ಪದ್ಯ ೧೫: ದೂತರು ರಾಕ್ಷಸ ರಾಜನಿಗೆ ಏನು ಹೇಳಿದರು?

ಜೀಯ ಬಲೆಗಳ ತೆಗೆಸು ನಡೆ ನಿ
ರ್ದಾಯದಲಿ ನಿಮ್ಮಡಿಯ ಬೇಟೆಗೆ
ರಾಯ ಮೃಗವೈತಂದವಿವೆ ನಗರೋಪಕಂಠದಲಿ
ಹೋಯಿತಸುರರ ಕೈಯ ಹೊಸದಿರು
ಪಾಯ ಪಾಯವಧಾರೆನಲು ಖಳ
ರಾಯಕೇಳುತ ಮೃಗವದಾವುದೆನುತ್ತ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಜೀಯ ಬೇಟೆಗೆ ರಾಜಮೃಗಗಳು ಬಂದು ನಗರದ ಸಮೀಪದಲ್ಲಿವೆ. ನೀನು ತಪ್ಪದೆ ಬಲೆಗಳನ್ನು ತೆಗೆಸು, ಬೇಟೆಗೆ ಹೊರಡು. ಅಸುರರು ಆ ಮೃಗಗಳನ್ನು ಇಕ್ಕಟ್ಟಿನಲ್ಲಿ ಸಿಕ್ಕಿ ಹಾಸಿಸುವ ಕಷ್ಟವೇ ತಪ್ಪಿತು ಎಚ್ಚರಿಕೆ ಎಂದು ಹೇಳಲು, ರಾಕ್ಷಸ ರಾಜನು ಯಾವ ಮೃಗ ಬಂದಿದೆ ಎಂದು ಕೇಳಿದನು.

ಅರ್ಥ:
ಜೀಯ: ಒಡೆಯ; ಬಲೆ: ಜಾಲ, ಬಂಧನ; ತೆಗೆ: ಹೊರತರು; ನಡೆ; ಚಲಿಸು; ನಿರ್ದಾಯದ: ಅಖಂಡ; ನಿಮ್ಮಡಿ: ನಿಮ್ಮ ಪಾದ; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವ ಕ್ರೀಡೆ; ರಾಯ: ರಾಜ; ಮೃಗ: ಪ್ರಾಣಿ; ಐತರು: ಬಂದು ಸೇರು; ನಗರ: ಊರು; ಉಪಕಂಠ: ಹತ್ತಿರ; ಹೋಯಿತು:ಕಳೆದುಕೊಳ್ಳು; ಅಸುರ: ರಾಕ್ಷಸ; ಕೈಯ: ಹಸ್ತ; ಹೊಸೆ: ಮಥಿಸು; ಉಪಾಯ: ಯುಕ್ತಿ; ಪಾಯವಧಾರು: ಎಚ್ಚರಿಕೆ; ಖಳರಾಯ: ದುಷ್ಟರಾಜ; ಕೇಳು: ಆಲಿಸು;ಬ ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಜೀಯ+ ಬಲೆಗಳ+ ತೆಗೆಸು+ ನಡೆ +ನಿ
ರ್ದಾಯದಲಿ +ನಿಮ್ಮಡಿಯ +ಬೇಟೆಗೆ
ರಾಯ +ಮೃಗವ್+ಐತಂದವ್+ಇವೆ +ನಗರೋಪಕಂಠದಲಿ
ಹೋಯಿತ್+ಅಸುರರ+ ಕೈಯ +ಹೊಸದಿರ್
ಉಪಾಯ +ಪಾಯವಧಾರೆನಲು +ಖಳ
ರಾಯ+ಕೇಳುತ +ಮೃಗವದ್+ಆವುದೆನುತ್ತ+ ಬೆಸಗೊಂಡ

ಅಚ್ಚರಿ:
(೧) ಜೀಯ, ರಾಯ – ಸಮನಾರ್ಥಕ ಪದ
(೨) ನ ಕಾರದ ತ್ರಿವಳಿ ಪದ – ನಡೆ ನಿರ್ದಾಯದಲಿ ನಿಮ್ಮಡಿಯ

ಪದ್ಯ ೧೪: ಹಿರಣ್ಯಪುರದ ದೊರೆ ಏಕೆ ಆಶ್ಚರ್ಯಗೊಂಡನು?

