ಪದ್ಯ ೨೭: ಹನುಮನು ತನ್ನ ಪರಿಚಯವನ್ನು ಹೇಗೆ ಮಾಡಿಕೊಂಡನು?

ನಾವು ಹಿಂದಣ ಯುಗದ ರಾಘವ
ದೇವನೋಲೆಯಕಾರರಾ ಸು
ಗ್ರೀವ ಮಿತ್ರರು ಪವನನಿಂದಂಜನೆಗೆ ಜನಿಸಿದೆವು
ನಾವು ನಿಮ್ಮೊಡ ಹುಟ್ಟಿದರು ಸಂ
ಭಾವಿಸಿತು ನಿಮ್ಮಿಷ್ಟವೆನೆ ನಗು
ತಾ ವೃಕೋದರನೆರಗಿದನು ಕಲಿಹನುಮನಂಘ್ರಿಯಲಿ (ಅರಣ್ಯ ಪರ್ವ, ೧೧ ಸಂಧಿ, ೨೭ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನಿಗೆ ತನ್ನ ಪರಿಚಯವನ್ನು ನೀಡುತ್ತಾ, ನಾವು ತ್ರೇತಾಯುಗದಲ್ಲಿ ಅವತರಿಸಿದ ರಾಮನ ಸೇವಕ, ವಾನರ ರಾಜನಾದ ಸುಗ್ರೀವನ ಮಿತ್ರ. ವಾಯುವಿನಿಂದ ಅಂಜನೆಯಲ್ಲಿ ಜನಿಸಿದವ, ನಿನಗೆ ನಾನು ಅಣ್ಣ, ನಿನ್ನ ಇಷ್ಟವು ನೆರವೇರುತ್ತದೆ ಎಂದು ಹೇಳಲು ಅತೀವ ಸಂತಸಗೊಂಡ ಭೀಮನು ಹನುಮನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಹಿಂದಣ: ಹಿಂದಿನ, ಪೂರ್ವ; ಯುಗ: ಸಮಯದ ಗಣನೆಯ ಪ್ರಕಾರ; ರಾಘವದೇವ: ರಾಮ; ಓಲೆಯಕಾರ: ಸೇವಕ; ಮಿತ್ರ: ಸ್ನೇಹಿತ; ಜನಿಸು: ಹುಟ್ಟು; ಸಂಭಾವಿಸು: ಉಂಟಾಗು; ಇಷ್ಟ: ಆಸೆ; ವೃಕೋದರ: ತೋಳದ ಹೊಟ್ಟೆಯುಳ್ಳವ (ಭೀಮ); ಕಲಿ: ಶೂರ; ಅಂಘ್ರಿ: ಪಾದ;

ಪದವಿಂಗಡಣೆ:
ನಾವು +ಹಿಂದಣ+ ಯುಗದ +ರಾಘವ
ದೇವನ್+ಓಲೆಯಕಾರರ್+ಆ+ ಸು
ಗ್ರೀವ +ಮಿತ್ರರು +ಪವನನಿಂದ್+ಅಂಜನೆಗೆ +ಜನಿಸಿದೆವು
ನಾವು +ನಿಮ್ಮೊಡ +ಹುಟ್ಟಿದರು +ಸಂ
ಭಾವಿಸಿತು+ ನಿಮ್ಮಿಷ್ಟವೆನೆ+ ನಗುತ
ಆ+ ವೃಕೋದರನ್+ಎರಗಿದನು +ಕಲಿ+ಹನುಮನ್+ಅಂಘ್ರಿಯಲಿ

ಅಚ್ಚರಿ:
(೧) ರಾಮನ ಭಂಟನೆಂದು ಹೇಳುವ ಪರಿ – ನಾವು ಹಿಂದಣ ಯುಗದ ರಾಘವದೇವನೋಲೆಯಕಾರರ್

ಪದ್ಯ ೨೬: ಭೀಮನು ಹನುಮನಿಗೇಕೆ ನಮಸ್ಕರಿಸಿದ?

