ಪದ್ಯ ೧೬: ಭೀಮನ ಮಾರ್ಗವನ್ನು ಯಾರು ನಿಲ್ಲಿಸಿದರು?

ನಾವು ಮರ್ತ್ಯರು ದೂರದಲಿ ರಾ
ಜೀವಗಂಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ಮನೋರಥದ
ತಾವರೆಯ ತಹೆನೆನುತ ಸಿಂಹಾ
ರಾವದಲಿ ವಿಕ್ರಮಿಸೆ ವಿಗಡನ
ಡಾವರವ ಬಲು ಬಾಲ ತಡೆದುದು ಪವನಜನ ಪಥವ (ಅರಣ್ಯ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಹನುಮನಿಗೆ ಉತ್ತರಿಸುತ್ತಾ, ನಾವು ಮನುಷ್ಯರು, ದೂರದಿಂದ ಬೀಸುವ ಕಮಲಗಂಧದ ಸೊಗಸನ್ನು ನನ್ನ ಪತ್ನಿಯು ಇಷ್ಟಪಟ್ಟಳು. ಆ ಪುಷ್ಪವನ್ನು ನೋಡಬೇಕೆಂದು ಬಯಸಿದಳು. ಅವಳ ಮನೋರಥವನ್ನು ಪೂರೈಸಲು ಹೊರಟಿದ್ದೇನೆ, ಎಂದು ಹೇಳಿ ಮುಂದುವರೆಯಲು ಅವನ ಗಮನವನ್ನು ಹನುಮಂತನ ಬಾಲವು ತಡೆಯಿತು.

ಅರ್ಥ:
ಮರ್ತ್ಯ: ಮನುಷ್ಯ; ದೂರ: ಅಂತರ; ರಾಜೀವ: ಕಮಲ; ಗಂಧ: ಪರಿಮಳ; ಸಮೀರ: ವಾಯು; ಸಂಭಾವನೆ: ಮನ್ನಣೆ, ಅಭಿಪ್ರಾಯ; ಸೊಗಸು: ಚೆಲುವು; ಸತಿ: ಹೆಂಡತಿ; ಮನೋರಥ: ಇಚ್ಛೆ; ತಾವರೆ: ಕಮಲ; ತಹೆ: ತಂದುಕೊಡು; ಸಿಂಹಾರವ: ಗರ್ಜನೆ; ವಿಕ್ರಮ: ಗತಿ, ಗಮನ, ಹೆಜ್ಜೆ; ವಿಗಡ: ಶೌರ್ಯ, ಪರಾಕ್ರಮ; ಡಾವರ: ತೀವ್ರತೆ, ರಭಸ; ಬಲು: ದೊಡ್ಡ; ಬಾಲ: ಪುಚ್ಛ; ತಡೆ: ನಿಲ್ಲಿಸು; ಪವನಜ: ವಾಯುಪುತ್ರ; ಪಥ: ಮಾರ್ಗ;

ಪದವಿಂಗಡಣೆ:
ನಾವು +ಮರ್ತ್ಯರು +ದೂರದಲಿ+ ರಾ
ಜೀವ+ಗಂಧ +ಸಮೀರಣನ +ಸಂ
ಭಾವನೆಗೆ +ಸೊಗಸಿದಳು +ಸತಿ+ಆಕೆಯ +ಮನೋರಥದ
ತಾವರೆಯ +ತಹೆನೆನುತ+ ಸಿಂಹಾ
ರಾವದಲಿ +ವಿಕ್ರಮಿಸೆ+ ವಿಗಡನ
ಡಾವರವ+ ಬಲು+ ಬಾಲ+ ತಡೆದುದು+ ಪವನಜನ +ಪಥವ

ಅಚ್ಚರಿ:
(೧) ರಾಜೀವ, ತಾವರೆ – ಸಮನಾರ್ಥಕ ಪದ
(೨) ಸ ಕಾರದ ಸಾಲು ಪದ – ಸಮೀರಣನ ಸಂಭಾವನೆಗೆ ಸೊಗಸಿದಳು ಸತಿ

ನಿಮ್ಮ ಟಿಪ್ಪಣಿ ಬರೆಯಿರಿ