ಪದ್ಯ ೪: ಊರ್ವಶಿಯ ಚೆಲುವು ಹೇಗಿತ್ತು?

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತಿಯೊ ಕಾಮುಕರ ಭಾಗ್ಯ ಸುಪಕ್ವ ಫಲರಸವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿದೇವತೆಯೊ ವರ್ಣಿಸುವೊಡರಿದೆಂದ (ಅರಣ್ಯ ಪರ್ವ, ೯ ಸಂಧಿ, ೪ ಪದ್ಯ)

ತಾತ್ಪರ್ಯ:
ಊರ್ವಶಿಯು ಸುಗಂಧದ ಪುತ್ಥಳಿ, ಸೌಂದರ್ಯದ ಎರಕ, ವಿಟರು ಮಾಡಿದ ಪುಣ್ಯದ ಫಲ, ಕಾಮುಕರ ಭಾಗ್ಯದ ಪಕ್ವ ಫಲದ ರಸ, ಮನ್ಮಥನ ವಿಜಯಧ್ವಜ, ಕಾಮಶಾಸ್ತ್ರದ ಮೂಲಮಂತ್ರ, ಅಪ್ಸರ ಸ್ತ್ರೀಯರ ಅಧಿದೇವತೆ ಆಕೆಯನ್ನು ವರ್ಣಿಸಲಸಾಧ್ಯ.

ಅರ್ಥ:
ಪರಿಮಳ: ಸುಗಂಧ; ಪುತ್ಥಳಿ: ಬೊಂಬೆ; ಚೆಲುವು: ಅಂದ; ಕರು: ಎರಕ ಹೊಯ್ಯುವುದಕ್ಕಾಗಿ ಮಾಡಿದ ಅಚ್ಚು; ಎರಕ: ಕಾಯಿಸಿದ ಲೋಹಾದಿಗಳ ದ್ರವವನ್ನು ಅಚ್ಚಿಗೆ ಎರೆಯುವಿಕೆ; ವಿಟ: ಕಾಮುಕ, ವಿಷಯಾಸಕ್ತ; ಪುಣ್ಯ: ಸದಾಚಾರ; ಪರಿಣತಿ: ಅನುಭವಿ, ಬುದ್ಧಿವಂತಿಕೆ; ಕಾಮುಕ: ಕಾಮಾಸಕ್ತನಾದವನು; ಭಾಗ್ಯ: ಸುದೈವ; ಪಕ್ವ: ಹಣ್ಣಾದ; ಫಲ: ಹಣ್ಣು; ರಸ: ಸಾರ; ಸ್ಮರ: ಮನ್ಮಥ; ವಿಜಯ: ಗೆಲುವು; ಧ್ವಜ: ಬಾವುಟ; ಮನ್ಮಥ: ಕಾಮ, ಸ್ಮರ; ಪರಮ: ಶ್ರೇಷ್ಠ; ಶಾಸ್ತ್ರ: ವಿದ್ಯೆ; ಮೂಲ: ಬೇರು; ಮಂತ್ರ: ವಿಚಾರ, ಆಲೋಚನೆ; ಸುರಸತಿ: ಅಪ್ಸರೆ; ಅಧಿದೇವತೆ: ಮುಖ್ಯ ದೇವತೆ; ವರ್ಣಿಸು: ಬಣ್ಣಿಸು, ವಿವರಿಸು; ಅರಿ: ತಿಳಿ;

ಪದವಿಂಗಡಣೆ:
ಪರಿಮಳದ +ಪುತ್ಥಳಿಯೊ +ಚೆಲುವಿನ
ಕರುವಿನ್+ಎರಕವೊ+ ವಿಟರ+ ಪುಣ್ಯದ
ಪರಿಣತಿಯೊ +ಕಾಮುಕರ+ ಭಾಗ್ಯ +ಸುಪಕ್ವ+ ಫಲರಸವೊ
ಸ್ಮರನ+ ವಿಜಯಧ್ವಜವೊ +ಮನ್ಮಥ
ಪರಮ+ ಶಾಸ್ತ್ರದ +ಮೂಲ+ಮಂತ್ರವೊ
ಸುರಸತಿಯರ್+ಅಧಿದೇವತೆಯೊ +ವರ್ಣಿಸುವೊಡ್+ಅರಿದೆಂದ

