ಪದ್ಯ ೧೫: ಭೀಮನ ಕೋಪವು ಹೇಗೆ ಉಕ್ಕಿತು?

ನೋಡಿದನು ಪರಿಘವನು ಕಡೆಗ
ಣ್ಣಾಡಿತಿವದಿರ ಮೇಲೆ ಮೈಯಲಿ
ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ
ಮೂಡಿತುರಿ ಸುಯ್ಲಿನಲಿ ರೋಷದ
ಬೀಡು ಭೀಮನ ಕಂಡು ಧರ್ಮಜ
ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ (ಸಭಾ ಪರ್ವ, ೧೬ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತೊಡೆಯನ್ನು ತೋರಿ ಭೀಮನನ್ನು ಕೆರಳಿಸಲು, ಭೀಮನು ಒಂದೆಡೆ ಗದೆಯನ್ನು ನೋಡಿದನು, ಓರೆಕಣ್ಣಿನಿಂದ ಕೌರವನನ್ನು ನೋಡಿದನು, ತನ್ನ ಮೈಯಲ್ಲಿದ್ದ ಕೂದಲುಗಳು ನೆಟ್ಟಗಾದವು, ಕಣ್ಣು ಕೆಂಪಾಗಿ ಕೋಪವನ್ನುಗುಳುತ್ತಿತ್ತು, ಉಸಿರಿನಲ್ಲಿ ಉರಿ ಹೊರಚೆಲ್ಲುತ್ತಿತ್ತು. ರೋಷದ ನೆಲೆ ಎನ್ನುವಂತಿದ್ದ ಭೀಮನನ್ನು ನೋಡಿ ಧರ್ಮರಾಯನು ತನ್ನ ಕೊರಳಿಗೆ ಬೆರಳಿಟ್ಟು ಭೀಮನನ್ನು ಬೇಡಿಕೊಂಡನು.

ಅರ್ಥ:
ನೋಡು: ವೀಕ್ಷಿಸು; ಪರಿಘ:ಗದೆ; ಕಡೆಗಣ್ಣು: ಓರೆ ಕಣ್ಣು, ಕಣ್ಣಂಚು; ಇವದಿರು: ಇವರೆಲ್ಲರು; ಮೈ: ತನು; ಝಾಡಿ: ಕಾಂತಿ; ಕೆದರು: ಹರಡು; ರೋಮ: ಕೂದಲು; ಝುಳಪ: ಹೊಳಪು, ಕಾಂತಿ; ಅರುಣ: ಕೆಂಪು; ನಯನ: ಕಣ್ಣು; ಮೂಡು: ತೋರು; ಉರಿ: ಬಿಸಿ; ಸುಯ್ಲು: ಉಸಿರು; ರೋಷ: ಕೋಪ; ಬೀಡು: ನೆಲೆ; ಕಂಡು: ನೋಡಿ; ಬೇಡು: ಕೋರು; ಕೊರಳು: ಕಂಠ; ಬೆರಳು: ಅಂಗುಲಿ; ಸನ್ನೆ; ಗುರುತು;

ಪದವಿಂಗಡಣೆ:
ನೋಡಿದನು +ಪರಿಘವನು+ ಕಡೆಗಣ್
ಆಡಿತ್+ಇವದಿರ+ ಮೇಲೆ +ಮೈಯಲಿ
ಝಾಡಿ+ಕೆದರಿತು +ರೋಮ +ಝಳುಪಿಸಿತ್+ಅರುಣಮಯ +ನಯನ
ಮೂಡಿತ್+ಉರಿ +ಸುಯ್ಲಿನಲಿ +ರೋಷದ
ಬೀಡು +ಭೀಮನ +ಕಂಡು +ಧರ್ಮಜ
ಬೇಡಿಕೊಂಡನು +ತನ್ನ +ಕೊರಳಿನ+ ಬೆರಳ+ ಸನ್ನೆಯಲಿ

ಅಚ್ಚರಿ:
(೧) ಭೀಮನಿಗಾದ ಕೋಪದ ಚಿತ್ರಣ – ಮೈಯಲಿ ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ ಮೂಡಿತುರಿ ಸುಯ್ಲಿನಲಿ ರೋಷದ ಬೀಡು ಭೀಮನ
(೨) ಧರ್ಮರಾಯನ ಸನ್ನೆಯ ಅರ್ಥ – ಧರ್ಮಜ ಬೇಡಿಕೊಂಡನು ತನ್ನ ಕೊರಳಿನ ಬೆರಳ ಸನ್ನೆಯಲಿ – ನೀನು ಮುಂದಾದರೆ ನನ್ನನ್ನು ಕೊಂದಂತೆ ಎಂದು ಸೂಚಿಸುವ ಸನ್ನೆ

ಪದ್ಯ ೧೪: ದುರ್ಯೋಧನನು ಭೀಮನನ್ನು ಹೇಗೆ ಕೆಣಕಿದನು?

