ಪದ್ಯ ೪: ಯುಧಿಷ್ಠಿರನು ಯಾರನ್ನು ಕಂಡನು?

ಎನಲು ಬಂದನು ಭೀಮನಂಬುಜ
ವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ
ಬೆನುಗು ತುಂಬಿಯ ಜಾಳಿಗೆಯ ತನಿ
ಮಿನುಗು ಮೋರೆಯ ಕಣ್ಣಕೆಂಪಿನ
ಘನ ಭಯಂಕರ ಭೀಮನಿರವನು ಕಂಡನವನೀಶ (ಅರಣ್ಯ ಪರ್ವ, ೧೨ ಸಂಧಿ, ೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಭೀಮನ ದಾರಿಯನ್ನು ಹಿಡಿದು ನಡೆಯಲು, ಕಮಲವನವೇ ಬಂದಂತೆ, ಭೀಮನು ತಾವರೆಯ ತೆಕ್ಕೆಯನ್ನು ಹೊತ್ತು ಕಮಲ ಸರೋವರವೇ ಬಂದಂತೆ ಬಂದನು, ಕಮಲಗಳಲ್ಲಿ ದುಂಬಿಗಳು ಸುತ್ತಲೂ ಹಾರಿ ಬರುತ್ತಿದ್ದವು, ಮಿನುಗು ಮೋರೆಯ ಕೆಂಗಣ್ಣಿನ ಭಯಂಕರ ಭೀಮನನ್ನು ಯುಧಿಷ್ಠಿರನು ನೋಡಿದನು.

ಅರ್ಥ:
ಅಂಬುಜ: ತಾವರೆ; ಬಂದು: ಆಗಮಿಸು; ಇದಿರು:ಎದುರು; ಕಂಪು: ಸುಗಂಧ; ತನಿ: ವನ: ಕಾಡು; ಸವಿಯಾದುದು; ರಸ: ಸಾರ; ತಾವರೆ: ಕಮಲ; ತೆಕ್ಕೆ: ಗುಂಪು, ಸಮೂಹ; ಕೊಳ: ಸರೋವರ; ತೋರು: ಕಾಣಿಸು; ಜಿನುಗು: ತೊಟ್ಟಿಕ್ಕು; ತುಂಬಿ: ದುಂಬಿ, ಭ್ರಮರ; ಜಾಳಿಗೆ: ಬಲೆ, ಜಾಲ; ಮಿನುಗು: ಹೊಳಪು; ಮೋರೆ: ಮುಖ; ಕಣ್ಣು: ನಯನ; ಕೆಂಪು: ರಕ್ತವರ್ಣ; ಘನ: ಗಟ್ಟಿ, ತೂಕ; ಭಯಂಕರ: ಘೋರವಾದ; ಇರವು: ಇರುವಿಕೆ, ಸ್ಥಿತಿ; ಅವನೀಶ: ರಾಜ; ಕಂಡು: ನೋಡು;

ಪದವಿಂಗಡಣೆ:
ಎನಲು+ ಬಂದನು +ಭೀಮನ್+ಅಂಬುಜ
ವನವ್+ಇದಿರು +ಬಂದಂತೆ +ಕಂಪಿನ
ತನಿ+ರಸದ +ತಾವರೆಯ +ತೆಕ್ಕೆಯ +ಕೊಳನ +ತೋರಿಕೆಯ
ಬೆನುಗು +ತುಂಬಿಯ +ಜಾಳಿಗೆಯ +ತನಿ
ಮಿನುಗು +ಮೋರೆಯ +ಕಣ್ಣ+ಕೆಂಪಿನ
ಘನ +ಭಯಂಕರ +ಭೀಮನ್+ಇರವನು +ಕಂಡನ್+ಅವನೀಶ

