ಪದ್ಯ ೨೦: ಕರ್ಣನು ದುರ್ಯೋಧನನಿಗೆ ಯಾವ ಸಲಹೆ ನೀಡಿದನು?

ನೂಕಿಸಾ ತೊತ್ತಿರ ಮನೆಗೆ ತಡ
ವೇಕೆ ತರುಣಿಯನಿನ್ನು ನೀನು ವಿ
ವೇಕದಲಿ ನನ್ನಂತೆ ತೆಗೆ ಸಾಕಿವರ ಮಾತೇನು
ಈ ಕುಠಾರರ ಕಳುಹಿ ಕಳೆ ತಾ
ವೇಕೆ ನೃಪಸಭೆಯಲಿ ವರಾಸನ
ವೇಕೆನುತ ಕುರುಪತಿಗೆ ನುಡಿದನು ಕರ್ಣ ಖಾತಿಯಲಿ (ಸಭಾ ಪರ್ವ, ೧೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಜ, ದಾಸಿಯಾದ ದ್ರೌಪದಿಯನ್ನು ನೀನು ದಾಸಿಯರ ಮನೆಗೆ ನೂಕು, ನಾನು ಹೇಳಿದಂತೆ ಯುಕ್ತಾಯುಕ್ತತೆಯಲ್ಲಿ ನಿರ್ಧರಿಸು, ತಡಮಾಡಬೇಡ ಮತ್ತು ಇವರೊಡನೆ ಹೆಚ್ಚಿನ ಮಾತು ಸಹ ಬೇಕಿಲ್ಲ. ಈ ದುಷ್ಟರನ್ನು ರಾಜಸಭೆಯಿಂದ ಕಳುಹಿಸು, ಇವರಿಗೇಕೆ ಇಲ್ಲಿಯ ಶ್ರೇಷ್ಠವಾದ ಆಸನ ಎಂದು ಕರ್ಣನು ಕೋಪದಿಂದ ನುಡಿದನು.

ಅರ್ಥ:
ನೂಕು: ತಳ್ಳು; ತೊತ್ತು: ದಾಸಿ; ಮನೆ: ಆಲಯ; ತಡ: ನಿಧಾನ; ತರುಣಿ: ಹೆಣ್ಣು; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ತೆಗೆ: ಹೊರಹಾಕು; ಸಾಕು: ನಿಲ್ಲಿಸು; ಮಾತು: ವಾಣಿ; ಕುಠಾರ: ದುಷ್ಟ; ಕಳುಹು: ನಿರ್ಗಮಿಸು; ಕಳೆ: ಬೀಡು, ತೊರೆ; ನೃಪ: ರಾಜ; ಸಭೆ: ಓಲಗ; ವರಾಸನ: ಶ್ರೇಷ್ಠವಾದ ಆಸನ; ಖಾತಿ: ಕೋಪ, ಕ್ರೋಧ;

ಪದವಿಂಗಡಣೆ:
ನೂಕಿಸ್+ಆ+ ತೊತ್ತಿರ+ ಮನೆಗೆ+ ತಡ
ವೇಕೆ +ತರುಣಿಯನ್+ಇನ್ನು +ನೀನು +ವಿ
ವೇಕದಲಿ+ ನನ್ನಂತೆ +ತೆಗೆ +ಸಾಕಿವರ+ ಮಾತೇನು
ಈ +ಕುಠಾರರ+ ಕಳುಹಿ +ಕಳೆ +ತಾ
ವೇಕೆ +ನೃಪಸಭೆಯಲಿ +ವರಾಸನವ್
ಏಕೆನುತ+ ಕುರುಪತಿಗೆ+ ನುಡಿದನು +ಕರ್ಣ +ಖಾತಿಯಲಿ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕುಠಾರರ ಕಳುಹಿ ಕಳೆ

ಪದ್ಯ ೧೯: ಕರ್ಣನು ದುರ್ಯೋಧನನ ಮಾತನ್ನು ಹೇಗೆ ಸಮರ್ಥಿಸಿದನು?

