ಪದ್ಯ ೭೬: ಶಿವನ ದರುಶನವನ್ನು ಯಾರು ಪಡೆದರು?

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿಗಡೆಮಗೆ ಲೇಸಾ
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ (ಅರಣ್ಯ ಪರ್ವ, ೭ ಸಂಧಿ, ೭೬ ಪದ್ಯ)

ತಾತ್ಪರ್ಯ:
ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ, ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು ಮೊದಲಾದ ಋಷಿಗಳು ಇಂದ್ರಕೀಲ ವನಕ್ಕೆ ಬಂದು ಅರ್ಜುನನ ತಪಸ್ಸಿಗೆ ಮೆಚ್ಚಿ, ನಿನ್ನ ತಪಸ್ಸಿನ ಸಿದ್ಧಿಯಿಂದ ನಮಗೆಲ್ಲರಿಗೂ ಶಿವನ ದರುಶನವಾಗಿದೆ ಎಂದು ಹೇಳಿ, ಶಿವನ ಪಾದಗಳಿಗೆ ನಮಸ್ಕರಿಸಿದರು.

ಅರ್ಥ:
ತನುಜ: ಮಗ; ಮುನಿ: ಋಷಿ; ವನ: ಕಾಡು; ಬಂದು: ಆಗಮಿಸು; ಲೇಸು: ಒಳಿತು; ಮೈಯಿಕ್ಕು: ನಮಸ್ಕರಿಸು; ಹರ: ಶಿವ; ಅಂಘ್ರಿ: ಪಾದ; ನಿಕರ: ಗುಂಪು;

ಪದವಿಂಗಡಣೆ:
ಸನಕ +ನಾರದ +ಭೃಗು +ಪರಾಶರ
ತನುಜ +ಭಾರದ್ವಾಜ +ಗೌತಮ
ಮುನಿ +ವಸಿಷ್ಠ +ಸನತ್ಕುಮಾರನು +ಕಣ್ವನ್+ಉಪಮನ್ಯು
ವನಕೆ+ ಬಂದರು +ಪಾರ್ಥ +ಕೇಳ್+ಇದು
ನಿನಗೆ +ಸಿದ್ಧಿಗಡ್+ಎಮಗೆ +ಲೇಸಾ
ಯ್ತೆನುತ +ಮೈಯಿಕ್ಕಿದುದು +ಹರನ್+ಅಂಘ್ರಿಯಲಿ +ಮುನಿನಿಕರ

ಅಚ್ಚರಿ:
(೧) ಋಷಿಮುನಿಗಳ ಪರಿಚಯ – ಸನಕ, ನಾರದ, ಭೃಗು, ವೇದವ್ಯಾಸ, ಭಾರದ್ವಾಜ, ಗೌತಮ,
ವಸಿಷ್ಠ, ಸನತ್ಕುಮಾರ, ಕಣ್ವ, ಉಪಮನ್ಯು
(೨) ವೇದವ್ಯಾಸರನ್ನು ಪರಾಶರ ತನುಜ ಎಂದು ಕರೆದಿರುವುದು

ಪದ್ಯ ೭೫: ಶಿವನು ಗೌರಿಯೊಂದಿಗೆ ಹೇಗೆ ಶೋಭಿಸಿದನು?

ಶ್ರುತಿಗಳುಪನಿಪದಾದ್ಯಖಿಳ ದೇ
ವತೆಯರಾ ಕಲ್ಪಿತ ಕಿರಾತಾ
ಕೃತಿಯನುಳಿದರು ಸುಳಿದರೀಶನ ಸುತ್ತುವಳಯದಲಿ
ಸ್ಮಿತ ಮಧುರ ಮುಖಕಾಂತಿ ಕಲ್ಲೋ
ಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದೆಡದ ಲೆಸೆದರು ಗೌರಿ ದೇವಿಯರು (ಅರಣ್ಯ ಪರ್ವ, ೭ ಸಂಧಿ, ೭೫ ಪದ್ಯ)

ತಾತ್ಪರ್ಯ:
ವೇದಗಳು, ಉಪನಿಷತ್ತುಗಳ ಅಧಿದೇವತೆಗಳು, ಉಳಿದೆಲ್ಲ ದೇವತೆಗಳು, ಕಲ್ಪಿತವಾದ ಕಿರಾತ ರೂಪವನ್ನು ಬಿಟ್ಟು ನಿಜರೂಪದಿಂದ ಶಿವನ ಸುತ್ತಲೂ ಸುಳಿದರು. ನಗುವಿನ ಮುಖ ಕಾಂತಿ ತೆರೆಯಿಂದ ಶೋಭಿತವಾದ ಕಟಾಕ್ಷವನ್ನು ಬೀರುತ್ತಾ ಗೌರೀ ದೇವಿಯು ಶಿವನ ಎಡದಲ್ಲಿ ಶೋಭಿಸಿದಳು.

