ಪದ್ಯ ೭: ಶಕುನಿ ದುರ್ಯೋಧನನಿಗೆ ಏನು ಸಲಹೆ ನೀಡಿದನು?

ಜಯವಹುದೆ ನಿರ್ವೇದದಲಿ ನಿ
ರ್ಭಯವಹುದೆ ಬಿಸುಸುಯ್ಲಿನಲಿ ನಿ
ರ್ಣಯವಹುದೆ ರಿಪುನೃಪರಿಗಿದು ತಾ ನೀತಿಮಾರ್ಗದಲಿ
ನಿಯತವಿದು ನಿಶ್ಯೇಷ ನಿಮ್ಮ
ನ್ವಯಕೆ ನಿರ್ವಾಹವನು ಗಾಂಧಾ
ರಿಯಲಿ ನಿಮ್ಮಯ್ಯನಲಿ ಬೆಸಗೊಳ್ಳೆಂದನಾ ಶಕುನಿ (ಸಭಾ ಪರ್ವ, ೧೭ ಸಂಧಿ, ೭ ಪದ್ಯ)

ತಾತ್ಪರ್ಯ:
ಎಲೇ ದುರ್ಯೋಧನ, ನೀನು ವೈರಾಗ್ಯದಿಂದಿದ್ದರೆ ಜಯವುಂಟಾಗುವುದೇ? ಬಿಸಿಯಾಗಿ ನಿಟ್ಟುಸಿರಿಟ್ಟರೆ ಭಯವು ಹೋಗುತ್ತದೆಯೇ? ಶತ್ರುರಾಜರು ಅಡುಗುವರೇ? ನೀತಿಯನ್ನೇ ನಂಬಿಕೊಂಡು ನಡೆದರೆ ನಮಗೇನು ಉಳಿಯುವುದಿಲ್ಲ, ನಿಮ್ಮ ತಂದೆ ತಾಯಿಗಳನ್ನು ನಿಮ್ಮ ವಂಶಕ್ಕೆ ಮುಂದೇನು ಗತಿ ಎಂದು ಕೇಳಿರಿ, ಎಂದು ಶಕುನಿ ದುರ್ಯೋಧನನಿಗೆ ಸಲಹೆ ನೀಡಿದನು.

ಅರ್ಥ:
ಜಯ: ಗೆಲುವು; ನಿರ್ವೇದ: ವೈರಾಗ್ಯ, ವಿರಕ್ತಿ; ನಿರ್ಭಯ: ನಿರ್ಭೀತಿ, ಧೈರ್ಯ; ಬಿಸುಸುಯ್: ನಿಟ್ಟುಸಿರುಬಿಡು; ನಿರ್ಣಯ: ತೀರ್ಮಾನ; ರಿಪು: ವೈರಿ; ನೃಪ: ರಾಜ; ನೀತಿ: ವಿವೇಚನೆ; ಮಾರ್ಗ: ದಾರಿ; ನಿಯತ: ನಿಶ್ಚಿತವಾದುದು; ನಿಶ್ಯೇಷ: ಏನು ಉಳಿಯದ; ಅನ್ವಯ: ಹೊಂದಿಕೆ ಅಥವಾ ವಂಶ; ನಿರ್ವಾಹ: ಆಧಾರ, ಆಶ್ರಯ; ಅಯ್ಯ: ತಂದೆ; ಬೆಸಗೊಳ್: ಕೇಳು;

ಪದವಿಂಗಡಣೆ:
ಜಯವಹುದೆ +ನಿರ್ವೇದದಲಿ+ ನಿ
ರ್ಭಯವಹುದೆ+ ಬಿಸುಸುಯ್ಲಿನಲಿ+ ನಿ
ರ್ಣಯವಹುದೆ+ ರಿಪು+ನೃಪರಿಗಿದು +ತಾ +ನೀತಿಮಾರ್ಗದಲಿ
ನಿಯತವಿದು +ನಿಶ್ಯೇಷ +ನಿಮ್
ಅನ್ವಯಕೆ +ನಿರ್ವಾಹವನು+ ಗಾಂಧಾ
ರಿಯಲಿ +ನಿಮ್ಮಯ್ಯನಲಿ+ ಬೆಸಗೊಳ್ಳೆಂದನಾ +ಶಕುನಿ

