ಪದ್ಯ ೩೬: ಶಿವನು ಮರುಗಲು ಕಾರಣವೇನು?

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯೊಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯೆನೊಂದನು ಮೀರಿ ಮುನಿಯಲಿ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೬ ಪದ್ಯ)

ತಾತ್ಪರ್ಯ:
ಅರ್ಜುನನ ಘಾತದಿಂದ ಆದ ಪೆಟ್ಟನ್ನು ಸೈರಿಸಿ, ಶಿವನು ಅರ್ಜುನನನ್ನು ಪೂರ್ಣ ಶಕ್ತಿಯಿಂದ ಮೆಟ್ಟಿದನು. ಅರ್ಜುನನ ಬಾಯಲ್ಲಿ ಮೂಗಿನ ಎರಡು ಹೊಳ್ಳೆಗಳಲ್ಲಿ ರಕ್ತ ಬಂದಿತು. ಅರ್ಜುನನಿಗೆ ನೋವಾಯಿತೆಂದುಕೊಂಡು ಶಿವನು ಬಹಳವಾಗಿ ನೊಂದನು. ನಾನು ಸ್ವಲ್ಪ ಕೋಪಗೊಂಡುದರಿಂದ ತಪ್ಪಾಯಿತೇ, ನನ್ನಿಂದೇನಾದರೂ ತಪ್ಪಾಯಿತೇ ಎಂದು ಶಿವನು ಮರುಗಿದನು.

ಅರ್ಥ:
ಗಾಯ: ಪೆಟ್ಟು; ಮನ್ನಿಸು: ಒಪ್ಪು, ಅಂಗೀಕರಿಸು; ಶಿವ: ಶಂಕರ; ಪೂರಾಯ: ಪರಿಪೂರ್ಣ; ಮೆಟ್ಟು: ತುಳಿತ; ಬಾಯಿ: ಮುಖದ ಅವಯವ; ಉಕ್ಕು: ಹೊಮ್ಮಿ ಬರು; ರುಧಿರ: ರಕ್ತ; ನಾಸಿಕ: ಮೂಗು; ಬಾಹೆ: ಪಾರ್ಶ್ವ, ಹೊರವಲಯ; ಮೀರು: ಉಲ್ಲಂಘಿಸು; ಮುನಿ: ಸಿಟ್ಟಾಗು, ಕೋಪಗೊಳ್ಳು; ಅಪಾಯ: ಕೇಡು, ತೊಂದರೆ; ಅಕಟಕಟಾ: ಅಯ್ಯೋ; ತಪ್ಪು: ಸುಳ್ಳಾಗು; ಮರುಗು: ತಳಮಳ, ಸಂಕಟ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ಗಾಯವನು +ಮನ್ನಿಸುತ +ಶಿವ +ಪೂ
ರಾಯದಲಿ+ ಮೆಟ್ಟಿದನು +ಪಾರ್ಥನ
ಬಾಯೊಳ್+ಉಕ್ಕುದು +ರುಧಿರ +ನಾಸಿಕದ್+ಎರಡು+ ಬಾಹೆಯಲಿ
ನೋಯೆನೊಂದನು +ಮೀರಿ +ಮುನಿಯಲಿ
ಪಾಯವಾದುದ್+ಅಕಟಕಟಾ+ ತ
ಪ್ಪಾಯಿತೇ +ತಪ್ಪಾಯ್ತೆನುತ +ಮರುಗಿದನು +ಮದನಾರಿ

ಅಚ್ಚರಿ:
(೧) ಶಿವನು ದುಃಖಿಸಿದ ಪರಿ – ನೋಯೆನೊಂದನು ಮೀರಿ ಮುನಿಯಲಿ ಪಾಯವಾದುದಕಟಕಟಾ ತಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ

ಪದ್ಯ ೩೫: ಅರ್ಜುನನು ಕಿರಾತನನ್ನು ಯಾರೆಂದು ಪ್ರಶ್ನಿಸಿದನು?

