ಪದ್ಯ ೧೫: ಊರ್ವಶಿಯು ಯಾರನ್ನು ನೋಡಿದಳು?

ಹೊಳೆವ ಮಣಿದೀಪಾಂಶುಗಳ ಮುಮ್
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣೆದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿನಿಂದಳು ತರುಣಿ ನೃಪಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ (ಅರಣ್ಯ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಊರ್ವಶಿಯ ಕಡೆಗಣ್ಣ ನೋಟಗಳು ಮಣಿದೀಪಗಳ ಬೆಳಗನ್ನು ತಿರಸ್ಕರಿಸಿದವು. ಅವಳ ದೇಹಕಾಂತಿಯು ಚಂದ್ರಕಾಂತ ಶಿಲೆಯ ಭಿತ್ತಿಯನ್ನು ಅಣಕಿಸಿತು. ತನ್ನ ಕೆಳದಿಯರ ಹೆಗಲ ಮೇಲೆ ಕೈಗಳನ್ನಿಟ್ಟು ಅರ್ಜುನನ ಅಂಗೋಪಾಂಗಗಳ ಮೇಲೆ ಮನಸಿಟ್ಟು ಕಣ್ಣುಗಳಿಂದ ನೋಡಿದಳು.

ಅರ್ಥ:
ಹೊಳೆ: ಕಾಂತಿ, ಪ್ರಕಾಶ; ಮಣಿ: ರತ್ನ; ದೀಪ: ಹಣತೆ; ಅಂಶು:ಕಿರಣ; ಮುಕ್ಕುಳಿಸು: ತಿರಸ್ಕರಿಸು; ಕಡೆ: ಕೊನೆ; ಕಣ್ಣು: ನಯನ; ಇಂದು: ಭಿತ್ತಿ: ಒಡೆಯುವುದು, ಸೀಳುವುದು; ಬೆಳಗು: ಹೊಳಪು, ಕಾಂತಿ; ಅಣೆ:ಹೊಡೆ, ತಿವಿ; ಬಹಳ: ತುಂಬ; ತನು: ದೇಹ; ಕಾಂತಿ: ಬೆಳಕು, ಹೊಳಪು; ಕೆಳದಿ: ಗೆಳತಿ, ಸ್ನೇಹಿತೆ; ಕಂಠ: ಕೊರಳು; ಕೈ: ಹಸ್ತ; ಇಳುಹು: ಇಡು; ತರುಣಿ: ಸುಂದರಿ, ಹೆಣ್ಣು; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ಅಂಗೋಪಾಂಗ: ಅಂಗಗಳು; ಹರಹು: ಹರಡು; ಕಣ್ಮನ: ದೃಷ್ಟಿ ಮತ್ತು ಮನಸ್ಸು; ಅಣೆ: ಹೊಡೆ, ತಿವಿ;

ಪದವಿಂಗಡಣೆ:
ಹೊಳೆವ +ಮಣಿದೀಪಾಂಶುಗಳ+ ಮು
ಕ್ಕುಳಿಸಿದವು +ಕಡೆ+ಕಂಗಳ್+ಇಂದೂ
ಪಳದ +ಭಿತ್ತಿಯ +ಬೆಳಗನ್+ಅಣೆದುದು +ಬಹಳ+ ತನುಕಾಂತಿ
ಕೆಳದಿಯರ +ಕಂಠದಲಿ +ಕೈಗಳನ್
ಇಳುಹಿ+ನಿಂದಳು +ತರುಣಿ +ನೃಪಕುಲ
ತಿಲಕನ್+ಅಂಗೋಪಾಂಗದಲಿ+ ಹರಹಿದಳು +ಕಣ್ಮನವ

ಅಚ್ಚರಿ:
(೧) ಅರ್ಜುನನನ್ನು ನೋಡುವ ಪರಿ – ಕೆಳದಿಯರ ಕಂಠದಲಿ ಕೈಗಳನಿಳುಹಿನಿಂದಳು ತರುಣಿ ನೃಪಕುಲ ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ
(೨) ಅರ್ಜುನನನ್ನು ಕರೆದ ಪರಿ – ನೃಪಕುಲತಿಲಕ
(೩) ಕ ಕಾರದ ತ್ರಿವಳಿ ಪದ – ಕೆಳದಿಯರ ಕಂಠದಲಿ ಕೈಗಳನಿಳುಹಿನಿಂದಳು

ಪದ್ಯ ೧೪: ಊರ್ವಶಿಯು ಮಣಿಮಂಚದ ಮೇಲೆ ಯಾರನ್ನು ಕಂಡಳು?

ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಪಲೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗಸುತನನು ಕಂಡಳಂಗನೆ ಮಣಿಯಮಂಚದಲಿ (ಅರಣ್ಯ ಪರ್ವ, ೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ಅರ್ಜುನನ ಅರಮನೆಯ ಬಾಗಿಲು ಬಾಗಿಲುಗಳಲ್ಲಿಯೂ ಕಡೆಗಣ್ಣಿನಿಂದ ನೋಡುತ್ತಿರುವ ಸುಂದರಿಯರು ಕಾವಲು ನಿಂತಿದ್ದರು. ಅರ್ಜುನನು ಮಲಗುವ ಮನೆಯ ಬಾಗಿಲಿನಲ್ಲಿ ಚಾಮರ ಬೀಸುವ ತಾಂಬೂಲದ ಚೀಲವನ್ನು ಹೊತ್ತ ತರುಣಿಯರು ನಿಂತಿದ್ದರು, ಮಹಾಸ್ವಾಭಿಮಾನಿಯಾದ ಊರ್ವಶಿಯು ಶಯ್ಯಾಗೃಹವನ್ನು ಹೊಕ್ಕು ಆದಿಶೇಷನ ಮೇಲೆ ಮಲಗಿದ ವಿಷ್ಣುವಿನಂತೆ ಮಣಿಮಂಚದ ಮೇಲೆ ಮಲಗಿದ್ದ ಅರ್ಜುನನನ್ನು ಕಂಡಳು.

ಅರ್ಥ:
ಬಾಗಿಲು: ಕದ; ನಿಂದು: ನಿಲ್ಲು; ಸೋಗೆ: ಕಣ್ಣಿನ-ತುದಿ, ಕುಡಿ, ಕಡೆ ಗಣ್ಣು; ಕಣ್ಣು: ನಯನ; ಅಬಲೆ: ಹೆಣ್ಣು; ಸೆಜ್ಜೆ: ಮಲಗುವ ಮನೆ, ಶಯ್ಯಾಗೃಹ; ಚಾಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ; ಹಡಪ: ಅಡಕೆ ಎಲೆಯ ಚೀಲ; ಚಪಲೆ: ಚಂಚಲೆ; ಸಹಿತ: ಜೊತೆ; ಗರುವೆ: ಸೊಗಸುಗಾತಿ, ಚೆಲುವೆ; ಹೊಕ್ಕು: ಸೇರು; ಮಹಾ: ದೊಡ್ಡ, ಶ್ರೇಷ್ಠ; ಅಹಿ: ಹಾವು; ಭೋಗ: ಸುಖವನ್ನು ಅನುಭವಿಸುವುದು; ಹರಿ: ವಿಷ್ಣು; ಶತಯಾಗ: ನೂರು ಯಾಗ ಮಾಡಿದವನು-ಇಂದ್ರ; ಸುತ: ಮಗ; ಕಂಡಳು: ನೋಡು; ಮಣಿ: ರತ್ನ; ಮಂಚ: ಪರ್ಯಂಕ;