ಅರಿಯದಾ ಪಟ್ಟಣವಿದೇನೋ
ಹೊರಗೆ ಗಜಬಜದೆನೆ ಸುಪರ್ವರ
ಕುರುಹುಗಳನರಿದಮರರಿಪುಗಳು ಹರಿದರರಮನೆಗೆ
ಬಿರುನಗೆಯ ಸುಮ್ಮಾನದುಬ್ಬಿನ
ನೆರೆನಗೆಯ ನಯನಾಂಬುಗಳ ಖಳ
ನೆರಗಲತಿ ಸುಮ್ಮಾನವೇನೆಂದರಸ ಬೆಸಗೊಂಡ (ಅರಣ್ಯ ಪರ್ವ, ೧೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಹಿರಣ್ಯನಗರಿಯ ಜನಗಳಿಗೆ ಈ ಗದ್ದಲ ಏಕೆ ಎಂದು ತಿಳಿಯಲಿಲ್ಲ. ರಾಕ್ಷಸ ಭಟರು ಊರ ಹೊರಗೆ ಬಂದು ಇದು ದೇವತೆಗಳ ದಾಳಿಯೆಂದರಿತು ಅರಮನೆಗೆ ಹೋದರು. ಅವರೆಲ್ಲರೂ ಜೋರಾಗಿ ನಗುತ್ತಾ ಆಸ್ಥಾನಕ್ಕೆ ಹೋಗಿ, ಸದ್ದನ್ನು ಕಡಿಮೆ ಮಾಡಿಕೊಂಡು ಕಣ್ಣುಗಳಲ್ಲಿ ನೀರು ತುಂಬಿರಲು, ರಾಜನಿಗೆ ನಮಸ್ಕರಿಸಿದರು. ರಾಜನು ಅವರ ಸ್ಥಿತಿಯನ್ನು ನೋಡಿ ಇದೇಕೆ ಈ ರೀತಿಯಾದ ಸಂತಸ ಎಂದು ಕೇಳಿದನು.

ಅರ್ಥ:
ಅರಿ: ತಿಳಿ; ಪಟ್ಟಣ: ಊರು; ಹೊರಗೆ: ಆಚೆ; ಗಜಬಜ: ಗೊಂದಲ; ಪರ್ವ: ಸಂಧಿ ಕಾಲ, ಸಂಭ್ರಮ; ಕುರುಹು: ಚಿಹ್ನೆ, ಗುರುತು; ಅಮರ: ದೇವತೆ; ರಿಪು: ವೈರಿ; ಅಮರರಿಪು: ದಾನವ; ಹರಿ: ಧಾವಿಸು, ಓಡು; ಅರಮನೆ: ರಾಜರ ಆಲಯ; ಬಿರುನಗೆ: ಜೋರಾದ ನಗು; ಸುಮ್ಮಾನ: ಸಂತೋಷ, ಹಿಗ್ಗು; ಉಬ್ಬು: ಹೆಚ್ಚಳ, ಅಧಿಕ; ನೆರೆನಗೆ:ಜೊತೆಯಲ್ಲಿ ನಗು; ನಯನಾಂಬು: ಕಣ್ಣೀರು; ಖಳ: ದುಷ್ಟ; ಎರಗು: ಬಾಗು; ಅರಸ: ರಾಜ; ಬೆಸ: ಅಪ್ಪಣೆ, ಆದೇಶ, ಕೇಳು;

ಪದವಿಂಗಡಣೆ:
ಅರಿಯದಾ +ಪಟ್ಟಣವ್+ಇದೇನೋ
ಹೊರಗೆ+ ಗಜಬಜದ್+ಎನೆ +ಸುಪರ್ವರ
ಕುರುಹುಗಳನ್+ಅರಿದ್+ಅಮರ+ರಿಪುಗಳು +ಹರಿದರ್+ಅರಮನೆಗೆ
ಬಿರುನಗೆಯ+ ಸುಮ್ಮಾನದ್+ಉಬ್ಬಿನ
ನೆರೆನಗೆಯ +ನಯನಾಂಬುಗಳ+ ಖಳನ್
ಎರಗಲ್+ಅತಿ +ಸುಮ್ಮಾನವ್+ಏನೆಂದ್+ಅರಸ +ಬೆಸಗೊಂಡ

ಅಚ್ಚರಿ:
(೧) ಬಿರುನಗೆ, ನೆರೆನಗೆ – ನಗುವನ್ನು ವಿವರಿಸುವ ಪರಿ

ಪದ್ಯ ೧೩: ದೇವತೆಗಳು ಯಾವ ನಗರಕ್ಕೆ ಮುತ್ತಿಗೆ ಹಾಕಿದರು?

