ಪದ್ಯ ೧೬: ಯುಧಿಷ್ಠಿರನು ಯಾರ ಚರಿತೆಯನ್ನು ತಿಳಿದನು?

ಬಂದನವನಿಪನಾ ಪ್ರಭಾಸದ
ವಂದನೆಗೆ ಬಳಿಕಲ್ಲಿ ಯಾದವ
ವೃಂದ ದರ್ಶನವಾಯ್ತು ಬಹುವಿಧತೀರ್ಥ ತೀರದಲಿ
ಮಿಂದನಾತಗೆ ಗಯನ ಚರಿತವ
ನಂದು ರೋಮಶ ಹೇಳಿದನು ನಲ
ವಿಂದ ಶರ್ಯಾತಿ ಚ್ಯವನ ಸಂವಾದ ಸಂಗತಿಯ (ಅರಣ್ಯ ಪರ್ವ, ೧೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪ್ರಭಾಸತೀರ್ಥಕ್ಕೆ ಧರ್ಮಜನು ಬಂದಾಗ ಅಲ್ಲಿ ಯಾದವರನ್ನು ನೋಡಿದರು. ಅನೇಕ ತೀರ್ಥಗಳಲ್ಲಿ ಸ್ನಾನ ಮಾಡಿದನು. ರೋಮಶರು ಧರ್ಮಜನಿಗೆ ಗಯನ ಚರಿತ್ರೆಯನ್ನು ಚ್ಯವನ ಶರ್ಯಾತಿ ಸಂವಾದದ ವಿಷಯವನ್ನೂ ತಿಳಿಸಿದರು.

ಅರ್ಥ:
ಬಂದನು: ಆಗಮಿಸು; ಅವನಿಪ: ರಾಜ; ಅವನಿ: ಭೂಮಿ; ವಂದನೆ: ನಮಸ್ಕರಿಸು; ಬಳಿಕ: ನಂತರ; ವೃಂದ: ಗುಂಪು; ದರ್ಶನ: ನೋಟ; ಬಹು: ಬಹಳ; ವಿಧ: ರೀತಿ; ತೀರ್ಥ: ಪವಿತ್ರವಾದ ಜಲ; ತೀರ: ದಡ; ಮಿಂದು: ಮುಳುಗು; ಚರಿತ: ಕಥೆ; ನಲವು: ಸಂತೋಷ; ಸಂವಾದ: ಸಂಭಾಷಣೆ; ಸಂಗತಿ: ವಿಚಾರ;

ಪದವಿಂಗಡಣೆ:
ಬಂದನ್+ಅವನಿಪನ್+ಆ+ ಪ್ರಭಾಸದ
ವಂದನೆಗೆ +ಬಳಿಕಲ್ಲಿ+ ಯಾದವ
ವೃಂದ +ದರ್ಶನವಾಯ್ತು +ಬಹುವಿಧ+ತೀರ್ಥ +ತೀರದಲಿ
ಮಿಂದನ್+ಆತಗೆ+ ಗಯನ+ ಚರಿತವನ್
ಅಂದು +ರೋಮಶ +ಹೇಳಿದನು +ನಲ
ವಿಂದ +ಶರ್ಯಾತಿ +ಚ್ಯವನ +ಸಂವಾದ +ಸಂಗತಿಯ

ಅಚ್ಚರಿ:
(೧) ರೋಮಶ, ಶರ್ಯಾತಿ, ಚ್ಯವ, ಗಯ – ಹೆಸರುಗಳ ಪರಿಚಯ

ಪದ್ಯ ೧೫: ಪರಶುರಾಮರು ಎಷ್ಟು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದರು?

