ಪದ್ಯ ೪: ಬುಧಜನರು ಯಾವ ಅಭಿಪ್ರಾಯಕ್ಕೆ ಬಂದರು?

ಅಹಹ ದೈವಪ್ರೇಮವಿದೆಲಾ
ಮಹಿಳೆಯಲಿ ಮಾನವರ ಕೃತಿ ಗೆಲ
ಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
ಅಹಿತವಹ ಕುರುರಾಜ ಕುಲಘನ
ಗಹನ ಭೀಮಧನಂಜಯಾದ್ಯರ
ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ (ಸಭಾ ಪರ್ವ, ೧೬ ಸಂಧಿ, ೪ ಪದ್ಯ)

ತಾತ್ಪರ್ಯ:
ಆಹಾ! ದೈವಪ್ರೇಮವೆಂದರೆ ಇದು. ಈ ಮಹಿಳೆಯನ್ನು ಮನುಷ್ಯರ ದುರ್ಬಲಯತ್ನಗಳು ಸಂಚುಗಳು ಏನು ಮಾಡಿಯಾವು? ಶ್ರೀಕೃಷ್ಣನ ನಾಮಸ್ಮರಣೆಯೇ ಇವಳನ್ನು ಕಾಪಾಡಿತು. ಪಾಂಡವರ ಶತ್ರುಗಳಾದ ಕೌರವರೆಂಬ ಕಾಡು ಭೀಮಾರ್ಜುನರ ತುಳಿತದಿಂದ ನಾಶವಾಗುತ್ತದೆ ಎಂದು ಸಭೆಯಲ್ಲಿದ್ದ ಪಂಡಿತರಗುಂಪು ಹೇಳಿದರು.

ಅರ್ಥ:
ದೈವ: ಭಗವಂತ; ಪ್ರೇಮ: ಒಲವು; ಮಹಿಳೆ: ಸ್ತ್ರೀ; ಮಾನವ: ನರ, ಮನುಷ್ಯ; ಕೃತಿ: ಕಾರ್ಯ; ಗೆಲವು: ಜಯ; ಗರುವೆ:ಹಿರಿಯಳು; ಗಾಹು: ತಿಳುವಳಿಕೆ, ಮೋಸ; ಅಭಿಧಾನ: ಹೆಸರು , ಮಾತು; ಅಹಿತ: ವೈರಿ; ರಾಜ: ನೃಪ; ಕುರುರಾಜ: ದುರ್ಯೋಧನ; ಕುಲ: ವಂಶ; ಘನ: ಶ್ರೇಷ್ಠ; ಗಹನ: ಕಾಡು, ಅಡವಿ; ಆದಿ: ಮೊದಲಾದ; ವಿಹರಣ: ತಿರುಗಾಟ; ವಿನಾಶ: ಹಾಳು, ಸರ್ವನಾಶ; ಬುಧ: ಪಂಡಿತ; ಸ್ತೋಮ: ಗುಂಪು;

ಪದವಿಂಗಡಣೆ:
ಅಹಹ +ದೈವ+ಪ್ರೇಮವಿದೆಲ
ಆ+ಮಹಿಳೆಯಲಿ+ ಮಾನವರ +ಕೃತಿ +ಗೆಲ
ಬಹುದೆ +ಗರುವೆಯ +ಗಾಹಿಸಿತು +ಗೋವಿಂದನ್+ಅಭಿಧಾನ
ಅಹಿತವಹ+ ಕುರುರಾಜ +ಕುಲಘನ
ಗಹನ+ ಭೀಮ+ಧನಂಜಯಾದ್ಯರ
ವಿಹರಣದಲಿ +ವಿನಾಶವಹುದ್+ಎಂದುದು +ಬುಧ+ಸ್ತೋಮ

ಅಚ್ಚರಿ:
(೧) ಗ ಕಾರದ ಸಾಲು ಪದಗಳು – ಗೆಲಬಹುದೆ ಗರುವೆಯ ಗಾಹಿಸಿತು ಗೋವಿಂದನಭಿಧಾನ
(೨) ಕುರುಕುಲದ ನಾಶವನ್ನು ಹೇಳುವ ಪರಿ – ಅಹಿತವಹ ಕುರುರಾಜ ಕುಲಘನ ಗಹನ ಭೀಮಧನಂಜಯಾದ್ಯರ ವಿಹರಣದಲಿ ವಿನಾಶವಹುದೆಂದುದು ಬುಧಸ್ತೋಮ

ಪದ್ಯ ೩: ಕೃಷ್ಣ ನಾಮದ ಮಹಿಮೆ ಎಂತಹುದು?