ಆಳು ನಡೆದುದು ಮುಂಗುಡಿಯ ಹರಿ
ಧಾಳಿ ನೂಕಿ ಹಿರಣ್ಯ ನಗರಿಯ
ಮೂಲೆಗೈದಿತು ಹೊಯ್ದರಲ್ಲಿಯ ಬಿನುಗು ಬಿಚ್ಚಟೆಯ
ಸೂಳವಿಸಿದವು ಸನ್ನೆಯಲಿ ನಿ
ಸ್ಸಾಳ ದನುಜ ಪುರೋಪಕಂಠದ
ಕೂಲವತಿಗಳ ತೀರದಲಿ ಬಿಡಿಸಿದೆನು ಪಾಳೆಯವ (ಅರಣ್ಯ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ದೇವತೆಗಳ ಮುಂಭಾಗದಲ್ಲಿದ್ದ ಸೈನಿಕರು ಹಿರಣ್ಯಕ ಪುರದ ಹೊರವಲಯವನ್ನು ಸೇರಿ ಅಲ್ಲಿದ್ದ ದುರ್ಬಲ ದೈತ್ಯರನ್ನೆಲ್ಲಾ ಹೊಡೆದರ್. ಕಹಳೆಗಳ ಧ್ವನಿಯ ಘೋಷದ ನಡುವೆ ಆ ನಗರದ ಪಕ್ಕದ ನದಿಗಳ ತೀರದಲ್ಲಿ ದೇವ ಸೈನ್ಯವು ಬೀಡು ಬಿಟ್ಟಿತು.

ಅರ್ಥ:
ಆಳು: ಸೈನ್ಯ; ನಡೆ: ಚಲಿಸು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಹರಿ: ಕುದುರೆ; ಧಾಳಿ: ಆಕ್ರಮಣ; ನೂಕು: ತಳ್ಳು; ನಗರಿ: ಊರು; ಮೂಲೆ: ಕೊನೆ; ಐದು: ಸೇರು; ಹೊಯ್ದು: ಹೊಡೆ; ಬಿನುಗು: ಅಲ್ಪ; ಬಿಚ್ಚಟೆ: ವಿಸ್ತಾರ; ಸೂಳವಿಸು: ಧ್ವನಿಮಾಡು; ಸನ್ನೆ: ಗುರುತು; ನಿಸ್ಸಾಳ: ಚರ್ಮವಾದ್ಯ; ದನುಜ: ರಾಕ್ಷಸ; ಪುರ: ಊರು; ಪುರೋಪಕಂಠ: ಊರಿನ ಹತ್ತಿರ; ಕೂಲವತಿ: ನದಿ; ತೀರ: ದಡ; ಬಿಡಿಸು: ಕಳಚು, ಸಡಿಲಿಸು; ಪಾಳೆ: ಸೀಮೆ;

ದವಿಂಗಡಣೆ:
ಆಳು+ ನಡೆದುದು +ಮುಂಗುಡಿಯ +ಹರಿ
ಧಾಳಿ +ನೂಕಿ +ಹಿರಣ್ಯ +ನಗರಿಯ
ಮೂಲೆಗೈದಿತು +ಹೊಯ್ದರ್+ಅಲ್ಲಿಯ +ಬಿನುಗು +ಬಿಚ್ಚಟೆಯ
ಸೂಳವಿಸಿದವು+ ಸನ್ನೆಯಲಿ +ನಿ
ಸ್ಸಾಳ +ದನುಜ+ ಪುರೋಪಕಂಠದ
ಕೂಲವತಿಗಳ+ ತೀರದಲಿ+ ಬಿಡಿಸಿದೆನು +ಪಾಳೆಯವ

ಅಚ್ಚರಿ:
(೧) ಪುರೋಪಕಂಠ, ಕೂಲವತಿ, ಹರಿಧಾಳಿ, ಬಿಚ್ಚಟೆ – ಪದಗಳ ಬಳಕೆ

ಪದ್ಯ ೧೨: ರಾಕ್ಷಸರ ಧೈರ್ಯವೇಕೆ ಉಡುಗಿತು?