ಅಚ್ಚರಿ:
(೧) ಉಪಮಾನಗಳ ಬಳಕೆ – ಪರಿಮಳದ ಪುತ್ಥಳಿಯೊ; ಚೆಲುವಿನ ಕರುವಿನೆರಕವೊ; ವಿಟರ ಪುಣ್ಯದ ಪರಿಣತಿಯೊ; ಕಾಮುಕರ ಭಾಗ್ಯ ಸುಪಕ್ವ ಫಲರಸವೊ; ಸ್ಮರನ ವಿಜಯಧ್ವಜವೊ; ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ; ಸುರಸತಿಯರಧಿದೇವತೆಯೊ

ಪದ್ಯ ೩: ಊರ್ವಶಿಯ ರೂಪ ಹೇಗೆ ಬೆಳಗಿತು?

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸಜವ್ವನದ ಜೋಡಿಯ ಜಾಡಿಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪ ಸುರಸತಿಯ (ಅರಣ್ಯ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಸುಗಂಧದ ಅನುಲೇಪಗಳನ್ನು ಲೇಪಿಸಿಕೊಂಡಳು. ಸಖಿಯರು ತಿಲಕವನ್ನಿಟ್ಟು ಅಲಂಕರಿಸಿದರು. ಮೊದಲೇ ಹೊಳೆಯುತ್ತಿದ್ದ ಅವಳ ನವ ಯೌವನದ ಕಾಂತಿಯು ಇಮ್ಮಡಿಸಿತು. ಒರೆಯಿಂದ ತೆಗೆದ ಕತ್ತಿಯೋ, ಸಾಣೆ ಹಿಡಿದ ಕತ್ತಿಯ ಅಲಗೋ, ಮನ್ಮಥನ ಶತ್ರುಗಳ ಕೇಡಿಗಾಗಿ ಹುಟ್ಟಿದ ಧೂಮಕೇತುವೋ ಎನ್ನುವಂತೆ ಊರ್ವಶಿಯ ರೂಪ ಬೆಳಗುತ್ತಿತ್ತು.

ಅರ್ಥ:
ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ತಿಲಕ: ಹಣೆಯಲ್ಲಿಡುವ ಬೊಟ್ಟು; ತೆತ್ತು: ಹಾಕು; ಅಲಂಕರಿಸು: ಶೃಂಗಾರಮಾಡು; ಹೊಳಹು: ಪ್ರಕಾಶ, ಕಾಂತಿ; ಹೊಗರು: ಕಾಂತಿ, ಪ್ರಕಾಶ; ಹೊಸ: ನವೀನ; ಜವ್ವನ: ಹರೆಯ, ಯೌವನ; ಜೋಡಿ: ಜೊತೆ; ಜಾಡಿ: ಸಂದಣಿ; ಇಮ್ಮಡಿ: ಎರಡುಪಟ್ಟು; ಉಗಿ: ಹೊರಕ್ಕೆ ತೆಗೆ; ತೊರೆ:ಒಸರು, ಜಿನುಗು, ತೊಟ್ಟಿಡು, ಪ್ರವಹಿಸು; ಕೂರು: ಗುರಾಣಿ; ಅಲಗು: ಖಡ್ಗ; ಧಾರೆ: ರಭಸ; ಹಿಡಿ: ಬಂಧಿಸು; ಖಂಡೆಯ: ಕತ್ತಿ, ಖಡ್ಗ; ಕಾಮ: ಮನ್ಮಥ; ಹಗೆ: ವೈರಿ; ಹುಟ್ಟು: ಜನಿಸು; ಧೂಮಕೇತು: ಉಲ್ಕೆ; ರೂಪ: ಆಕಾರ; ಸುರಸತಿ: ಅಪ್ಸರೆ;

