ಪದ್ಯ ೫೯: ಭೀಮನು ಹೇಗೆ ಹಿಂದಿರುಗಿದನು?

ತಿರಿದು ತಾವರೆವನವ ಕಕ್ಷದೊ
ಳಿರುಕಿ ಗದೆಯನು ಕೊಂಡು ಸರಸಿಯ
ಹೊರವಳಯದಲಿ ನಿಮ್ದು ಕಾಹಿನ ಯಕ್ಷರಾಕ್ಷಸರ
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೫೯ ಪದ್ಯ)

ತಾತ್ಪರ್ಯ:
ತಾವರೆಯ ವನದಲ್ಲಿ ತನಗಿಷ್ಟ ಬಂದಷ್ಟನ್ನು ತೆಗೆದುಕೊಂಡು ಕಂಕುಳಿನಲ್ಲಿಟ್ಟುಕೊಂಡು, ಗದೆಯನ್ನು ತೆಗೆದುಕೊಂಡು ಸರೋವರದ ಹೊರಕ್ಕೆ ಬಂದು, ಕಾವಲಿದ್ದ ಯಕ್ಷರಾಕ್ಷಸರಿಗೆ ಭೀಮನು, ಇದೋ ನಿಮ್ಮ ಸರೋವರವು ಹಾಗೇ ಇದೆ, ನಮ್ಮನ್ನು ವೃಥಾ ದೂರಬೇಡಿ ಎಂದು ಹೇಳಿ ಹಿತದ ಮಾತನ್ನು ನುಡಿದು ಸಂತೋಷದಿಂದ ಹಿಂದಿರುಗಿ ಹೊರಟನು.

ಅರ್ಥ:
ತಿರಿ: ಸುತ್ತಾಡು, ತಿರುಗಾಡು; ತಾವರೆ: ಕಮಲ; ವನ: ಕಾಡು; ಕಕ್ಷ: ಕಂಕಳು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಗದೆ: ಮುದ್ಗರ; ಸರಸಿ: ಸರೋವರ; ಹೊರವಳಯ: ಆಚೆ, ಹೊರಭಾಗ; ಕಾಹು: ಸಂರಕ್ಷಣೆ; ಒರಲು: ಅರಚು, ಕೂಗಿಕೊಳ್ಳು; ಕರೆ: ಬರೆಮಾಡು; ಕೊಳ: ಸರೋವರ; ದೂರ: ಆಚೆ; ಸರಿ: ಮಳೆ; ಮಾತು: ವಾಣಿ; ನಲವು: ಸಂತೋಷ; ಮರಳು: ಹಿಂದಿರುಗು; ಕಲಿ: ಶೂರ;

ಪದವಿಂಗಡಣೆ:
ತಿರಿದು +ತಾವರೆ+ವನವ +ಕಕ್ಷದೊಳ್
ಇರುಕಿ +ಗದೆಯನು +ಕೊಂಡು +ಸರಸಿಯ
ಹೊರವಳಯದಲಿ+ ನಿಂದು+ ಕಾಹಿನ +ಯಕ್ಷ+ರಾಕ್ಷಸರ
ಒರಲಿ+ ಕರೆದನು+ ನಿಮ್ಮ +ಕೊಳನಿದೆ
ಬರಿದೆ +ದೂರದಿರ್+ಎಮ್ಮನ್+ ಎನುತಾ
ಸರಿನ+ ಮಾತಿನ +ನಲವಿನಲಿ +ಮರಳಿದನು +ಕಲಿ+ಭೀಮ

ಅಚ್ಚರಿ:
(೧) ಭೀಮನು ಹಿಂದಿರುಗಿದ ಪರಿ – ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ

ಪದ್ಯ ೫೮: ಭೀಮನು ಕಮಲಕ್ಕೆ ಹೇಗೆ ಮುತ್ತಿಗೆ ಹಾಕಿದನು?

