ಪದ್ಯ ೩೮: ಕೀಲಕಾದ್ರಿಗಳಾವುವು?

ಮಂದರಾಚಲ ಮೂಡ ತೆಂಕಲು
ಗಂಧಮಾದನ ವಿಮಳ ಪಶ್ಚಿಮ
ದಿಂದ ಬಡಗ ಸುಪಾರ್ಶ್ವವೆಂಬಿವು ಕೀಲಕಾದ್ರಿಗಳು
ನಂದನವು ಬಡಗಣದು ಪಡುವಣ
ಚಂದವಹ ವೈಭ್ರಾಜ ತೆಂಕಲು
ಗಂಧಮಾದನ ಚೈತ್ರರಥ ಮೂಡಣದು ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮಂದರಾಚಲವು ಪೂರ್ವಕ್ಕೆ, ಗಂಧಮಾದನ ದಕ್ಷಿಣಕ್ಕೆ, ವಿಮಲಾದ್ರಿಯು ಪಶ್ಛಿಮಕ್ಕೆ ಮತ್ತು ಸುಪಾರ್ಶ್ವ ಗಿರಿಯು ಉತ್ತರಕ್ಕೆ , ಇವೇ ಕೀಲಾದ್ರಿಗಳು, ಇದರೊಂದಿಗೆ ಉತ್ತರದಲ್ಲಿ ನಂದನ, ಪಶ್ಚಿಮದಲ್ಲಿ ವಿಅಭ್ರಾಜ, ದಕ್ಷಿಕ್ಕೆ ಗಂಧಮಾದನ ಮತ್ತು ಪೂರ್ವದಲ್ಲಿ ಚೈತ್ರರಥವೆಂಬ ಉದ್ಯಾನಗಳಿವೆ.

ಅರ್ಥ:
ಅಚಲ: ಬೆಟ್ಟ; ಮೂಡಣ: ಪೂರ್ವ; ತೆಂಕಲ: ದಕ್ಷಿಣ; ಬಡಗಲು: ಉತ್ತರ; ಅದ್ರಿ: ಬೆಟ್ಟ; ಪಡುವಣ: ಪಶ್ಚಿಮ; ನ

ಪದವಿಂಗಡಣೆ:
ಮಂದರಾಚಲ+ ಮೂಡ +ತೆಂಕಲು
ಗಂಧಮಾದನ +ವಿಮಳ +ಪಶ್ಚಿಮ
ದಿಂದ +ಬಡಗ +ಸುಪಾರ್ಶ್ವವೆಂಬಿವು+ ಕೀಲಕಾದ್ರಿಗಳು
ನಂದನವು +ಬಡಗಣದು +ಪಡುವಣ
ಚಂದವಹ+ ವೈಭ್ರಾಜ +ತೆಂಕಲು
ಗಂಧಮಾದನ +ಚೈತ್ರರಥ+ ಮೂಡಣದು +ಕೇಳೆಂದ

ಅಚ್ಚರಿ:
(೧) ಕೀಲಾದ್ರಿಗಳ ಹೆಸರು – ಮಂದರ, ಗಂಧಮಾದನ, ವಿಮಳ, ಸುಪಾರ್ಶ್ವ

ಪದ್ಯ ೩೭: ದೇವತೆಗಳ ಆಶ್ರಯ ಸ್ಥಾನಗಳಾವುವು?

ಸುರಪತಿಯ ದಿಕ್ಕಿನಲಿ ಬೆಳೆದಿಹು
ದರಳಿ ಜಂಬೂವೃಕ್ಷ ತೆಂಕಲು
ಹಿರಿದೆನಿಪ ತನಿವಣ್ಣರಸ ನದಿಯಾಗಿ ಹರಿದಿಹುದು
ವರುಣನಿಹ ದೆಸೆಯಲಿ ಕದಂಬವು
ಹರಸಖನ ದಿಕ್ಕಿನಲಿ ವಟಕುಜ
ಸುರರಿಗಾಶ್ರಯವೆನಿಸಿ ಕೀಲಕ ಗಿರಿಯ ಮೇಲಿಹುದು (ಅರಣ್ಯ ಪರ್ವ, ೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೀಲಕಗಿರಿಯ ಶಿಖರದ ಮೇಲೆ ಪೂರ್ವದಲ್ಲಿ ಅಶ್ವತ್ಥ ವೃಕ್ಷವಿದೆ. ದಕ್ಷಿಣದಲ್ಲಿ ನೇರಳೆ ವೃಕ್ಷವಿದೆ, ಅದರ ಹಣ್ಣುಗಳುದುರಿ ಅದರ ರಸವು ನದಿಯಾಗಿ ಹರಿಯುತ್ತದೆ. ಪಶ್ಚಿಮದಲ್ಲಿ ಕದಂಬ ವೃಕ್ಷವಿದೆ, ಉತ್ತರ ದಿಕ್ಕಿನಲ್ಲಿ ಆಲದ ಮರವಿದೆ, ಇವು ದೇವತೆಗಳಿಗೆ ಆಶ್ರಯ ಸ್ಥಾನಗಳು.

