ಪದ್ಯ ೬೮: ಭೂಮಿಯಿಂದ ಸಪ್ತಋಷಿಮಂಡಲದ ದೂರವೆಷ್ಟು?

ವಿದಿತವಿಂತಿದು ಸಪ್ತಋಷಿಗಳ
ಸದನವದು ಹದಿನಾಲ್ಕು ಲಕ್ಷವು
ಮುದದಿ ನೆಲಸಿಹ ಧ್ರುವನುತಾ ಹದಿನೈದು ಲಕ್ಷದಲಿ
ಅದರ ಮೇಲಿಹ ವಿಷ್ಣು ಪದದಲಿ
ಸದಮಳಾತ್ಮಕ ಶಿಂಶುಮಾರನು
ಪದುಳದಲಿ ಸಕಲಕ್ಕೆ ಸಲೆಯಾಧಾರವಾಗಿಹನು (ಅರಣ್ಯ ಪರ್ವ, ೮ ಸಂಧಿ, ೬೮ ಪದ್ಯ)

ತಾತ್ಪರ್ಯ:
ಭೂಮಿಯಿಂದ ಸಪ್ತರ್ಷಿ ಮಂಡಲಕ್ಕೆ ಹದಿನಾಲ್ಕು ಲಕ್ಷ ಯೋಜನ, ಧೃವನಿಗೆ ಹದಿನೈದು ಲಕ್ಷ, ಅದರ ಮೇಲೆ ಆಕಾಶದಲ್ಲಿ ನಿರ್ಮಲನಾದ ಶಿಂಶುಮಾರನು ಎಲ್ಲಕ್ಕೂ ಆಧಾರವಾಗಿದ್ದಾನೆ.

ಅರ್ಥ:
ವಿದಿತ: ಪ್ರಸಿದ್ಧವಾದುದು, ಎಲ್ಲರಿಗೂ ತಿಳಿದುದು; ಸಪ್ತಋಷಿ: ಅಗಸ್ತ್ಯ, ಅತ್ರಿ, ಭಾರಧ್ವಾಜ, ಗೌತಮ, ಜಮದಗ್ನಿ, ವಶಿಷ್ಠ, ವಿಶ್ವಾಮಿತ್ರ ಗಳೆಂಬ ಹೆಸರುಳ್ಳ ನಕ್ಷತ್ರದ ಗುಂಪು; ಮುದ: ಸಂತಸ; ಸದಮಳ: ನಿರ್ಮಲ; ಪದುಳ: ಒಳಿತು, ಸುಖ; ಸಕಲ: ಎಲ್ಲ; ಸಲೆ: ಒಂದೇ ಸಮನೆ, ವಿಸ್ತೀರ್ಣ; ಆಧಾರ: ಆಶ್ರಯ, ಅವಲಂಬನೆ;

ಪದವಿಂಗಡಣೆ:
ವಿದಿತವ್+ಇಂತಿದು +ಸಪ್ತ+ಋಷಿಗಳ
ಸದನವದು +ಹದಿನಾಲ್ಕು +ಲಕ್ಷವು
ಮುದದಿ +ನೆಲಸಿಹ+ ಧ್ರುವನು+ತಾ+ ಹದಿನೈದು +ಲಕ್ಷದಲಿ
ಅದರ +ಮೇಲಿಹ +ವಿಷ್ಣು +ಪದದಲಿ
ಸದಮಳಾತ್ಮಕ +ಶಿಂಶುಮಾರನು
ಪದುಳದಲಿ+ ಸಕಲಕ್ಕೆ +ಸಲೆ+ಆಧಾರವಾಗಿಹನು

ಅಚ್ಚರಿ:
(೧) ಸಪ್ತಋಷಿಮಂಡಲ, ಧ್ರುವ ನಕ್ಷತ್ರಗಳ ಬಗ್ಗೆ ತಿಳಿಸುವ ಪದ್ಯ

ಪದ್ಯ ೬೭: ಭೂಮಿಯು ಉಳಿದ ಗ್ರಹಗಳಿಂದ ಎಷ್ಟು ದೂರವಿದೆ?

