ಪದ್ಯ ೨೫: ಊರ್ವಶಿ ಹೇಗೆ ಭರತಕುಲದ ಜನನಿ?

ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾಯೆನುತ ವಿನಯದಲಿ ನರ ನುಡಿದ (ಅರಣ್ಯ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ತಾಯಿ, ನೀವು ನಮ್ಮ ಪೂರ್ವಜರಾದ ಪುರೂರವನ ಪತ್ನಿಯಾಗಿದ್ದಿರಿ, ನಿಮಗೆ ಆಯುವೆಂಬ ಮಗನು ಹುಟ್ಟಿದನು, ಆಯಿವಿಗೆ ನಹುಷನು ಮಗ. ಈ ವೀರ ರಾಜರ ಪರಂಪರೆಯಲ್ಲಿ ಯಾರು ಯಾರು ಹುಟ್ಟಿದರು, ನಾವು ಯಾರ ಮಕ್ಕಳೆಂದು ನೀವು ವಿಚಾರಿಸಲಿಲ್ಲವೇ? ಎಂದು ಅರ್ಜುನನು ವಿನಯದಿಂದ ಕೇಳಿದನು.

ಅರ್ಥ:
ನಾರಿ: ಹೆಣ್ಣು; ಪೂರ್ವ: ಹಿಂದೆ; ಸತಿ: ಹೆಂಡತಿ; ಬಳಿಕ: ನಂತರ; ಕುಮಾರ: ಮಗ; ಜನಿಸು: ಹುಟ್ಟು; ಉದಿಸು: ಹುಟ್ಟು; ವೀರ: ಶೂರ; ರಾಜ: ನೃಪ; ಪರಂಪರೆ: ಪರಿವಿಡಿ, ಹಿನ್ನಲೆ, ಕುಲ; ಬರಲು: ಆಗಮಿಸು; ವಿಚಾರಿಸು: ತಿಳಿದುಕೊಳ್ಳು; ವಿನಯ: ಸೌಜನ್ಯ; ನರ: ಅರ್ಜುನ; ನುಡಿ: ಮಾತಾಡು;

ಪದವಿಂಗಡಣೆ:
ನಾರಿ +ನೀ +ಪೂರ್ವದಲಿ +ನಮ್ಮ +ಪು
ರೂರವನ +ಸತಿ +ನಿನಗೆ +ಬಳಿಕ +ಕು
ಮಾರ +ಜನಿಸಿದನ್+ಆಯುವ್+ಆತನೊಳ್+ಉದಿಸಿದನು +ನಹುಷ
ವೀರ+ರಾಜ +ಪರಂಪರೆಯು +ಬರಲ್
ಆರಿಗ್+ಆವ್+ಉದಿಸಿದೆವು +ನಮ್ಮ +ವಿ
ಚಾರಿಸಿದುದ್+ಇಲ್ಲಾ+ಎನುತ +ವಿನಯದಲಿ +ನರ+ ನುಡಿದ

ಅಚ್ಚರಿ:
(೧) ಊರ್ವಶಿಯ ಹಿನ್ನಲೆ – ನಾರಿ ನೀ ಪೂರ್ವದಲಿ ನಮ್ಮ ಪುರೂರವನ ಸತಿ

ಪದ್ಯ ೨೪: ಅರ್ಜುನನು ಊರ್ವಶಿಗೆ ಏನುತ್ತರ ನೀಡಿದನು?

ಶಿವ ಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆ ವಾ
ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ
ಎವಗೆ ಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋ
ದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ (ಅರಣ್ಯ ಪರ್ವ, ೯ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಿವ ಶಿವಾ ಈ ಮಾತುಗಳನ್ನು ನೀವೀಕೆ ಆಡುತ್ತಿದ್ದೀರಿ, ಕಾಮಾಕರ್ಷಣೆಯಿಂದ ನಿಮಗೆ ತಿಳಿವಿಲ್ಲದಿದ್ದರೆ, ನನಗೂ ಇಲ್ಲವೆಂದು ತಿಳಿದಿರಾ? ಇಂದ್ರನ ಆಜ್ಞೆ, ಚಿತ್ರಸೇನನ ಮಾತುಗಳು ಬದಿಗೊತ್ತಿರಿ, ನನಗೆ ನೀವು ಬಂದಿರುವ ಕರ್ತವ್ಯದಲ್ಲಿ ಮನಸ್ಸು ಹೇಗೆತಾನೆ ಒಗ್ಗೀತು? ನಮ್ಮ ಭರತವಂಶಕ್ಕೆ ನೀವು ಜನನಿಯಲ್ಲವೇ ಎಂದು ಅರ್ಜುನನು ವಿನಯದಿಂದ ಊರ್ವಶಿಗೆ ಹೇಳಿದನು.