ಅರ್ಥ:
ಸುರಪತಿ: ಇಂದ್ರ; ದಿಕ್ಕು: ದಿಶೆ; ಬೆಳೆದಿಹು: ಮರ, ಗಿಡ ಬೆಳೆದುದು; ಅರಳಿ: ಅಶ್ವತ್ಥ ಮರ; ವೃಕ್ಷ: ಮರ, ತರು; ತೆಂಕಲು: ದಕ್ಷಿಣ; ರಸ: ಸಾರ; ಹರಿ: ನಿವಾರಿಸು, ಪರಿಹಾರ; ವರುಣ: ನೀರಿನ ಅಧಿದೇವತೆ; ದೆಸೆ: ದಿಕ್ಕು; ಹರಸಖ: ಕುಬೇರ; ವಟ: ಆಲದ ಮರ; ಆಶ್ರಯ: ಆಸರೆ, ಅವಲಂಬನ; ಗಿರಿ: ಬೆಟ್ಟ;

ಪದವಿಂಗಡಣೆ:
ಸುರಪತಿಯ +ದಿಕ್ಕಿನಲಿ +ಬೆಳೆದಿಹುದ್
ಅರಳಿ +ಜಂಬೂ+ವೃಕ್ಷ+ ತೆಂಕಲು
ಹಿರಿದೆನಿಪ+ ತನಿವಣ್ಣರಸ+ ನದಿಯಾಗಿ +ಹರಿದಿಹುದು
ವರುಣನಿಹ +ದೆಸೆಯಲಿ +ಕದಂಬವು
ಹರಸಖನ +ದಿಕ್ಕಿನಲಿ +ವಟ+ಕುಜ
ಸುರರಿಗ್+ಆಶ್ರಯವೆನಿಸಿ+ ಕೀಲಕ +ಗಿರಿಯ +ಮೇಲಿಹುದು

ಅಚ್ಚರಿ:
(೧) ಪೂರ್ವ ದಿಕ್ಕಿಗೆ – ಸುರಪತಿಯ ದಿಕ್ಕು, ಉತ್ತರ ದಿಕ್ಕು – ಹರಸಖನ ದಿಕ್ಕು, ಪಶ್ಚಿಮ – ವರುಣನಿಹ ದಿಶೆ, ದಕ್ಷಿಣ – ತೆಂಕಲು;

ಪದ್ಯ ೩೬: ಕೀಲಕ ಪರ್ವತವದಾವುದು?

ಸುರಗಿರಿಯ ಮೊದಲಲ್ಲಿ ಕೀಲಕ
ಗಿರಿಯು ನಾಲ್ಕವರಲ್ಲಿ ಕೇಸರ
ಸರಸಿ ನಾಲ್ಕರುಣೋದೆ ಭದ್ರೆ ಸಿತೋದೆ ಮಾನಸದ
ಹೊರಗೆ ನಾಲ್ಕುದ್ಯಾನ ಕೀಲಕ
ಗಿರಿಯುದಯವೈವತ್ತು ಯೋಜನ
ಹರಹು ತಾನು ಸಹಸ್ರಯೋಜನವದರ ಶಿಖರದಲಿ (ಅರಣ್ಯ ಪರ್ವ, ೮ ಸಂಧಿ, ೩೬ ಪದ್ಯ)

ತಾತ್ಪರ್ಯ:
ಮೇರು ಪರ್ವತದ ಪಕ್ಕದಲ್ಲಿ ನಾಲ್ಕು ಕೀಲಕ ಬೆಟ್ಟಗಳಿವೆ. ಅಲ್ಲಿ ಕೇಸರದಂತೆ ಅರುಣೋದೆ, ಭದ್ರೆ, ಸಿತೋದೆ, ಮಾನಸ ಎಂಬ ನಾಲ್ಕು ಸರೋವರಗಳಿವೆ. ಅವುಗಳಾಚೆ ನಾಲ್ಕು ಉದ್ಯಾನಗಳಿವೆ. ಕೀಲಕ ಗಿರಿಯ ಮೊದಲು ಐವತ್ತು ಯೋಜನ ವಿಸ್ತಾರ ಅದು ಸಹಸ್ರ ಯೋಜನಗಳಷ್ಟು ಹರಡಿದೆ. ಅದರ ಅಗ್ರಭಾಗದಲ್ಲಿ…