ಭಾಷೆಯೇಕಿವನೊಡನೆ ದ್ರೌಪದಿ
ದಾಸಿಯಲ್ಲೆಂಬವನ ದಿವಸವ
ದೇಸು ಬಲಹೋ ಪೂತು ಮಝತಾನಿಂದ್ರಸುತನೆಂಬ
ಐಸರಲಿ ದೇವೇಂದ್ರ ತೃಣಗಡ
ವೈಸಲೇ ನೀ ಮುನಿದಡೀ ನುಡಿ
ದಾಸಭಾವದ ಬಣಗುಗಳಿಗೇಕೆಂದನಾ ಕರ್ಣ (ಸಭಾ ಪರ್ವ, ೧೬ ಸಂಧಿ, ೧೯ ಪದ್ಯ)

ತಾತ್ಪರ್ಯ:
ಕರ್ಣನು ದುರ್ಯೋಧನನ ಗರ್ಜನೆಯನ್ನು ಕೇಳಿ, ರಾಜಾ, ಇವನೊಡನೆ ಏನು ಮಾತು, ದ್ರೌಪದಿ ದಾಸಿಯಲ್ಲ ಎನ್ನುವವನು ಇನ್ನೆಷ್ಟು ದಿನ ಉಳಿದಾನು? ತಾನು ಇಂದ್ರನ ಮಗನಾದ ಮಾತ್ರಕ್ಕೆ ದೇವೇಂದ್ರನು ಇವನೆದುರು ಹುಲ್ಲುಕಡ್ಡಿಯಾದನೋ? ನೀನು ಸಿಟ್ಟಾದರೆ ನಿನ್ನ ದಾಸರಾಗಿರುವ ಈ ಕ್ಷುಲ್ಲಕರಿಗೆ ಇದಾವುದೂ ದಕ್ಕುವುದಿಲ್ಲ ಎಂದು ಹೇಳಿದನು.

ಅರ್ಥ:
ಭಾಷೆ: ನುಡಿ, ಮಾತು; ದಾಸಿ: ಸೇವಕಿ, ತೊತ್ತು; ದಿವಸ: ದಿನ; ಏಸು: ಎಷ್ಟು; ಬಲಹು: ಶಕ್ತಿ; ಪೂತು: ಭಲೇ, ಭೇಷ್; ಮಝ: ಕೊಂಡಾಟದ ಒಂದು ಮಾತು; ಸುತ: ಮಗ; ಐಸರ್: ಅಷ್ಟರಲ್ಲಿ; ದೇವೇಂದ್ರ: ಇಂದ್ರ; ತೃಣ: ಹುಲ್ಲು; ಗಡ: ಅಲ್ಲವೇ; ಐಸಲೇ:ಅಲ್ಲವೇ; ಮುನಿ: ಕೋಪ; ನುಡಿ: ಮಾತು; ಭಾವ: ಭಾವನೆ, ಚಿತ್ತವೃತ್ತಿ; ಬಣಗು: ಅಲ್ಪವ್ಯಕ್ತಿ, ತಿಳಿಗೇಡಿ;

ಪದವಿಂಗಡಣೆ:
ಭಾಷೆಯೇಕ್+ಇವನೊಡನೆ +ದ್ರೌಪದಿ
ದಾಸಿಯಲ್ಲೆಂಬವನ+ ದಿವಸವದ್
ಏಸು +ಬಲಹೋ +ಪೂತು +ಮಝತಾನ್+ಇಂದ್ರಸುತನೆಂಬ
ಐಸರಲಿ+ ದೇವೇಂದ್ರ +ತೃಣ+ಗಡವ್
ಐಸಲೇ +ನೀ +ಮುನಿದಡೀ +ನುಡಿ
ದಾಸಭಾವದ+ ಬಣಗುಗಳಿಗ್+ಏಕೆಂದನಾ ಕರ್ಣ

ಅಚ್ಚರಿ:
(೧) ಏಸು, ಐಸಲೇ, ಐಸರಲಿ – ಪದಗಳ ಬಳಕೆ
(೨) ಅರ್ಜುನನನ್ನು ಹಂಗಿಸುವ ಪರಿ – ಪೂತು ಮಝತಾನಿಂದ್ರಸುತನೆಂಬ ಐಸರಲಿ ದೇವೇಂದ್ರ ತೃಣಗಡ

ಪದ್ಯ ೧೮:ಅರ್ಜುನನ ಮೇಲೆ ದುರ್ಯೋಧನ ವ್ಯಂಗ್ಯನುಡಿ ಹೇಗಿತ್ತು?