ಅರ್ಥ:
ಶ್ರುತಿ: ವೇದ; ಉಪನಿಷತ್: ವೇದಾಂತ; ಅಖಿಳ: ಎಲ್ಲಾ; ದೇವತೆ: ಸುರರು; ಕಲ್ಪಿತ: ಸಜ್ಜುಗೊಳಿಸಿದ, ಕಾಲ್ಪನಿಕ; ಕಿರಾತ: ಬೇಡ; ಆಕೃತಿ: ಆಕಾರ; ಉಳಿದ: ಮಿಕ್ಕ; ಸುಳಿ: ತೀಡು, ಸುತ್ತು; ಈಶ: ಶಂಕರ; ಸುತ್ತು: ತಿರುಗು; ವಳಯ: ಪರಿಧಿ, ಆವರಣ; ಸ್ಮಿತ: ಹಸನ್ಮುಖ; ಮಧುರ: ಇಂಪು; ಮುಖ: ಆನನ; ಕಾಂತಿ: ಪ್ರಕಾಶ; ಕಲ್ಲೋಲ: ದೊಡ್ಡ ಅಲೆ; ಕಟಾಕ್ಷ: ಅನುಗ್ರಹ; ಚ್ಛವಿ: ಕಾಂತಿ; ಧೃತಿ: ಧೈರ್ಯ, ಧೀರತನ; ಎಸೆ: ತೋರು; ದೇವಿ: ಭಗವತಿ; ಎಡ: ವಾಮಭಾಗ;

ಪದವಿಂಗಡಣೆ:
ಶ್ರುತಿಗಳ್+ಉಪನಿಪದ್+ಆದಿ+ಅಖಿಳ+ ದೇ
ವತೆಯರಾ +ಕಲ್ಪಿತ+ ಕಿರಾತಾ
ಕೃತಿಯನ್+ಉಳಿದರು+ ಸುಳಿದರ್+ಈಶನ +ಸುತ್ತು+ವಳಯದಲಿ
ಸ್ಮಿತ +ಮಧುರ +ಮುಖಕಾಂತಿ +ಕಲ್ಲೋ
ಲಿತ +ಕಟಾಕ್ಷ+ಚ್ಛವಿಯಲ್+ಈಶನ
ಧೃತಿಯಲ್+ಈಡಿರಿದ್+ಎಡದಲ್+ಎಸೆದರು+ ಗೌರಿ+ ದೇವಿಯರು

ಅಚ್ಚರಿ:
(೧) ಶ್ರುತಿ, ಧೃತಿ, ಕೃತಿ – ಪ್ರಾಸ ಪದಗಳು
(೨) ಶಂಕರನ ಕರುಣ ದೃಷ್ಟಿ – ಸ್ಮಿತ ಮಧುರ ಮುಖಕಾಂತಿ ಕಲ್ಲೋಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದ್

ಪದ್ಯ ೭೪: ಶಿವನು ಪಂಚಬ್ರಹ್ಮ ರೂಪದಲ್ಲಿ ಹೇಗೆ ಹೊಳೆದನು?

ಬೇರೆ ಬೇರುರಿಗಣ್ಣುಗಳ ಫೂ
ತ್ಕಾರದಹಿಬಂಧದ ಜಟಾಕೋ
ಟೀರ ಭಾರದ ಮುಖಚತುಷ್ಟಯ ಭುಜಚತುಷ್ಟಯದ
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪಂಚವಕ್ತ್ರಾ
ಕಾರದಲಿ ಶಿವ ಮೆರೆದ ಪಂಚಬ್ರಹ್ಮ ರೂಪದಲಿ (ಅರಣ್ಯ ಪರ್ವ, ೭ ಸಂಧಿ, ೭೪ ಪದ್ಯ)

