ಪದ್ಯ ೧೮: ಏನನ್ನು ತೋರುವೆನೆಂದು ಬೇಡನು ಕರೆದನು?

ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಕರಡಿಯ
ಮಿಂಡವಂದಿನ ಲಾವಣಿಗೆಯ ಲುಲಾಯಲಾಲನೆಯ
ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ
ಹಿಂಡುಗಳ ತೋರಿಸುವೆನೇಳೆಂದನಿಲಜನ ಕರೆದ (ಅರಣ್ಯ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ನೋಡಿದರೂ ಹೋದರೂ ಆ ಮೃಗಗಳು ಹಿಂದೆ ಸರಿಯುವುದಿಲ್ಲ. ಹುಲಿ ಕರಡಿಗಳ ಹಿಂಡುಗಳ ಗರ್ವ, ಕಾದುಕೋಣಗಳ ಗುಂಪು, ಮೊಲಗಳ ಚಲನೆ, ನವಿಲು, ಹಾವುಗಳು ಜೊತೆ ಜೊತೆ ಇರುವುದು, ಖಡ್ಗಮೃಗದ ಹಿಂಡುಗಳನ್ನು ತೋರುತ್ತೇನೆ ಮೇಲೇಳು ಎಂದು ಬೇಡನು ಭೀಮಸೇನನನ್ನು ಕರೆದನು.

ಅರ್ಥ:
ಕಂಡು: ನೋಡು; ಮೃಗ: ಪ್ರಾಣಿ; ಮೈ: ತನು, ದೇಹ; ತೆಗೆ: ಈಚೆಗೆ ತರು, ಹೊರತರು; ಇಕ್ಕೆ: ನೆಲೆ; ಬೀಡು; ಹಿಂಡು: ಗುಂಪು; ಹೊಳಹು: ಸ್ವರೂಪ, ಲಕ್ಷಣ; ಹುಲಿ: ವ್ಯಾಘ್ರ; ಕರಡಿ: ಮೈಎಲ್ಲಾ ಕೂದಲುಳ್ಳಪ್ರಾಣಿ; ಮಿಂಡ:ಹರೆಯದ, ಪ್ರಾಯದ; ಲಾವಣಿಗೆ: ಗುಂಪು, ಸಮೂಹ; ಲುಲಾಯ: ಕೋಣ, ಮಹಿಷ; ಲಾಲನೆ: ಅಕ್ಕರೆ ತೋರಿಸುವುದು, ಮುದ್ದಾಟ; ತೊಂಡು: ಉದ್ಧಟತನ, ದುಷ್ಟತನ; ಮೊಲ: ತೊಂಡ: ಆಳು; ತುಂಟತನ, ತುಂಟ; ನವಿಲು: ಮಯೂರ; ಮಂಡಳಿ: ಗುಂಪು; ಮೇಳ: ಸೇರುವಿಕೆ, ಕೂಡುವಿಕೆ; ಖಡ್ಗಿ: ಘೇಂಡಾಮೃಗ; ಹಿಂಡು: ಗುಂಪು; ತೋರಿಸು: ನೋಡು, ಗೋಚರಿಸು; ಅನಿಲಜ: ಭೀಮ; ಕರೆ: ಬರೆಮಾಡು;

ಪದವಿಂಗಡಣೆ:
ಕಂಡ +ಮೃಗ +ಮೈದೆಗೆಯದ್+ಇಕ್ಕೆಯ
ಹಿಂಡು +ಹೊಳಹಿನ +ಹುಲಿಯ +ಕರಡಿಯ
ಮಿಂಡವಂದಿನ+ ಲಾವಣಿಗೆಯ +ಲುಲಾಯ+ಲಾಲನೆಯ
ತೊಂಡು +ಮೊಲನ +ತೊಂಡಕು +ನವಿಲಿನ
ಮಂಡಳಿಯ +ಮೇಳವದ+ ಖಡ್ಗಿಯ
ಹಿಂಡುಗಳ +ತೋರಿಸುವೆನ್+ಏಳೆಂದ್+ಅನಿಲಜನ +ಕರೆದ

ಅಚ್ಚರಿ:
(೧) ಲ ಕಾರದ ತ್ರಿವಳಿ ಪದ – ಲಾವಣಿಗೆಯ ಲುಲಾಯ ಲಾಲನೆಯ
(೨) ಅರಣ್ಯದಲ್ಲಿ ಕಾಣುವ ವಿಶೇಷತೆ: ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ

ಪದ್ಯ ೧೭: ಬೇಡನು ಭೀಮನಿಗೆ ಏನು ಹೇಳಿದನು?