ಪದವಿಂಗಡಣೆ:
ಬಾಗಿಲಲಿ +ಬಾಗಿಲಲಿ+ ನಿಂದರು
ಸೋಗೆಗಣ್ಣ್+ಅಬಲೆಯರು +ಸೆಜ್ಜೆಯ
ಬಾಗಿಲಲಿ +ಚಾಮರದ +ಹಡಪದ +ಚಪಲೆಯರು +ಸಹಿತ
ಆ +ಗರುವೆ +ಹೊಕ್ಕಳು +ಮಹ+ಅಹಿಯ
ಭೋಗತಲ್ಪದ +ಹರಿಯೊಲಿಹ +ಶತ
ಯಾಗಸುತನನು +ಕಂಡಳ್+ಅಂಗನೆ+ ಮಣಿಯ+ಮಂಚದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಆ ಗರುವೆ ಹೊಕ್ಕಳು ಮಹಾಹಿಯ ಭೋಗತಲ್ಪದ ಹರಿಯೊಲಿಹ ಶತಯಾಗಸುತನನು ಕಂಡಳಂಗನೆ

ಪದ್ಯ ೧೩: ಊರ್ವಶಿಯು ಅರ್ಜುನನ ಅರಮನೆಗೆ ಹೇಗೆ ಬಂದಳು?

ಬಂದಳೂರ್ವಶಿ ಬಳ್ಳಿಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾರವದ ಸೊಗ
ಸಿಂದ ಶಬ್ದ ಬ್ರಹ್ಮ ಸೋತುದು ಸೊರಹಲೇನೆಂದ (ಅರಣ್ಯ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬಳ್ಳಿ ಮಿಂಚುಗಳೊಡನೆ ಬರುವ ಚಿಕ್ಕ ಮೋಡದಂತೆ ಊರ್ವಶಿಯು ಪಲ್ಲಕ್ಕಿಯಲ್ಲಿ ಬಂದು ಅರ್ಜುನನ ಅರಮನೆಯ ಮುಂದಿಳಿದಳು. ಅವಳು ಬರುತ್ತಿರಲು ಎಚ್ಚರಿಕೆ, ಪಾದಗಳಿಗೆ ಎಚ್ಚರಿಕೆ ಎನ್ನುವ ಸಖಿಯರ ಕಾಲುಗೆಜ್ಜೆಗಳ ನಾದಕ್ಕೆ ಶಬ್ದಬ್ರಹ್ಮವೇ ಸೋತಿತು, ಕೇವಲ ಮಾತುಗಳಿಂದ ಅದನ್ನು ಹೇಳುವುದು ಹೇಗೆ?

ಅರ್ಥ:
ಬಂದಳು: ಆಗಮಿಸು; ಬಳ್ಳಿ: ಲತೆ; ಮಿಂಚು: ಹೊಳಪು, ಕಾಂತಿ; ಮಂದಿ: ಜನಗಳ ಗುಂಪು; ಮುರಿದು: ಸೀಳು; ಇಳಿ: ಮರಿ: ಚಿಕ್ಕ; ಮುಗಿಲು: ಆಗಸ; ದಂಡಿಗೆ: ಪಲ್ಲಕ್ಕಿ; ರಾಜಭವನ: ಅರಮನೆ; ಮುಂದೆ: ಎದುರು; ಪಾಯವಧಾರು: ಎಚ್ಚರಿಕೆ; ಸತಿ: ಹೆಂಗಸು; ಸಂದಣಿ: ಗುಂಪು; ಸಿಂಜಾರವ: ಬಿಲ್ಲಿನ ಝೇಂಕಾರ; ಸೊಗಸು: ಅಂದ; ಶಬ್ದ: ರವ, ಧ್ವನಿ; ಬ್ರಹ್ಮ: ಅಜ; ಸೋತು: ಪರಾಭವ; ಸೊರಹು: ಅತಿಯಾಗಿ ಮಾತನಾಡುವಿಕೆ;

ಪದವಿಂಗಡಣೆ:
ಬಂದಳ್+ಊರ್ವಶಿ +ಬಳ್ಳಿ+ಮಿಂಚಿನ
ಮಂದಿಯಲಿ +ಮುರಿದಿಳಿವ +ಮರಿ +ಮುಗಿ
ಲಂದದಲಿ+ ದಂಡಿಗೆಯನ್+ಇಳಿದಳು+ ರಾಜಭವನದಲಿ
ಮುಂದೆ +ಪಾಯವಧಾರು+ ಸತಿಯರ
ಸಂದಣಿಯ +ಸಿಂಜಾರವದ+ ಸೊಗ
ಸಿಂದ +ಶಬ್ದ+ ಬ್ರಹ್ಮ +ಸೋತುದು +ಸೊರಹಲೇನೆಂದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಂದಿಯಲಿ ಮುರಿದಿಳಿವ ಮರಿ ಮುಗಿಲಂದದಲಿ
(೨) ಸ ಕಾರದ ಪದಗಳ ಸಾಲು – ಸತಿಯರ ಸಂದಣಿಯ ಸಿಂಜಾರವದ ಸೊಗಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ

ಪದ್ಯ ೧೨: ಊರ್ವಶಿಯ ಪರಿವಾರವು ಹೇಗಿತ್ತು?

ಅಲರ್ದ ಪೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮವನವೊ ಕುಸುಮೋ
ಚ್ಚಳಿತ ಕೇತಕಿದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗುಡಿಯೋ (ಅರಣ್ಯ ಪರ್ವ, ೯ ಸಂಧಿ, ೧೨ ಪದ್ಯ)

ತಾತ್ಪರ್ಯ:
ಅರಳಿದ ಕೆಂಪು ತಾವರೆಯ ಸಮೂಹವೋ, ಚಿಗುರಿದ ಮಾವಿನ ತೋಪೋ, ಕತ್ತಲು ಕವಿಸುವ ಹೊಂಗೆಯ ಕಾಡೋ, ದೂರದಲ್ಲಿ ಹೊಳೆಯುವ ಚಿಗುರಿದ ವನವೋ, ಕೇದಗೆಯ ಹೂವಿನ ದಳವೋ, ಅಪ್ಸರೆಯರೋ, ಸುಂದರವಾದ ವನಿತೆಯರೋ, ಕಮಲದಂತ ಮುಖವುಳ್ಳ ಊರ್ವಶಿಯ ಪರಿವಾರವೋ!

ಅರ್ಥ:
ಅಲರ್ದ: ಅರಳಿದ; ಪೊಂದಾವರೆ: ಕೆಂಪಾದ ಕಮಲ; ಹಂತಿ: ಪಂಕ್ತಿ, ಸಾಲು; ತಳಿತ: ಚಿಗುರಿದ; ಮಾವು: ಚೂತಫಲ; ಬನ: ಕಾಡು; ಮಿಗೆ: ಅಧಿಕ; ಕತ್ತಲು: ಅಂಧಕಾರ; ಬಹಳ: ಹೆಚ್ಚು; ತಮಾಲ: ಹೊಂಗೆ; ಕಾನನ: ಕಾಡು; ದಿಗಂತ: ದಿಕ್ಕಿನ ತುದಿ; ಹೊಳೆ: ಪ್ರಕಾಶ; ವಿದ್ರುಮ: ಹವಳ; ವನ: ಕಾಡು; ಕುಸುಮ: ಪುಷ್ಪ; ಉಚ್ಚಳಿಸು: ಮೇಲಕ್ಕೆ ಹಾರು; ದಳ: ಎಲೆ, ಎಸಳು; ಆವಳಿ: ಸಾಲು; ಕಾಂತ:ಸುಂದರವಾದ; ಕಮಲಾನನೆ: ಕಮಲದಂತ ಮುಖ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ;

ಪದವಿಂಗಡಣೆ:
ಅಲರ್ದ +ಪೊಂದಾವರೆಯ +ಹಂತಿಯೊ
ತಳಿತ+ ಮಾವಿನ +ಬನವೊ +ಮಿಗೆ +ಕ
ತ್ತಲಿಪ +ಬಹಳ +ತಮಾಲ +ಕಾನನವೋ +ದಿಗಂತದಲಿ
ಹೊಳೆವ +ವಿದ್ರುಮ+ವನವೊ +ಕುಸುಮೋ
ಚ್ಚಳಿತ+ ಕೇತಕಿದಳವೊ +ರಂಭಾ
ವಳಿಯೊ +ಕಾಂತಾಜನವೊ +ಕಮಲಾನನೆಯ +ಮುಂಗುಡಿಯೋ

