ಪದ್ಯ ೬: ಅರ್ಜುನನ ಮಹಾಸ್ತ್ರಗಳ ನಾಟಕವನ್ನು ಯಾರು ವೀಕ್ಷಿಸಿದರು?

ನೆರೆದುದಭ್ರದೊಳಮರಗಣ ಮುನಿ
ವರರು ಸಹಿತ ಯುಧಿಷ್ಠಿರಾದಿಗ
ಳೆರಡುವಂಕವ ಹೊದ್ದಿದರು ಹರಿತನಯನೆಡಬಲವ
ತರುನಿಕರ ಗಿರಿನಿಚಯವಲ್ಲಿಯ
ಪರಿಜನವು ತರುಬಿದುದು ತನಗಿದ
ನರಸಬಣ್ಣಿಸಲಳವೆ ನರನ ಮಹಾಸ್ತ್ರ ನಾಟಕವ (ಅರಣ್ಯ ಪರ್ವ, ೧೪ ಸಂಧಿ, ೬ ಪದ್ಯ)

ತಾತ್ಪರ್ಯ:
ಆಕಾಶದಲ್ಲಿ ದೇವತೆಗಳು ಬಂದು ನಿಂತರು. ಧರ್ಮಜ ಮತ್ತು ಉಳಿದ ಪಾಂಡವರು ಮುನಿಗಳೊಡನೆ ಅರ್ಜುನನ ಎಡ ಬಲದಲ್ಲಿ ನಿಂತರು. ಕಾಡಿನ ಮರಗಳು, ಬೆಟ್ಟಗಳು, ಪಾಂಡವರ ಪರಿಜನರು ಅಲ್ಲಿನಿಂತರು. ಅರ್ಜುನನ ಮಹಾಸ್ತ್ರಗಳ ನಾಟಕವನ್ನು ಜನಮೇಜಯನೇ ನನಗೆ ವರ್ಣಿಸಲು ಸಾಧ್ಯವೇ!

ಅರ್ಥ:
ನೆರೆ: ಸಮೀಪ, ಹತ್ತಿರ; ಅಭ್ರ: ಆಗಸ; ಅಮರ: ದೇವತೆ; ಗಣ: ಗುಂಪು; ಮುನಿ: ಋಷಿ; ಸಹಿತ: ಜೊತೆ; ಆದಿ: ಮುಂತಾದ; ಅಂಕ: ಗುರುತು, ಬಿರುದು; ಹೊದ್ದು: ಹೊಂದು, ಸೇರು; ಹರಿ: ವಿಷ್ಣು; ತನಯ: ಮಗ; ಎಡಬಲ: ಎರಡೂ ಕಡೆ; ತರು: ಮರ; ನಿಕರ: ಗುಂಪು, ಸಮೂಹ; ಗಿರಿ: ಬೆಟ್ಟ; ನಿಚಯ: ರಾಶಿ, ಗುಂಪು; ಪರಿಜನ: ಬಂಧುಜನ; ತರುಬು: ತಡೆ, ನಿಲ್ಲಿಸು; ಅರಸ: ರಾಜ; ಬಣ್ಣಿಸು: ವಿವರಿಸು, ಹೊಗಳು; ನರ: ಮನುಷ್ಯ; ಮಹಾಸ್ತ್ರ: ಶ್ರೇಷ್ಠವಾದ ಶಸ್ತ್ರ; ನಾಟಕ: ತೋರಿಕೆಯ ವರ್ತನೆ;

ಪದವಿಂಗಡಣೆ:
ನೆರೆದುದ್+ಅಭ್ರದೊಳ್+ಅಮರಗಣ +ಮುನಿ
ವರರು+ ಸಹಿತ +ಯುಧಿಷ್ಠಿರ್+ಆದಿಗಳ್
ಎರಡುವ್+ಅಂಕವ+ ಹೊದ್ದಿದರು +ಹರಿ+ತನಯನ್+ಎಡಬಲವ
ತರು+ನಿಕರ+ ಗಿರಿ+ನಿಚಯವ್ +ಅಲ್ಲಿಯ
ಪರಿಜನವು +ತರುಬಿದುದು +ತನಗಿದನ್
ಅರಸ+ಬಣ್ಣಿಸಲ್+ಅಳವೆ +ನರನ +ಮಹಾಸ್ತ್ರ +ನಾಟಕವ

ಅಚ್ಚರಿ:
(೧) ನಿಚಯ, ನಿಕರ, ಗಣ – ಸಮನಾರ್ಥಕ ಪದ
(೨) ನರ, ಹರಿತನಯ – ಅರ್ಜುನನನ್ನು ಕರೆದ ಪರಿ

ಪದ್ಯ ೫: ಗಾಂಡೀವದ ಶಬ್ದಕ್ಕೆ ಯಾರು ಬಂದರು?