ಹೊಲಬಿಗರು ಹರಿದರು ಸುರೇಂದ್ರನ
ದಳದ ಮಾನ್ಯರ ಸನ್ನೆಯಲಿ ದಿಗು
ವಳಯದಗಲದಲೊಲೆವ ಲಲಿತಚ್ಛತ್ರಚಮರಗಳ
ಜಲಧಿ ಜಲಧಿಯ ಹಳಚಲಗಿದ
ವ್ವಳಿಪ ವಾದ್ಯ ಧ್ವನಿಯ ಡಾವರ
ಸೆಳೆದುದಸುರರ ಧುರದ ಧೈರ್ಯವನರಸ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ಇಂದ್ರ ಸೈನ್ಯದ ಮುಖಂಡರ ಸನ್ನೆಯಂತೆ ದಾರಿಯನ್ನು ಹುಡುಕುವವರು ಮುಂದಾದರು. ಆ ಸೈನ್ಯದ ಛತ್ರ ಚಾಮರಗಳು ದಿಕ್ತಟವನ್ನೇ ತುಂಬಿದವು. ಸಮುದ್ರ ಸಮುದ್ರದೊಡನೆ ಡಿಕ್ಕಿ ಹೊಡೆದರೆ ಆಗಬಹುದಾದ ಸದ್ದನ್ನು ದೇವ ಸೈನ್ಯದ ವಾದ್ಯ ಘೋಷವು ಮೀರಿಸಿತ್ತು. ಈ ಸನ್ನಾಹವನ್ನು ಕಂಡು ರಾಕ್ಷಸರು ಧೈರ್ಯ ಉಡುಗಿತು.

ಅರ್ಥ:
ಹೊಲಬು: ದಾರಿ, ಪಥ; ಹರಿ: ಚದುರು, ದಾಳಿ ಮಾಡು; ಸುರೇಂದ್ರ: ಇಂದ್ರ; ದಳ: ಸೈನ್ಯ; ಮಾನ್ಯ: ಮನ್ನಣೆ, ಪೂಜ್ಯ; ಸನ್ನೆ: ಗುರುತು; ದಿಗು: ದಿಕ್ಕು; ವಳಯ: ಪರಿಧಿ; ಅಗಲ: ವಿಸ್ತಾರ; ಒಲೆವು: ಪ್ರೀತಿ; ಲಲಿತ: ಚೆಲುವು; ಛತ್ರ: ಕೊಡೆ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಜಲಧಿ: ಸಾಗರ; ಹಳಚು: ತಾಗು, ಬಡಿ; ಅವ್ವಳಿಸು: ಆರ್ಭಟಿಸು; ವಾದ್ಯ: ಸಂಗೀತದ ಸಾಧನ; ಧ್ವನಿ: ರವ, ಶಬ್ದ; ಡಾವರ:ಭಯಂಕರವಾದ; ಸೆಳೆ: ಆಕರ್ಷಿಸು; ಅಸುರ: ರಾಕ್ಷಸ; ಧುರ: ಯುದ್ಧ, ಕಾಳಗ; ಧೈರ್ಯ: ಎದೆಗಾರಿಕೆ, ಕೆಚ್ಚು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೊಲಬಿಗರು+ ಹರಿದರು +ಸುರೇಂದ್ರನ
ದಳದ +ಮಾನ್ಯರ +ಸನ್ನೆಯಲಿ +ದಿಗು
ವಳಯದ್+ಅಗಲದ್+ಒಲೆವ +ಲಲಿತ+ಚ್ಛತ್ರ+ಚಮರಗಳ
ಜಲಧಿ+ ಜಲಧಿಯ+ ಹಳಚಲ್+ಅಗಿದ್
ಅವ್ವಳಿಪ +ವಾದ್ಯ +ಧ್ವನಿಯ +ಡಾವರ
ಸೆಳೆದುದ್+ಅಸುರರ+ ಧುರದ +ಧೈರ್ಯವನ್+ಅರಸ +ಕೇಳೆಂದ

ಅಚ್ಚರಿ:
(೧) ಸುರರ ಸೈನ್ಯದ ವಿಸ್ತಾರ – ದಿಗುವಳಯದಗಲದಲೊಲೆವ ಲಲಿತಚ್ಛತ್ರಚಮರಗಳ

ಪದ್ಯ ೧೧: ಅರ್ಜುನನ ಜೊತೆ ಯಾರು ಬಂದರು?