ಶೃತಿ ತದರ್ಥಸ್ಮೃತಿಗಳಲಿ ಪಂ
ಡಿತರು ಪರಿಣತರುಂಟು ಪಾರ್ಥ
ಸ್ಮೃತಿಯ ಬಳಿಕಾದರಿಸುವೆವು ನಿಮಗಾದ ದಾಸ್ಯದಲಿ
ಕೃತಕವಿಲ್ಲದೆ ನಡೆದು ತೋರಾ
ಸತಿಯ ಸೆರೆಯನು ಬಿಡಿಸಲೆಮ್ಮಯ
ಕ್ಷಿತಿಯೊಳಾರುಂಟೆಂದು ಕೌರವರಾಯ ಗರ್ಜಿಸಿದ (ಸಭಾ ಪರ್ವ, ೧೬ ಸಂಧಿ, ೧೮ ಪದ್ಯ)

ತಾತ್ಪರ್ಯ:
ವೇದಗಳು, ಆ ವೇದಗಳ ಅಭಿಪ್ರಾಯವನ್ನು ತಿಳಿಸುವ ಸ್ಮೃತಿಗಳು, ಇವುಗಳಲ್ಲಿ ಪಾಂಡಿತ್ಯ ಪಡೆದವರು ಇಲ್ಲಿ ಬಹಳ ವಿದ್ವಾಂಸರಿದ್ದಾರೆ, ಅವರನ್ನು ಕೇಳಿದ ಮೇಲೆ ಅರ್ಜುನನ ಸ್ಮೃತಿಯನ್ನು ಕೇಳಿ ಆದರಿಸೋಣ ಎಂದು ವ್ಯಂಗ್ಯದ ನುಡಿಯಾಡುತ್ತಾ, ಎಲೇ ಅರ್ಜುನ ನೀನು ದಾಸ, ದಾಸನಂತೆ ನಡೆದು ತೋರಿಸು, ದ್ರೌಪದಿಯ ಸೆರೆಯನ್ನು ಬಿಡಿಸಬಲ್ಲವರು ಈ ಭೂಮಿಯ ಮೇಲೆ ಯಾರಿದ್ದಾರೆ ಎಂದು ದುರ್ಯೋಧನನು ಗರ್ಜಿಸಿದನು.

ಅರ್ಥ:
ಶೃತಿ: ವೇದ; ಸ್ಮೃತಿ:ಧರ್ಮಶಾಸ್ತ್ರ; ಪಂಡಿತ: ಕೋವಿದ; ಪರಿಣತ: ತಿಳಿದವ; ಬಳಿಕ: ನಂತರ; ಆದರಿಸು: ಗೌರವಿಸು; ದಾಸ್ಯ: ಸೇವಕತನ; ಕೃತಕ: ಸ್ವಾಭಾವಿಕವಲ್ಲದ, ಕಪಟ; ನಡೆ: ಆಚರಿಸು; ತೋರು: ಪ್ರದರ್ಶಿಸು; ಸತಿ: ಹೆಂಡತಿ; ಸೆರೆ: ಬಂಧನ; ಬಿಡಿಸು: ವಿಮೋಚನೆ; ಕ್ಷಿತಿ: ಭೂಮಿ; ಗರ್ಜಿಸು: ಕೂಗು;

ಪದವಿಂಗಡಣೆ:
ಶೃತಿ +ತದರ್ಥ+ಸ್ಮೃತಿಗಳಲಿ+ ಪಂ
ಡಿತರು +ಪರಿಣತರುಂಟು +ಪಾರ್ಥ
ಸ್ಮೃತಿಯ +ಬಳಿಕ್+ಆದರಿಸುವೆವು+ ನಿಮಗಾದ +ದಾಸ್ಯದಲಿ
ಕೃತಕವಿಲ್ಲದೆ +ನಡೆದು +ತೋರಾ
ಸತಿಯ +ಸೆರೆಯನು +ಬಿಡಿಸಲ್+ಎಮ್ಮಯ
ಕ್ಷಿತಿಯೊಳ್+ಆರುಂಟೆಂದು +ಕೌರವರಾಯ+ ಗರ್ಜಿಸಿದ

ಅಚ್ಚರಿ:
(೧) ದುರ್ಯೋಧನನ ವ್ಯಂಗದ ನುಡಿ – ಪಾರ್ಥ ಸ್ಮೃತಿಯ ಬಳಿಕಾದರಿಸುವೆವು
(೨) ಶೃತಿ, ಸ್ಮೃತಿ, ಕ್ಷಿತಿ, ಸತಿ – ಪ್ರಾಸ ಪದಗಳು
(೩) ಪಂಡಿತ, ಪರಿಣತ – ಸಾಮ್ಯಾರ್ಥ ಪದ

ಪದ್ಯ ೧೭: ಅರ್ಜುನನು ಭೀಮನಿಗೆ ಏನು ಹೇಳಿದ – ೨?