ಏನಿದದ್ಭುತ ರವವೆನುತ ವೈ
ಮಾನಿಕರು ನಡನಡುಗಿದರು ಗ
ರ್ವಾನುನಯಗತವಾಯ್ತಲೇ ಸುರಪುರದ ಗರುವರಿಗೆ
ಆ ನಿರುತಿ ಯಮ ವರುಣ ವಾಯು ಕೃ
ಶಾನು ಧನದ ಮಹೇಶರೈತರ
ಲಾನೆಯಲಿ ಹೊರವಂಟನಂಬರಗತಿಯಲಮರೇಂದ್ರ (ಅರಣ್ಯ ಪರ್ವ, ೧೪ ಸಂಧಿ, ೫ ಪದ್ಯ)

ತಾತ್ಪರ್ಯ:
ಗಾಂಡೀವದ ಹೆದೆಯ ಮೊಳಗಿನಿಂದ ದೇವತೆಗಳ ಹೆಮ್ಮೆಯು ಉಡುಗಿ, ಅವರು ನಡುಗಿದರು. ನಿರುಋತಿ, ವರುಣ, ವಾಯು, ಅಗ್ನಿ, ಕುಬೇರರು ಇದೇನೆಂದು ನೋಡಲು ಹೊರಟರು. ಆಗ ಇಂದ್ರನೂ ಐರಾವತದ ಮೇಲೆ ಬಂದನು.

ಅರ್ಥ:
ಅದ್ಭುತ: ಆಶ್ಚರ್ಯ; ರವ: ಶಬ್ದ; ವೈಮಾನಿಕ: ದೇವತೆ; ನಡುಗು: ನಡುಕ, ಕಂಪನ; ಗರುವ: ಹಿರಿಯ, ಶ್ರೇಷ್ಠ; ನಿರುತಿ: ನೈಋತ್ಯದಿಕ್ಕಿನ ಒಡೆಯ; ಕೃಶಾನು: ಅಗ್ನಿ, ಬೆಂಕಿ; ಧನ: ಕುಬೇರ; ಮಹೇಶ: ಈಶ್ವರ; ಐತರು: ಬರುವಿಕೆ; ಹೊರವಂಟ: ತೆರಳು; ಅಂಬರ: ಆಗಸ; ಗತಿ: ವೇಗ; ಅಮರೇಂದ್ರ: ಇಂದ್ರ; ಅನುನಯ: ನಯವಾದ ಮಾತುಗಳಿಂದ ಮನವೊಲಿಸುವುದು;

ಪದವಿಂಗಡಣೆ:
ಏನಿದ್+ಅದ್ಭುತ +ರವವ್+ಎನುತ +ವೈ
ಮಾನಿಕರು+ ನಡನಡುಗಿದರು +ಗ
ರ್ವ+ಅನುನಯ+ಗತವಾಯ್ತಲೇ +ಸುರಪುರದ+ ಗರುವರಿಗೆ
ಆ +ನಿರುತಿ +ಯಮ +ವರುಣ +ವಾಯು +ಕೃ
ಶಾನು +ಧನದ +ಮಹೇಶರ್+ಐತರಲ್
ಆನೆಯಲಿ +ಹೊರವಂಟನ್+ಅಂಬರ+ಗತಿಯಲ್+ಅಮರೇಂದ್ರ

ಅಚ್ಚರಿ:
(೧) ದಿಕ್ಕುಗಳನ್ನು ಹೇಳುವ ಪರಿ – ನಿರುತಿ, ಯಮ, ವರುಣ, ವಾಯು, ಕೃಶಾನು, ಧನ

ಪದ್ಯ ೪: ಗಾಂಡಿವದ ಟಂಕಾರ ಹೇಗಿತ್ತು?

