ಪದ್ಯ ೪೬: ಅರ್ಜುನನು ಏಕೆ ಜೀವಿಸುವುದಿಲ್ಲವೆಂದ?

ಎಲೆ ವಿಧಾತ್ರಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸಿದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ (ಅರಣ್ಯ ಪರ್ವ, ೯ ಸಂಧಿ, ೪೬ ಪದ್ಯ)

ತಾತ್ಪರ್ಯ:
ಹೇ ವಿಧಿಯೆ, ಬ್ರಹ್ಮನೇ, ನಾನು ಮಾಡಿಅ ಅಪರಾಧಕ್ಕೆ ಶಿಕ್ಷೆಯಾಗಬೇಕು, ಅದು ಬಿಟ್ಟು ಶ್ರೇಷ್ಠವಾದ ವೇದ ಮಾರ್ಗ, ಮನುವೇ ಮೊದಲಾದವರು ನಡೆದ ವಿಧಿಸಿದ ಮಾರ್ಗಕ್ಕೆ ಅನುಸಾರವಾಗಿ ಧರ್ಮದಿಂದ ನಡೆದರೆ ಯಾವ ಕಾರಣಕ್ಕಾಗಿ ನನಗೆ ಈ ಶಾಪ? ಪೌರುಷಹೀನನಾಗಿ ನಾನು ಬದುಕುವುದಿಲ್ಲ ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ವಿಧಾತ್ರ: ಬ್ರಹ್ಮ; ಕೃತ: ಮಾಡಿದ; ಅಪರಾಧ: ತಪ್ಪು; ಸ್ಥಳ: ಜಾಗ, ನೆಲೆ; ದಂಡ: ಶಿಕ್ಷೆ, ದಂಡನೆ; ಪ್ರಾಪ್ತಿ: ದೊರಕುವುದು; ವಿಲಸಿತ: ಅರಳಿದ, ಶುದ್ಧ, ಪ್ರಫುಲ್ಲಿತ; ವೇದ: ಜ್ಞಾನ; ಮಾರ್ಗ: ದಾರಿ; ಚಲಿಸು: ನಡೆ; ಆಚರಿಸು: ನಡೆದುಕೊಳ್ಳು; ಧರ್ಮ: ಧಾರಣೆ ಮಾಡಿದುದು; ನಿಮಿತ್ತ: ಕಾರಣ; ಅಕಟಾ: ಅಯ್ಯೋ; ಅಗಳಿತ: ತೊರೆದ; ಪೌರುಷ: ಪುರುಷತ್ವ; ಬದುಕು: ಜೀವಿಸು;

ಪದವಿಂಗಡಣೆ:
ಎಲೆ+ ವಿಧಾತ್ರ+ಕೃತ+ಅಪರಾಧ
ಸ್ಥಳಕೆ +ದಂಡ +ಪ್ರಾಪ್ತಿ+ಅಲ್ಲದೆ
ವಿಲಸಿತದ +ವೇದಾರ್ಥದಲಿ +ಮನ್ವಾದಿ +ಮಾರ್ಗದಲಿ
ಚಲಿಸಿದ್+ಆಚರಿಸಿದೊಡೆ +ಧರ್ಮ
ಸ್ಥಳದೊಳ್+ಏನು +ನಿಮಿತ್ತವ್+ಅಕಟ
ಅಗಳಿತ +ಪೌರುಷನಾಗಿ +ಬದುಕುವನಲ್ಲ+ ತಾನೆಂದ

ಅಚ್ಚರಿ:
(೧) ಅರ್ಜುನನ ನೋವು – ಅಕಟಾಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ

ಪದ್ಯ ೪೫: ಅರ್ಜುನನು ಏನೆಂದು ಚಿಂತಿಸಿದನು?