ಬಳಿಕ ಸೌಗಂಧಿಕದ ಪವನನ
ಬಳಿವಿಡಿದು ನಾ ಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜದರ್ಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ನಿನ್ನನು
ತಿಳುಹಬೇಕು ಮಹಾತ್ಮ ಕಪಿ ನೀನೆನುತ ಕೈಮುಗಿದ (ಅರಣ್ಯ ಪರ್ವ, ೧೧ ಸಂಧಿ, ೨೬ ಪದ್ಯ)

ತಾತ್ಪರ್ಯ:
ಭೀಮನು ತನ್ನ ಪರಿಚಯವನ್ನು ಮುಂದುವರಿಸುತ್ತಾ, ಈ ಸಹಸ್ರದಳ ಪದ್ಮದ ಸುಗಂಧವು ಗಾಳಿಯೊಡನೆ ಕೂಡಿ ನಮ್ಮಬಳಿ ಬರಲು, ನಮ್ಮ ಪತ್ನಿ ದ್ರೌಪದಿ ಇದನ್ನು ಆಘ್ರಣಿಸಿ ಮೋಹಿತಳಾಗಿ ಇದನ್ನು ನೋಡಲು ಬಯಸಿದಳು. ಆ ಸುಗಂಧದ ಗಾಳಿಯ ಜಾಡಿನಲ್ಲಿ ನಾನು ಬಂದಿದ್ದೇನೆ. ಇದು ನನ್ನ ವಿಚಾರ. ಎಲೈ ಮಹಾ ಪರಾಕ್ರಮಶಾಲಿಯಾದ ಮಹಾತ್ಮನಾದ ಕಪಿಯೇ, ನೀವು ಯಾರೆಂದು ತಿಳಿಸಿ ಎಂದು ಭೀಮನು ನಮಸ್ಕರಿಸುತ್ತಾ ಹನುಮನನ್ನು ಕೇಳಿದನು.

ಅರ್ಥ:
ಬಳಿಕ: ನಂತರ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪವನ: ಗಾಳಿ, ವಾಯು; ಬಳಿ: ಹತ್ತಿರ; ಹಿಡಿ: ಗ್ರಹಿಸು; ಬಂದೆ: ಆಗಮಿಸು; ಲಲನೆ: ಹೆಣ್ಣು, ಸ್ತ್ರೀ; ಕಾಮಿಸು: ಇಚ್ಛಿಸು; ಸಹಸ್ರ: ಸಾವಿರ; ದಳ: ಎಸಳು; ಅಬ್ಜ: ತಾವರೆ; ದರ್ಶನ: ನೋಟ; ತಿಳಿ: ಅರಿ; ವೃತ್ತಾಂತ: ವಾರ್ತೆ; ಅಸ್ಖಲಿತ: ಚಲನೆಯಿಲ್ಲದ; ಬಲ: ಶಕ್ತಿ; ತಿಳುಹ: ಅರಿತುಕೊಳ್ಳು; ಮಹಾತ್ಮ: ಶ್ರೇಷ್ಠ; ಕಪಿ: ಮಂಗ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಬಳಿಕ +ಸೌಗಂಧಿಕದ +ಪವನನ
ಬಳಿವಿಡಿದು +ನಾ +ಬಂದೆನ್+ಎಮ್ಮಯ
ಲಲನೆ +ಕಾಮಿಸಿದಳು +ಸಹಸ್ರ+ದಳ+ಅಬ್ಜ+ದರ್ಶನವ
ತಿಳಿಯಲಿದು +ವೃತ್ತಾಂತ +ನೀನ್
ಅಸ್ಖಲಿತ +ಬಲ+ ನೀನಾರು+ ನಿನ್ನನು
ತಿಳುಹಬೇಕು +ಮಹಾತ್ಮ +ಕಪಿ+ ನೀನ್+ಎನುತ +ಕೈಮುಗಿದ

ಅಚ್ಚರಿ:
(೧) ಭೀಮನು ನಡೆದು ಬಂದ ಪರಿ – ಸೌಗಂಧಿಕದ ಪವನನ ಬಳಿವಿಡಿದು ನಾ ಬಂದೆನ್

ಪದ್ಯ ೨೫: ಭೀಮನು ತನ್ನ ಪರಿಚಯವನ್ನು ಹೇಗೆ ಮಾಡಿಕೊಂಡನು?

ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ
ತನುಜರಾವು ಯುಧಿಷ್ಠಿರಾರ್ಜುನ ಭೀಮಯಮಳರಲೆ
ಬನಕೆ ಬಂದೆವು ನಮ್ಮ ದಾಯಾ
ದ್ಯನ ವಿಕಾರದ್ಯೂತಕೇಳೀ
ಜನಿತ ಕಿಲ್ಭಿಷದಿಂದ ರಾಜ್ಯಭ್ರಂಶವಾಯ್ತೆಂದ (ಅರಣ್ಯ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಾವು ಮನುಷ್ಯರು, ಚಂದ್ರವಂಶದಲ್ಲಿ ಶ್ರೇಷ್ಠನಾದ ಪಾಂಡು ಮಹಾರಾಜನಿಗೆ ನಾವು ಜನಿಸಿದೆವು. ನಾವು ಐವರು ಅವನ ಮಕ್ಕಳು, ಯುಧಿಷ್ಠಿರ, ಅರ್ಜುನ, ಭೀಮ ಮತ್ತು ನಕುಲ ಸಹದೇವರು. ನಮ್ಮ ದಾಯಾದನ ಕಪಟ ದ್ಯೂತಕ್ಕೆ ಬಲಿಯಾಗಿ ಆ ಕೇಡಿನಿಂದ ನಾವು ರಾಜ್ಯವನ್ನು ಕಳೆದುಕೊಂಡು ಕಾಡಿಗೆ ಬಂದೆವು ಎಂದು ಭೀಮನು ಹೇಳಿದನು.

ಅರ್ಥ:
ಮನುಜ: ನರ; ಸೋಮ: ಚಂದ್ರ; ಕುಲ: ವಂಶ; ಜನಿಸು: ಹುಟ್ಟು; ವರ: ಶ್ರೇಷ್ಠ; ತನುಜ: ಮಕ್ಕಳು; ಯಮಳ: ಅಶ್ವಿನಿ ದೇವತೆಗಳು; ಬನ: ಕಾಡು; ಬಂದೆವು: ಆಗಮಿಸು; ದಾಯಾದಿ: ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳು; ವಿಕಾರ: ಮನಸ್ಸಿನ ವಿಕೃತಿ; ದ್ಯೂತ: ಪಗಡೆ; ಕೇಳಿ: ಕ್ರೀಡೆ, ವಿನೋದ; ಜನಿತ: ಹುಟ್ಟಿದ; ಕಿಲ್ಬಿಷ: ಪಾಪ;ರಾಜ್ಯಭ್ರಂಶ: ರಾಜ್ಯವನ್ನು ಕಳೆದುಕೊಂಡು;

ಪದವಿಂಗಡಣೆ:
ಮನುಜರಾವ್ +ಸೋಮಾಭಿ+ಕುಲದಲಿ
ಜನಿಸಿದನು +ವರ +ಪಾಂಡುವ್+ಆತನ
ತನುಜರಾವು+ ಯುಧಿಷ್ಠಿರ+ಅರ್ಜುನ +ಭೀಮ+ಯಮಳರಲೆ
ಬನಕೆ+ ಬಂದೆವು +ನಮ್ಮ +ದಾಯಾ
ದ್ಯನ +ವಿಕಾರ+ದ್ಯೂತ+ಕೇಳೀ
ಜನಿತ+ ಕಿಲ್ಭಿಷದಿಂದ +ರಾಜ್ಯಭ್ರಂಶವಾಯ್ತೆಂದ

ಅಚ್ಚರಿ:
(೧) ಭೀಮನು ತನ್ನ ಪರಿಚಯವನ್ನು ಮಾಡಿದ ಪರಿ – ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ ತನುಜರಾವು

ಪದ್ಯ ೨೪: ಹನುಮನು ಭೀಮನಿಗೆ ಯಾವ ಪ್ರಶ್ನೆ ಕೇಳಿದನು?

