ಪದ್ಯ ೬೧: ಅರ್ಜುನನೇಕೆ ಕೊರಗಿದನು?

ಹೂಡಿಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯ ತೃಪ್ತನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೧ ಪದ್ಯ)

ತಾತ್ಪರ್ಯ:
ಜಗತ್ತನ್ನು ಹೂಡಿ ಅಲ್ಲಿ ಜೀವರೊಡನೆ ಸೇರಿ ವಿಷಯ ಭೋಗಗಳಿಂದ ಸಂತೋಷ ಪಡುವವನೂ, ಸೃಷ್ಟಿಯಾಗದ, ನಾಶವಾಗದ ಹೋಗಿ ಬಾರದಿರುವ ಕೂಡದ ಅಗಲದ, ನಿತ್ಯತೃಪ್ತನೂ ನಿರೂಢನೂ ಆದ ಶಿವನೊಡನೆ ನಾನು ಯುದ್ಧ ಮಾಡಿದೆನಲ್ಲವೇ ಎಂದು ಅರ್ಜುನನು ತನ್ನ ತಪ್ಪು ತಿಳುವಳಿಕೆಗಾಗಿ ಕೊರಗಿದನು.

ಅರ್ಥ:
ಹೂಡು: ಸಿದ್ಧಪಡಿಸು; ಜಗ: ಪ್ರಪಂಚ; ಜೀವರ: ಜೀವಿ; ಕೂಡೆ: ಜೊತೆ; ಬೆರಸು: ಕಲಸು; ಸಮಸ್ತ: ಎಲ್ಲಾ; ವಿಷಯ: ಇಂದ್ರಿಯ ಗೋಚರವಾಗುವ ಶಬ್ದ; ಸೊಗಸು: ಎಲುವು; ಉಪಭೋಗ: ವಿಷಯಾನುಭವ; ಪ್ರಪಂಚ: ಜಗತ್ತು; ಅಳಿ: ಸಾವು, ನಾಶ; ಗಮಿಸು: ಚಲಿಸು; ಮರಳು: ಹಿಂದಿರುಗು; ಕೂಡು: ಜೊತೆಯಾಗು; ಅಗಲ: ವಿಸ್ತಾರ; ನಿತ್ಯ: ಯಾವಾಗಲು; ತೃಪ್ತ: ಸಂತುಷ್ಟಿ; ನಿರೂಢಿ: ಸಾಮಾನ್ಯ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಹೂಡಿ+ಜಗವನು+ ಜಗದ+ ಜೀವರ
ಕೂಡೆ +ಬೆರಸಿ +ಸಮಸ್ತ+ವಿಷಯದೊಳ್
ಆಡಿ +ಸೊಗಸುವನ್+ಆತನ್+ಉಪಭೋಗ +ಪ್ರಪಂಚದಲಿ
ಹೂಡದ್+ಅಳಿಯದ +ಗಮಿಸಿ +ಮರಳದ
ಕೂಡದ್+ಅಗಲದ +ನಿತ್ಯ +ತೃಪ್ತ+ನಿ
ರೂಢನ್+ಒಡನ್+ಎಚ್ಚಾಡಿದೆವಲಾ +ಶಿವ +ಶಿವಾಯೆಂದ

ಅಚ್ಚರಿ:
(೧) ಶಂಕರನ ಗುಣಗಳ ವರ್ಣನೆ: ನಿರೂಢ, ಹೂಡದಳಿಯದ, ಕೂಡನಗಲದ, ನಿತ್ಯತೃಪ್ತ, ಗಮಿಸಿ ಮರಳದ

ಪದ್ಯ ೬೦: ಅರ್ಜುನನು ಶಿವನಿಗೆ ಸಮಜೋಡಿಯೇ?

ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಹಾ ಶರೌಘಕೆ
ಮೇಹುಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ ಗಡ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ದೇಹ ರಹಿತನಾದ ಶಿವನು ಭುಜ ಯುದ್ಧಕ್ಕೆ ಗುರಿಯೆಂದುಕೊಂಡೆನಲ್ಲವೇ? ಮೃತ್ಯುಂಜಯನು ನನ್ನ ದಿವ್ಯಾಸ್ತ್ರಗಳಿಗೆ ಆಹಾರವೆಂದುಕೊಂಡೆನಲ್ಲಾ? ವೇದಗಳು ಯಾರನ್ನು ಹುಡುಕಿ ಕಾಣವೋ ಅವನನ್ನು ನಾನು ಮೂದಲಿಸಿದೆನಲ್ಲವೇ? ಯುದ್ಧದಲ್ಲಿ ಶಿವನಿಗೆ ನಾನು ಸರಿಸಮಾನನೇ, ಶಿವ ಶಿವಾ ಎಂದು ಅರ್ಜುನನು ಕೊರಗಿದನು.

ಅರ್ಥ:
ಗಾಹು: ಮೋಸ; ಹತ್ತಾಹತ್ತಿ: ಮುಷ್ಟಾಮುಷ್ಟಿ; ಗಡ: ಅಲ್ಲವೆ; ನಿರ್ದೇಹ: ಆಕಾರವಿಲ್ಲದ; ಮಹಾ: ದೊಡ್ಡ, ಶ್ರೇಷ್ಠ; ಶರ: ಬಾಣ; ಔಘ: ಗುಂಪು; ಮೇಹು: ಮೇಯುವ; ಗಡ: ಅಲ್ಲವೇ; ಜೀವನ: ಬಾಳು, ಬದುಕು; ಮೃತ್ಯು: ಸಾವು; ಮೃತ್ಯುಂಜಯ: ಶಿವ; ಸೀಮೆ: ಎಲ್ಲೆ; ಮೂದಲಿಸು: ಹಂಗಿಸು; ನಿಗಮ: ವೇದ, ಶೃತಿ; ವ್ಯೂಹ: ಗುಂಪು; ಕೂಡೆ: ಜೊತೆ; ಹರ: ಶಿವ; ಆಹವ: ಯುದ್ಧ; ಸಮಜೋಳಿ: ಒಂದೇ ರೀತಿಯಾದ ಜೋಡಿ; ಗಡ: ಅಲ್ಲವೇ;

ಪದವಿಂಗಡಣೆ:
ಗಾಹು +ಹತ್ತಾಹತ್ತಿ+ ಗಡ +ನಿ
ರ್ದೇಹ ನೊಡನೆ+ ಮಹಾ +ಶರೌಘಕೆ
ಮೇಹು+ಗಡ+ ಜೀವನವು +ಮೃತ್ಯುಂಜಯನ +ಸೀಮೆಯಲಿ
ಆಹ+ ಮೂದಲೆ+ಗಡ+ ಸುನಿಗಮ
ವ್ಯೂಹದೂರನ+ ಕೂಡೆ+ ಹರನೊಡನ್
ಆಹವಕೆ+ ಸಮಜೋಳಿ +ನಾವ್ +ಗಡ+ ಶಿವ+ ಶಿವಾಯೆಂದ

ಅಚ್ಚರಿ:
(೧) ಗಡ ಪದದ ಬಳಕೆ – ಶರೌಘಕೆ ಮೇಹು ಗಡ, ಆಹ ಮೂದಲೆ, ಹರನೊಡನಾಹವಕೆ ಸಮಜೋಳಿ ನಾವ್ ಗಡ

ಪದ್ಯ ೫೯: ಶಿವನ ಅಕ್ಷರ ಸ್ವರೂಪವಾವುದು?

ಆ ಆಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾರಿ ಯಾವನು ಮಾತೃಕಾಕ್ಷರ ರೂಪನವ್ಯಯನು
ಆರು ವಾಙ್ಮಯನಾರು ವಾಚೋ
ದೂರನಾರು ವಚೋನಿಯಾಮಕ
ನಾರವನ ಕೂಡೆಮಗೆ ದಂಡಿಯೆ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೯ ಪದ್ಯ)