ಮೇಹುಗಾಡಿನೊಳವರ ಮೈಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟ ತೇಗುವರೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಹುಲು
ಸಾಹಸಕ್ಕಂಜುವೆವು ನೀನೇಳೆಂದನಾ ಶಬರ (ಅರಣ್ಯ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಮೇಯುವ ಕಾಡಿನಲ್ಲಿ ಅವುಗಳನ್ನು ಸೋಹಿಕೊಂಡು ಬಂದರೆ ಅವುಗಳು ಗುಂಪುಗುಂಪಾಗಿ ತೆಕ್ಕೆಗೆ ಸಿಗುತ್ತವೆ. ಅವನ್ನು ಹೊಡೆಯಲು ಹೋದರೆ ಅವು ಮರಗಳ ಗುಂಪಿನಲ್ಲಿ ಸೇರಿಕೊಂಡು ಮಾಯವಾಗುತ್ತವೆ. ಹಾಡು ಹೇಳಿ ಆಕರ್ಷಿಸಲು ಹೋದರೆ ಆಗುವುದಿಲ್ಲ, ನಾವಿಟ್ಟಗುರಿ ಹೆಚ್ಚು ಕಡಿಮೆಯಾಗುತ್ತದೆ. ಅವುಗಳ ಕಾಟ ಹೆಚ್ಚಾದರೂ ಸಾಹಸದಿಂದ ಯಾವ ಪ್ರಯೊಜನವೂ ಆಗದು. ಆದುದರಿಂದ ಬೇಟೆಗೆ ನೀನೇ ಬಾ ಎಂದು ಬೇಡನು ಭೀಮನಿಗೆ ಹೇಳಿದನು.

ಅರ್ಥ:
ಮೇಹು: ಮೇಯುವ; ಕಾಡು: ಕಾನನ, ಅರಣ್ಯ; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ಸುವ್ವಲೆ, ಸುಬ್ಬಲೆ: ಒಂದು ಬಗೆಯಾದ ಬಲೆ; ತೋಳ: ವೃಕ; ತೆಕ್ಕೆ: ಗುಂಪು; ತೋಟಿ: ಕಲಹ, ಜಗಳ; ತೇಗು: ತಿಂದು ಮುಗಿಸು, ಏಗು; ತೋಹು: ಮರಗಳ ಗುಂಪು, ಸಮೂಹ, ತೋಪು; ತೊದಳು: ಉಗ್ಗು; ಗೋರಿ: ಬೇಟೆಯಲ್ಲಿ ಜಿಂಕೆಗಳನ್ನು ಮರುಳುಗೊಳಿ ಸಲು ಬೇಟೆಗಾರರು ಹಾಡುವ ಹಾಡು; ಗಾಹು: ಮೋಸ, ವಂಚನೆ; ಗುರಿ: ಈಡು, ಲಕ್ಷ್ಯ; ಗಡಬಡಿ: ಆತುರ; ಹುಲು: ಕ್ಷುದ್ರ, ಅಲ್ಪ; ಸಾಹಸ: ಪರಾಕ್ರಮ; ಅಂಜು: ಹೆದರು; ಶಬರ: ಬೇಡ;

ಪದವಿಂಗಡಣೆ:
ಮೇಹುಗಾಡಿನೊಳ್+ಅವರ +ಮೈಮಿಗೆ
ಸೋಹಿದರೆ+ ಸುವ್ವಲೆಯ+ ಸುಬ್ಬಲೆ
ಆಹವದಲೇ+ ತೋಳ+ ತೆಕ್ಕೆಯ +ತೋಟ +ತೇಗುವರೆ
ತೋಹಿನಲಿ+ ತೊದಳಾಗಿ +ಗೋರಿಯ
ಗಾಹಿನಲಿ+ ಗುರಿ+ ಗಡಬಡಿಸೆ+ ಹುಲು
ಸಾಹಸಕ್+ಅಂಜುವೆವು +ನೀನ್+ಏಳೆಂದನಾ+ ಶಬರ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ
(೨) ಗ ಕಾರದ ಸಾಲು ಪದ – ಗೋರಿಯ ಗಾಹಿನಲಿ ಗುರಿ ಗಡಬಡಿಸೆ
(೩) ಸ ಕಾರದ ತ್ರಿವಳಿ ಪದ – ಸೋಹಿದರೆ ಸುವ್ವಲೆಯ ಸುಬ್ಬಲೆಯಾಹವದಲೇ

ಪದ್ಯ ೧೬: ಬೇಡನು ಭೀಮನಿಗೆ ಏನೆಂದು ಹೇಳಿದನು?