ಅಚ್ಚರಿ:
(೧) ಬನ, ಕಾನನ, ವನ – ಸಮನಾರ್ಥಕ ಪದ
(೨) ಪೊಂದಾವರೆ, ಮಾವಿನಬನ, ತಮಾಲ ಕಾನನ, ವಿದ್ರುಮ ವನ, ಕೇತಕಿದಳ – ಊರ್ವಶಿಯ ಪರಿವಾರವನ್ನು ವಿವರಿಸುವ ಪದಗಳು

ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು

ಪದ್ಯ ೧೦: ಊರ್ವಶಿಯ ಹಿರಿಮೆ ಎಂತಹುದು?

ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನದೇವನರಮನೆಗೆ (ಅರಣ್ಯ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಊರ್ವಶಿಯು ಜನಗಳ ನೋಟಕ್ಕೆ ಸೆರೆಮನೆ, ಕಣ್ಣೆಂಬ ಮೃಗಗಳನ್ನು ತಡೆದು ನಿಲ್ಲಿಸಬಲ್ಲ ಬೇಟೆಕಾತಿ, ಸತ್ತಿದ್ದ ಮನ್ಮಥನಿಗೆ ಸಂಜೀವಿನಿಯನ್ನು ಕೊಟ್ಟು ಬದುಕಿಸಿದವಳು, ಮನ್ಮಥನ ಜನರನ್ನು ಪರಿಭವಗೊಳಿಸಲು ಹಾಕಿದ ಕೊಕ್ಕೆ, ಕಾಮುಕರ ಜೀವಕ್ಕೆ ಒಡತಿ, ಅಂತಹ ಊರ್ವಶಿ ಅರ್ಜುನನ ಅರಮನೆಗೆ ಬಂದಳು.

ಅರ್ಥ:
ಜನ: ಗುಂಪು, ಮನುಷ್ಯ; ಮನ: ಮನಸ್ಸು; ಸಂಕಲೆ:ಬೇಡಿ, ಸೆರೆ; ಲೋಚನ: ಕಣ್ಣು; ಮೃಗ: ಜಿಂಕೆ; ತಡೆ: ನಿಲ್ಲಿಸು; ತಡೆವೇಂಟೆಕಾತಿ: ತಡೆಯುವ ಬೇಟೆಕಾರಳು; ಮನುಮಥ: ಕಾಮ; ಸಂಜೀವ: ಚೈತನ್ಯ, ಮರುಜೇವಣಿ; ಮಾರಾಂಕ: ಪ್ರತಿಯುದ್ಧ; ಕಾಮುಕ: ಕಾಮಾಸಕ್ತನಾದವನು; ಜೀವಾರ್ಥ: ಬದುಕುವ ಅರ್ಥ; ವಿಭು:ಒಡೆಯ, ಅರಸು; ಬಂದಳು: ಆಗಮಿಸು; ಅರಮನೆ: ರಾಜರ ಆಲಯ;

ಪದವಿಂಗಡಣೆ:
ಜನಮನದ+ ಸಂಕಲೆವನೆಯೊ+ ಲೋ
ಚನಮೃಗದ +ತಡೆವೇಂಟೆಕಾತಿಯೊ
ಮನುಮಥನ +ಸಂಜೀವನ್+ಔಷಧಿಯೋ +ಮಹಾದೇವ
ಮನಸಿಜನ +ಮಾರಾಂಕ +ಕಾಮುಕ
ಜನದ+ ಜೀವಾರ್ಥಕ್ಕೆ +ವಿಭುವೆಂ
ದೆನಿಸಿದ್+ಊರ್ವಶಿ +ಬಂದಳ್+ಅರ್ಜುನದೇವನ್+ಅರಮನೆಗೆ

ಅಚ್ಚರಿ:
(೧) ಊರ್ವಶಿಯ ಹಿರಿಮೆಯನ್ನು ಹೇಳುವ ಪರಿ – ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ ಮನುಮಥನ ಸಂಜೀವನೌಷಧಿಯೋ ಮಹಾದೇವ