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು (ಅರಣ್ಯ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪರಶುರಾಮರು ಮಾಡಿದ ಕಾರ್ತಿವೀರ್ಯನ ಸಂಹಾರ, ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಸಂಹರಿಸಿದ್ದು, ಅವರ ಕಂಠನಾಳದಿಂದ ಹರಿದ ರಕ್ತ ತರ್ಪಣವನ್ನು ಪಿತೃಗಳಿಗೆ ಕೊಟ್ಟಿದ್ದು, ಆ ರಕ್ತ ನದಿಯ ವಿವರಗಳೆಲ್ಲವನ್ನೂ ಯುಧಿಷ್ಠಿರನು ಕೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಸೂಳು: ಆವೃತ್ತಿ, ಬಾರಿ; ಅರಿ: ಕತ್ತರಿಸು; ರಾಯ: ರಾಜ; ಕಂಠ: ಕೊರಳು; ನೆತ್ತರು: ರಕ್ತ; ನದಿ: ಕೂಲವತಿ; ಪರಮ: ಶ್ರೇಷ್ಠ; ಪಿತೃ: ಪೂರ್ವಜ; ತರ್ಪಣ: ತೃಪ್ತಿಪಡಿಸುವಿಕೆ, ತಣಿವು; ಪರಶು: ಕೊಡಲಿ, ಕುಠಾರ; ನೆಣವಸೆ: ಹಸಿಯಾದ ಕೊಬ್ಬು; ನೆಣ: ಕೊಬ್ಬು; ತೊಳಸು: ಕಾದಾಟ; ವರನದಿ: ಶ್ರೇಷ್ಠವಾದ ಸರೋವರ; ವಿಸ್ತರಣ: ವ್ಯಾಪ್ತಿ; ಸೂನು: ಮಗ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ಧುರದೊಳ್+ಇಪ್ಪತ್ತೊಂದು +ಸೂಳಿನೊಳ್
ಅರಿದ+ರಾಯರ +ಕಂಠನಾಳದ +ನೆತ್ತರಿನ +ನದಿಯ
ಪರಮ +ಪಿತೃ+ತರ್ಪಣವನ್+ಆತನ
ಪರಶುವಿನ +ನೆಣವಸೆಯ +ತೊಳಹದ
ವರನದಿಯ +ವಿಸ್ತರಣವನು +ಕೇಳಿದನು +ಯಮಸೂನು

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ

ನುಡಿಮುತ್ತುಗಳು: ಅರಣ್ಯ ಪರ್ವ ೧೦ ಸಂಧಿ

  • ನೃಪಕುಲ ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ – ಪದ್ಯ ೧೪
  • ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ – ಪದ್ಯ ೧೫
  • ಭಾಳಡವಿ ಬಯಲಾಯ್ತು ಖಗಮೃಗ ಜಾಲ ಸವೆದುದು – ಪದ್ಯ ೧೯
  • ಅಭ್ರದಲಿ ಗುಡಿಯಿರಿದು ಮೆರೆದುದು ಮೇಘಮಿಂಚಿದುದಖಿಳದೆಸೆದೆಸೆಗೆ – ಪದ್ಯ ೨೧
  • ಬಲಿದು ಮೈನಡನಡುಗಿ ಹಲುಹಲು ಹಳಚಿ ನೆನೆದಳು ವಾರಿಯಲಿ ತನು ಹಳಹಳಿಸೆ ಬಲಲಿದಳು ಚರಣದ ಹೊನಲ ಹೋರಟೆಗೆ – ಪದ್ಯ ೨೪
  • ಪೈಸರದೊಳಗೆ ಸೂಸಿತು ಮೈ ಮಹಾಸತಿಯ – ಪದ್ಯ ೨೫
  • ಮೇಲುಸಿರ ಬಲು ಮೂರ್ಛೆಯಲಿ ಮುದ್ರಿಸಿದ ಚೇತನದ – ಪದ್ಯ ೨೬
  • ಗಾಳಿಗೆರಗಿದ ಕದಳಿಯಂತಿರೆ ಲೋಲಲೋಚನೆ ಥಟ್ಟುಗೆಡೆದಳು – ಪದ್ಯ ೨೬
  • ಬರುತ ಕಂಡರು ಬಟ್ಟೆಯಲಿ ನಿರ್ಭರದ ಮೂರ್ಛಾ ಮೋಹಿತಾಂತಃಕರಣೆಯನು ಹಾಯೆನುತ ಬಿದ್ದರು ಪವನಜಾದಿಗಳು – ಪದ್ಯ ೨೭
  • ಸತ್ಯವ್ಯಪಗತೈಶ್ವರ್ಯರನು ಕಂಡಳು ಕಾಂತೆ ಕಂದೆರೆದು – ಪದ್ಯ ೨೮
  • ನೆಲೆವನೆಯ ಮಾಡದಲಿ ರತ್ನಾವಳಿಯ ನುಣ್ಬೆಳಗಿನಲಿ ಹಂಸೆಯ ತುಳಿಯ ಮೇಲ್ವಾಸಿನಲಿ ಪವಡಿಸುವ್ – ಪದ್ಯ ೨೯
  • ನಮ್ಮಂಘ್ರಿಶಕ್ತಿಯ ಸುಗ್ಗಿ ಬೀತುದು – ಪದ್ಯ ೩೫
  • ಸಾಹಸಿಗ ನೀನಗ್ಗಳೆಯರಿದೆ ನಿನ್ನವರು ಪಡಿಗಿರಿಗಳಾ ಗಿರಿಗೆ – ಪದ್ಯ ೩೫