ಪದವಿಂಗಡಣೆ:
ತಿಗುರ +ಗೆಲಿದಳು +ತಿಲಕವನು +ತೆ
ತ್ತಿಗರ್+ಅಲಂಕರಿಸಿದರು +ಹೊಳಹಿನ
ಹೊಗರ+ ಹೊಸ+ಜವ್ವನದ +ಜೋಡಿಯ +ಜಾಡಿ+ಇಮ್ಮಡಿಸೆ
ಉಗಿದೊರೆಯ+ ಕೂರ್+ಅಲಗೊ+ ಧಾರೆಯ
ಮಿಗೆ+ ಹಿಡಿದ+ ಖಂಡೆಯವೊ +ಕಾಮನ
ಹಗೆಗೆ+ ಹುಟ್ಟಿದ+ ಧೂಮಕೇತುವೊ+ ರೂಪ +ಸುರಸತಿಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉಗಿದೊರೆಯ ಕೂರಲಗೊ; ಧಾರೆಯಮಿಗೆ ಹಿಡಿದ ಖಂಡೆಯವೊ; ಕಾಮನ ಹಗೆಗೆ ಹುಟ್ಟಿದ ಧೂಮಕೇತುವೊ;
(೨) ಜೋಡಿ ಅಕ್ಷರದ (ಹ, ಜ) ಪದಗಳು – ಹೊಳಹಿನ ಹೊಗರ ಹೊಸ; ಜವ್ವನದ ಜೋಡಿಯ ಜಾಡಿಯಿಮ್ಮಡಿಸೆ

ಪದ್ಯ ೨: ಊರ್ವಶಿಯು ಹೇಗೆ ಸಿಂಗಾರಗೊಂಡಳು?

ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿ ಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳ ಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ (ಅರಣ್ಯ ಪರ್ವ, ೯ ಸಂಧಿ, ೨ ಪದ್ಯ)

ತಾತ್ಪರ್ಯ:
ಕಮಲಲೋಚನೆಯಾದ ಊರ್ವಶಿಯು ಸ್ನಾನ ಮಾಡಿ, ಉತ್ತಮವಾದ ರೇಷ್ಮೆ ವಸ್ತ್ರವನ್ನು ತೊಟ್ಟು, ರತ್ನಾಭರಣಗಳನ್ನು ಧರಿಸಿದಳು. ಸಖಿಯರು ಭರಣಿಗಳಲ್ಲಿ ಅನುಲೇಪಗಳನ್ನು ತಂದುಕೊಟ್ಟು, ಸುಗಂಧ ಪೂರಿತವಾದ ಹೂವಿನ ಮೊಗ್ಗುಗಳಿಂದ ಅವಳ ಮುಡಿಯನ್ನು ಅಲಂಕರಿಸಿದಳು.

ಅರ್ಥ:
ವನಜ: ಕಮಲ; ಲೋಚನೆ: ಕಣ್ಣು; ಮಜ್ಜನ: ಸ್ನಾನ; ದುಕೂಲ: ರೇಷ್ಮೆ ಬಟ್ಟೆ; ಪರಿ: ರೀತಿ; ಮಂಡನ:ಸಿಂಗರಿಸುವುದು, ಅಲಂಕರಿಸುವುದು; ಎಸೆ: ತೋರು; ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮಣಿ; ಆಭರಣ: ಒಡವೆ; ಶೋಭೆ: ಚೆಲುವು, ಕಾಂತಿ, ಹೊಳಪು; ಭರಣಿ: ಒಡವೆ, ವಸ್ತುಗಳನ್ನು ಇಡುವ ಮುಚ್ಚಳವಿರುವ ಸಂಪುಟ, ಡಬ್ಬಿ ಅನುಲೇಪ: ತೊಡೆತ, ಬಳಿಯುವಿಕೆ; ವಾಸನೆ: ಸುಗಂಧ; ಕುಸುಮ: ಹೂವು; ಮೊಗ್ಗೆ: ಪೂರ್ತಿಯಾಗಿ ಅರಳದೆ ಇರುವ ಹೂವು, ಮುಗುಳು; ರಚಿಸು: ನಿರ್ಮಿಸು; ಸಿರಿ: ಶ್ರೇಷ್ಠ; ಮುಡಿ: ತಲೆ, ಶಿರ;