ಸುರಪತಿಗೆ ಸೂಚಿಸಿದೆನೇ ಮೇಣ್
ಕರೆಸಿದೆನೆ ಕಮಲಾನನೆಯ ನಿ
ಷ್ಠುರದ ನುಡಿಗಪರಾಧವುಂಟೇ ತಾನು ಮಾಡಿದುದು
ಮವರುಷತನಕ ನಪುಂಸಕದಲಾ
ಚರಿಸಿ ಬಲ್ಲೆನೆ ಸಾಕು ದೇಹಾಂ
ತರವನಂಗೀಕರಿಸುವೆನಲಾ ತನ್ನ ಸುಡಲೆಂದ (ಅರಣ್ಯ ಪರ್ವ, ೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಚಿಂತಾಕ್ರಾಂತನಾದನು, ಊರ್ವಶಿಯನ್ನು ನನ್ನ ಬಳಿ ಕರೆಸೆಂದು ನಾನು ಇಂದ್ರನಿಗೆ ಹೇಳಿದ್ದೆನೆ? ಊರ್ವಶಿಯನ್ನು ತನ್ನ ಬಳಿ ಬಾರೆಂದು ನಾನು ಕರೆಸಿದೆನೇ? ಊರ್ವಶಿಯು ನಿಷ್ಠುರವಾಗಿ ಶಪಿಸಲು ನಾನು ಮಾಡಿದ ತಪ್ಪಾದರೇನು? ಒಂದು ವರ್ಷ ನಪುಂಸಕನಾಗಿ ನಾನು ಓಡಾಡಲು ಸಾಧ್ಯವೇ? ಇಷ್ಟು ಸಾಕು ಬೇರೆ ದೇಹವನ್ನೇ ಹೊಂದುವುದು ಉತ್ತಮ, ನನ್ನನ್ನು ಸುಡಲಿ ಎಂದು ಅರ್ಜುನನು ವ್ಯಥೆಯಿಂದ ಚಿಂತಿಸಿದನು.

ಅರ್ಥ:
ಸುರಪತಿ: ಇಂದ್ರ; ಸೂಚಿಸು: ತಿಳಿಸು; ಮೇಣ್: ಅಥವ; ಕರೆಸು: ಬರೆಮಾಡು; ಕಮಲಾನನೆ: ಕಮಲದಂತ ಮುಖವುಳ್ಳವಳು (ಊರ್ವಶಿ); ನಿಷ್ಠುರ: ಕಠಿಣವಾದ; ನುಡಿ: ಮಾತು; ಅಪರಾಧ: ತಪ್ಪು; ಮಾಡು: ಆಚರಿಸು; ವರುಷ: ಸಂವತ್ಸರ; ತನಕ: ವರೆಗು; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಆಚರಿಸು: ನಡೆಸು; ಬಲ್ಲೆ: ತಿಳಿ; ಸಾಕು: ಕೊನೆ, ಅಂತ್ಯ; ದೇಹಾಂತರ: ದೇಹದಿಂದ ಹೊರಹೋಗು, ದೇಹವನ್ನು ತೊರೆ; ದೇಹ: ತನು, ಶರೀರ; ಅಂಗೀಕರಿಸು: ಸಮ್ಮತಿಸು; ಸುಡು: ದಹಿಸು;

ಪದವಿಂಗಡಣೆ:
ಸುರಪತಿಗೆ +ಸೂಚಿಸಿದೆನೇ +ಮೇಣ್
ಕರೆಸಿದೆನೆ+ ಕಮಲಾನನೆಯ +ನಿ
ಷ್ಠುರದ +ನುಡಿಗ್+ಅಪರಾಧವುಂಟೇ +ತಾನು +ಮಾಡಿದುದು
ವರುಷತನಕ +ನಪುಂಸಕದಲ್
ಆಚರಿಸಿ +ಬಲ್ಲೆನೆ +ಸಾಕು +ದೇಹಾಂ
ತರವನ್+ಅಂಗೀಕರಿಸುವೆನಲಾ+ ತನ್ನ +ಸುಡಲೆಂದ

ಅಚ್ಚರಿ:
(೧) ಅರ್ಜುನನು ಸಾಯಲು ನಿಶ್ಚಯಿಸುವ ಪರಿ – ದೇಹಾಂತರವನಂಗೀಕರಿಸುವೆನಲಾ ತನ್ನ ಸುಡಲೆಂದ

ಪದ್ಯ ೪೪: ಅರ್ಜುನನು ಏನೆಂದು ಚಿಂತಿಸಿದನು?

ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಕರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ (ಅರಣ್ಯ ಪರ್ವ, ೯ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅರ್ಜುನನು ಈ ಘಟನೆಯಿಂದ ಮೂಕನಾದನು. ಅವನ ಅಪಾರ ಧೈರ್ಯದಲ್ಲಿ ರಂಧ್ರವನ್ನು ಕೊರೆದಂತಾಯಿತು. ಅವನು ತಲೆಯನ್ನು ತೂಗಿ ನಾನಿರುವುದು ಸ್ವರ್ಗದಲ್ಲಿ, ಇಲ್ಲಿನ ಅಪ್ಸರೆಯರು ನಾಗರಿಕರು, ಇವರೆಲ್ಲಿ, ಕರ್ಮ ಭೂಮಿಯಾದ ಭಾರತವರ್ಷದವರು ನಾವೆಲ್ಲಿ? ಈ ಪ್ರಸಂಗ ವಿಧಿವಶದಿಂದ ಘಟಿಸಿತಲ್ಲವೇ? ಎಂದು ಅರ್ಜುನನು ಚಿಂತಿಸಿದನು.

ಅರ್ಥ:
ಮೂಗ: ಮಾತುಬರದವ; ಬಹಳ: ತುಂಬ; ಧೈರ್ಯ: ಎದೆಗಾರಿಕೆ, ಕೆಚ್ಚು; ಬೇಗಡೆ: ಕಾಗೆ ಬಂಗಾರ, ಮಿಂಚುವ ಬಣ್ಣ; ಬಿಡೆ: ತೊರೆ; ಬಿಗಿ: ಕಟ್ಟು; ಬೆರಗು: ಆಶ್ಚರ್ಯ; ಮೂಗು: ನಾಸಿಕ; ಅಂಗುಲಿ: ಬೆರಳು; ಒಲಿ: ಒಪ್ಪು; ಶಿರ: ತಲೆ; ಸುರ: ದೇವತೆ; ಭವನ: ಆಲಯ; ವಧು: ಹೆಣ್ಣು; ನಾಗರಿಕ: ಸಭ್ಯ; ಭೂಗತ: ಭೂಮಿಯ ಒಳಗಿರುವ; ಘಟಿಸು: ನಡೆದುದು; ವಿಧಿ: ಆಜ್ಞೆ, ಆದೇಶ;

ಪದವಿಂಗಡಣೆ:
ಮೂಗನಾದನು+ ಬಹಳ +ಧೈರ್ಯದ
ಬೇಗಡೆಯ +ಬಿಡೆ +ಬಿಗಿದ +ಬೆರಗಿನ
ಮೂಗಿನ್+ಅಂಗುಲಿಗಳ+ ಧನಂಜಯನ್+ಒಲೆದು +ನಿಜ+ಶಿರವ
ಆಗಲಿದು +ಸುರಭವನ +ವಧುಗಳು
ನಾಗರಿಕರ್+ಇವರೆತ್ತ+ ಭಾರತ
ಭೂಗತರು +ತಾವೆತ್ತಲ್+ಇದು +ಘಟಿಸಿದುದು +ವಿಧಿಯೆಂದ

ಅಚ್ಚರಿ:
(೧) ಬ ಕಾರದ ಸಾಲು ಪದ – ಬೇಗಡೆಯ ಬಿಡೆ ಬಿಗಿದ ಬೆರಗಿನ
(೨) ಅಪ್ಸರೆ ಎಂದು ಹೇಳಲು – ಸುರಭವನ ವಧುಗಳು
(೩) ಅರ್ಜುನನ ಸ್ಥಿತಿಯನ್ನು ಚಿತ್ರಿಸುವ ಪರಿ – ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ

ಪದ್ಯ ೪೩: ಊರ್ವಶಿಯು ಅರ್ಜುನನ್ನು ಏನಾಗೆಂದು ಶಪಿಸಿದಳು?

ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಹೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ (ಅರಣ್ಯ ಪರ್ವ, ೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಎಲವೋ ನರರೂಪಿನಿಂದಿರುವ ಅಧಮ ಮೃಗವೇ, ಭಾರತ ವರ್ಷದಲ್ಲಿ ಒಂದು ವರ್ಷ ಕಾಲ ನಪುಂಸಕನಾಗಿರು, ವಿಷ್ಣುವಿನ ಮೊರೆಹೋಗು, ಶಿವನನ್ನು ಹಿಂಬಾಲಿಸು, ನಿಮ್ಮ ತಂದೆಗೆ ಹೇಳು, ನನ್ನ ಶಾಪವು ತಪ್ಪುವುದಿಲ್ಲ ಹೋಗು ಎಂದು ಊರ್ವಶಿಯು ಶಾಪವನ್ನು ಕೊಟ್ಟು ಅಲ್ಲಿಂದ ನಿರ್ಗಮಿಸಿದಳು.

ಅರ್ಥ:
ನರ: ಮನುಷ್ಯ; ಮೃಗ: ಪ್ರಾಣಿ; ಅಧಮ: ಕೀಳು, ನೀಚ; ವರ್ಷ: ಭೂ ಮಂಡಲದ ಒಂಭತ್ತು ವಿಭಾಗಗಳಲ್ಲಿ ಒಂದು; ಭೂಮಿ: ಇಳೆ; ವರುಷ: ಸಂವತ್ಸರ; ಅಂತರ: ವರೆಗೂ; ನಪುಂಸಕ: ಕೊಜ್ಜೆ, ಷಂಡ, ಖೋಜಾ; ಚರಿಸು: ಓಡಾಡು; ನಿರಂತರ: ಎಡೆಬಿಡದ, ಸತತವಾಗಿ; ಆಯ: ಪರಿಮಿತಿ; ಹರಿ: ವಿಷ್ಣು; ಮರೆಹೋಗು: ಶರಣಿಗೆ ತೆರಳು, ಸಹಾಯ ಬೇಡು; ಹರ: ಶಿವ; ಅನುಸರಿಸು: ಹಿಂಬಾಲಿಸು; ಅಯ್ಯ: ತಂದೆ; ಹೇಳು: ತಿಳಿಸು; ನಿರುತ: ದಿಟ, ಸತ್ಯ, ನಿಶ್ಚಯ; ತಪ್ಪು: ಸರಿಯಿಲ್ಲದ; ಹೋಗು: ತೆರಳು; ಮೊಗ: ಮುಖ; ಚಪಲೆ: ಚಂಚಲೆ;

ಪದವಿಂಗಡಣೆ:
ನರ+ಮೃಗ+ಅಧಮ +ನಿಮ್ಮ +ಭಾರತ
ವರುಷ +ಭೂಮಿಯೊಳ್+ಒಂದು+ ವರುಷಾಂ
ತರ+ ನಪುಂಸಕನಾಗಿ+ ಚರಿಸು +ನಿರಂತರ್+ಆಯದಲಿ
ಹರಿಯ +ಮರೆಹೊಗು +ಹರನ +ನೀನ್+ಅನು
ಸರಿಸು +ನಿಮ್ಮಯ್ಯಂಗೆ +ಹೇಳಿದು
ನಿರುತ +ತಪ್ಪದು +ಹೋಗೆನುತ +ಮೊಗದಿರುಹಿದಳು +ಚಪಲೆ

ಅಚ್ಚರಿ:
(೧) ಊರ್ವಶಿಯ ಶಾಪ – ನಿಮ್ಮ ಭಾರತವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು ನಿರಂತರಾಯದಲಿ
(೨) ಊರ್ವಶಿಯು ಬಯ್ಯುವ ಪರಿ – ನರಮೃಗಾಧಮ
(೩) ವರುಷ – ೨ ಸಾಲಿನ ಮೊದಲ ಹಾಗು ಕೊನೆ ಪದ

ಪದ್ಯ ೪೨: ಊರ್ವಶಿಯ ಮುಖಛಾಯೆ ಹೇಗಾಯಿತು?