ಘೋರತರ ಲಯಭೈರವನ ಹುಂ
ಕಾರವೋ ಸಂಹಾರ ಶೃತಿಯೋಂ
ಕಾರವೋ ಕಲ್ಪಾಂತ ತಾಂಡವ ವೇದ ಪಂಡಿತನ
ಆರುಭಟೆಯೋ ಮೇಣ್ ತ್ರಿವಿಕ್ರಮ
ವೀರಪದಭಿನ್ನಾಬ್ಜಜಾಂಡಕ
ಠೋರರವವೆನೆ ಮೆರೆದುದರ್ಜುನ ಚಾಪಟಂಕಾರ (ಅರಣ್ಯ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಪ್ರಳಯಕಾಲದ ಭೈರವನ ಹೂಂಕಾರವೋ, ಸಂಹಾರವೇದದ ಪ್ರಥಮದಲ್ಲಿ ಬರುವ ಓಂಕಾರವೋ, ಪ್ರಳಯರುದ್ರನ ಆರ್ಭಟವೋ, ತ್ರಿವಿಕ್ರಮನು ತುಳಿಯಲು ಬ್ರಹ್ಮಾಂಡವು ಒಡೆದಾಗ ಬಂದ ಧ್ವನಿಯೋ, ಎಂಬಂತೆ ಅರ್ಜುನನ ಧನುಷ್ಠೇಂಕಾರವು ಮೊಳಗಿತು.

ಅರ್ಥ:
ಘೋರ: ಉಗ್ರವಾದುದು; ಲಯ: ನಾಶ; ಭೈರವ: ಶಿವನ ಒಂದು ಅವತಾರ; ಹುಂಕಾರ: ಹುಂ ಎಂಬ ಶಬ್ದ; ಸಂಹಾರ: ನಾಶ, ಕೊನೆ; ಶೃತಿ: ವೇದ; ಕಲ್ಪಾಂತ: ಯುಗಾಂತ್ಯ; ಪಂಡಿತ: ವಿದ್ವಾಂಸ; ಆರುಭಟ: ಗರ್ಜನೆ; ಮೇಣ್: ಅಥವ; ವೀರ: ಶೂರ; ಪದ: ಚರಣ; ಭಿನ್ನ: ತುಂಡು; ಅಬ್ಜ: ಕಮಲ; ಕಠೋರ: ಉಗ್ರವಾದ; ರವ: ಶಬ್ದ; ಮೆರೆ: ಹೊಳೆ; ಚಾಪ: ಬಿಲ್ಲು; ಟಂಕಾರ: ಬಿಲ್ಲಿನ ಶಬ್ದ;

ಪದವಿಂಗಡಣೆ:
ಘೋರತರ +ಲಯ+ಭೈರವನ +ಹುಂ
ಕಾರವೋ +ಸಂಹಾರ +ಶೃತಿ+ಓಂ
ಕಾರವೋ +ಕಲ್ಪಾಂತ +ತಾಂಡವ+ ವೇದ +ಪಂಡಿತನ
ಆರುಭಟೆಯೋ +ಮೇಣ್ +ತ್ರಿವಿಕ್ರಮ
ವೀರ+ಪದಭಿನ್ನಾಬ್ಜ+ಜಾಂಡ+ಕ
ಠೋರ+ರವವ್+ಎನೆ +ಮೆರೆದುದ್+ಅರ್ಜುನ +ಚಾಪ+ಟಂಕಾರ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಘೋರತರ ಲಯಭೈರವನ ಹುಂಕಾರವೋ, ಸಂಹಾರ ಶೃತಿಯೋಂಕಾರವೋ ಕಲ್ಪಾಂತ ತಾಂಡವ ವೇದ ಪಂಡಿತನ ಆರುಭಟೆಯೋ, ವಿಕ್ರಮ ವೀರಪದಭಿನ್ನಾಬ್ಜಜಾಂಡಕಠೋರರವ

ಪದ್ಯ ೩: ಅರ್ಜುನ ಗಾಂಢೀವ ಹೇಗೆ ಟಂಕರಿಸಿತು?