ಲಕ್ಕ ಊರ್ವಿಗೆ ರವಿಯ ರಥ ಶಶಿ
ಲಕ್ಕವೆರಡು ತ್ರಿಲಕ್ಕ ಯೋಜನ
ಮಿಕ್ಕಿಹವು ನಕ್ಷತ್ರ ಬುಧನಿಹನೈದುಲಕ್ಕದಲಿ
ಲಕ್ಕವೇಳಾ ಶುಕ್ರ ಕುಜನವ
ಲಕ್ಕ ಗುರು ಹನ್ನೊಂದು ಲಕ್ಕವು
ಮಿಕ್ಕ ವಸುಧಾತಳಕೆ ಶನಿ ಹದಿಮೂರುವರೆ ಲಕ್ಕ (ಅರಣ್ಯ ಪರ್ವ, ೮ ಸಂಧಿ, ೬೭ ಪದ್ಯ)

ತಾತ್ಪರ್ಯ:
ಭೂಮಿಯಿಂದ ಸೂರ್ಯನಿಗೆ ಲಕ್ಷ ಯೋಜನ, ಚಂದ್ರನಿಗೆ ಎರಡು ಲಕ್ಷ, ಮೂರು ಲಕ್ಷ ನಕ್ಷತ್ರಗಳ್, ಬುಧನಿಗೆ ಐದು ಲಕ್ಷ, ಶುಕ್ರನಿಗೆ ಏಳು ಲಕ್ಷ, ಕುಜನಿಗೆ ಒಂಬಾತ್ತು ಲಕ್ಷ, ಗುರುವಿಗೆ ಹನ್ನೊಂದು ಲಕ್ಷ ಶನಿಗೆ ಹದಿಮೂರುವರೆ ಲಕ್ಷ ಯೋಜನ ದೂರವಿದೆ.

ಅರ್ಥ:
ಲಕ್ಕ: ಲಕ್ಷ; ಊರ್ವಿ: ಭೂಮಿ; ರವಿ: ಸೂರ್ಯ; ಪಥ: ದಾರಿ; ಶಶಿ: ಚಂದ್ರ; ಯೋಜಲ: ಅಳತೆಯ ಪ್ರಮಾಣ; ಲೆಕ್ಕಿಸು: ಎಣಿಕೆಮಾಡು, ಲೆಕ್ಕಹಾಕು; ನಕ್ಷತ್ರ: ತಾರೆ; ನವ: ಒಂಬತ್ತು; ಮಿಕ್ಕ: ಉಳಿದ; ವಸುಧ: ಭೂಮಿ; ಮಿಕ್ಕ: ಉಳಿದ;

ಪದವಿಂಗಡಣೆ:
ಲಕ್ಕ+ ಊರ್ವಿಗೆ +ರವಿಯ +ರಥ +ಶಶಿ
ಲಕ್ಕವ್+ಎರಡು+ ತ್ರಿಲಕ್ಕ+ ಯೋಜನ
ಮಿಕ್ಕಿಹವು +ನಕ್ಷತ್ರ+ ಬುಧನಿಹನ್+ಐದು+ಲಕ್ಕದಲಿ
ಲಕ್ಕವ್+ಏಳ್+ಆ+ ಶುಕ್ರ +ಕುಜ+ನವ
ಲಕ್ಕ +ಗುರು +ಹನ್ನೊಂದು +ಲಕ್ಕವು
ಮಿಕ್ಕ +ವಸುಧಾತಳಕೆ +ಶನಿ +ಹದಿಮೂರುವರೆ+ ಲಕ್ಕ

ಅಚ್ಚರಿ:
(೧) ಭೂಮಿಯಿಂದ ಬೇರೆ ಗ್ರಹಗಳ ದೂರವನ್ನು ಹೇಳುವ ಪದ್ಯ

ಪದ್ಯ ೬೬: ಗ್ರಹಗಳ ನಿಜಗೃಹ ಯಾವುದು?

