ಪದ್ಯ ೩೫: ಅರ್ಜುನನು ಊರ್ವಶಿಗೆ ತೆರಳಲೇಕೆ ಹೇಳಿದನು?

ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ಧೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ
ಖೋಡಿಯೇಕಿದಕವ್ವೆ ಮಕ್ಕಳ
ನೋಡ ಬಂದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯಂಗೈಸಿ ನೀವೆಂದ (ಅರಣ್ಯ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ನಿಮ್ಮೊಡನೆ ವ್ಯರ್ಥವಾಗಿ ತರ್ಕಮಾಡಲಾರೆ, ನೀವೂ ನನ್ನನ್ನು ಕಾಡಬೇಡಿ, ಧೈರ್ಯದ ಕವಚವನ್ನು ತೊಟ್ಟು ನಿಂತರೆ ಹೂಬಾಣಗಳು ನಾಟುವವೇ? ನೀನು ತಾಯಿಯಾಗಿ ಮಗನನ್ನು ನೋಡಲು ಬಂದರೆ ನಿನಗೇನೂ ಕಳಂಕ ಬರುವುದಿಲ್ಲ, ತಿಳಿದವರು ಕೆಟ್ಟದಾಗಿ ಮಾತನಾಡುವುದಿಲ್ಲ, ನೀವಿನ್ನು ಹಿಂದಿರುಗಿ ಎಂದು ಅರ್ಜುನನು ಊರ್ವಶಿಗೆ ಹೇಳಿದನು.

ಅರ್ಥ:
ಕಾಡು: ಒತ್ತಾಯಮಾಡು; ಮುರಿ: ಸೀಳು; ಮನ: ಮನಸ್ಸು; ಧೈರ್ಯ: ದಿಟ್ಟತನ, ದೃಢತೆ; ಜೋಡು: ಜೊತೆ, ಜೋಡಿ; ತೊಟ್ಟು: ಹೊದ್ದು; ಇದಿರು: ಎದುರು; ನಿಲೆ: ನಿಲ್ಲು; ನನೆ:ಹೂವು; ಅಂಬು: ಬಾಣ; ನಾಟು: ತಾಗು; ಖೋಡಿ: ದುರುಳತನ, ನೀಚತನ; ಅವ್ವೆ: ತಾಯಿ; ಮಕ್ಕಳು: ಕುಮಾರ; ನೋಡು: ವೀಕ್ಷಿಸು; ಬಂದರೆ: ಆಗಮಿಸು; ಬೇರೆ: ಅನ್ಯ; ಕಷ್ಟ: ತೊಂದರೆ; ಆಡು: ಮಾತಾಡು, ನುಡಿ; ಬಲ್ಲವರು: ತಿಳಿದವರು; ಬಿಜಯಂಗೈಸಿ: ದಯಮಾಡಿ, ತೆರಳು;

ಪದವಿಂಗಡಣೆ:
ಕಾಡಲಾಗದು +ನಿಮ್ಮೊಡನೆ +ಮುರಿ
ದಾಡಲಮ್ಮೆನು +ಮನಕೆ+ ಧೈರ್ಯದ
ಜೋಡ +ತೊಟ್ಟ್+ಇದಿರಾಗಿ +ನಿಲೆ +ನನೆಯಂಬು +ನಾಟುವುದೆ
ಖೋಡಿಯೇಕ್_ಇದಕ್+ಅವ್ವೆ +ಮಕ್ಕಳ
ನೋಡ +ಬಂದರೆ +ಬೇರೆ +ಕಷ್ಟವನ್
ಆಡುವರೆ +ಬಲ್ಲವರು +ಬಿಜಯಂಗೈಸಿ +ನೀವೆಂದ

ಅಚ್ಚರಿ:
(೧) ಕಾಮನನ್ನು ಗೆಲ್ಲುವ ಪರಿ – ಧೈರ್ಯದ ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ

ಪದ್ಯ ೩೪: ಊರ್ವಶಿಯು ಯಾವ ತಾಪದಿಂದ ಬಳಲುತ್ತಿದ್ದಳು?