ಕ್ಷಮೆಯೆ ಧನವೆಂದಿದ್ದೆವಿವಳಲಿ
ಮಮತೆಯನು ಮಾಡಿದೆವೆ ನಾವು
ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ
ರಮಣಿಯಾಡಿದ ಧರ್ಮ ಪದವಿದು
ಕುಮತಿಗಳ ಮತವಲ್ಲದಿದ್ದರೆ
ತಮಗೆ ದಾಸಿಯೆ ದ್ರುಪದನಂದನೆಯೆಂದನಾ ಪಾರ್ಥ (ಸಭಾ ಪರ್ವ, ೧೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮ, ನಾವು ಕ್ಷಮೆಯೇ ಉತ್ತಮ ಧನವೆಂಬ ವಿಚಾರವುಳ್ಳವರು, ದ್ರೌಪದಿ ನಮ್ಮವಳು ಎಂಬ ಮಮಕಾರವನ್ನು ತೋರಿಸಲಿಲ್ಲ. ನಾವು ಮೀರಿನಿಂತರೆ ದೇವೇಂದ್ರನು ನಮಗೆ ತೃಣಕ್ಕೆ ಸಮಾನ, ಇನ್ನು ಈ ಕೌರವರ ಏನು ಮಹಾ! ದ್ರೌಪದಿಯು ಆಡಿದ ಮಾತು ಧರ್ಮ ಸಮ್ಮತವಾದ ನುಡಿ, ಇವರಿಗೆ ಒಪ್ಪಿಗೆಯಾಗದಿದ್ದರೇನು? ದ್ರೌಪದಿಯು ನಮಗೆ ದಾಸಿಯೇ ಎಂದು ಅರ್ಜುನನು ಭೀಮನಿಗೆ ಹೇಳಿದನು.

ಅರ್ಥ:
ಕ್ಷಮೆ: ಸೈರಣೆ, ತಾಳ್ಮೆ; ಧನ: ಐಶ್ವರ್ಯ; ಮಮತೆ: ಪ್ರೀತಿ, ವಾತ್ಸಲ್ಯ; ಭ್ರಮೆ: ಭ್ರಾಂತಿ, ಹುಚ್ಚು, ಉನ್ಮಾದ; ದೇವೇಂದ್ರ: ಇಂದ್ರ; ತೃಣ: ಹುಲ್ಲು; ಪಾಡು: ಸ್ಥಿತಿ, ಅವಸ್ಥೆ; ರಮಣಿ: ಸುಂದರಿ; ಪದ: ನುಡಿ; ಕುಮತಿ: ದುಷ್ಟಬುದ್ಧಿ; ಮತ: ವಿಚಾರ; ದಾಸಿ: ಸೇವಕಿ;

ಪದವಿಂಗಡಣೆ:
ಕ್ಷಮೆಯೆ +ಧನವೆಂದಿದ್ದೆವ್+ಇವಳಲಿ
ಮಮತೆಯನು +ಮಾಡಿದೆವೆ +ನಾವು
ಭ್ರಮಿಸುವರೆ +ದೇವೇಂದ್ರ +ತೃಣವ್+ಇವನಾವ +ಪಾಡೆಮಗೆ
ರಮಣಿ+ಆಡಿದ +ಧರ್ಮ +ಪದವಿದು
ಕುಮತಿಗಳ+ ಮತವಲ್ಲದಿದ್ದರೆ
ತಮಗೆ +ದಾಸಿಯೆ +ದ್ರುಪದನಂದನೆ+ಎಂದನಾ +ಪಾರ್ಥ

ಅಚ್ಚರಿ:
(೧) ಪಾಂಡವರ ಪರಾಕ್ರಮದ ಪರಿಚಯ – ನಾವು ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ

ಪದ್ಯ ೧೬: ಪಾರ್ಥನು ಭೀಮನಿಗೆ ಏನು ಹೇಳಿದ?