ಹರಿ ತರಣಿಗಿಂದುವಿಗೆ ಕರ್ಕಟ
ಧರಣಿಜಂಗಜ ವೃಶ್ಚಿಕವು ಹಿಮ
ಕರನ ತನಯಗೆ ಮಿಥುನ ಕನ್ಯೆ ಬೃಹಸ್ಪತಿಗೆ ಚಾಪ
ಪಿರಿಯಝಷತುಲೆ ವೃಷಭದಾನದ
ಗುರುವಿನವು ಮೃಗ ಕುಂಭ ಮಂದಂ
ಗಿರವು ನಿಜಗೃಹ ರಾಹುಕೇತುಗಳವರ ಕೂಡಿಹವು (ಅರಣ್ಯ ಪರ್ವ, ೮ ಸಂಧಿ, ೬೬ ಪದ್ಯ)

ತಾತ್ಪರ್ಯ:
ಸೂರ್ಯನಿಗೆ ಸಿಂಹರಾಶಿ, ಚಂದ್ರನಿಗೆ ಕರ್ಕಾಟಕ, ಮಂಗಳ ಗ್ರಹನಿಗೆ ಮೇಷ ಮತ್ತು ವೃಷ್ಕಿಕ ರಾಶಿ, ಬುಧಗ್ರಹಕ್ಕೆ ಮಿಥುನ, ಕನ್ಯೆ, ಬೃಹಸ್ಪತಿ (ಗುರು) ವಿಗೆ ಧನು ಮತ್ತು ಮೀನ, ವೃಷಭ, ತುಲಾ ರಾಶಿ ಶುಕ್ರಗ್ರಹಕ್ಕೆ , ಮಕರ, ಕುಂಭ ರಾಶಿಯು ಶನಿಗ್ರಹಕ್ಕೆ , ರಾಹು – ಕನ್ಯಾ, ಕೇತು ಮೀನ ರಾಶಿ ಇವು ಆಯಾ ಗ್ರಹಗಳ ಸ್ವಕ್ಷೇತ್ರವು.

ಅರ್ಥ:
ಹರಿ: ಸಿಂಹ; ತರಣಿ: ಸೂರ್ಯ; ಇಂದು: ಚಂದ್ರ; ಧರಣಿಜ: ಮಂಗಳ; ಅಜ: ಮೇಷ ರಾಶಿ; ಮಿಥುನ; ಹಿಮಕರ: ಚಂದ್ರ; ತನಯ: ಮಗ; ದಾನವ: ರಾಕ್ಷಸ; ಗುರು: ಆಚಾರ್ಯ; ಚಾಪ: ಬಿಲ್ಲು; ಮಂದ: ನಿಧಾನ; ನಿಜಗೃಹ: ತಮ್ಮ ಮನೆ; ಕೂಡು: ಸೇರು; ಝಷ: ಮೀನು, ಮತ್ಸ್ಯ; ಪಿರಿಯ: ದೊಡ್ಡದು;

ಪದವಿಂಗಡಣೆ:
ಹರಿ +ತರಣಿಗ್+ಇಂದುವಿಗೆ+ ಕರ್ಕಟ
ಧರಣಿಜಂಗ್+ಅಜ +ವೃಶ್ಚಿಕವು +ಹಿಮ
ಕರನ +ತನಯಗೆ +ಮಿಥುನ +ಕನ್ಯೆ +ಬೃಹಸ್ಪತಿಗೆ +ಚಾಪ
ಪಿರಿಯ+ಝಷತುಲೆ +ವೃಷಭ+ದಾನದ
ಗುರುವಿನವು+ ಮೃಗ +ಕುಂಭ +ಮಂದಂ
ಗಿರವು+ ನಿಜಗೃಹ+ ರಾಹು+ಕೇತುಗಳ್+ಅವರ +ಕೂಡಿಹವು

ಅಚ್ಚರಿ:
(೧) ಒಂಬತ್ತು ಗ್ರಹಗಳು ಮತ್ತು ಅವರ ರಾಶಿಯನ್ನು ವರ್ಣಿಸುವ ಪದ್ಯ

ಪದ್ಯ ೬೫: ಸೂರ್ಯನ ಸಾರಥಿ ಯಾರು?