ತಿಳುಹಿದೊಡೆ ಸುರಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳಕಣಾ ನಿಷ್ಕರುಣಿ ನೀ ಸೌಭಾಗ್ಯಗರ್ವದಲಿ
ಒಲುಮೆಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ (ಅರಣ್ಯ ಪರ್ವ, ೯ ಸಂಧಿ, ೩೪ ಪದ್ಯ)

ತಾತ್ಪರ್ಯ:
ನಾನು ಬಾಯಿ ಬಿಟ್ಟು ಹೇಳಿದರೆ, ಸ್ವರ್ಗಲೋಕದವರು ಬಾಯಿ ಬಡುಕಿಯರು ಎಂದು ಹೇಳುತ್ತೀಯ. ಆದರೆ ಕಾಮನು ಮಹಾ ನೀಚನು, ನೀನೋ ಮಹಾ ಸೌಭಾಗ್ಯಶಾಲಿ ಎಂಬ ಗರ್ವದಿಂದ ಕರುಣೆಯನ್ನೇ ಕಳೆದುಕೊಂಡಿರುವೆ. ನನಗಾದರೋ ಛಲ ಹುಟ್ಟಿದೆ. ಮನ್ಮಥನ ಪುಷ್ಪಬಾಣಗಳು ನನ್ನ ಅಂತರಂಗವನ್ನು ಹೊಕ್ಕಿವೆ, ನನ್ನ ಮನಸ್ಸು ಅಳುಕಿ ವಿರಹತಾಪಕ್ಕೆ ಪಕ್ಕಾಗಿದೆ ಎಂದು ಊರ್ವಶಿ ಹೇಳಿದಳು.

ಅರ್ಥ:
ತಿಳುಹಿ: ತಿಳಿಸು, ಗೋಚರಿಸು; ಸುರಲೋಕ: ಸ್ವರ್ಗ; ಗಳಹು: ಪ್ರಲಾಪಿಸು, ಹೇಳು; ಎಂಬೆ: ಹೇಳುವೆ; ಮನ್ಮಥ: ಕಾಮ; ಖಳ: ದುಷ್ಟ; ನಿಷ್ಕರುಣಿ: ದಯೆಯಿಲ್ಲದವ; ಸೌಭಾಗ್ಯ: ಅದೃಷ್ಟವಂತ; ಗರ್ವ: ಸೊಕ್ಕು, ಹೆಮ್ಮೆ; ಒಲುಮೆ: ಪ್ರೀತಿ; ವಾಸಿ: ಛಲ, ಹಠ; ಕಂದೊಳಸು: ಕಕ್ಕಾಬಿಕ್ಕಿಯಾಗು; ಕಾಮ: ಮನ್ಮಥ; ಶರ: ಬಾಣ; ಮನ: ಮನಸ್ಸು; ಅಳುಕು: ಹೆದರು; ಕೆಡಹು: ಅವ್ಯವಸ್ಥಿತವಾಗು, ಹದಗೆಡು; ವಿರಹ: ಅಗಲಿಕೆ, ವಿಯೋಗ; ತಾಪ: ಬಿಸಿ, ಶಾಖ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ತಿಳುಹಿದೊಡೆ +ಸುರಲೋಕದವರ್+ಅತಿ
ಗಳಹೆಯರಲಾ+ಎಂಬೆ +ಮನ್ಮಥ
ಖಳ+ಕಣಾ +ನಿಷ್ಕರುಣಿ+ ನೀ +ಸೌಭಾಗ್ಯ+ಗರ್ವದಲಿ
ಒಲುಮೆ+ಬಿದ್ದುದು +ವಾಸಿಯಲಿ +ಕಂ
ದೊಳಸುಗೊಂಡುದು+ ಕಾಮಶರ+ ಮನವ್
ಅಳುಕೆ +ಕೆಡಹಿತು+ ವಿರಹ+ತಾಪದಲ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಮನ್ಮಥನನ್ನು ವರ್ಣಿಸುವ ಪರಿ – ಮನ್ಮಥ ಖಳಕಣಾ ನಿಷ್ಕರುಣಿ
(೨) ಊರ್ವಶಿಯನ್ನು ಆವರಿಸಿದ ತಾಪ – ಕಾಮಶರ ಮನವಳುಕೆ ಕೆಡಹಿತು ವಿರಹತಾಪದಲ್

ಪದ್ಯ ೩೩: ಯಾರನ್ನು ಯಾವಾಗ ಸುಟ್ಟುಹಾಕಬೇಕು?