ತಾತ್ಪರ್ಯ:
ಅಕಾರ, ಉಕಾರ, ಮಕಾರಗಳಿಂದ ಕೂಡಿದ ಓಂಕಾರ ಸ್ವರೂಪನಾರೋ, ಆಕಾರ ಮೊದಲಾಗಿ ಎಲ್ಲಾ ಅಕ್ಷರಗಳ ರೂಪನಾರೋ, ಯಾರು ನಾಶ ರಹಿತನೋ, ಮಾತುಗಳಲ್ಲಿರುವವನೂ, ಮಾತುಗಳಿಂದ ದೂರನಾದವನೂ, ಯಾರು ಮಾತನ್ನು ನಿಯಮಿಸುವವನು, ಆವನೊಡನೆ ಯುದ್ಧ ಮಾಡುವ ಸಾಮರ್ಥ್ಯ ನನಗಿದೆಯೇ ಶಿವ ಶಿವಾ ಎಂದು ಅರ್ಜುನನು ಪರಿತಪಿಸಿದನು.

ಅರ್ಥ:
ವಿಮಲ: ನಿರ್ಮಲ; ಅಕ್ಷರ: ಅಕಾರ ಮೊದಲಾದ ವರ್ಣ; ಯುಕ್ತ: ಸೇರಿಕೆ, ಜೋಡಣೆ; ವಿಸ್ತಾರ: ಹರಹು, ವ್ಯಾಪ್ತಿ; ಮಾತೃ: ಆಡುವ ಮಾತು; ರೂಪ: ಆಕಾರ; ಅವ್ಯಯ: ನಾಶವಿಲ್ಲದವನು;ವಾಙ್ಮಯ: ಮಾತಿನಿಂದ ತುಂಬಿದುದು; ವಾಚೋದೂರ: ಮಾತಿನಿಂದ ದೂರನಾದವನು; ನಿಯಾಮಕ: ಹತೋಟಿಯಲ್ಲಿಟ್ಟುಕೊಂಡಿರುವವನು; ಕೂಡೆ: ಜೊತೆ; ದಂಡಿ: ಶಕ್ತಿ, ಸಾಮರ್ಥ್ಯ;

ಪದವಿಂಗಡಣೆ:
ಆ +ಆಕಾರ+ ಉಕಾರ+ ವಿಮಲ +ಮ
ಕಾರ +ಯುಕ್ತೇಕಾಕ್ಷರದ+ ವಿ
ಸ್ತಾರಿ +ಯಾವನು +ಮಾತೃಕಾಕ್ಷರ+ ರೂಪನ್+ಅವ್ಯಯನು
ಆರು +ವಾಙ್ಮಯನ್+ಆರು+ ವಾಚೋ
ದೂರನಾರು+ ವಚೋನಿಯಾಮಕನ್
ಆರವನ +ಕೂಡ್+ಎಮಗೆ +ದಂಡಿಯೆ +ಶಿವ +ಶಿವಾಯೆಂದ

ಅಚ್ಚರಿ:
(೧) ಓಂಕಾರ ಸ್ವರೂಪನು ಎಂದು ಹೇಳುವ ಪರಿ – ಆ ಆಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿಸ್ತಾರಿ ಯಾವನು

ಪದ್ಯ ೫೮: ಶಿವನ ಸ್ವರೂಪವನ್ನು ಅರ್ಜುನನು ಹೇಗೆ ವಿವರಿಸಿದನು?

ಸ್ಫುರದಲಿಂಗನು ಲಿಂಗ ಮೂಲೋ
ತ್ಕರನುದಾರವ್ಯಕ್ತ ಸದಸ
ತ್ಪರದ ಪರಶಿವನಾರು ಶೈವೋತ್ಕರುಷ ಲಿಂಗದಲಿ
ಪರಮ ಪರರೂಪಾತ್ಪರಾತ್ಪರ
ತರ ನಿರೂಪನದಾವನಾತನೊ
ಳರರೆ ನಾವೆಚ್ಚಾಡಿದವಲಾ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೮ ಪದ್ಯ)