ನಿನಗೆ ನಾ ಬೆರಗಾದೆ ನೀನಿಂ
ದೆನಗೆ ಮೆಚ್ಚಿದೆ ದೇವದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ
ಇನನೊ ಮೇಣ್ ದೇವೆಂದ್ರನೋ ಹರ
ತನುಜನೋ ಹರಿಯೋ ಮಹಾದೇ
ವನೊ ಕಿರಾತನೊನೀನೆನುತ ಮತ್ತೆರಗಿದನು ಶಿವನ (ಅರಣ್ಯ ಪರ್ವ, ೭ ಸಂಧಿ, ೩೫ ಪದ್ಯ)

ತಾತ್ಪರ್ಯ:
ಅರ್ಜುನನು ಕಿರಾತ ವೇಷದಲ್ಲಿದ್ದ ಶಿವನನ್ನು ಕಂಡು, ನಾನು ನಿನ್ನನ್ನು ಕಂಡು ಬೆರಗಾದೆ, ನೀನು ನನ್ನನ್ನು ಮೆಚ್ಚಿದೆ, ದೇವತೆಗಳೂ ದಾನವರೂ ನನಗೆ ಸೋಲುತ್ತಾರೆ, ನೀನು ನನ್ನೊಡನೆ ಸರಿದಂಡಿಯಲ್ಲಿ ಹೋರಾಡುತ್ತಿರುವೆ, ನೀನು ಸೂರ್ಯನೋ, ದೇವೇಂದ್ರನೋ, ಷಣ್ಮುಖನೋ, ವಿಷ್ಣುವೋ, ಶಿವನೋ ಅಥವಾ ಸಾಮಾನ್ಯ ಬೇಡನೋ ಎಂದು ಹೇಳುತ್ತಾ ಅರ್ಜುನನು ಶಿವನ ಮೇಲೆ ಬಿದ್ದನು.

ಅರ್ಥ:
ಬೆರಗು: ಆಶ್ಚರ್ಯ; ಮೆಚ್ಚು: ಪ್ರಿಯ, ಸಮ್ಮತಿ; ದೇವ: ಸುರರು; ದಾನವ: ರಾಕ್ಷಸ; ಜನ: ಗುಂಪು, ಜನರು; ಪಾಡು: ಸ್ಥಿತಿ, ಅವಸ್ಥೆ; ಹಲ್ಲಣಿಸು: ಸಜ್ಜಾಗು; ಇನ: ಸೂರ್ಯ; ಮೇಣ್: ಅಥವ; ದೇವೇಂದ್ರ: ಇಂದ್ರ; ಹರತನುಜ: ಷಣ್ಮುಖ; ತನುಜ: ಮಗ; ಹರ: ಶಿವ; ಹರಿ: ವಿಷ್ಣು; ಮಹಾದೇವ: ಶಂಕರ; ಕಿರಾತ: ಬೇಡ; ಎರಗು: ಬೀಳು;

ಪದವಿಂಗಡಣೆ:
ನಿನಗೆ+ ನಾ +ಬೆರಗಾದೆ +ನೀನಿಂದ್
ಎನಗೆ +ಮೆಚ್ಚಿದೆ+ ದೇವ+ದಾನವ
ಜನವ್+ಎನಗೆ+ ಪಾಡಲ್ಲ+ ನೀ +ಹಲ್ಲಣಿಸಿದೈ+ ನಮ್ಮ
ಇನನೊ +ಮೇಣ್ +ದೇವೆಂದ್ರನೋ +ಹರ
ತನುಜನೋ +ಹರಿಯೋ+ ಮಹಾದೇ
ವನೊ+ ಕಿರಾತನೊ+ನೀನ್+ಎನುತ +ಮತ್ತೆರಗಿದನು +ಶಿವನ

ಅಚ್ಚರಿ:
(೧) ಕಿರಾತನನ್ನು ಹೋಲಿಸಿದ ಪರಿ – ಇನ, ದೇವೇಂದ್ರ, ಹರತನುಜ, ಹರಿ, ಮಹಾದೇವ
(೨) ಹರ, ಮಹಾದೇವ, ಶಿವ – ಶಂಕರನನ್ನು ಕರೆಯುವ ಪರಿ

ಪದ್ಯ ೩೪: ಶಿವನು ಪಾರ್ವತಿಗೆ ಅರ್ಜುನನ ಸಾಹಸದ ಬಗ್ಗೆ ಏನು ಹೇಳಿದ?