ಇದೆ ಮಹಾಕಾಂತಾರವತಿ ದೂ
ರದಲಿ ವೃಕ ಶಾರ್ದೂಲ ಕೇಸರಿ
ಕದಲಿ ಕಳಭಕ್ರೋಢ ಶಿಖಿಲೂಲಾಯ ಸಾರಂಗ
ಮದದ ರಹಿಯಲಿ ಮಾನಿಸರು ಸೋಂ
ಕಿದರೆ ಸೆಡೆಯವು ಹೊಲನ ಹೊದರಿ
ಕ್ಕಿದವು ದೀಹದ ಹಿಂಡಿನಂತಿದೆ ಜೀಯ ಚಿತ್ತೈಸು (ಅರಣ್ಯ ಪರ್ವ, ೧೪ ಸಂಧಿ, ೧೬ ಪದ್ಯ)

ತಾತ್ಪರ್ಯ:
ಅತಿ ದೂರದಲ್ಲಿ ಒಂದು ಮಹಾರಣ್ಯವಿದೆ. ಅಲ್ಲಿ ತೋಳ, ಹುಲಿ, ಸಿಂಹ, ಜಿಂಕೆ, ಆನೆಯ ಮರಿಗಳು, ಕಪಿ, ನವಿಲು, ಕಾಡುಕೋಣ, ಸಾರಂಗಗಳು ಮದಿಸಿ ಮನುಷ್ಯರು ಹೋದರೂ ಬೆದರುವುದಿಲ್ಲ ಹೊಲಗಳ ಮೇಲೆ ಬಿದ್ದು ಸಾಕಿದ ಜಿಂಕೆ, ಆಡು ಮೊದಲಾದವುಗಳಂತೆ ಹಾಳುಮಾದುತ್ತಿವೆ, ಜೀಯಾ ಇದನ್ನು ಮನಸ್ಸಿಗೆ ತಂದುಕೋ ಎಂದು ಅವನು ಭೀಮನಿಗೆ ಹೇಳಿದನು.

ಅರ್ಥ:
ಮಹಾ: ದೊಡ್ಡ; ಕಾಂತಾರ: ಅಡವಿ, ಅರಣ್ಯ; ಅತಿ: ಬಹಳ; ದೂರ: ಅಂತರ; ವೃಕ: ತೋಳ; ಶಾರ್ದೂಲ: ಹುಲಿ; ಕೇಸರಿ: ಸಿಂಹ; ಕದಲಿ: ಜಿಂಕೆ; ಕಳಭ: ಆನೆಮರಿ; ಲೂಲಾಯ: ಕೋಣ; ಸಾರಂಗ: ಜಿಂಕೆ; ಕ್ರೋಡ: ಹಂದಿ; ಮದ: ಸೊಕ್ಕು; ರಹಿ: ದಾರಿ, ಮಾರ್ಗ; ಮಾನಿಸ: ಮನುಷ್ಯ; ಸೋಂಕು: ಮುಟ್ಟುವಿಕೆ, ಸ್ಪರ್ಶ; ಸೆಡೆ: ಗರ್ವಿಸು, ಅಹಂಕರಿಸು; ಹೊಲ: ಸ್ಥಳ, ಪ್ರದೇಶ; ಹೊದರು: ತೊಡಕು, ತೊಂದರೆ ; ಇಕ್ಕು: ಇರಿಸು, ಇಡು; ದೀಹ: ಬೇಟೆಗೆ ಉಪಯೋಗಿಸಲು ಪಳಗಿಸಿದ ಪ್ರಾಣಿ, ಸೆಳೆ; ಹಿಂಡು: ಗುಂಪು, ಸಮೂಹ; ಜೀಯ: ಒಡೆಯ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಇದೆ+ ಮಹಾಕಾಂತಾರವ್+ಅತಿ +ದೂ
ರದಲಿ +ವೃಕ +ಶಾರ್ದೂಲ +ಕೇಸರಿ
ಕದಲಿ+ ಕಳಭ+ಕ್ರೋಢ+ ಶಿಖಿ+ಲೂಲಾಯ +ಸಾರಂಗ
ಮದದ +ರಹಿಯಲಿ +ಮಾನಿಸರು +ಸೋಂ
ಕಿದರೆ +ಸೆಡೆಯವು +ಹೊಲನ +ಹೊದರ್
ಇಕ್ಕಿದವು +ದೀಹದ+ ಹಿಂಡಿನಂತಿದೆ+ ಜೀಯ +ಚಿತ್ತೈಸು