ಅಚ್ಚರಿ:
(೧) ಭೀಮನ ವರ್ಣನೆ – ಮಿನುಗು ಮೋರೆಯ ಕಣ್ಣಕೆಂಪಿನ ಘನ ಭಯಂಕರ ಭೀಮ
(೨) ಉಪಮಾನದ ಬಳಕೆ – ಬಂದನು ಭೀಮನಂಬುಜವನವಿದಿರು ಬಂದಂತೆ ಕಂಪಿನ
ತನಿರಸದ ತಾವರೆಯ ತೆಕ್ಕೆಯ ಕೊಳನ ತೋರಿಕೆಯ

ನುಡಿಮುತ್ತುಗಳು: ಅರಣ್ಯ ಪರ್ವ ೧೨ ಸಂಧಿ

  • ಮಿನುಗು ಮೋರೆಯ ಕಣ್ಣಕೆಂಪಿನ ಘನ ಭಯಂಕರ ಭೀಮ – ಪದ್ಯ ೪
  • ತಳಿರಕೈಗಳ ಮೊರೆಯ ಬಾಯ್ಗಳ ಜಲದ ಕಂಗಳ ತಾಪದಿಂದೊಳ ಝಳದಿಯುಗಿವಳ್ಳೆಗಳ ಬಲು ಭಯವಾಂತ ಕೊರಳುಗಳ – ಪದ್ಯ ೮
  • ಘನಸಿಂಹನಾದದ ಸಿಡಿಲ ಶಿಕ್ಷಾಗುರುವೆನಲು ಮೊಳಗಿದನು ಕಲಿಭೀಮ – ಪದ್ಯ ೯
  • ಸೀಳಿನಾಯ್ಗಳ ನೆತ್ತರಿನ ತನಿಗಾಲುವೆಯಲೇ ಬೆಳಸುವೆನು ದಿವಿಜಾಳಿಗಳ ಸಂತೋಷ ಸಸಿಯನೆನುತ್ತ ಗರ್ಜಿಸಿದ – ಪದ್ಯ ೧೦
  • ಬಿಸುಗುದಿಯ ನವರುಧಿರಜಲ ಜಾಳಿಸೆ ನವದ್ವಾರದಲಿ ದೈತ್ಯನ ಕುಸುಕಿರಿದು ತಿವಿತಿವಿದು ಕೊಂದನು ಕಲಿ ಜಟಾಸುರನ – ಪದ್ಯ ೧೧
  • ಸುರೆಂದ್ರನ ಸೆರಗು ಸೋಂಕುವ ಸಲುಗೆಯುಂಟೇ ಮರ್ತ್ಯಜಾತಿಯಲಿ – ಪದ್ಯ ೧೭
  • ಹಿಮದ ಹೊಯ್ಲಿನ ಸರಸಿಜಕೆ ರವಿಯಂತೆ; ಶಿಶಿರದ ಸರಿದಲೆಯ ವನದಲಿ ವಸಂತನ ಬರವಿನಂದದಲಿ – ಪದ್ಯ ೧೯
  • ಸುರಮಾನಿನೀಜನದಂಗವಟ್ಟದ ಪೂರ್ವ ಪರಿಮಳದ ಆನನೇಂದುಗಳಾಭರಣ ಮುಕ್ತಾನುಕೃತ ತಾರಾಮಯೂಖ ವಿತಾನದಲಿ ಹೊಳೆಹೊಳೆದು ಮೆರೆವ ಮಹೇಂದ್ರ ಮಣಿರಥವ – ಪದ್ಯ ೨೦
  • ಬಿಗಿದ ಗವಸಣಿಗೆಯಲಿ ಸೂರ್ಯನನುಗಿವವೋಲ್ – ಪದ್ಯ ೨೪
  • ಶಿವನ ಕಾರುಣಾಯುಧವೆ ಮಸೆದುದು ಸುರೇಂದ್ರ ಸ್ನೇಹ ಸಾಣೆಯಲಿ – ಪದ್ಯ ೨೮
  • ಪಾಶುಪತಶರ ಭುವನದೂರ್ಧ್ವಶ್ವಾಸವತಿ ಕೋವಿದವಲೇ ಚಿತ್ತೈಸಿ ಬಲ್ಲಿರಿ ನಿಮ್ಮಡಿಗಳಾಮ್ನಾಯ ವೀಧಿಯಲಿ – ಪದ್ಯ ೩೦
  • ಪೌರವಾನ್ವಯ ಪಾಲಕನೆಯೆಂದರಸ ಮುಂಡಾಡಿದನು ಫಲುಗುಣನ – ಪದ್ಯ ೩೨
  • ಕರೆದನೇ ಕರುಣವನು ಹರಹರಹೆರೆನೊಸಲ – ಪದ್ಯ ೩೩
  • ದ್ರೌಪದಿಯ ಮೌಳಿಗೆ ಕರುಬಿದವರಿಗೆ ಕಾಣಲಾಯ್ತು ಕೃತಾಂತನೋಲಗವ – ಪದ್ಯ ೩೩