ತಾತ್ಪರ್ಯ:
ಐದು ಮುಖಗಳಿಗೂ, ಐದು ಉರಿಗಣ್ಣುಗಳು, ಫೂತ್ಕಾರ ಮಾಡುವ ಸರ್ಪದ ಬಂಧ, ಜಟೆ, ಕಿರುಜಟೆಗಳು, ನಾಲ್ಕು ಮುಖಗಳ ನಾಲ್ಕು ಭುಜಗಳು, ಬ್ರಹ್ಮ, ವಿಷ್ಣು, ರುದ್ರರಿಗೆ ಆಧಾರನಾದ ಈಶ್ವರನು (ಸದಾಶಿವನು) ಐದು ಮುಖಗಳೊಂದಿಗೆ ಪಂಚಬ್ರಹ್ಮ ರೂಪದಿಂದ ಶೋಭಿಸಿದನು.

ಅರ್ಥ:
ಬೇರೆ: ಅನ್ಯ; ಕಣ್ಣು: ನಯನ; ಉರಿ: ಬೆಂಕಿ; ಫೂತ್ಕಾರ: ಆರ್ಭಟ; ಅಹಿ: ಹಾವು; ಬಂಧ: ಕಟ್ಟು, ಬಂಧನ; ಜಟೆ: ಜಡೆಗಟ್ಟಿದ ಕೂದಲು; ಕೋಟೀರ: ಜಡೆ; ಭಾರ: ಹೊರೆ, ತೂಕ; ಮುಖ: ಆನನ; ಚತುಷ್: ನಾಲ್ಕು; ಅಷ್ಟ; ಎಂಟು; ಭುಜ: ಬಾಹು; ವಾರಿಜ: ಕಮಲ; ವಾರಿಜಾಸನ: ಬ್ರಹ್ಮ (ಕಮಲವನ್ನು ಆಸನವನ್ನಾಗಿಸಿದವ); ರುದ್ರ: ಶಿವನ ರೂಪ; ಆಧಾರ: ಆಶ್ರಯ; ಈಶ್ವರ: ಶಂಕರ; ಪಂಚ: ಐದು; ವಕ್ತ್ರ: ಮುಖ; ಮೆರೆ: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ಬೇರೆ+ ಬೇರ್+ಉರಿ+ಕಣ್ಣುಗಳ+ ಫೂ
ತ್ಕಾರದ್+ಅಹಿ+ಬಂಧದ +ಜಟಾ+ಕೋ
ಟೀರ +ಭಾರದ +ಮುಖ+ಚತುಷ್ಟಯ +ಭುಜ+ಚತುಷ್ಟಯದ
ವಾರಿಜಾಸನ+ ವಿಷ್ಣು +ರುದ್ರ
ಆಧಾರನ್+ಈಶ್ವರ +ಪಂಚ+ವಕ್ತ್ರಾ
ಕಾರದಲಿ +ಶಿವ +ಮೆರೆದ +ಪಂಚಬ್ರಹ್ಮ +ರೂಪದಲಿ

ಅಚ್ಚರಿ:
(೧) ಚತುಷ್ಟಯ ಪದದ ಬಳಕೆ – ಮುಖಚತುಷ್ಟಯ ಭುಜಚತುಷ್ಟಯದ

ಪದ್ಯ ೭೩: ಶಿವನು ಈಶಾನ ಮುಖದಲ್ಲಿ ಹೇಗೆ ಪ್ರಜ್ವಲಿಸಿದ?

ಎಳೆಯ ಮುತ್ತಿನ ಢಾಳವನು ಮು
ಕ್ಕುಳಿಸಿದಂಗ ಚ್ಛವಿಯಭಯ ವರ
ಲುಳಿತ ಜಪಮಣಿ ವೇದ ಪಾಶಾಂಕುಶದ ಡಮರುಗದ
ಲಲಿತ ಖಟ್ವಾಂಗದ ಕಪಾಲದ
ಹೊಳೆವ ಶೂಲದ ಕರದ ನಿಗಮಾ
ವಳಿ ಶಿರೋಮಣಿ ಮೆರೆದನಂದೀಶಾನವಕ್ತ್ರದಲಿ (ಅರಣ್ಯ ಪರ್ವ, ೭ ಸಂಧಿ, ೭೩ ಪದ್ಯ)