ಅರ್ಥ:
ಮಾತು: ನುಡಿ; ಕಾಮ: ಮನ್ಮಥ; ಬವಣೆ: ಕಷ್ಟ, ತೊಂದರೆ; ಅರಿ: ತಿಳಿ; ವಾಸವ: ಇಂದ್ರ; ನೇಮ: ನಿಯಮ; ನುಡಿ: ಮಾತು; ಕರ್ತವ್ಯ: ಮಾಡಬೇಕಾದುದ ಕೆಲಸ; ಮನ: ಮನಸ್ಸು; ಸಂಭವಿಸು: ಹುಟ್ಟು; ವಂಶ: ಕುಲ; ಉದ್ಭವ: ಹುಟ್ಟು; ಜನನಿ: ತಾಯಿ; ವಿನಯ: ಸೌಜನ್ಯ, ಆದರ; ನರ: ಅರ್ಜುನ; ನುಡಿ: ಮಾತಾಡು;

ಪದವಿಂಗಡಣೆ:
ಶಿವ +ಶಿವ+ಈ+ಮಾತೇಕೆ +ಕಾಮನ
ಬವಣೆಯಲಿ +ನೀವ್+ಅರಿಯದಿರೆ+ ವಾ
ಸವನ+ ನೇಮವು +ಚಿತ್ರಸೇನನ+ ನುಡಿಗಳ್+ಅಂತಿರಲಿ
ಎವಗೆ+ ಕರ್ತವ್ಯದಲಿ+ ಮನ ಸಂ
ಭವಿಸುವುದೆ +ನೀವ್+ಎಮ್ಮ +ವಂಶೋ
ದ್ಭವಕೆ +ಜನನಿಯಲಾ+ಎನುತ +ವಿನಯದಲಿ +ನರ+ ನುಡಿದ

ಅಚ್ಚರಿ:
(೧) ಅರ್ಜುನ ಊರ್ವಶಿಯನ್ನು ಕಂಡ ಬಗೆ – ಎವಗೆ ಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ

ಪದ್ಯ ೨೩: ಊರ್ವಶಿಯು ಅರ್ಜುನನನ್ನು ಏನೆಂದು ಪ್ರಶ್ನಿಸಿದಳು?

ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟಕ್ಕರಿ
ಗಳೆವುದೇ ವಿಟಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದು ಮುಖಿ (ಅರಣ್ಯ ಪರ್ವ, ೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಊರ್ವಶಿಯು ಅರ್ಜುನನೊಂದಿಗೆ ಮಾತನಾಡುತ್ತಾ, ಎಲವೋ ಅರ್ಜುನ, ಇಂದ್ರನು ಹೇಳಿದುದರಿಂದ, ಚಿತ್ರಸೇನನು ನನ್ನ ಬೆನ್ನುಹತ್ತಿ ಬಿಡದೆ ಕಾಡಿದುದರಿಂದ ನಾನಿಲ್ಲಿಗೆ ಬಂದೆ, ಪ್ರೀತಿಸಿ ಬಂದ ತರುಣಿಯನ್ನು ತಿರಸ್ಕರಿಸುವದು ವಿಟರ ಧರ್ಮವೇ? ಅಯ್ಯೋ ನಾನು ಯಾರೆಂಬುದು ನಿನಗೆ ತಿಳಿಯದೇ? ಎಂದು ಅರ್ಜುನನನ್ನು ಪ್ರಶ್ನಿಸಿದಳು.

ಅರ್ಥ:
ರಾಯ: ರಾಜ; ಹೇಳಿಕೆ: ತಿಳಿಸು; ಅಂಡಲೆ: ಪೀಡೆ, ಕಾಡು; ಅಲುಗು: ಅಲ್ಲಾಡಿಸು, ಅದುರು; ನೆಟ್ಟು: ಒಳಹೊಕ್ಕು; ಕಾಮ: ಮನ್ಮಥ; ಶರ: ಬಾಣ; ಅಂತರಂಗ: ಆಂತರ್ಯ; ಒಲಿ: ಪ್ರೀತಿಸು; ಬಂದ: ಆಗಮಿಸು; ಅಬಲೆ: ಹೆಣ್ಣು; ಟಕ್ಕ: ವಂಚಕ; ವಿಟ: ಕಾಮುಕ, ವಿಷಯಾಸಕ್ತ; ಅಕಟಾ: ಅಯ್ಯೋ; ತಿಳಿ: ಅರಿವು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು, ಚೆಲುವೆ;