ಪದ್ಯ ೩: ಭೀಮನನ್ನು ಹುಡುಕಲು ಯಾರು ಬಂದರು?

ಆ ಸಕಲ ಪರಿವಾರ ರಾಣೀ
ವಾಸ ಸಹಿತಾರಣ್ಯ ಭವನಾ
ಭ್ಯಾಸಿ ಬಂದನು ಭೀಮಸೇನನ ಗಮನ ಪಥವಿಡಿದು
ಆ ಸುಗಂಧಿಕ ಕಮಲ ಪರಿಮಳ
ಬಾಸಣಿಸಿತೀ ಜನಮನೊವಿ
ನ್ಯಾಸವನು ಇದೆ ಬಂದನನಿಲಜನೆಂದುದಖಿಳ ಜನ (ಅರಣ್ಯ ಪರ್ವ, ೧೨ ಸಂಧಿ, ೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ತನ್ನ ಪರಿವಾರ, ರಾಣೀವಾಸದ ಜನರು ಮತ್ತು ಕಾಡುಜನರ ಜೊತೆ ಭೀಮನು ಹೋದ ದಾರಿಯಲ್ಲಿ ಬರುತ್ತಿರಲು, ಸೌಗಂಧಿಕ ಕಮಲದ ಪರಿಮಳವು ಜನರ ಮನಸ್ಸನ್ನು ಆಹ್ಲಾದಗೊಳಿಸಿತು, ಇದೋ ಭೀಮ ಬಂದನು ಎಂದು ಎಲ್ಲರೂ ಹೇಳಿದರು.

ಅರ್ಥ:
ಸಕಲ: ಎಲ್ಲಾ; ಪರಿವಾರ: ಬಂಧುಜನ; ರಾಣಿ: ಅರಸಿ; ಸಹಿತ: ಜೊತೆ; ಅರಣ್ಯ: ಕಾಡು; ಭವನ: ಆಲಯ; ಅಭ್ಯಾಸಿ: ಕಲಿಯಲು ಶ್ರಮಿಸುವವ; ಬಂದು: ಆಗಮಿಸು; ಗಮನ: ನಡೆಯುವುದು, ನಡಗೆ; ಪಥ: ಮಾರ್ಗ; ಕಮಲ: ತಾವರೆ; ಪರಿಮಳ: ಸುಗಂಧ; ಬಾಸಣಿಸು: ಮುಚ್ಚು; ವಿನ್ಯಾಸ: ರಚನೆ; ಅನಿಲಜ: ವಾಯುಪುತ್ರ;

ಪದವಿಂಗಡಣೆ:
ಆ +ಸಕಲ+ ಪರಿವಾರ+ ರಾಣೀ
ವಾಸ +ಸಹಿತ+ಅರಣ್ಯ +ಭವನ
ಅಭ್ಯಾಸಿ +ಬಂದನು +ಭೀಮಸೇನನ +ಗಮನ +ಪಥವಿಡಿದು
ಆ +ಸುಗಂಧಿಕ+ ಕಮಲ+ ಪರಿಮಳ
ಬಾಸಣಿಸಿತೀ +ಜನಮನೊ+ವಿ
ನ್ಯಾಸವನು +ಇದೆ +ಬಂದನ್+ಅನಿಲಜನ್+ಎಂದುದ್+ಅಖಿಳ +ಜನ

ಪದ್ಯ ೨: ಯುಧಿಷ್ಠಿರನು ಯಾರನ್ನು ನೋಡುವ ತವಕದಲ್ಲಿದ್ದನು?