ಚಾಚಿದನು ಬರಿಕೈಯನಬುಜಕೆ
ಚಾಚುವಿಭಪತಿಯಂತೆ ತುಂಬಿಗ
ಳಾ ಚಡಾಳ ಧ್ವನಿಯ ದಟ್ಟಣೆ ಮಿಗಲು ಚೀರಿದವು
ವೀಚಿ ಮಸಗುವ ಕೊಳನು ಜಿನ ಋಷಿ
ಯಾಚರಣೆಯೊಳು ಕಮಲವನವನು
ಲೋಚಿನಲಿ ಲಾವಣಿಗೆಗೊಂಡನು ಭೀಮನಿಮಿಷದಲಿ (ಅರಣ್ಯ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ಕಮಲ ಪುಷ್ಪಕ್ಕೆ ಸೊಂಡಿಲನ್ನು ಚಾಚುವ ಆನೆಯಂತೆ ಭೀಮನು ಹೂಗಳಿಗೆ ಕೈಚಾಚಿದನು. ಕಮಲದ ಮೇಲಿದ್ದ ದುಂಬಿಗಳು ಜೋರಾಗಿ ಉಚ್ಚಸ್ವರದಲ್ಲಿ ಚಿರಿದವು. ಕೊಳವು ಜಿನಮುನಿಯಂತೆ ಸುಮ್ಮನಿತ್ತು, ಭೀಮನು ತನ್ನ ಕಣ್ಣಿನಲ್ಲೇ ಕ್ಷಣಾರ್ಧದಲ್ಲಿ ಕಮಲಗಳಿಗೆ ಮುತ್ತಿಗೆ ಹಾಕಿದನು.

ಅರ್ಥ:
ಚಾಚು: ಹರಡು; ಬರಿ: ಕೇವಲ; ಕೈ: ಕರ, ಹಸ್ತ; ಅಬುಜ: ಕಮಲ; ಇಭ: ಆನೆ; ಪತಿ: ಒಡೆಯ; ತುಂಬಿ: ದುಂಬಿ, ಭ್ರಮರ; ಚಡಾಳ: ಹೆಚ್ಚಳ, ಆಧಿಕ್ಯ; ಧ್ವನಿ: ಶಬ್ದ; ದಟ್ಟಣೆ: ನಿಬಿಡತೆ, ಸಾಂದ್ರತೆ; ಮಿಗಲು: ಹೆಚ್ಚು; ಚೀರು: ಕೂಗು; ವೀಚಿ: ಅಲೆ; ಮಸಗು: ಹರಡು; ಕೊಳ: ಸರೋವರ; ಜಿನ: ಇಂದ್ರಿಯಗಳನ್ನು ಗೆದ್ದವನು, ಜಿತೇಂದ್ರಿಯ; ಋಷಿ: ಮುನಿ; ಆಚರಣೆ: ಅನುಸರಿಸುವುದು; ಕಮಲ: ತಾವರೆ; ಲೋಚನ: ಕಣ್ಣು; ಲಾವಣಿಗೆ: ಮುತ್ತಿಗೆ, ಆಕರ್ಷಣೆ; ನಿಮಿಷ: ಕೊಂಚ ಸಮಯ;

ಪದವಿಂಗಡಣೆ:
ಚಾಚಿದನು +ಬರಿಕೈಯನ್+ಅಬುಜಕೆ
ಚಾಚುವ್+ಇಭಪತಿಯಂತೆ +ತುಂಬಿಗಳ್
ಆ+ ಚಡಾಳ +ಧ್ವನಿಯ +ದಟ್ಟಣೆ +ಮಿಗಲು +ಚೀರಿದವು
ವೀಚಿ +ಮಸಗುವ +ಕೊಳನು +ಜಿನ ಋಷಿ
ಆಚರಣೆಯೊಳು +ಕಮಲವನ್+ಅವನು
ಲೋಚಿನಲಿ +ಲಾವಣಿಗೆ+ಕೊಂಡನು +ಭೀಮ+ನಿಮಿಷದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಚಾಚಿದನು ಬರಿಕೈಯನಬುಜಕೆಚಾಚುವಿಭಪತಿಯಂತೆ; ವೀಚಿ ಮಸಗುವ ಕೊಳನು ಜಿನ ಋಷಿಯಾಚರಣೆಯೊಳು
(೨) ಭೀಮನು ಕಮಲವನ್ನು ಬಾಚುವ ಪರಿ – ಕಮಲವನವನು ಲೋಚಿನಲಿ ಲಾವಣಿಗೆಗೊಂಡನು ಭೀಮನಿಮಿಷದಲಿ

ಪದ್ಯ ೫೭: ಭೀಮನು ತನ್ನ ಆಯಾಸವನ್ನು ಹೇಗೆ ಕಳೆದನು?

ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕುಳಿಸಿ ತೀರದಲುಗುಳಿ ದಿವ್ಯಾಂಭೋಜ ಪರಿಮಳವ
ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತ
ರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ (ಅರಣ್ಯ ಪರ್ವ, ೧೧ ಸಂಧಿ, ೫೭ ಪದ್ಯ)

ತಾತ್ಪರ್ಯ:
ಸರೋವರದ ಮಧ್ಯೆ ಹೆಜ್ಜೆಯಿಟ್ಟು ನಡೆದು ಭೀಮನು ಕಾಲು, ಮುಖಗಳನ್ನು ತೊಳೆದು, ಕೊಳದ ನೀರಿನಿಂದ ಬಾಯಿಯನ್ನು ಮುಕ್ಕುಳಿಸಿ ದಡದ ಮೇಲುಗುಳಿದನು. ದಿವ್ಯ ಪರಿಮಳದ ಕಮಲ ಗಂಧವನ್ನು ಹೊತ್ತ ತಣ್ಣನೆಯ ನೀರನ್ನು ಕುಡಿದು ಮನಸ್ಸು ಆಪ್ಯಾಯನಗೊಳ್ಳಲು, ಕಮಲಪುಷ್ಪಗಳನ್ನು ಕೈಯಲ್ಲಿ ಹಿಡಿದನು.

ಅರ್ಥ:
ತೊಳೆದು: ಸ್ವಚ್ಛಮಾಡು, ಶುದ್ಧಗೊಳಿಸು; ಚರಣ: ಪಾದ; ಆನನ: ಮುಖ; ನಡುಕೊಳ: ಕೊಳದ ಮಧ್ಯೆ; ಹೊಕ್ಕು: ಸೇರು; ಆಡಿಗಡಿ: ಹೆಜ್ಜೆ ಹೆಜ್ಜೆ; ಮಿಗೆ: ಮತ್ತು, ಅಧಿಕ; ಮುಕ್ಕುಳಿಸು: ಬಾಯಿಂದ ನೀರನ್ನು ಹೊರಹಾಕು; ತೀರ: ದಡ; ಉಗುಳು: ಹೊರಹಾಕು; ದಿವ್ಯ: ಶ್ರೇಷ್ಠ; ಅಂಭೋಜ: ಕಮಲ; ಪರಿಮಳ: ಸುಗಂಧ; ತಳುವು: ನಿಧಾನಿಸು; ತನಿ: ಹಿತಕರವಾದ, ಸವಿಯಾದ; ಶೀತಳ: ತಂಪಾದ; ಜಲ: ನೀರು; ಕೊಂಡು: ಪಡೆದು; ಆಪ್ಯಾಯ: ಸಂತೋಷ, ಹಿತ; ಅಂತರ್ಲಲಿತ: ಅಂತರಂಗದಲ್ಲಿ ಚೆಲುವಾದ; ಹೃದಯ: ಎದೆ, ವಕ್ಷ; ನಿಮಿರ್ದು: ನೆಟ್ಟಗಾದ; ಕಮಲ: ಪದ್ಮ; ಪಂಕ್ತಿ: ಸಾಲು;

ಪದವಿಂಗಡಣೆ:
ತೊಳೆದು +ಚರಣ+ಆನನವ +ನಡು+ಕೊಳ
ದೊಳಗೆ +ಹೊಕ್ಕ್+ಅಡಿಗಡಿಗೆ +ಮಿಗೆ +ಮು
ಕ್ಕುಳಿಸಿ+ ತೀರದಲ್+ಉಗುಳಿ +ದಿವ್ಯಾಂಭೋಜ +ಪರಿಮಳವ
ತಳುವದ್+ಅಲೆ+ ತನಿಹೊರೆದ+ ಶೀತಳ
ಜಲವ +ಕೊಂಡ್+ಆಪ್ಯಾಯಿತ್+ಅಂತ
ರ್ಲಲಿತ +ಹೃದಯನು +ನಿಮಿರ್ದು+ಹಿಡಿದನು+ ಕಮಲ +ಪಂಕ್ತಿಗಳ