ಅಚ್ಚರಿ:
(೧) ನಿ ಕಾರ ಪದಗಳ ಬಳಕೆ – ನಿರ್ವೇದ, ನಿರ್ಭಯ, ನಿರ್ಣಯ, ನೀತಿಮಾರ್ಗ, ನಿಯತ, ನಿಶ್ಯೇಷ, ನಿಮ್ಮನ್ವಯ, ನಿರ್ವಾಹ, ನಿಮ್ಮಯ್ಯ

ಪದ್ಯ ೬: ದುರ್ಯೋಧನನ ಹತಾಶದ ನುಡಿ ಹೇಗಿತ್ತು?

ಬೊಪ್ಪನಿತ್ತನು ವರವನೆವಗದು
ತಪ್ಪಿಸಲು ತೀರುವುದೆ ಭೀಮನ
ದರ್ಪಕರ್ಜುನನುಬ್ಬಟೆಗೆ ಮಾಡಿದೆವು ಮದ್ದುಗಳ
ತಪ್ಪಿಸಿತಲೇ ದೈವಗತಿ ನ
ಮ್ಮಪ್ಪನೇ ಕೆಡಿಸಿದನುನವಗಿ
ನ್ನಪ್ಪುದಾಗಲಿಯೆಂದು ಸುಯ್ದನು ಕೌರವರ ರಾಯ (ಸಭಾ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ನಮ್ಮ ತಂದೆಯು ಅವರಿಗೆ ವರವನ್ನು ದಯಪಾಲಿಸಿದನು. ಅದನ್ನು ತಪ್ಪಿಸಲು ನನ್ನಿಂದ ಸಾಧ್ಯವೇ? ಭೀಮಾರ್ಜುನರ ದರ್ಪಕ್ಕೆ ಅಹಂಕಾರಕ್ಕೆ ತಕ್ಕ ಮದ್ದನ್ನು ಮಾಡಿದುದಾಯ್ತು, ಆದರೆ ದೈವವು ನಮ್ಮ ಉದ್ದೇಶವನ್ನು ತಪ್ಪಿಸಿದ್ದರಿಂದ, ನಮ್ಮಪ್ಪನೇ ನಮ್ಮನ್ನು ಹಾಳುಮಾಡಿದನು, ಇನ್ನು ಏನಾಗುವುದೋ ಆಗಲಿ ಎಂದು ದುರ್ಯೋಧನನು ನಿಟ್ಟುಸಿರಿಟ್ಟನು.

ಅರ್ಥ:
ಬೊಪ್ಪ: ತಂದೆ; ಇತ್ತನು: ನೀಡಿದ; ವರ: ಅನುಗ್ರಹ; ತಪ್ಪಿಸು: ಆಗದಂತೆ ಮಾಡು; ತೀರು: ಸಲ್ಲು, ಸಂದಾಯ; ದರ್ಪ: ಅಹಂಕಾರ; ಉಬ್ಬಟೆ: ಅತಿಶಯ, ಹಿರಿಮೆ; ಮದ್ದು: ಉಪಾಯ, ಔಷಧ; ದೈವ: ಭಗವಂತ; ಗತಿ: ರೀತಿ; ಕೆಡಿಸು: ಹಾಳುಮಾದು; ಸುಯ್ದು: ನಿಟ್ಟುಸಿರಿಟ್ಟು; ರಾಯ: ರಾಜ;