ಸರಸಿಜದ ಮಧು ಮಧುಕರನನನು
ಕರಿಸಿದಡೆ ಚಂದ್ರಿಕೆ ಚಕೋರನ
ವರಿಸಿದರೆ ನಿಧಿ ಲಕ್ಷ್ಮಿ ಸುಳಿದರೆ ನಯನವೀಧಿಯಲಿ
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚಂದ್ರಿಕೆಯನಾ ನಿಧಿಯನಾ ವಧುವ (ಅರಣ್ಯ ಪರ್ವ, ೯ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕಮಲದ ಮಕರಂದವು ದುಂಬಿಯನ್ನು ಹುಡುಕಿಕೊಂಡು ಹೋದರೆ? ಬೆಳದಿಂಗಳು ಚಕೋರವನ್ನು ಬಯಸಿ ಹೋದರೆ? ನಿಧಿಲಕ್ಷ್ಮಿಯು ತಾನಾಗಿ ಬಂದು ಕಣ್ಣೆದುರು ಸುಳಿದರೆ? ಚೆಲುವೆಯು ಮುಂದುಬಿದ್ದು ಪುರುಷನನ್ನು ಹುಡುಕಿದರೆ, ಯಾರಾದರೂ ತಿರಸ್ಕರಿಸುವರೇ? ಹಾಗೆ ತಿರಸ್ಕರಿಸಿದರೆ, ಅಂತಹ ಕಮಲವನ್ನು, ಬೆಳದಿಂಗಳನ್ನೂ, ನಿಧಿಯನ್ನೂ, ಚೆಲುವೆಯನ್ನೂ ಸುಡಬೇಕು ಎಂದು ಊರ್ವಶಿಯು ಅರ್ಜುನನಿಗೆ ಹೇಳಿದಳು.

ಅರ್ಥ:
ಸರಸಿಜ: ಕಮಲ; ಮಧು: ಜೇನು; ಮಧುಕರ: ದುಂಬಿ, ಭ್ರಮರ; ಕರಿಸು: ಬರೆಮಾಡು; ಚಂದ್ರಿಕೆ: ಚಂದ್ರ, ಶಶಿ; ಚಕೋರ: ಚಾತಕ ಪಕ್ಷಿ; ವರಿಸು: ಬರುವಂತೆ ಮಾಡು; ನಿಧಿ: ಐಶ್ವರ್ಯ; ಲಕ್ಷ್ಮಿ: ಶ್ರೀ,ಸಿರಿ; ಸುಳಿ: ಆವರಿಸು, ಮುತ್ತು; ನಯನ: ಕಣ್ಣು; ವೀಧಿ: ದಾರಿ; ಗರುವೆ: ಚೆಲುವೆ; ಮೇಲೆ:ಸಮೀಪವರ್ತಿಯಾಗಿ; ಪುರುಷ: ಗಂಡಸು; ಅರಸು: ಬಯಸು; ಜಾರು: ಕೆಳಕ್ಕೆ ಬೀಳು; ಸುಡು: ಸುಟ್ಟು ಹಾಕು, ದಹಿಸು; ವಧು: ಹೆಣ್ಣು;

ಪದವಿಂಗಡಣೆ:
ಸರಸಿಜದ +ಮಧು +ಮಧುಕರನನನು
ಕರಿಸಿದಡೆ+ ಚಂದ್ರಿಕೆ +ಚಕೋರನ
ವರಿಸಿದರೆ+ ನಿಧಿ ಲಕ್ಷ್ಮಿ+ ಸುಳಿದರೆ +ನಯನ+ವೀಧಿಯಲಿ
ಗರುವೆಯರು +ಮೇಲಿಕ್ಕಿ+ ಪುರುಷನನ್
ಅರಸಿದರೆ +ಜಾರುವರೆ+ ಸುಡಲ್+ಆ
ಸರಸಿಜವನ್+ಆ+ ಚಂದ್ರಿಕೆಯನ್+ಆ+ ನಿಧಿಯನ್+ಆ+ ವಧುವ