ಆ ಮಹಾಸತಿ ಶಿವ ಶಿವಾ ಲ
ಜ್ಜಾಮಹೋದಧಿ ಬತ್ತುವುದೆ ನಿ
ರ್ನಾಮರೇ ಕುಂತೀಸುತರು ಪಥ್ಯರೆ ಪರಾಭವಕೆ
ಆ ಮುಕುಂದನ ದಿವ್ಯ ನಾಮ
ಪ್ರೇಮ ರಸಕಿದು ಸಿದ್ಧಿಯೆಂದೆನ
ಲಾಮಹಾಸ್ಥಾನದಲಿ ಬೆಳೆದುದು ಬೆರಗು ಬಿಂಕದಲಿ (ಸಭಾ ಪರ್ವ, ೧೬ ಸಂಧಿ, ೩ ಪದ್ಯ)

ತಾತ್ಪರ್ಯ:
ಶಿವ ಶಿವಾ ಮಹಾದೇವ, ಆ ಮಹಾ ಪತಿವ್ರತೆಯಾದ ದ್ರೌಪದಿಯ ಮಾನವು ಬತ್ತಿಹೋದೀತೆ? ಪಾಂಡವರು ಸೋಲನ್ನೊಪ್ಪಿ ನಿರ್ನಾಮರಾದರೇ? ಆ ಕೃಷ್ಣನ ದಿವ್ಯನಾಮದ ಮೇಲಿರುವ ಭಕ್ತಿಗೆ ಇದು ಸಿದ್ಧಿಯೆಂದುಕೊಂಡು ಆಸ್ಥಾನದಲ್ಲಿದ್ದವರ ಆಶ್ಚರ್ಯವು ಹೆಚ್ಚಿತು.

ಅರ್ಥ:
ಸತಿ: ಹೆಂಡತಿ; ಮಹಾಸತಿ: ಪತಿವ್ರತೆ; ಲಜ್ವ: ಮಾನ; ಮಹೋದಧಿ: ಮಹಾಸಾಗರ; ಬತ್ತು: ಬರಡಾಗು; ನಿರ್ನಾಮ: ನಾಶ, ಅಳಿವು; ಸುತ: ಮಗ; ಪಥ್ಯ: ಯೋಗ್ಯ, ಹಿತ; ಪರಾಭವ: ಸೋಲು; ದಿವ್ಯ: ಶ್ರೇಷ್ಠ; ನಾಮ: ಹೆಸರು; ಪ್ರೇಮ: ಒಲವು; ರಸ: ಸಾರ; ಸಿದ್ಧಿ: ಮೋಕ್ಷ, ಮುಕ್ತಿ; ಆಸ್ಥಾನ; ಓಲಗ; ಬೆಳೆ: ಅಭಿವೃದ್ಧಿ, ಜರಗು; ಬೆರಗು: ಆಶ್ಚರ್ಯ; ಬಿಂಕ: ಗರ್ವ, ಜಂಬ;

ಪದವಿಂಗಡಣೆ:
ಆ+ ಮಹಾಸತಿ +ಶಿವ+ ಶಿವಾ +ಲ
ಜ್ಜಾ+ಮಹ+ಉದಧಿ+ ಬತ್ತುವುದೆ +ನಿ
ರ್ನಾಮರೇ +ಕುಂತೀಸುತರು+ ಪಥ್ಯರೆ +ಪರಾಭವಕೆ
ಆ +ಮುಕುಂದನ +ದಿವ್ಯ +ನಾಮ
ಪ್ರೇಮ +ರಸಕಿದು +ಸಿದ್ಧಿಯೆಂದೆನಲ್
ಆ+ಮಹ+ಆಸ್ಥಾನದಲಿ +ಬೆಳೆದುದು +ಬೆರಗು +ಬಿಂಕದಲಿ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬೆಳೆದುದು ಬೆರಗು ಬಿಂಕದಲಿ
(೨) ಆ – ಮಹಾಸತಿ, ಮುಕುಂದ, ಮಹಾಸ್ಥಾನ – ಪದಗಳ ಮುಂದೆ ಬಳಸಿದ ಸ್ವರಾಕ್ಷರ

ಪದ್ಯ ೨: ಆಸ್ಥಾನವು ಏಕೆ ಬೆರಗುಗೊಂಡಿತು?