ಪದವಿಂಗಡಣೆ:
ಬೊಪ್ಪನಿತ್ತನು+ ವರವನ್+ಎವಗದು
ತಪ್ಪಿಸಲು +ತೀರುವುದೆ +ಭೀಮನ
ದರ್ಪಕ್+ಅರ್ಜುನನ+ಉಬ್ಬಟೆಗೆ +ಮಾಡಿದೆವು +ಮದ್ದುಗಳ
ತಪ್ಪಿಸಿತಲೇ +ದೈವಗತಿ +ನ
ಮ್ಮಪ್ಪನೇ +ಕೆಡಿಸಿದನುನವಗಿನ್
ಅಪ್ಪುದಾಗಲಿ+ಎಂದು +ಸುಯ್ದನು +ಕೌರವರ +ರಾಯ

ಅಚ್ಚರಿ:
(೧) ಬೊಪ್ಪ, ಅಪ್ಪ – ಸಮನಾರ್ಥಕ ಪದ
(೨) ತಾನು ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳದೆ ದೈವ ಮತ್ತು ತಂದೆಯ ಮೇಲೆ ತಪ್ಪನ್ನು ಹಾಕುವ ಪರಿ – ತಪ್ಪಿಸಿತಲೇ ದೈವಗತಿ ನಮ್ಮಪ್ಪನೇ ಕೆಡಿಸಿದನುನವಗಿ ನ್ನಪ್ಪುದಾಗಲಿಯೆಂದು ಸುಯ್ದನು ಕೌರವರ ರಾಯ

ಪದ್ಯ ೫: ಕರ್ಣನು ದುರ್ಯೋಧನನಿಗೆ ಏನು ಹೇಳಿದ?

ಅವರ ಹೆಂಡಿರ ಮುಂದಲೆಯ ಹಿಡಿ
ದವಗಡವ ಮಾಡಿಸಿದೆ ಪಟ್ಟದ
ಯುವತಿಯಾಕೆಯ ಭಂಗಪಡಿಸಿದೆ ನಿನ್ನಲಾಪನಿತು
ಅವಳ ದೈವೋದಯವದೈಸಲೆ
ಸವಡಿ ಸೀರೆಯ ಸುತ್ತು ಸಡಿಲದು
ನಿವಗದಾಗಲೆ ಮರೆದು ಹಿಂಗಿದುದೆಂದನಾ ಕರ್ಣ (ಸಭಾ ಪರ್ವ, ೧೭ ಸಂಧಿ, ೫ ಪದ್ಯ)

ತಾತ್ಪರ್ಯ:
ದುರ್ಯೋಧನ, ಪಾಂಡವರ ರಾಣಿಯ ತಲೆಗೂದಲನ್ನು ಹಿಡಿದು ಎಳೆಸಿ ಅನಾಹುತ ಮಾಡಿಕೊಂಡೆ, ನೀನೆಷ್ಟು ಹಿಂಸೆ ಕೊಡಬಹುದು ಆ ಹೆಣ್ಣಿಗೆ ಅಷ್ಟನ್ನೂ ನೀಡಿದೆ ಆದರೆ ಆ ಪಟ್ಟದರಾಣಿಗೆ ದೈವವು ಒಲೆಯಿತು. ವಸ್ತ್ರಾಪಹರಣಕ್ಕೆ ಕೈಹಾಕಿದರೂ ದೈವದ ಕೃಪೆಯಿಂದ ಸೀರೆಗಳ ಸುತ್ತು ಸಡಿಲವಾಗಲೇ ಇಲ್ಲ. ಅದೇ ಕಾಲಕ್ಕೆ ದೈವವು ನಿನಗೆ ವಿಮುಖವಾಗಿ ನಿನ್ನನ್ನು ಮರೆತುಬಿಟ್ಟಿತು ಎಂದು ಕರ್ಣನು ಹೇಳಿದನು.

