ಪದ್ಯ ೧೨: ಇಂದ್ರನ ರಥವು ಹೇಗೆ ಹೊಳೆಯುತ್ತಿತ್ತು?

ಅರಸ ಕೇಳೈ ಹತ್ತು ಸಾವಿರ
ತುರಗ ನಿಕರದ ಲಳಿಯ ದಿವ್ಯಾಂ
ಬರದ ಸಿಂದದ ಸಾಲುಸತ್ತಿಗೆಗಳ ಪತಾಕೆಗಳ
ಖರರುಚಿಯ ಮಾರಾಂಕವೋ ಸುರ
ಗಿರಿಯ ಸೋದರವೋ ಮೃಗಾಂಕನ
ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ (ಅರಣ್ಯ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಆ ರಥಕ್ಕೆ ವೇಗವಾಗಿ ಚರಿಸುವ ಹತ್ತು ಸಾವಿರ ಕುದುರೆಗಳನ್ನು ಕಟ್ಟಿದ್ದರು. ದಿವ್ಯ ವಸ್ತ್ರದಿಂದ ಮಾಡಿದ ಧ್ವಜ, ಸಾಲು ಕೊಡೆಗಳು, ಉಳಿದ ಪತಾಕೆಗಳಿಂದ ಆ ರಥವು ಶೋಭಿಸುತ್ತಿತ್ತು. ಇದು ಸೂರ್ಯಪ್ರಕಾಶದ ಪ್ರತಿಸ್ಪರ್ಧಿಯೋ, ಮೇರು ಪರ್ವತದ ಸಹೋದರನೋ, ಚಂದ್ರನ ಇನ್ನೊಂದು ಮಂಡಲವೋ ಎಂಬಂತೆ ಇಂದ್ರ ರಥವು ಹೊಳೆಯುತ್ತಿತ್ತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹತ್ತು: ದಶ; ಸಾವಿರ: ಸಹಸ್ರ; ತುರಗ: ಕುದುರೆ; ನಿಕರ: ಗುಂಪು; ಲಳಿ: ರಭಸ, ಆವೇಗ; ದಿವ್ಯ: ಶ್ರೇಷ್ಠ; ಅಂಬರ: ಬಟ್ಟೆ; ಸತ್ತಿಗೆ: ಕೊಡೆ, ಛತ್ರಿ; ಪತಾಕೆ: ಧ್ವಜ; ಖರ: ಹೆಚ್ಚಾಗಿ, ವಿಶೇಷವಾಗಿ; ಮಾರಾಂಕ: ಪ್ರತಿಯುದ್ಧ; ಸುರ: ದೇವತೆ; ಗಿರಿ: ಬೆಟ್ಟ; ಸೋದರ: ಅಣ್ಣ ತಮ್ಮಂದಿರು; ಮೃಗಾಂಕ: ಚಂದ್ರ; ಮರು: ಮತ್ತೊಂದು; ತಲೆ: ಶಿರ; ಮೇಣ್: ಮತ್ತು; ಹೊಳೆ: ಪ್ರಕಾಶಿಸು; ಅಂಬರ: ಆಗಸ;

ಪದವಿಂಗಡಣೆ:
ಅರಸ +ಕೇಳೈ +ಹತ್ತು +ಸಾವಿರ
ತುರಗ+ ನಿಕರದ +ಲಳಿಯ +ದಿವ್ಯಾಂ
ಬರದ+ ಸಿಂದದ +ಸಾಲು+ಸತ್ತಿಗೆಗಳ+ ಪತಾಕೆಗಳ
ಖರರುಚಿಯ +ಮಾರಾಂಕವೋ +ಸುರ
ಗಿರಿಯ +ಸೋದರವೋ +ಮೃಗಾಂಕನ
ಮರುದಲೆಯೊ +ಮೇಣ್+ಎನಲು +ರಥ +ಹೊಳೆದಿಳಿದುದ್+ಅಂಬರದಿ

ಅಚ್ಚರಿ:
(೧) ಅಂಬರ – ಬಟ್ಟೆ, ಆಗಸ ಎಂದು ಅರ್ಥೈಸುವ ಪರಿ
(೨) ಉಪಮಾನದ ಬಳಕೆ – ಖರರುಚಿಯ ಮಾರಾಂಕವೋ ಸುರಗಿರಿಯ ಸೋದರವೋ ಮೃಗಾಂಕನ
ಮರುದಲೆಯೊ ಮೇಣೆನಲು ರಥ ಹೊಳೆದಿಳಿದುದಂಬರದಿ
(೩) ಮೃಗಾಂಕ, ಮಾರಾಂಕ – ಪ್ರಾಸ ಪದ

ಪದ್ಯ ೧೧: ಅರ್ಜುನನಿಗೆ ಆಗಸದಲ್ಲಿ ಯಾರು ಗೋಚರನಾದನು?