ಅಚ್ಚರಿ:
(೧) ಭೀಮನು ಕಮಲವನ್ನು ಹಿಡಿದ ಪರಿ – ತಳುವದಲೆ ತನಿಹೊರೆದ ಶೀತಳ
ಜಲವ ಕೊಂಡಾಪ್ಯಾಯಿತಾಂತರ್ಲಲಿತ ಹೃದಯನು ನಿಮಿರ್ದುಹಿಡಿದನು ಕಮಲ ಪಂಕ್ತಿಗಳ

ಪದ್ಯ ೫೬: ಕುಬೇರನ ಭಟರ ಸ್ಥಿತಿ ಹೇಗಿತ್ತು?

ಗಾಯವಡೆದರು ಕೆಲರು ಕೆಲರಸು
ಬೀಯವದುದು ಬಿಡುದಲೆಯ ಬಲು
ನಾಯಕರು ಸಂತೈಸಿದರು ಕೌಬೇರ ಭವನದಲಿ
ವಾಯುಸುತನೀ ವಿಜಯಸಿರಿಯ ಪ
ಸಾಯಿತಂಗಭಿಷೇಕವೆಂದು ಗ
ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ (ಅರಣ್ಯ ಪರ್ವ, ೧೧ ಸಂಧಿ, ೫೬ ಪದ್ಯ)

ತಾತ್ಪರ್ಯ:
ಕುಬೇರನ ಭಟರಲ್ಲಿ ಕೆಲವರಿಗೆ ಗಾಯವಾಯಿತು. ಕೆಲವರು ಮೃತರಾದರು, ಓಡಿ ಹೋದ ಕೆಲವರು ಕುಬೇರನ ಆಸ್ಥಾನದಲ್ಲಿ ಸೇರಲು ಅಲ್ಲಿ ನೆರೆದಿದ್ದ ಕುಬೇರನ ನಾಯಕರು ಸಮಾಧಾನ ಪಡಿಸಿದರು. ಭೀಮನು ತನ್ನ ವಿಜಯದಲ್ಲಿ ಸಹಚರನಾದ ಆಪ್ತನಿಗೆ ಅಭಿಷೇಕವನ್ನು ಮಾಡುವೆನೆಂದು ಗದೆಯನ್ನು ಸರೋವರದಲ್ಲಿ ತೊಳೆದು ದಡದ ಮೇಲಿಟ್ಟನು.

ಅರ್ಥ:
ಗಾಯ: ಪೆಟ್ಟು; ಕೆಲರು: ಸ್ವಲ್ಪ ಜನ; ಅಸು: ಪ್ರಾಣ; ಬೀಯವಾಗು: ಕಳೆದುಕೊಳ್ಳು; ಬಿಡುದಲೆ: ಬಿರಿಹೋಯ್ದ ಕೂದಲಿನ ತಲೆ; ಬಲು: ಬಹಳ; ನಾಯಕ: ಒಡೆಯ; ಸಂತೈಸು: ಸಮಾಧಾನ ಪಡಿಸು; ಭವನ: ಆಲಯ; ವಾಯುಸುತ: ಭೀಮ; ಸುತ: ಮಗ; ವಿಜಯ: ಗೆಲುವು; ಸಿರಿ: ಐಶ್ವರ್ಯ; ಪಸಾಯ: ಬಹುಮಾನ; ಅಂಗ: ದೇಹದ ಭಾಗ; ಅಭಿಷೇಕ: ಮಜ್ಜನ; ಗದೆ: ಮುದ್ಗರ; ಆಯುಧ: ಶಸ್ತ್ರ; ಅಲುಬು: ಕಾಲುತೊಳೆದ ನೀರು; ಕೊಳ: ಸರೋವರ; ಚಾಚು: ಹರಡು; ತಡಿ: ದಡ, ತಟ;

