ಪದ್ಯ ೨೬: ಶಂಕರನು ಪಾರ್ವತಿಗೆ ಅರ್ಜುನನ ಬಗ್ಗೆ ಏನು ಹೇಳಿದನು?

ಈತ ನರನೆಂಬುವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ನೀತಗಳು ಹರಿಯಂಶ ಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷನಾದನು ಕಾಂತೆ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ಪ್ರಿಯೆ ಪಾರ್ವತಿ ಕೇಳು, ಇವನು ನರನೆಂಬ ಋಷಿ, ಇವನು ನಾರಾಯಣ ಋಷಿಯ ಸ್ನೇಹಿತ, ಇವರು ವಿಷ್ಣುವಿನ ಅಂಶ ಸಂಭೂತರು, ಇವನು ನಮ್ಮ ಭಕ್ತನು, ಇವನು ತಪಸ್ಸು ಮಾಡಿ ಪಾಶ್ಪತಾಸ್ತ್ರವನ್ನು ಬೇಡಿಕೊಂಡು ರಾಗ ದ್ವೇಷಗಳನ್ನು ಕಳೆದುಕೊಂಡವನು ಎಂದು ಹೇಳಿದನು.

ಅರ್ಥ:
ನರ: ಅರ್ಜುನ; ಸಂಗಾತಿ: ಜೊತೆ; ಋಷಿ: ಮುನಿ; ಅಂಶ: ಭಾಗ, ಅವತಾರ ರೂಪ; ಭೂತ:ಪರಮಾತ್ಮ; ಭಕ್ತ: ಆರಾಧಕ; ವಿಖ್ಯಾತ: ಪ್ರಸಿದ್ಧ; ಬಾಣ: ಶರ; ಬೇಡು: ಕೇಳು; ತಪ: ಧ್ಯಾನ; ವೀತ: ಕಳೆದ, ಬಿಟ್ಟ; ರಾಗ:ಪ್ರೀತಿ, ಮೋಹ; ದ್ವೇಷ: ಹಗೆ, ವೈರತ್ವ; ಕಾಂತೆ: ಪ್ರಿಯತಮೆ; ಕೇಳು: ಆಲಿಸು;

ಪದವಿಂಗಡಣೆ:
ಈತ +ನರನ್+ಎಂಬುವ +ಕಣಾ+ ಸಂ
ಗಾತಿ+ ನಾರಾಯಣ+ ಋಷಿಗೆ+ ತಾನ್
ಈತಗಳು+ ಹರಿಯಂಶ +ಭೂತರು +ಭಕ್ತರ್+ಇವರ್+ಎಮಗೆ
ಈತನ್+ಎಮ್ಮಯ +ಪಾಶುಪತ+ ವಿ
ಖ್ಯಾತ +ಬಾಣವ +ಬೇಡಿ +ತಪದಲಿ
ವೀತ+ರಾಗ+ದ್ವೇಷನಾದನು+ ಕಾಂತೆ +ಕೇಳೆಂದ

ಅಚ್ಚರಿ:
(೧) ಈತ, ಖ್ಯಾತ, ವೀತ – ಪ್ರಾಸ ಪದಗಳು
(೨) ನರ, ನಾರಾಯಣರ ಪರಿಚಯ ಮಾಡುವ ಪದ್ಯ

ಪದ್ಯ ೨೫: ಅರ್ಜುನನ ಪರಾಕ್ರಮದ ಬಗ್ಗೆ ಶಿವನು ಪಾರ್ವತಿಗೆ ಏನು ಹೇಳಿದ?

ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ
ಮೀರಿ ಹತ ಕಂತುಕದವೊಲ್ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ (ಅರಣ್ಯ ಪರ್ವ, ೭ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕೈಯಲ್ಲಿದ್ದ ಆಯುಧಗಳು ಹಾರಿಹೋದವೆಂದು ಅವನೇನಾದರೂ ಹೆದರಿಕೊಂಡನೇ? ವೀರರಸದ ಮೇಲಿನ ನೊರೆಯಾದರೂ ಆರಿತೇ? ಅವನ ಬಾಹು ಸತ್ವಕ್ಕೆ ಏನಾದರೂ ಕುಂದು ಬಂದೀತೇ? ಕೆಳಕ್ಕೆ ಹಾಕಿದ ಚಂಡಿನಂತೆ ಅವನ ತೋಳುಗಳು ನೆಗೆಯುತ್ತಿವೆ, ಅವನು ಸೆಡ್ಡು ಹೊಡೆಯುವುದನ್ನು ನೋಡು ಎಂದು ಶಿವನು ಪಾರ್ವತಿಗೆ ಹೇಳಿದನು.

ಅರ್ಥ:
ಹಾರು: ಲಂಘಿಸು; ಆಯುಧ: ಶಸ್ತ್ರ; ಭೀತಿ: ಭಯ; ಮಾರುಹೋಗು: ವಶವಾಗು, ಅಧೀನವಾಗು; ವೀರ: ಶೂರ; ಅರಸ: ರಾಜ; ನೊರೆ: ಬುರುಗು; ಆರು: ಬತ್ತುಹೋಗು; ನಿಜ: ತನ್ನ, ದಿಟ; ಬಾಹು: ಭುಜ; ಸತ್ವ: ಸಾರ; ಖಯಖೋಡಿ: ಅಳುಕು, ಅಂಜಿಕೆ; ಮೀರು: ಉಲ್ಲಂಘಿಸು; ಹತ: ಕೊಂದ, ಸಂಹರಿಸಿದ; ಕಂತುಕ: ಚೆಂಡು; ಪುಟ: ನೆಗೆತ; ಏರು: ಹೆಚ್ಚಾಗು; ವಿಕ್ರಮ: ಗತಿ, ಗಮನ; ಚಡಾಳಿಸು: ವೃದ್ಧಿಹೊಂದು, ಅಧಿಕವಾಗು; ಬೀರು: ಒಗೆ, ಎಸೆ, ತೋರು; ಭುಜ: ಬಾಹು; ಭಾರಿ:ಭಾರವಾದುದು, ತೂಕವಾದುದು; ಅಂಕ: ತೊಡೆ, ಯುದ್ಧ; ದೇವಿ: ಭಗವತಿ; ನೋಡು: ವೀಕ್ಷಿಸು;

ಪದವಿಂಗಡಣೆ:
ಹಾರಿತ್+ಆಯುಧವೆಂದು +ಭೀತಿಗೆ
ಮಾರುವೋದನೆ+ ವೀರರಸ+ ನೊರೆ
ಯಾರಿತೇ +ನಿಜ+ ಬಾಹುಸತ್ವದೊಳುಂಟೆ +ಖಯಖೋಡಿ
ಮೀರಿ +ಹತ+ ಕಂತುಕದವೊಲ್+ಪುಟವ್
ಏರುತಿದೆ +ವಿಕ್ರಮ +ಚಡಾಳಿಸಿ
ಬೀರುತಿದೆ +ಭುಜ +ಭಾರಿಯಂಕವ+ ದೇವಿ +ನೋಡೆಂದ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೀರುತಿದೆ ಭುಜ ಭಾರಿಯಂಕವ
(೨) ಅರ್ಜುನನ ಪರಾಕ್ರಮದ ವರ್ಣನೆ – ಹಾರಿತಾಯುಧವೆಂದು ಭೀತಿಗೆ ಮಾರುವೋದನೆ ವೀರರಸ ನೊರೆ ಯಾರಿತೇ ನಿಜ ಬಾಹುಸತ್ವದೊಳುಂಟೆ ಖಯಖೋಡಿ

ಪದ್ಯ ೨೪: ಶಿವನು ನಗುತ್ತಾ ಪಾರ್ವತಿಗೆ ಏನು ಹೇಳಿದನು?