ಅಚ್ಚರಿ:
(೧) ಪ್ರಾಣಿಗಳನ್ನು ಹೆಸರಿಸುವ ಪರಿ – ವೃಕ, ಶಾರ್ದೂಲ, ಕೇಸರಿ, ಕದಲಿ, ಕಳಭ, ಕ್ರೋಢ ಶಿಖಿ, ಲೂಲಾಯ, ಸಾರಂಗ

ಪದ್ಯ ೧೫: ಬೇಡನು ಭೀಮನಿಗೆ ಯಾವುದರ ಬಗ್ಗೆ ವಿವರವನ್ನು ನೀಡಿದನು?

ಬಂದನೊಬ್ಬನು ಪವನಸುತನ ಪು
ಳಿಂದನಟವೀತಟದ ಖಗಮೃಗ
ವೃಂದದಿಕ್ಕೆಯ ಹಕ್ಕೆಯಾಡುಂಬೊಲದ ಸೋಹೆಗಳ
ನಿಂದನೆಲೆ ನೀರ್ದಾಣ ಹೆಜ್ಜೆಗ
ಳಿಂದ ಭೇದಿಸಿ ಜೀಯ ಚಿತ್ತವಿ
ಸೆಂದು ಬಿನ್ನಹ ಮಾಡಿದನು ಕಲಿ ಭೀಮಸೇನಂಗೆ (ಅರಣ್ಯ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಒಬ್ಬ ಬೇಡನು ಬಂದು ಅಡವಿಯಲ್ಲಿ ಪಕ್ಷಿಗಳ ಗೂಡುಗಳು, ಮೃಗಗಳು ಇರುವ ಸ್ಥಳಗಳು ಅವು ನಿಲ್ಲುವ ಜಾಗಗಳು, ತಿರುಗಾಡುವ ಸುಳಿವು, ಸದ್ಯದಲ್ಲಿ ನಿಂತಿರುವ ಜಾಗ, ಅವು ನೀರು ಕುಡಿಯುವ ಜಾಗಗಳು ಇವುಗಳನ್ನೆಲ್ಲಾ ಅವುಗಳ ಹೆಜ್ಜೆಗಳ ಗುರುತಿನಿಂದ ಕಂಡು ಹಿಡಿದು ಭೀಮನಿಗೆ ಜೀಯಾ ಕೇಳು ಎಂದು ಎಲ್ಲವನ್ನು ತಿಳಿಸಿದನು.

ಅರ್ಥ:
ಬಂದನು: ಆಗಮಿಸು; ಪವನಸುತ: ವಾಯುಪುತ್ರ (ಭೀಮ); ಪುಳಿಂದ: ಬೇಡ; ಅಟವಿ: ಕಾಡು; ತಟ: ಬೆಟ್ಟದ ತಪ್ಪಲು, ದಡ; ಖಗ: ಪಕ್ಷಿ; ಮೃಗ: ಪ್ರಾಣಿ; ವೃಂದ: ಗುಂಪು; ಇಕ್ಕೆ: ಗುಡಿಸಲು; ಹಕ್ಕೆ: ಹಕ್ಕಿಯ ಗೂಡು; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ನಿಲ್ಲು: ತಡೆ; ನೀರ್ದಾಣ: ನೀರಿನ ಸ್ಥಾನ; ಹೆಜ್ಜೆ: ಪದ; ಭೇದಿಸು: ಬಗೆ, ವಿಧ, ಪ್ರಕಾರ; ಜೀಯ: ಒಡೆಯ; ಚಿತ್ತವಿಸು: ಗಮನವಿಟ್ಟು ಕೇಳು; ಬಿನ್ನಹ: ಮನವಿ; ಕಲಿ: ಶೂರ;