ತ್ರಾಣವೆಂತುಟೊ ಶಿವ ಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝಪೂತು ಜಗಜಟ್ಟಿ
ಕಾಣೆ ನಿನಗೆ ಸಮಾನರನು ಶಿವ
ನಾಣೆ ಗುಣದಲಸೂಯ ತವೇ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ (ಅರಣ್ಯ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶಿವ ಶಿವಾ ನಿನಗೆ ಶಕ್ತಿ ಎಷ್ಟು ಇದೆಯೋ ಏನೋ? ನೀನು ಮಹಾ ಸತ್ವಶಾಲಿ, ಬಹು ದಿವಸ ನಿನಗೆ ಗಾಳಿಯೇ ಆಹಾರವಲ್ಲವೇ? ಭಲೇ ಭಲೇ ಎಲೈ ಜಗಜಟ್ಟಿ, ನಿನಗೆ ಸಮಾನರಿಲ್ಲ ಎಂದು ಅರ್ಜುನನಿಗೆ ಹೇಳಿ ಪಾರ್ವತಿಯ ಕಡೆಗೆ ತಿರುಗಿ, ಶಬರೀ ನನ್ನಾಣೆ, ಶಿವನಾಣೆ ಇವನ ಗುಣಕ್ಕೆ ಮತ್ಸರವೇ ಎಂದು ನಗುತ್ತಾ ಹೇಳಿದನು.

ಅರ್ಥ:
ತ್ರಾಣ: ಶಕ್ತಿ, ಬಲ; ಸತ್ರಾಣ: ಸಶಕ್ತ, ಬಲಶಾಲಿ; ಬಹು: ಬಹಳ; ದಿವಸ: ದಿನ; ಭುವನ: ಜಗತ್ತು, ಪ್ರಪಂಚ; ಪ್ರಾಣ: ವಾಯು; ಪೋಷಣ: ಆಹಾರ; ಮಝುಪೂತು: ಭಲೇ, ಕೊಂಡಾಟದ ನುಡಿ; ಜಗಜಟ್ಟಿ: ವೀರ; ಕಾಣೆ: ತೋರದು; ಸಮಾನ: ಸರಿಹೊಂದುವ; ಆಣೆ: ಪ್ರಮಾಣ; ಗುಣ: ನಡತೆ, ಸ್ವಭಾವ; ಅಸೂಯೆ: ಮತ್ಸರ; ನೋಡು: ವೀಕ್ಷಿಸು; ಶಬರಿ: ಬೇಡತಿ; ನಗು: ಸಂತಸ; ಮದನಾರಿ: ಶಿವ, ಮದನ ವೈರಿ;

ಪದವಿಂಗಡಣೆ:
ತ್ರಾಣವೆಂತುಟೊ+ ಶಿವ +ಶಿವಾ +ಸ
ತ್ರಾಣನಹೆ+ ಬಹುದಿವಸ +ಭುವನ
ಪ್ರಾಣವೇ +ಪೋಷಣವಲಾ+ ಮಝಪೂತು +ಜಗಜಟ್ಟಿ
ಕಾಣೆ+ ನಿನಗೆ+ ಸಮಾನರನು+ ಶಿವ
ನಾಣೆ +ಗುಣದಲ್+ಅಸೂಯ +ತವ
ಎನ್ನಾಣೆ +ನೋಡೌ +ಶಬರಿ+ಎಂದನು +ನಗುತ+ ಮದನಾರಿ

ಅಚ್ಚರಿ:
(೧) ತ್ರಾಣ, ಸತ್ರಾಣ, ಪ್ರಾಣ; ಆಣೆ, ಕಾಣೆ – ಪ್ರಾಸ ಪದಗಳು

ಪದ್ಯ ೩೩: ಅರ್ಜುನ ಶಿವನ ಯುದ್ಧದ ರಭಸ ಹೇಗಿತ್ತು?