ಪದ್ಯ ೧೪: ಪಾಂಡವರು ಯಾರ ಆಶ್ರಮಗಳಿಗೆ ಭೇಟಿ ನೀಡಿದರು?

ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗ ದೇಶದ
ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾಂಟಿದನು ನೃಪಕುಲ
ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ (ಅರಣ್ಯ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಋಷ್ಯಶೃಂಗನ ಕಥೆಯನ್ನು ಧರ್ಮಜನು ಕೇಳಿದನು. ಬಳಿಕ ಪಾಂಡವರು ಪರಿವಾರದೊಡನೆ ಕಳಿಂಗ ದೇಶದ ನದಿಗಳಲ್ಲಿ ಸ್ನಾನ ಮಾಡಿ, ಗಂಗಾಸಾಗರ ಸಂಗಮಕ್ಕೆ ಹೋದರು, ವೈತರಣಿಯನ್ನು ದಾಟಿ ಕ್ಷತ್ರಿಯ ಕುಲಕ್ಕೆ ಕಾಲಯಮನಂತಿದ್ದ ಪರಶುರಾಮನ ಆಶ್ರಮಕ್ಕೆ ಬಂದರು.

ಅರ್ಥ:
ಕೇಳು: ಆಲಿಸು; ನೃಪ: ರಾಜ; ವಿಶಾಲ: ವಿಸ್ತಾರ; ಕಥೆ: ವೃತ್ತಾಮ್ತ; ದೇಶ: ರಾಷ್ಟ್ರ; ಕೂಲವತಿ: ನದಿ; ಮಿಂದು: ಮುಳುಗು; ಜಲ: ನೀರು; ಜಲಧಿ: ಸಾಗರ; ಸಂಗಮ: ಸಮಾಗಮ; ವರ: ಶ್ರೇಷ್ಠ; ಕೂಲ:ದಡ; ದಾಂಟು: ಪಾರುಮಾಡು, ಹಾಯ್ದುಹೋಗು; ನೃಪ: ರಾಜ; ಕುಲ; ವಂಶ; ಯಮ: ಮೃತ್ಯುದೇವತೆ; ಕಾಲ: ಸಮಯ; ಕಾಲಯಮ: ರೇಣುಕಾಸುತ: ಪರಶುರಾಮ; ಆಶ್ರಯ: ರಕ್ಷಣೆ;

ಪದವಿಂಗಡಣೆ:
ಕೇಳಿದನು +ನೃಪ +ಋಷ್ಯಶೃಂಗ+ ವಿ
ಶಾಲ +ಕಥೆಯ +ಕಳಿಂಗ +ದೇಶದ
ಕೂಲವತಿಗಳ+ ಮಿಂದು +ಗಂಗಾಜಲಧಿ +ಸಂಗಮದ
ಮೇಲೆ +ವೈತರಣಿಯ +ವರೋತ್ತರ
ಕೂಲವನು +ದಾಂಟಿದನು +ನೃಪಕುಲ
ಕಾಲಯಮನಾಶ್ರಯಕೆ +ಬಂದರು +ರೇಣುಕಾಸುತನ

ಅಚ್ಚರಿ:
(೧) ಪರಶುರಾಮರನ್ನು ಪರಿಚಯಿಸುವ ಪರಿ – ನೃಪಕುಲ ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ

ಪದ್ಯ ೧೩: ಸಗರನ ಮಕ್ಕಳನ್ನು ಯಾರು ದಹಿಸಿದರು?

ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು ಬಳಿಕವ
ರಿಗೆ ಭಗೀರಥನಿಳುಹಿದಮರನದೀ ಕಥಾಂತರವ
ವಿಗಡಮುನಿ ಇಲ್ವಲನ ವಾತಾ
ಪಿಗಳ ಮರ್ದಿಸಿ ವಿಂಧ್ಯಗಿರಿ ಹ
ಬ್ಬುಗೆಯ ನಿಲಿಸಿದಗಸ್ತ್ಯ ಚರಿತವ ಮುನಿಪ ವರ್ಣಿಸಿದ (ಅರಣ್ಯ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಲೋಮಶನು ಯುಧಿಷ್ಠಿರನಿಗೆ ಸಗರ ಚರ್ಕ್ರವರ್ತಿಯ ಮಕ್ಕಳು ಕಪಿಲನ ನೋಟದುರಿಯಲ್ಲಿ ಸುಟ್ಟು ಹೋದುದನ್ನೂ, ಭಗೀರಥನು ಗಂಗೆಯನ್ನು ಹರಿಸಿದ ಕಥೆಯನ್ನು ಹೇಳಿದನು. ಬಳಿಕ ಅಗಸ್ತ್ಯರು ವಾತಾಪಿ ಮತ್ತು ಇಲ್ವಲರೆಂಬ ರಾಕ್ಷಸರನ್ನು ಸಂಹರಿಸಿ, ವಿಂಧ್ಯಗಿರಿಯು ಎತ್ತರಕ್ಕೆ ಬೆಳೆಯುತ್ತಿದ್ದುದನ್ನು ತಪ್ಪಿಸಿದುದನ್ನೂ ವಿವರಿಸಿದರು.

ಅರ್ಥ:
ಸುತ: ಮಗ; ಚರಿತ: ಕಥೆ; ದೃಗು: ದೃಕ್ಕು, ದೃಶ್; ಶಿಖಿ: ಅಗ್ನಿ; ಉರಿ: ದಹನ; ಬಳಿಕ: ನಂತರ; ಅಮರನದಿ: ಗಂಗೆ; ವಿಗಡ: ಉಗ್ರ, ಭೀಕರ; ಮುನಿ: ಋಷಿ; ಮರ್ದಿಸು: ಸಾಯಿಸು; ಗಿರಿ: ಬೆಟ್ಟ; ಹಬ್ಬುಗೆ: ಹರಡು, ವ್ಯಾಪಿಸು; ವರ್ಣಿಸು: ಬಣ್ಣಿಸು; ಇಳುಹು: ಕೆಳಕ್ಕೆ ತರು;

ಪದವಿಂಗಡಣೆ:
ಸಗರಸುತ +ಚರಿತವನು +ಕಪಿಲನ
ದೃಗು+ಶಿಖಿಯಲ್+ಉರಿದುದನು +ಬಳಿಕ್
ಅವರಿಗೆ +ಭಗೀರಥನ್+ಇಳುಹಿದ್+ಅಮರನದೀ+ ಕಥಾಂತರವ
ವಿಗಡಮುನಿ +ಇಲ್ವಲನ+ ವಾತಾ
ಪಿಗಳ +ಮರ್ದಿಸಿ +ವಿಂಧ್ಯಗಿರಿ+ ಹ
ಬ್ಬುಗೆಯ+ ನಿಲಿಸಿದ್+ಅಗಸ್ತ್ಯ +ಚರಿತವ +ಮುನಿಪ +ವರ್ಣಿಸಿದ

ಅಚ್ಚರಿ:
(೧) ಸಗರನ ಮಕ್ಕಳನ್ನು ಕೊಂದನು ಎಂದು ಹೇಳುವ ಪರಿ – ಸಗರಸುತ ಚರಿತವನು ಕಪಿಲನ
ದೃಗುಶಿಖಿಯಲುರಿದುದನು

ಪದ್ಯ ೧೨: ಸಮುದ್ರದ ನೀರನ್ನು ಯಾರು ಕುಡಿದರು?