ಪದವಿಂಗಡಣೆ:
ಎಲವೊ+ ರಾಯನ +ಹೇಳಿಕೆಯಲ್+
ಅಂಡಲೆದನ್+ಎನ್ನನು +ಚಿತ್ರಸೇನಕನ್
ಅಲುಗಿ+ ನೆಟ್ಟವು+ ಕಾಮಶರವ್+ಎನ್+ಅಂತರಂಗದಲಿ
ಒಲಿದು+ ಬಂದ್+ಅಬಲೆಯರ +ಟಕ್ಕರಿ
ಕಳೆವುದೇ +ವಿಟ+ಧರ್ಮವ್+ಅಕಟಾ
ತಿಳಿಯಲಾ +ತಾನ್+ಆವಳ್+ಎಂಬುದನ್+ಎಂದಳ್+ಇಂದು ಮುಖಿ

ಅಚ್ಚರಿ:
(೧) ಊರ್ವಶಿಯು ಬಂದ ಕಾರಣ – ಅಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ
(೨) ವಿಟ ಧರ್ಮವಾವುದು – ಒಲಿದು ಬಂದಬಲೆಯರ ಟಕ್ಕರಿಗಳೆವುದೇ ವಿಟಧರ್ಮವ್?

ಪದ್ಯ ೨೨: ಊರ್ವಶಿಯು ಏಕೆ ಕರಗಿದಳು?

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತದು ವಾಮಪಾದವ
ನಕಟ ಕೆಟ್ಟೆನಲಾಯೆನುತ ಕರಗಿದಳು ನಳಿನಾಕ್ಷಿ (ಅರಣ್ಯ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅರ್ಜುನನ ಭಾವನೆಯನ್ನು ಕಂಡು, ಊರ್ವಶಿಯು ಅರ್ಜುನನನ್ನು ನೋಡಿ, ಇವನೇನು ಮತಿಹೀನನೋ, ಅಥವ ನಪುಂಸಕನೋ, ತಿಳುವಳಿಕೆಯಿಲ್ಲದವನೋ, ಬ್ರಾಹ್ಮಣನೋ, ಪರರಿಗೆ ಬಾಧೆಕೊಡುವ ಸ್ವಭಾವದವನೋ, ನೀಚನೋ, ದುಷ್ಟನೋ, ಮಾನವಾಕಾರವಿರುವ ಇನ್ನೇನೋ? ಮಹಾ ತಪಸ್ಸನ್ನು ಮಾಡಿದ ದೇವ ದಾನವರು ಬಂದು ತಮ್ಮ ಕಿರೀಟವನ್ನು ಎಡಪಾದಕ್ಕೆ ಇಟ್ಟು ನನ್ನನ್ನು ಬೇಡಿಕೊಳ್ಳುತ್ತಿದ್ದರು, ಅಂತಹ ನಾನು ಈಗ ಕೆಟ್ಟೆನಲ್ಲಾ ಎಂದು ಚಿಂತಿಸುತ್ತಾ ಊರ್ವಶಿಯು ಕರಗಿಹೋದಳು.

ಅರ್ಥ:
ವಿಕಳ:ಭ್ರಮೆ, ಭ್ರಾಂತಿ; ಮತಿ: ಬುದ್ಧಿ; ಮೇಣ್: ಅಥವ; ನಪುಂಸಕ: ಕೊಜ್ಜೆ, ಷಂಡ, ಖೋಜಾ, ನಿರ್ವೀರ್ಯ; ಜಡ: ಆಲಸ್ಯ, ಅಚೇತನ; ಶ್ರೋತ್ರಿ: ಬ್ರಾಹ್ಮಣ; ಬಾಧಕ: ತೊಂದರೆ ಕೊಡುವವ; ಖಳ: ಕ್ರೂರ; ಖೂಳ: ದುಷ್ಟ; ಮಾನವ: ನರ; ವಿಕಾರ: ಕುರೂಪ; ವಿಕಟ: ವಿಕಾರ, ಸೊಕ್ಕಿದ; ತಪಸ್ಸು: ಧ್ಯಾನ; ದೇವ: ಸುರರು; ದೈತ್ಯ: ರಾಕ್ಷಸ; ಮಕುಟ: ಕಿರೀಟ; ವಾಮಪಾದ: ಎಡ ಕಾಲು; ಅಕಟ: ಅಯ್ಯೋ; ಕೆಟ್ಟೆ: ಹಾಳಾಗು; ಕರಗು: ನೀರಾಗಿಸು, ಕನಿಕರ; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು;

ಪದವಿಂಗಡಣೆ:
ವಿಕಳಮತಿಯೋ +ಮೇಣ್+ಇವ +ನಪುಂ
ಸಕನೊ+ ಜಡನೋ +ಶ್ರೋತ್ರಿಯನೊ +ಬಾ
ಧಕನೊ+ ಖಳನೋ +ಖೂಳನೋ+ ಮಾನವ+ ವಿಕಾರವಿದೊ
ವಿಕಟ +ತಪಸಿನ +ದೇವ +ದೈತ್ಯರ
ಮಕುಟವಾಂತದು +ವಾಮಪಾದವನ್
ಅಕಟ+ ಕೆಟ್ಟೆನಲಾ+ಎನುತ +ಕರಗಿದಳು +ನಳಿನಾಕ್ಷಿ