ತಾತ್ಪರ್ಯ:
ಇಂತಹವನೆಂದು ಗುರುತಿಸಲು ಯಾವ ಚಿಹ್ನೆಯೂ ಇಲ್ಲದವನು, ಯಾರೋ ಚಿಹ್ನೆಗಳು ಇಂತಹವೆಂಬ ಪ್ರಜ್ಞೆಯನ್ನು ಕೊಡುವವನು ಯಾರೋ ಸತ್ ಅಸತ್ ಇವುಗಳಿಗಿಂತ ಹೆಚ್ಚಿನ ಪರಶಿವನಾಗಿ ಶುಭದ ಹೆಚ್ಚಳದಂತಿರುವ ಪರಶಿವನು ಯಾರೋ, ಹೆಚ್ಚಿನದಕ್ಕೆ ಹೆಚ್ಚಿನವನು ಯಾರೋ ರೂಪ ರಹಿತನಾರೋ ಅಂತಹವನೊಡನೆ ನಾನು ಯುದ್ಧ ಮಾಡಿದೆನಲ್ಲವೇ ಅಯ್ಯೋ ಶಿವ ಶಿವಾ ಎಂದು ಅರ್ಜುನನು ಕೊರಗಿದನು.

ಅರ್ಥ:
ಸ್ಫುರದ್: ಎದ್ದುಕಾಣುವ, ಚೆಲುವು; ಲಿಂಗ: ಚಿಹ್ನೆ, ಗುರುತು, ಶಿವನ ಒಂದು ಪ್ರತೀಕ ಸ್ಥಾವರ ಲಿಂಗ; ಮೂಲ: ಉಗಮ, ಬೇರು; ಉತ್ಕರ: ಸಮೂಹ; ಉದಾರ: ಧಾರಾಳ ಸ್ವಭಾವದ; ಅವ್ಯಕ್ತ: ಕಾಣದ; ಸತ್: ಒಳ್ಳೆಯ; ಅಸತ್: ಇಲ್ಲದ; ಪರ: ಶ್ರೇಷ್ಠ; ಪರಶಿವ: ಶಂಕರ; ಶೈವ: ಶಿವಾಗಮ; ಉತ್ಕರುಷ: ಹೆಚ್ಚಳ; ಪರಮ: ಶ್ರೇಷ್ಠ; ಪರ: ಬೇರೆ; ರೂಪ: ಆಕಾರ; ಪರಾತ್ಪರ: ಅತ್ಯಂತ ಶ್ರೇಷ್ಠವಾದ, ಪರಬ್ರಹ್ಮ; ನಿರೂಪ: ನಿರಾಕಾರವಾದುದು; ಅರರೆ: ಅಯ್ಯೋ, ಕೊಂಡಾಟದ ನುಡಿ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಸ್ಫುರದಲಿಂಗನು+ ಲಿಂಗ +ಮೂಲೋ
ತ್ಕರನ್+ಉದಾರ್+ಅವ್ಯಕ್ತ +ಸತ್+ಅಸತ್
ಪರದ +ಪರಶಿವನ್+ಆರು+ ಶೈವೋತ್ಕರುಷ+ ಲಿಂಗದಲಿ
ಪರಮ +ಪರ+ರೂಪಾತ್+ಪರಾತ್ಪರ
ತರ+ ನಿರೂಪನದ್+ಆವನ್+ಆತನೊಳ್
ಅರರೆ +ನಾವೆಚ್ಚಾಡಿದವಲಾ +ಶಿವ+ ಶಿವಾಯೆಂದ

ಅಚ್ಚರಿ:
(೧) ಸದಸತ್ಪರದ – ಪದದ ಬಳಕೆ, ಸತ್, ಅಸತ್ ಎಂದು ಅರ್ಥೈಸಬೇಕು
(೨) ಪರರೂಪಾತ್ಪರಾತ್ಪರ, ಪರಶಿವ – ಪರ ಪದದ ಬಳಕೆ

ಪದ್ಯ ೫೭: ಅರ್ಜುನನು ಶಿವನೊಡನೆ ಯುದ್ಧವಾಡಿದಕ್ಕೆ ಏಕೆ ಬೇಸರ ಪಟ್ಟನು?