ಸರಸ ಸೌಗಂಧಿಕದ ಪುಷ್ಪೋ
ತ್ತರಕೆ ಪವನಜ ಹೋದನೆಂಬುದ
ನರಸಿಯಿಂದರಿದವನಿಪನು ಪೂರಾಯದುಗುಡದಲಿ
ನರನ ಹದನೇನೋ ವೃಕೋದರ
ನಿರವು ತಾನೆಂತೆನುತ ಚಿಂತಾ
ಭರಿತನಿದ್ದನು ಭೀಮಸೇನನ ಕಾಂಬ ತವಕದಲಿ (ಅರಣ್ಯ ಪರ್ವ, ೧೨ ಸಂಧಿ, ೨ ಪದ್ಯ)

ತಾತ್ಪರ್ಯ:
ಸೌಗಂಧಿಕ ಪುಷ್ಪವನ್ನು ತರಲೆಂದು ಭೀಮನು ಹೋದುದನ್ನು ತನ್ನ ಹೆಂಡತಿ ದ್ರೌಪದಿಯಿಂದ ಕೇಳಿದ ಬಳಿಕ ಧರ್ಮರಾಯನು ದುಃಖಾತಿಶಯದಿಂದ ಕೂಡಿ, ಅರ್ಜುನನು ಹೇಗಿರುವನೋ, ಭೀಮನು ಎಲ್ಲಿರುವನೋ ಎಂದು ಚಿಂತಿಸುತ್ತಾ ಭೀಮನ ನೋಡುವ ತವಕದಲ್ಲಿದ್ದನು.

ಅರ್ಥ:
ಸರಸ: ಸೊಬಗು; ಪುಷ್ಪ: ಹೂವು; ಪವನಜ: ವಾಯುಪುತ್ರ (ಭೀಮ); ಹೋದ: ತೆರಳು; ಅರಸಿ: ರಾಣಿ; ಅರಿ: ತಿಳಿ; ಅವನಿಪ: ರಾಜ; ಪೂರಾಯ: ಪರಿಪೂರ್ಣ; ದುಗುಡ: ದುಃಖ; ನರ: ಅರ್ಜುನ; ಹದ: ಸ್ಥಿತಿ; ವೃಕೋದರ: ಭೀಮ; ಇರವು: ನೆಲೆ; ಚಿಂತೆ: ಯೋಚನೆ; ಭರಿತ: ತುಂಬಿದ; ಕಾಂಬ: ನೋಡುವ; ತವಕ: ಆತುರ;

ಪದವಿಂಗಡಣೆ:
ಸರಸ +ಸೌಗಂಧಿಕದ +ಪುಷ್ಪೋ
ತ್ತರಕೆ +ಪವನಜ +ಹೋದನೆಂಬುದನ್
ಅರಸಿಯಿಂದ್+ಅರಿದ್+ಅವನಿಪನು +ಪೂರಾಯ+ದುಗುಡದಲಿ
ನರನ +ಹದನೇನೋ +ವೃಕೋದರನ್
ಇರವು +ತಾನೆಂತ್+ಎನುತ +ಚಿಂತಾ
ಭರಿತನಿದ್ದನು +ಭೀಮಸೇನನ +ಕಾಂಬ +ತವಕದಲಿ