ತಾತ್ಪರ್ಯ:
ಮುತ್ತಿನ ಕಾಂತಿಯನ್ನು ಸೂಸುವ ದೇಹ ಪ್ರಭೆ, ಅಭಯ ವರದ ಹಸ್ತಗಳು, ಜಪಮಣಿ, ವೇದ, ಪಾಶ, ಅಂಕುಶ, ಡಮರುಗ, ಖಟ್ವಾಂಗ, ಬ್ರಹ್ಮ ಕಪಾಲ ಶೂಲಗಳನ್ನು ಧರಿಸಿ ವೇದ ಶಿರೋಮಣಿಗಯಾದ ಶಿವನು ಈಶಾನ ಮುಖದಿಂದ ಪ್ರಜ್ವಲಿಸಿದನು.

ಅರ್ಥ:
ಎಳೆಯ: ಚಿಕ್ಕ; ಮುತ್ತು: ಬೆಲೆಬಾಳುವ ಹವಳ; ಢಾಳ:ಕಾಂತಿ, ಪ್ರಕಾಶ; ಮುಕ್ಕುಳಿಸು: ಹೊರಹಾಕು; ಅಂಗ: ದೇಹ; ಚ್ಛವಿ: ಕಾಂತಿ; ಅಭಯ: ನಿರ್ಭೀತ; ವರ: ಅನುಗ್ರಹ, ಶ್ರೇಷ್ಠ; ಲುಳಿ:ಕಾಂತಿ; ಜಪಮಣಿ: ಅಕ್ಷಮಾಲಾ; ವೇದ: ಶೃತಿ; ಪಾಶ: ಹಗ್ಗ, ಮಿಣಿ; ಅಂಕುಶ: ಹಿಡಿತ, ಹತೋಟಿ, ಒಂದು ಆಯುಧ; ಡಮರು: ಸಂಗೀತದ ವಾದ್ಯ; ಲಲಿತ: ಚೆಲುವು; ಖಟ್ವಾಂಗ: ತಲೆಬುರುಡೆಯ ತುದಿಯನ್ನುಳ್ಳ ಶಿವನ ಗದೆ; ಕಪಾಲ: ತಲೆಬುರುಡೆ; ಹೊಳೆ: ಕಾಂತಿ; ಶೂಲ: ತ್ರಿಸೂಲ; ಕರ: ಹಸ್ತ; ನಿಗಮ: ವೇದ, ಶ್ರುತಿ; ಆವಳಿ: ಸಾಲು, ಗುಂಪು; ಶಿರೋಮಣಿ: ಶ್ರೇಷ್ಠ, ಚೂಡಾಮಣಿ; ಮೆರೆ: ಹೊಳೆ, ಪ್ರಕಾಶಿಸು; ವಕ್ತ್ರ: ಮುಖ;

ಪದವಿಂಗಡಣೆ:
ಎಳೆಯ +ಮುತ್ತಿನ +ಢಾಳವನು +ಮು
ಕ್ಕುಳಿಸಿದ್+ಅಂಗ +ಚ್ಛವಿ+ಅಭಯ +ವರ
ಲುಳಿತ +ಜಪಮಣಿ +ವೇದ +ಪಾಶಾಂಕುಶದ +ಡಮರುಗದ
ಲಲಿತ +ಖಟ್ವಾಂಗದ +ಕಪಾಲದ
ಹೊಳೆವ +ಶೂಲದ +ಕರದ +ನಿಗಮಾ
ವಳಿ +ಶಿರೋಮಣಿ +ಮೆರೆದನಂದ್+ಈಶಾನ+ವಕ್ತ್ರದಲಿ

ಅಚ್ಚರಿ:
(೧) ಹೊರಹಾಕು ಎಂದು ಹೇಳಲು ಮುಕ್ಕುಳಿಸಿದ್ ಪದದ ಬಳಕೆ
(೨) ಚ್ಛವಿ, ಹೊಳೆ – ಸಾಮ್ಯಾರ್ಥ ಪದ
(೩) ಶಿರೋಮಣಿ, ಜಪಮಣಿ – ಪ್ರಾಸ ಪದಗಳು

ಪದ್ಯ ೭೨: ಶಿವನು ತತ್ಪುರ್ಷಮುಖದಿಂದ ಹೇಗೆ ಹೊಳೆದನು?