ಬೀಳುಗೊಟ್ಟರು ನರನನೀ ದಿ
ಕ್ಪಾಲರಂತರ್ಧಾನದೊಡನೆ ಸ
ಮೇಳರಾದರು ಶಕ್ರಸಾರಥಿ ಸುಳಿದನಭ್ರದಲಿ
ಜಾಳಿಗೆಯ ಮಣಿವೆಳಗುಗಳ ವೈ
ಹಾಳಿಗಳ ವೈಢೂರ್ಯ ದೀಪ್ತಿನಿ
ವಾಳಿಗಳ ಸುಪತಾಕೆ ಬೆಳಗುವ ಹೇಮರಥ ಸಹಿತ (ಅರಣ್ಯ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಅರ್ಜುನನನ್ನು ಬೀಳ್ಕೊಟ್ಟು ದಿಕ್ಪಾಲಕರು ಅದೃಶ್ಯರಾಗಿ ಹೋದರು. ಅಷ್ಟರಲ್ಲಿ ಇಂದ್ರನ ಸಾರಥಿಯಾದ ಮಾತಲಿಯು ಆಕಾಶದಲ್ಲಿ ಕಂಡನು. ದಿವ್ಯರತ್ನಗಳ ಜಾಳಿಗೆಗಳು, ವೈಢೂರ್ಯದ ಬೆಳಕಿನಿಂದ ಕೂಡಿ, ದಿವ್ಯ ಧ್ವಜಗಳಿಂದ ಕೂಡಿದ ರಥದಲ್ಲಿ ಮಾತಲಿಯು ಗೋಚರನಾದನು.

ಅರ್ಥ:
ಬೀಳುಕೊಡು: ಕಳುಹಿಸು; ನರ: ಅರ್ಜುನ; ದಿಕ್ಪಾಲ: ದಿಕ್ಕಿನ ಅಧಿಪತಿ; ಅಂತರ್ಧಾನ: ಅದೃಶ್ಯವಾಗುವುದು; ಮೇಳ: ಗುಂಪು; ಶಕ್ರ: ಇಂದ್ರ; ಸಾರಥಿ: ರಥವನ್ನು ಓಡಿಸುವವ; ಅಭ್ರ: ಆಗಸ; ಜಾಳಿಗೆ: ಬಲೆ, ಜಾಲ; ಮಣಿ: ಬೆಲೆಬಾಳುವ ರತ್ನ; ವೈಹಾಳಿ: ಸಂಚಾರ, ವಿಹಾರ; ವೈಢೂರ್ಯ: ಬೆಲೆಬಾಳುವ ರತ್ನ; ದೀಪ್ತಿ: ಬೆಳಕು, ಕಾಂತಿ; ವಾಳಿ: ಸಾಲು; ಪತಾಕೆ: ಧ್ವಜ, ಬಾವುಟ; ಬೆಳಗು: ಹೊಳಪು; ಹೇಮ: ಚಿನ್ನ; ರಥ: ಬಂಡಿ; ಸಹಿತ: ಜೊತೆ;

ಪದವಿಂಗಡಣೆ:
ಬೀಳುಗೊಟ್ಟರು +ನರನನ್+ಈ+ದಿ
ಕ್ಪಾಲರ್+ಅಂತರ್ಧಾನದೊಡನೆ +ಸ
ಮೇಳರಾದರು +ಶಕ್ರ+ಸಾರಥಿ +ಸುಳಿದನ್+ಅಭ್ರದಲಿ
ಜಾಳಿಗೆಯ +ಮಣಿವೆಳಗುಗಳ +ವೈ
ಹಾಳಿಗಳ +ವೈಢೂರ್ಯ +ದೀಪ್ತಿನಿ
ವಾಳಿಗಳ+ ಸುಪತಾಕೆ +ಬೆಳಗುವ+ ಹೇಮರಥ +ಸಹಿತ

ಅಚ್ಚರಿ:
(೧) ಜಾಳಿ, ವೈಹಾಳಿ, ನಿವಾಳಿ – ಪ್ರಾಸ ಪದಗಳು
(೨) ವೈ ಕಾರದ ಪದಗಳು – ವೈಹಾಳಿ, ವೈಢೂರ್ಯ

ಪದ್ಯ ೧೦: ಅರ್ಜುನನು ಇಂದ್ರನಿಗೆ ಏನು ಹೇಳಿದ?