ಕಂಡಿರೇ ದೇವಿಯರು ನರನು
ದ್ದಂಡತನವನು ತರಗೆಲೆಯ ಕೈ
ಗೊಂಡು ತಿಂಗಳು ನಾಲ್ಕ ಪವನಗ್ರಾಸದಿಂ ಬಳಿಕ
ದಂಡಿಸಿದನೀ ದೇಹವನು ನಾ
ವಂಡಲೆಯ ಲೊದಗಿದನಲೇ ಸಮ
ದಂಡಿಯಲಿ ನಮ್ಮೊಡನೆಯೆಂದನು ನಗುತ ಶಶಿಮೌಳಿ (ಅರಣ್ಯ ಪರ್ವ, ೭ ಸಂಧಿ, ೨೪ ಪದ್ಯ)

ತಾತ್ಪರ್ಯ:
ಶಿವನು, ಪಾರ್ವತೀದೇವಿ, ಅರ್ಜುನನ ಅತಿಶಯ ಪರಾಕ್ರಮವನ್ನು ನೋಡಿದಿರಾ? ನಾಲ್ಕು ತಿಂಗಳು ತರಗೆಲೆಯನ್ನು ತಿಂದು, ಬಳಿಕ ಗಾಳಿಯನ್ನೇ ಆಹಾರವನ್ನಾಗಿ ಸ್ವೀಕರಿಸಿದವನು. ಇವನು ಹೀಗೆ ದೇಹವನ್ನು ದಂಡಿಸಿದ ಬಳಿಕ, ನಮ್ಮೊಡನೆ ಸರಿಸಮನಾಗಿ ಯುದ್ಧ ಮಾಡಿದ್ದಾನೆ ಎಂದು ನಗುತ್ತಾ ಹೇಳಿದನು.

ಅರ್ಥ:
ಕಂಡು: ನೋಡು; ದೇವಿ: ಭಗವತಿ; ನರ: ಅರ್ಜುನ; ಉದ್ದಂಡ: ಪ್ರಬಲವಾದ, ಪ್ರಚಂಡವಾದ; ತರಗೆಲೆ: ಒಣಗಿದ ಎಲೆ; ಕೈಗೊಂಡು: ತೆಗೆದುಕೊಂಡು; ತಿಂಗಳು: ಮಾಸ; ಪವನ: ಗಾಳಿ; ಗ್ರಾಸ: ತುತ್ತು, ಆಹಾರ; ಬಳಿಕ: ನಂತರ; ದಂಡಿಸು: ಶಿಕ್ಷಿಸು; ದೇಹ: ಶರೀರ; ಅಂಡಲೆ: ಕಾಡು, ಪೀಡಿಸು; ನಗು: ಹರ್ಷಿಸು; ಶಶಿಮೌಳಿ: ಶಂಕರ; ಶಶಿ: ಚಂದ್ರ; ಮೌಳಿ: ಶಿರ, ತಲೆ;

ಪದವಿಂಗಡಣೆ:
ಕಂಡಿರೇ +ದೇವಿಯರು +ನರನ್
ಉದ್ದಂಡತನವನು +ತರಗೆಲೆಯ +ಕೈ
ಗೊಂಡು +ತಿಂಗಳು +ನಾಲ್ಕ +ಪವನ+ಗ್ರಾಸದಿಂ +ಬಳಿಕ
ದಂಡಿಸಿದನ್+ಈ+ ದೇಹವನು+ ನಾವ್
ಅಂಡಲೆಯಲ್ +ಒದಗಿದನಲೇ +ಸಮ
ದಂಡಿಯಲಿ +ನಮ್ಮೊಡನೆ+ಎಂದನು +ನಗುತ +ಶಶಿಮೌಳಿ

ಅಚ್ಚರಿ:
(೧) ಅರ್ಜುನನ ಆಹಾರ – ತರಗೆಲೆ, ಪವನಗ್ರಾಸ

ಪದ್ಯ ೨೩: ಅರ್ಜುನನು ಶಿವನನ್ನು ಯಾವ ಯುದ್ಧಕ್ಕೆ ಕರೆದನು?