ಅರ್ಥ:
ಹೆಂಡಿರ: ಹೆಂಡತಿ, ಮಡದಿ; ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು; ಅವಗಡ: ಅಸಡ್ಡೆ; ಮಾಡಿಸು: ನಿರ್ವಹಿಸು; ಪಟ್ಟದಯುವತಿ: ಪಟ್ಟದ ರಾಣಿ; ಯುವತಿ: ಹೆಣ್ಣು; ಪಟ್ಟ: ಅಧಿಕಾರ ಸೂಚಕವಾದ ಪಟ್ಟಿ; ಭಂಗ: ಮುರಿ; ದೈವ: ಭಗವಂತ; ಉದಯ: ಹುಟ್ಟು; ಐಸಲೆ: ಅಲ್ಲವೇ; ಸವಡಿ: ಜೊತೆ, ಜೋಡಿ; ಸೀರೆ: ವಸ್ತ್ರ; ಸುತ್ತು: ಆವರಿಸು; ಸಡಿಲ: ಬಿಗಿಯಿಲ್ಲದಿರುವುದು; ಮರೆ: ನೆನಪಿನಿಂದ ದೂರಮಾಡು; ಹಿಂಗು: ಕಡಮೆಯಾಗು;

ಪದವಿಂಗಡಣೆ:
ಅವರ +ಹೆಂಡಿರ+ ಮುಂದಲೆಯ +ಹಿಡಿದ್
ಅವಗಡವ+ ಮಾಡಿಸಿದೆ+ ಪಟ್ಟದ
ಯುವತಿ+ಆಕೆಯ +ಭಂಗಪಡಿಸಿದೆ+ ನಿನ್ನಲಾಪನಿತು
ಅವಳ+ ದೈವೋದಯವದ್+ಐಸಲೆ
ಸವಡಿ+ ಸೀರೆಯ+ ಸುತ್ತು +ಸಡಿಲದು
ನಿವಗ್+ಅದಾಗಲೆ +ಮರೆದು +ಹಿಂಗಿದುದ್+ಎಂದನಾ +ಕರ್ಣ

ಅಚ್ಚರಿ:
(೧) ಸ ಕಾರದ ಸಾಲು ಪದ – ಸವಡಿ ಸೀರೆಯ ಸುತ್ತು ಸಡಿಲದು
(೨) ದೈವ ನಿನಗೆ ವಿಮುಖವಾಯಿತು ಎಂದು ಹೇಳುವ ಪರಿ – ನಿವಗದಾಗಲೆ ಮರೆದು ಹಿಂಗಿದುದೆಂದನಾ
(೩) ದ್ರೌಪದಿಯನ್ನು ಪಟ್ಟದಯುವತಿ ಎಂದು ಕರೆದ ಪರಿ

ಪದ್ಯ ೪: ಶಕುನಿಯು ದುರ್ಯೋಧನನ ಸ್ಥಿತಿಯನ್ನು ಹೇಗೆ ವಿವರಿಸಿದನು?

ಮುರಿಮುರಿದು ಪಟ್ಟಣವ ನೋಡುತ
ನರವೃಕೋದರರೌಡುಗಚ್ಚುತ
ತಿರುಗಿದರು ಗಡ ಗಾಢಬದ್ಧ ಭೃಕುಟಿ ಭೀಷಣರು
ಕರಿಯಸೊಗಡಿನ ಮೃಗ ಪತಿಗೆ ಮೈ
ಹರಿದ ಹಂದಿಗೆ ನೊಂದ ಹಾವಿಂ
ಗರಸ ಮೈಚಾಚಿದೆಯಲಾ ನೀನೆಂದನಾ ಶಕುನಿ (ಸಭಾ ಪರ್ವ, ೧೭ ಸಂಧಿ, ೪ ಪದ್ಯ)

