ಪದ್ಯ ೧: ಅರ್ಜುನನು ಎಷ್ಟು ವರ್ಷಗಳ ಕಾಲ ಸ್ವರ್ಗದಲ್ಲಿದ್ದನು?

ಅರಸ ಕೇಳೈ ಪಾರ್ಥನಿದ್ದನು
ವರುಷವೈದರೊಳಿಂದ್ರಭವನದ
ಸಿರಿಯಸಮ್ಮೇಳದ ಸಗಾಢದ ಸೌಮನಸ್ಯದಲಿ
ನರನಹದನೇನೋ ಧನಂಜಯ
ನಿರವದೆಲ್ಲಿ ಕಿರೀಟಿ ನಮ್ಮನು
ಮರೆದು ಕಳೆದನಲಾಯೆನುತ ಯಮಸೂನು ಚಿಂತಿಸಿದ (ಅರಣ್ಯ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸ್ವರ್ಗದ ಅಪಾರ ಸಂಪತ್ತು, ತಂದೆಯ ಗಾಢವಾದ ಪ್ರೀತಿ ವಾತ್ಸಲ್ಯಗಳನ್ನು ಅನುಭವಿಸುತ್ತಾ ಅರ್ಜುನನು ಐದು ವರ್ಷಗಳ ಕಾಲ ಅಮರಾವತಿಯಲ್ಲಿದ್ದನು. ಇತ್ತ ಭೂಮಿಯಲ್ಲಿ ಧರ್ಮರಾಯನು ಚಿಂತೆಗೊಳಗಾಗಿ, ಅರ್ಜುನನ ವಿಷಯವೇನೂ ತಿಳಿಯದಾಗಿದೆ, ಅವನು ಈಗ ಎಲ್ಲಿರುವನೋ, ನಮ್ಮನ್ನೇನಾದರು ಮರೆತುಬಿಟ್ಟನೋ ಏನೋ ಎಂದು ಚಿಂತಿಸಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ವರುಷ: ಸಂವತ್ಸರ; ಭವನ: ಆಲಯ; ಸಿರಿ: ಐಶ್ವರ್ಯ; ಸಮ್ಮೇಳ: ಸಖ್ಯ, ಸಹವಾಸ; ಸಗಾಢ: ಆಡಂಬರ, ವೈಭವ; ಸೌಮನಸ್ಯ: ಒಳ್ಳೆಯ ಮನಸ್ಸಿನಿಂದ ಕೂಡಿರುವಿಕೆ, ಸಂತೋಷ; ನರ: ಅರ್ಜುನ; ಇರವು: ಇರುವಿಕೆ, ವಾಸ; ಕಿರೀಟಿ: ಅರ್ಜುನ; ಮರೆ: ನೆನಪಿನಿಂದ ದೂರಮಾಡು; ಕಳೆ: ತೊರೆ; ಸೂನು: ಮಗ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಅರಸ +ಕೇಳೈ +ಪಾರ್ಥನಿದ್ದನು
ವರುಷವ್+ಐದರೊಳ್+ಇಂದ್ರ+ಭವನದ
ಸಿರಿಯ+ಸಮ್ಮೇಳದ +ಸಗಾಢದ+ ಸೌಮನಸ್ಯದಲಿ
ನರನಹದನ್+ಏನೋ +ಧನಂಜಯನ್
ಇರವದೆಲ್ಲಿ+ ಕಿರೀಟಿ+ ನಮ್ಮನು
ಮರೆದು +ಕಳೆದನಲಾ+ಎನುತ +ಯಮಸೂನು +ಚಿಂತಿಸಿದ

ಅಚ್ಚರಿ:
(೧) ಸ ಕಾರದ ಸಾಲು ಪದಗಳು – ಸಿರಿಯ ಸಮ್ಮೇಳದ ಸಗಾಢದ ಸೌಮನಸ್ಯದಲಿ

ಪದ್ಯ ೫೫: ಅರ್ಜುನನು ಯಾವ ವಿದ್ಯೆಯನ್ನು ಕಲಿತನು?

ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನಮರ ಭುವನದ
ಭರತವಿದ್ಯೆಯನರುಹಿಸಿದನಾ ಶಾಸ್ತ್ರ ವಿಧಿಯಿಂದ
ಸುರರಿಗಲಗಣಸಾದ ದೈತ್ಯರ
ನೊರಸಿದನು ಸತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರನಾರಾಯಣನ ಮೈದುನನ (ಅರಣ್ಯ ಪರ್ವ, ೯ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶಸ್ತ್ರಾಸ್ತ್ರಗಳ ರಹಸ್ಯವನ್ನು ಇಂದ್ರನು ಅರ್ಜುನನಿಗೆ ಹೇಳಿಕೊಟ್ಟನು. ದೇವಲೋಕದ ನಾಟ್ಯವಿದ್ಯೆಯನ್ನು ಅರ್ಜುನನಿಗೆ ಚಿತ್ರರಥಾದಿಗಳಿಂದ ಹೇಳಿಸಿದನು. ದೇವತೆಗಳಿಗೆ ಕಂಟಕರಾಗಿದ್ದ ರಾಕ್ಷಸರನ್ನು ಅರ್ಜುನನು ಸಂಹರಿಸಿದನು. ಅವನ ಕೀರ್ತಿಯ ಬಳ್ಳಿಯು ಚಿಗುರಿ ಬೆಳೆಯಿತು.

ಅರ್ಥ:
ಸುರಪ: ಇಂದ್ರ; ಅರುಹು: ಹೇಳು; ಅಸ್ತ್ರ: ಬಾಣ; ಶಸ್ತ್ರ: ಆಯುಧ; ರಹಸ್ಯ: ಗುಟ್ಟು; ಅಮರ: ದೇವತೆ; ಭುವನ: ಆಲಯ; ಭರತವಿದ್ಯೆ: ನಾಟ್ಯಶಾಸ್ತ್ರ; ಶಾಸ್ತ್ರ: ಸಾಂಪ್ರದಾಯಿಕವಾದ ಆಚರಣೆ, ಪದ್ಧತಿ; ವಿಧಿ: ನಿಯಮ; ಸುರರು: ದೇವತೆಗಳು; ಅಲಗಣಸು: ಕತ್ತಿಯ ಏಟು; ದೈತ್ಯ: ರಾಕ್ಷಸ; ಒರಸು: ನಾಶಮಾಡು; ಕೀರ್ತಿ: ಯಶಸ್ಸು; ಲತೆ: ಬಳ್ಳಿ; ಕುಡಿ: ಚಿಗುರು; ಬೆಳೆ: ವಿಕಸನವಾಗು; ಮೈದುನ: ತಂಗಿಯ ಗಂಡ;

ಪದವಿಂಗಡಣೆ:
ಸುರಪನ್+ಅರುಹಿದನ್+ಅಸ್ತ್ರ +ಶಸ್ತ್ರೋ
ತ್ತರ +ರಹಸ್ಯವನ್+ಅಮರ+ ಭುವನದ
ಭರತವಿದ್ಯೆಯನ್+ಅರುಹಿಸಿದನ್+ಆ+ ಶಾಸ್ತ್ರ +ವಿಧಿಯಿಂದ
ಸುರರಿಗ್+ಅಲಗಣಸಾದ +ದೈತ್ಯರನ್
ಒರಸಿದನು +ಸತ್ಕೀರ್ತಿಲತೆ +ಕುಡಿ
ವರಿದು +ಬೆಳೆದುದು+ ವೀರನಾರಾಯಣನ +ಮೈದುನನ

ಅಚ್ಚರಿ:
(೧) ಅರ್ಜುನನನ್ನು ವೀರನಾರಾಯಣನ ಮೈದುನ ಎಂದು ಕರೆದಿರುವುದು
(೨) ಭರತನಾಟ್ಯ ಎಂದು ಹೇಳಲು – ಅಮರ ಭುವನದ ಭರತವಿದ್ಯೆ
(೩) ವೈರಿ ಎಂದು ಹೇಳಲು – ಅಲಗಣಸಾದ ಪದದ ಬಳಕೆ
(೪) ಅರ್ಜುನನ ಯಶಸ್ಸು ಹರಡಿತೆಂದು ಹೇಳಲು – ಸತ್ಕೀರ್ತಿಲತೆ ಕುಡಿವರಿದು ಬೆಳೆದುದು

ಪದ್ಯ ೫೪: ಅರ್ಜುನನಿಗೆ ಯಾವ ಬಾಣಗಳು ದೊರೆತವು?

ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ ತಂ
ದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ (ಅರಣ್ಯ ಪರ್ವ, ೯ ಸಂಧಿ, ೫೪ ಪದ್ಯ)

ತಾತ್ಪರ್ಯ:
ಇಂದ್ರನು ಹೀಗೆ ಹಲವಾರು ರೀತಿಯಲ್ಲಿ ವಿಷಯವನ್ನು ತಿಳಿಸಿ, ಸಮಾಧಾನಗೊಳಿಸಿ ಅರ್ಜುನನೊಡನೆ ಇಂದ್ರನು ತನ್ನರಮನೆಗೆ ಬಂದನು, ವಿವಿಧ ವೈಭವಯುಕ್ತವಾಗಿ ವಿನೋದದಿಂದ ಮಾತುಗಳನ್ನಾಡಿ ವಿಹರಿಸಿದನು. ಅಗ್ನಿ, ವಾಯು ಮೊದಲಾದ ದೇವತೆಗಳು ಅರ್ಜುನನಿಗೆ ಸಂತೋಷದಿಂದ ಬಾಣಗಳನ್ನು ನೀಡಿದರು, ದೇವತಾಸ್ತ್ರೀಯರು ಸೀಸೆಯನ್ನಿಟ್ಟು ಜಯಕಾರವನ್ನು ಮೊಳಗಿದರು.

ಅರ್ಥ:
ಸಂತ: ಸೌಖ್ಯ, ಕ್ಷೇಮ; ಪುರಂದರ: ಇಂದ್ರ; ಅರಮನೆ: ರಾಜರ ಆಲಯ; ನಡೆ: ಚಲಿಸು; ಸಹಿತ: ಜೊತೆ; ವಿವಿಧ: ಹಲವಾರು; ವಿನೋದ: ವಿಹಾರ, ಸಂತೋಷ; ವಿಭವ: ಸಿರಿ, ಸಂಪತ್ತು; ಶಿಖಿ: ಅಗ್ನಿ; ಪವನ: ವಾಯು; ಆದಿ: ಮುಂತಾದ; ನಲವು: ಸಂತೋಷ; ಕೊಡು: ನೀಡು; ಶರ: ಬಾಣ; ಅಮರ: ದೇವತೆ; ವೃಂದ: ಗುಂಪು; ಸೂಸು: ಕೊಡು, ನೀಡು; ಸೇಸೆ: ಮಂಗಳಾಕ್ಷತೆ, ಮಂತ್ರಾಕ್ಷತೆ; ಜಯ: ಉಘೇ; ರವ: ಶಬ್ದ; ರಭಸ: ವೇಗ;

ಪದವಿಂಗಡಣೆ:
ಎಂದು +ಪಾರ್ಥನ +ಸಂತವಿಟ್ಟು +ಪು
ರಂದರನು +ತನ್ನರಮನೆಗೆ +ನಡೆ +ತಂ
ದನ್+ಅರ್ಜುನ +ಸಹಿತ +ವಿವಿಧ +ವಿನೋದ +ವಿಭವದಲಿ
ಅಂದು +ಶಿಖಿ +ಪವನಾದಿಗಳು +ನಲ
ವಿಂದ+ ಕೊಟ್ಟರು +ಶರವನ್+ಅಮರೀ
ವೃಂದ +ಸೂಸಿತು+ ಸೇಸೆಯನು +ಜಯರವದ+ ರಭಸದಲಿ

ಅಚ್ಚರಿ:
(೧) ಅಪ್ಸರೆಯರು ಎಂದು ಹೇಳಲು – ಅಮರೀವೃಂದ ಪದದ ಬಳಕೆ
(೨) ವಿ ಕಾರದ ತ್ರಿವಳಿ ಪದ – ವಿವಿಧ ವಿನೋದ ವಿಭವದಲಿ

ಪದ್ಯ ೫೩: ಶಾಪದಿಂದ ಒಳಿತಾಗುವುದೆಂದು ಹೇಗೆ ಇಂದ್ರನು ಹೇಳಿದನು?