ಅಚ್ಚರಿ:
(೧) ಕಣ್ಣೆದುರು ಎಂದು ಹೇಳಲು – ನಯನ ವೀಧಿಯಲಿ ಪದದ ಬಳಕೆ
(೨) ಉಪಮಾನದ ಪ್ರಯೋಗ – ಸರಸಿಜದ ಮಧು ಮಧುಕರನನನು ಕರಿಸಿದಡೆ; ಚಂದ್ರಿಕೆ ಚಕೋರನ ವರಿಸಿದರೆ; ನಿಧಿಲಕ್ಷ್ಮಿ ಸುಳಿದರೆ ನಯನವೀಧಿಯಲಿ; ಗರುವೆಯರು ಮೇಲಿಕ್ಕಿ ಪುರುಷನ ನರಸಿದರೆ
(೩) ವೀಧಿ, ನಿಧಿ – ಪ್ರಾಸ ಪದ
(೪) ಅಕ್ಷರದ ಜೋಡಿ ಪದಗಳು – ಮಧು ಮಧುಕರ; ಚಂದ್ರಿಕೆ ಚಕೋರ

ಪದ್ಯ ೩೨: ಊರ್ವಶಿಯು ವಿನಯದಿ ಹೇಗೆ ಉತ್ತರಿಸಿದಳು?

ತಾಯನೇಮದಲೈವರಿಗೆ ಕಮ
ಲಾಯತಾಕ್ಷಿಅಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ
ರಾಯನಟ್ಟಲು ಬಂದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆಯೆಂದಳು ವನಿತೆ ವಿನಯದಲಿ (ಅರಣ್ಯ ಪರ್ವ, ೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನ, ತಾಯಿಯ ಮಾತು ಕೇಳಿ ನೀವೈವರು ದ್ರೌಪದಿಯನ್ನು ಕೂಡಿದಿರಲ್ಲವೇ? ಇಂದ್ರನಾದರೋ ನಿಮ್ಮ ತಂದೆ, ತಂದೆಯ ಮಾತನ್ನು ಮೀರಲು ಬರುತ್ತದೆಯೇ? ಇಂದ್ರನು ಕಳಿಸಿದುದರಿಂದ ನಾನು ಬಂದೆ, ಮನ್ಮಥನು ತನ್ನ ಬಾಣಗಳಿಂದ ನನ್ನನ್ನು ಕಗ್ಗೊಲೆ ಮಾಡುತ್ತಿದ್ದಾನೆ, ಅದನ್ನು ತಪ್ಪಿಸುವ ಉಪಾಯವು ನಿನಗೆ ತಿಳಿದಿದೆ ಎಂದು ಊರ್ವಶಿಯು ವಿನಯದಿಂದ ಹೇಳಿದಳು.

ಅರ್ಥ:
ತಾಯ: ಮಾತೆ; ನೇಮ: ನಿಯಮ; ಕಮಲಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ದ್ರೌಪದಿ); ಕೂಟ: ಜೊತೆ; ಸುರರಾಯ: ದೇವತೆಗಳ ರಾಜ (ಇಂದ್ರ); ಅಯ್ಯ: ತಂದೆ; ವಿಲಂಘ್ಯ: ಮೀರು; ಪಿತೃ: ತಂದೆ; ವಚನ: ನುಡಿ, ಮಾತು; ರಾಯ: ರಾಜ; ಅಟ್ಟು: ಕಳಿಸು; ಬಂದೆ: ಆಗಮಿಸಿದೆ; ಕುಸುಮಾಯುಧ: ಮನ್ಮಥ; ಕಗ್ಗೊಲೆ: ಸಾಯಿಸು, ಸಾವು; ಕೆದರು: ಹರಡು; ಉಪಾಯ: ಯುಕ್ತಿ; ವನಿತೆ: ಹೆಣ್ಣು; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ತಾಯ+ನೇಮದಲ್+ಐವರಿಗೆ+ ಕಮ
ಲಾಯತಾಕ್ಷಿಯ +ಕೂಟವೇ +ಸುರ
ರಾಯ +ನಿಮ್+ಅಯ್ಯನು+ ವಿಲಂಘ್ಯವೆ +ನಿನಗೆ +ಪಿತೃವಚನ
ರಾಯನ್+ಅಟ್ಟಲು+ ಬಂದೆ+ನೀ+ ಕುಸು
ಮಾಯುಧನ +ಕಗ್ಗೊಲೆಯ +ಕೆದರುವ್
ಉಪಾಯವನು +ನೀ +ಬಲ್ಲೆ+ಎಂದಳು +ವನಿತೆ +ವಿನಯದಲಿ

ಅಚ್ಚರಿ:
(೧) ಅರ್ಜುನನಿಗೆ ತಿರುಗುತ್ತರವ ನೀಡುವ ಪರಿ – ವಿಲಂಘ್ಯವೆ ನಿನಗೆ ಪಿತೃವಚನ
(೨) ಅರ್ಜುನನ ಮನಸ್ಸನ್ನು ತಿರುಗಿಸುವ ಪರಿ – ಕುಸುಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆ

ಪದ್ಯ ೩೧: ಊರ್ವಶಿಗೆ ಅರ್ಜುನನ ಉತ್ತರವೇನು?