ಅಚ್ಚರಿ:
(೧) ನರಸಿಯಿಂದರಿದವನಿಪನು – ಪದದ ರಚನೆ
(೨) ಜೋಡಿ ಅಕ್ಷರ ಪದದ ಬಳಕೆ – ಸರಸ ಸೌಗಂಧಿಕದ; ಪುಷ್ಪೋತ್ತರಕೆ ಪವನಜ;
(೩) ಪವನಜ, ವೃಕೋದರ, ಭೀಮಸೇನ – ಭೀಮನನ್ನು ಕರೆದ ಪರಿ

ಪದ್ಯ ೧: ಯುಧಿಷ್ಠಿರನೇಕೆ ಆಶ್ಚರ್ಯಗೊಂಡನು?

ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
ಕೇಳಿದನಿದೇನೆಂದು ವರವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನಸಂಗತಿಗಳ ಫಲೋತ್ತರವ (ಅರಣ್ಯ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನ ಓಲಗದಲ್ಲಿ ನೂರಕ್ಕೂ ಹೆಚ್ಚು ಉತ್ಪಾತಕಗಳು ಕಾಣಿಸಿಕೊಂಡು ಕಣ್ಣಿಗೆ ಭಯವನ್ನುಂಟುಮಾಡಿ ಅದ್ಭುತವನ್ನು ತೋರ್ಪಡಿಸಿದವು, ಇವುಗಳನ್ನು ನೋಡಿದ ಯುಧಿಷ್ಠಿರನು ಅಲ್ಲಿ ನೆರೆದಿದ್ದ ಬ್ರಾಹ್ಮಣ ಶ್ರೇಷ್ಠರನ್ನು ಕೇಳಲು, ಧೌಮ್ಯಾದಿಗಳು ಆ ಶಕುನಗಳ ಫಲವನ್ನು ತಿಳಿಸಿದರು.

ಅರ್ಥ:
ಕೇಳು: ಆಲಿಸು; ಓಲಗ: ದರ್ಬಾರು; ಉತ್ಪಾತ: ಆಕಸ್ಮಿಕವಾದ ಘಟನೆ; ಶತ: ನೂರು; ಆಲಿ: ಕಣ್ಣು; ಅಂಜಿಸು: ಹೆದರು; ಅತಿ: ಬಹಳ; ರಂಜಿಸು: ಹೊಳೆ, ಪ್ರಕಾಶಿಸು; ಅದ್ಭುತ: ಆಶ್ಚರ್ಯ; ವರ: ಶ್ರೇಷ್ಠ; ವಿಪ್ರಾಳಿ: ಬ್ರಹ್ಮಣರ ಸಮೂಹ; ಆದಿ: ಮುಂತಾದ; ಋಷಿ: ಮುನಿ; ಹೇಳು: ತಿಳಿಸು; ಸಂಗತಿ: ವಿವರ; ಫಲ: ಪ್ರಯೋಜನ; ಉತ್ತರ: ಅಭಿವೃದ್ಧಿ;

ಪದವಿಂಗಡಣೆ:
ಕೇಳು +ಜನಮೇಜಯ +ಯುಧಿಷ್ಠಿರನ್
ಓಲಗದೊಳ್+ಉತ್ಪಾತ +ಶತವ್+ಇವರ್
ಆಲಿಗಳ್+ಅಂಜಿಸಿದುವ್+ಅತಿ+ರಂಜಿಸಿದುವ್+ಅದ್ಭುತವ
ಕೇಳಿದನ್+ಇದೇನೆಂದು +ವರ+ವಿ
ಪ್ರಾಳಿಯನು +ಧೌಮ್ಯಾದಿ +ಋಷಿಗಳು
ಹೇಳಿದರು +ತತ್ ಶಕುನ+ಸಂಗತಿಗಳ +ಫಲೋತ್ತರವ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿಸಿದುದು – ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
(೨) ಕೇಳಿ, ವಿಪ್ರಾಳಿ, ಹೇಳಿ – ಪ್ರಾಸ ಪದಗಳು