ಚ್ಯವನನಾಶ್ರಮದೊಳಗೆ ಮೂರನು
ತಿವಿದು ಭಾರದ್ವಾಜನಾಶ್ರಮ
ಕವರು ಮುನಿದೆಪ್ಪತ್ತನುಂಗಿದರೇನನುಸುರುವೆನು
ದಿವಿಜರಿತ್ತಲಗಸ್ತ್ಯನನು ಪರು
ಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ ಕೊಂದರು ಸುರರು ದಾನವನ (ಅರಣ್ಯ ಪರ್ವ, ೧೦ ಸಂಧಿ, ೧೨ ಪದ್ಯ)

ತಾತ್ಪರ್ಯ:
ಚ್ಯವ ಮುನಿಗಳ ಆಶ್ರಮದಲ್ಲಿ ಮೂವರನ್ನು ಕೊಂದರು, ಭಾರದ್ವಾಜರ ಆಶ್ರಮದಲ್ಲಿ ಎಪ್ಪತ್ತು ಜನರನ್ನು ರಾಕ್ಷಸರು ಕೊಂದರು, ಇತ್ತ ದೇವತೆಗಳು ಅಗಸ್ತ್ಯರನ್ನು ಬೇಡಿ, ಒಪ್ಪಿಸಿ, ಅವರು ಸಮುದ್ರವನ್ನೆಲ್ಲಾ ಏಕಾಪೋಶನವನ್ನಾಗಿ ತನ್ನ ಜಠರದಲ್ಲಿಟ್ಟನು, ಆಗ ದೇವತೆಗಳು ರಾಕ್ಷಸರನ್ನು ಕೊಂದರು.

ಅರ್ಥ:
ಆಶ್ರಮ: ಕುಟೀರ; ತಿವಿ: ಚುಚ್ಚು; ಮುನಿ: ಋಷಿ; ನುಂಗು: ಕಬಳಿಸು; ಉಸುರು: ಹೇಳು, ಮಾತಾಡು; ದಿವಿಜ: ಬ್ರಾಹ್ಮಣ; ಪರುಠವಿಸು: ಸಿದ್ಧಗೊಳಿಸು; ಸಾಗರ: ಸಮುದ್ರ; ಹವಣಿಸು: ಪ್ರಯತ್ನಿಸು, ಹೊಂಚು, ಅಣಿಯಾಗು; ಜಠರ: ಹೊಟ್ಟೆ; ಕೊಂದು: ಸಾಯಿಸು; ಸುರ: ದೇವತೆ; ದಾನವ: ರಾಕ್ಷಸ;

ಪದವಿಂಗಡಣೆ:
ಚ್ಯವನನ+ಆಶ್ರಮದೊಳಗೆ+ ಮೂರನು
ತಿವಿದು +ಭಾರದ್ವಾಜನ+ಆಶ್ರಮಕ್
ಅವರು +ಮುನಿದ್+ಎಪ್ಪತ್ತ+ ನುಂಗಿದರ್+ಏನನ್+ಉಸುರುವೆನು
ದಿವಿಜರ್+ಇತ್ತಲ್+ಅಗಸ್ತ್ಯನನು +ಪರು
ಠವಿಸಿದರು +ಸಾಗರವನ್+ಆ+ ಮುನಿ
ಹವಣಿಸಿದ +ಜಠರದಲಿ +ಕೊಂದರು +ಸುರರು +ದಾನವನ

ಅಚ್ಚರಿ:
(೧) ಸಾಗರವನ್ನು ಕುಡಿದ ಪರಿ – ಅಗಸ್ತ್ಯನನು ಪರುಠವಿಸಿದರು ಸಾಗರವನಾ ಮುನಿ
ಹವಣಿಸಿದ ಜಠರದಲಿ