ಮುನಿಜನಕೆ ಕೈಮುಗಿದು ಯಮನಂ
ದನನ ಚರಣಕ್ಕೆರಗಿ ಶಂಭುವ
ನೆನೆದು ಗವಸಣಿಗೆಯಲಿ ತೆಗೆದನು ಗರುವ ಗಾಂಡಿವವ
ಜನಪಕೇಳೈ ಕೊಪ್ಪಿನಲಿ ಸಿಂ
ಜಿನಿಯ ಸಿಕ್ಕಿದನಳ್ಳಿರಿದು ಮಾ
ರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ (ಅರಣ್ಯ ಪರ್ವ, ೧೪ ಸಂಧಿ, ೩ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನಿಗೂ ಮುನಿಗಳಗೂ ನಮಸ್ಕರಿಸಿ, ಶಿವನನ್ನು ನೆನೆದು, ಮುಸುಕಿನ ಬಟ್ಟೆಯನ್ನು ತೆಗೆದು ಗಾಂಡಿವ ಧನುಸ್ಸನ್ನು ತೆಗೆದು ಗಾಂಡಿವ ಧನುಸ್ಸನ್ನು ತೆಗೆದುಕೊಂಡನು. ಕೊಪ್ಪಿನಲ್ಲಿ ಹೆದೆಯನ್ನು ಸಿಕ್ಕಿಸಿ ಟಂಕಾರವನ್ನು ಮಾಡಲು ದಿಕ್ಕುಗಳು ಮಾರ್ದನಿಸಿದವು.

ಅರ್ಥ:
ಮುನಿ: ಋಷಿ; ಜನ: ಗುಂಪು; ಕೈಮುಗಿ: ನಮಸ್ಕರಿಸು; ನಂದನ: ಮಗ; ಚರಣ: ಪಾದ; ಎರಗು:ಬಾಗು; ಶಂಭು: ಶಂಕರ; ನೆನೆ: ಜ್ಞಾಪಿಸಿಕೋ; ಗವಸಣಿಗೆ: ಮುಸುಕು; ತೆಗೆ: ಹೊರತರು; ಗರುವ: ಹಿರಿಯ, ಶ್ರೇಷ್ಠ; ಜನಪ: ರಾಜ; ಕೇಳು: ಆಲಿಸು; ಕೊಪ್ಪು: ಬಿಲ್ಲಿನ ತುದಿ; ಸಿಂಜಿನಿ: ಬಿಲ್ಲಿನ ಹೆದೆ; ಸಿಕ್ಕು: ತೊಡಕಿಕೊಳ್ಳು; ಅಳ್ಳಿರಿ: ನಡುಗಿಸು; ಮಾರ್ದನಿ: ಮರುಧ್ವನಿ, ಪ್ರತಿಧ್ವನಿ; ದಿಗಂತ: ದಿಕ್ಕು; ಒದರು: ಕಿರುಚು, ಗರ್ಜಿಸು; ಮಹಾ: ಶ್ರೇಷ್ಠ; ಧನು: ಬಿಲ್ಲು;

ಪದವಿಂಗಡಣೆ:
ಮುನಿಜನಕೆ +ಕೈಮುಗಿದು +ಯಮ+ನಂ
ದನನ +ಚರಣಕ್ಕೆರಗಿ+ ಶಂಭುವ
ನೆನೆದು+ ಗವಸಣಿಗೆಯಲಿ +ತೆಗೆದನು +ಗರುವ +ಗಾಂಡಿವವ
ಜನಪಕೇಳೈ+ ಕೊಪ್ಪಿನಲಿ+ ಸಿಂ
ಜಿನಿಯ+ ಸಿಕ್ಕಿದನ್+ಅಳ್ಳಿರಿದು +ಮಾ
ರ್ದನಿ +ದಿಗಂತರವ್+ಒದರಲ್+ಒದರಿಸಿದನು +ಮಹಾಧನುವ

ಅಚ್ಚರಿ:
(೧) ಕೈಮುಗಿ, ಎರಗು – ಸಾಮ್ಯಾರ್ಥ ಪದಗಳು
(೨) ಗಾಂಡೀವದ ಹಿರಿಮೆ – ಕೊಪ್ಪಿನಲಿ ಸಿಂಜಿನಿಯ ಸಿಕ್ಕಿದನಳ್ಳಿರಿದು ಮಾರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ

ಪದ್ಯ ೨: ಮುಂಜಾನೆಯ ಸಮಯದಲ್ಲಿ ಯಾರು ಯಾವ ಕಾರ್ಯದಲ್ಲಿ ತೊಡಗಿದರು?