ಕರಸಹಸ್ರನ ರಥಕೆ ಹೂಡಿದ
ತುರಗ ಛಂದೋಮಯವು ಸಾರಥಿ
ಯರುಣ ಕಾಲವೆ ಗಾಲಿ ನವಕೋಟಿಯನು ಚರಿಯಿಸುಗು
ವರವರೂಥದ ಮಧ್ಯದಲಿ ವಿ
ಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು (ಅರಣ್ಯ ಪರ್ವ, ೮ ಸಂಧಿ, ೬೫ ಪದ್ಯ)

ತಾತ್ಪರ್ಯ:
ಸಹಸ್ರ ಕಿರಣನಾದ ಸೂರ್ಯನ ರಥಕ್ಕೆ ವೇದಮಯವಾದ ಕುದುರೆಗಳನ್ನು ಕಟ್ಟಿವೆ, ಅರುಣನು ಸೂರ್ಯನ ಸಾರಥಿ, ಕಾಲವೇ ಸೂರ್ಯನ ರಥದ ಗಾಲಿ, ಒಂಬತ್ತು ಕೋಟಿ ವಿಸ್ತಾರವನ್ನು ಅದು ಚರಿಸುತ್ತದೆ. ಆ ರಥದ ಮಧ್ಯದಲ್ಲಿ ಸೂರ್ಯನು ತನ್ನ ಭವನದ ಮಣಿಪೀಠದಲ್ಲಿ ಕುಳಿತಿದ್ದಾನೆ.

ಅರ್ಥ:
ಕರ: ಹಸ್ತ; ಸಹಸ್ರ: ಸಾವಿರ; ರಥ: ಬಂಡಿ; ಹೂಡು: ನೊಗಹೇರು; ತುರಗ: ಅಶ್ವ; ಛಂದ: ಇಪ್ಪತ್ತಾರು ಎಂಬ ಸಂಖ್ಯೆಯ ಸಂಕೇತ, ಕ್ರಮಬದ್ಧ; ಸಾರಥಿ: ರಥವನ್ನು ಓಡಿಸುವವ; ಅರುಣ: ಸೂರ್ಯನ ಸಾರಥಿ, ಕೆಂಪು; ಕಾಲ: ಸಮಯ; ಗಾಳಿ: ಚಕ್ರ; ನವ: ಒಂಬತ್ತು; ಚರಿಯಿಸು: ಕ್ರಮಿಸು, ನಡೆ; ವರೂಥ: ತೇರು, ರಥ; ಮಧ್ಯ: ನಡುವೆ; ವಿಸ್ತರ: ವಿಶಾಲ; ಮಣಿ: ಬೆಲೆಬಾಳುವ ರತ್ನ; ಪೀಠ: ಆಸನ; ಮಿಗೆ: ಮತ್ತು, ಅಧಿಕ; ದಿನಕರ: ಸೂರ್ಯ; ಗ್ರಹ: ಆಕಾಶಚರಗಳು; ಭವನ: ಮನೆ; ಸಲೆ: ವಿಸ್ತೀರ್ಣ; ಆಧಾರ: ಆಶ್ರಯ, ಅವಲಂಬನೆ;

ಪದವಿಂಗಡಣೆ:
ಕರ+ಸಹಸ್ರನ+ ರಥಕೆ +ಹೂಡಿದ
ತುರಗ +ಛಂದೋಮಯವು +ಸಾರಥಿ
ಅರುಣ+ ಕಾಲವೆ+ ಗಾಲಿ +ನವಕೋಟಿಯನು +ಚರಿಯಿಸುಗು
ವರ+ವರೂಥದ+ ಮಧ್ಯದಲಿ +ವಿ
ಸ್ತರದ +ಮಣಿ+ಪೀಠದಲಿ +ಮಿಗೆ +ದಿನ
ಕರನು +ಗ್ರಹಭವನಕ್ಕೆ +ಸಲೆ+ ಆಧಾರವಾಗಿಹನು

ಅಚ್ಚರಿ:
(೧) ಕರ, ದಿನಕರ – ಪ್ರಾಸ ಪದಗಳು
(೨) ಸೂರ್ಯನ ಪೀಠ – ವರವರೂಥದ ಮಧ್ಯದಲಿ ವಿಸ್ತರದ ಮಣಿಪೀಠದಲಿ ಮಿಗೆ ದಿನ
ಕರನು ಗ್ರಹಭವನಕ್ಕೆ ಸಲೆಯಾಧಾರವಾಗಿಹನು
(೩) ಭೂಮಿಯಿಂದ ಸೂರ್ಯನ ದೂರ (~೯೩ ಮಿಲಿಯನ್ ಮೈಲಿ), ಈ ಪದ್ಯದಲ್ಲಿ ಅದನ್ನು ೯ ಕೋಟಿ (~೯೦ ಮಿಲಿಯನ್)

ಪದ್ಯ ೬೪: ಸೂರ್ಯನ ರಥದ ವಿಸ್ತಾರವೆಷ್ಟು?