ಸೈರಿಸಕಟಾ ಭೀಮರೋಷವಿ
ಕಾರಕಿದು ಹೊತ್ತಲ್ಲ ಸರ್ವವಿ
ಕಾರದಲಿ ಕೌರವರು ಮೆರೆಯಲಿ ಕಾಲವವರದಲಾ
ಧಾರುಣೀಶನ ಧರ್ಮತತ್ವದ
ಸಾರವುಳಿದರೆ ಸಾಕು ಮಿಕ್ಕಿನ
ನಾರಿ ಧನವಭಿಮಾನ ಬೀಯಲಿಯೆಂದನಾ ಪಾರ್ಥ (ಸಭಾ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನ ರೋಷಾಗ್ನಿಯನ್ನು ಕಂಡು, ಧರ್ಮಜನ ಸನ್ನೆಯನ್ನು ಅರ್ಥೈಸಿ ಅರ್ಜುನನು ಭೀಮನಿಗೆ, ಭೀಮ ಇದು ಕೋಪ ಮಾಡಿಕೊಳ್ಳುವ ಸಮಯವಲ್ಲ. ಕಾಲವು ಕೌರವರದಾಗಿದೆ, ತಮ್ಮೆಲ್ಲಾ ವಿಕಾರದ ವರ್ತನೆಗಳಿಂದ ಅವರು ಮೆರೆಯಲಿ, ನೀನು ಸೈರಿಸು, ಧರ್ಮಜನ ಧರ್ಮವುಳಿದರೆ ಸಾಕು, ಹೆಂಡತಿ, ಧನ ಅಭಿಮಾನ ಬೆಂದು ಹೋದರೆ ಹೋಗಲಿ ಎಂದು ಪಾರ್ಥನು ನುಡಿದನು.

ಅರ್ಥ:
ಸೈರಿಸು: ತಾಳು; ಅಕಟಾ: ಅಯ್ಯೋ; ರೋಷ: ಕೋಪ; ವಿಕಾರ: ರೂಪಾಂತರ, ಬದಲಾವಣೆ; ಹೊತ್ತು: ಸಮಯ; ಸರ್ವ: ಎಲ್ಲಾ; ಮೆರೆ: ಪ್ರಸಿದ್ಧವಾಗು; ಕಾಲ: ಸಮಯ; ಧಾರುಣೀಶ: ರಾಜ; ಧಾರುಣಿ: ಭೂಮಿ; ಧರ್ಮ: ಧಾರಣೆ ಮಾಡಿದುದು; ತತ್ವ: ನಿಯಮ, ಸಿದ್ಧಾಂತ; ಸಾರ: ರಸ, ತಿರುಳು; ಸಾಕು: ಇನ್ನು ಬೇಡ, ನಿಲ್ಲಿಸು, ಕೊನೆ; ಮಿಕ್ಕು: ಉಳಿದ; ನಾರಿ: ಹೆಣ್ಣು; ಧನ: ಐಶ್ವರ್ಯ; ಅಭಿಮಾನ: ಹೆಮ್ಮೆ, ಅಹಂಕಾರ; ಬೀಯ: ಖರ್ಚು;

ಪದವಿಂಗಡಣೆ:
ಸೈರಿಸ್+ಅಕಟಾ +ಭೀಮ+ರೋಷ+ವಿ
ಕಾರಕಿದು +ಹೊತ್ತಲ್ಲ +ಸರ್ವ+ವಿ
ಕಾರದಲಿ+ ಕೌರವರು +ಮೆರೆಯಲಿ +ಕಾಲವ್+ಅವರದಲಾ
ಧಾರುಣೀಶನ+ ಧರ್ಮ+ತತ್ವದ
ಸಾರವುಳಿದರೆ+ ಸಾಕು +ಮಿಕ್ಕಿನ
ನಾರಿ+ ಧನವ್ + ಅಭಿಮಾನ +ಬೀಯಲಿ+ಎಂದನಾ ಪಾರ್ಥ

ಅಚ್ಚರಿ:
(೧) ಧರ್ಮಕ್ಕೆ ಮಹತ್ವಕೊಟ್ಟ ಪರಿ – ಧಾರುಣೀಶನ ಧರ್ಮತತ್ವದ ಸಾರವುಳಿದರೆ ಸಾಕು