ಅರಸನುಪ್ಪವಡಿಸಿದನೆದ್ದನು
ವರವೃಕೋದರನರ್ಜುನನ ದೃಗು
ಸರಸಿರುಹವರಳಿದವು ಮಾದ್ರೀಸುತರು ಮೈಮುರಿದು
ಹರಿಯ ನೆನೆದರು ನಿದ್ರೆ ತಿಳಿದುದು
ಪರಿಜನಕೆ ಮುನಿನಿಕರವಿದ್ದುದು
ತರಣಿ ಸಂಧ್ಯಾಸಮಯ ಸತ್ಕೃತಿ ಜಪಸಮಾಧಿಯಲಿ (ಅರಣ್ಯ ಪರ್ವ, ೧೪ ಸಂಧಿ, ೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಸಹದೇವರು ನಿದ್ದೆಯಿಂದ ಎದ್ದು ಹರಿನಾಮ ಸ್ತುತಿ ಮಾದಿದರು. ಬಂಧುಜನರೂ ಸಹ ಎದ್ದರು. ಮುನಿಗಳೂ ಪ್ರಾತಃ ಸಂಧ್ಯಾವಂದನೆ ಮಾಡಿ ಜಪಾದಿಗಳನ್ನು ಮಾಡುತ್ತಿದ್ದರು.

ಅರ್ಥ:
ಅರಸ: ರಾಜ; ಉಪ್ಪವಡಿಸು: ಮಲಗು; ಎದ್ದು: ಮೇಲೇಳು; ವರ: ಶ್ರೇಷ್ಠ; ವೃಕೋದರ: ತೋಳದ ಹೊಟ್ಟೆಯುಳ್ಳವ (ಭೀಮ); ದೃಗು: ಕಣ್ಣು; ಸರಸಿರುಹ:ಕಮಲ; ಅರಳು: ವಿಕಸನವಾಗು; ಮೈ: ತನು; ಹರಿ: ವಿಷ್ಣು; ನೆನೆ: ಜ್ಞಾಪಿಸಿಕೋ; ನಿದ್ರೆ: ಶಯನ; ತಿಳಿ: ಎಚ್ಚರಾಗು, ಲಘುವಾಗಿರುವುದು; ಪರಿಜನ: ಬಂಧುಜನ; ಮುನಿ: ಋಷಿ; ನಿಕರ: ಗುಂಪು; ತರಣಿ: ಸೂರ್ಯ; ಸಂಧ್ಯಾ: ಮುಂಜಾನೆ; ಸಮಯ: ವೇಳೆ, ಕಾಲ; ಕೃತಿ: ಕೆಲಸ, ಕಾರ್ಯ; ಜಪ: ತಪಸ್ಸು; ಸಮಾಧಿ: ಏಕಾಗ್ರತೆ, ತನ್ಮಯತೆ;

ಪದವಿಂಗಡಣೆ:
ಅರಸನ್+ಉಪ್ಪವಡಿಸಿದನ್+ಎದ್ದನು
ವರ+ವೃಕೋದರನ್+ಅರ್ಜುನನ +ದೃಗು
ಸರಸಿರುಹವ್+ಅರಳಿದವು +ಮಾದ್ರೀ+ಸುತರು +ಮೈಮುರಿದು
ಹರಿಯ +ನೆನೆದರು +ನಿದ್ರೆ +ತಿಳಿದುದು
ಪರಿಜನಕೆ+ ಮುನಿ+ನಿಕರವಿದ್ದುದು
ತರಣಿ +ಸಂಧ್ಯಾಸಮಯ +ಸತ್ಕೃತಿ+ ಜಪ+ಸಮಾಧಿಯಲಿ