ಸುಯ್ಲ ಹೊಗೆಗಳ ಹೊದರುದಿವಿಗಳ
ಮಯ್ಲುಳಿಯ ಮುರಿವುಗಳ ದೃಢವೇ
ಗಾಯ್ಲರಿಕ್ಕಿದ ಗಾಯ ಗಾಯಕೆ ಮುಷ್ಟಿಕಿಡಿಯೇಳೆ
ಶಯ್ಲ ಹತಿಗಳ ಭಾರಣೆಯ ಬಿರು
ವೊಯ್ಲ ಬೆಳೆಸಿರಿವಂತರಿವರೆನ
ಲಯ್ಲು ಪೈಲಿನ ಜರಡುಗಳೆ ನರನಾಥ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ ರಾಜ ಕೇಳು, ಅವರ ಉಸಿರುಗಳು ಬಿಸಿ ಹೊಗೆಯಂತಿದ್ದವು, ಮತ್ತೆ ಮತ್ತೆ ಮುಷ್ಟಿಘಾತವನ್ನು ಮಾಡುವ ಅವರ ಮೈಗಳು ಅತಿ ವೇಗವಾಗಿ ಚಲಿಸುತ್ತಿದ್ದವು. ಮುಷ್ಟಿಯಿಂದ ಗುದ್ದಿದರೆ ಕಿಡಿಗಳೇಳುತ್ತಿದ್ದವು, ಬೆಟ್ಟವೇ ಅಪ್ಪಳಿಸುತ್ತಿದೆಯೋ ಎನ್ನುವಂತಹ ಬಿರುಸಿನ ಹೊಡೆತಗಳು ಹೇರಳವಾಗಿದ್ದವು. ಅವರೇನು ಬಲಹೀನ ಐಲುಪೈಲುಗಳೇ ಎಂದು ವೈಶಂಪಾಯನರು ಇಬ್ಬರ ಹೋರಾಟವನ್ನು ವಿವರಿಸಿದರು.

ಅರ್ಥ:
ಸುಯ್ಲು: ನಿಟ್ಟುಸಿರು; ಹೊಗೆ: ಧೂಮ; ಹೊದರು: ಗುಂಪು, ತೊಡಕು; ದಿವಿ: ಆಕಾಶ; ಮುಯ್: ಭುಜ; ಲುಳಿ: ರಭಸ, ವೇಗ; ಮುರಿ: ಸೀಳು; ದೃಢ: ಗಟ್ಟಿ; ವೇಗಾಯ: ವೇಗವಾಗಿ ಚಲಿಸುವ; ಇಕ್ಕು: ಚುಚ್ಚು; ಗಾಯ: ಪೆಟ್ಟು; ಮುಷ್ಟಿ: ಮುಚ್ಚಿದ ಅಂಗೈ; ಕಿಡಿ: ಬೆಂಕಿ; ಏಳು: ತಲೆಯೆತ್ತು; ಶಯ್ಲ: ಶೈಲ, ಪರ್ವತ; ಹತಿ: ಪೆಟ್ಟು, ಹೊಡೆತ; ಭಾರಣೆ: ಮಹಿಮೆ, ಗೌರವ; ಬಿರುವೊಯ್ಲು: ಜೋರಾದ ಹೊಡೆತ; ಬಿರು: ಗಟ್ಟಿಯಾದುದು; ಬೆಳೆಸಿರಿ: ಬೆಳೆಯ ಸಂಪತ್ತು, ಹೆಚ್ಚಳ; ಅರಿ: ಚುಚ್ಚು; ಐಲು: ಹುಚ್ಚು, ಮರಳುತನ; ಜರಡು: ಹುರುಳಿಲ್ಲದುದು, ಜೊಳ್ಳು; ನರನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸುಯ್ಲ+ ಹೊಗೆಗಳ +ಹೊದರು+ದಿವಿಗಳ
ಮಯ್ಲುಳಿಯ +ಮುರಿವುಗಳ+ ದೃಢವೇ
ಗಾಯ್ಲರ್+ಇಕ್ಕಿದ+ ಗಾಯ +ಗಾಯಕೆ+ ಮುಷ್ಟಿ+ಕಿಡಿಯೇಳೆ
ಶಯ್ಲ+ ಹತಿಗಳ+ ಭಾರಣೆಯ+ ಬಿರು
ವೊಯ್ಲ +ಬೆಳೆಸಿರಿವಂತ್+ಅರಿವರ್+ಎನಲ್
ಅಯ್ಲು +ಪೈಲಿನ+ ಜರಡುಗಳೆ+ ನರನಾಥ+ ಕೇಳೆಂದ

ಅಚ್ಚರಿ:
(೧) ಜನಮೇಜಯನನ್ನು ನರನಾಥ ಎಂದು ಕರೆದಿರುವುದು
(೨) ಸುಯ್ಲ, ಶಯ್ಲ, ವೊಯ್ಲ, ಗಾಯ್ಲ – ಪ್ರಾಸ ಪದಗಳು
(೩) ಜೋಡಿ ಪದಗಳು – ಹೊಗೆಗಳ ಹೊದರು, ಮಯ್ಲುಳಿಯ ಮುರಿವುಗಳ
(೪) ಉಪಮಾನದ ಪ್ರಯೋಗ – ಶಯ್ಲ ಹತಿಗಳ ಭಾರಣೆಯ ಬಿರುವೊಯ್ಲ ಬೆಳೆಸಿರಿವಂತರಿವರೆನ
ಲಯ್ಲು ಪೈಲಿನ ಜರಡುಗಳೆ ನರನಾಥ ಕೇಳೆಂದ

ಪದ್ಯ ೩೨: ಅರ್ಜುನ ಮತ್ತು ಶಿವನ ಯುದ್ಧವು ಯಾರನ್ನು ನಡುಗಿಸಿತು?