ಕೈದುವೇಕೆ ಪುಳಿಂದ ನೊಮ್ಮೊಡ
ನೈದಿಸಾ ಭುಜಯುದ್ಧವನು ಬಲು
ಗೈದುವಿದೆಲಾ ಮುಷ್ಟಿ ನಿನಗದುಪಾಯಚೊಕ್ಕೆಯವ
ಕಾಯ್ದುಕೊಳ್ಳನುವಾಗು ನಿನ್ನವ
ರೈದಿನೋಡಲಿಯೆನುತ ಭುಜವನು
ಹೊಯ್ದು ನಿಂದನು ಪಾರ್ಥನುರೆ ಬೆರಗಾಗೆ ಭೂತಗಣ (ಅರಣ್ಯ ಪರ್ವ, ೭ ಸಂಧಿ, ೨೩ ಪದ್ಯ)

ತಾತ್ಪರ್ಯ:
ಎಲವೋ ಕಿರಾತ ನಿನ್ನ ಜೊತೆಗೆ ಯುದ್ಧ ಮಾಡಲು ಆಯುಧ ಬೇರೆ ಬೇಕೇ? ನನ್ನೊಡನೆ ಮಲ್ಲಯುದ್ಧವನ್ನು ಮಾಡು. ಮುಷ್ಟಿಯೆಂಬ ಮಹಾ ಆಯುಧ ಇದೋ ಇಲ್ಲಿದೆ, ಇದೇ ನಿನಗೆ ನನ್ನ ಉಪಾಯ, ಚೊಕ್ಕೆಯನ್ನು ಕಾಪಾಡಿಕೋ, ಇದೋ ಸಜ್ಜಾಗು ನಿನ್ನವರೆಲ್ಲರನ್ನೂ ಕರೆ, ಅವರು ನಿಂತು ನನ್ನ ನಿನ್ನ ಕಾಳಗವನ್ನು ನೋಡಲಿ ಎಂದು ಹೇಳಿದನು.

ಅರ್ಥ:
ಕೈದು: ಆಯುಧ; ಪುಳಿಂದ: ಬೇಡ, ಕಿರಾತ; ಐದು: ಬಂದುಸೇರು; ಭುಜ: ಬಾಹು; ಯುದ್ಧ: ಕಾಳಗ; ಮುಷ್ಟಿ: ಮುಚ್ಚಿದ ಅಂಗೈ; ಉಪಾಯ: ಯುಕ್ತಿ; ಚೊಕ್ಕೆಯ: ಮಲ್ಲಯುದ್ಧದಲ್ಲಿ ಒಂದು ಪಟ್ಟು; ಆಯ್ದು: ಆರಿಸು; ಅನುವು: ಅನುಕೂಲ, ರೀತಿ; ನೋಡು: ವೀಕ್ಷಿಸು; ಹೊಯ್ದು: ಹೊಡೆದು; ನಿಂದು: ನಿಲ್ಲು; ಉರೆ: ಅತಿಶಯವಾಗಿ; ಬೆರಗು: ವಿಸ್ಮಯ, ಸೋಜಿಗ; ಭೂತಗಣ: ಶಿವಗಣ;

ಪದವಿಂಗಡಣೆ:
ಕೈದುವ್+ಏಕೆ +ಪುಳಿಂದ +ನೊಮ್ಮೊಡನ್
ಐದಿಸಾ+ ಭುಜಯುದ್ಧವನು +ಬಲು
ಕೈದುವಿದೆಲಾ +ಮುಷ್ಟಿ +ನಿನಗದ್+ಉಪಾಯ+ಚೊಕ್ಕೆಯವ
ಕಾಯ್ದುಕೊಳ್+ಅನುವಾಗು +ನಿನ್ನವರ್
ಐದಿನೋಡಲಿ+ಎನುತ +ಭುಜವನು
ಹೊಯ್ದು +ನಿಂದನು+ ಪಾರ್ಥನ್+ಉರೆ +ಬೆರಗಾಗೆ +ಭೂತಗಣ

ಅಚ್ಚರಿ:
(೧) ಚೊಕ್ಕೆ – ಮಲ್ಲಯುದ್ಧದ ವರೆಸೆಯನ್ನು ತಿಳಿಸುವ ಪದ್ಯ
(೨) ಕಾಯ್ದು, ಹೊಯ್ದು – ಪ್ರಾಸ ಪದಗಳು

ಪದ್ಯ ೨೨: ಶಿವನು ಅರ್ಜುನನಿಗೆ ಏನು ಹೇಳಿದನು?

ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾಜಲಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳರೆ ಕೊಂಡುಬಾಯೆಂದ (ಅರಣ್ಯ ಪರ್ವ, ೭ ಸಂಧಿ, ೨೨ ಪದ್ಯ)

ತಾತ್ಪರ್ಯ:
ಮರದ ದೊಡ್ಡಕೊಂಬೆಗಳಿಂದ, ಕಲ್ಲುಗುಂಡುಗಳಿಂದ ಅರ್ಜುನನು ಶಿವನನ್ನು ಹೊಡೆದನು, ಕಿರಾತನು ಬಾಣಗಳಿಂದ ಅವೆಲ್ಲವನ್ನೂ ಕತ್ತರಿಸಿ, ಅಯ್ಯೋ ಹುಚ್ಚ ತಪಸ್ವಿ, ನಿನ್ನ ಬಳಿ ಬೇರೆ ಆಯುಧಗಳಿದ್ದರೆ ತೆಗೆದುಕೊಂಡು ಬಾ ಎಂದು ಹೇಳಿದನು.

ಅರ್ಥ:
ಮರ: ತರು; ಹೆಗ್ಗೊಂಬು: ದೊಡ್ಡ ಕೊಂಬೆಗಳು; ಇಟ್ಟನು: ಹೊಡೆದನು; ತಿರುಹಿ: ಮತ್ತೆ; ಕಲ್ಲು: ಶಿಲ; ಮಳೆ: ವರ್ಷಿಸು, ಧಾರೆ; ಹರ: ಶಿವ; ನಾದು: ತೋಯಿಸು; ಉರವಣೆ: ಆತುರ, ಅವಸರ; ಸರಳ: ಬಾಣ; ಸಾರು: ಬಳಿ ಸೇರು; ಕತ್ತರಿಸು: ಕಡಿ; ಕರುಣ: ದಯೆ; ಜಲಧಿ: ಸಾಗರ; ನುಡಿ: ಹೇಳು, ಮಾತಾಡು; ಮರುಳೆ: ಮೂಢ; ತಮ್ಮಡಿ: ನಿಮ್ಮ ಪಾದ; ಕೈದು: ಆಯುಧ, ಶಸ್ತ್ರ; ಕೊಂಡು: ತರು;

ಪದವಿಂಗಡಣೆ:
ಮರನ +ಹೆಗ್ಗೊಂಬುಗಳಲ್+ಇಟ್ಟನು
ತಿರುಹಿ +ಕಲ್ಗುಂಡುಗಳ+ ಮಳೆಯಲಿ
ಹರನ+ ನಾದಿದನ್+ಏನನೆಂಬೆನು +ಪಾರ್ಥನ್+ಉರವಣೆಯ
ಸರಳ +ಸಾರದಲ್+ಇನಿತುವನು +ಕ
ತ್ತರಿಸಿ+ ಕರುಣಾಜಲಧಿ +ನುಡಿದನು
ಮರುಳೆ +ತಮ್ಮಡಿ+ ಕೈದುವುಳ್ಳರೆ +ಕೊಂಡುಬಾಯೆಂದ

ಅಚ್ಚರಿ:
(೧) ಹೆಗ್ಗೊಂಬುಗಳ, ಕಲ್ಗುಂಡುಗಳ – ಪದಗಳ ಬಯಕೆ
(೨) ಕರುಣಾಜಲಧಿ – ಶಿವನನ್ನು ಕರೆದಬಗೆ