ನಾವು ವಾನರರಟವಿಯಲಿ ಫಲ
ಜೀವಿಗಳು ನಿಸ್ಸತ್ವರಿಲ್ಲಿಯ
ಠಾವ ಬಿಡಲನ್ಯತ್ರಗಮನತ್ರಾಣವಿಲ್ಲೆಮಗೆ
ನೀವು ದಿಟವಾರೈ ಮಹಾ ಸಂ
ಭಾವಿತರು ಸುರನರ ಭುಜಂಗರ
ಲಾವಕುಲ ನಿಮಗೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಭೀಮನ ಪ್ರಶ್ನೆಗೆ ಹನುಮನು ಉತ್ತರಿಸುತ್ತಾ, ನಾವು ವಾನರ ಕುಲಕ್ಕೆ ಸೇರಿದವರು. ಕಾಡಿನಲ್ಲಿ ಹಣ್ಣು ತಿಂದು ಜೀವಿಸುವವರು. ನಮಗೆ ಶಕ್ತಿಯಿಲ್ಲ, ಈ ಜಾಗವನ್ನು ಬಿಟ್ಟು ಬೇರೆಡೆಗೆ ಹೋಗೋಣವೆಂದರೆ ನಮ್ಮಲ್ಲಿ ತ್ರಾಣವಿಲ್ಲ. ನಿಜ, ನೀವಾರು? ಮಹಾಗೌರವಶಾಲಿಗಳಂತಿರುವಿರಿ, ದೇವತೆಗಳೋ, ಮನುಷ್ಯರೋ, ಸರ್ಪಗಳೋ, ನೀವು ಯಾವ ಕುಲಕ್ಕೆ ಸೇರಿದವರು ಎಂದು ಹನುಮನು ಪ್ರಶ್ನಿಸಿದನು.

ಅರ್ಥ:
ವಾನರ: ಮಂಗ, ಕಪಿ; ಅಟವಿ: ಕಾದು; ಫಲ: ಹಣ್ಣು; ಜೀವಿ: ಪ್ರಾಣಿ; ಸತ್ವ: ಶಕ್ತಿ; ಠಾವು: ಸ್ಥಳ, ಜಾಗ; ಬಿಡಲು: ತೊರೆ; ಅನ್ಯ: ಬೇರೆ; ಗಮನ: ನಡೆ, ಚಲಿಸು; ತ್ರಾಣ: ಶಕ್ತಿ; ದಿಟ: ಸತ್ಯ; ಸಂಭಾವಿತ: ಯೋಗ್ಯ, ಸಭ್ಯ; ಸುರ: ದೇವತೆ; ನರ: ಮನುಷ್ಯ; ಭುಜಂಗ: ಸರ್ಪ; ಕುಲ: ವಂಶ; ನುಡಿಸು: ಮಾತನಾಡಿಸು;

ಪದವಿಂಗಡಣೆ:
ನಾವು +ವಾನರರ್+ಅಟವಿಯಲಿ +ಫಲ
ಜೀವಿಗಳು +ನಿಸ್ಸತ್ವರ್+ಇಲ್ಲಿಯ
ಠಾವ +ಬಿಡಲ್+ಅನ್ಯತ್ರ+ಗಮನ+ತ್ರಾಣವ್+ಇಲ್ಲೆಮಗೆ
ನೀವು +ದಿಟವಾರೈ +ಮಹಾ +ಸಂ
ಭಾವಿತರು +ಸುರ+ನರ+ ಭುಜಂಗರಲ್
ಆವಕುಲ+ ನಿಮಗೆಂದು+ ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಮೂರು ಲೋಕದಲ್ಲಿ ನೀವ್ಯಾರು ಎಂದು ಕೇಳುವ ಪರಿ – ನೀವು ದಿಟವಾರೈ ಮಹಾ ಸಂ
ಭಾವಿತರು ಸುರನರ ಭುಜಂಗರಲಾವಕುಲ

ಪದ್ಯ ೨೩: ಭೀಮನು ಹನುಮನನ್ನು ಏನು ಕೇಳಿದ?