ಏಕೆ ಕೆಣಕಿದೆ ಕರ್ಣ ಬೂತಿನ
ಬೀಕಲಿನ ಬದಗಿಯನು ಸಮರದೊ
ಳೀಕೆಯನಿಲಜ ಮುರಿವನೆನುತವೆ ತನ್ನ ಮುಂಜೆರಗ
ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿದರ
ವ್ಯಾಕುಲನ ಮನ ಖಂಡಿಯೋದುದು ಖತಿಯ ಹೊಯ್ಲಿನಲಿ (ಸಭಾ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕರ್ಣ ನೀನೇಕೆ ಇವಳನ್ನು ಕೆಣಕಿದೆ, ನಾಚಿಕೆಯಿಲ್ಲದ ದಾಸಿ ಇವಳು, ಇವಳ ಭೀಮನು ನನ್ನನ್ನು ಯುದ್ಧರಂಗದಲ್ಲಿ ಕೊಲ್ಲುತ್ತಾನಂತೆ, ಕೇಳಿದೆಯಾ ಕರ್ಣಾ ಎಂದು ಹೇಳುತ್ತಾ ತನ್ನ ಬಟ್ಟೆಯನ್ನು ಸರಸಿ ತೊಡೆಗಳನ್ನು ತೋರಿಸಿ ಭೀಮನನ್ನು ಅಣಕಿಸಿದನು. ಭೀಮನ ಮನಸ್ಸು ಕೋಪದ ಆವೇಗದಿಂದ ಛಿದ್ರಛಿದ್ರವಾಯಿತು.

ಅರ್ಥ:
ಕೆಣಕು: ರೇಗಿಸು; ಬೂತು: ಕುಚೋದ್ಯ, ಕುಚೇಷ್ಟೆ; ಬೀಕಲು: ಕೊನೆ, ಅಂತ್ಯ, ಒಣಗು; ಬದಗು: ಹಾದರ, ವ್ಯಭಿಚಾರ, ದಾಸ; ಸಮರ: ಯುದ್ಧ; ಅನಿಲಜ: ವಾಯುಪುತ್ರ (ಭೀಮ); ಮುರಿ: ಸೀಳು; ಮುಂಜೆರಗು: ಸೆರಗಿನ ತುದಿ, ಹೊದ್ದ ವಸ್ತ್ರದ ಅಂಚು; ನೂಕು: ತಳ್ಳು; ತೊಡೆ: ಊರು; ತೋರಿಸು: ಪ್ರದರ್ಶಿಸು; ಲೋಕೈಕವೀರ: ಜಗದೇಕ ವೀರ, ಶೂರ; ಏಡಿಸು: ಕೆಣಕು; ವ್ಯಾಕುಲ: ದುಃಖ, ವ್ಯಥೆ; ಮನ: ಮನಸ್ಸು; ಖಂಡಿಯೋಗು: ತುಂಡು ತುಂಡಾಗು; ಖತಿ: ಕೋಪ; ಹೊಯ್ಲು: ಮಿಡಿತ, ತುಡಿತ;

ಪದವಿಂಗಡಣೆ:
ಏಕೆ +ಕೆಣಕಿದೆ +ಕರ್ಣ +ಬೂತಿನ
ಬೀಕಲಿನ +ಬದಗಿಯನು +ಸಮರದೊಳ್
ಈಕೆಯ+ಅನಿಲಜ +ಮುರಿವನ್+ಎನುತವೆ+ ತನ್ನ+ ಮುಂಜೆರಗ
ನೂಕಿ +ತೊಡೆಗಳ +ತೋರಿಸುತ+ ಲೋ
ಕೈಕ+ ವೀರನನ್+ಏಡಿಸಿದರ
ವ್ಯಾಕುಲನ +ಮನ +ಖಂಡಿಯೋದುದು +ಖತಿಯ+ ಹೊಯ್ಲಿನಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೂತಿನ ಬೀಕಲಿನ ಬದಗಿಯನು
(೨) ಖ ಕಾರದ ಜೋಡಿ ಪದ – ಖಂಡಿಯೋದುದು ಖತಿಯ
(೩) ಭೀಮನನ್ನು ಕೆಣಕುವ ಪರಿ – ತನ್ನ ಮುಂಜೆರಗ ನೂಕಿ ತೊಡೆಗಳ ತೋರಿಸುತ ಲೋ
ಕೈಕ ವೀರನನೇಡಿಸಿ

ಪದ್ಯ ೧೩: ಕರ್ಣನ ಮಾತಿಗೆ ದ್ರೌಪದಿಯ ಉತ್ತರವೇನು?