ಈ ರಥವನೇ ಹೂಡಿಸಿದೆ ನೀ
ಸಾರಥಿಯ ಬೆಸಸಿದೆನುಸುರ ಪರಿ
ವಾರ ನೆರೆದುದನೆಣಿಸಲಳವೇ ಕೋಟಿ ಜಿಹ್ವೆಯಲಿ
ವಾರಣದ ಹಯ ರಥ ಪದಾತಿಯ
ಭಾರಣೆಗೆ ದೆಸೆ ನೆರೆಯದಿಂದ್ರನ
ವೀರ ಭಟರೆನ್ನೊಡನೆ ನೆರೆದುದು ರಾಯ ಕೇಳೆಂದ (ಅರಣ್ಯ ಪರ್ವ, ೧೩ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅಣ್ಣ ಕೇಳು, ಈ ರಥವನ್ನು ಇದೇ ಸಾರಥಿಯಿಂದ ಅಣಿಗೊಳಿಸಿದೆನು, ಎಷ್ಟು ಜನ ದೇವತೆಗಳು ಬಂದರೋ ಏನೋ ತಿಳಿಯದು, ಕೋಟಿ ನಾಲಿಗೆಗಳು ಎಣಿಸಲಾರದಷ್ಟು ಮಂದಿ ಬಂದರು, ಚತುರಂಗ ಸೈನ್ಯಕ್ಕೆ ದಿಕ್ಕುಗಳು ಸಾಲಲಿಲ್ಲ ಇಂದ್ರನ ವೀರಭಟರು ನನ್ನ ಜೊತೆ ಬಂದರು ಎಂದು ಅರ್ಜುನನು ವಿವರಿಸಿದನು.

ಅರ್ಥ:
ರಥ: ಬಂಡಿ; ಹೂಡಿಸು: ಅಣಿಗೊಳಿಸು; ಸಾರಥಿ: ರಥವನ್ನು ಓಡಿಸುವವ; ಬೆಸ: ಕೆಲಸ, ಕಾರ್ಯ; ಸುರ: ದೇವತೆ; ಪರಿವಾರ: ಪರಿಜನ, ಸಂಬಂಧಿಕರು; ನೆರೆ: ಸೇರು, ಜೊತೆಗೂಡು; ಎಣಿಸು: ಲೆಕ್ಕ ಮಾಡು; ಕೋಟಿ: ಲೆಕ್ಕವಿಲ್ಲದಷ್ಟು; ಜಿಹ್ವೆ: ನಾಲಗೆ; ವಾರಣ: ಆನೆ; ಹಯ: ಕುದುರೆ; ಪದಾತಿ: ಕಾಲಾಳು, ಸೈನಿಕರು; ಭಾರಣೆ: ಮಹಿಮೆ, ಗೌರವ; ದೆಸೆ: ದಿಕ್ಕು; ಇಂದ್ರ: ಸುರಪತಿ; ವೀರ: ಶೂರ; ಭಟ: ಸೈನಿಕ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ರಥವನೇ +ಹೂಡಿಸಿದೆನ್+ಈ
ಸಾರಥಿಯ+ ಬೆಸಸಿದೆನು +ಸುರ +ಪರಿ
ವಾರ +ನೆರೆದುದನ್+ಎಣಿಸಲಳವೇ+ ಕೋಟಿ +ಜಿಹ್ವೆಯಲಿ
ವಾರಣದ+ ಹಯ +ರಥ+ ಪದಾತಿಯ
ಭಾರಣೆಗೆ+ ದೆಸೆ+ ನೆರೆಯದ್+ಇಂದ್ರನ
ವೀರ +ಭಟರ್+ಎನ್ನೊಡನೆ +ನೆರೆದುದು +ರಾಯ +ಕೇಳೆಂದ

ಅಚ್ಚರಿ:
(೧) ಪರಿವಾರ, ವಾರಣ – ವಾರ ಪದದ ಬಳಕೆ