಲೈ +ಗೋ
ವಿಂದ+ ಶರಣಾನಂದ+ಕಂದ+ ಮುಕುಂದ +ಗುಣವೃಂದ
ಇಂದು +ರುದ್ರನು +ತಪ್ಪ +ಸಾಧಿಸ
ಬಂದರ್+ಎಮ್ಮನು +ಕಾವರಾರ್+ಎಲೆ
ತಂದೆ +ನೀನೇ +ಗತಿ+ಎನುತ +ಹಲುಬಿದಳು +ಲಲಿತಾಂಗಿ

ಅಚ್ಚರಿ:
(೧) ಕೃಷ್ಣನನ್ನು ಕರೆದ ಪರಿ – ಗೋವಿಂದ, ಶರಣಾನಂದ, ಕಂದ ಮುಕುಂದ, ಗುಣವೃಂದ, ತಂದೆ

ಪದ್ಯ ೨೫: ದ್ರೌಪದಿಯು ಕೃಷ್ಣನನ್ನು ಹೇಗೆ ಬೇಡಿದಳು?

ನೀಲಕಂಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು
ಏಳು ದಿಟವೈಯೆಮ್ಮ ನುಡಿಯನು
ಪಾಲಿಸೈ ಸಂಕಲ್ಪವಳಿದೊಡೆ
ಹಾಳು ಹೊರುವುದು ಕೃಷ್ಣಮೈದೋರೆಂದಳಿಂದು ಮುಖಿ (ಅರಣ್ಯ ಪರ್ವ, ೧೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನ ಹಣೆಗಣ್ಣಿನ ಬೆಂಕಿಗೆ ಆಹುತಿಯಾದ ಮನ್ಮಥನ ಯಮನ ದಾರಿಯನ್ನು ಪಾಂಡವರು ಹಿಡಿಯಲಿದ್ದಾರೆ. ಹೇ ಕೃಷ್ಣ ನೀನು ಏಳು, ನನ್ನ ಮಾತು ನಿಜ. ನಮ್ಮ ಭಾಷೆಯನ್ನು ನಡೆಸಿಕೊಡು. ಸಂಕಲ್ಪ ಭಂಗವಾದರೆ ನಾವು ಹಾಳಾದಂತೆ. ಕೃಷ್ಣ ಬೇಗ ಬಾ ಎಂದು ಬೇಡಿದಳು.

ಅರ್ಥ:
ಕಂಠ: ಕೊರಳು; ನೀಲಕಂಠ: ಶಿವ; ನೇತ್ರ: ಕಣ್ಣು; ವಹ್ನಿ: ಬೆಂಕಿ; ಜ್ವಾಲೆ: ಬೆಂಕಿಯ ನಾಲಗೆ; ಆಹುತಿ: ಬಲಿ; ಮುಗ್ಗು: ಬಾಗು, ಮಣಿ; ಕಾಲ: ಸಮಯ; ಕಾಮ: ಮನ್ಮಥ; ಪಥ: ದಾರಿ; ಪಡೆ: ದೊರಕು; ನಂದನ: ಮಕ್ಕಳು; ಏಳು: ಎದ್ದೇಳು; ದಿಟ: ಸತ್ಯ; ನುಡಿ: ಮಾತು; ಪಾಲಿಸು: ರಕ್ಷಿಸು; ಸಂಕಲ್ಪ: ನಿರ್ಧಾರ, ನಿರ್ಣಯ; ಅಳಿ: ನಾಶ; ಹಾಳು: ನಾಶ; ಮೈದೋರು: ಕಾಣಿಸಿಕೋ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು (ದ್ರೌಪದಿ);

ಪದವಿಂಗಡಣೆ:
ನೀಲಕಂಠನ+ ನೇತ್ರ+ವಹ್ನಿ
ಜ್ವಾಲೆಗ್+ಆಹುತಿಯಾಗಿ +ಮುಗ್ಗಿದ
ಕಾಲ +ಕಾಮನ +ಪಥವ +ಪಡೆವರು+ ಪಾಂಡುನಂದನರು
ಏಳು +ದಿಟವೈ+ಎಮ್ಮ +ನುಡಿಯನು
ಪಾಲಿಸೈ +ಸಂಕಲ್ಪವ್+ಅಳಿದೊಡೆ
ಹಾಳು +ಹೊರುವುದು +ಕೃಷ್ಣ+ಮೈದೋರೆಂದಳ್+ಇಂದುಮುಖಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಕಂಠನ ನೇತ್ರವಹ್ನಿಜ್ವಾಲೆಗಾಹುತಿಯಾಗಿ ಮುಗ್ಗಿದ
ಕಾಲ ಕಾಮನ ಪಥವ ಪಡೆವರು ಪಾಂಡುನಂದನರು