ಪದವಿಂಗಡಣೆ:
ವನಜಲೋಚನೆ+ ಮಾಡಿದಳು +ಮ
ಜ್ಜನವನ್+ಅಮಳ +ದುಕೂಲ +ಪರಿ+ ಮಂ
ಡನದಲ್+ಎಸೆದಳು +ವಿವಿಧ +ರತ್ನಾಭರಣ +ಶೋಭೆಯಲಿ
ತನತನಗೆ+ ಭರಣಿಗಳಲ್ +ಅನುಲೇ
ಪನವ +ತಂದರು +ವಿಳಸದ್+ಅಧಿ+ವಾ
ಸನೆಯ +ಕುಸುಮದ +ಮೊಗ್ಗೆಯಲಿ +ರಚಿಸಿದರು+ ಸಿರಿ+ಮುಡಿಯ

ಅಚ್ಚರಿ:
(೧) ಶೃಂಗರಿಸುವ ಪರಿ – ವಿಳಸದಧಿವಾಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ

ಪದ್ಯ ೧: ಅರ್ಜುನನ ಮನಸ್ಥೈರ್ಯ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲುರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳು ಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸರಸ್ರ ಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ (ಅರಣ್ಯ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ತನುವಿನ ಒಂದು ಕೂದಲೂ ಕಾಮನ ಖಡ್ಗದ ಹೊಡೆತದಿಂದ ಮುಕ್ಕಾಗಲಿಲ್ಲ, ಇತ್ತ ಊರ್ವಶಿಯು ಚಿತ್ರಸೇನನನ್ನು ಕಳುಹಿಸಿ, ತನ್ನ ಸಾವಿರಾರು ಸೇವಕಿಯರನ್ನು ಕರೆಸಿದಳು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಮೈಯ: ತನು; ಹುಲು: ಅಲ್ಪ; ರೋಮಾಳಿ: ಕೂದಲು; ಹರಿ: ಚಲಿಸು, ಸೀಳು; ಮನುಮಥ: ಕಾಮ; ಖಂಡೆಯ: ಕತ್ತಿ, ಖಡ್ಗ; ಗಾಯ: ಪೆಟ್ಟು; ಬೀಳುಕೊಡು: ತೆರಳು, ಕಳುಹಿಸು; ಲತಾಂಗಿ: ಸುಂದರಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ; ಖೇಳ: ಆಟ; ಮೇಳ: ಗುಂಪು; ಸತಿ: ಹೆಂಗಸು; ಕರೆಸು: ಬರೆಮಾಡು; ಹರುಷ: ಸಂತಸ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾರ್ಥನ +ಮೈಯ +ಹುಲು+ರೋ
ಮಾಳಿ+ ಹರಿಯದು +ಮನುಮಥನ +ಖಂಡೆಯದ +ಗಾಯದಲಿ
ಬೀಳು +ಕೊಟ್ಟಳು +ಚಿತ್ರಸೇನನನ್
ಆ +ಲತಾಂಗಿ +ಸರಸ್ರ +ಸಂಖ್ಯೆಯ
ಖೇಳಮೇಳದ +ಸತಿಯರನು +ಕರೆಸಿದಳು+ ಹರುಷದಲಿ

ಅಚ್ಚರಿ:
(೧) ಖೇಳಮೇಳ – ಪದದ ರಚನೆ
(೨) ಪಾರ್ಥನ ಸ್ಥೈರ್ಯ: ಪಾರ್ಥನ ಮೈಯ ಹುಲುರೋಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ

ನುಡಿಮುತ್ತುಗಳು: ಅರಣ್ಯ ಪರ್ವ ೯ ಸಂಧಿ

  • ಪಾರ್ಥನ ಮೈಯ ಹುಲುರೋಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ – ಪದ್ಯ ೧
  • ವಿಳಸದಧಿವಾಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ – ಪದ್ಯ ೨
  • ಉಗಿದೊರೆಯ ಕೂರಲಗೊ ಧಾರೆಯಮಿಗೆ ಹಿಡಿದ ಖಂಡೆಯವೊ ಕಾಮನ ಹಗೆಗೆ ಹುಟ್ಟಿದ ಧೂಮಕೇತುವೊ ರೂಪ ಸುರಸತಿಯ – ಪದ್ಯ ೩
  • ಪರಿಮಳದ ಪುತ್ಥಳಿಯೊ; ಚೆಲುವಿನ ಕರುವಿನೆರಕವೊ; ವಿಟರ ಪುಣ್ಯದ ಪರಿಣತಿಯೊ; ಕಾಮುಕರ ಭಾಗ್ಯ ಸುಪಕ್ವ ಫಲರಸವೊ; ಸ್ಮರನ ವಿಜಯಧ್ವಜವೊ; ಮನ್ಮಥ ಪರಮ ಶಾಸ್ತ್ರದ ಮೂಲಮಂತ್ರವೊ; ಸುರಸತಿಯರಧಿದೇವತೆಯೊ – ಪದ್ಯ ೪
  • ಲೋಕವಶ್ಯದ ತಿಲಕವೋ; ಜಗದೇಕರತ್ನವೊ; ವಿಗಡಮುನಿ ಚಿತ್ತಾಕರುಷಣದ ಮಂತ್ರನಾದವೊ; ಋಷಿತಪಃಫಲವೊ; ಲೋಕ ಸೌಂದರೈಕ ಸರ್ಗವೊ; ನಾಕಸುಖ ಸಾಕಾರವೋ – ಪದ್ಯ ೫
  • ನೆರೆದರಬಲೆಯರಂಗವಟ್ಟದ ಪರಿಮಳದ ಮುತ್ತಿಗೆಯ ತುಂಬಿಯ ತೆರಳಿಕೆಯ ಕತ್ತಲೆಯ ಕೆದರುವ ಕಣ್ಣಬೆಳಗುಗಳ – ಪದ್ಯ ೬
  • ತುರಗಮೇಧದ ರಾಜಸೂಯದ ವರಮಹಾಕ್ರತುಕಾರರೀಕೆಯ ಚರಣದುಂಗುಟ ತುದಿಯ ಕಾಂಬರೆ ಪೂತು ಫಲಗುಣನ – ಪದ್ಯ ೮
  • ಜನಮನದ ಸಂಕಲೆವನೆಯೊ ಲೋಚನಮೃಗದ ತಡೆವೇಂಟೆಕಾತಿಯೊ ಮನುಮಥನ ಸಂಜೀವನೌಷಧಿಯೋ ಮಹಾದೇವ – ಪದ್ಯ ೧೦
  • ಹೊಳೆವ ಮುಖಕೆ ಚಕೋರ ಚಯವಿಟ್ಟಳಿಸಿದವು ನೇವುರದ ಬೊಬ್ಬೆಗೆ ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ – ಪದ್ಯ ೧೧
  • ಬಂದಳೂರ್ವಶಿ ಬಳ್ಳಿಮಿಂಚಿನಮಂದಿಯಲಿ ಮುರಿದಿಳಿವ ಮರಿ ಮುಗಿಲಂದದಲಿ – ಪದ್ಯ ೧೩
  • ಸತಿಯರ ಸಂದಣಿಯ ಸಿಂಜಾರವದ ಸೊಗಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ – ಪದ್ಯ ೧೩
  • ಆ ಗರುವೆ ಹೊಕ್ಕಳು ಮಹಾಹಿಯ ಭೋಗತಲ್ಪದ ಹರಿಯೊಲಿಹ ಶತಯಾಗಸುತನನು ಕಂಡಳಂಗನೆ – ಪದ್ಯ ೧೪
  • ಎಳೆಯ ಬೆಳದಿಂಗಳವೊಲೀಕೆಯ ತಳತಳಿಪ ಮುಖ ಚಂದ್ರಮನ ತಂಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ – ಪದ್ಯ ೧೬