ಅಚ್ಚರಿ:
(೧) ಅರ್ಜುನನನ್ನು ನೋಡಿದ ಬಗೆ – ವಿಕಳಮತಿ, ನಪುಂಸಕ, ಜಡ, ಶ್ರೋತ್ರಿ, ಬಾಧಕ, ಖಳ, ಖೂಳ, ವಿಕಾರ
(೨) ಊರ್ವಶಿಯ ಹಿರಿಮೆ – ವಿಕಟ ತಪಸಿನ ದೇವ ದೈತ್ಯರ ಮಕುಟವಾಂತದು ವಾಮಪಾದವ

ಪದ್ಯ ೨೧: ಊರ್ವಶಿಯು ಬ್ರಹ್ಮನನ್ನು ಜರೆದುದೇಕೆ?

ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಗೊಂಡೆನೆತ್ತಣ
ಕಾಕು ಮೂಳಗೆ ಕೋಳುವೋದೆನೊ ಕಾಮನೆಂಬುವಗೆ
ಲೋಕವರ್ತಕನಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ (ಅರಣ್ಯ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಚಿತ್ರಸೇನನು ಏಕಾದರೂ ನನಗೆ ಈ ಕೆಲಸವನ್ನು ಹೇಳಿದನೋ, ನಾನೇಕೆ ಇದಕ್ಕೆ ಒಪ್ಪಿಕೊಂಡೆನೋ, ಅರಿವಿಲ್ಲದ ನೀಚನಾದ ಕಾಮನೆನ್ನುವವನಿಗೆ ನಾನೇಕೆ ವಶಳಾದೆನೋ, ಲೋಕದಲ್ಲಿ ಎಲ್ಲರಂತೆ ವರ್ತಿಸದಿರುವ ಇವನನ್ನು ಬ್ರಹ್ಮನು ಏಕೆ ಹುಟ್ಟಿಸಿದನೋ, ನಾನೇಕೆ ಅರ್ಜುನನೇಕೆ ಎಂದು ಊರ್ವಶಿಯು ವಿಧಿಯನ್ನು ಬೈದು ನಿಟ್ಟುಸಿರಿಟ್ಟಳು.

ಅರ್ಥ:
ನುಡಿ: ಮಾತು; ಕೈಗೊಳ್ಳು: ಸ್ವೀಕರಿಸು; ಕಾಕು: ವ್ಯಂಗ್ಯ; ಮೂಳ: ತಿಳಿಗೇಡಿ, ಮೂಢ; ಕೋಳು:ಹೊಡೆತ, ಕೈಸೆರೆ; ಕಾಮ: ಮನ್ಮಥ; ಲೋಕ: ಜಗತ್ತು; ವರ್ತಕ: ವ್ಯಾಪಾರಿ; ವಿಧಿ: ಆಜ್ಞೆ, ಆದೇಶ, ನಿಯಮ; ನಿರ್ಮಿಸು: ರಚಿಸು; ನರ: ಅರ್ಜುನ; ಸುಯ್ದು: ನಿಟ್ಟುಸಿರು; ಬೈದು: ಜರೆ; ಕಮಲಜ: ಬ್ರಹ್ಮ;

ಪದವಿಂಗಡಣೆ:
ಏಕೆ +ನುಡಿದನೊ +ಚಿತ್ರಸೇನನದ್
ಏಕೆ +ನಾ +ಕೈಗೊಂಡೆನ್+ಎತ್ತಣ
ಕಾಕು +ಮೂಳಗೆ +ಕೋಳುವೋದೆನೊ+ ಕಾಮನೆಂಬುವಗೆ
ಲೋಕ+ವರ್ತಕನಲ್ಲದ್+ಇವನನ್
ಅದೇಕೆ +ವಿಧಿ +ನಿರ್ಮಿಸಿದನೋ +ನಾ
ನೇಕೆ +ನರನೇಕ್+ಎನುತ +ಸುಯ್ದಳು +ಬೈದು +ಕಮಲಜನ

ಅಚ್ಚರಿ:
(೧) ಏಕೆ, ನಾನೇಕೆ, ಅದೇಕೆ – ಪ್ರಶ್ನೆಗಳನ್ನು ಸೂಚಿಸುವ ಪದಗಳ ಬಳಕೆ
(೨) ಅರ್ಜುನನನ್ನು ಜರೆಯುವ ಪರಿ – ಲೋಕವರ್ತಕನಲ್ಲದಿವನನದೇಕೆ ವಿಧಿ ನಿರ್ಮಿಸಿದನೋ