ತಾತ್ಪರ್ಯ:
ಭೀಮಾರ್ಜುನರು ತೆರಳುವಾಗ ಭಯಂಕರವಾಗಿ ಹುಬ್ಬುಗಂಟಿಟ್ತು, ಮತ್ತೆ ಮತ್ತೆ ಹಸ್ತಿನಾವತಿಯನ್ನು ನೋಡುತ್ತಾ ಹಲ್ಲು ಕಡಿಯುತ್ತ ಊರಿಗೆ ತೆರಳಿದರು. ದುರ್ಯೋಧನಾ, ಆನೆಯ ವಾಸನೆಯನ್ನು ಕುಡಿದು ಬರುತ್ತಿರುವ ಸಿಂಹಕ್ಕೆ, ಗಾಯಗೊಂಡ ಹಂದಿಗೆ, ಅರೆಪೆಟ್ಟುಬಿದ್ದ ಹಾವಿಗೆ ಮೈಚಾಚಿದವನಂತಿರುವೆ ಎಂದು ಹೇಳಿ ದುರ್ಯೋಧನನನ್ನು ಕೆರಳಿಸಿದನು.

ಅರ್ಥ:
ಮುರಿ: ಸೀಳು; ಪಟ್ಟಣ: ಊರು; ನೋಡು: ವೀಕ್ಷಿಸು; ನರ: ಮನುಷ್ಯ, ಅರ್ಜುನ; ವೃಕೋದರ: ತೋಳದಂತ ಹೊಟ್ಟೆಯಿರುವವ (ಭೀಮ); ಔಡು: ಹಲ್ಲಿನಿಂದ ಕಚ್ಚು; ಕಚ್ಚು: ಹಲ್ಲಿನಿಂದ – ಹಿಡಿ, ಕಡಿ; ತಿರುಗು: ಸುತ್ತು; ಗಡ: ಅಲ್ಲವೆ, ಸಂತೋಷ, ಆಶ್ಚರ್ಯ ಮುಂತಾದುವನ್ನು ಸೂಚಿಸುವ ಶಬ್ದ; ಗಾಢ:ಹೆಚ್ಚಳ, ಅತಿಶಯ; ಬದ್ಧ: ಕಟ್ಟಿದ, ಬಿಗಿದ; ಭೃಕುಟಿ: ಹುಬ್ಬುಗಂಟು; ಭೀಷಣ: ಭಯಂಕರ, ಭೀಕರ; ಕರಿ: ಆನೆ; ಸೊಗಡು: ವಾಸನೆ; ಮೃಗಪತಿ: ಸಿಂಹ; ಮೃಗ: ಪ್ರಾಣಿ; ಪತಿ: ಒಡೆಯ; ಹಂದಿ: ವರಾಹ; ನೊಂದು: ಪೆಟ್ಟುತಿಂದು, ಬೇನೆ; ಹಾವು: ಉರಗ; ಅರಸ: ರಾಜ; ಮೈಚಾಚು: ದೇಹವನ್ನು ಹರಡು, ದೇಹವನ್ನು ನೀಡು;

ಪದವಿಂಗಡಣೆ:
ಮುರಿಮುರಿದು +ಪಟ್ಟಣವ +ನೋಡುತ
ನರ+ವೃಕೋದರರ್+ಔಡುಗಚ್ಚುತ
ತಿರುಗಿದರು +ಗಡ+ ಗಾಢಬದ್ಧ +ಭೃಕುಟಿ +ಭೀಷಣರು
ಕರಿಯ+ಸೊಗಡಿನ +ಮೃಗಪತಿಗೆ+ ಮೈ
ಹರಿದ+ ಹಂದಿಗೆ +ನೊಂದ +ಹಾವಿಂಗ್
ಅರಸ+ ಮೈಚಾಚಿದೆಯಲಾ+ ನೀನೆಂದನಾ +ಶಕುನಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರಿಯಸೊಗಡಿನ ಮೃಗ ಪತಿಗೆ ಮೈಹರಿದ ಹಂದಿಗೆ ನೊಂದ ಹಾವಿಂಗರಸ ಮೈಚಾಚಿದೆಯಲಾ
(೨) ಭೀಮಾರ್ಜುನರ ಮುಖಭಾವ – ಮುರಿಮುರಿದು, ಔಡುಗಚ್ಚುತ್ತ, ಗಾಡಬದ್ಧ ಭೃಕುಟಿ

ನುಡಿಮುತ್ತುಗಳು: ಸಭಾ ಪರ್ವ, ೧೭ ಸಂಧಿ

  • ಕರಿಯಸೊಗಡಿನ ಮೃಗ ಪತಿಗೆ ಮೈಹರಿದ ಹಂದಿಗೆ ನೊಂದ ಹಾವಿಂಗರಸ ಮೈಚಾಚಿದೆಯಲಾ – ಪದ್ಯ ೪
  • ನಡೆತಂದರೀ ನಾಲ್ವರು ವಿಷಾದ ವಿಡಂಬ ವಿಹ್ವಲ ಕರಣ ವೃತ್ತಿಯಲಿ – ಪದ್ಯ ೮
  • ಸುತರವಿವೇಕ ವಿಷಮಗ್ರಹ ವಿಕಾರ ವ್ಯಾಕರಣ ದುರ್ಲಲಿತ ದುಷ್ಕೃತವೀ ಪ್ರಳಾಪವಿದು – ಪದ್ಯ ೧೨
  • ದೈವಮುಖದೆಚ್ಚರಿಕೆ ಘನ ಕೆಡರೆಂದು ಮೇಗರೆ ಹೊರಮನದ ಸೂಸಕದ ನೇಹವನರಸುತಿಹೆನೆಂದ – ಪದ್ಯ ೨೦
  • ಹಾವಿನ ಮೇಲುಮುಚ್ಚಳ ಮುರಿಯಲೆಂದಿದ – ಪದ್ಯ ೨೪
  • ಕುರಿಗಳೇ ನಿನ್ನವರು ಬಲಿಯಿದು ಮೇಲೆ ವಿಧಿಯೆನುತ – ಪದ್ಯ ೨೫
  • ಕೌರವರು ಕಲಿಮೊಳೆಯನಂಕುರಿಸುವ ಕುವಿದ್ಯಾ ಕಲಿತ ಮಾಯರು – ಪದ್ಯ ೩೩
  • ಮನಮೊದಲು ಕರಣಂಗಳಾತ್ಮಂಗನುಚರರೊ ಬಾಧಕರೊ – ಪದ್ಯ ೩೬
  • ಕೊರಳಲಿಕ್ಕಿದ ವಿಧಿಯ ಕಣ್ಣಿಯ ಹುರಿ ಬಲುಹಲೇ ಧರ್ಮಸುತನೊಡ ಮುರಿಚಲಾಪನೆ – ಪದ್ಯ ೩೭
  • ಬಿರಿಯೆ ನೆಲನಳ್ಳಿವ ವಾದ್ಯದ ಮೊರೆವ ಭೇರಿಯ ಬಹಳ ಕಹಳ ಸ್ವರದ ಕಳಕಳ ತೀವಿತಬುಜಭವಾಂಡ ಖರ್ಪರವ –ಪದ್ಯ ೩೯
  • ಸರ್ವಲೋಕ ವಿನಾಶಕರವೀಗುರ್ವಣೆಯ ದೈವಾಭಿಪಾಕಕೆ ದರ್ವಿಯಾಯಿತು ಧರ್ಮಪುತ್ರನ ಬುದ್ಧಿವಿಸ್ತಾರ – ಪದ್ಯ ೪೪
  • ಜೂಜಿನ ದಂದುಗದ ದುರ್ವ್ಯಸನ ಮುಸುಕಿತು ಧರ್ಮನಂದನನ, ಕಂದು ಕುಳ್ಳಿರ್ದುದು – ಪದ್ಯ ೪೫
  • ಎಳ್ಳನಿತು ಖಯಖೋಡಿ ಚಿತ್ತದೊಳೆಲ್ಲ – ಪದ್ಯ ೪೬
  • ನಿಜಪಾಂಡಿತ್ಯ ಪರಿಣತಿ ಬಿಲ್ಲ ಬಿಸುಟುದು ಬೆದರಿಹೋಯ್ತು ವಿವೇಕ ವಿಸ್ತಾರ – ಪದ್ಯ ೪೬
  • ಜೂಜುಗಾರರ ವಿಗಡತನವಲ್ಲೆಂದು ನೃಪತಿಗೆ ಸೂಸಿದನು ನಗೆಯ – ಪದ್ಯ ೪೭
  • ಲಲಿತರಾಗದ ರಸದ ಗೋರಿಯ ಬಲುಗುಡಿಯ ಮೃಗದಂತೆ; ವಿಷಯದ ಕುಳಿಯೊಳಗೆ ಕಾಲ್ದೊಡಕಿ ಬಿದ್ದ ಸುಯೋಗಿಯಂದದಲಿ – ಪದ್ಯ ೪೮
  • ರಂಜಕರು ನಾವಲ್ಲ ಜೂಜಿಗೆ ಕಂಜಭವ ತಾನ್ – ಪದ್ಯ ೫೧
  • ನೃಪರೆಂಜಲಿಸಿ ಬಿಡಬಹುದೆ ಪರಮದ್ಯೂತ ರಸಸುಧೆಯ – ಪದ್ಯ ೫೧
  • ಕೇವಣಿಸಿದರಿವಿನ ವಿಕೃತ ಕರ್ಮದ ಕುಣಿಕೆಗೊಲೆದೊಲೆದರಸನಿದ್ದನು ಹೊತ್ತ ದುಗುಡದಲಿ – ಪದ್ಯ ೫೬
  • ನಿಬ್ಬರದ ನಿಡುಸುಯ್ಲ ಖೋಡಿಯ ಮನದ ಕಳ್ಗುದಿಯ; ಖೇದದ ಮಬ್ಬಿನಲಿ ಹಣಗಿದರು – ಪದ್ಯ ೫೭
  • ಪಿತನಂಡಲೆದು ಕೃಷ್ಣಾಜಿನವನುಡುಗೊರೆಯನಿತ್ತನಲೆ – ಪದ್ಯ ೫೮
  • ವನಮಾಲೆ ಕೊರಳಿಂಗಲ್ಲ ಚರಣಾಭರಣವಾಯಿತಲೆ – ಪದ್ಯ ೬೦
  • ಪಾಪಿ ದುರ್ಯೋಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ; ಕುಟಿಲ ಗರ್ಭದ ಗುಣದ ಬೆಳವಿಗೆಯ – ಪದ್ಯ ೬೨
  • ಫಲಕುಜದ ಪಲ್ಲವದ ಪದ, ಕರತಳದ ವಿಪುಲ ತಮಾಲ ಪತ್ರದ ಲಲಿತ, ಕೇತಕಿ ನಖದ, ದಾಡಿಮ ದಂತಪಂಕ್ತಿಗಳ, ನಳಿನ ನಯನದ, ಮಧುಪ ಕುಲ ಕುಂತಳದ – ಪದ್ಯ ೬೪
  • ಹೊತ್ತುವೆದೆಗಳ ಹೊಗೆವ ಮೋರೆಯ ಕಿತ್ತಡದ ಕಡುಗೋಪ ಸಮತೆಗಳಿತ್ತಡಿಯ ತಡವಾಯ್ವ ನೃಪರೈತಂದರೊಗ್ಗಿನಲಿ – ಪದ್ಯ ೬೭
  • ನೃಪ ನಾಲಿ ನೀರೇರಿದವು ನನೆದರು ನಯನವಾರಿಯಲಿ – ಪದ್ಯ ೭೦
  • ಬೆರಲನಾಡಿಸಿ ಹೋದರೀ ಹೋದರಸು ಕಾನನದೆತ್ತು ಪುನರಪಿ ಸರಿದವೆತ್ತುಗಳೆನುತ – ಪದ್ಯ ೭೪

ಪದ್ಯ ೩: ದುಶ್ಯಾಸನು ಕರ್ಣಾದಿಯರಿಗೆ ಏನು ಹೇಳಿದ?

ರವಿಯುದಯದಲಿ ಕೌರವೇಂದ್ರನ
ಭವನಕೈತಂದನು ಕುಠಾರರ
ಜವಳಿಯನು ಕರೆಸಿದನು ರಾಧಾಸುತನ ಸೌಬಲನ
ಅವನಿಪತಿ ಗಾಂಧಾರಿಯರು ಪಾಂ
ಡವರ ಮನ್ನಿಸಿ ಕಳುಹಿದರು ತ
ಮ್ಮವನಿಗೈದಿದರೆಂದನಾ ದುಶ್ಯಾಸನನು ನಗುತ (ಸಭಾ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಒಂದು ದಿನ ಉದಯಕಾಲದಲ್ಲಿ ದುಶ್ಯಾಸನನು ದುರ್ಯೋಧನನ ಭವನಕ್ಕೆ ಬಂದು ದುಷ್ಟರ ಜೋಡಿಗಳಾದ ಶಕುನಿ ಮತ್ತು ಕರ್ಣನನ್ನು ಕರೆಸಿದನು. ನಮ್ಮ ತಂದೆ ತಾಯಿ ಇಬ್ಬರು ಪಾಂಡವರನ್ನು ಮನ್ನಿಸಿ ಅವರು ಸೋತುದೆಲ್ಲವನ್ನೂ ಕೊಟ್ಟುಬಿಟ್ಟರು ಎಂದು ನಗುತ್ತಾ ಹೇಳಿದನು.

ಅರ್ಥ:
ರವಿ: ಸೂರ್ಯ; ಉದಯ: ಹುಟ್ಟು; ಭವನ: ಆಲಯ; ಐತಂದು: ಬಂದು; ಕುಠಾರ: ಕ್ರೂರಿ; ಜವಳಿ: ಜೋಡಿ; ಕರೆಸು: ಬರೆಮಾಡು; ಸುತ: ಮಗ; ರಾಧಾಸುತ: ಕರ್ಣ; ಸೌಬಲ: ಶಕುನಿ; ಅವನಿಪತಿ: ರಾಜ; ಮನ್ನಿಸು: ದಯಪಾಲಿಸು, ಅನುಗ್ರಹಿಸು; ಕಳುಹು: ಬೀಳ್ಕೊಡು; ಅವನಿ: ಭೂಮಿ; ನಗು: ಸಂತಸ; ಐದು: ಹೋಗಿಸೇರು;

ಪದವಿಂಗಡಣೆ:
ರವಿ+ಉದಯದಲಿ +ಕೌರವೇಂದ್ರನ
ಭವನಕ್+ಐತಂದನು +ಕುಠಾರರ
ಜವಳಿಯನು +ಕರೆಸಿದನು +ರಾಧಾಸುತನ+ ಸೌಬಲನ
ಅವನಿಪತಿ+ ಗಾಂಧಾರಿಯರು +ಪಾಂ
ಡವರ +ಮನ್ನಿಸಿ +ಕಳುಹಿದರು+ ತಮ್ಮ್
ಅವನಿಗ್+ಐದಿದರ್+ಎಂದನಾ +ದುಶ್ಯಾಸನನು+ ನಗುತ

ಅಚ್ಚರಿ:
(೧) ಕುಠಾರರ ಜವಳಿ – ಕರ್ಣ ಶಕುನಿಯರನ್ನು ಕರೆದ ಪರಿ
(೨) ಇವರ ದುಷ್ಟತನವು ಮತ್ತೆ ಹುಟ್ಟಲಾರಂಭಿಸಿತು ಎಂದು ಸೂಚಿಸಲು ರವಿಯುದಯ ಬಳಸಿರಬಹುದೇ?