ಎಲೆಗೆ ಭಜಿಸಾ ಕೌರವಾನ್ವಯ
ತಿಲಕನನು ನಿನ್ನವರ ಮರೆ ನಿ
ನ್ನುಳಿವ ನೆನೆಯೀ ಸಮಯದಲಿ ಕಾಲೋಚಿತ ಕ್ರಮವ
ಬಳಸು ನೀನೆನೆ ಗಜರಿದಳು ಕುರು
ತಿಲಕನನು ತರಿದೊಟ್ಟಿ ರಣದಲಿ
ತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು, ಎಲೆ ದ್ರೌಪದಿ ನೀನು ಕುರುಕುಲತಿಲಕನಾದ ದುರ್ಯೋಧನನನ್ನು ಸೇವಿಸು, ಪಾಂಡವರನ್ನು ಮರೆತುಬಿಡು, ಈಗು ಉಳಿದುಕೊಳ್ಳುವುದನ್ನು ನೋಡಿ, ಕಾಲಕ್ಕೆ ತಕ್ಕಂತೆ ವರ್ತಿಸು ಎನ್ನಲು, ದ್ರೌಪದಿಯು ಕರ್ಣನನ್ನು ಗದರಿಸಿ, ಆ ಕುರುಕುಲತಿಲಕನನ್ನು ಮುಂದೆ ಯುದ್ಧದಲ್ಲಿ ಸೀಳಿ ಅವನ ತಿಳಿರಕ್ತವನ್ನು ಕುಡಿದು ಭೀಮನು ತಣಿಯುತ್ತಾನೆ ಎಂದು ಗರ್ಜಿಸಿದಳು.

ಅರ್ಥ:
ಭಜಿಸು: ಆರಾಧಿಸು; ಅನ್ವಯ: ವಂಶ, ಸಂಬಂಧ; ತಿಲಕ: ಶ್ರೇಷ್ಠ; ಮರೆ: ನೆನಪಿನಿಂದ ದೂರ ಮಾಡು; ಉಳಿವು: ಬದುಕು; ನೆನೆ: ಜ್ಞಾಪಿಸಿಕೋ; ಸಮಯ: ಕಾಲ; ಉಚಿತ: ಸರಿಯಾದ; ಕ್ರಮ: ರೀತಿ; ಬಳಸು: ಸುತ್ತುವರಿ, ಸುತ್ತುಗಟ್ಟು; ಗಜರು: ಗರ್ಜಿಸು; ತರಿ: ಸೀಳು; ರಣ: ಯುದ್ಧ; ತಿಳಿ: ನಿರ್ಮಲ, ಶುದ್ಧ; ರಕುತ: ನೆತ್ತರು; ದಣಿ: ಆಯಾಸ; ಅನಿಲಜ: ವಾಯುಪುತ್ರ (ಭೀಮ); ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಎಲೆಗೆ +ಭಜಿಸಾ +ಕೌರವ+ಅನ್ವಯ
ತಿಲಕನನು +ನಿನ್ನವರ +ಮರೆ +ನಿನ್
ಉಳಿವ+ ನೆನೆ+ಈ +ಸಮಯದಲಿ+ ಕಾಲೋಚಿತ+ ಕ್ರಮವ
ಬಳಸು +ನೀನ್+ಎನೆ +ಗಜರಿದಳು +ಕುರು
ತಿಲಕನನು +ತರಿದೊಟ್ಟಿ +ರಣದಲಿ
ತಿಳಿ+ರಕುತದಲಿ +ದಣಿವನ್+ಅನಿಲಜನ್+ಎಂದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯ ಗರ್ಜನೆ: ಕುರುತಿಲಕನನು ತರಿದೊಟ್ಟಿ ರಣದಲಿತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ

ನುಡಿಮುತ್ತುಗಳು: ಸಭಾ ಪರ್ವ, ೧೬ ಸಂಧಿ

  • ಕುರುತಿಲಕನನು ತರಿದೊಟ್ಟಿ ರಣದಲಿತಿಳಿರಕುತದಲಿ ದಣಿವನನಿಲಜನೆಂದಳಿಂದುಮುಖಿ – ಪದ್ಯ ೧೩
  • ಮೈಯಲಿ ಝಾಡಿಗೆದರಿತು ರೋಮ ಝಳುಪಿಸಿತರುಣಮಯ ನಯನ ಮೂಡಿತುರಿ ಸುಯ್ಲಿನಲಿ ರೋಷದ ಬೀಡು ಭೀಮನ – ಪದ್ಯ ೧೫
  • ಧಾರುಣೀಶನ ಧರ್ಮತತ್ವದ ಸಾರವುಳಿದರೆ ಸಾಕು – ಪದ್ಯ ೧೬
  • ನಾವು ಭ್ರಮಿಸುವರೆ ದೇವೇಂದ್ರ ತೃಣವಿವನಾವ ಪಾಡೆಮಗೆ – ಪದ್ಯ ೧೭
  • ಪೂತು ಮಝತಾನಿಂದ್ರಸುತನೆಂಬ ಐಸರಲಿ ದೇವೇಂದ್ರ ತೃಣಗಡ – ಪದ್ಯ ೧೯
  • ಸುಳಿವ ಹುಲ್ಲೆಯ ಸೋಹಿನಲಿ ಕುಕ್ಕುಳಿಸಿದರೆ ಕುಕ್ಕುರನ ಕೈಯಲಿ ತಳುವಹುದೆ – ಪದ್ಯ ೨೨
  • ಹಾವು ಹಲಬರ ನಡುವೆ ಸಾಯದು – ಪದ್ಯ ೨೮
  • ನ್ಯಾಯ ನಿನ್ನದು ದೈವದೊಲುಮೆಯದಾಯ ತಪ್ಪಿತು ಬರಿದೆ ಧೈರ್ಯವ ಬೀಯ ಮಾಡದಿರೆಂದು ನುಡಿದನು ವಿದುರನಂಗನೆಗೆ – ಪದ್ಯ ೨೯
  • ಒಲೆಯೊಳಡಗಿದ ಕೆಂಡವಿವರಗ್ಗಳಿಕೆ ನಂದಿದುದೆನುತ – ಪದ್ಯ ೩೦
  • ಕಡಲ ತೆರೆಗಳ ತರುಬಿ ತುಡುಕುವ ವಡಬನಂತಿರೆ ಮೇಘಪಟಲವನೊಡೆದು ಸೂಸುವ ಸಿಡಿಲಿನಂತಿರೆ – ಪದ್ಯ ೩೧
  • ಒಡೆಯನೈತರಲಿಕ್ಷು ತೋಟದ ಬಡನರಿಗಳೋಡುವವೊಲ್ – ಪದ್ಯ ೩೩
  • ರಾಯನಾಜ್ಞೆಯತಡಿಕೆವಲೆ ನುಗ್ಗಾಯ್ತು ಹೋಗಿನ್ನೆಂದನಾ ಭೀಮ – ಪದ್ಯ ೩೩
  • ಸಿಗುರೇಳ್ಗು ಸದ್ಗುಣಕೆ; ಕಳವಳದ ಕಾಹುರದ ಕಾಲುವೆಗೊಳಗುಗೊಡದಿರು – ಪದ್ಯ ೩೬
  • ಭೀಮನ ಧರಧುರದ ಧಟ್ಟಣೆಗೆ ಧೃತಿಗೆಟ್ಟುದು ಕುರುಸ್ತೋಮ – ಪದ್ಯ ೩೮
  • ಕರ್ಣನ ಕೊರಳಿಗೆನ್ನಯ ಬಾಣಕುಂಗುರವುಡಿಕೆಯಿಂದಿನಲಿ – ಪದ್ಯ ೩೯
  • ಸುರಿದುದರುಣಾಂಬುವಿನಮಳೆ, ನೆಲ ಬಾಯಬಿಟ್ಟುದು, ನರಿಗಳವನಿಪನಗ್ನಿ ಹೋತ್ರದೊಳೊರಲಿದವು, ಸಸ್ವೇದದಲಿ ಹೂಂಕರಿಸುತಿರ್ದವು ದೇವತಾ ಪ್ರತಿಮೆಗಳು – ಪದ್ಯ ೪೦
  • ವಾರುವ ಪಟ್ಟದಾನೆಗಳೊಗುಮಿಗೆಯ ಕಂಬನಿಗಳ; ಅಭ್ರದಿ ಧೂಮಕೇತುಗಳು; ನೆಗಳಿದವು ಬಿರುಗಾಳಿ; ಗಿರಿಗಳ ಮಗುಚಿ ಮುರಿದವು; ದೇವತಾಭವನಗಳ ಶಿಖರವನಂತವದ್ಭುತವಾಯ್ತು – ಪದ್ಯ ೪೧
  • ಇನ ಬಿಂಬವನು ಝೋಂಪಿಸಿದನಾ ರಾಹು – ಪದ್ಯ ೪೨
  • ಸಭೆ ಸೆಡೆದುದಲ್ಲಿಯದಲ್ಲಿ ಹುದುಗಿತು ಭೀತಿಗರ ಹೊಡೆದು – ಪದ್ಯ ೪೩
  • ನಡುಹಗಲು ಕತ್ತಲೆ ಯಡಸಿತಾಕಾಶದಲಿ – ಪದ್ಯ ೪೩
  • ಕುಹಕಿ ಮಕ್ಕಳನಿಕ್ಕಿ ಮೌನದೊಳಿಹ – ಪದ್ಯ ೪೪
  • ಹಾರಲತಿಶಯ ತೃಷ್ಣೆ ನಾಶಕೆ ಕಾರಣ – ಪದ್ಯ ೫೩
  • ವೈರಬಂಧದ ಕಂದು ಕಲೆಯನು ಮರೆದು ಕಳೆಯೆಂದ – ಪದ್ಯ ೫೩
  • ಬೀತ ಮರ ಫಲವಾಯ್ತಲಾ – ಪದ್ಯ ೫೪
  • ಇರುಬಿನಲಿ ಬಿದ್ದೆಕ್ಕಲಂಗಳ ನೋಯಲೀಯದೆ ಕೆಲಕೆ ತೆಗೆದೆಯಲಾ; ಸೊಕ್ಕಿದುರು ಮೀನುಗಳ ಗಂಟಲೊಳಿಕ್ಕಿದವಲಾ ಗಾಣ ಗಂಟಲಸಿಕ್ಕ ಬಿಡಿಸಿದೆ – ಪದ್ಯ ೫೫
  • ಘುಡು ಘುಡಿಸಿದನು ರೋಷವಹ್ನಿಯ ತಡಿಯ ಹೊಕ್ಕನು – ಪದ್ಯ ೫೬
  • ಬಿಗಿದ ಹುಬ್ಬಿನ ಬಿಡೆಯ ಬವರಿಯ ಲಳಿಯ ಲವಣಿಯ ಲೋಚನದ್ವಯದ – ಪದ್ಯ ೫೬
  • ಸೆಗಳಿಕೆಯ ಸಸಿಯಾಗವೇ ನಿಜ ಸತ್ಯಭಾಷೆಗಳು – ಪದ್ಯ ೫೭
  • ಹರಿಭಕ್ತಿ ಮುಖದಲಿ ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ – ಪದ್ಯ ೬೫