ಭೀಮ ಗಡ ತಾನೌಕಿ ನಿಲಲು
ದ್ದಾಮ ಬಾಲದ ನಿದ್ರೆ ತಿಳಿಯದು
ರೋಮತತಿ ಮಸೆಗಾಣಿಸಿದುವೆನ್ನುತ್ತಮಾಂಗದಲಿ
ಈ ಮನುಷ್ಯ ಶರೀರವಪಜಯ
ಧಾಮವಲ್ಲಾ ಹರಹರಾ ನಿ
ಸ್ಸೀಮ ಕಪಿ ನೀನಾರೆನುತ ಪವನಜನ ಬೆಸಗೊಂಡ (ಅರಣ್ಯ ಪರ್ವ, ೧೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ನಾನು ಭೀಮನಲ್ಲವೇ? ನಾನು ಸಮಸ್ತ ಶಕ್ತಿಯಿಂದ ನೂಕಿದರೂ ಈ ಬಾಲವೂ ಒಂದು ಎಳ್ಳಿನಷ್ಟು ಅಲ್ಲಾಡಲಿಲ್ಲ, ಬಾಲದ ಮೇಲಿನ ರೋಮಗಳು ನನ್ನ ಅಂಗಾಂಗಳನ್ನು ತೆರೆದು ಬಿಟ್ಟವು. ಅಯ್ಯೋ ಈ ಮನುಷ್ಯ ದೇಹವೆಂಬುದು ಅಪಜಯದ ಆವಾಸಸ್ಥಾನ ಎಂದು ಭೀಮನು ದುಃಖಿಸಿ ಹನುಮಂತನನ್ನು ಅಪಾರ ಬಲಶಾಲಿಯಾದ ಕಪಿಯೇ ನೀನಾರು ಎಂದು ಕೇಳಿದನು.

ಅರ್ಥ:
ಗಡ: ಸಂತೋಷ, ಆಶ್ಚರ್ಯವನ್ನು ಸೂಚಿಸುವ ಪದ; ಔಕು: ಒತ್ತು; ನಿಲು: ನಿಲ್ಲು; ಉದ್ದಾಮ:ಶ್ರೇಷ್ಠ; ಬಾಲ: ಪುಚ್ಛ; ನಿದ್ರೆ: ಶಯನ; ತಿಳಿ: ಅರಿ; ರೋಮ: ಕೂದಲು; ತತಿ: ಗುಂಪು; ಮಸೆ: ಹರಿತ, ಚೂಪು; ಕಾಣಿಸು: ತೋರು; ಅಂಗ: ದೇಹದ ಭಾಗ; ಮನುಷ್ಯ: ನರ; ಶರೀರ: ಒಡಲು; ಅಪಜಯ: ಸೋಲು; ಧಾಮ: ವಾಸಸ್ಥಳ, ಶರೀರ; ಹರಹರಾ: ಶಿವ ಶಿವಾ; ನಿಸ್ಸೀಮ: ಎಲ್ಲೆಯಿಲ್ಲದುದು; ಕಪಿ: ವಾನರ; ಪವನಜ: ವಾಯುಪುತ್ರ (ಭೀಮ); ಬೆಸ: ವಿಚಾರಿಸುವುದು;

ಪದವಿಂಗಡಣೆ:
ಭೀಮ+ ಗಡ+ ತಾನ್+ಔಕಿ+ ನಿಲಲ್
ಉದ್ದಾಮ +ಬಾಲದ +ನಿದ್ರೆ +ತಿಳಿಯದು
ರೋಮತತಿ+ ಮಸೆಗಾಣಿಸಿದುವೆನ್+ಉತ್ತಮಾಂಗದಲಿ
ಈ +ಮನುಷ್ಯ +ಶರೀರವ್+ಅಪಜಯ
ಧಾಮವಲ್ಲಾ+ ಹರಹರಾ+ ನಿ
ಸ್ಸೀಮ +ಕಪಿ+ ನೀನಾರೆನುತ+ ಪವನಜನ +ಬೆಸಗೊಂಡ

ಅಚ್ಚರಿ:
(೧) ಮನುಷ್ಯ ಶರೀರದ ಬಗ್ಗೆ ಭೀಮನು ಹೇಳಿದ ನುಡಿ – ಈ ಮನುಷ್ಯ ಶರೀರವಪಜಯ
ಧಾಮವಲ್ಲಾ

ಪದ್ಯ ೨೨: ಭೀಮನು ಏನೆಂದು ಚಿಂತಿಸಿದನು?

ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಲ
ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ
ಏತರವು ನಮ್ಮುಬ್ಬಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನೀತಗೆಂತುಟೊ ಶಿವ ಶಿವಾಯೆಂದ (ಅರಣ್ಯ ಪರ್ವ, ೧೧ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನುಮನ ಬಾಲವನ್ನು ಸ್ವಲ್ಪವೂ ಆಲ್ಲಾಡಿಸಲಾಗದೆ ಆಶ್ಚರ್ಯಗೊಂಡ ಭೀಮನು, ಇವನಾರಿರಬಹುದು? ಕಪಿರೂಪವನ್ನು ತಾಳಿದ ಇಂದ್ರನೋ, ಶಿವನೋ ಇರಬೇಕು, ಅಥವಾ ತ್ರೇತಾಯುಗದಲ್ಲಿ ರಾವಣನ ಜೊತೆ ಹಾಣಾಹಾಣಿಗಿಳಿದ ಹನುಮಂತನಿರಬಹುದೇ? ನಾವು ಮಹಾಸತ್ವಶಾಲಿಗಳೆಂದು ಮೆರೆಯುತ್ತೇವೆ, ಆದರೆ ಈತನು ನಮ್ಮನ್ನು ಬಾಲದಿಂದಲೇ ಗೆದ್ದನು. ಇವನಿಗೆ ಇನ್ನೆಷ್ಟು ಅತಿಶಯ ಸತ್ವವಿರಬೇಕು ಶಿವ ಶಿವಾ ಎಂದು ಭೀಮನು ಚಿಂತಿಸಿದನು.

ಅರ್ಥ:
ಕಪಿ: ಮಂಗ; ರೂಪ: ಆಕಾರ; ಸುರೇಂದ್ರ: ಇಂದ್ರ; ಭೂತನಾಥ: ಶಿವ; ಮೇಣು: ಅಥವ; ವಿಮಲ: ಶುದ್ಧ; ತ್ರೇತ: ಯುಗದ ಹೆಸರು; ದಶಮುಖ: ಹತ್ತು ಮುಖವುಳ್ಳ (ರಾವಣ); ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಉಬ್ಬಟೆ: ಅತಿಶಯ, ಹಿರಿಮೆ; ಗೆಲುವು: ಜಯ; ಬಾಲ: ಪುಚ್ಛ; ಸತ್ವ: ಶಕ್ತಿ, ಬಲ; ಅತಿಶಯ: ಹೆಚ್ಚು;

ಪದವಿಂಗಡಣೆ:
ಈತ +ಕಪಿ+ರೂಪದ+ ಸುರೇಂದ್ರನೊ
ಭೂತನಾಥನೊ +ಮೇಣು +ವಿಮಲ
ತ್ರೇತೆಯಲಿ +ದಶಮುಖನ+ ಹಾಣಾಹಾಣಿಗಳ+ ಕಪಿಯೊ
ಏತರವು +ನಮ್ಮ್+ಉಬ್ಬಟೆಗಳಿಂದ್
ಈತ +ಗೆಲಿದನು +ಬಾಲದಲಿ +ಸತ್ವ
ಅತಿಶಯವಿನ್+ಈತಗ್+ಎಂತುಟೊ +ಶಿವ+ ಶಿವಾಯೆಂದ

ಅಚ್ಚರಿ:
(೧) ಇಂದ್ರ, ಶಿವನಿಗೆ ಹೋಲಿಸುವ ಪರಿ – ಈತ ಕಪಿರೂಪದ ಸುರೇಂದ್ರನೊ ಭೂತನಾಥನೊ
(೨) ಹನುಮನನ್ನು ಹೋಲಿಸುವ ಪರಿ – ವಿಮಲ ತ್ರೇತೆಯಲಿ ದಶಮುಖನ ಹಾಣಾಹಾಣಿಗಳ ಕಪಿಯೊ