ಅರ್ಥ:
ಸುರಗಿರಿ: ಮೇರು ಪರ್ವತ; ಗಿರಿ: ಬೆಟ್ಟ; ಸರಸಿ: ಸರೋವರ; ಹೊರಗೆ: ಆಚೆ; ಉದ್ಯಾನ: ಉಪವನ; ಉದಯ: ಹುಟ್ಟು; ಹರಹು: ವಿಸ್ತಾರ; ಸಹಸ್ರ: ಸಾವಿರ; ಶಿಖರ: ತುದಿ, ಅಗ್ರ;

ಪದವಿಂಗಡಣೆ:
ಸುರಗಿರಿಯ +ಮೊದಲಲ್ಲಿ +ಕೀಲಕ
ಗಿರಿಯು +ನಾಲ್ಕವರಲ್ಲಿ+ ಕೇಸರ
ಸರಸಿ+ ನಾಲ್ಕ್+ಅರುಣೋದೆ +ಭದ್ರೆ +ಸಿತೋದೆ +ಮಾನಸದ
ಹೊರಗೆ +ನಾಲ್ಕ್+ಉದ್ಯಾನ +ಕೀಲಕ
ಗಿರಿ+ಉದಯವ್+ಐವತ್ತು +ಯೋಜನ
ಹರಹು +ತಾನು +ಸಹಸ್ರ+ಯೋಜನವ್+ಅದರ +ಶಿಖರದಲಿ

ಅಚ್ಚರಿ:
(೧) ಕೀಲಕ ಗಿರಿಯ ಸರೋವರ – ಅರುಣೋದೆ, ಭದ್ರೆ, ಸಿತೋದೆ, ಮಾನಸ

ಪದ್ಯ ೩೫: ಗಂಗೆಯ ಉಪನದಿಗಳಾವು?

ಅಳಕನಂದೆ ಸುಚಕ್ಷು ನಿರ್ಮಲ
ಜಲದ ಭದ್ರೆಯು ಸತ್ಯೆಯೆಂಬಿವು
ತಿಳಿಯೆ ದಕ್ಷಿಣವಾದಿಯಾಗಿ ಪ್ರದಕ್ಷಿಣಾರ್ಧದಲಿ
ಸುಳಿದು ಮೇರುವಿನಿಂದ ಕುಲಗಿರಿ
ಗಿಳಿದು ಜಾಹ್ನವಿ ನಾಲ್ಕು ದಿಕ್ಕಿನ
ಜಲನಿಧಿಯ ಬೆರೆಸಿದಳು ಕೇಳ್ ಜದಘವ ಪರಿಹರಿಸಿ (ಅರಣ್ಯ ಪರ್ವ, ೮ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅಳಕನಂದೆ, ಸುಚಕ್ಷು, ಭದ್ರೆ, ಸತ್ಯೆ ಎನ್ನುವ ಈ ನಾಲ್ಕು ಗಂಗಾನದಿಯ ಶಾಖೆಗಳು ದಕ್ಷಿಣದ ಕಡೆಗೆ ಅರ್ಧ ಪ್ರದಕ್ಷಿಣೆಯಾಗಿ ಸುಳಿದು, ಮೇರು ಪರ್ವತದಿಂದ ಕೆಳಗಿಳಿದ ಜಾಹ್ನವಿಯು ಲೋಕದ ಪಾಪಗಳನ್ನು ಕಳೆಯುತ್ತಾ ನಾಲ್ಕು ದಿಕ್ಕಿನ ಸಮುದ್ರಗಳನ್ನು ಸೇರಿದಳು.

ಅರ್ಥ:
ನಿರ್ಮಲ: ಶುದ್ಧ; ಜಲ: ನೀರು; ತಿಳಿ: ಪ್ರಕಾಶಿಸು, ಹೊಳೆ, ಭಾವಿಸು; ಪ್ರದಕ್ಷಿಣೆ: ಸುತ್ತುವರಿ; ಸುಳಿ: ಆವರಿಸು, ಮುತ್ತು; ಗಿರಿ: ಬೆಟ್ಟ; ಇಳಿ: ಜಾರು, ಕೆಳಗೆ ಬಾ; ಜಾಹ್ನವಿ: ಗಂಗೆ; ದಿಕ್ಕು: ದಿಶೆ; ಜಲನಿಧಿ: ಸಾಗರ; ಬೆರೆಸು: ಸೇರು; ಅಘ: ಪಾಪ; ಪರಿಹರಿಸು: ಹೋಗಲಾಡಿಸು;

ಪದವಿಂಗಡಣೆ:
ಅಳಕನಂದೆ +ಸುಚಕ್ಷು +ನಿರ್ಮಲ
ಜಲದ +ಭದ್ರೆಯು +ಸತ್ಯೆೆ+ಎಂಬಿವು
ತಿಳಿಯೆ +ದಕ್ಷಿಣವಾದಿಯಾಗಿ+ ಪ್ರದಕ್ಷಿಣಾರ್ಧದಲಿ
ಸುಳಿದು+ ಮೇರುವಿನಿಂದ +ಕುಲಗಿರಿಗ್
ಇಳಿದು +ಜಾಹ್ನವಿ +ನಾಲ್ಕು +ದಿಕ್ಕಿನ
ಜಲನಿಧಿಯ+ ಬೆರೆಸಿದಳು +ಕೇಳ್ +ಜಗದ್+ಅಘವ +ಪರಿಹರಿಸಿ