ಪದ್ಯ ೧೨: ಕರ್ಣನು ದ್ರೌಪದಿಯನ್ನು ಎಲ್ಲಿ ಇಡಬೇಕೆಂದು ಹೇಳಿದನು?

ಜೀಯ ಮಾತೇನಿವಳೊಡನೆ ರಿಪು
ರಾಯರಿಗೆ ದಾಸತ್ವವಾಗಲು
ಬಾಯ ಬಡಿಕೆಯದಾರೊಡವೆ ತದ್ದಾಸ ಧನವಲ್ಲ
ಆಯತಾಕ್ಷಿಯನಿನ್ನು ನಿಮ್ಮಪ
ಸಾಯಿತೆಯರಲಿ ಕೂಡು ತೊತ್ತಿರ
ಲಾಯಬೇಡುಪಕಾರವೆಂದೆರಗಿದನು ಕಲಿಕರ್ಣ (ಸಭಾ ಪರ್ವ, ೧೬ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕರ್ಣನು ದುರ್ಯೊಧನನಿಗೆ, ಜೀಯ ಇವಳ ಹತ್ತಿರ ಏನು ಮಾತಾಡುವುದು, ಶತ್ರುರಾಜರು ನಿನಗೆ ದಾಸರಾದರು, ಅವರ ಪತ್ನಿ ನಿನಗೆ ದಾಸಧನವಾಗಲಿಲ್ಲವೇ? ಇವಳನ್ನು ನೀನು ನಿನ್ನ ಆಪ್ತಸಖಿಯರ ಜೊತೆಯಲ್ಲಿಡು, ದಾಸಿಯರ ಮನೆಯಲ್ಲಿ ಕೂಡಬೇಡ ಎನ್ನುವುದು ನನ್ನ ಪ್ರಾರ್ಥನೆ ಎಂದು ಹೇಳಿ ನಮಸ್ಕರಿಸಿದನು.

ಅರ್ಥ:
ಜೀಯ: ಒಡೆಯ; ಮಾತು: ನುಡಿ; ರಿಪು: ವೈರಿ; ರಾಯ: ರಾಜ; ದಾಸ: ಸೇವಕ; ಬಾಯಬಡಿಕೆ: ವೃಥಾ ಮಾತಾಡು; ತದ್ದಾಸ: ಆ ಸೇವಕ; ಧನ: ಐಶ್ವರ್ಯ; ಆಯತಾಕ್ಷಿ: ವಿಶಾಲವಾದ ಕಣ್ಣುಳ್ಳವಳು; ಅಪಸಾಯಿತೆ: ಆಪ್ತ ಸಹಾಯಕಿ; ಕೂಡು: ಸೇರಿಸು; ತೊತ್ತು: ದಾಸಿ; ಲಾಯ: ವಾಸಸ್ಥಾನ; ಬೇಡ: ಸಲ್ಲದು; ಉಪಕಾರ: ಸಹಾಯ; ಎರಗು: ನಮಸ್ಕರಿಸು; ಕಲಿ: ಶೂರ;