ಪರಶು ಡಮರುಗ ಖಡ್ಗ ಖೇಟಕ
ಶರ ಧನುಃ ಶೂಲದ ಕಪಾಲದ
ಕರದ ರಕ್ತಾಂಬರದ ಪಣಿಪನ ಭೋಗ ಭೂಷಣದ
ಸ್ಫುರದಘೋರದಭೇದದಭಯದ
ಕರದ ಪರಶು ಮೃಗಂಗಲಲಿ ತ
ತ್ಪುರುಷ ಮುಖದಲಿ ಮೆರೆದನೆರಕದ ಮಿಂಚಿನಂದದಲಿ (ಅರಣ್ಯ ಪರ್ವ, ೭ ಸಂಧಿ, ೭೨ ಪದ್ಯ)

ತಾತ್ಪರ್ಯ:
ಗಂಡುಕೊಡಲಿ, ಡಮರುಗ, ಕತ್ತಿಗುರಾಣಿ, ಬಿಲ್ಲುಬಾಣ, ಶೂಲ, ಕಪಾಲ ಹಸ್ತ, ಕೆಂಪುಬಟ್ಟೆ, ಸರ್ಪಭೂಷಣ, ಜಿಂಕೆ, ಅಭಯ ಹಸ್ತಗಳಿಂದ ಮಿಂಚಿನೆರಕವೋ ಎಂಬಂತೆ, ಅಘೋರ ರೂಪದ ಇನ್ನೊಂದು ರೀತಿಯೋ ಎಂಬಂತೆ ತತ್ಪುರುಷಮುಖದಿಂದ ಶಿವನು ರಾರಾಜಿಸಿದನು.

ಅರ್ಥ:
ಪರಶು: ಕೊಡಲಿ, ಕುಠಾರ; ಡಮರುಗ: ಸಂಗೀತದ ವಾದ್ಯ; ಖಡ್ಗ: ಕತ್ತಿ, ಕರವಾಳ; ಖೇಟಕ: ಗುರಾಣಿ; ಶರ: ಬಾಣ; ಧನು: ಬಿಲ್ಲು; ಶೂಲ: ತ್ರಿಶೂಲ; ಕಪಾಲ: ತಲೆಬುರುಡೆ; ಕರ: ಹಸ್ತ; ರಕ್ತ: ನೆತ್ತರು; ಅಂಬರ: ಬಟ್ಟೆ; ಫಣಿ: ಹಾವು; ಭೋಗ: ಹಾವಿನ ಹೆಡೆ; ಭೂಷಣ: ಅಲಂಕಾರ; ಸ್ಫುರ: ಚೆನ್ನಾಗಿರುವ; ಅಘೋರ: ಶಿವನ ಪಂಚಮುಖಗಳಲ್ಲಿ ಒಂದು; ಅಭೇದ: ಬಿರುಕಾಗದ, ಛಿದ್ರವಾಗದ; ಅಭಯ: ನಿರ್ಭೀತ; ಕರ: ಹಸ್ತ; ಮೃಗ: ಜಿಂಕೆ; ಮುಖ: ಆನನ; ಮೆರೆ: ಹೊಳೆ, ಪ್ರಕಾಶಿಸು; ಎರಕ: ಅನುರಾಗ, ಸುರಿ; ಮಿಂಚು: ಹೊಳಪು, ಕಾಂತಿ;

ಪದವಿಂಗಡಣೆ:
ಪರಶು +ಡಮರುಗ +ಖಡ್ಗ +ಖೇಟಕ
ಶರ +ಧನುಃ +ಶೂಲದ +ಕಪಾಲದ
ಕರದ +ರಕ್ತಾಂಬರದ +ಫಣಿಪನ+ ಭೋಗ +ಭೂಷಣದ
ಸ್ಫುರದ್+ಅಘೋರದ್+ಅಭೇದದ್+ಅಭಯದ
ಕರದ +ಪರಶು +ಮೃಗಂಗಳಲಿ +ತ
ತ್ಪುರುಷ +ಮುಖದಲಿ +ಮೆರೆದನ್+ಎರಕದ +ಮಿಂಚಿನಂದದಲಿ

ಅಚ್ಚರಿ:
(೧) ಅಘೋರ, ಅಭೇದ, ಅಭಯ – ಪದಗಳ ಬಳಕೆ