ಅಚ್ಚರಿ:
(೧) ಗಂಗೆಯ ಉಪನದಿಗಳು – ಅಳಕನಂದೆ, ಸುಚಕ್ಷು, ಭದ್ರೆ, ಸತ್ಯೆ

ಪದ್ಯ ೩೪: ಗಂಗೆ ಎಷ್ಟು ಮುಖವಾಗಿ ಹರಿದಳು?

ನರಸುರರು ಮೊದಲಾದ ಸಚರಾ
ಚರದ ಜೀವರಘಂಗಳನು ಸಂ
ಹರಿಸಲೋಸುಗ ಸತ್ಯಲೋಕದಿನಿಳಿದುಬಹ ಗಂಗೆ
ಧರೆ ಧರಿಸಲರಿದೆಂದು ಕನಕದ
ಗಿರಿಯ ಶಿಖರದ ನಡುವೆ ಬರುತಿಹ
ಪರಮ ಪಾವನೆ ತಿರುಗಿ ಹರಿದಳು ನಾಲ್ಕು ಮುಖವಾಗಿ (ಅರಣ್ಯ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಮನುಷ್ಯರು, ದೇವತೆಗಳು, ಚಲಿಸುವ ಜೀವಿಗಳು, ಚಲಿಸದ ವಸ್ತುಗಳು ಮೊದಲಾದ ಎಲ್ಲರ ಪಾಪಗಳನ್ನು ನಿವಾರಿಸುವುದಕ್ಕಾಗಿ ಪರಮ ಪಾವನೆಯಾದ ಗಂಗಾದೇವಿಯು ಸ್ವರ್ಗಲೋಕದಿಂದ ಇಳಿದು ಬಂದಳು. ಭೂಮಿಯು ತನ್ನನ್ನು ಧರಿಸಲಾರದೆಂದು ಬಂಗಾರದ ಗಿರಿಯ ನಡುವೆ ಬಂದು ನಾಲ್ಕು ಮುಖವಾಗಿ ಹರಿದಳು.

ಅರ್ಥ:
ನರ: ಮನುಷ್ಯ; ಸುರ: ದೇವತೆ; ಮೊದಲಾದ: ಆದಿ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಜೀವ: ಉಸಿರು; ಅಘ: ಪಾಪ; ಸಂಹರಿಸು: ನಾಶಪಡಿಸು; ಸತ್ಯಲೋಕ: ಸ್ವರ್ಗ; ಇಳಿ: ಜಾರು, ಕೆಳಗೆ ಬರು; ಗಂಗೆ: ಸುರನದಿ; ಧರೆ: ಭೂಮಿ; ಧರಿಸು: ಹಿಡಿ, ತೆಗೆದುಕೊಳ್ಳು, ಹೊರು; ಅರಿ: ತಿಳಿ; ಕನಕ: ಹೇಮ, ಚಿನ್ನ; ಗಿರಿ: ಬೆಟ್ಟ; ಶಿಖರ: ತುದಿ; ನಡುವೆ: ಮಧ್ಯಭಾಗ; ಪರಮ: ಶ್ರೇಷ್ಠ; ಪಾವನ: ಶುದ್ಧ; ತಿರುಗಿ: ಸುತ್ತು, ಹೊರಳು; ಹರಿ: ಚಲಿಸು, ಪ್ರವಹಿಸು; ಮುಖ: ಆನನ;

ಪದವಿಂಗಡಣೆ:
ನರ+ಸುರರು+ ಮೊದಲಾದ+ ಸಚರಾ
ಚರದ+ ಜೀವರ್+ಅಘಂಗಳನು +ಸಂ
ಹರಿಸಲೋಸುಗ+ ಸತ್ಯಲೋಕದಿನ್+ಇಳಿದುಬಹ+ ಗಂಗೆ
ಧರೆ+ ಧರಿಸಲರಿದೆಂದು +ಕನಕದ
ಗಿರಿಯ +ಶಿಖರದ+ ನಡುವೆ +ಬರುತಿಹ
ಪರಮ+ ಪಾವನೆ+ ತಿರುಗಿ+ ಹರಿದಳು +ನಾಲ್ಕು +ಮುಖವಾಗಿ

ಅಚ್ಚರಿ:
(೧) ಗಂಗೆಯನ್ನು ಪರಮ ಪಾವನೆ ಎಂದು ಕರೆದಿರುವುದು