ಪದವಿಂಗಡಣೆ:
ಜೀಯ +ಮಾತೇನ್+ಇವಳೊಡನೆ+ ರಿಪು
ರಾಯರಿಗೆ +ದಾಸತ್ವವಾಗಲು
ಬಾಯ +ಬಡಿಕೆಯದಾರೊಡವೆ +ತದ್ದಾಸ +ಧನವಲ್ಲ
ಆಯತಾಕ್ಷಿಯನ್+ಇನ್ನು +ನಿಮ್ಮ್+ಅಪ
ಸಾಯಿತೆಯರಲಿ +ಕೂಡು +ತೊತ್ತಿರ
ಲಾಯ+ಬೇಡ್+ಉಪಕಾರವೆಂದ್+ಎರಗಿದನು +ಕಲಿಕರ್ಣ

ಅಚ್ಚರಿ:
(೧) ಜೀಯ, ರಾಯ – ಸಾಮ್ಯಾರ್ಥ ಪದ
(೨) ಜೀಯ, ರಾಯ, ಲಾಯ, ಬಾಯ, ಆಯ – ಪ್ರಾಸ ಪದಗಳು

ಪದ್ಯ ೧೧: ದುರ್ಯೋಧನನು ದ್ರೌಪದಿಯನ್ನು ಹೇಗೆ ಗದರಿಸಿದನು?

ಸೋತುದಿಲ್ಲಾ ನಿನ್ನ ಸೋತುದ
ನೀತಿಯೆಂಬುದು ವಿಹಿತವೇ ತಾ
ನೀತನುಡಿಯಲಿ ಧರ್ಮಪುತ್ರನು ಸತ್ಯಸಂಧನಲೇ
ನೀ ತಳೋದರಿ ತರಿಚುಗೆಡೆದೀ
ಮಾತಿನಲಿ ತಾ ಬಿಡುವೆನೇ ನಿ
ನ್ನಾತಗಳ ನುಡಿಸೆಂದು ಖಳ ಧಟ್ಟಿಸಿದನಂಗನೆಯ (ಸಭಾ ಪರ್ವ, ೧೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ದುಷ್ಟ ದುರ್ಯೋಧನನು ತನ್ನ ವಾದವನ್ನು ಹೇಳುತ್ತಾ, ನಿನ್ನನ್ನು ನಾವು ಸೋತಿಲ್ಲವೇ? ಅದು ನೀತಿಯ ಮಾರ್ಗದಲ್ಲಿಲ್ಲವೇ? ಇದು ಸರಿ ತಪ್ಪು ಎನ್ನುವುದನ್ನು ಸತ್ಯಸಂಧನಾದ ಧರ್ಮರಾಯನೇ ಹೇಳಲಿ, ಎಷ್ಟಾದರೂ ನೀನು ಹೆಣ್ಣು, ನಿನ್ನ ಈ ಮಾತಿನಿಂದ ಹೆದರಿ ನಾನು ಬಿಟ್ಟುಬಿಡುವೆನೇ? ಮೊದಲು ನಿನ್ನ ಗಂಡಂದಿರನ್ನು ಕೇಳು, ನೀನು ಹೇಳುವುದು ಸರಿಯೋ ತಪ್ಪೋ ನೋಡೋಣ ಎಂದು ದುರ್ಯೋಧನನು ಗರ್ಜಿಸಿದನು.

ಅರ್ಥ:
ಸೋತು: ಪರಾಭವ; ನೀತಿ: ರೀತಿ, ಶಿಷ್ಟಾಚಾರ; ವಿಹಿತ: ಯೋಗ್ಯವಾದುದು; ನುಡಿ: ಮಾತು; ಪುತ್ರ: ಮಗ; ಸತ್ಯ: ನಿಜ; ಸಂಧನ: ಸೇರು; ತಳೋದರಿ: ಹೆಂಡತಿ; ತರಿ: ತುಂಡುಮಾಡು, ಕತ್ತರಿಸು; ಕೆಡೆ: ಬೀಳು, ಕುಸಿ; ಮಾತು: ನುಡಿ; ಬಿಡು: ತೊರೆ, ತ್ಯಜಿಸು; ಆತಗಳು: ಅವರು; ನುಡಿಸು: ಮಾತಾಡಿಸು; ಖಳ: ದುಷ್ಟ; ಧಟ್ಟಿಸು: ಗದರಿಸು; ಅಂಗನೆ: ಹೆಣ್ಣು;