ಹೈ ಹಸಾದವು ನೂರು ಯಜ್ಞದ
ಮೇಹುಗಾಡನು ಮೆಟ್ಟಲೆಮ್ಮೀ
ಹೂಹೆಗಳಿಗಳವಡುವದೊಲ್ಲೆವೆ ನಿಮ್ಮ ಕರುಣದಲಿ
ಐಹಿಕದಲಾಮುಷ್ಮಿಕದ ಸ
ನ್ನಾಹ ಸಂಭವಿಸುವುದೆ ನಿಷ್ಪ್ರ
ತ್ಯೂಹವೆಂದೆರಗಿದನು ಫಲುಗುಣನಿಂದ್ರನಂಘ್ರಿಯಲಿ (ಅರಣ್ಯ ಪರ್ವ, ೮ ಸಂಧಿ, ೧೦ ಪದ್ಯ)

ತಾತ್ಪರ್ಯ:
ಓಹೋ ನಿಮ್ಮ ಆಜ್ಞೆಯನ್ನು ಮಹಾಪ್ರಸಾದವೆಮ್ದು ಸ್ವೀಕರಿಸುತ್ತೇನೆ. ನೂರು ಯಜ್ಣ್ಯಗಳ ಫಲವನ್ನನುಭವಿಸುವ ಪ್ರದೇಶವನ್ನು ಮೆಟ್ಟಲು ನಮ್ಮಂತಹ ಮನುಷ್ಯ ಗೊಂಬೆಗಳಿಗೆ ಸಾಧ್ಯವಾದೀತೆ? ಈ ಭೂಲೋಕದಲ್ಲಿರುವಾಗಲೇ ಪರಲೋಕದ ಸಂದರ್ಶನವಾಸಗಳು ಸಿಕ್ಕಾವೆ? ಯಾವ ಅಡ್ಡಿಯೂ ಇಲ್ಲದೆ ಒಪ್ಪಿಕೊಂಡೆ ಎಂದು ಅರ್ಜುನನು ಇಂದ್ರನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಹೈ: ಓಹೋ; ಹಸಾದ: ಪ್ರಸಾದ; ನೂರು: ಶತ; ಯಜ್ಞ: ಕ್ರತು; ಮೇಹುಗಾಡು: ಮೇಯುವ ಅಡವಿ; ಮೆಟ್ಟು: ಕಾಲಿಡು, ಓಡಾಡು; ಹೂಹೆ: ಹಸುಳೆ, ಶಿಶು; ಅಳವಡು: ಹೊಂದು, ಸೇರು; ಕರುಣ: ದಯೆ; ಐಹಿಕ: ಇಹಲೋಕ; ಸನ್ನಾಹ: ಸನ್ನೆ, ಸುಳಿವು; ಸಂಭವಿಸು: ಉಂಟಾಗು, ಒದಗಿಬರು; ಪ್ರತ್ಯೂಹ: ಅಡ್ಡಿ, ಅಡಚಣೆ; ಎರಗು: ನಮಸ್ಕರಿಸು; ಅಂಘ್ರಿ: ಪಾದ;

ಪದವಿಂಗಡಣೆ:
ಹೈ +ಹಸಾದವು +ನೂರು +ಯಜ್ಞದ
ಮೇಹುಗಾಡನು +ಮೆಟ್ಟಲ್+ಎಮ್ಮೀ
ಹೂಹೆಗಳಿಗ್+ಅಳವಡುವದ್+ಒಲ್ಲೆವೆ+ ನಿಮ್ಮ +ಕರುಣದಲಿ
ಐಹಿಕದಲ್+ಆ+ಮುಷ್ಮಿಕದ +ಸ
ನ್ನಾಹ+ ಸಂಭವಿಸುವುದೆ+ ನಿಷ್ಪ್ರ
ತ್ಯೂಹವೆಂದ್+ಎರಗಿದನು +ಫಲುಗುಣನ್+ಇಂದ್ರನ್+ಅಂಘ್ರಿಯಲಿ

ಅಚ್ಚರಿ:
(೧) ಹೈ ಹಸಾದ – ಹ ಕಾರದ ಜೋಡಿ ಪದ
(೨) ಉಪಮಾನದ ಪ್ರಯೋಗ – ನೂರು ಯಜ್ಞದಮೇಹುಗಾಡನು ಮೆಟ್ಟಲೆಮ್ಮೀ ಹೂಹೆಗಳಿಗಳವಡುವದೊಲ್ಲೆವೆ

ಪದ್ಯ ೯: ಅರ್ಜುನನನ್ನು ಎಲ್ಲಿ ವಿಶ್ರಾಂತಿ ಪಡೆಯಲು ಹೇಳಿದನು?