ಪದವಿಂಗಡಣೆ:
ಬಂದನ್+ಒಬ್ಬನು +ಪವನಸುತನ +ಪು
ಳಿಂದನ್+ಅಟವೀ+ತಟದ +ಖಗ+ಮೃಗ
ವೃಂದದ್+ಇಕ್ಕೆಯ +ಹಕ್ಕೆ+ಆಡುಂಬೊಲದ+ ಸೋಹೆಗಳ
ನಿಂದನೆಲೆ +ನೀರ್ದಾಣ+ ಹೆಜ್ಜೆಗ
ಳಿಂದ +ಭೇದಿಸಿ +ಜೀಯ +ಚಿತ್ತವಿ
ಸೆಂದು +ಬಿನ್ನಹ +ಮಾಡಿದನು +ಕಲಿ +ಭೀಮಸೇನಂಗೆ

ಪದ್ಯ ೧೪: ಧರ್ಮಜನು ಮತ್ತಾರ ಆಶ್ರಮಕ್ಕೆ ಹೋದನು?

ಅರಸ ಕೇಳೈ ಕಾರ್ತಿಕೇಯನ
ವರ ಮಹಾಶ್ರಮಕೈದಿದನು ಮುನಿ
ವರರು ಸಹಿತೊಲವಿನಲಿ ನೂಕಿದನೊಂದು ವತ್ಸರವ
ಧರಣಿಪತಿ ಬೃಹದಶ್ವನಾಶ್ರಮ
ವರಕೆ ಬಂದನು ತೀರ್ಥ ಸೇವಾ
ಪರಮ ಪಾವನ ಕರಣನಿರ್ದನು ಪರ್ಣಶಾಲೆಯಲಿ (ಅರಣ್ಯ ಪರ್ವ, ೧೪ ಸಂಧಿ, ೧೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನು ಕಾರ್ತಿಕೇಯನ ಆಶ್ರಮಕ್ಕೆ ಹೋಗಿ ಮುನಿಗಳೊಡನೆ ಒಂದು ವರ್ಷಕಾಲ ಸಂತೋಷದಿಂದಿದ್ದನು. ಅಲ್ಲಿಂದ ಮುಂದೆ ಬೃಹದಶ್ವನ ಆಶ್ರಮಕ್ಕೆ ಹೋಗಿ ಪರ್ಣಶಾಲೆಯಲ್ಲಿದ್ದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರ: ಶ್ರೇಷ್ಠ; ಮಹಾ: ದೊಡ್ಡ, ಶ್ರೇಷ್ಠ; ಆಶ್ರಮ: ಕುಟೀರ; ಮುನಿ: ಋಷಿ; ಸಹಿತ: ಜೊತೆ; ಒಲವು: ಪ್ರೀತಿ; ನೂಕು: ತಳ್ಳು; ವತ್ಸರ: ವರ್ಷ; ಧರಣಿಪತಿ: ರಾಜ; ಬಂದನು: ಆಗಮಿಸು; ತೀರ್ಥ: ಪುಣ್ಯಕ್ಷೇತ್ರ; ಸೇವೆ: ಉಪಚಾರ, ಶುಶ್ರೂಷೆ, ಪೂಜೆ; ಪರಮ: ಶ್ರೇಷ್ಠ; ಪಾವನ: ಪವಿತ್ರವಾದ; ಪರ್ಣಶಾಲೆ: ಕುಟೀರ; ಐದು: ಬಂದುಸೇರು;

ಪದವಿಂಗಡಣೆ:
ಅರಸ+ ಕೇಳೈ +ಕಾರ್ತಿಕೇಯನ
ವರ +ಮಹಾಶ್ರಮಕ್+ಐದಿದನು +ಮುನಿ
ವರರು +ಸಹಿತ್+ಒಲವಿನಲಿ +ನೂಕಿದನ್+ಒಂದು +ವತ್ಸರವ
ಧರಣಿಪತಿ +ಬೃಹದಶ್ವನ್+ಆಶ್ರಮ
ವರಕೆ+ ಬಂದನು +ತೀರ್ಥ +ಸೇವಾ
ಪರಮ +ಪಾವನ +ಕರಣನಿರ್ದನು +ಪರ್ಣಶಾಲೆಯಲಿ

ಅಚ್ಚರಿ:
(೧) ಧರ್ಮಜನನ್ನು ಕರೆದ ಪರಿ – ಸೇವಾ ಪರಮ ಪಾವನ ಕರಣ
(೨) ಅರಸ, ಧರಣಿಪತಿ – ಸಮನಾರ್ಥಕ ಪದ

ಪದ್ಯ ೧೩: ಪಾಂಡವರು ಯಾವ ಅರಣ್ಯಕ್ಕೆ ಪ್ರಯಾಣ ಬಳಸಿದರು?