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೫೩ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ಊರ್ವಶಿಯ ಶಾಪದಿಂದ ನಿನಗಾವ ಹಾನಿಯೂ ಇಲ್ಲ, ನಿಪುಣರಾದ ಶತ್ರುಗಳು ನಿನ್ನನ್ನು ಹುಡುಕುತ್ತಾ ಬಂದಾಗ ಅವರ ದೃಷ್ಟಿ ಬಾಣಗಳಿಂದ ನಪುಂಸಕತನದ ಕವಚವು ನಿನ್ನನ್ನು ಕಾಪಾಡುತ್ತದೆ. ಊರ್ವಶಿಯು ಶಾಪಕೊಟ್ಟದ್ದು ನಿನ್ನ ಪೂರ್ವ ಜನ್ಮದ ಪುಣ್ಯದಿಂದಲೇ ಆಯಿತು. ಅವಳ ಅಪಕಾರ ನಿಮ್ಮ ಪ್ರತಿಜ್ಞೆಯನ್ನುಳಿಸಿಕೊಡುತ್ತದೆ ಎನ್ನುವುದನ್ನು ತಿಳಿಯದವನು ನೀನು ಎಂದು ಇಂದ್ರನು ಅರ್ಜುನನನ್ನು ಸಂತೈಸಿದನು.

ಅರ್ಥ:
ಖೋಡಿ: ದುರುಳತನ; ಮಗ: ಸುತ; ಚಿಂತಿಸು: ಯೋಚಿಸು; ಅಜ್ಞಾತ: ತಿಳಿಯದ; ನೆರೆ: ಗುಂಪು; ಜೋಡು: ಜೊತೆ; ಜಾಣಾಯ್ಲ: ಬುದ್ಧಿವಂತ, ಜಾಣ; ರಿಪು: ವೈರಿ; ಜನ: ಮನುಷ್ಯರ ಗುಂಪು; ದೃಷ್ಟಿ: ನೋಟ; ಶರ: ಬಾಣ; ಹತಿ: ಹೊಡೆತ; ಕೂಡು: ಸೇರು; ಪುಣ್ಯ: ಸದಾಚಾರ; ಸುರಸತಿ: ಅಪ್ಸರೆ; ಅಪಕೃತಿ: ಕೆಟ್ಟ ಕಾರ್ಯ; ಭಾಷೆ: ನುಡಿ; ಬೀಡು: ವಸತಿ; ಸಲಹು: ಕಾಪಾಡು; ಅರಿ: ತಿಳಿ; ಸಾಹಿತ್ಯ: ಸಾಮಗ್ರಿ, ಸಲಕರಣೆ;

ಪದವಿಂಗಡಣೆ:
ಖೋಡಿ+ಇಲ್ಲೆಲೆ +ಮಗನೆ +ಚಿಂತಿಸ
ಬೇಡ +ನಿಮ್ಮ್+ಅಜ್ಞಾತದಲಿ +ನೆರೆ
ಜೋಡಲಾ +ಜಾಣಾಯ್ಲ +ರಿಪುಜನ+ ದೃಷ್ಟಿ +ಶರಹತಿಗೆ
ಕೂಡಿತ್+ಇದು +ಪುಣ್ಯದಲಿ+ ಸುರಸತಿ
ಮಾಡಿದ್+ಅಪಕೃತಿ +ನಿನ್ನ +ಭಾಷೆಯ
ಬೀಡ +ಸಲಹಿದುದ್+ಅರಿಯೆ+ ನೀ +ಸಾಹಿತ್ಯನಲ್ಲೆಂದ

ಅಚ್ಚರಿ:
(೧) ಶಾಪವು ಹೇಗೆ ಉಪಕಾರ ಎಂದು ಹೇಳುವ ಪರಿ – ನಿಮ್ಮಜ್ಞಾತದಲಿ ನೆರೆ ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ
(೨) ಸುರಸತಿ, ಶರಹತಿ – ಪ್ರಾಸ ಪದಗಳು

ಪದ್ಯ ೫೨: ಇಂದ್ರನು ಅರ್ಜುನನನ್ನು ಹೇಗೆ ಸಂತೈಸಿದನು?