ತಾಯ ನೇಮದಲಂದು ಕಮಲದ
ಳಾಯತಾಕ್ಷಿಯ ಸಂಗವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲಂಘ್ಯವಲೆ
ಕಾಯಸೌಖ್ಯಕೆ ಕಾಮತತ್ವವಿ
ಡಾಯಿ ತಪ್ಪದೆ ವೇಡೆಗೊಂಡುನ
ವಾಯಿಯಲಿ ದುರ್ಗತಿಗೆ ದೂವಾಳಿಸುವನಲ್ಲೆಂದ (ಅರಣ್ಯ ಪರ್ವ, ೯ ಸಂಧಿ, ೩೧ ಪದ್ಯ)

ತಾತ್ಪರ್ಯ:
ನಮ್ಮ ತಾಯಿಯ ಆಜ್ಞೆಯಂತೆ ಐವರೂ ದ್ರೌಪದಿಯನ್ನು ವರಿಸಿದೆವು. ತಾಯಿಯ ಮಾತನ್ನು ಮೀರಲಾಗದು. ಆದರೆ ದೇಹ ಸುಖಕ್ಕಾಗಿ ಕಾಮ ಸಂಭ್ರಮವು ಬಲೆ ಬೀಸಿದಾಗು ಅದಕ್ಕೆ ಬಲಿಯಾಗಿ ದುರ್ಗತಿಗೆ ಧಾವಿಸುವುದಿಲ್ಲ ಎಂದು ಅರ್ಜುನನು ಊರ್ವಶಿಗೆ ತಿಳಿಸಿದನು.

ಅರ್ಥ:
ತಾಯ: ತಾಯಿ, ಮಾತೆ; ನೇಮ: ನಿಯಮ; ಕಮಲದಳಾಯತಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ, ದ್ರೌಪದಿ); ಸಂಗ: ಜೊತೆ; ತಪ್ಪು: ಸರಿಯಿಲ್ಲದು; ಜನನಿ: ತಾಯಿ; ನುಡಿ: ಮಾತು; ಅಂಘ್ಯ: ಮೀರುವುದು; ಕಾಯ: ದೇಹ; ಸೌಖ್ಯ: ಸಂತೋಷ; ಕಾಮ: ಮೋಹ; ತತ್ವ: ನಿಯಮ, ಅರ್ಥ; ವಿಡಾಯ: ಒಯ್ಯಾರ, ಆಧಿಕ್ಯ; ವೇಡೆ: ಆಕ್ರಮಣ, ಆವರಣ; ನವಾಯಿ: ಠೀವಿ; ದುರ್ಗತಿ: ಕೆಟ್ಟ ಸ್ಥಿತಿ, ಹೀನ ಸ್ಥಿತಿ; ದೂವಾಳಿ: ವೇಗವಾಗಿ ಓಡುವುದು;

ಪದವಿಂಗಡಣೆ:
ತಾಯ +ನೇಮದಲ್+ಅಂದು +ಕಮಲದ
ಳಾಯತಾಕ್ಷಿಯ +ಸಂಗವ್+ಐವರಿಗ್
ಆಯಿತ್+ಅದು+ ತಪ್ಪೇನು+ ಜನನಿಯ+ ನುಡಿಯಲ್+ಅಂಘ್ಯವಲೆ
ಕಾಯಸೌಖ್ಯಕೆ +ಕಾಮತತ್ವ+ವಿ
ಡಾಯಿ +ತಪ್ಪದೆ +ವೇಡೆ+ಕೊಂಡು+ನ
ವಾಯಿಯಲಿ +ದುರ್ಗತಿಗೆ +ದೂವಾಳಿಸುವನಲ್ಲೆಂದ

ಅಚ್ಚರಿ:
(೧) ತಾಯ, ಜನನಿ – ಸಮನಾರ್ಥಕ ಪದ
(೨) ದ್ರೌಪದಿಯನ್ನು ಕಮಲದಳಾಯತಾಕ್ಷಿ ಎಂದು ಕರೆದಿರುವುದು