ಉಗಿದು ಹಾಯ್ಕುವ ಖಳನ ನಿಡುದೋ
ಳುಗಳು ಬಳಲಿದವಳ್ಳೆ ಹೊಯ್ದವು
ಢಗೆಯ ಡಾವರವಾಯ್ತು ಬಹಳ ಸ್ವೇದಜಲ ಜಡಿಯೆ
ತೆಗೆದು ನಿಂದನು ಸೀರೆಯೊಟ್ಟಿಲು
ಗಗನವನು ಗಾಹಿಸಿತು ಗರುವೆಯ
ಬಗೆಗೆ ಬೀಸರವಿಲ್ಲ ಬೆರಗಾದುದು ಮಹಾಸ್ಥಾನ (ಸಭಾ ಪರ್ವ, ೧೬ ಸಂಧಿ, ೨ ಪದ್ಯ)

ತಾತ್ಪರ್ಯ:
ದುಷ್ಟ ದುಶ್ಯಾಸನನು ಸೀರೆಯನ್ನು ಸೆಳೆಯುತ್ತಿದ್ದ, ಅವನ ದೀರ್ಘಬಾಹುಗಳು ಸೀರೆಯನ್ನು ಸೆಳೆದು ಸೆಳೆದು ಬಳಲಿಸ್ದವು, ದೇಹದ ಶಾಖ ಹೆಚ್ಚಾಗಿ ಹಿಂಸೆಯನ್ನು ಅನುಭವಿಸುತ್ತಿತ್ತು, ಮೂಗಿನ ಹೊಳ್ಳೆಗಳು ಅಗಲವಾಗಿ ಮತ್ತೆ ಮತ್ತೆ ಉಸಿರನ್ನು ಸೂಸಿದವು ಬೆವರು ಧಾರಾಕಾರವಾಗಿ ಹರಿಯಿತು, ಅವನು ಸೆರಗನ್ನು ಎಸೆದು ನಿಂತನು, ಅವನು ಎಳೆದಿದ್ದ ಸೀರೆಗಳು ಆಕಾಶದೆತ್ತರ ಬಿದ್ದಿದ್ದವು, ದ್ರೌಪದಿಯ ಸ್ಥೈರ್ಯವು ಭಂಗಗೊಳ್ಳಲಿಲ್ಲ.

ಅರ್ಥ:
ಉಗಿದು: ಕಳಚು; ಹಾಯ್ಕು: ಬೀಳಿಸು; ಖಳ: ದುಷ್ಟ; ನಿಡುದೋಳು: ಉದ್ದವಾದ ತೋಳು; ಬಳಲು: ಆಯಾಸ, ದಣಿವು; ಅಳ್ಳೆ: ಸಣ್ಣದು; ಢಗೆ: ಕಾವು, ದಗೆ; ಡಾವರ: ತಾಪ, ಭೀಷಣತೆ; ಬಹಳ: ತುಂಬ; ಸ್ವೇದಜಲ: ಬೆವರು; ಜಡಿ:ಹೆದರಿಕೆ; ತೆಗೆ: ಹೊರಹಾಕು; ಸೀರೆ: ವಸ್ತ್ರ; ಒಟ್ಟಿಲು: ರಾಶಿ, ಗುಂಪು; ಗಗನ: ಆಗಸ; ಗಾಹಿಸು:ಆವರಿಸು, ವ್ಯಾಪಿಸು; ಗರುವೆ: ಹಿರಿಯಳು, ಸೊಗಸುಗಾತಿ, ಚೆಲುವೆ; ಬಗೆ: ರೀತಿ; ಬೀಸರ: ರ್ಥವಾದುದು, ನಿರರ್ಥಕವಾದುದು; ಬೆರಗು: ಆಶ್ಚರ್ಯ; ಆಸ್ಥಾನ: ಓಲಗ;