ಪದವಿಂಗಡಣೆ:
ಸೋತುದಿಲ್ಲಾ +ನಿನ್ನ +ಸೋತುದ್
ಅನೀತಿ+ಎಂಬುದು +ವಿಹಿತವೇ +ತಾನ್
ಈತ+ನುಡಿಯಲಿ +ಧರ್ಮಪುತ್ರನು +ಸತ್ಯಸಂಧನಲೇ
ನೀ +ತಳೋದರಿ +ತರಿಚು+ಕೆಡೆದ್
ಈ+ಮಾತಿನಲಿ+ ತಾ +ಬಿಡುವೆನೇ +ನಿ
ನ್ನಾತಗಳ +ನುಡಿಸೆಂದು +ಖಳ +ಧಟ್ಟಿಸಿದನ್+ಅಂಗನೆಯ

ಅಚ್ಚರಿ:
(೧) ಧರ್ಮರಾಯನನ್ನು ಸತ್ಯಸಂಧನಲೇ ಎಂದು ಹೇಳಿ ಹಂಗಿಸುವ ಪರಿ
(೨) ದ್ರೌಪದಿಯನ್ನು ತಳೋದರಿ, ಅಂಗನೆ ಎಂದು ಕರೆದಿರುವುದು

ಪದ್ಯ ೧೦: ದ್ರೌಪದಿ ಯಾರನ್ನು ಸುಡಬೇಕೆಂದು ಕೂಗಿದಳು?

ಬೂತುಗೆಡೆವನೊಳೆಂಬೆನೇ ಮರು
ಮಾತನೆಲೆ ಗಾಂಗೇಯ ತಮ್ಮದು
ನೀತಿಯೆ ತಾನಿವರ ಧನವೇ ಧರ್ಮಮಾರ್ಗದಲಿ
ಸೋತನರಸನು ತನ್ನನೆನ್ನನು
ಸೋತುದನುಚಿತವೆಂಬ ಬೆಡಗಿನ
ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ (ಸಭಾ ಪರ್ವ, ೧೬ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೌಪದಿಯು, ಹೇ ಭೀಷ್ಮ ಭಂಡತನದಿಂದ ನಾಚಿಕೆಗೇಡಿನ ಮಾತನ್ನಾಡುವವನೊಡನೆ ನಾನು ಹೇಗೆ ಮಾತಾಡಲಿ? ನಿಮ್ಮ ಮೌನವು ನೀತಿಯ ನಡೆಯೇ, ಅವರು ನೀತಿವಂತರೇ? ಧರ್ಮಮಾರ್ಗಕ್ಕನುಸಾರವಾಗಿ ನಾನಿವರ ವಸ್ತುವಾಗಿರುವೆನೇ? ಧರ್ಮಜನು ತನ್ನನ್ನು ಸೋತ ನಂತರ ನನ್ನನ್ನು ಸೋತದ್ದು ಅನುಚಿತ, ಇಷ್ಟನ್ನೂ ಅರಿಯದ ಮೂಢರನ್ನು ಸುಡಬೇಕು ಎಂದಳು.

ಅರ್ಥ:
ಬೂತು: ಕುಚೋದ್ಯ, ಕುಚೇಷ್ಟೆ; ಮರುಮಾತು: ಎದುರು ನುಡಿ; ಗಾಂಗೇಯ: ಭೀಷ್ಮ; ನೀತಿ: ಮಾರ್ಗ, ರೀತಿ; ಧನ: ಐಶ್ವರ್ಯ; ಧರ್ಮ: ಧಾರಣೆ ಮಾಡಿದುದು; ಮಾರ್ಗ: ದಾರಿ; ಸೋತ: ಪರಾಭವ; ಅರಸು: ರಾಜ; ಅನುಚಿತ: ಸರಿಯಲ್ಲದ; ಬೆಡಗು: ಅಂದ, ಸೊಬಗು; ಮಾತು: ನುಡಿ; ಅರಿ: ತಿಳಿ; ಮೂಢ: ಮೂರ್ಖ; ಸುಡು: ದಹಿಸು; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಬೂತುಗೆಡೆವನೊಳ್+ಎಂಬೆನೇ+ ಮರು
ಮಾತನೆಲೆ +ಗಾಂಗೇಯ +ತಮ್ಮದು
ನೀತಿಯೆ+ ತಾನಿವರ+ ಧನವೇ +ಧರ್ಮ+ಮಾರ್ಗದಲಿ
ಸೋತನ್+ಅರಸನು +ತನ್ನನ್+ಎನ್ನನು
ಸೋತುದ್+ಅನುಚಿತವೆಂಬ +ಬೆಡಗಿನ
ಮಾತನ್+ಅರಿಯದ +ಮೂಢರನು +ಸುಡಲ್+ಎಂದಳ್+ಇಂದುಮುಖಿ

ಅಚ್ಚರಿ:
(೧) ದ್ರೌಪದಿಯ ತರ್ಕವನ್ನು ಹೇಳುವ ಪರಿ – ಸೋತನರಸನು ತನ್ನನೆನ್ನನು ಸೋತುದನುಚಿತವೆಂಬ ಬೆಡಗಿನ ಮಾತನರಿಯದ ಮೂಢರನು ಸುಡಲೆಂದಳಿಂದುಮುಖಿ

ಪದ್ಯ ೯: ದುರ್ಯೋಧನನು ದ್ರೌಪದಿಯನ್ನು ಯಾರ ಬಳಿ ಇರಲೆಂದು ಹೇಳಿದನು?