ಉರಗನಾಳದ ಹೊರಜೆ ನವ ಸಾ
ಸಿರದ ಕುರಿಗುಣಿಯೀಸುಗಳು ತಾ
ವೆರಡುಮಡಿತೊಂಬತ್ತುವೊಂದು ಸಹಸ್ರದರ್ಧವದು
ಪರಿಯನೊಗನದರನಿತು ಸಂಖ್ಯೆಗೆ
ಸರಿಯೆನಿಪ ಮೇಲಚ್ಚು ಮಂಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ (ಅರಣ್ಯ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಈ ರಥವನ್ನು ಆದಿಶೇಷನೆಂಬ ಹಗ್ಗದಿಂದ ಬಿಗಿದಿದೆ. ಕುರಿಗುಣಿಗಳು ಒಂಬತ್ತು ಸಾವಿರ ಈಚುಗಳಿವೆ. ತೊಂಬತ್ತೊಂದು ಸಾವಿರದ ಅರ್ಧ ಯೋಜನ ಉದ್ದದ ನೊಗ, ಅಷ್ಟೇ ಉದ್ದದ ಅಚ್ಚು ಮಂಗಳಕರವಾದ ನವರತ್ನ ಖಚಿತವಾದ ರಥವದು.

ಅರ್ಥ:
ಉರಗ: ಹಾವು; ನಾಳ: ಒಳಗೆ ಟೊಳ್ಳಾಗಿರುವ ದಂಟು; ಹೊರಜೆ: ದಪ್ಪವಾದ ಹಗ್ಗ; ನವ: ಒಂಬತ್ತು; ಸಾವಿರ: ಸಹಸ್ರ; ಕುರಿಗುಣಿ: ಚಿಕ್ಕದಾದ ಹಗ್ಗ, ದಾರ; ಮಡಿ: ಸಲ, ಬಾರಿ, ಪಟ್ಟು; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಪರಿ: ರೀತಿ; ನೊಗ: ಬಂಡಿಯನ್ನು ಎಳೆಯಲು ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಅದರನಿತು: ಅಷ್ಟೇ ಸಮನಾದ; ಸಂಖ್ಯೆ: ಎಣಿಕೆ; ಸರಿ: ಸಮನಾದ; ಅಚ್ಚು: ನಡುಗೂಟ, ಕೀಲು; ಮಂಗಳ: ಶುಭ; ನವರತ್ನ: ವಜ್ರ, ವೈಡೂರ್ಯ, ಗೋಮೇದಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ ಮತ್ತು ಮುತ್ತು ಎಂಬ ಒಂಬತ್ತು ಮಣಿಗಳು; ರಚನೆ: ನಿರ್ಮಿಸು; ಚಿತ್ರ: ಚಮತ್ಕಾರ ಪ್ರಧಾನವಾದ; ರಥ: ಬಂಡಿ; ಈಸು: ಗಾಡಿಯ ಮೂಕಿ, ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರ;

ಪದವಿಂಗಡಣೆ:
ಉರಗನಾಳದ+ ಹೊರಜೆ +ನವ +ಸಾ
ಸಿರದ +ಕುರಿಗುಣಿ+ಈಸುಗಳು +ತಾವ್
ಎರಡು+ಮಡಿ+ತೊಂಬತ್ತುವೊಂದು+ ಸಹಸ್ರದ್+ಅರ್ಧವದು
ಪರಿಯ+ ನೊಗನ್+ಅದರನಿತು +ಸಂಖ್ಯೆಗೆ
ಸರಿಯೆನಿಪ +ಮೇಲಚ್ಚು +ಮಂಗಳ
ತರವೆನಿಪ +ನವರತ್ನ+ ರಚನೆಯ +ಚಿತ್ರರಥವೆಂದ

ಅಚ್ಚರಿ:
(೧) ನವಸಾವಿರ, ೪೫.೫ ಸಾವಿರ – ಸಂಖ್ಯೆಗಳ ಬಳಕೆ