ಪದವಿಂಗಡಣೆ:
ಉಗಿದು +ಹಾಯ್ಕುವ +ಖಳನ +ನಿಡುದೋ
ಳುಗಳು +ಬಳಲಿದವ್+ಅಳ್ಳೆ+ ಹೊಯ್ದವು
ಢಗೆಯ +ಡಾವರವಾಯ್ತು +ಬಹಳ +ಸ್ವೇದಜಲ +ಜಡಿಯೆ
ತೆಗೆದು +ನಿಂದನು +ಸೀರೆ+ಒಟ್ಟಿಲು
ಗಗನವನು +ಗಾಹಿಸಿತು+ ಗರುವೆಯ
ಬಗೆಗೆ +ಬೀಸರವಿಲ್ಲ+ ಬೆರಗಾದುದು +ಮಹಾಸ್ಥಾನ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಗನವನು ಗಾಹಿಸಿತು ಗರುವೆಯ;
(೨) ಬ ಕಾರದ ತ್ರಿವಳಿ ಪದ – ಬಗೆಗೆ ಬೀಸರವಿಲ್ಲ ಬೆರಗಾದುದು;

ಪದ್ಯ ೧: ದೈವದ ಲೀಲೆ ಹೇಗಿರುತ್ತದೆ?

ನಿಯತ ಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೋ ಶಿವ ಶಿವ ಮಹಾದೇವ
ಜಯ ಜಯೆಂದುದು ನಿಖಿಳಜನಝಾ
ಡಿಯಲಿ ಝೋಂಪಿಸಿ ಸೆಳ್ವ ಸೀರೆಗೆ
ಲಯವ ಕಾಣೆನು ಕರುಣವೆಂತುಟೊ ದೇವಕೀಸುತನ (ಸಭಾ ಪರ್ವ, ೧೬ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ಗಮನವಿಟ್ಟು ಕೇಳು, ಭಗವಂತನ ಭಕ್ತಿಯಿಂದ ಏನೇನು ಆಶ್ಚರ್ಯಗಳಾಗುವವೋ ಶಿವ ಶಿವಾ ಮಹಾದೇವ ಯಾರು ಬಲ್ಲರು? ದುಶ್ಯಾಸನನು ಸೀರೆಯನ್ನು ಸೆಳೆದರೆ ಅದು ಮುಗಿಯದೆ ಮತ್ತೊಂದು ಸೀರೆ ಅದರಿಂದ ಬರುತ್ತಿತ್ತು, ಅದು ಮುಗಿದರೆ ಮತ್ತೊಂದು ಹೀಗಾಗುವುದು ನಿಲ್ಲಲೇ ಇಲ್ಲ, ಇದನ್ನು ನೋಡಿದ ಎಲ್ಲಾ ಸಭಿಕರು ಜಯ ಜಯ ಎಂದು ಘೋಷಿಸಿದರು.

ಅರ್ಥ:
ನಿಯತ: ನಿಶ್ಚಿತವಾದುದು; ಮತಿ: ಬುದ್ಧಿ; ಚಿತ್ತವಿಸು: ಗಮನವಿಟ್ಟು ಕೇಳು; ಮಹೀಪತಿ: ರಾಜ; ದೇವ: ಭಗವಂತ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಆಶ್ಚರ್ಯ: ಅದ್ಭುತ, ವಿಸ್ಮಯ; ಜಯ: ಉಘೇ; ನಿಖಿಳ: ಎಲ್ಲಾ; ಜನ: ನರರು, ಸಮೂಹ; ಝಾಡಿ: ಕಾಂತಿ; ಝೋಂಪಿಸು: ಬೆಚ್ಚಿಬೀಳು; ಸೆಳೆ: ಎಳೆತ; ಸೀರೆ: ಬಟ್ಟೆ, ವಸ್ತ್ರ; ಲಯ: ಅಂತ್ಯ; ಕಾಣು: ತೋರು; ಕರುಣ: ದಯೆ; ಸುತ: ಪುತ್ರ;

ಪದವಿಂಗಡಣೆ:
ನಿಯತ +ಮತಿ +ಚಿತ್ತವಿಸು +ಜನಮೇ
ಜಯ +ಮಹೀಪತಿ+ ದೇವತಾ +ಭ
ಕ್ತಿಯಲ್+ಅದೇನ್+ಆಶ್ಚರ್ಯವೋ+ ಶಿವ+ ಶಿವ+ ಮಹಾದೇವ
ಜಯ +ಜಯೆಂದುದು +ನಿಖಿಳ+ಜನ+ಝಾ
ಡಿಯಲಿ +ಝೋಂಪಿಸಿ +ಸೆಳೆವ+ ಸೀರೆಗೆ
ಲಯವ +ಕಾಣೆನು +ಕರುಣವ್+ಎಂತುಟೊ+ ದೇವಕೀಸುತನ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಬಗೆ – ಶಿವ ಶಿವ ಮಹಾದೇವ
(೨) ಝಾಡಿ, ಝೋಂಪಿಸು – ಪದಗಳ ಬಳಕೆ

ಪದ್ಯ ೧೪೦: ಕೃಷ್ಣನು ದ್ರೌಪದಿಯನ್ನು ಹೇಗೆ ರಕ್ಷಿಸಿದ?