  • ಕರಣಾವಳಿಯ ಪರಮಪ್ರೀತಿ ರಸದಲಿ ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ – ಪದ್ಯ ೧೬
  • ಕಿರಣಲಹರಿಯ ದಿವ್ಯ ರತ್ನಾಭರಣ ರುಚಿರತರ ಪ್ರಭಾ ಪಂಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ – ಪದ್ಯ ೧೭
  • ಈ ಮಹಿಳೆಯಭಿವಂದನೀಯೆ ನಿರಾಮಯದ ಶಶಿವಂಶ ಜನನಿ ಸನಾಮೆಯಲ್ಲಾ – ಪದ್ಯ ೧೮
  • ಲೋಕವರ್ತಕನಲ್ಲದಿವನನದೇಕೆ ವಿಧಿ ನಿರ್ಮಿಸಿದನೋ – ಪದ್ಯ ೨೧
  • ವಿಕಟ ತಪಸಿನ ದೇವ ದೈತ್ಯರ ಮಕುಟವಾಂತದು ವಾಮಪಾದವ – ಪದ್ಯ ೨೨
  • ಅಲುಗಿ ನೆಟ್ಟವು ಕಾಮಶರವೆನ್ನಂತರಂಗದಲಿ – ಪದ್ಯ ೨೩
  • ಒಲಿದು ಬಂದಬಲೆಯರ ಟಕ್ಕರಿಗಳೆವುದೇ ವಿಟಧರ್ಮವ್? – ಪದ್ಯ ೨೩
  • ಎವಗೆ ಕರ್ತವ್ಯದಲಿ ಮನ ಸಂಭವಿಸುವುದೆ ನೀವೆಮ್ಮ ವಂಶೋದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ – ಪದ್ಯ ೨೪
  • ಪ್ರಣವದರ್ಥವಿಚಾರವೆತ್ತಲುಗಣಿಕೆಯರ ಮನೆಯ ಸ್ವರಾಕ್ಷರ ಗಣಿತ ಲಕ್ಷಣವೆತ್ತ – ಪದ್ಯ ೨೬
  • ಸಣಬಿನಾರವೆ ಚೈತ್ರರಥದೊಳಗೆ – ಪದ್ಯ ೨೬
  • ಮಾನಿನಿಯರಿಚ್ಛೆಯನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ ಕುರಿಕಣಾ ಫಡ ಖೂಳ ನೀನೆಂತರಿವೆ – ಪದ್ಯ ೨೮
  • ಮಹಿಳೆಯೊಬ್ಬಳೊಳೈವರೊಡಗೂಡಿಹರು ನೀವೇನಲ್ಲಲೇ – ಪದ್ಯ ೩೦
  • ಸುರರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ – ಪದ್ಯ ೩೨
  • ಕುಸುಮಾಯುಧನ ಕಗ್ಗೊಲೆಯ ಕೆದರುವುಪಾಯವನು ನೀ ಬಲ್ಲೆ – ಪದ್ಯ ೩೨
  • ಸರಸಿಜದ ಮಧು ಮಧುಕರನನನು ಕರಿಸಿದಡೆ; ಚಂದ್ರಿಕೆ ಚಕೋರನ ವರಿಸಿದರೆ; ನಿಧಿಲಕ್ಷ್ಮಿ ಸುಳಿದರೆ ನಯನವೀಧಿಯಲಿ; ಗರುವೆಯರು ಮೇಲಿಕ್ಕಿ ಪುರುಷನ ನರಸಿದರೆ – ಪದ್ಯ ೩೩
  • ಮನ್ಮಥ ಖಳಕಣಾ ನಿಷ್ಕರುಣಿ – ಪದ್ಯ ೩೪
  • ಕಾಮಶರ ಮನವಳುಕೆ ಕೆಡಹಿತು ವಿರಹತಾಪದಲ್ – ಪದ್ಯ ೩೪