ಪದವಿಂಗಡಣೆ:
ಗಾಯವಡೆದರು +ಕೆಲರು +ಕೆಲರ್+ಅಸು
ಬೀಯವದುದು +ಬಿಡುದಲೆಯ +ಬಲು
ನಾಯಕರು +ಸಂತೈಸಿದರು+ ಕೌಬೇರ+ ಭವನದಲಿ
ವಾಯುಸುತನ್+ಈ+ ವಿಜಯ+ಸಿರಿಯ +ಪ
ಸಾಯಿತ್+ಅಂಗ್+ಅಭಿಷೇಕವ್+ಎಂದು +ಗ
ದಾ+ಯುಧವನ್+ಅಲುಬಿದನು +ಕೊಳನಲಿ+ ಚಾಚಿದನು +ತಡಿಗೆ

ಅಚ್ಚರಿ:
(೧) ವಿಜಯವನ್ನು ಆಚರಿಸುವ ಪರಿ – ವಾಯುಸುತನೀ ವಿಜಯಸಿರಿಯ ಪಸಾಯಿತಂಗಭಿಷೇಕವೆಂದು

ಪದ್ಯ ೫೫: ಯಕ್ಷಸೈನಿಕರು ಏನೆಂದು ಚಿಂತಿಸಿದರು?

ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನು ಹೇಳುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಚಿಂತಿಸಿತು ಭಟನಿಕರ (ಅರಣ್ಯ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಕ್ಷಸರು ಓಡಿದರು, ಯಕ್ಷರು ಬಿಲ್ಲುಗಳನ್ನು ಬಿಸಾಡಿದರು, ಗುಹ್ಯಕರು ನಿಂತಲ್ಲಿ ನಿಲ್ಲಲಿಲ್ಲ, ಕಿನ್ನರರ ಪಾಡನ್ನು ನಾನೇನು ಹೇಳಲಿ, ಇವನಾರೋ ನಮ್ಮನ್ನು ಜಯಿಸಿದ, ಖಂಡಿತವಾಗಿ ಇವನು ಮನುಷ್ಯನಲ್ಲ, ನಮಗೆ ಇಂತಹ ಭಯ ಅಪಮಾನಗಳು ವಿಧಿವಶದಿಂದಾದವು ಭಾಪುರೆ ವಿಧಿ ಎಂದು ಯಕ್ಷ ಯೋಧರು ಚಿಂತಿಸಿದರು.

ಅರ್ಥ:
ಚೆಲ್ಲು: ಹರಡು; ರಕ್ಕಸ: ರಾಕ್ಷಸ; ಯಕ್ಷ: ದೇವತೆಗಳ ಒಂದು ಗುಂಪು; ಬಿಲ್ಲು: ಚಾಪ; ಬಿಸುಟು: ಹೊರಹಾಕು; ಗುಹ್ಯಕ: ಯಕ್ಷ; ನಿಲ್ಲು: ಸ್ಥಿರವಾಗು; ಕಿನ್ನರ: ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಗೆಲುವು: ಜಯ; ಲೇಸು: ಒಳಿತು; ಮಾನವ: ನರ; ಭಂಗ: ಮುರಿ, ತುಂಡು; ಭಯ: ಭೀತಿ; ರಸ: ಸಾರ; ಭಾಪುರೆ: ಭಲೆ; ವಿಧಿ: ಸೃಷ್ಟಿಕರ್ತ, ಬ್ರಹ್ಮ; ಚಿಂತಿಸು: ಯೋಚಿಸು; ಭಟ: ಸೈನ್ಯ; ನಿಕರ: ಗುಂಪು;