ತರಹರಿಸಿ ನರನಿಕ್ಕಿದನು ಶಂ
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶ ನೆರಗಿದನಿಂದ್ರನಂದನನ
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶಂಭುವಿಮ್ತಿ
ಬ್ಬರ ವಿಷಮ ಗಾಯದ ಗಡಾವಣೆ ಘಲ್ಲಿಸಿತು ಜಗವ (ಅರಣ್ಯ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಸ್ವಲ್ಪ ಸುಧಾರಿಸಿಕೊಂಡು ಶಿವನೆದೆಗೆ ಹೊಡೆದನು. ಅದನ್ನು ತಪ್ಪಿಸಿಕೊಂಡು ಶಿವನು ಅರ್ಜುನನನ್ನು ತಿವಿದನು. ಪಾರ್ಥನು ಮತ್ತೆ ಶಿವನನ್ನು ತಿವಿದನು. ಶಿವನು ಅರ್ಜುನನ ತಲೆಯನ್ನು ಗುದ್ದಿದನು. ಇವರಿಬ್ಬರ ಹೋರಾಟಕ್ಕೆ ಲೋಕವು ನಡುಗಿತು.

ಅರ್ಥ:
ತರಹರಿಸು: ಸೈರಿಸು, ಸಮ್ಹಾಧಾನ ಗೊಳ್ಳು; ಶಂಕರ: ಶಿವ; ನರ: ಅರ್ಜುನ; ಇಕ್ಕು: ಹೊಡೆ; ವಕ್ಷಸ್ಥಳ: ಎದೆ; ಎಡೆ: ನಡುವೆ, ಮಧ್ಯ; ಮುರಿ: ಸೀಳು; ಕಳಚು: ತೆಗೆ, ಬಿಚ್ಚು; ಗಿರೀಶ: ಶಂಕರ; ಎರಗು: ಬೀಳು; ನಂದನ: ಮಗ; ಮರಳು: ಮತ್ತೆ,ಹಿಂದಿರುಗು; ತಿವಿ: ಚುಚ್ಚು; ಶಿರ: ತಲೆ; ಕೊಡು: ನೀಡು; ವಿಷಮ: ಸಮವಲ್ಲದ್ದು; ಗಾಯ: ಪೆಟ್ಟು; ಗಡಾವಣೆ: ಗಟ್ಟಿಯಾದ ಶಬ್ದ, ಕೋಲಾಹಲ; ಘಲ್ಲಿಸು: ಪೀಡಿಸು; ಜಗ: ಜಗತ್ತು;

ಪದವಿಂಗಡಣೆ:
ತರಹರಿಸಿ +ನರನ್+ಇಕ್ಕಿದನು +ಶಂ
ಕರನ +ವಕ್ಷಸ್ಥಳವನ್+ಎಡೆಯಲಿ
ಮುರಿದು +ಕಳಚಿ +ಗಿರೀಶನ್ +ಎರಗಿದನ್+ಇಂದ್ರ+ನಂದನನ
ಮರಳಿ +ತಿವಿದನು +ಪಾರ್ಥನ್+ಆತನ
ಶಿರಕೆ +ಕೊಟ್ಟನು +ಶಂಭುವ್+ಇಂತಿ
ಬ್ಬರ +ವಿಷಮ +ಗಾಯದ +ಗಡಾವಣೆ +ಘಲ್ಲಿಸಿತು +ಜಗವ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಾಯದ ಗಡಾವಣೆ ಘಲ್ಲಿಸಿತು
(೨) ಶಂಕರ, ಶಂಭು, ಗಿರೀಶ; ನರ, ಇಂದ್ರನಂದನ, ಪಾರ್ಥ – ಶಿವ ಮತ್ತು ಅರ್ಜುನನನ್ನು ಕರೆದ ಪರಿ