ಕೃತ ತಪಸ್ಸಿಂ ಭಿನ್ನ ಖೇದ
ಕ್ಷತ ಶರೀರ ವ್ಯಥೆಯನಮರಾ
ವತಿಯೊಳಗೆ ಕಳೆ ರಥಸಹಿತ ಕಳುಹುವೆನು ಮಾತಲಿಯ
ಕ್ರತುಶತದ ಕೈಗಾಣಿಕೆಯ ದೀ
ಕ್ಷಿತರ ಸಿರಿಯೆಂತವರ ಮನವಾ
ರತೆಯದೆಂತುಟೊ ನೋಡಬೇಹುದು ಪಾರ್ಥನೀನೆಂದ (ಅರಣ್ಯ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ತಪಸ್ಸಿನಿಂದ ಶಿಥಿಲಗೊಂಡ ನೋವಿನ ಹೊಡೆತದಿಂದುಂಟಾದ ವ್ಯಥೆಯನ್ನು ನೀನು ಅಮರಾವತಿಯಲ್ಲಿ ಕಳೆದುಕೊ, ಅಲ್ಲಿಗೆ ನಿನ್ನನ್ನು ನನ್ನ ಸಾರಥಿ ಮಾತಲಿಯನ ಜೊತೆ ರಥಸಹಿತ ಕಳಿಸುವೆನು. ನೂರು ಅಶ್ವಮೇಧ ರಾಜಸೂಯಗಳನ್ನು ಮಾಡಿದ ಯಜ್ಞದೀಕ್ಷಿತರಾದ ರಾಜರು ಎಂತಹ ಐಶ್ವರ್ಯವನ್ನು ಪಡೆದಿದ್ದಾರೆ, ಅವರ ಮನೆ ವಾರ್ತೆ ಹೇಗಿದೆ ಎನ್ನುವುದನ್ನು ನೀನು ನೋಡಬೇಕು ಎಂದು ಇಂದ್ರನು ಅರ್ಜುನನಿಗೆ ಹೇಳಿದನು.

ಅರ್ಥ:
ಕೃತ: ಮಾಡಿದ; ತಪಸ್ಸು: ಧ್ಯಾನ; ಭಿನ್ನ: ತ್ಯಾಸ, ಭೇದ; ಖೇದ: ದುಃಖ, ಉಮ್ಮಳ; ಕ್ಷತ: ಗಾಯ, ಪೆಟ್ಟು; ಶರೀರ: ತನು; ವ್ಯಥೆ: ದುಃಖ; ಅಮರಾವತಿ: ಇಂದ್ರನ ಪುರ; ಕಳೆ: ಕಲಿ, ತೇಜ; ರಥ: ಬಂಡಿ; ಸಹಿತ: ಜೊತೆ; ಕಳುಹುವೆ: ಬೀಳ್ಕೊಡು; ಮಾತು: ವಾಣಿ; ಕ್ರತು: ಯಾಗ, ಯಜ್ಞ; ಶತ: ನೂರು; ದೀಕ್ಷೆ: ವ್ರತ, ನಿಯಮ; ಸಿರಿ: ಐಶ್ವರ್ಯ; ಮನ; ಮನಸ್ಸು: ವಾರತೆ: ವಾರ್ತೆ, ಸುದ್ದಿ; ನೋಡು: ವೀಕ್ಷಿಸು; ಮಾತಲಿ: ಇಂದ್ರನ ಸಾರಥಿ;

ಪದವಿಂಗಡಣೆ:
ಕೃತ +ತಪಸ್ಸಿಂ +ಭಿನ್ನ +ಖೇದ
ಕ್ಷತ +ಶರೀರ +ವ್ಯಥೆಯನ್+ಅಮರಾ
ವತಿ+ಯೊಳಗೆ+ ಕಳೆ +ರಥಸಹಿತ+ ಕಳುಹುವೆನು +ಮಾತಲಿಯ
ಕ್ರತು+ಶತದ +ಕೈಗಾಣಿಕೆಯ +ದೀ
ಕ್ಷಿತರ +ಸಿರಿ+ಎಂತವರ+ ಮನ+ವಾ
ರತೆಯದೆಂತುಟೊ +ನೋಡಬೇಹುದು +ಪಾರ್ಥನೀನೆಂದ

ಅಚ್ಚರಿ:
(೧) ಇಂದ್ರನ ಸಾರಥಿಯ ಹೆಸರು – ಮಾತಲಿ

ಪದ್ಯ ೮: ಇಂದ್ರನು ಅರ್ಜುನನನ್ನೇಕೆ ಅಪ್ಪಿಕೊಂಡನು?

ಎಲೆ ಧನಂಜಯ ನಿನಗಿದೇನ
ಗ್ಗಳದ ಶರವೇ ನಿನ್ನ ಭಕ್ತಿಗೆ
ಸಿಲುಕಿದನು ಶಿವನಾತನಂಬಿದೆ ನಿನ್ನ ಸೀಮೆಯಲಿ
ಸುಲಭ ನಿನಗಿಂದಮಳ ಲಕ್ಷ್ಮೀ
ನಿಲಯ ನೀನೇ ಪೂರ್ವದಲಿ ನಿ
ರ್ಮಲಿನ ನರಋಷಿಯೆಂದು ಹರಿತೆಗೆದಪ್ಪಿದನು ಮಗನ (ಅರಣ್ಯ ಪರ್ವ, ೮ ಸಂಧಿ, ೮ ಪದ್ಯ)

ತಾತ್ಪರ್ಯ:
ಎಲೇ ಅರ್ಜುನ, ನಿನ್ನ ಭಕ್ತಿಗೆ ಶಿವನೇ ನಿನಗೆ ವಶವಾದನು, ಇನ್ನು ಶ್ರೀಕೃಷ್ಣನೇ ನಿನಗೆ ಅನುಕೂಲ ಸಖನಾಗಿದ್ದಾನೆ, ಎಂದ ಮೇಲೆ ನಾನು ನಿನಗೆ ಕೊಟ್ಟ ಅಸ್ತ್ರವು ಅಷ್ಟೇನೂ ಹೆಚ್ಚಿನದಲ್ಲ. ಹಿಂದೆ ನೀನು ಮಹಾ ಪವಿತ್ರ ತೇಜನಾದ ನರಋಷಿಯಾಗಿದ್ದೆ ಎಂದು ಹೇಳಿ ತನ್ನ ಮಗನನ್ನು ಇಂದ್ರನು ಅಪ್ಪಿಕೊಂಡನು.

ಅರ್ಥ:
ಅಗ್ಗ: ಶ್ರೇಷ್ಠ; ಶರ: ಬಾಣ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಸಿಲುಕು: ಬಂಧನಕ್ಕೊಳಗಾದುದು; ನಂಬು: ವಿಶ್ವಾಸವಿಡು; ಸೀಮೆ: ಎಲ್ಲೆ; ಸುಲಭ: ಸರಾಗ; ಅಮಳ: ನಿರ್ಮಲ; ನಿಲಯ: ಮನೆ; ಪೂರ್ವ: ಹಿಂದೆ; ನಿರ್ಮಲ: ಶುದ್ಧ; ಹರಿ:ಇಂದ್ರ; ಅಪ್ಪು: ಆಲಂಗಿಸು; ಮಗ: ಸುತ;

ಪದವಿಂಗಡಣೆ:
ಎಲೆ+ ಧನಂಜಯ +ನಿನಗಿದೇನ್
ಅಗ್ಗಳದ +ಶರವೇ+ ನಿನ್ನ+ ಭಕ್ತಿಗೆ
ಸಿಲುಕಿದನು +ಶಿವನಾತ+ ನಂಬಿದೆ +ನಿನ್ನ +ಸೀಮೆಯಲಿ
ಸುಲಭ +ನಿನಗಿಂದ್+ಅಮಳ +ಲಕ್ಷ್ಮೀ
ನಿಲಯ +ನೀನೇ +ಪೂರ್ವದಲಿ+ ನಿ
ರ್ಮಲಿನ +ನರ+ಋಷಿಯೆಂದು +ಹರಿತೆಗೆದಪ್ಪಿದನು +ಮಗನ

ಅಚ್ಚರಿ:
(೧) ಅರ್ಜುನನ ಪೂರ್ವ ಜನ್ಮದ ವಿವರ – ನೀನೇ ಪೂರ್ವದಲಿ ನಿರ್ಮಲಿನ ನರಋಷಿ
(೨) ಅಮಳ, ನಿರ್ಮಲಿನ – ಸಮನಾರ್ಥಕ ಪದ