ಪದವಿಂಗಡಣೆ:
ಚೆಲ್ಲಿದರು +ರಕ್ಕಸರು +ಯಕ್ಷರು
ಬಿಲ್ಲ +ಬಿಸುಟರು +ಗುಹ್ಯಕರು +ನಿಂ
ದಲ್ಲಿ +ನಿಲ್ಲರು +ಕಿನ್ನರರನ್+ಇನ್ನೇನು +ಹೇಳುವೆನು
ಗೆಲ್ಲವಿದು +ಲೇಸಾಯ್ತು +ಮಾನವ
ನಲ್ಲ +ನಮಗೀ +ಭಂಗ +ಭಯರಸ
ವೆಲ್ಲಿ +ಭಾಪುರೆ+ ವಿಧಿಯೆನುತ +ಚಿಂತಿಸಿತು +ಭಟನಿಕರ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭಂಗ ಭಯರಸವೆಲ್ಲಿ ಭಾಪುರೆ

ಪದ್ಯ ೫೪: ಭೀಮನ ಗದ್ದಲಕ್ಕೆ ಪಕ್ಷಿಗಳೇನು ಮಾಡಿದವು?

ಹಾರಿದವು ಹಂಸೆಗಳು ತುದಿಮರ
ಸೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳ್ದವು ಜಕ್ಕವಕ್ಕಿಗಳು
ಚೀರಿದವು ಕೊಳರ್ವಕ್ಕಿ ದಳದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ (ಅರಣ್ಯ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕೋಲಾಹಲಕ್ಕೆ ಹಂಸಗಳು ಹಾರಿ ಹೋದವು. ನವಿಲುಗಳು ಮರದ ತುದಿಗಳನ್ನು ಏರಿದವು. ಚಕ್ರವಾಕ ಪಕ್ಷಿಗಳು ಕೊಕ್ಕುಗಳನ್ನು ನೀರಲ್ಲಿ ಮೂರಿ ಮುಳುಗಿ ಏಳುತ್ತಿದ್ದವು. ಸರೋವರದ ಪಕ್ಷಿಗಳು ಚೀರಿದವು. ತಾವರೆಯೆಲೆಗಳ ಮರೆಯಲ್ಲಿ ದುಂಬಿಗಳು ಅಡಗಿದವು.

ಅರ್ಥ:
ಹಾರು: ಲಂಘಿಸು; ಹಂಸ: ಮರಾಲ; ತುದಿ: ಅಗ್ರಭಾಗ; ಮರ: ತರು; ಸೇರು: ತಲುಪು, ಮುಟ್ಟು; ನವಿಲು: ಮಯೂರ, ಶಿಖಿ; ತುಂಡ: ಮುಖ, ಆನನ; ಊರು: ನೆಲೆಸು; ನೀರು: ಜಲ; ಮುಳುಗು: ನೀರಿನಲ್ಲಿ ಮೀಯು; ಮರಳು: ಹಿಂದಿರುಗು; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಚೀರು: ಜೋರಾಗಿ ಕೂಗು; ಕೊಳ: ಹೊಂಡ, ಸರೋವರ; ದಳ: ಗುಂಪು; ಜಾರು: ಕೆಳಗೆ ಬೀಳು; ತಾವರೆ: ಕಮಲ; ಎಲೆ: ಪರ್ಣ; ಮರೆ: ಗುಟ್ಟು, ರಹಸ್ಯ; ಆರಡಿ: ಆರು ಕಾಲುಗಳುಳ್ಳ ಕೀಟ, ದುಂಬಿ; ಅಡಗು: ಬಚ್ಚಿಟ್ಟುಕೊಳ್ಳು; ಕೋಳಾಹಲ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಹಾರಿದವು +ಹಂಸೆಗಳು +ತುದಿಮರ
ಸೇರಿದವು +ನವಿಲುಗಳು +ತುಂಡವನ್
ಊರಿ+ ನೀರೊಳು +ಮುಳುಗಿ +ಮರಳ್ದವು+ ಜಕ್ಕವಕ್ಕಿಗಳು
ಚೀರಿದವು +ಕೊಳರ್ವಕ್ಕಿ+ ದಳದಲಿ
ಜಾರಿ +ತಾವರೆ+ಎಲೆಯ +ಮರೆಗಳಲ್
ಆರಡಿಗಳ್+ಅಡಗಿದವು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ದುಂಬಿಗಳನ್ನು ಚಿತ್ರಿಸಿದ ಪರಿ – ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು