ಪದ್ಯ ೨೯: ವಿದುರನು ದ್ರೌಪದಿಗೆ ಏನು ಹೇಳಿದ?

ಬಾಯ ಬಿಡಲೇಕಕಟ ಬಳಲಿದೆ
ತಾಯೆ ಕೈದೋರಿಸರು ನಿನ್ನಯ
ರಾಯರೈವರು ಕೆಲಬಲದ ಜನರೇನ ಮಾಡುವರು
ನ್ಯಾಯ ನಿನ್ನದು ದೈವದೊಲುಮೆಯ
ದಾಯ ತಪ್ಪಿತು ಬರಿದೆ ಧೈರ್ಯವ
ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ (ಸಭಾ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ದ್ರೌಪದಿಯ ಅಳಲನ್ನು ಕೇಳಿ ವಿದುರನು, ಎಲೈ ದ್ರೌಪದಿಯೇ, ಸುಮ್ಮನೆ ಏಕೆ ಗೋಳಿಡುವೆ? ಅತ್ತು ಅತ್ತು ನೀನು ಆಯಾಸಗೊಳ್ಳುವೆ, ನಿನ್ನ ಪತಿಗಳು ತಮ್ಮ ಪೌರುಷವನ್ನು ತೋರಿಸಲಿಲ್ಲ. ಉಳಿದವರಾದರೂ ಏನು ಮಾಡಿಯಾರು? ನಿನ್ನ ಮಾತು ನ್ಯಾಯ ಆದರೆ ದೈವವು ಯಾರಿಗೆ ಅನುಗ್ರಹ ಮಾಡಬೇಕೆಂಬ ಲೆಕ್ಕದಲ್ಲಿ ತಪ್ಪಿದೆ, ಸುಮ್ಮನೆ ಎದೆಗುಂದಬೇಡ ಎಂದು ವಿದುರನು ದ್ರೌಪದಿಗೆ ಸಹಾನುಭೂತಿಯ ಮಾತುಗಳನ್ನು ಆಡಿದನು.

ಅರ್ಥ:
ಬಾಯಿ: ಮುಖದ ಒಂದು ಅಂಗ; ಬಾಯ ಬಿಡು: ಮೊರಳಿಡು, ಹಲುಬು; ಅಕಟ: ಅಯ್ಯೋ; ಬಳಲು: ಆಯಾಸ; ತಾಯೆ: ಮಾತೆ; ಕೈದೋರು: ಪೌರುಷವನ್ನು ಬೀರು; ರಾಯರು: ಒಡೆಯ, ರಾಜ; ಕೆಲಬಲ: ಅಕ್ಕಪಕ್ಕ; ಜನರು: ಮನುಷ್ಯರು; ನ್ಯಾಯ: ಸರಿಯಾದುದು; ದೈವ: ಭಗವಂತ; ಒಲುಮೆ: ಪ್ರೀತಿ; ಆಯ: ರೀತಿ, ಪರಿಮಿತಿ; ತಪ್ಪು: ಸರಿಯಿಲ್ಲದ; ಬರಿ: ಕೇವಲ; ಧೈರ್ಯ: ದಿಟ್ಟತನ; ಬೀಯ: ವ್ಯಯ; ನುಡಿ: ಮಾತಾಡು; ಅಂಗನೆ: ಹೆಣ್ಣು;

ಪದವಿಂಗಡಣೆ:
ಬಾಯ +ಬಿಡಲೇಕ್+ಅಕಟ +ಬಳಲಿದೆ
ತಾಯೆ +ಕೈದೋರಿಸರು +ನಿನ್ನಯ
ರಾಯರ್+ಐವರು +ಕೆಲಬಲದ +ಜನರ್+ಏನ +ಮಾಡುವರು
ನ್ಯಾಯ +ನಿನ್ನದು +ದೈವದ್+ಒಲುಮೆಯದ್
ಆಯ +ತಪ್ಪಿತು +ಬರಿದೆ+ ಧೈರ್ಯವ
ಬೀಯ +ಮಾಡದಿರ್+ಎಂದು+ ನುಡಿದನು+ ವಿದುರನ್+ಅಂಗನೆಗೆ

ಅಚ್ಚರಿ:
(೧) ವಿದುರನು ಧೈರ್ಯ ಹೇಳುವ ಪರಿ – ನ್ಯಾಯ ನಿನ್ನದು ದೈವದೊಲುಮೆಯದಾಯ ತಪ್ಪಿತು ಬರಿದೆ ಧೈರ್ಯವ ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ

ಪದ್ಯ ೨೮: ದ್ರೌಪದಿಯು ತನ್ನ ನೋವನ್ನು ಮತ್ತಾರ ಮುಂದೆ ತೋಡಿಕೊಂಡಳು?

ಮಾವದಿರು ಮೊದಲಾದ ದಿಕ್ಪಾ
ಲಾವಳಿಗೆ ನಮಿಸಿದೆನು ನೈದಿಲ
ತಾವರೆಯ ಮಿತ್ರರಿಗೆ ಮಂಡೆಯೊಳಿಟ್ಟೆನಂಜುವಳಿಯ
ಕಾವುದೆನ್ನನು ಹೆಂಗುಸಲ್ಲಾ
ಹಾವು ಹಲಬರ ನಡುವೆ ಸಾಯದು
ದೇವರಿಗೆ ದೂರೈದಲೆಂದೊರಲಿದಳು ಲಲಿತಾಂಗಿ (ಸಭಾ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ಮಾವಂದಿರು, ಅಷ್ಟದಿಕ್ಪಾಲಕರು, ಸೂರ್ಯ, ಚಂದ್ರರು ಈ ಎಲ್ಲರನ್ನು ನನ್ನ ತಲೆಯಮೇಲೆ ಬೊಗಸೆಯೊಡ್ಡಿ ಬೇಡಿಕೊಳ್ಳುತ್ತಿದ್ದೇನೆ, ನಾನು ಹೆಣ್ಣಲ್ಲವೇ? ನನ್ನನ್ನು ಕಾಪಾಡಿ, ಹಲವರ ನಡುವೆ ಇರುವ ಹಾವು ಸಾಯುವುದಿಲ್ಲ, ನನ್ನ ದೂರು ಆ ಪರಮಾತ್ಮನಿಗೆ ಮುಟ್ಟಲಿ ಎಂದು ದ್ರೌಪದಿಯು ಗೋಳಿಟ್ಟಳು.

ಅರ್ಥ:
ಮಾವ: ಗಂಡನ ತಂದೆ; ದಿಕ್ಕು: ದೆಸೆ; ದಿಕ್ಪಾಲ: ದಿಕ್ಕಿನ ಅಧಿಪತಿ; ಆವಳಿ: ಸಾಲು; ನಮಿಸು: ಎರಗು, ವಂದಿಸು; ತಾವರೆ: ಕಮಲ; ಮಿತ್ರ; ಸ್ನೇಹಿತ; ಮಂಡೆ: ತಲೆ; ಅಂಜುಳಿ: ಬೊಗಸೆ, ಹಸ್ತ; ಕಾವುದು: ರಕ್ಷಿಸು; ಹೆಂಗುಸ: ಹೆಣ್ಣು; ಹಾವು: ಉರಗ; ಹಲಬರು: ಬಹಳ; ನಡುವೆ: ಮಧ್ಯ; ಸಾಯದು: ಅಂತ್ಯಗೊಳ್ಳು; ದೇವರು: ಭಗವಂತ; ದೂರು: ಕೂಗು, ಅಹವಾಲು, ಮೊರೆ; ಒರಲು: ಗೋಳಿಡು, ಕೂಗು; ಲಲಿತಾಂಗಿ: ಲತೆಯಂತೆ ದೇಹವುಳ್ಳವಳು (ದ್ರೌಪದಿ);

ಪದವಿಂಗಡಣೆ:
ಮಾವದಿರು +ಮೊದಲಾದ +ದಿಕ್ಪಾಲ
ಆವಳಿಗೆ +ನಮಿಸಿದೆನು +ನೈದಿಲ
ತಾವರೆಯ+ ಮಿತ್ರರಿಗೆ+ ಮಂಡೆಯೊಳಿಟ್ಟೆನ್+ಅಂಜುವಳಿಯ
ಕಾವುದೆನ್ನನು+ ಹೆಂಗುಸಲ್ಲಾ
ಹಾವು +ಹಲಬರ+ ನಡುವೆ+ ಸಾಯದು
ದೇವರಿಗೆ+ ದೂರೈದಲೆಂದ್+ಒರಲಿದಳು +ಲಲಿತಾಂಗಿ

ಅಚ್ಚರಿ:
(೧) ಚಂದ್ರರನ್ನು ನೈದಿಲೆ ಮಿತ್ರ, ಸೂರ್ಯ ತಾವರೆಯ ಮಿತ್ರ ಎಂದು ಕರೆದಿರುವುದು
(೨) ಉಪಮಾನದ ಪ್ರಯೋಗ – ಹಾವು ಹಲಬರ ನಡುವೆ ಸಾಯದು

ಪದ್ಯ ೨೭: ದ್ರೌಪದಿಯು ದೇವತೆಗಳಲ್ಲಿ ಹೇಗೆ ಮೊರೆಯಿಟ್ಟಳು?

ಸೊಸೆಯಲಾ ದೇವೆಂದ್ರಯೆನ್ನಯ
ಘಸಣಿ ಯಾರದು ಹಿರಿಯ ಮಾವನ
ವಶವಲಾ ತ್ರೈಜಗದ ಜೀವರ ಜೀವ ವಿಭ್ರಮಣ
ಉಸುರು ನಿನ್ನಾಧೀನವೀ ದು
ರ್ವ್ಯಸನಿಗಳ ಕೊಂಡಾಡುವರೆ ಕರು
ಣಿಸು ಸಮೀರಣಯೆಂದು ಹಲುಬಿದಳಾಶ್ವಿನೇಯರಿಗೆ (ಸಭಾ ಪರ್ವ, ೧೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಪರಮಾತ್ಮರಲ್ಲಿ ಮೊರೆಯಿಟ್ಟ ದ್ರೌಪದಿ ನಂತರ ತನ್ನ ಮಾವನಾದ ಇಂದ್ರನಲ್ಲಿ ಬೇಡಿದಳು. ಹೇ ಇಂದ್ರದೇವ ನಾನು ನಿನಗೆ ಸೊಸೆಯಲ್ಲವೇ, ಈ ಕಷ್ಟದಿಂದ ನನ್ನನ್ನು ಪಾರು ಮಾಡುವವರು ಯಾರು, ಅದು ನಿನ್ನ ಕೆಲಸವಲ್ಲವೇ? ಹೇ ವಾಯುದೇವ, ಮೂರುಲೋಕಗಳಲ್ಲಿರುವ ಜೀವರಲ್ಲಿ ಜೀವವಾಗಿರುವ ಉಸಿರು ನಿನ್ನ ಅಧೀನವಲ್ಲವೇ? ಈ ದುರಾಚಾರಿಗಳನ್ನು ನೀನು ಸೈರಿಸಬಹುದೇ? ಹೇ ವಾಯುದೇವ ಕರುಣಿಸು, ಹೇ ಅಶ್ವಿನೀ ದೇವತೆಗಳೇ ನೀವಾದರೂ ನನ್ನನ್ನು ಕಷ್ಟದಿಂದ ಪಾರುಮಾಡಬಹುದಲ್ಲವೇ ಎಂದು ದ್ರೌಪದಿಯು ದೇವತೆಗಳಲ್ಲಿ ಮೊರೆಯಿಟ್ಟಳು.

ಅರ್ಥ:
ಸೊಸೆ: ಮಗನ ಹೆಂಡತಿ; ದೇವೇಂದ್ರ; ಇಂದ್ರ; ಘಸಣಿ: ತೊಂದರೆ; ಹಿರಿಯ: ದೊಡ್ಡವ; ಮಾವ: ಗಂಡನ ತಂದೆ; ವಶ: ಅಧೀನ, ಅಂಕೆ; ತ್ರೈಜಗ: ಮೂರುಲೋಕ; ಜೀವ: ಉಸಿರು; ವಿಭ್ರಮಣ: ಅಲೆಯುವಿಕೆ; ಉಸುರು: ವಾಯು; ಅಧೀನ: ವಶ, ಕೈಕೆಳಗಿರುವ; ದುರ್ವ್ಯಸನ: ಕೆಟ್ಟ ಚಟವುಳ್ಳ; ಕೊಂಡಾಡು: ಹೊಗಳು, ಆದರಿಸು; ಕರುಣಿಸು: ದಯಪಾಲಿಸು; ಸಮೀರ: ವಾಯು; ಹಲುಬು: ಗೋಳಿಡು, ಬೇಡಿಕೋ; ಅಶ್ವಿನಿ: ದೇವತೆಗಳ ಒಂದು ಗುಂಪು;

ಪದವಿಂಗಡಣೆ:
ಸೊಸೆಯಲಾ +ದೇವೆಂದ್ರ+ಎನ್ನಯ
ಘಸಣಿ +ಯಾರದು +ಹಿರಿಯ +ಮಾವನ
ವಶವಲಾ +ತ್ರೈಜಗದ+ ಜೀವರ +ಜೀವ +ವಿಭ್ರಮಣ
ಉಸುರು +ನಿನ್+ಅಧೀನವ್+ಈ+ ದು
ರ್ವ್ಯಸನಿಗಳ +ಕೊಂಡಾಡುವರೆ +ಕರು
ಣಿಸು +ಸಮೀರಣ+ಎಂದು +ಹಲುಬಿದಳ್+ಅಶ್ವಿನೇಯರಿಗೆ

ಅಚ್ಚರಿ:
(೧) ವಾಯುದೇವನನ್ನು ಹೊಗಳುವ ಪರಿ – ಜಗದ ಜೀವರ ಜೀವ ವಿಭ್ರಮಣ ಉಸುರು ನಿನ್ನಾಧೀನವೀ