ಅಚ್ಚರಿ:
(೧) ಕಣ್ತೆರದರು ಎಂದು ಹೇಳಲು – ದೃಗು ಸರಸಿರುಹವರಳಿದವು

ನುಡಿಮುತ್ತುಗಳು: ಅರಣ್ಯ ಪರ್ವ ೧೪ ಸಂಧಿ

  • ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ – ಪದ್ಯ ೧
  • ದೃಗು ಸರಸಿರುಹವರಳಿದವು – ಪದ್ಯ ೨
  • ಕೊಪ್ಪಿನಲಿ ಸಿಂಜಿನಿಯ ಸಿಕ್ಕಿದನಳ್ಳಿರಿದು ಮಾರ್ದನಿ ದಿಗಂತರವೊದರಲೊದರಿಸಿದನು ಮಹಾಧನುವ – ಪದ್ಯ ೩
  • ಘೋರತರ ಲಯಭೈರವನ ಹುಂಕಾರವೋ, ಸಂಹಾರ ಶೃತಿಯೋಂಕಾರವೋ ಕಲ್ಪಾಂತ ತಾಂಡವ ವೇದ ಪಂಡಿತನ ಆರುಭಟೆಯೋ, ವಿಕ್ರಮವೀರಪದಭಿನ್ನಾಬ್ಜಜಾಂಡಕಠೋರರವ – ಪದ್ಯ ೪
  • ಶಿಕ್ಷೆ ರಕ್ಷೆಗೆ ಬಾಣವೊಂದೇಲಕ್ಷ್ಯವಿದು; ನೀನರಿಯದುದಕೆ ವಿಲಕ್ಷ್ಯನಾದೆನು ನಾನೆನುತ ಮುನಿ ನುಡಿದರ್ಜುನಗೆ – ಪದ್ಯ ೧೦
  • ದೇವಮುನಿ ಹಾಯಿದನು ಗಗನದಲಿ – ಪದ್ಯ ೧೨
  • ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ – ಪದ್ಯ ೧೭
  • ತೊಂಡು ಮೊಲನ ತೊಂಡಕು ನವಿಲಿನ ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ – ಪದ್ಯ ೧೮
  • ಗಗನವತುಡುಕುವಾಕುಳಿಕೆ – ಪದ್ಯ ೧೮
  • ಮೃಗವ್ಯದಸೊಗಡಿನಲಿ ಸಿಲುಕಿದ ಮನೋ ವೃತ್ತಿಗಳೊಳುಂಟೆ ವಿವೇಕ ಧರ್ಮ ವಿಚಾರ ವಿಸ್ತಾರ – ಪದ್ಯ ೨೨
  • ತೆಬ್ಬಿದವು ಬೆಳ್ಳಾರವಲೆ ಹರಿದುಬ್ಬಿಹಾಯ್ದರೆ ವೇಡೆಯವರಿಗೆ ಹಬ್ಬವಾಯ್ತೇನೆಂಬೆನಗಣಿತ ಮೃಗನಿಪಾತನವು – ಪದ್ಯ ೨೬
  • ಮುಳುದೊಡಕಿನೊಳು ಕೂದಲೊಂದೇಸಿಲುಕಿನಿಂದವು ಚಮರಿಮೃಗ – ಪದ್ಯ ೨೮
  • ಪವನಜ ಹಿಡಿದು ಬೀಸಿದ ನಾನೆಗಳನವಗಡಿಸಿ ಸಿಂಹವ ಸೀಳಿದನು ಹೊಯ್ದೆತ್ತುವೆಕ್ಕಲನ – ಪದ್ಯ ೨೯
  • ಮುಡುಹು ಸೋಂಕಲಿಕುಲಿದು ಹೆಮ್ಮರನುಡಿದು ಬಿದ್ದವು ಪಾದಘಾತದೊಳಡಿಗಡಿಗೆ ನೆಗ್ಗಿದುದು ನೆಲನುಬ್ಬರದ ಬೊಬ್ಬೆಯಲಿ – ಪದ್ಯ ೩೧
  • ಮೈಗೂಡಿ ಬಿಗಿದುದು ಭುಜಗವಳಯದ ಮಂದರಾದ್ರಿಯೆನೆ – ಪದ್ಯ ೩೩
  • ಪುಟದ ಕಂತುಕದಂತೆ ಫಣಿ ಲಟಕಟಿಸಲೌಕಿತು ಮತ್ತೆ ಗಿಡಗನ ಪುಟದ ಗಿಳಿಯಂದದಲಿ ಗಿರಿಗಿರಿಗುಟ್ಟಿದನು ಭೀಮ – ಪದ್ಯ ೩೪