ಎಲೆ ಕಿರೀಟಿ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣಾ
ಹಳುವದಲಿ ಹನ್ನೆರಡುವರುಷದ
ಕಳಹಿನಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ (ಅರಣ್ಯ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಸಂತೈಸುತ್ತಾ ಇಂದ್ರನು, ಎಲೈ ಅರ್ಜುನ ಊರ್ವಶಿಯ ಶಾಪಕ್ಕೆ ನೀನೇಕೆ ಹೆದರುವೆ, ವೃಥಾ ಮನೋವ್ಯಥೆ ಪಡುವೆ? ಅವಳಿಗೆ ಬಂದ ಕೋಪದಿಂದ ನಿನಗೆ ಉಪಕಾರವೇ ಆಗಿದೆ, ಹನ್ನೆರಡು ವರುಷ ವನವಾಸ ಮುಗಿದ ಮೇಲೆ, ಒಂದು ವರುಷ ಅಜ್ಞಾತವಾಸ ಮಾಡುವುದಕ್ಕೆ ಈ ನಪುಂಸಕತನವೇ ನಿನಗೆ ಸಾಧನವಾಗುತ್ತದೆ ಎಂದು ಬುದ್ಧಿಮಾತನ್ನು ಹೇಳಿ ಸಂತೈಸಿದನು.

ಅರ್ಥ:
ಕಿರೀಟಿ: ಅರ್ಜುನ; ವೃಥ: ಸುಮ್ಮನೆ; ವ್ಯಥೆ: ನೋವು, ಯಾತನೆ; ಮನ: ಮನಸ್ಸು, ಚಿತ್ತ; ತಳಿತ: ಚಿಗುರಿದ; ಶಾಪ: ನಿಷ್ಠುರದ ನುಡಿ; ಅಳುಕು: ಹೆದರು; ಕ್ರೋಧ: ಕೋಪ; ಉಪಕಾರ: ಸಹಾಯ; ಹಳುವ: ಕಾಡು; ವರುಷ: ಸಂವತ್ಸರ; ಕಳೆ: ಪಾರುಮಾಡು, ಹೋಗಲಾಡಿಸು; ಅಜ್ಞಾತ: ತಿಳಿಯದ; ಸಾಧನ: ಉಪಕರಣ; ಶಿಖಂಡಿ: ನಪುಂಸಕ;

ಪದವಿಂಗಡಣೆ:
ಎಲೆ +ಕಿರೀಟಿ +ವೃಥಾ +ಮನೋವ್ಯಥೆ
ತಳಿತುದೇಕ್+ ಊರ್ವಶಿಯ +ಶಾಪದಲ್
ಅಳುಕಿದೈ +ತತ್+ಕ್ರೋಧ +ನಿನಗ್+ಉಪಕಾರವಾಯ್ತು +ಕಣಾ
ಹಳುವದಲಿ +ಹನ್ನೆರಡು+ವರುಷದ
ಕಳಹಿನ್+ಅಜ್ಞಾತದಲಿ +ವರುಷವ
ಕಳೆವೊಡ್+ಇದು +ಸಾಧನವೆಯಾಯ್ತು +ಶಿಖಂಡಿತನವೆಂದ

ಅಚ್ಚರಿ:
(೧) ಶಾಪವನ್ನು ಉಪಯೋಗಿಸಿಕೊಳ್ಳುವ ಉಪಾಯ – ಅಜ್ಞಾತದಲಿ ವರುಷವ
ಕಳೆವೊಡಿದು ಸಾಧನವೆಯಾಯ್ತು ಶಿಖಂಡಿತನವೆಂದ