ಇವಳಲೇ ನಮ್ಮಿನಿಬರಭಿಮಾ
ನವನು ಸೆಳೆದಳಲಾ ಸ್ವಯಂವರ
ಭವನದಲಿ ಭಂಗಿಸಿದಳೆಮ್ಮನು ಸಭೆಯೊಳೆಡಹಿದರೆ
ಇವಳು ಬಹುವಿಧ ಪುಣ್ಯಶಕ್ತಿಯೊ
ಳೆವಗೆ ಸಿಲುಕಿದಳಿಂದು ತೊತ್ತಿರ
ಸವಡಿವೇಟದ ಸವಿಯ ಸುರಿಯಲಿ ಭಂಡಮಿಂಡರಲಿ (ಸಭಾ ಪರ್ವ, ೧೬ ಸಂಧಿ, ೯ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರಿಸುತ್ತಾ, ಇವಳೇ ನಮ್ಮನ್ನು ಇವಳ ಸ್ವಯಂವರ ಭವನದಲ್ಲೂ, ಧರ್ಮರಾಯನ ಆಸ್ಥಾನದಲ್ಲೂ ಅಪಮಾನಿಸಿದ್ದಳು, ನಾವು ಮಾಡಿದ್ದ ಮಹತ್ತಾದ ಪುಣ್ಯಶಕ್ತಿಯಿಂದ ನಮಗೆ ಸಿಕ್ಕಿದ್ದಾಳೆ. ಇವಳು ದಾಸಿಯರ ಜೊತೆ ಭಂಡರ ಶೀಲಹೀನರ ಸವಿಯನ್ನು ನೋಡಲಿ ಎಂದನು.

ಅರ್ಥ:
ಇನಿಬರು: ಇಷ್ಟು ಜನ; ಅಭಿಮಾನ: ಹೆಮ್ಮೆ, ಆತ್ಮಗೌರವ; ಸೆಳೆ: ಎಳೆತ, ಜಗ್ಗು; ಸ್ವಯಂವರ: ವಿವಾಹಾಕಾಂಕ್ಷಿಗಳಾದ ಅಭ್ಯರ್ಥಿಗಳು ನೆರೆದ ಸಭೆಯಲ್ಲಿ ತನ್ನ ಪತಿಯನ್ನು ತಾನೇ ಆರಿಸಿಕೊಳ್ಳುವಿಕೆ; ಭವನ: ಆಲಯ; ಭಂಗಿಸು: ಸೋಲಿಸು, ಅಪಮಾನ ಮಾಡು; ಸಭೆ: ಓಲಗ; ಎಡಹು: ಎಡವು; ಬಹುವಿಧ: ಬಹಳ ರೀತಿ; ಪುಣ್ಯ: ಸದಾಚಾರ, ಶ್ರೇಷ್ಠ; ಶಕ್ತಿ: ಬಲ; ಸಿಲುಕು: ಬಂಧನಕ್ಕೊಳಗಾದುದು; ತೊತ್ತು: ದಾಸಿ; ಸವಡಿ: ಜೊತೆ, ಜೋಡಿ; ಸವಿ: ರುಚಿ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಭಂಡ: ನಾಚಿಕೆ, ಲಜ್ಜೆ; ಮಿಂಡ: ಹರೆಯದ, ಪ್ರಾಯದ;

ಪದವಿಂಗಡಣೆ:
ಇವಳಲೇ +ನಮ್ಮ್+ಇನಿಬರ್+ಅಭಿಮಾ
ನವನು +ಸೆಳೆದಳಲಾ +ಸ್ವಯಂವರ
ಭವನದಲಿ +ಭಂಗಿಸಿದಳ್+ಎಮ್ಮನು +ಸಭೆಯೊಳ್+ಎಡಹಿದರೆ
ಇವಳು +ಬಹುವಿಧ +ಪುಣ್ಯಶಕ್ತಿಯೊಳ್
ಎವಗೆ +ಸಿಲುಕಿದಳ್+ಇಂದು +ತೊತ್ತಿರ
ಸವಡಿವೇಟದ+ ಸವಿಯ +ಸುರಿಯಲಿ +ಭಂಡ+ಮಿಂಡರಲಿ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸವಡಿವೇಟದ ಸವಿಯ ಸುರಿಯಲಿ