ರಾಹು ತುಡುಕಿದ ಶಶಿಯೊ ಮೇಣ್ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತಸಿಂಹದ ಗುಹೆಯ ಮೃಗಮದವೊ
ಲೋಹಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ (ಅರಣ್ಯ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ರಾಹುವು ಹಿಡಿದ ಚಂದ್ರನಂತೆ, ಭಯಂಕರ ಸರ್ಪದ ಹೆಡೆಯ ಮಣಿಯಂತೆ, ಅತಿಯಾಗಿ ಬಿಸಿಮಾಡಿದ ಅಮೃತದಂತೆ, ಕೋಪಗೊಂಡ ಸಿಂಹದ ಹುಗೆಯಲ್ಲಿರುವ ಕಸ್ತೂರಿಯಂತೆ, ಕತ್ತಿಯ ಅಲಗಿಗೆ ಲೇಪಿಸಿದ ಜೇನು ತುಪ್ಪದಂತೆ, ವಿಷಪೂರಿತ ಕಜ್ಜಾಯದಂತೆ, ಊರ್ವಶಿಯ ರೂಪ ಮನೋಹರವೂ ಭಯಂಕರವೂ ಆಗಿತ್ತು.

ಅರ್ಥ:
ರಾಹು: ನವಗ್ರಹಗಳಲ್ಲಿ ಒಂದು, ಬೆಂಕಿ; ತುಡುಕು: ಬೇಗನೆ ಹಿಡಿಯುವುದು; ಶಶಿ: ಚಂದ್ರ; ಮೇಣ್: ಮತ್ತು, ಅಥವಾ; ರೌದ್ರ: ಭಯಂಕರ; ಅಹಿ: ಹಾವು; ಮಸ್ತಕ: ತಲೆ; ಮಾಣಿಕ: ಬೆಲೆಬಾಳುವ ಮಣಿ; ಕಡುಗು: ತೀವ್ರವಾಗು; ಅಮೃತ: ಸುಧೆ; ಕುಪಿತ: ಕೋಪಗೊಂಡ; ಸಿಂಹ: ಕೇಸರಿ; ಗುಹೆ: ಗವಿ; ಮೃಗ: ಪ್ರಾಣಿ, ಕಸ್ತ್ರೂರಿಮೃಗ, ಜಿಂಕೆ; ಮದ: ಅಹಂಕಾರ; ಲೋಹ: ಕಬ್ಬಿಣ; ಧಾರೆ: ಕತ್ತಿಯ ಅಲಗು; ಮಧು: ಜೇನು; ಕಳಿತ: ಪೂರ್ಣ ಹಣ್ಣಾದ; ಹಲಾಹಳ: ವಿಷ; ಕಜ್ಜಾಯ: ಸಿಹಿತಿಂಡಿ, ಅತಿರಸ; ರೂಹು: ರೂಪ; ಸುಮನೋಹರ: ಚೆಲುವು; ಭಯಂಕರ: ಘೋರವಾದ; ಸುರಸತಿ: ಅಪ್ಸರೆ;

ಪದವಿಂಗಡಣೆ:
ರಾಹು+ ತುಡುಕಿದ+ ಶಶಿಯೊ +ಮೇಣ್+ರೌದ್ರ
ಅಹಿ+ ಮಸ್ತಕ+ ಮಾಣಿಕವೊ +ಕಡು
ಗಾಹಿನ್+ಅಮೃತವೊ +ಕುಪಿತ+ಸಿಂಹದ +ಗುಹೆಯ +ಮೃಗ+ಮದವೊ
ಲೋಹಧಾರೆಯ+ ಮಧುವೊ +ಕಳಿತ +ಹ
ಲಾಹಳದ+ ಕಜ್ಜಾಯವ್+ಎನಿಸಿತು
ರೂಹು +ಸುಮನೋಹರ +ಭಯಂಕರವಾಯ್ತು +ಸುರಸತಿಯ

ಅಚ್ಚರಿ:
(೧) ವೈರುಧ್ಯಗಳನ್ನು ಸೂಚಿಸುವ ಪದ್ಯ, ಉಪಮಾನಗಳ ಬಳಕೆ – ರಾಹು ತುಡುಕಿದ ಶಶಿಯೊ, ಮೇಣ್ರೌದ್ರಾಹಿ ಮಸ್ತಕ ಮಾಣಿಕವೊ, ಕಡುಗಾಹಿನಮೃತವೊ, ಕುಪಿತಸಿಂಹದ ಗುಹೆಯ ಮೃಗಮದವೊ, ಲೋಹಧಾರೆಯ ಮಧುವೊ, ಕಳಿತ ಹಲಾಹಳದ ಕಜ್ಜಾಯ