ಪದ್ಯ ೬೪: ದ್ರೌಪದಿಯು ದುಶ್ಯಾಸನನಿಗೆ ಏನೆಂದು ಉತ್ತರಿಸಿದಳು?

ಜನಪನನುಜನು ನೀನೆನಗೆ ಮೈ
ದುನನಲೇ ತಪ್ಪೇನು ಯಮ ನಂ
ದನನು ಸೋಲಲಿ ನನ್ನ ಪ್ರಶ್ನೆಗೆ ಕೊಡಲಿ ಮರುಮಾತ
ಅನುಜ ಕೇಳೈ ಪುಷ್ಪವತಿ ತಾ
ನೆನಗೆ ರಾಜಸಭಾ ಪ್ರವೇಶವ
ದನುಚಿತವಲೇ ಹೇಳೆನಲು ಖಳರಾಯ ಖತಿಗೊಂಡ (ಸಭಾ ಪರ್ವ, ೧೫ ಸಂಧಿ, ೬೪ ಪದ್ಯ)

ತಾತ್ಪರ್ಯ:
ದುಶ್ಯಾಸನ ನೀನು ಧರ್ಮರಾಯನ ತಮ್ಮ, ನನ್ನ ಮೈದುನ, ಧರ್ಮರಾಯನು ಸೋಲುವುದರಲ್ಲಿ ತಪ್ಪೇನು, ಆದರೆ ನನ್ನ ಪ್ರಶ್ನೆಗೆ ಉತ್ತರವನ್ನು ಸಭಿಕರು ನೀಡಲಿ, ತಮ್ಮಾ ನಾನು ಪುಷ್ಪವತಿಯಾಗಿದ್ದೇನೆ, ರಾಜಸಭೆಗೆ ಬರುವುದು ಅನುಚಿತ, ನೀನೇ ಹೇಳು ಎಂದು ದ್ರೌಪದಿ ದುಶ್ಯಾಸನನಿಗೆ ಹೇಳಿದಳು.

ಅರ್ಥ:
ಜನಪ: ರಾಜ; ಅನುಜ: ತಮ್ಮ; ಮೈದುನ: ಗಂಡನ ತಮ್ಮ; ಯಮ: ಧರ್ಮರಾಯ; ನಂದನ: ಮಗ; ಸೋಲು: ಪರಾಭವ; ಪ್ರಶ್ನೆ: ಸಂಶಯ; ಕೊಡು: ನೀಡು; ಮರುಮಾತು: ಉತ್ತರ; ಅನುಜ: ತಮ್ಮ; ಪುಷ್ಪವತಿ: ಋತುಮತಿ; ರಾಜಸಭೆ: ಓಲಗ; ಪ್ರವೇಶ: ಒಳಹೋಗುವಿಕೆ; ಅನುಚಿತ: ಸರಿಯಲ್ಲ; ಹೇಳು: ತಿಳಿಸು; ಖಳರಾಯ: ದುಷ್ಟರ ಒಡೆಯ; ಖತಿ: ಕೋಪ;

ಪದವಿಂಗಡಣೆ:
ಜನಪನ್+ಅನುಜನು +ನೀನ್+ಎನಗೆ +ಮೈ
ದುನನ್+ಅಲೇ +ತಪ್ಪೇನು +ಯಮ +ನಂ
ದನನು +ಸೋಲಲಿ +ನನ್ನ +ಪ್ರಶ್ನೆಗೆ +ಕೊಡಲಿ +ಮರುಮಾತ
ಅನುಜ+ ಕೇಳೈ +ಪುಷ್ಪವತಿ +ತಾನ್
ಎನಗೆ +ರಾಜಸಭಾ +ಪ್ರವೇಶವದ್
ಅನುಚಿತವಲೇ +ಹೇಳ್+ಎನಲು +ಖಳರಾಯ +ಖತಿಗೊಂಡ

ಅಚ್ಚರಿ:
(೧) ಅನುಜ, ಮೈದುನ, ನಂದನ – ಸಂಬಂಧವನ್ನು ಸೂಚಿಸುವ ಪದಗಳ ಬಳಕೆ
(೨) ಪುಷ್ಪವತಿ – ಪದದ ಬಳಕೆ
(೩) ಖ ಕಾರದ ಜೋಡಿ ಪದ – ಖಳರಾಯ ಖತಿಗೊಂಡ

ನಿಮ್ಮ ಟಿಪ್ಪಣಿ ಬರೆಯಿರಿ