ಜೀವರೂಪನು ಸಾಕ್ಷಿ ಕೂಟ
ಸ್ಥಾವಲಂಬದ ಕರ್ತೃ ಚೇತನ
ನಾವನೀ ಕ್ಷೇತ್ರಜ್ಞನಂತರ್ಯಾಮಿ ಸಂಜ್ಞೆಯಲಿ
ಆವನಮಲ ಪ್ರತ್ಯಗಾತುಮ
ನಾವನುರು ಪರಮಾತ್ಮನೀಶ್ವರ
ನಾವನಾತನ ಕೂಡೆ ತೋಟಿಯೆ ಶಿವ ಶಿವಾಯೆಂದ (ಅರಣ್ಯ ಪರ್ವ, ೭ ಸಂಧಿ, ೫೭ ಪದ್ಯ)

ತಾತ್ಪರ್ಯ:
ಜೀವಾತ್ಮನು ಯಾರೋ, ಸರ್ವಕ್ಕೂ ಸಾಕ್ಷಿಯಾದವನು, ಅಚಲನಾದವನು, ಎಲ್ಲಾಕೂ ಯಾರು ಆಶ್ರಯನೋ, ಜಗದ ಏಕೈಕ ಕರ್ತೃ ಯಾರೋ, ಯಾರು ಶುದ್ಧ ಅರಿವಿನ ಸ್ವರೂಪನೋ, ಯಾರು ಎಲ್ಲಾ ಕ್ಷೇತ್ರಗಳಲ್ಲಿರುವ ಕ್ಷೇತ್ರಜ್ಞನೋ, ಯಾರು ಒಳಗಿದ್ದು ನಿಯಮಿಸುವವನೋ, ಯಾವನು ಎಲ್ಲಾ ಜೀವಿಗಳ ಅತ್ಯಂತ ಒಳಗಿರುವ ಪ್ರತ್ಯಗಾತ್ಮನೋ, ಯಾರು ಎಲ್ಲರ ಆತ್ಮನೂ ಆಗಿರುವ ಪರಮಾತ್ಮನೋ, ಯಾರು ಒಡೆಯನೋ ಅಂತಹವನೊಡನೆ ನಾನು ಜಗಳವಾಡಿದೆನಲ್ಲಾ ಶಿವ ಶಿವಾ ಎಂದು ಕೊರಗಿದನು.

ಅರ್ಥ:
ಜೀವ: ಉಸಿರು; ರೂಪ: ಆಕಾರ; ಸಾಕ್ಷಿ: ಪುರಾವೆ, ರುಜುವಾತು; ಕೂಟ: ಗುಂಪು; ಸ್ಥಾವರ: ಸ್ಥಿರವಾಗಿರುವ; ಕರ್ತೃ: ಒಡೆಯ, ಪ್ರಭು, ದೇವರು; ಚೇತನ: ಮನಸ್ಸು, ಬುದ್ಧಿ; ಕ್ಷೇತ್ರಜ್ಞ: ಆತ್ಮ; ಅಂತರ್ಯಾಮಿ: ಒಳಗಿರುವ; ಸಂಜ್ಞೆ: ಗುರುತು; ಅಮಲ: ನಿರ್ಮಲ; ಪ್ರತ್ಯಗಾತ್ಮ: ಹೃದಯಗುಹೆಯಲ್ಲಿ ನಿಂತ; ಉರು: ವಿಶೇಷವಾದ; ಪರಮಾತ್ಮ: ಭಗವಂತ; ಈಶ್ವರ: ಶಂಕರ; ತೋಟಿ: ಯುದ್ಧ;

ಪದವಿಂಗಡಣೆ:
ಜೀವರೂಪನು +ಸಾಕ್ಷಿ+ ಕೂಟ
ಸ್ಥಾವಲಂಬದ+ ಕರ್ತೃ +ಚೇತನನ್
ಆವನ್+ಈ +ಕ್ಷೇತ್ರಜ್ಞನ್+ಅಂತರ್ಯಾಮಿ +ಸಂಜ್ಞೆಯಲಿ
ಆವನ್+ಅಮಲ +ಪ್ರತ್ಯಗಾತುಮನ್
ಆವನ್+ಉರು+ ಪರಮಾತ್ಮನ್+ಈಶ್ವರನ್
ಆವನ್+ಆತನ+ ಕೂಡೆ +ತೋಟಿಯೆ +ಶಿವ +ಶಿವಾಯೆಂದ

ಅಚ್ಚರಿ:
(೧) ಶಿವನ ಗುಣಗಾನ – ಆವನಮಲ ಪ್ರತ್ಯಗಾತುಮನ್, ಆವನುರು ಪರಮಾತ್ಮನೀಶ್ವರನ್