ಇವರು ಕಾಮ್ಯಕ ಕಾನನವನನು
ಭವಿಸಿ ಬಳಿಕಲ್ಲಿಂದ ಹೊರವಂ
ಟವಗಡೆಯ ಪರ್ವತಕೆ ಬಂದರು ಯಾಮುನಾಹ್ವಯದ
ದಿವಿಜರಿಪು ಹೈಡಿಂಬನಾ ತುದಿ
ಗಾರನೇರಿಸಿದನು ತದಗ್ರದೊ
ಳವನಿಪತಿ ಕೆಲದಿವಸವಿದ್ದಲ್ಲಿಂದ ಹೊರವಂಟ (ಅರಣ್ಯ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಪಾಂಡವರು ಕಾಮ್ಯಕವನದಲ್ಲಿ ಕೆಲದಿನಗಳ ಕಾಲ ವಾಸವಾಗಿದ್ದು ಅಲ್ಲಿಂದ ಹೊರಟು ಅಪಾಯವಾಗಿದ್ದ ಯಾಮುನ ಪರ್ವತಕ್ಕೆ ಬಂದರು. ದಾನವನಾದ ಘಟೋತ್ಕಚನು ಅವರನ್ನು ಪರ್ವತದ ಮೇಲಕ್ಕೆ ಹತ್ತಿಸಿ ಅಲ್ಲಿ ಕೆಲದಿನಗಳಿದ್ದು ಅಲ್ಲಿಂದ ಮುಂದೆ ಪ್ರಯಾಣ ಮಾಡಿದರು.

ಅರ್ಥ:
ಕಾನನ: ಅರಣ್ಯ; ಅನುಭವ: ಇಂದ್ರಿಯಗಳ ಮೂಲಕ ಬರುವ ಜ್ಞಾನ; ಬಳಿಕ: ನಂತರ; ಹೊರವಂಟ: ತೆರಳು; ಪರ್ವತ: ಬೆಟ್ಟ; ಬಂದರು: ಆಗಮಿಸು; ದಿವಿಜ: ದೇವತೆ; ರಿಪು: ವೈರಿ; ತುದಿ: ಅಗ್ರ; ಏರಿಸು: ಮೇಲಕ್ಕೆ ಹತ್ತಿಸು; ಅಗ್ರ: ತುದಿ, ಮೇಲುಭಾಗ; ಅವನಿಪತಿ: ರಾಜ; ಕೆಲ: ಸ್ವಲ್ಪ; ದಿವಸ: ದಿನ; ಅವಗಡೆ: ಅಪಾಯ; ಆಹ್ವಯ: ಕರೆಯುವಿಕೆ;

ಪದವಿಂಗಡಣೆ:
ಇವರು +ಕಾಮ್ಯಕ +ಕಾನನವನ್+ಅನು
ಭವಿಸಿ+ ಬಳಿಕ್+ಅಲ್ಲಿಂದ +ಹೊರವಂಟ್
ಅವಗಡೆಯ+ ಪರ್ವತಕೆ+ ಬಂದರು +ಯಾಮುನ+ಆಹ್ವಯದ
ದಿವಿಜರಿಪು +ಹೈಡಿಂಬನಾ +ತುದಿಗ್
ಆರನೇರಿಸಿದನು +ತದ್+ಅಗ್ರದೊಳ್
ಅವನಿಪತಿ +ಕೆಲದಿವಸವಿದ್+ಅಲ್ಲಿಂದ +ಹೊರವಂಟ

ಅಚ್ಚರಿ:
(೧) ಘಟೋತ್ಕಚನನ್ನು ಕರೆಯುವ ಪರಿ – ದಿವಿಜರಿಪು ಹೈಡಿಂಬನ