  • ಧೈರ್ಯದ ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುದೆ – ಪದ್ಯ ೩೫
  • ಸುಯ್ಲಿನಲಿ ಕಂಗಳು ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ – ಪದ್ಯ ೩೬
  • ತಂಪಿನಲಿ ಶಿಖಿ ಮಧುರದಲಿ ಕಟುನುಂಪಿನಲಿ ಬಿರಿಸಮೃತದಲಿ ವಿಷಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನ ರೋಷ – ಪದ್ಯ ೩೭
  • ಮೈ ತನಿಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ – ಪದ್ಯ ೩೭
  • ಕೆತ್ತಿದುವು ತುಟಿ ಕದಪಿನಲಿ ಕೈ ಹತ್ತಿಸುತ ತೂಗಿದಳು ಶಿರವನು ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ – ಪದ್ಯ ೩೮
  • ವಿಕಾರದ ಚಿತ್ತ ಬುದ್ಧಿಮನಂಗಳಾತ್ಮನಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ – ಪದ್ಯ ೩೮
  • ಭಂಡರ ಭಾವ, ಖೂಳರ ನಿಲಯ, ಖಳರಧಿದೈವ, ವಂಚಕತಿಲಕ, ಗಾವಿಲರೊಡೆಯ ಬಂಧುವೆ ದುಷ್ಟನಾಯಕರ, ಮರುಳೆ – ಪದ್ಯ ೩೯
  • ಎಲೆ ನಪುಂಸಕ ಗಂಡು ವೇಷದ ಸುಳಿವು ನಿನಗೇಕೆ – ಪದ್ಯ ೪೦
  • ಮಯೂಖದ ಮಣಿಯ ಮುದ್ರಿಕೆದಳ ಮರೀಚಿಯಲೆಸೆದುದೆತ್ತಿದ – ಪದ್ಯ ೪೧
  • ರಾಹು ತುಡುಕಿದ ಶಶಿಯೊ, ಮೇಣ್ರೌದ್ರಾಹಿ ಮಸ್ತಕ ಮಾಣಿಕವೊ, ಕಡುಗಾಹಿನಮೃತವೊ, ಕುಪಿತಸಿಂಹದ ಗುಹೆಯ ಮೃಗಮದವೊ, ಲೋಹಧಾರೆಯ ಮಧುವೊ, ಕಳಿತ ಹಲಾಹಳದ ಕಜ್ಜಾಯ – ಪದ್ಯ ೪೨
  • ನಿಮ್ಮ ಭಾರತವರುಷ ಭೂಮಿಯೊಳೊಂದು ವರುಷಾಂತರ ನಪುಂಸಕನಾಗಿ ಚರಿಸು ನಿರಂತರಾಯದಲಿ – ಪದ್ಯ ೪೩
  • ದೇಹಾಂತರವನಂಗೀಕರಿಸುವೆನಲಾ ತನ್ನ ಸುಡಲೆಂದ – ಪದ್ಯ ೪೫
  • ಗಹನವೇ ವಿಪುಳ ಕರ್ಮಸ್ಥಿತಿ – ಪದ್ಯ ೪೭
  • ನುಡಿಸೆ ತಲೆವಾಗಿದನು ಲಜ್ಜೆಯ ಝಡಿತೆಯಲಿ ಝೊಂಮೇರಿದಂತೆವೆಮಿಡುಕದಿರೆ – ಪದ್ಯ ೫೧
  • ನಿಮ್ಮಜ್ಞಾತದಲಿ ನೆರೆ ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿ ಶರಹತಿಗೆ – ಪದ್ಯ ೫೩
  • ಸತ್ಕೀರ್ತಿಲತೆ ಕುಡಿವರಿದು ಬೆಳೆದುದು – ಪದ್ಯ ೫