ಕ್ರೂರ ದುರ್ಯೋಧನನು ದ್ರುಪದ ಕು
ಮಾರಿ ಪಾಂಚಾಲೆಯನು ಸಭೆಯಲಿ
ಸೀರೆಯನು ಸುಲಿಯಲ್ಕೆ ಕಾಯೈಕೃಷ್ಣ ಎಂದೆನುತ
ನಾರಿಯೊರಲುತ್ತಿಹಳುವುಟ್ಟಾ
ಸೀರೆ ಸೆಳೆಯಲು ಬಳಿಕಲಕ್ಷಯ
ಸೀರೆಯಾಗಲಿಯೆಂದ ಗದುಗಿನ ವೀರನಾರಾಯಣ (ಸಭಾ ಪರ್ವ, ೧೫ ಸಂಧಿ, ೧೪೦ ಪದ್ಯ)

ತಾತ್ಪರ್ಯ:
ರುಕ್ಮಣಿ ದೇವಿಯೇ ಕೇಳು, ಹಸ್ತಿನಾಪುರದಲ್ಲಿ ಪಾಂಡವರು ಜೂಜಿನಲ್ಲಿ ಸೋತರು, ಅವರ ಸರ್ವಸ್ವವನ್ನು ಕಳೆದುಕೊಂಡರು. ದುಷ್ಟನಾದ ದುರ್ಯೋಧನನು ತುಂಬಿದ ಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆಯಲು ಮುಂದಾದನು, ದ್ರೌಪದಿಯು ನನ್ನಲ್ಲಿ ಮೊರೆಯಿಟ್ಟು ತನ್ನನ್ನು ರಕ್ಷಿಸಬೇಕೆಂದು ಬೇಡಿದಳು, ನಾನು ಅವಳ ಸೀರೆಯು ಅಕ್ಷಯವಾಗಲಿ ಎಂದು ಹೇಳಿದೆ ಎಂದು ಕೃಷ್ಣನು ವಿವರಿಸಿದನು.

ಅರ್ಥ:
ಕ್ರೂರ: ದುಷ್ಟ; ಕುಮಾರಿ: ಸುತೆ, ಮಗಳು; ಸಭೆ: ಓಲಗ; ಸೀರೆ: ಬಟ್ಟೆ, ಅಂಬರ; ಸುಲಿ: ಸೆಳೆ, ಎಳೆ; ಕಾಯೈ: ಕಾಪಾಡು; ನಾರಿ: ಹೆಣ್ಣು; ಒರಲು: ಕೂಗು; ಉಟ್ಟ: ತೊಟ್ಟ; ಅಕ್ಷಯ: ಕ್ಷಯವಿಲ್ಲದುದು, ಬರಿದಾ ಗದುದು;

ಪದವಿಂಗಡಣೆ:
ಕ್ರೂರ +ದುರ್ಯೋಧನನು +ದ್ರುಪದ +ಕು
ಮಾರಿ +ಪಾಂಚಾಲೆಯನು+ ಸಭೆಯಲಿ
ಸೀರೆಯನು +ಸುಲಿಯಲ್ಕೆ +ಕಾಯೈ+ಕೃಷ್ಣ+ ಎಂದೆನುತ
ನಾರಿ+ಒರಲುತ್ತಿಹಳುವ್+ಉಟ್ಟಾ
ಸೀರೆ +ಸೆಳೆಯಲು +ಬಳಿಕ್+ಅಕ್ಷಯ
ಸೀರೆಯಾಗಲಿಯೆಂದ +ಗದುಗಿನ+ ವೀರನಾರಾಯಣ

ಅಚ್ಚರಿ:
(೧) ದ್ರೌಪದಿಯನ್ನು ದ್ರುಪದ ಕುಮಾರಿ ಎಂದು ಕರೆದಿರುವುದು
(೨) ಸೀರೆ – ೨, ೫,೬ ಸಾಲಿನ ಮೊದಲನೇ ಪದ
(೩) ನಾರಿ, ಕುಮಾರಿ – ಪ್ರಾಸ ಪದ