  • ಹುದುಗಿದಗ್ಗದ ಸತ್ವದುತ್ಸಾಹದ ನಿರೂಢಶ್ವಾಸದಲಿ ಗದಗದಿಪಕಂಠದ ತಳಿತ ಭಂಗದ ತಿರುಗುವಾಲಿಗಳ – ಪದ್ಯ ೩೭
  • ವಿಕಟಮದನಾಗಾಯುತ ತ್ರಾಣಕನ ಸಾಹಸವಡಗಿತೇ – ಪದ್ಯ ೩೮
  • ಇದೇನು ನಿನಗೆ ವಿನೋದವೋ ತ್ರಾಣಾಪಚಯ ವಿಧಿಯೊ – ಪದ್ಯ ೩೯
  • ಮೌಳಿತಲ್ಪದ ತಲೆಯ ಹೊಳಹಿನ ನಾಲಗೆಯ ಚೂರಣದ ಝಡಿತೆಗೆ ಚಲಿಸುವಾಲಿಗಳ – ಪದ್ಯ ೪೨
  • ವಿಖ್ಯಾತರಿಗೆ ಪರಪೀಡೆ ಧರ್ಮವಿನಾಶಕರವೆಂದ – ಪದ್ಯ ೪೫
  • ಪಿತೃಮಾತೃ ವಂಶೋತ್ಕರವಿಶುದ್ಧಸದಾಗ್ನಿ ಹೋತ್ರಾ ಚರಿತವಾಸ್ವಾಧ್ಯಾಯ ಸತ್ಯವಹಿಂಸೆ ಪರಿತೋಷ ವರಗುಣಂಗಳಿವಾವನಲಿ ಗೋಚರಿಸಿತಾತನೆ ವಿಪ್ರನೆಂಬರು – ಪದ್ಯ ೪೯
  • ಸತ್ಯವುಳ್ಳನೆ ವಿಪ್ರನವನೆಂದ – ಪದ್ಯ ೫೧
  • ಲೋಕತ್ರಯವನೊಂದೇ ಸತ್ಯದಿಂದವೆ ಜಯಿಸಬಹುದಾ – ಪದ್ಯ ೫೧
  • ಸತ್ಯವುಳ್ಳರೆ ಶೂದ್ರ ದ್ವಿಜರಿಂದತ್ಯಧಿಕನಾದ್ವಿಜರೊಳಗೆ ವರಸತ್ಯಹೀನನೆ ಹೀನಜಾತಿಗನೆಂದನಾ ಭೂಪ – ಪದ್ಯ ೫೨
  • ನಾರಿಯರ ಕಡೆಗಣ್ಣ ಹೊಯ್ಲಿನಧಾರೆಗಳುಕದನಾವನಾತನೆಧೀರನಾತನೆ ದಿಟ್ಟ – ಪದ್ಯ ೫೪
  • ಕ್ಷಿತಿಗೆ ಲೋಭಿಯೆ ಕಷ್ಟನಾತ್ಮ ನಿರತನೆ ಮುಕ್ತನು ವೇದ ಮಾರ್ಗ ಚ್ಯುತನೆ ಲೋಕದ್ವಯಕೆ ದೂರನು – ಪದ್ಯ ೫೫
  • ಪರಸತಿಗೆ ಮನಮಿಸುಕದವನೇ ಶುಚಿ; ಪರಾರ್ಥವ್ಯಸನಿಯೇ ಸಜ್ಜನನು; ಪಿಸುಣನೇ ಹಗೆ; ಮಿತ್ರದ್ರೋಹಿಯೇ ವಿಷನು – ಪದ್ಯ ೫೭
  • ವಿನುತ ಪರತತ್ತ್ವಜ್ಞನತಿ ಸೇವ್ಯನು; ಸುದುರ್ಲಭನೇ ಜಿತೇಂದ್ರಿಯನು;ಅನುಗುಣನೆ ಸಖ; ಪರರ ಸೈರಿಸದವನೆ ದುಸ್ಸಹನು ಮನುಜರಲಿ; ದುರ್ಮತಿಯಲಾ ದುರ್ಜನರಿಗಾಶ್ರಯವೆಂದು – ಪದ್ಯ ೫೮
  • ವಿಪ್ರಾವಮಾನವೆ ಸಿರಿಗೆ ನಂಜುಕಣಾ – ಪದ್ಯ ೬೦
  • ಮೀಸಲಿನ ಮಾನಿನಿಯರಲಿ ಮನದಾಸೆ ಮನುಜರ ಮುರಿವುದಕೆ ತಾನೈಸಲೇ ದುಷ್ಟಾಂತವೆಂದನು ನಹುಷನರಸಂಗೆ – ಪದ್ಯ ೬೫
  • ವಿಟಬುದ್ಧಿ ಸಿರಿಗೆ ವಿರೋಧಿಯೈ – ಪದ್ಯ ೬೬
  • ಪರರುನ್ನತಿಯ ಬಯಸುವರು ಸಜ್ಜನ – ಪದ್ಯ ೭೦
  • ಅಪಾಯದ ಜಲಧಿಗಳು ಬತ್ತುವುವು ಯದುಕುಲ ತಿಲಕ ಗದುಗಿನ ವೀರನಾರಾಯಣನ ಕರುಣದಲಿ – ಪದ್ಯ ೭೧

ಪದ್ಯ ೧: ಸೂರ್ಯೋದಯವು ಹೇಗೆ ಕಂಡಿತು?

ಕೇಳು ಜನಮೇಜಯ ಧರಿತ್ರೀ
ಪಾಲಪಾಶುಪತಾಸ್ತ್ರವೇದದ
ಪಾಳಿಯುಚ್ಚರಣೆಯಲಿ ತತ್ಪ್ರಣವ ಸ್ವರೂಪವೆನೆ
ಮೇಳವಿಸಿತರುಣಾಂಶು ಪೂರ್ವದಿ
ಶಾಲತಾಂಗಿಯ ಮಂಡನೋಚಿತ
ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ (ಅರಣ್ಯ ಪರ್ವ, ೧೪ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಪಾಶುಪತಾಸ್ತ್ರವೇದದ ಉಚ್ಚಾರಣೆಯ ಮೊದಲು ಬರುವ ಓಂಕಾರವೋ ಎಂಬಂತೆ ಪೂರ್ವ ದಿಕ್ಕಿನಲ್ಲಿ ಅರುಣೋದಯವಾಯಿತು. ಪೂರ್ವದಿಕ್ಕಿನ ವನಿತೆಯ ಮುಂದಲೆಯನ್ನು ಅಲಂಕರಿಸಲು ಸರಿಯಾದ ಮಾಣಿಕ್ಯವೋ ಎಂಬಂತೆ ಉದಯ ರವಿಯ ಬಿಂಬವು ಕಾಣಿಸಿತು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಅಸ್ತ್ರ: ಶಸ್ತ್ರ, ಆಯುಧ; ವೇದ: ಜ್ಞಾನ; ಪಾಳಿ: ಸಾಲು; ಉಚ್ಚರಣೆ: ಹೇಳು; ಪ್ರಣವ: ಓಂಕಾರ; ಸ್ವರೂಪ: ನಿಜವಾದ ರೂಪ; ಮೇಳವಿಸು: ಸೇರು, ಜೊತೆಯಾಗು; ಅರುಣ:ಸೂರ್ಯನ ಸಾರ, ಕೆಂಪುಬಣ್ಣ; ಅಂಶ: ಭಾಗ, ಘಟಕ; ಪೂರ್ವ: ಮೂಡಣ ದಿಕ್ಕು; ದಿಶ: ದಿಕ್ಕು; ಮಂಡನ: ಸಿಂಗರಿಸುವುದು, ಅಲಂಕರಿಸುವುದು; ಉಚಿತ: ಸರಿಯಾದ; ಮೌಳಿ: ಶಿರ; ಮಾಣಿಕ: ಅಮೂಲ್ಯವಾದ ಮಣಿ; ಮೆರೆ: ಹೊಳೆ; ದಿನಮಣಿ: ಸೂರ್ಯ; ಬಿಂಬ: ಕಾಂತಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ+ಪಾಶುಪತಾಸ್ತ್ರ+ವೇದದ
ಪಾಳಿ+ಉಚ್ಚರಣೆಯಲಿ +ತತ್+ಪ್ರಣವ +ಸ್ವರೂಪವೆನೆ
ಮೇಳವಿಸಿತ್+ಅರುಣಾಂಶು +ಪೂರ್ವ+ದಿ
ಶಾಲತಾಂಗಿಯ+ ಮಂಡನೋಚಿತ
ಮೌಳಿಮಾಣಿಕವೆನಲು +ಮೆರೆದುದು +ದಿನಮಣಿಯ +ಬಿಂಬ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಪೂರ್ವದಿಶಾಲತಾಂಗಿಯ ಮಂಡನೋಚಿತ ಮೌಳಿಮಾಣಿಕವೆನಲು ಮೆರೆದುದು ದಿನಮಣಿಯ ಬಿಂಬ