ಪದ್ಯ ೧೦೪: ಊರ್ವಶಿಯು ತನ್ನ ಚಿತ್ತದಲ್ಲಿ ಯಾರ ಚಿತ್ರವನ್ನು ಬಿಡಿಸಿದಳು?

ರಾಯನಟ್ಟಿದ ನೇಮಗಡ ಕಮ
ನೀಯವಲ್ಲಾ ನಿನ್ನ ನುಡಿ ರಮ
ಣೀಯತರವಿದು ನಿನ್ನ ರಚನೆ ಮಹಾನುಭಾವನಲೆ
ಆಯಿತಿದು ನೀ ಹೋಗೆನುತಲಬು
ಜಾಯತಾಕ್ಷಿ ಮಹೋತ್ಸವದಿ ನಾ
ರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ (ಅರಣ್ಯ ಪರ್ವ, ೮ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಚಿತ್ರಸೇನನ ಮಾತಿಗೆ ಊರ್ವಶಿಯು, ಇದು ದೇವೇಂದ್ರನ ಆಜ್ಞೆಯಲ್ಲವೇ? ನಿನ್ನ ಮಾತು ಅತೀವ ಮಧುರವಾಗಿದೆ, ನೀನು ರಚಿಸಿರುವ ಈ ಸಂಯೋಗವು ಅತ್ಯಂತ ಮನೋಹರವಾದುದು, ಇದು ಹೆಚ್ಚಿನ ಅನುಭಾವವಾಯಿತು, ನೀನು ಇನ್ನು ತೆರಳು ಎಂದು ಹೇಳಿ ತನ್ನ ಚಿತ್ತಪಟದಲ್ಲಿ ಅರ್ಜುನನ ಚಿತ್ರವನ್ನು ಬಿಡಿಸಿದಳು.

ಅರ್ಥ:
ರಾಯ: ರಾಜ; ಅಟ್ಟು: ಕಳಿಸು; ನೇಮ: ನಿಯಮ, ಆಜ್ಞೆ; ಗಡ: ಅಲ್ಲವೆ; ಕಮನೀಯ: ಮನೋಹರ, ಸುಂದರ; ನುಡಿ: ಮಾತು; ರಮಣೀಯ: ಸುಂದರವಾದ, ಚೆಲುವಾದ; ರಚನೆ: ನಿರ್ಮಾಣ; ಮಹಾ: ದೊಡ್ಡ, ಶ್ರೇಷ್ಠ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ಹೋಗು: ತೆರಳು; ಅಬುಜಾಯತಾಕ್ಷಿ: ಕಮಲದಂತ ಕಣ್ಣಿರುವ; ಅಕ್ಷಿ: ಕಣ್ಣು; ಅಬುಜ: ಕಮಲ; ಆಯತ: ಅಗಲ; ಮಹೋತ್ಸವ: ಸಮಾರಂಭ; ನಾರಾಯಣ: ವಿಷ್ಣು; ಮೈದುನ: ತಂಗಿಯ ಗಂಡ; ಬರೆ: ಲಿಖಿಸು; ಚಿತ್ತ: ಮನಸ್ಸು; ಭಿತ್ತಿ: ಮುರಿ, ಸೀಳು;

ಪದವಿಂಗಡಣೆ:
ರಾಯನ್+ಅಟ್ಟಿದ +ನೇಮ+ಗಡ +ಕಮ
ನೀಯವಲ್ಲಾ +ನಿನ್ನ +ನುಡಿ +ರಮ
ಣೀಯತರವಿದು +ನಿನ್ನ +ರಚನೆ +ಮಹಾನುಭಾವನಲೆ
ಆಯಿತಿದು+ ನೀ ಹೋಗ್+ಎನುತಲ್ +ಅಬುಜ
ಆಯತಾಕ್ಷಿ+ ಮಹೋತ್ಸವದಿ+ ನಾ
ರಾಯಣನ +ಮೈದುನನ+ ಬರೆದಳು +ಚಿತ್ತ+ಭಿತ್ತಿಯಲಿ

ಅಚ್ಚರಿ:
(೧) ಅರ್ಜುನನನ್ನು ನಾರಾಯಣನ ಮೈದುನ ಎಂದು ಕರೆದಿರುವುದು
(೨) ಅರ್ಜುನನಿಗೆ ಮನಸ್ಸನ್ನು ನೀಡಿದಳು ಎಂದು ಹೇಳುವ ಪರಿ – ಅಬುಜಾಯತಾಕ್ಷಿ ಮಹೋತ್ಸವದಿ ನಾರಾಯಣನ ಮೈದುನನ ಬರೆದಳು ಚಿತ್ತಭಿತ್ತಿಯಲಿ
(೩) ರಮಣೀಯ, ಕಮನೀಯ – ಪ್ರಾಸ ಪದಗಳು